Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 37:1-11

ರಚನೆಗಾರ: ದಾವೀದ

37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
    ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
ದುಷ್ಟರು ಹುಲ್ಲಿನಂತೆಯೂ
    ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
    ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
    ನಿನಗೆ ಬೇಕಾದುದನ್ನು ಆತನೇ ಕೊಡುವನು.
ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
    ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
ನಿನ್ನ ನೀತಿಯೂ ನ್ಯಾಯವೂ
    ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
    ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
    ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
ದುಷ್ಟರಾದರೋ ನಾಶವಾಗುವರು.
    ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
10 ಇನ್ನು ಸ್ವಲ್ಪ ಕಾಲದೊಳಗೆ ದುಷ್ಟರು ಇರುವುದೇ ಇಲ್ಲ.
    ನೀನು ಅವರಿಗಾಗಿ ಹುಡುಕಿದರೂ ಅವರು ಸಿಕ್ಕುವುದಿಲ್ಲ!
11 ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ದೀನರು ಪಡೆದುಕೊಳ್ಳುವರು;
    ಸಮಾಧಾನವನ್ನು ಅನುಭವಿಸುವರು.

ಕೀರ್ತನೆಗಳು 37:39-40

39 ಯೆಹೋವನು ನೀತಿವಂತರನ್ನು ಕಾಪಾಡುತ್ತಾನೆ.
    ಅವರು ಆಪತ್ತಿನಲ್ಲಿರುವಾಗ ಆತನೇ ಅವರಿಗೆ ಆಶ್ರಯಸ್ಥಾನವಾಗಿದ್ದಾನೆ.
40 ಯೆಹೋವನು ನೀತಿವಂತರಿಗೆ ಸಹಾಯಕನಾಗಿ ಅವರನ್ನು ರಕ್ಷಿಸುತ್ತಾನೆ.
    ನೀತಿವಂತರು ಆತನನ್ನು ಆಶ್ರಯಿಸಿಕೊಂಡಾಗ ಆತನು ಅವರನ್ನು ದುಷ್ಟರಿಂದ ತಪ್ಪಿಸಿ ಕಾಪಾಡುವನು.

ಆದಿಕಾಂಡ 43:16-34

ಯೋಸೇಫನು ಸಹೋದರರನ್ನು ಮನೆಗೆ ಆಹ್ವಾನಿಸಿದ್ದು

16 ಸಹೋದರರೊಂದಿಗೆ ಬೆನ್ಯಾಮೀನನು ಇರುವುದನ್ನು ಕಂಡ ಯೋಸೇಫನು ತನ್ನ ಸೇವಕನಿಗೆ, “ಈ ಜನರನ್ನು ನನ್ನ ಮನೆಯೊಳಗೆ ಕರೆದುಕೊಂಡು ಹೋಗು; ಕುರಿಯನ್ನು ಕೊಯ್ದು ಅಡಿಗೆ ಮಾಡು. ಈ ಜನರು ಈ ಹೊತ್ತು ಮಧ್ಯಾಹ್ನ ನನ್ನೊಂದಿಗೆ ಊಟಮಾಡುವರು” ಎಂದು ಹೇಳಿದನು. 17 ಅಂತೆಯೇ ಆ ಸೇವಕನು ಸಹೋದರರನ್ನು ಮನೆಯೊಳಗೆ ಕರೆದುಕೊಂಡು ಹೋದನು.

18 ಆಗ ಸಹೋದರರಿಗೆ ಭಯವಾಯಿತು. ಅವರು, “ಕಳೆದ ಸಲ ನಮ್ಮ ಚೀಲಗಳಿಗೆ ಮತ್ತೆ ಹಾಕಿದ್ದ ಹಣದ ಕಾರಣದಿಂದಾಗಿ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ನಮ್ಮನ್ನು ತಪ್ಪಿತಸ್ಥರೆಂದು ನಿರ್ಣಯಿಸಿ ನಮ್ಮ ಕತ್ತೆಗಳನ್ನು ವಶಮಾಡಿಕೊಳ್ಳುವರು; ನಮ್ಮನ್ನೂ ಗುಲಾಮರನ್ನಾಗಿ ಮಾಡಿಕೊಳ್ಳುವರು” ಎಂದು ಮಾತಾಡಿಕೊಂಡರು.

19 ಆದ್ದರಿಂದ ಸಹೋದರರು ಯೋಸೇಫನ ಮನೆಯ ಮೇಲ್ವಿಚಾರಕನಾದ ಸೇವಕನ ಬಳಿಗೆ ಹೋಗಿ ಪ್ರವೇಶದ್ವಾರದ ಬಳಿಯಲ್ಲಿ ಅವನೊಂದಿಗೆ ಮಾತಾಡಿದರು. 20 ಅವರು, “ಸ್ವಾಮೀ, ನಾವು ಪ್ರಮಾಣಮಾಡಿ ಹೇಳುತ್ತೇವೆ. ಇದು ಸತ್ಯ. ಕಳೆದ ಸಲ ನಾವು ಆಹಾರವನ್ನು ಕೊಂಡುಕೊಳ್ಳಲು ಬಂದಿದ್ದೆವು. 21-22 ಮನೆಗೆ ಹೋಗುವಾಗ ದಾರಿಯಲ್ಲಿ ನಾವು ನಮ್ಮ ಚೀಲಗಳನ್ನು ಬಿಚ್ಚಿದಾಗ ಪ್ರತಿಯೊಂದು ಚೀಲದಲ್ಲಿಯೂ ನಾವು ಪಾವತಿಮಾಡಿದ್ದ ಹಣವನ್ನು ಕಂಡೆವು. ಆ ಹಣವು ಅಲ್ಲಿಗೆ ಹೇಗೆ ಬಂತೋ ನಮಗೆ ಗೊತ್ತಿಲ್ಲ. ಆದರೆ ಆ ಹಣವನ್ನು ನಿಮಗೆ ಕೊಡುವುದಕ್ಕಾಗಿ ನಮ್ಮೊಂದಿಗೆ ತೆಗೆದುಕೊಂಡು ಬಂದಿದ್ದೇವೆ. ಈ ಸಲ ನಾವು ಖರೀದಿ ಮಾಡಬೇಕೆಂದಿರುವ ಆಹಾರಕ್ಕೆ ಕೊಡಲು ಹೆಚ್ಚು ಹಣವನ್ನು ತಂದಿದ್ದೇವೆ” ಎಂದು ಹೇಳಿದರು.

23 ಅದಕ್ಕೆ ಸೇವಕನು, “ಭಯಪಡಬೇಡಿ, ಚಿಂತಿಸಬೇಡಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ಹಣವನ್ನು ಉಡುಗೊರೆಯಾಗಿ ನಿಮ್ಮ ಚೀಲಗಳಲ್ಲಿ ಇಟ್ಟಿದ್ದಿರಬೇಕು. ಕಳೆದ ಸಲ ನೀವು ದವಸಧಾನ್ಯಗಳಿಗಾಗಿ ಹಣ ಪಾವತಿ ಮಾಡಿದ್ದು ನನಗೆ ನೆನಪಿದೆ” ಎಂದು ಹೇಳಿದನು.

ಬಳಿಕ ಆ ಸೇವಕನು ಸಿಮೆಯೋನನನ್ನು ಸೆರೆಮನೆಯಿಂದ ಕರೆತಂದನು. 24 ಸೇವಕನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಹೋಗಿ ಅವರಿಗೆ ನೀರನ್ನು ಕೊಟ್ಟನು. ಅವರು ತಮ್ಮ ಕಾಲುಗಳನ್ನು ತೊಳೆದುಕೊಂಡರು. ಬಳಿಕ ಅವನು ಅವರ ಕತ್ತೆಗಳಿಗೆ ಆಹಾರವನ್ನು ಹಾಕಿದನು.

25 ತಾವು ಯೋಸೇಫನೊಂದಿಗೆ ಊಟ ಮಾಡುವುದಾಗಿ ಸಹೋದರರಿಗೆ ತಿಳಿಯಿತು. ಆದ್ದರಿಂದ ಅವರು ಅವನಿಗೆ ಕೊಡಲು ತಮ್ಮ ಉಡುಗೊರೆಗಳನ್ನು ಮಧ್ಯಾಹ್ನದವರೆಗೆ ಸಿದ್ಧಪಡಿಸಿದರು.

26 ಯೋಸೇಫನು ಮನೆಗೆ ಬಂದಾಗ, ಸಹೋದರರು ತಾವು ತಂದಿದ್ದ ಉಡುಗೊರೆಗಳನ್ನು ಅವನಿಗೆ ಕೊಟ್ಟರು. ಬಳಿಕ ಅವರು ನೆಲದವರೆಗೆ ಬಾಗಿ ನಮಸ್ಕರಿಸಿದರು.

27 ಯೋಸೇಫನು ಅವರ ಯೋಗಕ್ಷೇಮವನ್ನು ವಿಚಾರಿಸಿದನು. ಯೋಸೇಫನು “ನೀವು ನನಗೆ ತಿಳಿಸಿದ ನಿಮ್ಮ ವೃದ್ಧನಾದ ತಂದೆ ಕ್ಷೇಮವಾಗಿದ್ದಾನೆಯೇ? ಇನ್ನೂ ಜೀವಂತವಾಗಿರುವನೇ?” ಎಂದು ಕೇಳಿದನು.

28 ಸಹೋದರರು, “ಸ್ವಾಮೀ, ನಮ್ಮ ತಂದೆ ಕ್ಷೇಮವಾಗಿದ್ದಾನೆ. ಅವನು ಇನ್ನೂ ಜೀವಂತವಾಗಿದ್ದಾನೆ” ಎಂದು ಹೇಳಿದನು. ಬಳಿಕ ಅವರು ಮತ್ತೆ ಯೋಸೇಫನಿಗೆ ಅಡ್ಡಬಿದ್ದರು.

29 ಬಳಿಕ ಯೋಸೇಫನು ತನ್ನ ಸಹೋದರನಾದ ಬೆನ್ಯಾಮೀನನನ್ನು ನೋಡಿದನು. (ಬೆನ್ಯಾಮೀನ ಮತ್ತು ಯೋಸೇಫ ಒಂದೇ ತಾಯಿಯ ಮಕ್ಕಳು.) ಯೋಸೇಫನು, “ನೀವು ನನಗೆ ತಿಳಿಸಿದ ನಿಮ್ಮ ಕಿರಿಯ ತಮ್ಮನು ಇವನೋ?” ಎಂದು ಕೇಳಿದನು. ಆಮೇಲೆ ಯೋಸೇಫನು ಬೆನ್ಯಾಮೀನನಿಗೆ “ಮಗನೇ, ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂದು ಹೇಳಿದನು.

30 ಯೋಸೇಫನು ತನ್ನ ತಮ್ಮನಾದ ಬೆನ್ಯಾಮೀನನನ್ನು ಬಹಳವಾಗಿ ಪ್ರೀತಿಸುತ್ತಿದ್ದ ಕಾರಣ ಆನಂದದಿಂದ ಅವನ ಕಣ್ಣಲ್ಲಿ ನೀರು ಉಕ್ಕೇರಿ ಬಂದದ್ದರಿಂದ ಕೋಣೆಯೊಳಗೆ ಹೋಗಿ ಕಣ್ಣೀರಿಟ್ಟನು. 31 ಬಳಿಕ ಯೋಸೇಫನು ತನ್ನ ಮುಖವನ್ನು ತೊಳೆದುಕೊಂಡು ಮತ್ತು ಮನಸ್ಸನ್ನು ಬಿಗಿಹಿಡಿದುಕೊಂಡು ಬಂದು, “ಊಟ ಬಡಿಸಿರಿ” ಎಂದು ಅಪ್ಪಣೆಕೊಟ್ಟನು.

32 ಯೋಸೇಫನೊಬ್ಬನೇ ಒಂದು ಮೇಜಿನಲ್ಲಿ ಊಟ ಮಾಡಿದನು. ಅವನ ಸಹೋದರರು ಒಟ್ಟಾಗಿ ಮತ್ತೊಂದು ಮೇಜಿನಲ್ಲಿ ಊಟ ಮಾಡಿದರು. ಈಜಿಪ್ಟಿನವರು ಬೇರೊಂದು ಮೇಜಿನಲ್ಲಿ ಊಟ ಮಾಡಿದರು. ಇಬ್ರಿಯ ಜನರೊಂದಿಗೆ ಊಟ ಮಾಡುವುದು ತಪ್ಪೆಂಬುದು ಅವರ ನಂಬಿಕೆಯಾಗಿತ್ತು. 33 ಯೋಸೇಫನ ಎದುರಿನ ಸಾಲಿನಲ್ಲಿ ಕುಳಿತುಕೊಳ್ಳಲು ಯೋಸೇಫನ ಸಹೋದರರಿಗೆ ಹಿರಿಯವನಿಂದ ಮೊದಲುಗೊಂಡು ಕಿರಿಯವನವರೆಗೆ ಕ್ರಮವಾಗಿ ಸ್ಥಳವನ್ನು ಗೊತ್ತುಪಡಿಸಲಾಗಿತ್ತು. ಆದ್ದರಿಂದ ಸಹೋದರರೆಲ್ಲಾ ಅತ್ಯಾಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡತೊಡಗಿದರು. 34 ಸೇವಕರು ಯೋಸೇಫನ ಮೇಜಿನಿಂದ ಊಟವನ್ನು ತೆಗೆದುಕೊಂಡು ಅವರಿಗೆ ಬಡಿಸುತ್ತಿದ್ದರು. ಆದರೆ ಸೇವಕರು ಬೆನ್ಯಾಮೀನನಿಗೆ ಬೇರೆಯವರಿಗಿಂತ ಐದರಷ್ಟು ಹೆಚ್ಚಾಗಿ ಕೊಟ್ಟರು. ಸಹೋದರರು ಯಥೇಚ್ಛವಾಗಿ ಊಟ ಮಾಡಿದರು.

ರೋಮ್ನಗರದವರಿಗೆ 8:1-11

ಪವಿತ್ರಾತ್ಮನಿಗೆ ಅಧೀನವಾದ ಜೀವಿತ

ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಅಪರಾಧಿಗಳೆಂದು ತೀರ್ಪಾಗುವುದಿಲ್ಲ. ನನಗೆ ಅಪರಾಧಿಯೆಂದು ತೀರ್ಪಾಗದಿರುವುದೇಕೆ? ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಜೀವವನ್ನು ತರುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪ ಮತ್ತು ಮರಣಗಳನ್ನು ತರುವ ನಿಯಮದಿಂದ ಬಿಡುಗಡೆ ಮಾಡಿತು. ಧರ್ಮಶಾಸ್ತ್ರವು ನಿರ್ಬಲವಾಗಿತ್ತು. ಏಕೆಂದರೆ ನಮ್ಮ ಪಾಪಾಧೀನಸ್ವಭಾವವೇ ಅದನ್ನು ಬಲಹೀನಗೊಳಿಸಿತು. ಹೀಗಿರಲಾಗಿ, ಧರ್ಮಶಾಸ್ತ್ರವು ಮಾಡಲಾಗದ್ದನ್ನು ದೇವರು ಮಾಡಿದನು. ದೇವರು ತನ್ನ ಸ್ವಂತ ಮಗನನ್ನೇ ಪಾಪಾಧೀನವಾದ ಮಾನವ ಸ್ವಭಾವದಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕಳುಹಿಸಿಕೊಟ್ಟನು. ಆದಕಾರಣ ದೇವರು ಪಾಪಕ್ಕೆ ಮರಣದಂಡನೆಯನ್ನು ವಿಧಿಸಲು ಮಾನವ ಸ್ವಭಾವವನ್ನೇ ಉಪಯೋಗಿಸಿಕೊಂಡನು. ಈಗ ನಮ್ಮ ಸ್ವಭಾವಕ್ಕನುಸಾರವಾಗಿ ಜೀವಿಸದೆ ಪವಿತ್ರಾತ್ಮನಿಗನುಸಾರವಾಗಿ ಜೀವಿಸುತ್ತಿರುವ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮಗಳು ನೆರವೇರಲೆಂದು ದೇವರು ಹೀಗೆ ಮಾಡಿದನು.

ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ. ಒಬ್ಬನ ಆಲೋಚನೆಯು ಅವನ ಪಾಪ ಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ ಅವನಿಗೆ ಆತ್ಮಿಕ ಮರಣವಾಗುತ್ತದೆ. ಆದರೆ ಒಬ್ಬನ ಆಲೋಚನೆಯು ಪವಿತ್ರಾತ್ಮನ ಹತೋಟಿಗೆ ಒಳಪಟ್ಟಿದ್ದರೆ, ಅವನಲ್ಲಿ ಜೀವವೂ ಸಮಾಧಾನವೂ ಇರುತ್ತದೆ. ಏಕೆಂದರೆ ಒಬ್ಬನ ಆಲೋಚನೆಯು ಅವನ ಪಾಪಾಧೀನಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ, ಅವನು ದೇವರಿಗೆ ವಿರೋಧವಾಗಿದ್ದಾನೆ. ಅವನು ದೇವರ ನಿಯಮಕ್ಕೆ ವಿಧೇಯನಾಗುವುದೂ ಇಲ್ಲ್ಲ, ವಿಧೇಯನಾಗಲು ಸಾಧ್ಯವಿರುವುದೂ ಇಲ್ಲ. ತಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಪಟ್ಟಿರುವ ಆ ಜನರು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ.

ಆದರೆ ನೀವು ನಿಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಗಾಗಿಲ್ಲ. ದೇವರಾತ್ಮನು ನಿಮ್ಮಲ್ಲಿ ನಿಜವಾಗಿಯೂ ವಾಸವಾಗಿದ್ದರೆ, ನೀವು ಪವಿತ್ರಾತ್ಮನ ಆಡಳಿತಕ್ಕೆ ಒಳಗಾಗಿದ್ದೀರಿ ಯಾವನಲ್ಲಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ, ಅವನು ಕ್ರಿಸ್ತನಿಗೆ ಸೇರಿದವನಲ್ಲ. 10 ನಿಮ್ಮ ದೇಹವು ಪಾಪದ ದೆಸೆಯಿಂದಾಗಿ ಯಾವಾಗಲೂ ಸತ್ತದ್ದಾಗಿದೆ. ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ಆತ್ಮನು ನಿಮಗೆ ಜೀವವನ್ನು ಕೊಡುತ್ತಾನೆ. ಏಕೆಂದರೆ ಕ್ರಿಸ್ತನು ನಿಮ್ಮನ್ನು ನೀತಿವಂತರನ್ನಾಗಿ ಮಾಡಿದ್ದಾನೆ. 11 ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಸತ್ತುಹೋಗುವ ನಿಮ್ಮ ದೇಹಗಳಿಗೆ ಆತನು ಜೀವವನ್ನು ಸಹ ಕೊಡುತ್ತಾನೆ. ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನು ದೇವರೇ. ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಆತನು ನಿಮ್ಮ ದೇಹಗಳಿಗೆ ಜೀವವನ್ನು ಕೊಡುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International