Revised Common Lectionary (Semicontinuous)
ಎರಡನೆ ಭಾಗ
(ಕೀರ್ತನೆಗಳು 42–72)
ರಚನೆಗಾರರು: ಕೋರಹೀಯರು.
42 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಬಯಸುವಂತೆಯೇ
ನನ್ನ ಆತ್ಮವು ನಿನ್ನನ್ನು ಬಯಸುತ್ತದೆ.
2 ನನ್ನ ಆತ್ಮವು ಜೀವಸ್ವರೂಪನಾದ ದೇವರಿಗಾಗಿ ಬಾಯಾರಿದೆ.
ನಾನು ಯಾವಾಗ ಆತನನ್ನು ಸಂಧಿಸುವೆನು?
3 “ನಿನ್ನ ದೇವರು ಎಲ್ಲಿ?” ಎಂದು ನನ್ನ ವೈರಿಗಳು ಯಾವಾಗಲೂ ಗೇಲಿಮಾಡುವುದರಿಂದ
ಹಗಲಿರುಳು ಕಣ್ಣೀರೇ ನನಗೆ ಆಹಾರವಾಯಿತು.
4 ಆಗ ನಾನು, ಹಬ್ಬದ ಉತ್ಸಾಹದಲ್ಲಿ ಜನಸಮೂಹದೊಡನೆ ಹರ್ಷಿಸುತ್ತಾ
ಸ್ತುತಿಗೀತೆಗಳನ್ನು ಹಾಡುತ್ತಾ ಅವರನ್ನು ದೇವಾಲಯಕ್ಕೆ ಮುನ್ನಡೆಸುತ್ತಿದ್ದದ್ದನ್ನು
ನೆನಪಿಗೆ ತಂದುಕೊಂಡು ಹೃದಯದಲ್ಲಿ ಕೊರಗುವೆ.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
6 ನನ್ನ ದೇವರೇ, ನಾನು ಕುಗ್ಗಿಹೋಗಿದ್ದೇನೆ.
ಆದ್ದರಿಂದ ಹೆರ್ಮೊನ್ ಪರ್ವತದಲ್ಲಿಯೂ ಜೋರ್ಡನ್ ನದಿಯ ಪ್ರದೇಶದಲ್ಲಿಯೂ
ಮಿಸ್ಸಾರ್ ಬೆಟ್ಟದಲ್ಲಿಯೂ ನಾನು ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
7 ಜಲಪಾತದ ಘೋಷದಂತೆಯೂ
ಪ್ರವಾಹದ ಘರ್ಜನೆಯಂತೆಯೂ ಇಕ್ಕಟ್ಟುಗಳು ನನಗೆ ಬಂದಿವೆ.
ಸಮುದ್ರದ ಅಲೆಗಳಂತೆ
ದುಃಖವು ನನ್ನನ್ನು ಆವರಿಸಿಕೊಂಡಿದೆ.
8 ಹಗಲಲ್ಲಿ ಯೆಹೋವನು ನನಗೆ ನಿಜಪ್ರೀತಿಯನ್ನು ತೋರುವುದರಿಂದ
ಜೀವಸ್ವರೂಪನಾದ ಆತನಿಗೆ ಪ್ರತಿ ರಾತ್ರಿಯಲ್ಲಿಯೂ ನೂತನ ಕೀರ್ತನೆಯನ್ನು ಹಾಡುವೆ; ಆತನಲ್ಲಿ ಪ್ರಾರ್ಥಿಸುವೆ.
9 ನನ್ನ ಬಂಡೆಯಾದ ದೇವರಿಗೆ,
“ನೀನು ನನ್ನನ್ನು ಯಾಕೆ ಮರೆತುಬಿಟ್ಟೆ?
ನನ್ನ ಶತ್ರುಗಳ ಕ್ರೂರತೆಯಿಂದ ನಾನೇಕೆ ಸಂಕಟಪಡಬೇಕು?” ಎಂದು ಕೇಳುವೆ.
10 ನನ್ನ ವಿರೋಧಿಗಳು ಸತತವಾಗಿ,
“ನಿನ್ನ ದೇವರು ಎಲ್ಲಿ?” ಎಂದು ಕೇಳುವುದರಿಂದ ನನ್ನ ಮೂಳೆಗಳು ಮುರಿದಂತಾಗಿವೆ.
11 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
ಒಳ್ಳೆಯ ಸಮಯವು ಬರುತ್ತಿದೆ
17 ಇದು ಸತ್ಯ: ಸ್ವಲ್ಪ ಸಮಯದ ನಂತರ, ಕರ್ಮೆಲ್ ಬೆಟ್ಟದಂತೆ ಲೆಬನೋನ್ ಫಲವತ್ತಾಗುವದು. ಕರ್ಮೆಲ್ ಬೆಟ್ಟವು ದಟ್ಟ ಅಡವಿಯಾಗುವದು. 18 ಪುಸ್ತಕದಲ್ಲಿರುವ ಮಾತುಗಳನ್ನು ಕಿವುಡನು ಕೇಳಿಸಿಕೊಳ್ಳುವನು. ಕುರುಡನು ಕತ್ತಲೆಯಲ್ಲಿಯೂ ಮಂಜು ತುಂಬಿದ್ದಾಗಲೂ ನೋಡುವನು. 19 ದೀನರನ್ನು ಯೆಹೋವನು ಸಂತೋಷಿಸುವಂತೆ ಮಾಡುವನು. ಬಡವರು ಇಸ್ರೇಲರ ಪರಿಶುದ್ಧನಲ್ಲಿ ಉಲ್ಲಾಸಿಸುವರು.
20 ಇದು ಕ್ರೂರಿಗಳೂ ದುಷ್ಟರೂ ನಾಶವಾದಾಗ ಆಗುವದು. ಕೆಟ್ಟಕಾರ್ಯಗಳನ್ನು ಮಾಡುವದರಲ್ಲಿ ಸಂತೋಷಿಸುವವರು ಇಲ್ಲದೆ ಹೋದಾಗ ಆ ಕಾರ್ಯಗಳು ನಡಿಯುವವು. 21 (ಅವರು ನೀತಿವಂತರ ವಿಷಯವಾಗಿ ಸುಳ್ಳಾಡುವರು. ನ್ಯಾಯಾಲಯದಲ್ಲಿ ಜನರನ್ನು ಸಿಕ್ಕಿಸಿ ಹಾಕುವರು. ದೀನರನ್ನು ನಾಶಮಾಡಲು ಅವರು ಪ್ರಯತ್ನಿಸುವರು.)
22 ಯೆಹೋವನು ಯಾಕೋಬನ ವಂಶಕ್ಕೆ ಹೀಗೆನ್ನುತ್ತಾನೆ: “ಅಬ್ರಹಾಮನನ್ನು ಬಿಡಿಸಿದ ಯೆಹೋವನೇ ನಾನು. ಈಗ ಯಾಕೋಬಿನ ಜನರು ನಾಚಿಕೆಪಡುವದಿಲ್ಲ ಮತ್ತು ಅವಮಾನ ಹೊಂದುವದಿಲ್ಲ. 23 ಅವನು ತನ್ನ ಎಲ್ಲಾ ಮಕ್ಕಳನ್ನು ನೋಡಿ ‘ಪವಿತ್ರ ಎಂಬುದೇ ನನ್ನ ಹೆಸರು’ ಎಂದು ಹೇಳುವನು. ನನ್ನ ಕೈಗಳಿಂದ ನಾನು ಆ ಮಕ್ಕಳನ್ನು ನಿರ್ಮಿಸಿದೆನು. ಆ ಮಕ್ಕಳು ಯಾಕೋಬನ ಪರಿಶುದ್ಧ ದೇವರು ವಿಶೇಷವಾದವನು ಎಂದು ಹೇಳುವರು. ಆ ಮಕ್ಕಳು ಇಸ್ರೇಲರ ದೇವರನ್ನು ಗೌರವಿಸುವರು. 24 ಅವರಲ್ಲಿ ಅನೇಕರು ಸರಿಯಾಗಿ ತಿಳಿದುಕೊಳ್ಳಲಿಲ್ಲ. ಆದ್ದರಿಂದ ಅವರು ತಪ್ಪಿಹೋದರು. ಆದರೆ ಅವರು ಪಾಠಗಳನ್ನು ಕಲಿತುಕೊಳ್ಳುವರು.”
ದೇವರ ಸೂಚಕಕಾರ್ಯಗಳು
12 ಅಪೊಸ್ತಲರು ಅನೇಕ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿದರು. ಜನರೆಲ್ಲರೂ ಆ ಕಾರ್ಯಗಳನ್ನು ನೋಡಿದರು. ಅಪೊಸ್ತಲರು ಒಟ್ಟಾಗಿ ಸೊಲೊಮೋನನ ಮಂಟಪದಲ್ಲಿರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. 13 ಅವರೊಂದಿಗೆ ನಿಂತುಕೊಳ್ಳಲು ತಮಗೂ ಯೋಗ್ಯತೆ ಇದೆಯೆಂದು ಬೇರೆ ಯಾರಿಗೂ ಅನ್ನಿಸಲಿಲ್ಲ. ಜನರೆಲ್ಲರೂ ಅಪೊಸ್ತಲರ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳುತ್ತಿದ್ದರು. 14 ಮತ್ತು ಹೆಚ್ಚುಹೆಚ್ಚು ಜನರು ಪ್ರಭುವನ್ನು ನಂಬಿಕೊಂಡರು. ಅನೇಕ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳ ಸಮುದಾಯಕ್ಕೆ ಸೇರುತ್ತಿದ್ದರು. 15 ಹೀಗಿರಲು, ಪೇತ್ರನು ದಾರಿಯಲ್ಲಿ ಹೋಗುತ್ತಾನೆಂಬ ಸುದ್ದಿಯನ್ನು ಕೇಳಿದ ಜನರು ಕಾಯಿಲೆಯವರನ್ನು ಬೀದಿಗಳಿಗೆ ಹೊತ್ತುಕೊಂಡು ಬಂದು ಹಾಸಿಗೆ ಮತ್ತು ಡೋಲಿಗಳ ಮೇಲೆ ಮಲಗಿಸುತ್ತಿದ್ದರು. ಪೇತ್ರನ ನೆರಳು ಬಿದ್ದರೆ ಸಾಕು, ಕಾಯಿಲೆಯವರು ಗುಣಮುಖರಾಗುತ್ತಾರೆಂದು ಜನರು ಯೋಚಿಸಿಕೊಂಡಿದ್ದರು. 16 ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದೆಲ್ಲಾ ಜನರು ಬರುತ್ತಿದ್ದರು. ಅವರು ಕಾಯಿಲೆಯವರನ್ನೂ ದೆವ್ವಪೀಡಿತರಾಗಿದ್ದವರನ್ನೂ ಹೊತ್ತುಕೊಂಡು ಬರುತ್ತಿದ್ದರು. ಈ ಜನರೆಲ್ಲರಿಗೂ ಗುಣವಾಯಿತು.
Kannada Holy Bible: Easy-to-Read Version. All rights reserved. © 1997 Bible League International