Revised Common Lectionary (Semicontinuous)
ರಚನೆಗಾರ: ದಾವೀದ.
21 ಯೆಹೋವನೇ, ನಿನ್ನ ಬಲವು ರಾಜನನ್ನು ಸಂತೋಷಗೊಳಿಸುವುದು.
ನಿನ್ನ ರಕ್ಷಣೆಯು ಅವನನ್ನು ಹರ್ಷಗೊಳಿಸುವುದು.
2 ರಾಜನು ನಿನ್ನಲ್ಲಿ ಪ್ರಾರ್ಥಿಸಿದಾಗ
ನೀನು ಅವನ ಕೋರಿಕೆಗಳನ್ನೆಲ್ಲಾ ಈಡೇರಿಸಿದೆ.
3 ನೀನು ರಾಜನನ್ನು ಬಹಳವಾಗಿ ಆಶೀರ್ವದಿಸಿರುವೆ.
ಅವನ ತಲೆಗೆ ಬಂಗಾರದ ಕಿರೀಟವನ್ನು ತೊಡಿಸಿರುವೆ.
4 ಅವನು ದೀರ್ಘಾಯುಷ್ಯವನ್ನು ಕೇಳಿಕೊಂಡಾಗ ನೀನು ದಯಪಾಲಿಸಿದೆ.
ದೇವರೇ, ನೀನು ರಾಜನಿಗೆ ಶಾಶ್ವತವಾದ ಜೀವಿತವನ್ನು ಅನುಗ್ರಹಿಸಿದೆ.
5 ನೀನು ರಾಜನಿಗೆ ಜಯವನ್ನು ದೊರಕಿಸಿ
ಅವನಿಗೆ ಗೌರವವನ್ನೂ ಹೊಗಳಿಕೆಯನ್ನೂ ಬರಮಾಡಿದೆ.
6 ನೀನು ರಾಜನಿಗೆ ಶಾಶ್ವತವಾದ ಆಶೀರ್ವಾದವನ್ನು ಕೊಟ್ಟಿರುವೆ.
ಅವನು ನಿನ್ನ ಸನ್ನಿಧಿಯಲ್ಲಿ ಅತ್ಯಾನಂದಪಡುವನು.
7 ರಾಜನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ;
ಮಹೋನ್ನತನಾದ ದೇವರು ಅವನನ್ನು ನಿರಾಶೆಗೊಳಿಸುವುದಿಲ್ಲ.
8 ದೇವರೇ, ನಿನ್ನ ಬಲಿಷ್ಠತನವನ್ನು ನಿನ್ನ ಶತ್ರುಗಳಿಗೆಲ್ಲ ನೀನು ತೋರಿಸುವೆ.
ನೀನು ದ್ವೇಷಿಸುವವರನ್ನು ನಿನ್ನ ಶಕ್ತಿಯು ಸೋಲಿಸುವುದು.
9 ಯೆಹೋವನೇ, ನೀನು ರಾಜನೊಂದಿರುವಾಗ
ಅವನು ಉರಿಯುವ ಕುಲಿಮೆಯಂತಿರುವನು.
ಅವನ ಕೋಪವು ಧಗಧಗಿಸುವ ಬೆಂಕಿಯಂತೆ ಸುಡುವುದು;
ಅವನು ಶತ್ರುಗಳನ್ನು ನಾಶಮಾಡುವನು.
10 ಅವನ ಶತ್ರುಗಳ ಕುಟುಂಬಗಳು ನಾಶವಾಗುತ್ತವೆ;
ಅವು ಭೂಮಿಯ ಮೇಲೆ ಇಲ್ಲವಾಗುತ್ತವೆ.
11 ಯಾಕೆಂದರೆ, ಅವರು ನಿನಗೆ ವಿರೋಧವಾಗಿ ದುರಾಲೋಚನೆಗಳನ್ನು ಮಾಡಿದರು.
ಅವರು ಕುತಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ.
12 ನಿನ್ನ ಬಿಲ್ಲುಗಳಿಂದ ಬಾಣಗಳನ್ನು ನೀನು ಎಸೆಯುವಾಗ
ಅವರು ಬೆನ್ನುಕೊಟ್ಟು ಓಡಿಹೋಗುವರು.
13 ಯೆಹೋವನೇ, ನಿನ್ನ ಪರಾಕ್ರಮಕ್ಕಾಗಿ ನಿನ್ನನ್ನು ಕೊಂಡಾಡುವೆನು.
ನಿನ್ನ ಮಹತ್ವದ ಬಗ್ಗೆ ವಾದ್ಯ ನುಡಿಸುತ್ತಾ ಹಾಡುವೆವು.
ದೇವರು ಇಸ್ರೇಲನ್ನು ಶಿಕ್ಷಿಸುವನು
24 ಇಗೋ, ಯೆಹೋವನು ಈ ದೇಶವನ್ನು ನಾಶಮಾಡುವನು. ಆತನು ಅದನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವನು. ಜನರನ್ನು ಅತಿದೂರಕ್ಕೆ ಚದರಿಸಿಬಿಡುವನು. 2 ಆ ಸಮಯದಲ್ಲಿ ಸಾಧಾರಣ ಜನರಿಗೂ ಯಾಜಕವರ್ಗದವರಿಗೂ ವ್ಯತ್ಯಾಸವಿರದು. ಸೇವಕರಿಗೂ ಅವರ ಯಜಮಾನರಿಗೂ ವ್ಯತ್ಯಾಸವಿರದು. ದಾಸಿಯರಿಗೂ ಅವರ ಯಜಮಾನಿಯರಿಗೂ ವ್ಯತ್ಯಾಸವಿರದು. ಮಾರುವವರಿಗೂ ಕೊಳ್ಳುವವರಿಗೂ ವ್ಯತ್ಯಾಸವಿರದು. ಸಾಲಕೊಡುವವರಿಗೂ ಸಾಲ ತೆಗೆದುಕೊಳ್ಳುವವರಿಗೂ ವ್ಯತ್ಯಾಸವಿರದು. ಬಡ್ಡಿಹಾಕುವವನಿಗೂ ಬಡ್ಡಿಕೊಡುವವನಿಗೂ ವ್ಯತ್ಯಾಸವಿರದು. 3 ಎಲ್ಲಾ ಜನರು ದೇಶದಿಂದ ಹೊರಕ್ಕೆ ಹಾಕಲ್ಪಡುವರು. ದೇಶದ ಸಂಪತ್ತನ್ನು ಕಿತ್ತುಕೊಳ್ಳಲಾಗುವದು. ಇದು ಯೆಹೋವನ ಆಜ್ಞೆಯಾಗಿರುವದರಿಂದ ನೆರವೇರುವದು. 4 ದೇಶವು ನಿರ್ಜನವಾಗಿ ಶೋಕಿಸುವದು. ಇಡೀ ಪ್ರಪಂಚವೇ ನಿರ್ಜನವಾಗಿ ಬಲಹೀನವಾಗುವದು. ಈ ಪ್ರಪಂಚದ ಪ್ರಸಿದ್ಧ ಜನರೂ ಬಲಹೀನರಾಗುವರು.
5 ದೇಶದ ಜನರು ದೇವರ ಉಪದೇಶಗಳಿಗೆ ವಿರುದ್ಧವಾಗಿ ನಡೆದು ತಮ್ಮ ದೇಶವನ್ನು ಹೊಲಸುಮಾಡಿದರು. ದೇವರ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ಬಹಳ ಕಾಲದ ಹಿಂದೆ ಜನರು ದೇವರೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆದರೆ ಆ ಜನರು ಆ ಒಡಂಬಡಿಕೆಯನ್ನು ಮುರಿದರು. 6 ಆ ದೇಶದಲ್ಲಿ ವಾಸಿಸುವ ಜನರು ದೇವರಿಗೆ ವಿರುದ್ಧವಾಗಿ ನಡೆದರು. ಆದ್ದರಿಂದ ದೇವರು ಈ ದೇಶವನ್ನು ನಾಶಮಾಡಲು ತೀರ್ಮಾನಿಸಿದನು. ಜನರು ಶಿಕ್ಷಿಸಲ್ಪಡುವರು. ಕೆಲವೇ ಮಂದಿ ಮಾತ್ರ ಉಳಿಯುವರು.
7 ದ್ರಾಕ್ಷಿಬಳ್ಳಿಗಳು ಸಾಯುತ್ತಲಿವೆ. ಹೊಸ ದ್ರಾಕ್ಷಾರಸವು ಹುಳಿಯಾಗಿದೆ. ಹಿಂದಿನ ಕಾಲದಲ್ಲಿ ಜನರು ಹರ್ಷಭರಿತರಾಗಿದ್ದರು. ಆದರೆ ಈಗ ಆ ಜನರು ದುಃಖದಲ್ಲಿರುತ್ತಾರೆ. 8 ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವದಿಲ್ಲ. ಸಂತಸದ ಗದ್ದಲವು ಕೇಳಿಸುವದಿಲ್ಲ. ಆ ಶಬ್ದಗಳೆಲ್ಲಾ ನಿಂತುಹೋಗಿವೆ. ಹಾರ್ಪ್‌ವಾದ್ಯದ ಮತ್ತು ದಮ್ಮಡಿಗಳ ಶಬ್ದವು ನಿಂತಿದೆ. 9 ಜನರು ದ್ರಾಕ್ಷಾರಸ ಕುಡಿಯುತ್ತಿರುವಾಗ ಹಾಡು ಹಾಡುವುದಿಲ್ಲ. ಅವರು ಕುಡಿಯುವ ಮದ್ಯವು ಅವರಿಗೆ ಕಹಿಯಾಗಿದೆ.
10 ಈ ನಗರಕ್ಕೆ “ಪೂರ್ಣ ಗಲಿಬಿಲಿ” ಎಂಬುದೇ ತಕ್ಕ ಹೆಸರು. ನಗರವು ಕೆಡವಲ್ಪಟ್ಟಿತು. ಜನರು ಮನೆಗಳಿಗೆ ಪ್ರವೇಶಿಸಲಿಕ್ಕಾಗದು. ಕದಗಳನ್ನು ತೆರೆಯಲು ಸಾಧ್ಯವಾಗದು. 11 ಮಾರುಕಟ್ಟೆಗಳಲ್ಲಿ ಜನರು ಈಗಲೂ ದ್ರಾಕ್ಷಾರಸವನ್ನು ಕೇಳುವರು. ಆದರೆ ಸಂತೋಷವೇ ಹೋಗಿಬಿಟ್ಟಿದೆ. ಹರ್ಷವು ಬಹುದೂರ ಒಯ್ಯಲ್ಪಟ್ಟಿದೆ. 12 ನಗರಕ್ಕೆ ನಾಶನವು ಕಾದಿದೆ; ಪುರದ್ವಾರವು ನಜ್ಜುಗುಜ್ಜಾಗಿದೆ.
13 ಕೊಯ್ಯುವ ಕಾಲದಲ್ಲಿ ಜನರು ಆಲೀವ್ ಮರಗಳನ್ನು ಹೊಡೆದು ಕಾಯಿಗಳನ್ನು ಉದುರಿಸುವರು.
ಆದರೆ ಕೆಲವು ಕಾಯಿಗಳು ಮರದಲ್ಲಿ ಉಳಿಯುವವು.
ಜನಾಂಗಗಳ ಮಧ್ಯದಲ್ಲಿ ದೇಶವೂ ಹೀಗೆಯೇ ಇರುವದು.
14 ಉಳಿದ ಜನರು ಚೀರಾಡುವರು.
ಅದು ಭೋರ್ಗರೆಯುವ ಸಮುದ್ರದ ಶಬ್ದಕ್ಕಿಂತಲೂ ಜೋರಾಗಿ ಕೇಳಿಸುವದು.
ದೇವರ ಕೃಪೆಯ ನಿಮಿತ್ತ ಅವರು ಸಂತೋಷದಲ್ಲಿರುವರು.
15 ಆ ಜನರು, “ಪೂರ್ವದಲ್ಲಿರುವ ಜನರೇ, ದೇವರಿಗೆ ಸ್ತೋತ್ರಮಾಡಿರಿ!
ದೂರ ದೇಶಗಳಲ್ಲಿರುವ ಜನರೇ,
ಇಸ್ರೇಲರ ದೇವರಾದ ಯೆಹೋವನ ಹೆಸರನ್ನು ಕೊಂಡಾಡಿರಿ” ಎಂದು ಹೇಳುವರು.
16 ದೇವರ ಸ್ತುತಿಯನ್ನು ನಾವು ಭೂಮಿಯ ಎಲ್ಲಾ ಕಡೆಗಳಿಂದಲೂ ಕೇಳಿಸಿಕೊಳ್ಳುತ್ತೇವೆ.
ಈ ಸ್ತುತಿಹಾಡುಗಳು ದೇವರ ಒಳ್ಳೆತನವನ್ನು ವರ್ಣಿಸುವವು.
ಆದರೆ ನಾನು, “ಸಾಕು, ನನಗೆ ಸಾಕು.
ನಾನು ನೋಡುವ ವಿಷಯಗಳು ಭಯಂಕರವಾಗಿವೆ.
ದ್ರೋಹಿಗಳು ಜನರಿಗೆ ವಿರುದ್ಧವಾಗಿ ಎದ್ದು ಅವರಿಗೆ ಹಾನಿಮಾಡುವರು.”
ದೇವರನ್ನು ಹರ್ಷಗೊಳಿಸುವ ಜೀವನ
4 ಸಹೋದರ ಸಹೋದರಿಯರೇ, ಈಗ ನಿಮಗೆ ಇತರ ಕೆಲವು ವಿಚಾರಗಳನ್ನು ತಿಳಿಸುತ್ತೇನೆ. ದೇವರನ್ನು ಮೆಚ್ಚಿಸಲು ಹೇಗೆ ಜೀವಿಸಬೇಕೆಂದು ನಿಮಗೆ ಕಲಿಸಿದ್ದೇವೆ. ನೀವು ಅದೇ ರೀತಿಯಲ್ಲಿ ಜೀವಿಸುತ್ತಿರುವಿರಿ. ಅದೇ ರೀತಿಯಲ್ಲಿ ಇನ್ನೂ ಹೆಚ್ಚು ಸಮರ್ಪಕವಾಗಿ ಜೀವಿಸಬೇಕೆಂದು ನಾವು ನಿಮ್ಮನ್ನು ಕ್ರಿಸ್ತನಲ್ಲಿ ಕೇಳಿಕೊಳ್ಳುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ. 2 ನೀವು ಯಾವ ಕಾರ್ಯಗಳನ್ನು ಮಾಡಬೇಕೆಂದು ನಾವು ನಿಮಗೆ ಹೇಳಿದೆವೋ ಅವುಗಳೆಲ್ಲಾ ನಿಮಗೆ ತಿಳಿದೇ ಇವೆ. ಪ್ರಭು ಯೇಸುವಿನ ಅಧಿಕಾರದಿಂದ ನಾವು ಆ ಸಂಗತಿಗಳನ್ನು ನಿಮಗೆ ಹೇಳಿದೆವು. 3 ನೀವು ಪವಿತ್ರರಾಗಿರಬೇಕೆಂಬುದು ದೇವರ ಚಿತ್ತವಾಗಿದೆ. ಆದುದರಿಂದ ನೀವು ಲೈಂಗಿಕ ಪಾಪಗಳಿಂದ ದೂರವಿರಿ. 4 ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಸ್ವಂತ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂಬುದು ದೇವರ ಅಪೇಕ್ಷೆ. ನಿಮ್ಮ ದೇಹವನ್ನು ಪವಿತ್ರವಾದ ಮಾರ್ಗದಲ್ಲಿ ಬಳಸಿದರೆ, ದೇವರಿಗೆ ಗೌರವವನ್ನು ನೀಡಿದಂತಾಗುವುದು.[a] 5 ನಿಮ್ಮ ದೇಹವನ್ನು ಲೈಂಗಿಕ ಪಾಪಗಳಿಗಾಗಿ ಬಳಸಬೇಡಿ. ದೇವರನ್ನು ತಿಳಿಯದ ಜನರು ತಮ್ಮ ದೇಹಗಳನ್ನು ಅದಕ್ಕೆ ಬಳಸುತ್ತಾರೆ. 6 ಈ ವಿಷಯದಲ್ಲಿ ನಿಮ್ಮಲ್ಲಿ ಯಾರೂ ಕ್ರಿಸ್ತನಲ್ಲಿ ಸಹೋದರನಾದವನನ್ನು ವಂಚಿಸಿ ಕೇಡುಮಾಡಬಾರದು. ನಾವು ಈಗಾಗಲೇ ನಿಮಗೆ ಹೇಳಿದಂತೆ ಮತ್ತು ಎಚ್ಚರಿಕೆ ನೀಡಿದಂತೆ ಇವೆಲ್ಲವುಗಳ ವಿಷಯದಲ್ಲಿ ದೇವರು ದಂಡಿಸುತ್ತಾನೆ. 7 ದೇವರು ನಮ್ಮನ್ನು ಪರಿಶುದ್ಧರಾಗಿ ಜೀವಿಸುವುದಕ್ಕೆ ಕರೆದಿದ್ದಾನೆ. ನಾವು ಪಾಪದಲ್ಲಿ ಜೀವಿಸಲು ಆತನು ಇಷ್ಟಪಡುವುದಿಲ್ಲ. 8 ಆದುದರಿಂದ ಈ ಉಪದೇಶವನ್ನು ಅನುಸರಿಸದವನು ಅವಿಧೇಯನಾಗಿರುವುದು ದೇವರಿಗೇ ಹೊರತು ಮಾನವನಿಗಲ್ಲ. ನಮಗೆ ತನ್ನ ಪವಿತ್ರಾತ್ಮನನ್ನು ನೀಡಿದಾತನು ದೇವರೇ.
9 ಕ್ರಿಸ್ತನಲ್ಲಿ ಸಹೋದರ ಸಹೋದರಿಯರನ್ನು ಹೇಗೆ ಪ್ರೀತಿಸಬೇಕೆಂಬುದರ ಬಗ್ಗೆ ನಾವು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ಒಬ್ಬರನ್ನೊಬ್ಬರು ಹೇಗೆ ಪ್ರೀತಿಸಬೇಕೆಂಬುದನ್ನು ಈಗಾಗಲೇ ದೇವರು ನಿಮಗೆ ಕಲಿಸಿದ್ದಾನೆ. 10 ಮಕೆದೋನಿಯದಲ್ಲಿರುವ ಸಹೋದರ ಸಹೋದರಿಯರನ್ನೆಲ್ಲ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದೀರಿ. ಅವರನ್ನು ಇನ್ನೂ ಹೆಚ್ಚೆಚ್ಚಾಗಿ ನೀವು ಪ್ರೀತಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
11 ಶಾಂತಿಯಿಂದ ಜೀವಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ನಿಮ್ಮ ಸ್ವಂತ ವ್ಯವಹಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಿ. ನಿಮ್ಮ ಕೈಯಾರೆ ಕೆಲಸ ಮಾಡಬೇಕೆಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. 12 ನೀವು ಹೀಗೆ ಮಾಡಿದರೆ, ವಿಶ್ವಾಸಿಗಳಲ್ಲದವರು ನಿಮ್ಮ ಜೀವತದ ರೀತಿಯನ್ನು ಕಂಡು ನಿಮ್ಮನ್ನು ಗೌರವಿಸುತ್ತಾರೆ. ಅಲ್ಲದೆ ನಿಮ್ಮ ಅಗತ್ಯತೆಗಳ ಪೂರೈಕೆಗಾಗಿ ನೀವು ಬೇರೆಯವರನ್ನು ಅವಲಂಬಿಸಿಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International