Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಆದಿಕಾಂಡ 45:3-11

ಯೋಸೇಫನು ತನ್ನ ಸಹೋದರರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನನ್ನ ತಂದೆ ಚೆನ್ನಾಗಿದ್ದಾನೆಯೇ?” ಎಂದು ಕೇಳಿದನು. ಆದರೆ ಸಹೋದರರು ಅವನಿಗೆ ಉತ್ತರಿಸಲಿಲ್ಲ. ಅವರಿಗೆ ಭಯವಾಗಿತ್ತು ಮತ್ತು ಗಲಿಬಿಲಿಗೊಂಡಿದ್ದರು.

ಯೋಸೇಫನು ಮತ್ತೆ ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿ. ನನ್ನ ಹತ್ತಿರ ಬನ್ನಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು. ಆದ್ದರಿಂದ ಸಹೋದರರು ಯೋಸೇಫನ ಹತ್ತಿರ ಹೋದರು. ಯೋಸೇಫನು ಅವರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನೀವು ಈಜಿಪ್ಟಿನವರಿಗೆ ಯಾವನನ್ನು ಗುಲಾಮನನ್ನಾಗಿ ಮಾರಿದಿರೋ ಅವನೇ ನಾನು. ಈಗ ಚಿಂತಿಸಬೇಡಿ, ನೀವು ಮಾಡಿದ್ದಕ್ಕೆ ದುಃಖವನ್ನೂ ಪಡಬೇಡಿ. ನಾನು ಇಲ್ಲಿಗೆ ಬರಬೇಕೆಂಬುದು ದೇವರ ಯೋಜನೆಯಾಗಿತ್ತು. ನಾನು ನಿಮ್ಮನ್ನು ರಕ್ಷಿಸಲು ಇಲ್ಲಿಗೆ ಬಂದಿದ್ದೇನೆ. ಈ ಭೀಕರವಾದ ಬರಗಾಲವು ಆರಂಭವಾಗಿ ಈಗಾಗಲೇ ಎರಡು ವರ್ಷಗಳಾಯಿತು. ಇನ್ನೂ ಐದು ವರ್ಷಗಳವರೆಗೆ ಬಿತ್ತನೆ ಇರುವುದಿಲ್ಲ; ಸುಗ್ಗಿಯೂ ಇರುವುದಿಲ್ಲ. ಆದ್ದರಿಂದ ಈ ದೇಶದಲ್ಲಿ ತನ್ನ ಜನರನ್ನು ಕಾಪಾಡಲು ದೇವರು ನನ್ನನ್ನು ನಿಮಗಿಂತ ಮೊದಲೇ ಇಲ್ಲಿಗೆ ಕಳುಹಿಸಿದ್ದಾನೆ. ನನ್ನನ್ನು ಇಲ್ಲಿಗೆ ಕಳುಹಿಸಿದ್ದು ನಿಮ್ಮ ತಪ್ಪಲ್ಲ. ಅದು ದೇವರ ಯೋಜನೆ. ದೇವರು ನನ್ನನ್ನು ಫರೋಹನ ಅತ್ಯುನ್ನತವಾದ ಅಧಿಕಾರಿಯನ್ನಾಗಿ ಮಾಡಿದ್ದಾನೆ. ನಾನು ಅವನ ಮನೆಗೆಲ್ಲಾ ಮತ್ತು ಈಜಿಪ್ಟಿಗೆಲ್ಲಾ ರಾಜ್ಯಪಾಲನಾಗಿದ್ದೇನೆ” ಎಂದು ಹೇಳಿದನು.

ಇಸ್ರೇಲರನ್ನು ಈಜಿಪ್ಟಿಗೆ ಆಮಂತ್ರಿಸಿದ್ದು

ಬಳಿಕ ಯೋಸೇಫನು, “ನನ್ನ ತಂದೆಯ ಬಳಿಗೆ ಬೇಗನೆ ಹೋಗಿ ಅವನಿಗೆ, ನಿನ್ನ ಮಗನಾದ ಯೋಸೇಫನು ಈ ಸಂದೇಶವನ್ನು ಕಳುಹಿಸಿದ್ದಾನೆ: ‘ದೇವರು ನನ್ನನ್ನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನನ್ನಾಗಿ ಮಾಡಿದ್ದಾನೆ. ತಡಮಾಡದೆ ನನ್ನ ಬಳಿಗೆ ಬಾ. 10 ನೀನು ಗೋಷೆನ್ ಪ್ರಾಂತ್ಯದಲ್ಲಿ ನನ್ನೊಂದಿಗೆ ವಾಸಿಸುವೆ. ನೀನೂ ನಿನ್ನ ಮಕ್ಕಳೂ ನಿನ್ನ ಮೊಮ್ಮಕ್ಕಳೂ ನಿಮ್ಮ ಎಲ್ಲಾ ಪಶುಗಳೊಡನೆ ಇಲ್ಲಿ ನೆಲೆಸಬಹುದು. 11 ಮುಂದಿನ ಐದು ವರ್ಷಗಳ ಬರಗಾಲದಲ್ಲಿ ನಾನು ನಿಮ್ಮನ್ನು ಪೋಷಿಸುವೆನು. ಆಗ ನಿನಗಾಗಲಿ ನಿನ್ನ ಕುಟುಂಬದವರಿಗಾಗಲಿ ಬಡತನವಿರುವುದಿಲ್ಲ’ ಎಂಬುದಾಗಿ ತಿಳಿಸಿರಿ” ಎಂದು ಹೇಳಿದನು.

ಆದಿಕಾಂಡ 45:15

15 ಆಮೇಲೆ ಯೋಸೇಫನು ತನ್ನ ಎಲ್ಲಾ ಸಹೋದರರಿಗೂ ಮುದ್ದಿಟ್ಟು ಅತ್ತನು. ಇದಾದ ಮೇಲೆ ಆ ಸಹೋದರರು ಅವನೊಂದಿಗೆ ಮಾತಾಡತೊಡಗಿದರು.

ಕೀರ್ತನೆಗಳು 37:1-11

ರಚನೆಗಾರ: ದಾವೀದ

37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
    ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
ದುಷ್ಟರು ಹುಲ್ಲಿನಂತೆಯೂ
    ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
    ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
    ನಿನಗೆ ಬೇಕಾದುದನ್ನು ಆತನೇ ಕೊಡುವನು.
ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
    ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
ನಿನ್ನ ನೀತಿಯೂ ನ್ಯಾಯವೂ
    ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
    ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
    ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
ದುಷ್ಟರಾದರೋ ನಾಶವಾಗುವರು.
    ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
10 ಇನ್ನು ಸ್ವಲ್ಪ ಕಾಲದೊಳಗೆ ದುಷ್ಟರು ಇರುವುದೇ ಇಲ್ಲ.
    ನೀನು ಅವರಿಗಾಗಿ ಹುಡುಕಿದರೂ ಅವರು ಸಿಕ್ಕುವುದಿಲ್ಲ!
11 ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ದೀನರು ಪಡೆದುಕೊಳ್ಳುವರು;
    ಸಮಾಧಾನವನ್ನು ಅನುಭವಿಸುವರು.

ಕೀರ್ತನೆಗಳು 37:39-40

39 ಯೆಹೋವನು ನೀತಿವಂತರನ್ನು ಕಾಪಾಡುತ್ತಾನೆ.
    ಅವರು ಆಪತ್ತಿನಲ್ಲಿರುವಾಗ ಆತನೇ ಅವರಿಗೆ ಆಶ್ರಯಸ್ಥಾನವಾಗಿದ್ದಾನೆ.
40 ಯೆಹೋವನು ನೀತಿವಂತರಿಗೆ ಸಹಾಯಕನಾಗಿ ಅವರನ್ನು ರಕ್ಷಿಸುತ್ತಾನೆ.
    ನೀತಿವಂತರು ಆತನನ್ನು ಆಶ್ರಯಿಸಿಕೊಂಡಾಗ ಆತನು ಅವರನ್ನು ದುಷ್ಟರಿಂದ ತಪ್ಪಿಸಿ ಕಾಪಾಡುವನು.

1 ಕೊರಿಂಥದವರಿಗೆ 15:35-38

ಯಾವ ಬಗೆಯ ದೇಹವನ್ನು ನಾವು ಹೊಂದಿಕೊಳ್ಳುವೆವು?

35 “ಸತ್ತವರು ಹೇಗೆ ಎದ್ದುಬರುವರು? ಅವರಿಗೆ ಯಾವ ಬಗೆಯ ದೇಹವಿರುತ್ತದೆ?” ಎಂದು ಕೆಲವರು ಕೇಳಬಹುದು. 36 ಅವು ಮೂಢ ಪ್ರಶ್ನೆಗಳು. ನೀವು ಬೀಜವನ್ನು ಬಿತ್ತಿದಾಗ, ಆ ಬೀಜವು ಜೀವ ಹೊಂದಿಕೊಂಡು ಬೆಳೆಯುವುದಕ್ಕಿಂತ ಮುಂಚೆ ಸಾಯಲೇಬೇಕು. 37 ನೀವು ಬೀಜವನ್ನು ಬಿತ್ತುವಾಗ, ಆ ಬೀಜವು ಕೇವಲ ಕಾಳಾಗಿರುತ್ತದೆಯೇ ಹೊರತು ಮುಂದೆ ಹುಟ್ಟಿ ಬರಲಿರುವ ಗಿಡವಾಗಿರುವುದಿಲ್ಲ. ನೀವು ಬಿತ್ತುವ ಬೀಜವು ಕೇವಲ ಕಾಳಷ್ಟೆ. ಅದು ಗೋಧಿಯಾಗಿರಬಹುದು ಅಥವಾ ಬೇರೆ ಕಾಳಾಗಿರಬಹುದು. 38 ಅದರೆ ದೇವರು ತನ್ನ ಯೋಜನೆಗನುಸಾರವಾಗಿ ಅದಕ್ಕೆ ದೇಹವನ್ನು ಕೊಡುತ್ತಾನೆ ಮತ್ತು ದೇವರು ಪ್ರತಿಯೊಂದು ಬಗೆಯ ಬೀಜಕ್ಕೆ ಅದರದೇ ಆದ ದೇಹವನ್ನು ಕೊಡುತ್ತಾನೆ.

1 ಕೊರಿಂಥದವರಿಗೆ 15:42-50

42 ಸತ್ತವರಿಗಾಗುವ ಪುನರುತ್ಥಾನವು ಅದೇ ರೀತಿಯಾಗಿರುವುದು. ಬಿತ್ತಲ್ಪಟ್ಟ ದೇಹವು ಹಾಳಾಗುವುದು ಮತ್ತು ಕೊಳೆತು ಹೋಗುವುದು. ಆದರೆ ಜೀವಂತವಾಗಿ ಎದ್ದುಬರುವ ಆ ದೇಹವನ್ನು ನಾಶಮಾಡಲು ಸಾಧ್ಯವೇ ಇಲ್ಲ. 43 ದೇಹವು ಹೀನಾವಸ್ಥೆಯಲ್ಲಿ ಬಿತ್ತಲ್ಪಡುವುದು, ಆದರೆ ಮಹಿಮೆಯೊಡನೆ ಎದ್ದುಬರುವುದು. ದೇಹವು ಬಿತ್ತಲ್ಪಟ್ಟಾಗ, ಅದು ಬಲಹೀನವಾಗಿರುತ್ತದೆ. ಆದರೆ ಅದು ಎದ್ದುಬಂದಾಗ ಅದಕ್ಕೆ ಶಕ್ತಿಯಿರುತ್ತದೆ. 44 ಬಿತ್ತಲ್ಪಟ್ಟ ದೇಹವು ಭೌತಿಕವಾದದ್ದು. ಆದರೆ ಅದು ಎದ್ದುಬಂದಾಗ, ಆತ್ಮಿಕ ದೇಹವಾಗಿರುತ್ತದೆ.

ಭೌತಿಕ ದೇಹವಿದೆ. ಆದ್ದರಿಂದ ಆತ್ಮಿಕ ದೇಹವೂ ಇದೆ. 45 “ಮೊದಲನೆ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು”(A) ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. ಆದರೆ ಕೊನೆಯ ಆದಾಮನು (ಕ್ರಿಸ್ತನು) ಜೀವಕೊಡುವ ಜೀವಾತ್ಮನಾದನು. 46 ಮೊದಲು ಬಂದವನು ಆತ್ಮಿಕ ಮನುಷ್ಯನಲ್ಲ, ಅವನು ಪ್ರಾಕೃತ ಮನುಷ್ಯ. ಅನಂತರ ಆತ್ಮಿಕ ಮನುಷ್ಯನು ಬಂದನು. 47 ಮೊದಲನೆಯ ಮನುಷ್ಯನು ಭೂಮಿಯ ಧೂಳಿನಿಂದ ಬಂದನು. ಆದರೆ ಎರಡನೆಯ ಮನುಷ್ಯನು (ಕ್ರಿಸ್ತನು) ಪರಲೋಕದಿಂದ ಬಂದನು. 48 ಜನರು ಭೂಮಿಗೆ ಸಂಬಂಧಪಟ್ಟವರು. ಅವರು ಭೂಮಿಯ ಮೊದಲನೆ ಮನುಷ್ಯನಂತಿದ್ದಾರೆ. ಆದರೆ ಪರಲೋಕಕ್ಕೆ ಸಂಬಂಧಪಟ್ಟವರು ಪರಲೋಕದ ಮನುಷ್ಯನಂತಿದ್ದಾರೆ. 49 ಭೂಮಿಯ ಆ ಮನುಷ್ಯನಂತೆಯೇ ನಾವು ನಿರ್ಮಾಣಗೊಂಡೆವು. ಆದ್ದರಿಂದ ಪರಲೋಕದ ಆ ಮನುಷ್ಯನಂತೆಯೇ ನಾವು ನಿರ್ಮಾಣಗೊಳ್ಳುವೆವು.

50 ಸಹೋದರ ಸಹೋದರಿಯರೇ, ನಾನು ಹೇಳುವುದೇನೆಂದರೆ, ಮಾಂಸ ಮತ್ತು ರಕ್ತ (ಭೌತಿಕ ದೇಹ) ಪರಲೋಕ ರಾಜ್ಯದಲ್ಲಿ ಪಾಲುಹೊಂದಲು ಸಾಧ್ಯವಿಲ್ಲ. ನಾಶವಾಗುವಂಥದ್ದು ಎಂದಿಗೂ ನಾಶವಾಗದ ಒಂದರಲ್ಲಿ ಪಾಲುಹೊಂದಲು ಸಾಧ್ಯವಿಲ್ಲ.

ಲೂಕ 6:27-38

ನಿಮ್ಮ ವೈರಿಗಳನ್ನು ಪ್ರೀತಿಸಿರಿ

(ಮತ್ತಾಯ 5:38-48; 7:12)

27 “ನನ್ನ ಮಾತುಗಳನ್ನು ಆಲಿಸುತ್ತಿರುವ ನಿಮಗೆ ನಾನು ಹೇಳುವುದೇನೆಂದರೆ: ನಿಮ್ಮ ವೈರಿಗಳನ್ನು ಪ್ರೀತಿಸಿರಿ. ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿರಿ. 28 ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ. ನಿಮ್ಮನ್ನು ಹೀನೈಸುವ ಜನರಿಗೋಸ್ಕರ ಪ್ರಾರ್ಥಿಸಿರಿ. 29 ಒಬ್ಬನು ನಿಮ್ಮ ಕೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ. ಒಬ್ಬನು ನಿಮ್ಮ ಮೇಲಂಗಿಯನ್ನು ಕೇಳಿದರೆ, ಅವನಿಗೆ ನಿಮ್ಮ ಒಳಂಗಿಯನ್ನೂ ಕೊಡಿ. 30 ನಿಮ್ಮನ್ನು ಬೇಡುವ ಪ್ರತಿಯೊಬ್ಬನಿಗೆ ಕೊಡಿ. ಒಬ್ಬನು ನಿಮ್ಮಿಂದ ಏನಾದರೂ ತೆಗೆದುಕೊಂಡಾಗ ಅದನ್ನು ಹಿಂದಕ್ಕೆ ಕೊಡೆಂದು ಕೇಳಬೇಡಿ. 31 ನಿಮಗೆ ಬೇರೆ ಜನರು ಏನು ಮಾಡಬೇಕೆಂದು ಆಸೆಪಡುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.

32 “ನಿಮ್ಮನ್ನು ಪ್ರೀತಿಸುವ ಜನರನ್ನೇ ನೀವು ಪ್ರೀತಿಸಿದರೆ, ನಿಮಗೆ ಹೊಗಳಿಕೆ ಏಕೆ ಬರಬೇಕು? ಇಲ್ಲ! ತಮ್ಮನ್ನು ಪ್ರೀತಿಸುವವರನ್ನು ಪಾಪಿಷ್ಠರು ಸಹ ಪ್ರೀತಿಸುತ್ತಾರೆ! 33 ನಿಮಗೆ ಒಳ್ಳೆಯದನ್ನು ಮಾಡುವವರಿಗೇ ನೀವು ಒಳ್ಳೆಯದನ್ನು ಮಾಡಿದರೆ, ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಮಾಡುತ್ತಾರೆ! 34 ನೀವು ಯಾರಿಗಾದರೂ ಸಾಲಕೊಟ್ಟು, ಅದನ್ನು ಪೂರ್ತಿಯಾಗಿ ಮತ್ತೆ ಅವರಿಂದ ತೆಗೆದುಕೊಂಡರೆ ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಸಾಲಕೊಟ್ಟು ಮತ್ತೆ ಅದನ್ನು ಪೂರ್ತಿಯಾಗಿ ಮರಳಿ ಪಡೆಯುತ್ತಾರೆ!

35 “ಆದ್ದರಿಂದ ನಿಮ್ಮ ವೈರಿಗಳನ್ನು ಪ್ರೀತಿಸಿರಿ. ಅವರಿಗೆ ಒಳ್ಳೆಯದನ್ನು ಮಾಡಿರಿ. ನೀವು ಅವರಿಗೆ ಸಾಲ ಕೊಡುವಾಗ ಮತ್ತೆ ಅವರಿಂದ ಪಡೆಯಬಹುದೆಂಬ ನಿರೀಕ್ಷೆಯಿಲ್ಲದೆ ಕೊಡಿರಿ. ಆಗ ನಿಮಗೆ ದೊಡ್ಡ ಪ್ರತಿಫಲವಿರುವುದು. ನೀವು ಮಹೋನ್ನತನಾದ ದೇವರ ಮಕ್ಕಳಾಗುವಿರಿ. ಏಕೆಂದರೆ ದೇವರು ಪಾಪಿಷ್ಠರಿಗೂ ಕೃತಜ್ಞತೆಯಿಲ್ಲದವರಿಗೂ ಒಳ್ಳೆಯವನಾಗಿದ್ದಾನೆ. 36 ನಿಮ್ಮ ಪರಲೋಕದ ತಂದೆಯು ಕರುಣಾಮಯನಾಗಿರುವಂತೆ ನೀವೂ ಕರುಣೆಯುಳ್ಳವರಾಗಿರಿ.

ನಿನ್ನನ್ನು ಪರೀಕ್ಷಿಸಿಕೊ

(ಮತ್ತಾಯ 7:1-5)

37 “ಬೇರೆಯವರಿಗೆ ತೀರ್ಪು ಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ಬೇರೆಯವರನ್ನು ಅಪರಾಧಿಗಳೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ. ಇತರರನ್ನು ಕ್ಷಮಿಸಿರಿ, ಆಗ ನಿಮಗೂ ಕ್ಷಮಾಪಣೆ ಆಗುವುದು. 38 ಇತರರಿಗೆ ಕೊಡಿರಿ, ಆಗ ನಿಮಗೂ ದೊರೆಯುವುದು. ಪಾತ್ರೆಯಲ್ಲಿ ಅದುಮಿ, ಅಲ್ಲಾಡಿಸಿ ಹೊರಚೆಲ್ಲುವಂತೆ ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡುವರು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International