Revised Common Lectionary (Semicontinuous)
ಮರಿಯಳು ದೇವರನ್ನು ಸ್ತುತಿಸಿದಳು
46 ಆಗ ಮರಿಯಳು,
47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.
ದಾವೀದನು ದೇವರಲ್ಲಿ ಪ್ರಾರ್ಥಿಸುವನು
18 ಆಗ ರಾಜನಾದ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತು,
“ನನ್ನ ಒಡೆಯನಾದ ಯೆಹೋವನೇ, ನಾನೆಷ್ಟರವನು? ನನ್ನ ಕುಲ ಎಷ್ಟರದು? ನೀನು ನನ್ನನ್ನೇಕೆ ಇಷ್ಟು ಉದ್ಧರಿಸಿದೆ?
23 “ನಿನ್ನ ಜನರಾದ ಇಸ್ರೇಲರಂಥವರು ಈ ಲೋಕದಲ್ಲಿ ಬೇರೆ ಯಾರೂ ಇಲ್ಲ, ಅವರು ವಿಶೇಷವಾದ ಜನರು. ಅವರು ಗುಲಾಮರಾಗಿದ್ದರು, ಆದರೆ ಅವರನ್ನು ಈಜಿಪ್ಟಿನಿಂದ ನೀನು ಹೊರತಂದು ಸ್ವತಂತ್ರರನ್ನಾಗಿ ಮಾಡಿರುವೆ. ನೀನು ಅವರನ್ನು ನಿನ್ನ ಜನರನ್ನಾಗಿ ಮಾಡಿಕೊಂಡೆ. ಇಸ್ರೇಲರಿಗಾಗಿ ನೀನು ಉತ್ತಮವಾದ ಮತ್ತು ಮಹತ್ತಾದ ಕಾರ್ಯಗಳನ್ನು ಮಾಡಿದೆ. ನಿನ್ನ ದೇಶಕ್ಕಾಗಿ ನೀನು ಮಹತ್ಕಾರ್ಯಗಳನ್ನು ಮಾಡಿದೆ. 24 ಇಸ್ರೇಲಿನ ಜನರನ್ನು ಎಂದೆಂದಿಗೂ ನಿನ್ನ ಸ್ವಂತ ಜನರನ್ನಾಗಿ ಮಾಡಿಕೊಂಡೆ. ಯೆಹೋವನೇ, ನೀನು ಅವರಿಗಾಗಿ ದೇವರಾದೆ.
25 “ದೇವರಾದ ಯೆಹೋವನೇ, ಈಗ ನೀನು ನನ್ನ ಬಗ್ಗೆ ಮಾತನಾಡಿರುವೆ. ನಾನು ನಿನ್ನ ಸೇವಕ. ನೀನು ನನ್ನ ಕುಲದ ಬಗ್ಗೆಯೂ ವಾಗ್ದಾನ ಮಾಡಿರುವೆ. ನಿನ್ನ ವಾಗ್ದಾನಗಳನ್ನು ನೆರವೇರಿಸು. ನೀನು ವಾಗ್ದಾನ ಮಾಡಿದ ಕಾರ್ಯಗಳನ್ನು ಮಾಡು. 26 ಆಗ ನಿನ್ನ ಹೆಸರು ಎಂದೆಂದೂ ಗೌರವಿಸಲ್ಪಡುತ್ತದೆ. ಜನರೆಲ್ಲರೂ ‘ಸರ್ವಶಕ್ತನಾದ ಯೆಹೋವನೇ ಇಸ್ರೇಲರ ದೇವರು!’ ಎಂದು ಹೇಳುವರು. ಅಲ್ಲದೆ ‘ನಿನ್ನ ಸೇವಕನಾದ ದಾವೀದನ ಕುಟುಂಬವು ನಿನ್ನ ಸನಿಧಿಯಲ್ಲಿ ಸ್ಥಿರವಾಗುವುದು’ ಎಂದು ಹೇಳುವರು.
27 “ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನೇ, ನೀನು ನನಗೆ ಮುಂದಿನ ಸಂಗತಿಗಳನ್ನು ತೋರಿಸಿರುವೆ. ‘ನಾನು ನಿನ್ನ ಕುಟುಂಬವನ್ನು ಸ್ಥಿರಪಡಿಸುವೆನು’ ಎಂದು ಹೇಳಿರುವೆ. ಆ ಕಾರಣದಿಂದಲೇ ನಿನ್ನ ಸೇವಕನಾದ ನಾನು ನಿನ್ನಲ್ಲಿ ಈ ಪ್ರಾರ್ಥನೆಯನ್ನು ಸಲ್ಲಿಸಲು ತೀರ್ಮಾನಿಸಿದ್ದೇನೆ. 28 ನನ್ನ ಒಡೆಯನಾದ ಯೆಹೋವನೇ, ನೀನೇ ದೇವರು. ನಿನ್ನ ಮಾತುಗಳು ಸತ್ಯವಾದವು. ನಿನ್ನ ಸೇವಕನಾದ ನನಗೆ ಅತೀ ಉತ್ತಮವಾದ ವಾಗ್ದಾನಗಳನ್ನು ಮಾಡಿರುವೆ. 29 ದಯವಿಟ್ಟು ನನ್ನ ಕುಟುಂಬವನ್ನು ಆಶೀರ್ವದಿಸು. ಅದು ನಿನ್ನ ಸನ್ನಿಧಿಯಲ್ಲಿ ಎಂದೆಂದಿಗೂ ಮುಂದುವರಿಯಲಿ. ದೇವರಾದ ಯೆಹೋವನೇ, ಆಶ್ಚರ್ಯಕರವಾದ ವಾಗ್ದಾನಗಳನ್ನು ನೀನು ನನಗೆ ಮಾಡಿರುವೆ. ನಿನ್ನ ಆಶೀರ್ವಾದದಿಂದ ನನ್ನ ಕುಟುಂಬವು ಎಂದೆಂದಿಗೂ ಆಶೀರ್ವಾದವನ್ನು ಹೊಂದಲಿ” ಎಂದು ಪ್ರಾರ್ಥಿಸಿದನು.
6 ಪವಿತ್ರ ಗ್ರಂಥವು ಅಬ್ರಹಾಮನ ವಿಷಯವಾಗಿಯೂ ಇದನ್ನೇ ಹೇಳುತ್ತದೆ. “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅವನ ನಂಬಿಕೆಯನ್ನು ಪರಿಗಣಿಸಿದ್ದರಿಂದ ನೀತಿವಂತನೆಂಬ ನಿರ್ಣಯ ಅವನಿಗೆ ದೊರೆಯಿತು.”(A) 7 ಆದ್ದರಿಂದ ನಂಬಿಕೆಯನ್ನು ಹೊಂದಿರುವ ಜನರೇ ಅಬ್ರಹಾಮನ “ನಿಜಮಕ್ಕಳು” ಎಂಬುದು ನಿಮಗೆ ತಿಳಿದಿರಬೇಕು. 8 ದೇವರು ಯೆಹೂದ್ಯರಲ್ಲದವರನ್ನು ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. “ಅಬ್ರಹಾಮನೇ, ನಿನ್ನ ಮೂಲಕ ದೇವರು ಭೂಮಿಯ ಮೇಲಿರುವ ಜನರನ್ನೆಲ್ಲ ಆಶೀರ್ವದಿಸುತ್ತಾನೆ”(B) ಎಂಬ ಸುವಾರ್ತೆಯನ್ನು ಅವನಿಗೆ ಮೊದಲೇ ತಿಳಿಸಲಾಯಿತೆಂದು ಪವಿತ್ರ ಗ್ರಂಥವು ಹೇಳುತ್ತದೆ. 9 ಅವನು ಇದನ್ನು ನಂಬಿದ್ದರಿಂದಲೇ ಆಶೀರ್ವಾದ ಹೊಂದಿದನು. ಇದೇ ನಿಯಮ ಇಂದಿಗೂ ಅನ್ವಯಿಸುತ್ತದೆ. ಅವನು ಆಶೀರ್ವಾದ ಹೊಂದಿದಂತೆಯೇ ನಂಬಿಕೆಯಿಡುವ ಜನರೆಲ್ಲರೂ ಆಶೀರ್ವಾದ ಹೊಂದುವರು.
10 ಆದರೆ ನೀತಿವಂತರಾಗಲು ಧರ್ಮಶಾಸ್ತ್ರವನ್ನು ಅವಲಂಬಿಸಿಕೊಂಡಿರುವವರು ಶಾಪಗ್ರಸ್ತರಾಗಿದ್ದಾರೆ. ಏಕೆಂದರೆ ಪವಿತ್ರ ಗ್ರಂಥವು ಹೇಳುವಂತೆ, “ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳನ್ನೆಲ್ಲಾ ಕೈಕೊಂಡು ನಡೆಯಬೇಕು. ಅವುಗಳಿಗೆ ಎಂದಾದರೂ ಅವಿಧೇಯನಾದವನು ಶಾಪಗ್ರಸ್ತನಾಗಿದ್ದಾನೆ.”(C) 11 ಆದ್ದರಿಂದ ಧರ್ಮಶಾಸ್ತ್ರದ ಮೂಲಕ ಯಾವನೂ ನೀತಿವಂತನಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಪವಿತ್ರ ಗ್ರಂಥವು ಹೇಳುವಂತೆ, “ನಂಬಿಕೆಯ ಮೂಲಕ ನೀತಿವಂತನಾದವನು ಸದಾಕಾಲ ಜೀವಿಸುವನು.”[a]
12 ಧರ್ಮಶಾಸ್ತ್ರವು ನಂಬಿಕೆಯ ಮಾರ್ಗವನ್ನು ಬಳಸದೆ, “ಈ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕ ಜೀವವನ್ನು ಪಡೆದುಕೊಳ್ಳುತ್ತಾನೆ” ಎಂದು ಹೇಳುತ್ತದೆ. 13 ಧರ್ಮಶಾಸ್ತ್ರವು ನಮ್ಮ ಮೇಲೆ ಶಾಪವನ್ನು ಬರಮಾಡುತ್ತದೆ. ಆದರೆ ಕ್ರಿಸ್ತನು ಆ ಶಾಪವನ್ನು ತನ್ನ ಮೇಲೆ ತೆಗೆದುಕೊಂಡನು. ಆತನು ನಮ್ಮ ಸ್ಥಾನವನ್ನು ತಾನೇ ತೆಗೆದುಕೊಂಡನು. ಕ್ರಿಸ್ತನು ತನ್ನನ್ನೇ ಶಾಪಕ್ಕೆ ಒಳಪಡಿಸಿಕೊಂಡನು. ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ, “ಮರಕ್ಕೆ ತೂಗುಹಾಕಲ್ಪಟ್ಟ ವ್ಯಕ್ತಿಯು ಶಾಪಗ್ರಸ್ತನಾಗಿದ್ದಾನೆ.”(D) 14 ಎಲ್ಲಾ ಜನರಿಗೆ ದೇವರ ಆಶೀರ್ವಾದವು ದೊರೆಯಲೆಂದು ಕ್ರಿಸ್ತನು ಹೀಗೆ ಮಾಡಿದನು. ಈ ಆಶೀರ್ವಾದವನ್ನು ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದನು. ಈ ಆಶೀರ್ವಾದವು ಯೇಸು ಕ್ರಿಸ್ತನ ಮೂಲಕ ಬರುತ್ತದೆ. ದೇವರು ವಾಗ್ದಾನ ಮಾಡಿದ ಪವಿತ್ರಾತ್ಮನನ್ನು ನಾವು ಹೊಂದಿಕೊಳ್ಳಲೆಂದು ಯೇಸು ಮರಣಹೊಂದಿದನು. ನಂಬಿಕೆಯಿಡುವುದರ ಮೂಲಕ ನಾವು ಈ ವಾಗ್ದಾನವನ್ನು ಪಡೆದುಕೊಳ್ಳುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International