Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
80 ಇಸ್ರೇಲನ್ನು ಕಾಯುವ ಕುರುಬನೇ,
ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
2 ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
ಬಂದು ನಮ್ಮನ್ನು ರಕ್ಷಿಸು.
3 ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
4 ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
5 ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
6 ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
ಶತ್ರುಗಳು ನಮ್ಮನ್ನು ನೋಡಿ ನಗುವರು.
7 ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
17 ನೀನು ಆರಿಸಿಕೊಂಡಿರುವಾತನ[a] ಕಡೆಗೆ ಕೈಚಾಚಿ ಸಹಾಯ ಮಾಡು.
ನೀನು ಬೆಳೆಸಿದ ಜನರ[b] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
ನಮ್ಮನ್ನು ಬದುಕಿಸು.
ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
ದಾವೀದನು ದೇವರಲ್ಲಿ ಪ್ರಾರ್ಥಿಸುವನು
18 ಆಗ ರಾಜನಾದ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತು,
“ನನ್ನ ಒಡೆಯನಾದ ಯೆಹೋವನೇ, ನಾನೆಷ್ಟರವನು? ನನ್ನ ಕುಲ ಎಷ್ಟರದು? ನೀನು ನನ್ನನ್ನೇಕೆ ಇಷ್ಟು ಉದ್ಧರಿಸಿದೆ? 19 ನಾನು ಕೇವಲ ನಿನ್ನ ಸೇವಕನು. ನೀನು ನನ್ನ ಮೇಲೆ ಬಹಳ ದಯೆ ತೋರಿಸಿರುವೆ. ನನಗೆ ಮಾತ್ರವಲ್ಲದೆ ನೀನು ನನ್ನ ಮುಂದಿನ ಸಂತಾನದ ಬಗ್ಗೆಯೂ ಇದೇ ರೀತಿಯ ದಯಾಪರವಾದ ಮಾತುಗಳನ್ನು ಆಡಿರುವೆ. ನನ್ನ ಒಡೆಯನಾದ ಯೆಹೋವನೇ, ನರಪ್ರಾಣಿಯಾದ ನನ್ನೊಂದಿಗೆ ಇಂಥ ಮಹತ್ತಾದ ಕಾರ್ಯ ಮಾಡಬಹುದೇ? 20 ನಾನು ನಿನಗೆ ಇನ್ನೇನು ಹೇಳಲಿ? ನಿನ್ನ ಜೊತೆ ಹೇಗೆ ಮಾತನಾಡುತ್ತಲೇ ಇರಲಿ? ನನ್ನ ಒಡೆಯನಾದ ಯೆಹೋವನೇ, ನಾನು ನಿನ್ನ ಸೇವಕನೆಂಬುದು ನಿನಗೆ ತಿಳಿದಿದೆ. 21 ನೀನು ಈ ಕಾರ್ಯವನ್ನು ನಿನ್ನ ವಾಗ್ದಾನದ ಪ್ರಕಾರವಾಗಿಯೂ ನಿನ್ನ ಚಿತ್ತದ ಪ್ರಕಾರವಾಗಿಯೂ ಮಾಡಿರುವೆ ಮತ್ತು ನಿನ್ನ ಸೇವಕನಿಗೆ ಅದನ್ನು ತಿಳಿಸಿರುವೆ. 22 ದೇವರಾದ ಯೆಹೋವನೇ, ನಾನು ಕೇಳಿದ ಪ್ರಕಾರ ನೀನೇ ದೊಡ್ಡವನು; ನಿನ್ನ ಸಮಾನರು ಬೇರೆ ಯಾರೂ ಇಲ್ಲ; ನಿನ್ನ ಹೊರತು ಬೇರೆ ದೇವರಿಲ್ಲ.
4 ನಾನು ಮತ್ತೆ ಹೇಳುವುದೇನೆಂದರೆ: ಬಾಧ್ಯಸ್ತನು ಬಾಲಕನಾಗಿರುವಾಗ ಅವನಿಗೂ ಗುಲಾಮನಿಗೂ ಯಾವ ವ್ಯತ್ಯಾಸವೂ ಇಲ್ಲ. ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಅವನು ಗುಲಾಮನಂತಿರುವನು. 2 ಏಕೆಂದರೆ ಅವನಿನ್ನೂ ಬಾಲಕನಾಗಿರುವಾಗ ಪರಿಪಾಲಕರಿಗೆ ಮತ್ತು ನಿರ್ವಾಹಕರಿಗೆ ವಿಧೇಯನಾಗಿರಬೇಕು. ಆದರೆ ತನ್ನ ತಂದೆಯು ಗೊತ್ತುಪಡಿಸಿದ ವಯಸ್ಸನ್ನು ತಲುಪಿದಾಗ ಆ ಬಾಲಕನು ಸ್ವತಂತ್ರನಾಗುವನು. 3 ಅದೇ ರೀತಿಯಲ್ಲಿ ನಾವು ಮೊದಲು ಮಕ್ಕಳಂತಿದ್ದೆವು. ಈ ಪ್ರಪಂಚದ ಉಪಯೋಗವಿಲ್ಲದ ನಿಯಮಗಳಿಗೆ ನಾವು ಗುಲಾಮರಾಗಿದ್ದೆವು. 4 ಆದರೆ ತಕ್ಕ ಕಾಲ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿದನು. ದೇವರ ಮಗನು ಸ್ತ್ರೀಯಲ್ಲಿ ಜನಿಸಿ, ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸಿದನು. 5 ಧರ್ಮಶಾಸ್ತ್ರದ ಅಧೀನದಲ್ಲಿದ್ದ ನಮ್ಮನ್ನು ಬಿಡಿಸಿ ತನ್ನ ಮಕ್ಕಳನ್ನಾಗಿ ಮಾಡಿಕೊಳ್ಳಬೇಕೆಂಬುದೇ ದೇವರ ಉದ್ದೇಶವಾಗಿತ್ತು.
6 ನೀವು ದೇವರ ಮಕ್ಕಳು. ಆದಕಾರಣವೇ ದೇವರು ತನ್ನ ಆತ್ಮವನ್ನು ನಿಮ್ಮ ಹೃದಯಗಳಿಗೆ ಕಳುಹಿಸಿದನು. “ತಂದೆಯೇ, ಅಪ್ಪಾ ತಂದೆಯೇ” ಎಂದು ಆತ್ಮನು ಕೂಗುತ್ತಾನೆ. 7 ಆದ್ದರಿಂದ ಈಗ ನೀನು ಮೊದಲಿನಂತೆ ಗುಲಾಮನಲ್ಲ. ನೀನು ದೇವರ ಮಗನು. ನೀನು ದೇವರ ಮಗನಾಗಿರುವುದರಿಂದ ಆತನು ನಿನ್ನನ್ನು ಬಾಧ್ಯಸ್ತನನ್ನಾಗಿಯೂ ಮಾಡಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International