Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 120

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

120 ನಾನು ಆಪತ್ತಿನಲ್ಲಿದ್ದಾಗ
    ಯೆಹೋವನಿಗೆ ಮೊರೆಯಿಟ್ಟೆನು.
    ಆತನು ನನಗೆ ಸದುತ್ತರವನ್ನು ದಯಪಾಲಿಸಿದನು.
ಯೆಹೋವನೇ, ಸುಳ್ಳಾಡುವವರಿಂದಲೂ
    ವಂಚಕರಿಂದಲೂ ನನ್ನನ್ನು ರಕ್ಷಿಸು.

ಸುಳ್ಳುಗಾರರೇ, ನಿಮಗೆ ದೇವರಿಂದ ಬರುವ ದಂಡನೆಯನ್ನು ಬಲ್ಲಿರಾ?
    ನಿಮಗೆ ಯಾವ ಶಿಕ್ಷೆಯನ್ನು ಒದಗಿಸಬೇಕು?
ಯುದ್ಧವೀರನ ತೀಕ್ಷ್ಣವಾದ ಬಾಣದಿಂದಲೂ ಉರಿಯುವ ಕೆಂಡಗಳಿಂದಲೂ ದೇವರು ನಿಮ್ಮನ್ನು ದಂಡಿಸುವನು.

ಸುಳ್ಳುಗಾರರಾದ ನಿಮ್ಮ ಸಮೀಪದಲ್ಲಿ ವಾಸಿಸುವುದು
    ಮೇಷೆಕಿನಲ್ಲಿಯೂ ಕೇದಾರಿನ ಗುಡಾರಗಳಲ್ಲಿಯೂ[a] ವಾಸಿಸುವಂತಿರುವುದು.
ಶಾಂತಿದ್ವೇಷಕರೊಂದಿಗೆ ನಾನು ಬಹುಕಾಲ ವಾಸಿಸಿದ್ದೇನೆ.
ಶಾಂತಿ ನೆಲೆಸಿರಲಿ ಎಂದು ನಾನು ಹೇಳಿದರೂ ಅವರು ಯುದ್ಧವನ್ನೇ ಇಷ್ಟಪಡುತ್ತಾರೆ.

ಎಜ್ರ 1

ಯೆಹೂದ್ಯ ಸೆರೆಯಾಳುಗಳು ಹಿಂತಿರುಗಿ ಹೋಗಲು ಸೈರಸನ ಸಹಾಯ

ಪರ್ಶಿಯಾದ ರಾಜನಾದ ಸೈರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ[a] ಒಂದು ಪ್ರಕಟನೆಯನ್ನು ಹೊರಡಿಸಲು ಯೆಹೋವನು ಅವನನ್ನು ಪ್ರೇರೇಪಿಸಿದನು. ಆ ಪ್ರಕಟನೆಯನ್ನು ಬರೆಯಿಸಿ ತನ್ನ ಸಾಮ್ರಾಜ್ಯದ ಎಲ್ಲಾ ಕಡೆಗಳಲ್ಲಿ ಅವನು ಅದನ್ನು ಓದಿಸಿದನು. ಯೆರೆಮೀಯನ ಮೂಲಕ ಯೆಹೋವನು ಹೇಳಿದ ವಿಷಯಗಳು ನೆರವೇರುವಂತೆ ಇದಾಯಿತು. ಆ ಪ್ರಕಟನೆ ಇಂತಿದೆ:

“ಪರ್ಶಿಯಾದ ರಾಜನಾದ ಸೈರಸನ ಪ್ರಕಟನೆ:

“ಪರಲೋಕದ ದೇವರಾದ ಯೆಹೋವನು ಭೂಲೋಕದಲ್ಲಿರುವ ಎಲ್ಲಾ ದೇಶಗಳನ್ನು ನನ್ನ ವಶಕ್ಕೆ ಕೊಟ್ಟಿದ್ದಾನೆ. ಯೆಹೂದ ದೇಶದ ಜೆರುಸಲೇಮ್‌ನಲ್ಲಿ ತನಗೊಂದು ಆಲಯವನ್ನು ಕಟ್ಟಲು ಆತನು ನನ್ನನ್ನು ಆರಿಸಿಕೊಂಡಿದ್ದಾನೆ. ಆತನು ಜೆರುಸಲೇಮ್‌ನಲ್ಲಿರುವಾತನೂ ಇಸ್ರೇಲರ ದೇವರೂ ಆಗಿದ್ದಾನೆ. ದೇವಜನರಲ್ಲಿ ಯಾರಾದರೂ ನಿಮ್ಮೊಂದಿಗೆ ವಾಸಿಸುತ್ತಿದ್ದರೆ ದೇವರ ಆಶೀರ್ವಾದವು ಅವರ ಮೇಲಿರಲಿ. ಯೆಹೂದ ಪ್ರಾಂತ್ಯದಲ್ಲಿರುವ ಜೆರುಸಲೇಮಿಗೆ ಹೋಗಲು ಅವರಿಗೆ ಅವಕಾಶಕೊಡಿರಿ. ಅವರು ಹೋಗಿ ಯೆಹೋವನಿಗಾಗಿ ದೇವಾಲಯವನ್ನು ಕಟ್ಟಲಿ. ಆದ್ದರಿಂದ ಯಾವ ಸ್ಥಳದಲ್ಲಿಯಾದರೂ ಇಸ್ರೇಲರಲ್ಲಿ ಉಳಿದವರು ಇದ್ದಲ್ಲಿ ಅಂಥವರಿಗೆ ಆ ಸ್ಥಳದವರು ಸಹಾಯ ಮಾಡಬೇಕು. ಅವರಿಗೆ ಬೆಳ್ಳಿ, ಬಂಗಾರ, ಪಶುಗಳನ್ನು ಮತ್ತು ಇತರ ವಸ್ತುಗಳನ್ನು ಕೊಡಲಿ. ಜೆರುಸಲೇಮಿನಲ್ಲಿನ ದೇವಾಲಯಕ್ಕೆ ಕಾಣಿಕೆಗಳನ್ನು ಕೊಡಲಿ.”

ಆಗ ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ಪ್ರಧಾನರೂ ನಾಯಕರೂ ಜೆರುಸಲೇಮಿಗೆ ಹೊರಟರು. ದೇವಾಲಯವನ್ನು ಕಟ್ಟಲು ಅವರು ಹೊರಟಾಗ ದೇವರಿಂದ ಪ್ರೋತ್ಸಾಹಿಸಲ್ಪಟ್ಟ ಇತರ ಜನರೂ ಅವರೊಂದಿಗೆ ಜೆರುಸಲೇಮಿಗೆ ಹೊರಟರು. ಅವರ ನೆರೆಹೊರೆಯವರು ಅವರಿಗೆ ತುಂಬಾ ಕಾಣಿಕೆಗಳನ್ನು ಕೊಟ್ಟರು. ಅವರಿಗೆ ಬೆಳ್ಳಿಬಂಗಾರಗಳನ್ನು, ಪಶುಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಧಾರಾಳವಾಗಿ ಕೊಟ್ಟರು. ಅಲ್ಲದೆ ಸೈರಸ್ ರಾಜನು ದೇವಾಲಯಕ್ಕೆ ಸಂಬಂಧಿಸಿದ ವಸ್ತುಗಳನ್ನೆಲ್ಲಾ ಹೊರತೆಗೆದನು. ನೆಬೂಕದ್ನೆಚ್ಚರ ಅರಸನು ಜೆರುಸಲೇಮ್ ದೇವಾಲಯದಿಂದ ಸೂರೆಮಾಡಿ ತಂದ ಸಾಮಾಗ್ರಿಗಳನ್ನು ತನ್ನ ವಿಗ್ರಹಗಳನ್ನಿಡುವ ಕೋಣೆಯಲ್ಲಿ ಇಟ್ಟಿದ್ದನು. ಪರ್ಶಿಯಾದ ರಾಜನಾದ ಸೈರಸ್ ತನ್ನ ಖಜಾನೆಯ ಮೇಲ್ವಿಚಾರಕನಾದ ಮಿತ್ರದಾತನಿಗೆ ಆ ವಸ್ತುಗಳನ್ನು ಹೊರತರಲು ಹೇಳಿದನು. ಮಿತ್ರದಾತನು ಯೆಹೂದ ನಾಯಕನಾದ ಶೆಷ್ಬಚ್ಚರನಿಗೆ ಆ ವಸ್ತುಗಳನ್ನು ಕೊಟ್ಟನು.

ಅವು ಯಾವುವೆಂದರೆ: ಬಂಗಾರದ ಬೋಗುಣಿಗಳು 30 ಬೆಳ್ಳಿ ಬೋಗುಣಿಗಳು 1,000 ಕತ್ತಿಗಳು ಮತ್ತು ಪಾತ್ರೆಗಳು 29 10 ಚಿನ್ನದ ಬಟ್ಟಲುಗಳು 30 ಬೆಳ್ಳಿಯ ಬಟ್ಟಲುಗಳು 410 ಇತರ ಪಾತ್ರೆಗಳು 1,000.

11 ಒಟ್ಟು ಬೆಳ್ಳಿಬಂಗಾರದ ಪಾತ್ರೆಗಳು ಐದು ಸಾವಿರದ ನಾನೂರು. ಸೆರೆಯವರು ಬಾಬಿಲೋನ್ ನಗರವನ್ನು ಬಿಟ್ಟು ಜೆರುಸಲೇಮಿಗೆ ಹೊರಟಾಗ ಈ ವಸ್ತುಗಳೆಲ್ಲಾ ಶೆಷ್ಬಚ್ಚರನ ವಶದಲ್ಲಿದ್ದವು.

2 ಕೊರಿಂಥದವರಿಗೆ 1:12-19

ಪೌಲನ ಯೋಜನೆಗಳಲ್ಲಿ ಬದಲಾವಣೆ

12 ನಾವು ಈ ವಿಷಯದಲ್ಲಿ ಹೆಮ್ಮೆಪಡುತ್ತೇವೆ ಮತ್ತು ಇದು ಸತ್ಯವೆಂದು ನಾನು ಹೃದಯಪೂರ್ವಕವಾಗಿ ಹೇಳಬಲ್ಲೆನು. ಅದೇನೆಂದರೆ ಈ ಲೋಕದಲ್ಲಿ ಮಾಡಿದ ಎಲ್ಲಾ ಕಾರ್ಯಗಳನ್ನು ದೇವರಿಂದ ಕೊಡಲ್ಪಟ್ಟ ಯಥಾರ್ಥವಾದ ಮತ್ತು ಪರಿಶುದ್ಧವಾದ ಹೃದಯದಿಂದ ಮಾಡಿದೆವು. ನಾವು ನಿಮ್ಮ ಮಧ್ಯದಲ್ಲಿ ಮಾಡಿದ ಕಾರ್ಯಗಳಲ್ಲಂತೂ ಇದು ಮತ್ತಷ್ಟು ಸತ್ಯವಾಗಿದೆ. ನಾವು ಇದನ್ನು ಮಾಡಿದ್ದು ದೇವರ ಕೃಪೆಯಿಂದಲೇ ಹೊರತು ಲೋಕದ ಜ್ಞಾನದಿಂದಲ್ಲ. 13-14 ನೀವು ಓದಿ ಅರ್ಥಮಾಡಿಕೊಳ್ಳಬಲ್ಲ ಸಂಗತಿಗಳನ್ನು ಮಾತ್ರ ನಾನು ನಿಮಗೆ ಬರೆಯುತ್ತೇನೆ. ನಮ್ಮ ವಿಷಯವಾದ ಕೆಲವು ಸಂಗತಿಗಳನ್ನು ನೀವು ಈಗಾಗಲೇ ಸ್ಪಲ್ಪ ಅರ್ಥಮಾಡಿಕೊಂಡಂತೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೀರೆಂಬ ನಿರೀಕ್ಷೆ ನನಗಿದೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನಾವು ನಿಮ್ಮ ವಿಷಯದಲ್ಲಿ ಹೆಮ್ಮೆಪಡುವಂತೆ ನೀವೂ ನಮ್ಮ ವಿಷಯದಲ್ಲಿ ಹೆಮ್ಮೆಪಡಲಾಗುವಂತೆ ನೀವು ಅರ್ಥಮಾಡಿಕೊಳ್ಳುತ್ತೀರಿ ಎಂಬ ಭರವಸೆ ನನಗಿದೆ.

15 ನಾನು ಈ ಎಲ್ಲಾ ವಿಷಯಗಳಲ್ಲಿ ಬಹು ಭರವಸೆ ಉಳ್ಳವನಾಗಿದ್ದೆನು. ಆದ್ದರಿಂದ ನಿಮ್ಮನ್ನು ಮೊದಲು ಸಂದರ್ಶಿಸಲು ನಾನು ಯೋಜನೆಗಳನ್ನು ಮಾಡಿದೆನು. ಆಗ ನಿಮಗೆ ಎರಡು ಸಲ ಆಶೀರ್ವಾದವಾಗಬಹುದಿತ್ತು. 16 ನಾನು ಮಕೆದೋನಿಯಕ್ಕೆ ಹೋಗುವಾಗಲೂ ಬಳಿಕ ಅಲ್ಲಿಂದ ಹಿಂತಿರುಗಿ ಬರುವಾಗಲೂ ನಿಮ್ಮ ಬಳಿಗೆ ಬರಬೇಕೆಂದಿದ್ದೆ. ಜುದೇಯಕ್ಕೆ ಪ್ರವಾಸ ಕೈಕೊಳ್ಳಲು ನಿಮ್ಮಿಂದ ಸಹಾಯವನ್ನು ಪಡೆದುಕೊಳ್ಳಬೇಕೆಂದಿದ್ದೆ. 17 ನಾನು ಆ ಯೋಜನೆಗಳನ್ನು ಮಾಡಿದಾಗ ನಿಮ್ಮ ಬಳಿಗೆ ಬರುವ ಉದ್ದೇಶ ನಿಜವಾಗಿಯೂ ನನಗಿರಲಿಲ್ಲವೆಂದು ಯೋಚಿಸುತ್ತೀರಾ? ನಾನು ಪ್ರಾಪಂಚಿಕರಂತೆ ಯೋಜನೆಗಳನ್ನು ಮಾಡಿದೆನೋ? ಅವರಾದರೋ ಯೋಜನೆಗಳನ್ನು ಮಾಡುವಾಗ “ಹೌದು, ಹೌದು” ಎಂತಲೂ ಅದೇ ಸಮಯದಲ್ಲಿ “ಇಲ್ಲ, ಇಲ್ಲ” ಎಂತಲೂ ಹೇಳುತ್ತಾರೆ.

18 ನೀವು ದೇವರನ್ನು ನಂಬಬಲ್ಲವರಾಗಿದ್ದರೆ, ನಾವು ನಿಮಗೆ ಏಕಕಾಲದಲ್ಲಿಯೇ “ಹೌದು” ಮತ್ತು “ಇಲ್ಲ” ಎಂದು ಹೇಳಲಿಲ್ಲವೆಂದು ನೀವು ನಂಬಬಲ್ಲಿರಿ. 19 ಸೀಲನು, ತಿಮೊಥೆಯನು ಮತ್ತು ನಾನು ನಿಮಗೆ ಬೋಧಿಸಿದ ದೇವರ ಮಗನಾದ ಯೇಸುಕ್ರಿಸ್ತನು ಹೌದೆಂತಲೂ ಅಲ್ಲವೆಂತಲೂ ಎರಡು ರೀತಿಯಲ್ಲಿರಲಿಲ್ಲ. ಕ್ರಿಸ್ತನಲ್ಲಿ ಯಾವಾಗಲೂ ಇರುವಂಥದ್ದು “ಹೌದು” ಎಂಬುದೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International