Revised Common Lectionary (Semicontinuous)
71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
ಎಂದಿಗೂ ಆಶಾಭಂಗಪಡಿಸಬೇಡ.
2 ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
3 ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
4 ನನ್ನ ದೇವರೇ, ದುಷ್ಟರಿಂದಲೂ
ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
5 ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
6 ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.
ಯೆಹೂದದ ಅರಸನಾದ ಚಿದ್ಕೀಯನು
11 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಕಾಲ ರಾಜ್ಯಭಾರ ಮಾಡಿದನು. 12 ಚಿದ್ಕೀಯನು ಯೆಹೋವನ ಚಿತ್ತಾನುಸಾರವಾಗಿ ನಡೆಯಲಿಲ್ಲ. ಅವನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದನು. ಪ್ರವಾದಿಯಾದ ಯೆರೆಮೀಯನು ದೇವರ ಸಂದೇಶವನ್ನು ಕೊಡುತ್ತಾ ಬಂದನು. ಆದರೆ ಚಿದ್ಕೀಯನು ದೇವರೆದುರಿಗೆ ತನ್ನನ್ನು ತಗ್ಗಿಸಿಕೊಳ್ಳದೆ ಯೆರೆಮೀಯನ ಮೂಲಕ ಬಂದ ದೇವರ ಆಜ್ಞೆಗಳಿಗೆ ವಿಧೇಯನಾಗಲಿಲ್ಲ.
ಜೆರುಸಲೇಮಿನ ನಾಶನ
13 ಚಿದ್ಕೀಯನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದನು. ನೆಬೂಕದ್ನೆಚ್ಚರನು ತನಗೆ ವಿಧೇಯನಾಗಿರುವಂತೆ ಚಿದ್ಕೀಯನಿಂದ ಪ್ರಮಾಣ ಮಾಡಿಸಿಕೊಂಡಿದ್ದನು. ಚಿದ್ಕೀಯನು ದೇವರ ಹೆಸರಿನಲ್ಲಿ ಆಣೆಯಿಟ್ಟು ತಾನು ನೆಬೂಕದ್ನೆಚ್ಚರನಿಗೆ ನಂಬಿಗಸ್ತನಾಗಿರುವುದಾಗಿ ಪ್ರಮಾಣಮಾಡಿದ್ದನು. ಆದರೆ ಚಿದ್ಕೀಯನು ಮನಸ್ಸನ್ನು ಕಠಿಣಮಾಡಿಕೊಂಡು ಇಸ್ರೇಲಿನ ದೇವರಾದ ಯೆಹೋವನಿಗೆ ವಿಧೇಯನಾಗಲು ನಿರಾಕರಿಸಿದನು. 14 ಅವನು ಮಾತ್ರವಲ್ಲದೆ ಎಲ್ಲಾ ಯಾಜಕರು, ಯೆಹೂದದ ಜನನಾಯಕರು ಬಹಳ ಪಾಪಗಳನ್ನು ಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟುಹೋಗಿದ್ದರು. ಅವರು ಬೇರೆ ದೇಶಗಳ ನಡವಳಿಕೆಯನ್ನು ಅನುಸರಿಸಿದರು. ಆ ನಾಯಕರುಗಳು ದೇವಾಲಯವನ್ನು ಹಾಳುಮಾಡಿದರು. ಜೆರುಸಲೇಮಿನಲ್ಲಿದ್ದ ಆ ಆಲಯವನ್ನು ಯೆಹೋವನು ತನಗಾಗಿ ಪ್ರತಿಷ್ಠಿಸಿಕೊಂಡಿದ್ದನು. 15 ಅವರ ಪೂರ್ವಿಕರ ದೇವರಾದ ಯೆಹೋವನು ಆಗಾಗ್ಗೆ ತನ್ನ ಪ್ರವಾದಿಗಳನ್ನು ಕಳುಹಿಸಿ ತನ್ನ ಜನರನ್ನು ಎಚ್ಚರಿಸಿದನು. ಯಾಕೆಂದರೆ ಆತನಿಗೆ ತನ್ನ ಜನರೂ ತನ್ನ ಮಂದಿರವೂ ನಾಶವಾಗುವದರಲ್ಲಿ ಇಷ್ಟವಿರಲಿಲ್ಲ. 16 ಆದರೆ ಆತನ ಜನರು ಪ್ರವಾದಿಗಳನ್ನು ಹಾಸ್ಯಮಾಡಿದರು; ಅವರ ಮಾತುಗಳನ್ನು ಕೇಳಲು ನಿರಾಕರಿಸಿದರು; ದೇವರ ಸಂದೇಶವನ್ನು ದ್ವೇಷಿಸಿದರು. ಆಗ ದೇವರ ಕೋಪವು ಅವರ ಮೇಲೆ ಉರಿಯತೊಡಗಿತು. ಅದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಾಗಲಿಲ್ಲ. 17 ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ನಾಶಮಾಡಲು ಬಾಬಿಲೋನಿನ ಅರಸನನ್ನು ಕಳುಹಿಸಿದನು. ಬಾಬಿಲೋನಿನ ಅರಸನು ದೇವಾಲಯದೊಳಗಿದ್ದ ಯುವಜನರನ್ನು ಕೊಂದುಹಾಕಿದನು. ಅವನಿಗೆ ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಕರುಣೆಯೇ ಇರಲಿಲ್ಲ. ಅವನು ಚಿಕ್ಕವರನ್ನೂ ದೊಡ್ಡವರನ್ನೂ ಗಂಡಸರನ್ನೂ ಹೆಂಗಸರನ್ನೂ ಬಿಡದೆ ಸಂಹರಿಸಿದನು. ರೋಗಿಗಳನ್ನೂ ಆರೋಗ್ಯವಂತರನ್ನೂ ಸಂಹರಿಸಿದನು; ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ಶಿಕ್ಷಿಸಲು ದೇವರು ನೆಬೂಕದ್ನೆಚ್ಚರನನ್ನು ಉಪಯೋಗಿಸಿದನು. 18 ದೇವಾಲಯದೊಳಗಿದ್ದ ಎಲ್ಲಾ ವಸ್ತುಗಳನ್ನು ನೆಬೂಕದ್ನೆಚ್ಚರನು ಬಾಬಿಲೋನಿಗೆ ಸಾಗಿಸಿದನು. ದೇವಾಲಯದೊಳಗೂ ಅರಸನ ಬಳಿಯಲ್ಲಿಯೂ ಅಧಿಕಾರಿಗಳ ಬಳಿಯಲ್ಲಿಯೂ ಇದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ಬಾಬಿಲೋನಿಗೆ ಸಾಗಿಸಿದನು. 19 ನೆಬೂಕದ್ನೆಚ್ಚರನು ಮತ್ತು ಅವನ ಸೈನಿಕರು ದೇವಾಲಯವನ್ನು ಸುಟ್ಟುಹಾಕಿದರು; ಜೆರುಸಲೇಮ್ ಪಟ್ಟಣದ ಪೌಳಿಗೋಡೆಯನ್ನು ಕೆಡವಿಹಾಕಿದರು; ಅರಸನ ಮತ್ತು ಅವನ ಪರಿವಾರದವರ ಮನೆಗಳನ್ನೆಲ್ಲಾ ಸುಟ್ಟುಹಾಕಿದರು. ಜೆರುಸಲೇಮಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚಿದರು ಮತ್ತು ಸುಟ್ಟುಹಾಕಿದರು; 20 ಜೀವದಿಂದುಳಿದ ಜನರನ್ನು ಸೆರೆಹಿಡಿದು ಬಾಬಿಲೋನಿನಗೆ ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಪಾರಸಿಯ ಸಾಮ್ರಾಜ್ಯ ಸ್ಥಾಪನೆಯಾಗುವ ತನಕ ಅವರು ಅಲ್ಲಿ ಗುಲಾಮರಾಗಿದ್ದರು. 21 ಹೀಗೆ ಯೆಹೋವನು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿಸಿದ ಮಾತುಗಳನ್ನು ನೆರವೇರಿಸಿದನು. “ಈ ಸ್ಥಳವು ಎಪ್ಪತ್ತು ವರ್ಷಗಳ ತನಕ ಪಾಳುಬೀಳುವದು. ಜನರು ಆಚರಿಸದೆಹೋದ ಸಬ್ಬತ್ ಹಬ್ಬಗಳಿಗೆ ಅದು ಪರಿಹಾರವಾಗಿರುವುದು” ಎಂದು ಯೆರೆಮೀಯನು ಹೇಳಿದ್ದನು.[a]
43 ಮರುದಿನ ಯೇಸು ಗಲಿಲಾಯಕ್ಕೆ ಹೋಗಲು ನಿರ್ಧರಿಸಿದನು. ಯೇಸು ಫಿಲಿಪ್ಪನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 44 ಅಂದ್ರೆಯ ಮತ್ತು ಪೇತ್ರರಂತೆ ಫಿಲಿಪ್ಪನು ಸಹ ಬೆತ್ಸಾಯಿದ ಎಂಬ ಊರಿನವನಾಗಿದ್ದನು. 45 ಫಿಲಿಪ್ಪನು ನತಾನಿಯೇಲನನ್ನು ಕಂಡು ಅವನಿಗೆ, “ಯಾವನ ವಿಷಯದಲ್ಲಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನನ್ನು ನಾವು ಕಂಡುಕೊಂಡೆವು. ಆತನ ಹೆಸರು ಯೇಸು. ಆತನು ಯೋಸೇಫನ ಮಗನು. ಆತನು ನಜರೇತಿನವನು” ಎಂದು ಹೇಳಿದನು.
46 ಆದರೆ ನತಾನಿಯೇಲನು ಫಿಲಿಪ್ಪನಿಗೆ, “ನಜರೇತಿನಿಂದ ಒಳ್ಳೆಯದೇನಾದರೂ ಬರುವುದೇ?” ಎಂದು ಕೇಳಿದನು.
ಫಿಲಿಪ್ಪನು, “ಬಂದು ನೋಡು” ಎಂದು ಉತ್ತರಕೊಟ್ಟನು.
47 ಯೇಸು ತನ್ನ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡು ಅವನ ಬಗ್ಗೆ, “ಇವನು ನಿಜವಾದ ಇಸ್ರೇಲ. ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು.
48 ನತಾನಿಯೇಲನು, “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಕೇಳಿದನು.
ಯೇಸು, “ಫಿಲಿಪ್ಪನು ನನ್ನ ಬಗ್ಗೆ ನಿನಗೆ ತಿಳಿಸುವುದಕ್ಕಿಂತ ಮೊದಲೇ ನೀನು ಅಂಜೂರದ ಮರದ ಕೆಳಗಿದ್ದಾಗ ನಾನು ನಿನ್ನನ್ನು ನೋಡಿದೆನು” ಎಂದು ಹೇಳಿದನು.
49 ಆಗ ನತಾನಿಯೇಲನು ಯೇಸುವಿಗೆ, “ಗುರುವೇ, ನೀನೇ ದೇವರ ಮಗನು. ನೀನೇ ಇಸ್ರೇಲರ ರಾಜ” ಎಂದು ಹೇಳಿದನು.
50 ಯೇಸು ನತಾನಿಯೇಲನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆನೆಂದು ನಾನು ನಿನಗೆ ಹೇಳಿದ್ದರಿಂದ ನೀನು ನನ್ನನ್ನು ನಂಬುವೆ. ಆದರೆ ಅದಕ್ಕಿಂತಲೂ ಹೆಚ್ಚು ದೊಡ್ಡ ಕಾರ್ಯಗಳನ್ನು ನೀನು ನೋಡುವೆ!” ಎಂದು ಹೇಳಿದನು. 51 ಅದಲ್ಲದೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರುಗಳು ಏರಿಹೋಗುವುದನ್ನೂ ಕೆಳಗೆ ಇಳಿದುಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International