Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 11:1-10

ಸಮಾಧಾನದ ಅರಸನು ಬರುವನು

11 ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು. ಆ ಕೊಂಬೆಯು ಇಷಯನ ಬೇರಿನಿಂದ ಬೆಳೆಯುವುದು. ಯೆಹೋವನ ಆತ್ಮವು ಆತನಲ್ಲಿದ್ದು, ಜ್ಞಾನ, ತಿಳುವಳಿಕೆ, ಮಾರ್ಗದರ್ಶನ ಮತ್ತು ಸಾಮರ್ಥ್ಯವನ್ನು ದಯಪಾಲಿಸುವದು; ಯೆಹೋವನನ್ನು ತಿಳಿದುಕೊಳ್ಳಲು ಮತ್ತು ಗೌರವಿಸಲು ಆ ಮಗುವಿಗೆ ಸಹಾಯಿಸುವುದು. ಆತನು ಯೆಹೋವನನ್ನು ಸನ್ಮಾನಿಸುತ್ತಾ ಸಂತೋಷಿಸುವನು.

ಆತನು ಜನರಿಗೆ ನ್ಯಾಯತೀರಿಸುವುದು ಹೊರತೋರಿಕೆಯ ಆಧಾರದ ಮೇಲಲ್ಲ; ಕೇಳಿಕೊಂಡದ್ದರ ಆಧಾರದ ಮೇಲೂ ಅಲ್ಲ. 4-5 ಆತನು ಬಡಜನರಿಗೆ ಅನ್ಯಾಯಮಾಡದೆ ನ್ಯಾಯವಾದ ತೀರ್ಪನ್ನು ಕೊಡುವನು, ದೇಶದ ಬಡಜನರಿಗೋಸ್ಕರವಾಗಿ ಮಾಡುವ ಆಲೋಚನೆಯನ್ನು ಪಕ್ಷಪಾತವಿಲ್ಲದೆ ಮಾಡುವನು. ಆತನು ಜನರಿಗೆ ಶಿಕ್ಷೆ ಕೊಡಬೇಕೆಂದು ತೀರ್ಮಾನಿಸಿದರೆ ಅದನ್ನು ಆಜ್ಞಾಪಿಸಿ ಶಿಕ್ಷಿಸುವನು. ದುಷ್ಟರಿಗೆ ಮರಣದಂಡನೆಯಾಗಬೇಕೆಂದು ಆತನು ತೀರ್ಮಾನಿಸಿದರೆ, ಆತನು ಆಜ್ಞಾಪಿಸಿ ಕೊಲ್ಲಿಸುವನು. ನ್ಯಾಯವೇ ಆತನಿಗೆ ನಡುಕಟ್ಟು, ಒಳ್ಳೆಯತನವೇ ಆತನಿಗೆ ಸೊಂಟಪಟ್ಟಿಯಾಗಿವೆ.

ಆ ಸಮಯದಲ್ಲಿ ತೋಳಗಳು ಕುರಿಮರಿಯೊಂದಿಗೆ ಸಮಾಧಾನದಿಂದ ಒಟ್ಟಾಗಿ ವಾಸಿಸುವವು. ಚಿರತೆಯು ಆಡಿನ ಮರಿಗಳೊಂದಿಗೆ ಮಲಗಿಕೊಳ್ಳುವದು. ಕರುಗಳು, ಪ್ರಾಯದ ಸಿಂಹಗಳು, ಹೋರಿಗಳು ಒಟ್ಟಾಗಿ ಸಮಾಧಾನದಿಂದ ಜೀವಿಸುವವು. ಒಂದು ಚಿಕ್ಕಮಗು ಅವುಗಳನ್ನು ನಡಿಸುವುದು. ದನಗಳೂ ಕರಡಿಗಳೂ ಜೊತೆಯಾಗಿರುವವು. ಅವುಗಳ ಮರಿಗಳೆಲ್ಲಾ ಒಂದಕ್ಕೊಂದು ಹಾನಿಮಾಡದೆ ಒಟ್ಟಾಗಿ ಮಲಗಿಕೊಳ್ಳುವವು. ಸಿಂಹಗಳು ದನಗಳಂತೆ ಹುಲ್ಲು ತಿನ್ನುವವು. ಹಾವುಗಳು ಸಹ ಜನರಿಗೆ ಹಾನಿ ಮಾಡುವದಿಲ್ಲ. ಮಗುವು ನಾಗರಹಾವಿನ ಹುತ್ತದ ಬಳಿ ಆಡುತ್ತಾ ಹುತ್ತದೊಳಗೆ ಕೈಹಾಕುವದು.

ಯಾರೂ ಪರಸ್ಪರ ಹಾನಿಮಾಡುವದಿಲ್ಲ. ನನ್ನ ಪವಿತ್ರ ಪರ್ವತದಲ್ಲಿನ ಜನರು ವಸ್ತುಗಳನ್ನು ನಾಶಮಾಡಲು ಇಷ್ಟಪಡುವದಿಲ್ಲ. ಯಾಕೆಂದರೆ ಆಗ ಜನರು ನಿಜವಾಗಿಯೂ ಯೆಹೋವನನ್ನು ಅರಿತಿರುವರು. ಸಾಗರದಲ್ಲಿ ನೀರು ತುಂಬಿದಂತೆ ಲೋಕವೆಲ್ಲಾ ಆತನ ವಿಷಯವೆಂಬ ಜ್ಞಾನದಿಂದ ತುಂಬುವದು.

10 ಆ ಸಮಯದಲ್ಲಿ ಇಷಯನ ವಂಶದಿಂದ ಒಬ್ಬ ವಿಶೇಷ ವ್ಯಕ್ತಿಯು ಹುಟ್ಟುವನು. ಆತನು ಒಂದು ಧ್ವಜದಂತಿರುವನು. ಎಲ್ಲಾ ಜನಾಂಗಗಳು ಆತನ ಸುತ್ತಲೂ ಸೇರಿಬರಬೇಕೆಂದು ಈ ಧ್ವಜವು ತೋರಿಸುವುದು. ಆ ಜನಾಂಗಗಳು ತಾವು ಏನು ಮಾಡಬೇಕೆಂದು ಕೇಳುವರು. ಆತನಿರುವ ಸ್ಥಳವು ಮಹಿಮೆಯಿಂದ ತುಂಬುವದು.

ಕೀರ್ತನೆಗಳು 72:1-7

ರಚನೆಗಾರ: ಸೊಲೊಮೋನ.

72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
    ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
    ತೀರ್ಪುಮಾಡಲು ಅವನಿಗೆ ಸಹಾಯಮಾಡು.
ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
    ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
    ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
    ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
    ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
    ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.

ಕೀರ್ತನೆಗಳು 72:18-19

18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
    ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
    ಆಮೆನ್, ಆಮೆನ್!

ರೋಮ್ನಗರದವರಿಗೆ 15:4-13

ಹಿಂದಿನ ಕಾಲದಲ್ಲಿ ಬರೆಯಲ್ಪಟ್ಟಿರುವ ಪ್ರತಿಯೊಂದೂ ನಮ್ಮ ಉಪದೇಶಕ್ಕಾಗಿಯೇ ಬರೆಯಲ್ಪಟ್ಟಿದೆ. ನಾವು ನಿರೀಕ್ಷೆ ಉಳ್ಳವರಾಗಿರಬೇಕೆಂದು ಆ ಸಂಗತಿಗಳು ಬರೆಯಲ್ಪಟ್ಟಿವೆ. ಪವಿತ್ರ ಗ್ರಂಥವು ನಮಗೆ ಕೊಡುವ ತಾಳ್ಮೆಯಿಂದಲೂ ಶಕ್ತಿಯಿಂದಲೂ ಈ ನಿರೀಕ್ಷೆ ಬರುತ್ತದೆ. ತಾಳ್ಮೆ ಮತ್ತು ಶಕ್ತಿ ದೇವರಿಂದ ಬರುತ್ತವೆ. ಕ್ರಿಸ್ತ ಯೇಸು ಬಯಸುವ ಮಾರ್ಗವನ್ನು ನೀವೆಲ್ಲರೂ ಒಟ್ಟಾಗಿ ಒಪ್ಪಿಕೊಳ್ಳಲು ದೇವರು ನಿಮಗೆ ಸಹಾಯ ಮಾಡಲೆಂದು ನಾನು ಪ್ರಾರ್ಥಿಸುತ್ತೇನೆ. ಹೀಗೆ ನೀವೆಲ್ಲರೂ ಒಂದೇ ಹೃದಯದಿಂದಲೂ ಒಂದೇ ಮನಸ್ಸಿನಿಂದಲೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಮಹಿಮೆಪಡಿಸುವಿರಿ. ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿಕೊಂಡನು. ಆದ್ದರಿಂದ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿಕೊಳ್ಳಬೇಕು. ಇದು ದೇವರಿಗೆ ಮಹಿಮೆಯನ್ನು ಉಂಟು ಮಾಡುತ್ತದೆ. ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳು ಸತ್ಯವಾದುವುಗಳೆಂದು ತೋರಿಸುವುದಕ್ಕಾಗಿಯೂ ದೇವರು ಆ ವಾಗ್ದಾನಗಳನ್ನು ನೆರವೇರಿಸುತ್ತಾನೆ ಎಂಬುದನ್ನು ನಿರೂಪಿಸುವುದಕ್ಕಾಗಿಯೂ ದೇವರು ತಮಗೆ ತೋರುವ ಕರುಣೆಗಾಗಿ ಯೆಹೂದ್ಯರಲ್ಲದವರು ಆತನನ್ನು ಮಹಿಮೆಪಡಿಸಲೆಂದು ಕ್ರಿಸ್ತನು ಯೆಹೂದ್ಯರ ಸೇವಕನಾದನು. ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:

“ಆದ್ದರಿಂದ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ನಾನು ನಿನ್ನನ್ನು ಸ್ತುತಿಸುವೆನು:
    ನಾನು ನಿನ್ನ ಹೆಸರನ್ನು ಸಂಕೀರ್ತಿಸುವೆನು.”(A)

10 ಇದಲ್ಲದೆ ಪವಿತ್ರ ಗ್ರಂಥವು ಹೀಗೆನ್ನುತ್ತದೆ:

“ಯೆಹೂದ್ಯರಲ್ಲದ ನೀವು ದೇವರ ಸ್ವಂತ ಜನರೊಂದಿಗೆ ಸೇರಿ ಸಂತೋಷದಿಂದಿರಬೇಕು.”(B)

11 ಮತ್ತೊಂದು ಕಡೆ ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:

“ಯೆಹೂದ್ಯರಲ್ಲದ ನೀವೆಲ್ಲರೂ ಪ್ರಭುವನ್ನು ಸ್ತುತಿಸಿರಿ.
    ಎಲ್ಲಾ ಜನರು ಪ್ರಭುವಿಗೆ ಸ್ತೋತ್ರ ಮಾಡಲಿ.”(C)

12 ಯೆಶಾಯನು ಹೀಗೆ ಹೇಳಿದ್ದಾನೆ:

“ಇಷಯನ ಕುಟುಂಬದಿಂದ ಒಬ್ಬ ವ್ಯಕ್ತಿಯು ಬರುವನು.
    ಆತನು ಯೆಹೂದ್ಯರಲ್ಲದವರನ್ನು ಆಳುವುದಕ್ಕಾಗಿ ಬರುವನು.
    ಯೆಹೂದ್ಯರಲ್ಲದ ಜನರು ಆತನಲ್ಲಿ ನಿರೀಕ್ಷೆಯನ್ನು ಹೊಂದಿಕೊಳ್ಳುವರು.”(D)

13 ನಿರೀಕ್ಷೆಯನ್ನು ಕೊಡುವ ದೇವರು ನಂಬಿಕೆಯಿಂದ ಉಂಟಾಗುವ ಆನಂದವನ್ನೂ ಸಮಾಧಾನವನ್ನೂ ನಿಮಗೆ ಸಂಪೂರ್ಣವಾಗಿ ದಯಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆಗ ಪವಿತ್ರಾತ್ಮನ ಶಕ್ತಿಯ ಮೂಲಕ ನಿರೀಕ್ಷೆಯು ನಿಮ್ಮಲ್ಲಿ ತುಂಬಿ ಹೊರಸೂಸುವುದು.

ಮತ್ತಾಯ 3:1-12

ಸ್ನಾನಿಕ ಯೋಹಾನನ ಉಪದೇಶ

(ಮಾರ್ಕ 1:1-8; ಲೂಕ 3:1-9,15-17; ಯೋಹಾನ 1:19-28)

ಆ ಕಾಲದಲ್ಲಿ ಸ್ನಾನಿಕ ಯೋಹಾನನು ಜುದೇಯದ ಅಡವಿಯಲ್ಲಿ ಬೋಧಿಸುವುದಕ್ಕೆ ಪ್ರಾರಂಭಿಸಿದನು. “ಪರಲೋಕರಾಜ್ಯವು ಸಮೀಪಿಸಿತು. ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಅವನು ಬೋಧಿಸಿದನು.

“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ;
ಆತನ ಹಾದಿಗಳನ್ನು ನೆಟ್ಟಗೆಮಾಡಿರಿ’
    ಎಂದು ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ”(A)

ಎಂದು ಸ್ನಾನಿಕ ಯೋಹಾನನನ್ನೇ ಕುರಿತು ಪ್ರವಾದಿಯಾದ ಯೆಶಾಯ ಹೇಳಿದ್ದನು.

ಯೋಹಾನನ ಉಡುಪುಗಳು ಒಂಟೆಯ ಕೂದಲಿನಿಂದ ಮಾಡಲ್ಪಟ್ಟಿದ್ದವು. ಅವನಿಗೆ ಸೊಂಟದಲ್ಲಿ ತೊಗಲಿನ ನಡುಪಟ್ಟಿ ಇತ್ತು. ಅವನು ಮಿಡತೆ ಮತ್ತು ಕಾಡುಜೇನನ್ನು ಆಹಾರವಾಗಿ ತಿನ್ನುತ್ತಿದ್ದನು. ಜನರು ಯೋಹಾನನ ಉಪದೇಶವನ್ನು ಕೇಳಲು ಜೆರುಸಲೇಮಿನಿಂದಲೂ, ಜುದೇಯ ಮತ್ತು ಜೋರ್ಡನ್ ನದಿಯ ಸುತ್ತಲಿದ್ದ ಎಲ್ಲಾ ಸ್ಥಳಗಳಿಂದಲೂ ಬರುತ್ತಿದ್ದರು. ಜನರು ತಾವು ಮಾಡಿದ ಪಾಪಗಳನ್ನು ಒಪ್ಪಿಕೊಂಡ ಮೇಲೆ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಡುತ್ತಿದ್ದನು.

ಅನೇಕ ಫರಿಸಾಯರು ಮತ್ತು ಸದ್ದುಕಾಯರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರನ್ನು ನೋಡಿ, “ನೀವೆಲ್ಲರು ಸರ್ಪಗಳು! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳಲು ನಿಮಗೆ ಎಚ್ಚರಿಸಿದವರು ಯಾರು? ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿದೆ ಎಂಬುದನ್ನು ನೀವು ತಕ್ಕ ಕಾರ್ಯಗಳ ಮೂಲಕ ತೋರಿಸಿ. ‘ಅಬ್ರಹಾಮನು ನಮ್ಮ ತಂದೆ’ ಎಂದು ನೀವು ಜಂಬಪಡುವುದೇಕೆ? ದೇವರು ಅಬ್ರಹಾಮನಿಗಾಗಿ ಇಲ್ಲಿರುವ ಬಂಡೆಗಳಿಂದಲೂ ಮಕ್ಕಳನ್ನು ಸೃಷ್ಟಿಸಬಲ್ಲನು ಎಂದು ನಾನು ನಿಮಗೆ ಹೇಳುತ್ತೇನೆ. 10 ಮರಗಳನ್ನು ಕಡಿದುಹಾಕಲು ಕೊಡಲಿ ಈಗಲೇ ಸಿದ್ಧವಾಗಿದೆ. ಒಳ್ಳೆಯ ಫಲಬಿಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು.

11 “ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿಕೊಂಡಿದೆ ಎಂಬುದಕ್ಕೆ ಗುರುತಾಗಿ ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನನ್ನ ಹಿಂದೆ ಬರುವವನು ನನಗಿಂತ ಹೆಚ್ಚಿನವನು. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು. 12 ಆತನು ಕಾಳನ್ನು ಸ್ವಚ್ಛಗೊಳಿಸಲು ಸಿದ್ಧನಾಗಿದ್ದಾನೆ. ಆತನು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ಒಳ್ಳೆಯ ಕಾಳುಗಳನ್ನು ಕಣಜದಲ್ಲಿ ತುಂಬಿಸಿ ಹೊಟ್ಟನ್ನು ನಂದಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವನು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International