Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 56

ಗತ್ ಎಂಬ ಊರಲ್ಲಿ ಫಿಲಿಷ್ಟಿಯರು ಸೆರೆಹಿಡಿದಾಗ ರಚಿಸಿಲ್ಪಟ್ಟಿತು. ರಚನೆಗಾರ: ದಾವೀದ.

56 ದೇವರೇ, ನನ್ನನ್ನು ಕರುಣಿಸು; ವೈರಿಗಳು ನನ್ನ ಮೇಲೆ ಆಕ್ರಮಣಮಾಡಿದ್ದಾರೆ.
    ಅವರು ಸತತವಾಗಿ ನನ್ನನ್ನು ಬೆನ್ನಟ್ಟಿ ಹೋರಾಡುತ್ತಿದ್ದಾರೆ.
ನನ್ನ ವೈರಿಗಳು ಸತತವಾಗಿ ನನ್ನ ಮೇಲೆ ಆಕ್ರಮಣ ಮಾಡುವರು.
    ಅವರಲ್ಲಿರುವ ಹೋರಾಟಗಾರರು ಅಸಂಖ್ಯಾತ.
ನಾನು ಭಯಗೊಂಡಾಗ, ನಿನ್ನಲ್ಲೇ ಭರವಸೆ ಇಡುವೆ.
ನಾನು ದೇವರಲ್ಲಿ ಭರವಸೆ ಇಟ್ಟಿರುವುದರಿಂದ ಜನರಿಗೆ ಭಯಪಡುವುದಿಲ್ಲ.
    ಕ್ಷಣಿಕರಾದ ಮಾನವರು ನನಗೇನು ಮಾಡಬಲ್ಲರು?
    ದೇವರ ವಾಗ್ದಾನಕ್ಕಾಗಿ ಆತನನ್ನು ಕೊಂಡಾಡುವೆನು.
ನನ್ನ ವೈರಿಗಳು ನನ್ನ ಮಾತುಗಳಿಗೆ ಅಪಾರ್ಥ ಮಾಡುವರು.
    ನನಗೆ ಕೇಡುಮಾಡಬೇಕೆಂದೇ ಅವರು ಯಾವಾಗಲೂ ಯೋಚಿಸುವರು.
ಅವರು ಒಟ್ಟುಗೂಡಿ ನನ್ನನ್ನು ಕೊಲ್ಲಲು
    ನನ್ನ ಹೆಜ್ಜೆಯನ್ನೇ ಹಿಂಬಾಲಿಸಿಕೊಂಡು ಬರುತ್ತಾರೆ.
ದೇವರೇ, ಅವರ ದುಷ್ಟತನದ ನಿಮಿತ್ತ ಅವರನ್ನು ಸೆರೆಯಾಳುಗಳಾಗಿ ಕಳುಹಿಸು.
    ಅವರು ಅನ್ಯ ಜನಾಂಗಗಳ ಕೋಪವನ್ನು ಅನುಭವಿಸುವಂತೆ ಹೊರಗಟ್ಟು.
ನನಗಾಗಿರುವ ದುಃಖವು ನಿನಗೆ ಗೊತ್ತಿದೆ.
    ನಾನು ಎಷ್ಚು ಅತ್ತಿರುವೆನೆಂದು ನಿನಗೆ ಗೊತ್ತಿದೆ.
ನನ್ನ ಕಣ್ಣೀರಿಗೆ ನೀನು ಖಂಡಿತವಾಗಿ ಲೆಕ್ಕವಿಟ್ಟಿರುವೆ.

ಆದ್ದರಿಂದ, ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುವಾಗ ನನ್ನ ಶತ್ರುಗಳನ್ನು ಸೋಲಿಸು.
ನೀನು ಮಾಡಬಲ್ಲೆ ಎಂದು ನನಗೆ ಗೊತ್ತಿದೆ; ನೀನೇ ದೇವರು!

10 ನಾನು ದೇವರನ್ನು ಆತನ ವಾಗ್ದಾನಕ್ಕಾಗಿ ಕೊಂಡಾಡುವೆನು.
    ಯೆಹೋವನು ನನಗೆ ಮಾಡಿರುವ ವಾಗ್ದಾನಕ್ಕಾಗಿ ನಾನು ಆತನನ್ನು ಕೊಂಡಾಡುವೆನು.
11 ನಾನು ದೇವರಲ್ಲಿ ಭರವಸವಿಟ್ಟಿರುವುದರಿಂದ ಜನರಿಗೆ ಭಯಪಡುವುದಿಲ್ಲ.
    ಕ್ಷಣಿಕರಾದ ಮಾನವರು ನನಗೇನು ಮಾಡಬಲ್ಲರು?

12 ದೇವರೇ, ನಾನು ನಿನಗೆ ವಿಶೇಷ ಹರಕೆಗಳನ್ನು ಮಾಡಿದ್ದೇನೆ.
    ನಾನು ಮಾಡಿದ ಹರಕೆಗಳನ್ನು ಸಲ್ಲಿಸುವೆನು.
    ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
13 ಯಾಕೆಂದರೆ ನೀನು ನನ್ನನ್ನು ಮರಣದಿಂದ ರಕ್ಷಿಸಿದೆ;
    ನೀನು ನನ್ನನ್ನು ಸೋಲಿನಿಂದ ತಪ್ಪಿಸಿದೆ.
ಆದ್ದರಿಂದ, ಜೀವಂತರಾಗಿರುವ ಜನರು ಮಾತ್ರ
    ನೋಡಬಹುದಾದ ಬೆಳಕಿನಲ್ಲಿ ನಾನು ದೇವರನ್ನು ಆರಾಧಿಸುವೆನು.

2 ರಾಜರುಗಳು 5:1-14

ನಾಮಾನನ ಸಮಸ್ಯೆ

ಅರಾಮ್ಯರ ರಾಜನ ಸೇನೆಯಲ್ಲಿ ನಾಮಾನನೆಂಬ ಸೇನಾಪತಿಯಿದ್ದನು. ನಾಮಾನನು ಅವನ ರಾಜನಿಗೆ ಬಹಳ ಪ್ರಾಮುಖ್ಯ ವ್ಯಕ್ತಿಯಾಗಿದ್ದನು. ಯೆಹೋವನು ನಾಮಾನನ ಮುಖಾಂತರ ಅರಾಮ್ಯರಿಗೆ ವಿಜಯವನ್ನು ತಂದುಕೊಟ್ಟಿದ್ದರಿಂದ ಅವನು ಪ್ರಮುಖನಾಗಿದ್ದನು. ನಾಮಾನನು ಮಹಾಪುರುಷನೂ ಶಕ್ತಿಶಾಲಿಯೂ ಆದ ಮನುಷ್ಯನಾಗಿದ್ದನು. ಆದರೆ ಅವನು ಕುಷ್ಠರೋಗ ಪೀಡಿತನಾಗಿದ್ದನು.

ಅರಾಮ್ಯರು ಇಸ್ರೇಲಿನಲ್ಲಿ ಹೋರಾಡಲು ಸೈನಿಕರ ಅನೇಕ ಗುಂಪುಗಳನ್ನು ಕಳುಹಿಸಿದರು. ಸೈನಿಕರು ಜನರನ್ನು ತಮ್ಮ ಗುಲಾಮರಂತೆ ಹಿಡಿದುತಂದರು. ಒಂದು ಸಲ ಚಿಕ್ಕ ಹುಡುಗಿಯೊಬ್ಬಳನ್ನು ಇಸ್ರೇಲ್ ದೇಶದಿಂದ ಹಿಡಿದುತಂದರು. ಈ ಚಿಕ್ಕ ಹುಡುಗಿಯು ನಾಮಾನನ ಪತ್ನಿಗೆ ಸೇವಕಿಯಾದಳು. ಈ ಹುಡುಗಿಯು ನಾಮಾನನ ಪತ್ನಿಗೆ, “ನನ್ನ ಒಡೆಯನಾದ ನಾಮಾನನು ಸಮಾರ್ಯದಲ್ಲಿ ವಾಸಿಸುವ ಪ್ರವಾದಿಯಾದ ಎಲೀಷನನ್ನು ಭೇಟಿಮಾಡಬೇಕೆಂದು ನಾನು ಆಶಿಸುತ್ತೇನೆ. ಆ ಪ್ರವಾದಿಯು ನಾಮಾನನ ಕುಷ್ಠರೋಗವನ್ನು ಗುಣಪಡಿಸಬಲ್ಲನು” ಎಂದು ಹೇಳಿದಳು.

ನಾಮಾನನು ತನ್ನ ಒಡೆಯನಾದ ಅರಾಮ್ಯರ ರಾಜನ ಬಳಿಗೆ ಹೋದನು. ಇಸ್ರೇಲಿನ ಹುಡುಗಿಯು ಹೇಳಿದ ಸಂಗತಿಗಳನ್ನು, ನಾಮಾನನು ಅರಾಮ್ಯರ ರಾಜನಿಗೆ ಹೇಳಿದನು.

ಆಗ ಅರಾಮ್ಯರ ರಾಜನು, “ಈಗಲೇ ಹೋಗು, ನಾನು ಇಸ್ರೇಲಿನ ರಾಜನಿಗೆ ಪತ್ರವೊಂದನ್ನು ಕಳುಹಿಸುತ್ತೇನೆ” ಎಂದು ಹೇಳಿದನು.

ನಾಮಾನನು ಇಸ್ರೇಲಿಗೆ ಹೋದನು. ನಾಮಾನನು ಮುನ್ನೂರ ನಲವತ್ತು ಕಿಲೋಗ್ರಾಂ ಬೆಳ್ಳಿ, ಆರುಸಾವಿರ ಚಿನ್ನದ ನಾಣ್ಯಗಳನ್ನು ಮತ್ತು ಹತ್ತು ಥಾನು ಬಟ್ಟೆಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಹೋದನು. ನಾಮಾನನು ಅರಾಮ್ಯರ ರಾಜನಿಂದ ಇಸ್ರೇಲ್ ರಾಜನಿಗೆ ಪತ್ರವೊಂದನ್ನು ತೆಗೆದುಕೊಂಡು ಹೋದನು. ಆ ಪತ್ರದಲ್ಲಿ, “…ನನ್ನ ಸೇವಕನಾದ ನಾಮಾನನನ್ನು ನಿಮ್ಮ ಬಳಿಗೆ ನಾನು ಕಳುಹಿಸುತ್ತಿದ್ದೇನೆ. ಅವನ ಕುಷ್ಠರೋಗವನ್ನು ಗುಣಪಡಿಸಿ” ಎಂದು ಬರೆದಿತ್ತು.

ಇಸ್ರೇಲಿನ ರಾಜನು ಪತ್ರವನ್ನು ಓದಿದಾಗ, ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, “ನಾನು ದೇವರೇನು? ಇಲ್ಲ! ಹುಟ್ಟು ಮತ್ತು ಸಾವುಗಳ ಮೇಲೆ ನನಗೆ ಯಾವ ಶಕ್ತಿಯೂ ಇಲ್ಲ. ಹೀಗಿರುವಾಗ ಅರಾಮ್ಯರ ರಾಜನು ಕುಷ್ಠರೋಗಪೀಡಿತನಾದ ಮನುಷ್ಯನನ್ನು ನನ್ನ ಬಳಿಗೆ ಗುಣಪಡಿಸಲು ಏಕೆ ಕಳುಹಿಸಿದನು? ಇದರ ಬಗ್ಗೆ ನೀವೇ ಯೋಚಿಸಿರಿ. ಇದು ಒಂದು ಕುತಂತ್ರವೆಂಬುದು ನಿಮಗೇ ತಿಳಿಯುತ್ತದೆ. ಅರಾಮ್ಯರ ರಾಜನು ಯುದ್ಧವನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾನೆ!” ಎಂದು ಹೇಳಿದನು.

ಇಸ್ರೇಲಿನ ರಾಜನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದು ದೇವಮನುಷ್ಯನಾದ ಎಲೀಷನಿಗೆ ತಿಳಿಯಿತು. ಎಲೀಷನು ರಾಜನಿಗೆ ಈ ಸಂದೇಶವನ್ನು ಕಳುಹಿಸಿದನು: “ನೀನು ನಿನ್ನ ಬಟ್ಟೆಗಳನ್ನು ಹರಿದುಕೊಂಡಿದ್ದು ಏಕೆ? ನಾಮಾನನು ನನ್ನ ಬಳಿಗೆ ಬರಲಿ. ಇಸ್ರೇಲಿನಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ತಿಳಿಯುತ್ತದೆ!”

ನಾಮಾನನು ತನ್ನ ಕುದುರೆಗಳೊಂದಿಗೆ ಮತ್ತು ರಥಗಳೊಂದಿಗೆ ಎಲೀಷನ ಮನೆಗೆ ಬಂದು, ಬಾಗಿಲಿನ ಹೊರಗಡೆ ನಿಂತುಕೊಂಡನು. 10 ಎಲೀಷನು ತನ್ನ ಸಂದೇಶಕನ ಮೂಲಕ ನಾಮಾನನಿಗೆ, “ಹೋಗಿ, ಜೋರ್ಡನ್ ನದಿಯಲ್ಲಿ ಏಳು ಸಲ ಸ್ನಾನಮಾಡು. ಆಗ ನಿನ್ನ ಚರ್ಮರೋಗವು ಗುಣವಾಗುವುದು. ನೀನು ಸಂಪೂರ್ಣ ಶುದ್ಧನಾಗುವೆ” ಎಂದು ತಿಳಿಸಿದನು.

11 ನಾಮಾನನು ಕೋಪಗೊಂಡು, “ಎಲೀಷನು ಕೊನೆಯ ಪಕ್ಷ ಬಂದು, ನನ್ನೆದುರು ನಿಂತು, ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ನನ್ನನ್ನು ಕರೆಯುತ್ತಿದ್ದನೆಂದು ನಾನು ಭಾವಿಸಿದ್ದೆನು. ಅವನು ತನ್ನ ಕೈಗಳನ್ನು ನನ್ನ ದೇಹದ ಮೇಲೆ ಸವರಿ, ನನ್ನ ಕುಷ್ಠರೋಗವನ್ನು ಗುಣಪಡಿಸುವನೆಂದು ನಾನು ಭಾವಿಸಿದ್ದೆನು. 12 ದಮಸ್ಕದ ಅಬಾನಾ ಮತ್ತು ಪರ್ಪರ್ ನದಿಗಳು ಇಸ್ರೇಲಿನ ಎಲ್ಲಾ ನದಿಗಳಿಗಿಂತಲೂ ಉತ್ತಮ! ನಾನು ದಮಸ್ಕದ ಆ ನದಿಗಳಲ್ಲಿ ಸ್ನಾನಮಾಡಿ, ಶುದ್ಧನಾಗಬಾರದೇಕೆ?” ಎಂದುಕೊಂಡು ಕೋಪದಿಂದ ಹಿಂದಿರುಗಿ ಹೋದನು!

13 ಆಗ ನಾಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, “ತಂದೆಯೇ, ಪ್ರವಾದಿಯು ಒಂದು ಕಠಿಣವಾದ ಕಾರ್ಯವನ್ನು ಹೇಳಿದ್ದರೆ, ನೀವು ಅದನ್ನು ಮಾಡುತ್ತಿದ್ದಿರಿ! ಅಲ್ಲವೇ? ಹೀಗಿರಲು ಸುಲಭವಾದ ಒಂದು ಕಾರ್ಯವನ್ನು ಅವನು ನಿಮಗೆ ಹೇಳಿರುವಾಗ ನೀವು ಅವನಿಗೆ ವಿಧೇಯರಾಗಬಾರದೇಕೆ? ನೀವು ಸ್ನಾನಮಾಡಿದರೆ, ಶುಚಿಗೊಂಡು ಶುದ್ಧರಾಗುವಿರಿ” ಎಂದು ಹೇಳಿದರು.

14 ದೇವಮನುಷ್ಯನು (ಎಲೀಷನು) ಹೇಳಿದಂತೆಯೇ ನಾಮಾನನು ಜೋರ್ಡನ್ ನದಿಯಲ್ಲಿ ಇಳಿದು ಏಳುಸಾರಿ ಮುಳುಗಿ ಮೇಲೆದ್ದನು. ಆಗ ನಾಮಾನನು ಸಂಪೂರ್ಣ ಶುದ್ಧನಾದನು; ಅವನ ಚರ್ಮವು ಮಗುವಿನ ಚರ್ಮದಂತೆ ಕೋಮಲವಾಯಿತು.

1 ಕೊರಿಂಥದವರಿಗೆ 14:13-25

13 ಪರಭಾಷೆಯಲ್ಲಿ ಮಾತಾಡುವ ವರವುಳ್ಳವನು ತಾನು ಹೇಳುವ ವಿಷಯಗಳನ್ನು ಅನುವಾದಿಸುವ ಸಾಮರ್ಥ್ಯಕ್ಕಾಗಿಯೂ ದೇವರಲ್ಲಿ ಪ್ರಾರ್ಥಿಸಲಿ. 14 ನಾನು ಪರಭಾಷೆಯಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದೇ ಹೊರತು ನನ್ನ ಮನಸ್ಸು ತಟಸ್ಥವಾಗಿರುವುದು. 15 ಆದ್ದರಿಂದ ನಾನೇನು ಮಾಡಬೇಕು? ನಾನು ನನ್ನ ಆತ್ಮದಿಂದಲೂ ಮನಸ್ಸಿನಿಂದಲೂ ಪ್ರಾರ್ಥಿಸುವೆನು; ನನ್ನ ಜೀವಾತ್ಮದೊಂದಿಗೂ ಮನಸ್ಸಿನೊಂದಿಗೂ ಹಾಡುವೆನು. 16 ನೀನು ನಿನ್ನ ಜೀವಾತ್ಮದಿಂದ ಸುತ್ತಿಸಬಹದು. ಆದರೆ ಅಲ್ಲಿರುವ ಒಬ್ಬನು ನಿನ್ನ ಕೃತಜ್ಞತಾಸ್ತುತಿಯನ್ನು ಅರ್ಥಮಾಡಿಕೊಳ್ಳದ ಹೊರತು “ಆಮೆನ್‌” ಎಂದು ಹೇಳಲಾರನು. ಏಕೆಂದರೆ ನೀನು ಹೇಳುತ್ತಿರುವುದು ಅವನಿಗೆ ತಿಳಿಯುವುದಿಲ್ಲ. 17 ಸತ್ಯವಾಗಿ ಹೇಳುವುದಾದರೆ, ದೇವರಿಗೆ ಮಾಡುವ ಕೃತಜ್ಞತಾಸ್ತುತಿಯಿಂದ ಬೇರೊಬ್ಬನಿಗೆ ಸಹಾಯವಾಗುವುದಿಲ್ಲ.

18 ವಿವಿಧ ಭಾಷೆಗಳಲ್ಲಿ ಮಾತಾಡಲು ನಿಮ್ಮೆಲ್ಲರಿಗಿಂತಲೂ ಹೆಚ್ಚಿನ ವರವು ನನಗಿದೆ. 19 ಆದರೆ ಸಭಾಕೂಟಗಳಲ್ಲಿ ಅರ್ಥವಾಗದಂಥ ಪರಭಾಷೆಯಲ್ಲಿ ಸಾವಿರಾರು ಮಾತುಗಳನ್ನು ಹೇಳುವುದಕ್ಕಿಂತ ಅರ್ಥವಾಗುವಂಥ ಕೆಲವೇ ಮಾತುಗಳನ್ನು ಹೇಳಲು ಇಷ್ಟಪಡುತ್ತೇನೆ. ಇತರರಿಗೆ ಉಪದೇಶ ಮಾಡುವುದಕ್ಕಾಗಿ ನಾನು ತಿಳುವಳಿಕೆಯಿಂದ ಮಾತಾಡುವೆನು.

20 ಸಹೋದರ ಸಹೋದರಿಯರೇ, ಮಕ್ಕಳಂತೆ ಆಲೋಚಿಸಬೇಡಿ. ಕೆಟ್ಟ ವಿಷಯಗಳಲ್ಲಿ ಎಳೆಗೂಸುಗಳಂತಿರಿ. ಆದರೆ ನಿಮ್ಮ ಆಲೋಚನೆಗಳಲ್ಲಿ ಪ್ರಾಯಸ್ಥರಂತಿರಿ. 21 ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:

“ವಿವಿಧ ಭಾಷೆಗಳನ್ನು ಮಾತಾಡುವವರ ಮೂಲಕವೂ
    ವಿದೇಶಿಯರ ನಾಲಿಗೆಯ ಮೂಲಕವೂ
ನಾನು ಈ ಜನರೊಂದಿಗೆ ಮಾತಾಡುವೆನು;
    ಆದರೂ ಇವರು ನನಗೆ ವಿಧೇಯರಾಗುವುದಿಲ್ಲ.”(A)

ಪ್ರಭುವು ಹೇಳುವುದು ಅದನ್ನೇ.

22 ಆದ್ದರಿಂದ ವಿವಿಧ ಭಾಷೆಗಳನ್ನು ಮಾತಾಡುವ ವರವು ನಂಬದ ಜನರಿಗೆ ಆಧಾರವಾಗಿದೆಯೇ ಹೊರತು ನಂಬುವವರಿಗಲ್ಲ. ಆದರೆ ಪ್ರವಾದನೆಯು ನಂಬುವ ಜನರಿಗೋಸ್ಕರವಾಗಿ ಇದೆಯೇ ಹೊರತು ನಂಬದವರಿಗಲ್ಲ. 23 ಒಂದುವೇಳೆ ಇಡೀ ಸಭೆಯು ಕೂಡಿಬಂದಾಗ ನೀವೆಲ್ಲರೂ ವಿವಿಧ ಭಾಷೆಗಳನ್ನು ಮಾತಾಡತೊಡಗಿದರೆ, ಅಲ್ಲಿಗೆ ಬರುವ ತಿಳುವಳಿಕೆಯಿಲ್ಲದ ಅಥವಾ ನಂಬದ ಕೆಲವು ಜನರು ನಿಮ್ಮನ್ನು ಹುಚ್ಚರೆಂದು ಹೇಳುವರು. 24 ಒಂದುವೇಳೆ ನೀವೆಲ್ಲರೂ ಪ್ರವಾದನೆ ಮಾಡುತ್ತಿರುವಾಗ, ತಿಳುವಳಿಕೆಯಿಲ್ಲದ ಅಥವಾ ನಂಬಿಕೆಯಿಲ್ಲದ ವ್ಯಕ್ತಿಯು ಒಳಗೆ ಬಂದರೆ, ನಿಮ್ಮ ಪ್ರವಾದನೆಗಳು ಆ ವ್ಯಕ್ತಿಗೆ ಅವನ ಪಾಪವನ್ನು ತೋರಿಸಿಕೊಡುತ್ತವೆ ಮತ್ತು ನೀವು ಹೇಳುವ ವಿಷಯಗಳ ಆಧಾರದ ಮೇಲೆ ಅವನಿಗೆ ತೀರ್ಪಾಗುವುದು. 25 ಆ ವ್ಯಕ್ತಿಯ ಹೃದಯದಲ್ಲಿರುವ ರಹಸ್ಯ ಸಂಗತಿಗಳು ಬಯಲಾಗುತ್ತವೆ. ಆದ್ದರಿಂದ ಆ ವ್ಯಕ್ತಿಯು ಅಡ್ಡಬಿದ್ದು ದೇವರನ್ನು ಆರಾಧಿಸುವನು. “ನಿಜವಾಗಿಯೂ ದೇವರು ನಿಮ್ಮ ಸಂಗಡವಿದ್ದಾನೆ” ಎಂದು ಅವನು ಹೇಳುವನು.[a]

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International