Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ದಾವೀದ.
138 ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
ನಿನ್ನ ಹಾಡುಗಳನ್ನು ಎಲ್ಲಾ ದೇವರುಗಳ ಎದುರಿನಲ್ಲಿ ಹಾಡುವೆನು.
2 ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುವೆನು.
ನಾನು ನಿನ್ನ ಹೆಸರನ್ನೂ ನಿನ್ನ ಪ್ರೀತಿಯನ್ನೂ ನಿನ್ನ ನಂಬಿಗಸ್ತಿಕೆಯನ್ನೂ ಕೊಂಡಾಡುವೆನು.
ನೀನು ನಿನ್ನ ವಾಕ್ಯವನ್ನು ನೆರವೇರಿಸಿ ನಿನ್ನ ನಾಮಮಹತ್ವವನ್ನು ಹೆಚ್ಚಿಸಿರುವೆ.
3 ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಟ್ಟಾಗ
ನೀನು ನನಗೆ ಸದುತ್ತರವನ್ನು ದಯಪಾಲಿಸಿದೆ; ನನಗೆ ಬಲವನ್ನು ಅನುಗ್ರಹಿಸಿದೆ.
4 ಯೆಹೋವನೇ, ಭೂರಾಜರುಗಳೆಲ್ಲಾ ನಿನ್ನ ನುಡಿಗಳನ್ನು ಕೇಳಿ
ನಿನ್ನನ್ನು ಕೊಂಡಾಡಬೇಕೆಂಬುದು ನನ್ನ ಅಪೇಕ್ಷೆ.
5 ಅವರೆಲ್ಲರೂ ಯೆಹೋವನ ಮಾರ್ಗವನ್ನು ಹಾಡಿ ಕೊಂಡಾಡುವರು;
ಯಾಕೆಂದರೆ ಯೆಹೋವನ ಮಹಿಮೆಯು ಮಹತ್ವವಾದದ್ದು.
6 ಯೆಹೋವನೇ ಮಹೋನ್ನತನು.
ಆದರೂ ಆತನು ದೀನರಿಗೋಸ್ಕರ ಚಿಂತಿಸುವನು.
ಗರ್ವಿಷ್ಠರ ಕಾರ್ಯಗಳು ಆತನಿಗೆ ಗೊತ್ತಿವೆ.
ಆದರೆ ಆತನು ಅವರಿಗೆ ದೂರವಾಗಿಯೇ ಇರುತ್ತಾನೆ.
7 ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು.
ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು.
8 ಯೆಹೋವನೇ, ನಿನ್ನ ವಾಗ್ದಾನಗಳನ್ನು ನೆರವೇರಿಸು.
ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು.
ನಮ್ಮನ್ನು ಸೃಷ್ಟಿಸಿದಾತನು ನೀನೇ. ನಮ್ಮನ್ನು ಕೈಬಿಡಬೇಡ!
ಯೆಹೋಶುವನು ನೂತನ ನಾಯಕ
12 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಅಬಾರೀಮ್ ಪರ್ವತ ಶ್ರೇಣಿಯಲ್ಲಿರುವ ಈ ಬೆಟ್ಟವನ್ನು ಹತ್ತು. ನಾನು ಇಸ್ರೇಲರಿಗೆ ಕೊಡಲಿಕ್ಕಿರುವ ದೇಶವನ್ನು ನೀನು ಅಲ್ಲಿಂದ ನೋಡು. 13 ಆ ದೇಶವನ್ನು ನೋಡಿದ ನಂತರ ನಿನ್ನ ಅಣ್ಣನಾದ ಆರೋನನಂತೆ ನೀನೂ ಸಾಯುವೆ. 14 ಇಸ್ರೇಲರ ಸಮೂಹದವರು ಚಿನ್ ಮರುಭೂಮಿಯಲ್ಲಿ ನನ್ನೊಡನೆ ವಿವಾದಿಸಿದಾಗ ನೀವಿಬ್ಬರೂ ನನ್ನ ಪವಿತ್ರತೆಯನ್ನು ಜನರ ಮುಂದೆ ತೋರಿಸದೆ ನನ್ನ ಆಜ್ಞೆಗೆ ಅವಿಧೇಯರಾದ ಕಾರಣ ಆ ದೇಶವನ್ನು ನೀನು ಸೇರಬಾರದು.” ಚಿನ್ ಮರುಭೂಮಿಯಲ್ಲಿ ಕಾದೇಶಿನ ಬಳಿ ಮೆರೀಬಾ ಬುಗ್ಗೆಯ ಕುರಿತಾಗಿ ಯೆಹೋವನು ಇದನ್ನು ಹೇಳಿದನು.
15 ಆಗ ಮೋಶೆಯು ಯೆಹೋವನಿಗೆ, 16 “ಎಲ್ಲಾ ಮನುಷ್ಯರ ಯೋಚನೆಗಳನ್ನು ತಿಳಿದಿರುವ ದೇವರಾದ ಯೆಹೋವನು ಈ ಸಮೂಹಕ್ಕೆ ಒಬ್ಬ ನಾಯಕನನ್ನು ನೇಮಿಸಲಿ. 17 ಅವನು ಅವರನ್ನು ಯುದ್ಧದಲ್ಲಿ ಮುನ್ನಡೆಸುವವನೂ ಸೈನ್ಯದ ಯೋಜನೆಗಳನ್ನು ರೂಪಿಸುವವನೂ ಆಗಿರಲಿ. ಆಗ ಯೆಹೋವನ ಸಮೂಹವು ಕುರುಬನಿಲ್ಲದ ಕುರಿಯಂತಾಗುವುದಿಲ್ಲ.”
18 ಅದಕ್ಕೆ ಯೆಹೋವನು, “ನೂನನ ಮಗನಾದ ಯೆಹೋಶುವನು ಹೊಸ ನಾಯಕನಾಗಿರುವನು. ಅವನು ಧೈರ್ಯವಂತನು. ಅವನನ್ನು ಹೊಸ ನಾಯಕನನ್ನಾಗಿ ಮಾಡಲು ಅವನ ಮೇಲೆ ನಿನ್ನ ಕೈಯನ್ನು ಇಡು. 19 ಯಾಜಕನಾದ ಎಲ್ಲಾಜಾರನ ಮುಂದೆಯೂ ಸಮಸ್ತ ಇಸ್ರೇಲರ ಮುಂದೆಯೂ ಅವನನ್ನು ನಿಲ್ಲಿಸು. ಅವರ ಎದುರಿನಲ್ಲಿಯೇ ಅವನಿಗೆ ಆದೇಶಗಳನ್ನು ಕೊಡು.
20 “ಇಸ್ರೇಲರ ಇಡೀ ಸಮುದಾಯವು ವಿಧೇಯರಾಗುವಂತೆ ನಿನ್ನ ಅಧಿಕಾರಗಳಲ್ಲಿ ಸ್ವಲ್ಪವನ್ನು ಅವನಿಗೆ ಕೊಡು. 21 ಯೆಹೋಶುವನು ತೀರ್ಮಾನವೇನಾದರೂ ಮಾಡಬೇಕಾದರೆ ಅವನು ಯಾಜಕನಾದ ಎಲ್ಲಾಜಾರನ ಬಳಿಗೆ ಹೋಗಲಿ, ಎಲ್ಲಾಜಾರನು ಊರೀಮಿನಿಂದ ಯೆಹೋವನ ಉತ್ತರವನ್ನು ಪಡೆಯುವನು. ಆಗ ಯೆಹೋಶುವನೂ ಇಸ್ರೇಲರೆಲ್ಲರೂ ದೇವರು ಹೇಳುವ ಕಾರ್ಯಗಳನ್ನು ಮಾಡುವರು. ಆತನು, ‘ಯುದ್ಧಕ್ಕೆ ಹೋಗಿರಿ’ ಎಂದು ಹೇಳಿದರೆ ಅವರು ಯುದ್ಧಕ್ಕೆ ಹೋಗುವರು. ಆತನು, ‘ಮನೆಗೆ ಹೋಗಿರಿ’ ಎಂದು ಹೇಳಿದರೆ ಅವರು ಮನೆಗೆ ಹೋಗುವರು” ಎಂದು ಹೇಳಿದನು.
22 ಮೋಶೆಯು ಯೆಹೋವನಿಗೆ ವಿಧೇಯನಾಗಿ ಯೆಹೋಶುವನನ್ನು ಯಾಜಕನಾದ ಎಲ್ಲಾಜಾರನ ಮುಂದೆಯೂ ಸಮಸ್ತ ಇಸ್ರೇಲರ ಮುಂದೆಯೂ ನಿಲ್ಲಿಸಿದನು. 23 ಬಳಿಕ ಮೋಶೆಯು ತನ್ನ ಕೈಯನ್ನು ಅವನ ಮೇಲಿಟ್ಟು ಹೊಸ ನಾಯಕನಿಗೆ ಕೊಡತಕ್ಕ ಆದೇಶಗಳನ್ನು ಕೊಟ್ಟನು. ಯೆಹೋವನು ಆಜ್ಞಾಪಿಸಿದಂತೆ ಅವನು ಇದನ್ನು ಮಾಡಿದನು.
ಜೆರುಸಲೇಮಿನಲ್ಲಿ ಸೌಲನು
26 ಬಳಿಕ ಸೌಲನು ಜೆರುಸಲೇಮಿಗೆ ಹೋದನು. ಅವನು ವಿಶ್ವಾಸಿಗಳ ಸಮುದಾಯವನ್ನು ಸೇರಿಕೊಳ್ಳಲು ಪ್ರಯತ್ನಿಸಿದನು. ಆದರೆ ಅವರೆಲ್ಲರೂ ಅವನಿಗೆ ಭಯಪಟ್ಟರು. ಸೌಲನು ನಿಜವಾಗಿ ಯೇಸುವಿನ ಶಿಷ್ಯನೆಂದು ಅವರು ನಂಬಲಿಲ್ಲ. 27 ಆದರೆ ಬಾರ್ನಬನು ಸೌಲನನ್ನು ಸ್ವೀಕರಿಸಿಕೊಂಡು ಅಪೊಸ್ತಲರ ಬಳಿಗೆ ಕರೆದುಕೊಂಡು ಬಂದನು. ಸೌಲನು ದಮಸ್ಕದ ದಾರಿಯಲ್ಲಿ ಪ್ರಭುವನ್ನು ನೋಡಿರುವುದನ್ನೂ ಪ್ರಭುವು ಸೌಲನೊಂದಿಗೆ ಮಾತಾಡಿದ್ದನ್ನೂ ಬಾರ್ನಬನು ಅವರಿಗೆ ವಿವರಿಸಿದನು. ಅಲ್ಲದೆ ಸೌಲನು ದಮಸ್ಕದಲ್ಲಿ ಜನರಿಗೆ ಪ್ರಭುವಿನ ವಿಷಯದಲ್ಲಿ ನಿರ್ಭಯವಾಗಿ ಬೋಧಿಸಿದ್ದನ್ನೂ ಅವರಿಗೆ ತಿಳಿಸಿದನು.
28 ಅಂದಿನಿಂದ ಸೌಲನು ವಿಶ್ವಾಸಿಗಳೊಂದಿಗೆ ಇದ್ದನು. ಅವನು ಪ್ರಭುವಿನ ವಿಷಯವನ್ನು ಜೆರುಸಲೇಮಿನಲ್ಲಿ ನಿರ್ಭಯವಾಗಿ ಬೋಧಿಸಿದನು. 29 ಗ್ರೀಕ್ ಮಾತಾಡುತ್ತಿದ್ದ ಯೆಹೂದ್ಯರೊಂದಿಗೆ ಸೌಲನು ಪದೇಪದೇ ವಾದಮಾಡಿದನು. ಆದರೆ ಅವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು. 30 ಇದರ ಬಗ್ಗೆ ಸಹೋದರರಿಗೆ ತಿಳಿದಾಗ ಅವರು ಸೌಲನನ್ನು ಸೆಜರೇಯ ಪಟ್ಟಣಕ್ಕೆ ಕೊಂಡೊಯ್ದು ಅಲ್ಲಿಂದ ತಾರ್ಸಸ್ ಪಟ್ಟಣಕ್ಕೆ ಕಳುಹಿಸಿದರು.
31 ಇಂತಿರಲು, ಜುದೇಯ, ಗಲಿಲಾಯ ಮತ್ತು ಸಮಾರ್ಯ ಪ್ರದೇಶಗಳಲ್ಲಿ ಇದ್ದ ಸಭೆಗಳಲ್ಲಿ ಶಾಂತಿ ನೆಲೆಸಿತು. ಪವಿತ್ರಾತ್ಮನ ಸಹಾಯದಿಂದ ಸಭೆಗಳು ಬಲವಾಗತೊಡಗಿದವು. ವಿಶ್ವಾಸಿಗಳು ತಾವು ಪ್ರಭುವನ್ನು ಗೌರವಿಸುವುದಾಗಿ ತಮ್ಮ ಜೀವಿತಗಳ ಮೂಲಕ ತೋರಿಸಿಕೊಟ್ಟರು. ಇದರಿಂದ ವಿಶ್ವಾಸಿಗಳ ಸಭೆಯು ಹೆಚ್ಚುಹೆಚ್ಚು ಬೆಳೆಯತೊಡಗಿತು.
Kannada Holy Bible: Easy-to-Read Version. All rights reserved. © 1997 Bible League International