Revised Common Lectionary (Semicontinuous)
ರಚನೆಗಾರ: ದಾವೀದ
37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
2 ದುಷ್ಟರು ಹುಲ್ಲಿನಂತೆಯೂ
ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
3 ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
4 ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
ನಿನಗೆ ಬೇಕಾದುದನ್ನು ಆತನೇ ಕೊಡುವನು.
5 ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
6 ನಿನ್ನ ನೀತಿಯೂ ನ್ಯಾಯವೂ
ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
7 ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
8 ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
9 ದುಷ್ಟರಾದರೋ ನಾಶವಾಗುವರು.
ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
10 ಇನ್ನು ಸ್ವಲ್ಪ ಕಾಲದೊಳಗೆ ದುಷ್ಟರು ಇರುವುದೇ ಇಲ್ಲ.
ನೀನು ಅವರಿಗಾಗಿ ಹುಡುಕಿದರೂ ಅವರು ಸಿಕ್ಕುವುದಿಲ್ಲ!
11 ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ದೀನರು ಪಡೆದುಕೊಳ್ಳುವರು;
ಸಮಾಧಾನವನ್ನು ಅನುಭವಿಸುವರು.
39 ಯೆಹೋವನು ನೀತಿವಂತರನ್ನು ಕಾಪಾಡುತ್ತಾನೆ.
ಅವರು ಆಪತ್ತಿನಲ್ಲಿರುವಾಗ ಆತನೇ ಅವರಿಗೆ ಆಶ್ರಯಸ್ಥಾನವಾಗಿದ್ದಾನೆ.
40 ಯೆಹೋವನು ನೀತಿವಂತರಿಗೆ ಸಹಾಯಕನಾಗಿ ಅವರನ್ನು ರಕ್ಷಿಸುತ್ತಾನೆ.
ನೀತಿವಂತರು ಆತನನ್ನು ಆಶ್ರಯಿಸಿಕೊಂಡಾಗ ಆತನು ಅವರನ್ನು ದುಷ್ಟರಿಂದ ತಪ್ಪಿಸಿ ಕಾಪಾಡುವನು.
ಬೆನ್ಯಾಮೀನನಿಗಾಗಿ ಯೆಹೂದನು ಬೇಡಿಕೊಂಡಿದ್ದು
18 ಆಗ ಯೆಹೂದನು ಯೋಸೇಫನ ಬಳಿಗೆ ಹೋಗಿ, “ಸ್ವಾಮಿ, ತಮ್ಮೊಂದಿಗೆ ಬಿಚ್ಚುಮನಸ್ಸಿನಿಂದ ಮಾತನಾಡಲು ದಯವಿಟ್ಟು ಅನುಮತಿಯಾಗಲಿ; ದಯವಿಟ್ಟು ನನ್ನ ಮೇಲೆ ಕೋಪಗೊಳ್ಳಬೇಡಿ. ನೀವು ಸ್ವತಃ ಫರೋಹನಂತೆ ಇರುವಿರೆಂದು ನನಗೆ ತಿಳಿದಿದೆ. 19 ನಾವು ಮೊದಲನೆಯ ಸಲ ಬಂದಿದ್ದಾಗ, ನೀವು ನಮಗೆ, ‘ನಿಮಗೆ ತಂದೆಯಾಗಲಿ ತಮ್ಮನಾಗಲಿ ಇರುವನೇ?’ ಎಂದು ಕೇಳಿದಿರಿ. 20 ನಾವು ನಿಮಗೆ, ‘ನಮಗೆ ಒಬ್ಬ ತಂದೆಯಿದ್ದಾನೆ, ಅವನು ವೃದ್ಧನಾಗಿದ್ದಾನೆ; ನಮಗೆ ಪ್ರಾಯದ ತಮ್ಮನಿದ್ದಾನೆ, ನಮ್ಮ ತಂದೆಗೆ ತುಂಬ ವಯಸ್ಸಾಗಿದ್ದಾಗ ಅವನು ಹುಟ್ಟಿದ್ದರಿಂದ ನಮ್ಮ ತಂದೆಯು ಅವನನ್ನು ಪ್ರೀತಿಸುತ್ತಾನೆ. ಆ ಕಿರಿಯ ಮಗನ ಸಹೋದರನು ಸತ್ತುಹೋದನು. ಆದ್ದರಿಂದ ಆ ತಾಯಿಯಲ್ಲಿ ಹುಟ್ಟಿದವರಲ್ಲಿ ಇವನೊಬ್ಬನೇ ಉಳಿದಿದ್ದಾನೆ. ನಮ್ಮ ತಂದೆಯು ಅವನನ್ನು ತುಂಬಾ ಪ್ರೀತಿಸುವನು’ ಎಂದು ಹೇಳಿದೆವು. 21 ಬಳಿಕ ನೀವು ನಮಗೆ, ‘ಹಾಗಾದರೆ ಆ ಸಹೋದರನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ, ನಾನು ಅವನನ್ನು ನೋಡಬೇಕು’ ಎಂದು ಹೇಳಿದಿರಿ. 22 ನಾವು ನಿಮಗೆ ‘ಆ ಯುವಕನು ಬರಲಾರನು. ಅವನು ತನ್ನ ತಂದೆಯನ್ನು ಬಿಟ್ಟುಬರಲಾಗದು. ಅವನ ತಂದೆ ಅವನನ್ನು ಕಳೆದುಕೊಂಡರೆ ತುಂಬ ದುಃಖದಿಂದ ಸತ್ತುಹೋಗುವನು’ ಎಂದು ಹೇಳಿದೆವು. 23 ಆದರೆ ನೀವು ನಮಗೆ, ‘ನೀವು ಆ ಕಿರಿಯ ಸಹೋದರನನ್ನು ಕರೆದುಕೊಂಡು ಬರಲೇಬೇಕು; ಇಲ್ಲವಾದರೆ, ನಾನು ನಿಮಗೆ ದವಸಧಾನ್ಯಗಳನ್ನು ಮತ್ತೆ ಮಾರುವುದಿಲ್ಲ’ ಎಂದು ಹೇಳಿದಿರಿ. 24 ಆದ್ದರಿಂದ ನಾವು ನಮ್ಮ ತಂದೆಯ ಬಳಿಗೆ ಹಿಂತಿರುಗಿ ಹೋಗಿ ನೀವು ಹೇಳಿದ್ದನ್ನು ಅವನಿಗೆ ತಿಳಿಸಿದೆವು.
25 “ಸ್ವಲ ಸಮಯದ ನಂತರ ನಮ್ಮ ತಂದೆಯು, ‘ಮತ್ತೆ ಹೋಗಿ ಇನ್ನು ಸ್ವಲ್ಪ ಆಹಾರವನ್ನು ನಮಗಾಗಿ ಕೊಂಡುಕೊಂಡು ಬನ್ನಿ’ ಎಂದು ಹೇಳಿದನು. 26 ಆದರೆ ನಾವು ನಮ್ಮ ತಂದೆಗೆ, ‘ನಮ್ಮ ಕಿರಿಯ ತಮ್ಮನಿಲ್ಲದೆ ನಾವು ಹೋಗಲು ಸಾಧ್ಯವಿಲ್ಲ. ನಮ್ಮ ಕಿರಿಯ ತಮ್ಮನನ್ನು ನೋಡುವ ತನಕ, ನಮಗೆ ದವಸಧಾನ್ಯಗಳನ್ನು ಮಾರುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ’ ಎಂದು ಹೇಳಿದೆವು. 27 ಆಗ ನಮ್ಮ ತಂದೆಯು ನಮಗೆ, ‘ನನ್ನ ಹೆಂಡತಿಯಾದ ರಾಹೇಲಳು ನನಗೆ ಇಬ್ಬರು ಗಂಡುಮಕ್ಕಳನ್ನು ಕೊಟ್ಟಳು. 28 ನಾನು ಒಬ್ಬ ಮಗನನ್ನು ಕಳುಹಿಸಿಕೊಟ್ಟಾಗ, ಅವನು ಕ್ರೂರ ಪ್ರಾಣಿಯಿಂದ ಕೊಲ್ಲಲ್ಪಟ್ಟನು; ಇಂದಿನ ತನಕ ನಾನು ಅವನನ್ನು ನೋಡಲಿಲ್ಲ. 29 ನೀವು ನನ್ನ ಮತ್ತೊಬ್ಬ ಮಗನನ್ನು ನನ್ನ ಬಳಿಯಿಂದ ಕರೆದುಕೊಂಡು ಹೋಗುವಾಗ ಅವನಿಗೆ ಏನಾದರೂ ಸಂಭವಿಸಿದರೆ, ನಾನು ದುಃಖ ತಾಳಲಾರದೆ ಸತ್ತುಹೋಗುವೆನು’ ಎಂದು ಹೇಳಿದನು. 30 ನಮ್ಮ ತಂದೆಗಂತೂ ಇವನನ್ನು ಕಂಡರೆ ಪ್ರಾಣಪ್ರೀತಿ. ಆದ್ದರಿಂದ ನಮ್ಮ ಈ ಕಿರಿಯ ತಮ್ಮನಿಲ್ಲದೆ ಹೋದರೆ, 31 ನಮ್ಮ ತಂದೆಯೂ ಆ ಕೂಡಲೇ ಸತ್ತುಹೋಗುವನು; ನಮ್ಮ ತಂದೆ ದುಃಖದಿಂದ ಸಾಯಲು ನಾವೇ ಕಾರಣರಾಗುವೆವು.
32 “ನಾನು ಈ ಯುವಕನ ಜವಾಬ್ದಾರಿಯನ್ನು ವಹಿಸಿಕೊಂಡೆನು. ನಾನು ನನ್ನ ತಂದೆಗೆ, ‘ನಾನು ಇವನನ್ನು ಹಿಂದಕ್ಕೆ ಕರೆದುಕೊಂಡು ಬರದಿದ್ದರೆ ನನ್ನ ಜೀವಮಾನವೆಲ್ಲಾ ನೀನು ನನ್ನನ್ನು ದೂಷಿಸಬಹುದು’ ಎಂದು ಹೇಳಿದೆನು. 33 ಆದ್ದರಿಂದ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ಈ ಯುವಕನು ತನ್ನ ಸಹೋದರರೊಂದಿಗೆ ಹಿಂತಿರುಗಿ ಹೋಗಲಿ; ನಾನು ಇಲ್ಲಿ ನಿಮಗೆ ಗುಲಾಮನಾಗಿರುವೆನು. 34 ನನ್ನ ಜೊತೆಯಲ್ಲಿ ಈ ಹುಡುಗನಿಲ್ಲದೆ ನಾನು ನನ್ನ ತಂದೆಯ ಬಳಿಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ನಮ್ಮ ತಂದೆಗೆ ಸಂಭವಿಸುವುದನ್ನು ನೋಡಲು ನನಗೆ ತುಂಬ ಭಯವಾಗಿದೆ” ಎಂದು ಹೇಳಿದನು.
ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿರಿ
(ಮತ್ತಾಯ 5:25-26)
57 “ನೀವೇ ನ್ಯಾಯನಿರ್ಣಯವನ್ನು ಮಾಡಬಾರದೇಕೆ? 58 ಒಬ್ಬನು ನಿಮ್ಮ ಮೇಲೆ ದಾವೆ ಹೂಡಲು ನ್ಯಾಯಾಲಯಕ್ಕೆ ಹೋಗುತ್ತಿರುವಾಗ ನಿಮ್ಮ ಸಮಸ್ಯೆಯನ್ನು ದಾರಿಯಲ್ಲಿಯೇ ಪರಿಹರಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ಇಲ್ಲವಾದರೆ, ಅವನು ನಿಮ್ಮನ್ನು ನ್ಯಾಯಾಧೀಶನ ಬಳಿಗೆ ಕೊಂಡೊಯ್ಯುವನು. ನ್ಯಾಯಾಧೀಶನು ನಿಮ್ಮನ್ನು ಸೆರೆಮನೆಗೆ ಹಾಕಿಸುವನು. 59 ನೀವು ನಿಮ್ಮ ಸಾಲವನ್ನೆಲ್ಲಾ ಕೊನೆಯ ಪೈಸದವರೆಗೆ ತೀರಿಸುವ ತನಕ ಸೆರೆಮನೆಯಿಂದ ಹೊರಗೆ ಬರಲು ಸಾಧ್ಯವೇ ಇಲ್ಲ!”
Kannada Holy Bible: Easy-to-Read Version. All rights reserved. © 1997 Bible League International