Revised Common Lectionary (Semicontinuous)
115 ಯೆಹೋವನೇ, ಘನಮಾನಗಳು ನಮ್ಮವಲ್ಲ!
ಅವು ನಿನ್ನವೇ.
ನಿನ್ನ ಪ್ರೀತಿಯ ನಿಮಿತ್ತವಾಗಿಯೂ ನಂಬಿಗಸ್ತಿಕೆಯ ನಿಮಿತ್ತವಾಗಿಯೂ ಘನಮಾನಗಳು ನಿನಗೇ ಸಲ್ಲತಕ್ಕದ್ದು.
2 ಅವರ ದೇವರು ಎಲ್ಲಿದ್ದಾನೆಂದು ಜನಾಂಗಗಳು ಯಾಕೆ ಹೇಳಬೇಕು?
3 ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಬಯಸಿದ್ದನ್ನೆಲ್ಲಾ ಮಾಡುತ್ತಾನೆ.
4 ಅನ್ಯಜನಾಂಗಗಳ “ದೇವರುಗಳು” ಬೆಳ್ಳಿಬಂಗಾರಗಳಿಂದ ಮಾಡಿದ ವಿಗ್ರಹಗಳಷ್ಟೇ.
ಅವುಗಳನ್ನು ಮಾಡಿದವರು ಮನುಷ್ಯರೇ.
5 ಆ ವಿಗ್ರಹಗಳಿಗೆ ಬಾಯಿಗಳಿವೆ, ಆದರೆ ಮಾತಾಡಲಾರವು.
ಕಣ್ಣುಗಳಿವೆ, ಆದರೆ ನೋಡಲಾರವು.
6 ಕಿವಿಗಳಿವೆ, ಆದರೆ ಕೇಳಲಾರವು.
ಮೂಗುಗಳಿವೆ, ಆದರೆ ಮೂಸಲಾರವು.
7 ಕೈಗಳಿವೆ, ಆದರೆ ಯಾವುದನ್ನೂ ಮುಟ್ಟಲಾರವು.
ಕಾಲುಗಳಿವೆ, ಆದರೆ ನಡೆಯಲಾರವು.
ಅವುಗಳ ಗಂಟಲುಗಳಿಂದ ಶಬ್ದವೇ ಹೊರಡದು.
8 ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಟ್ಟಿರುವವರೂ ಅವುಗಳಂತೆಯೇ.
9 ಇಸ್ರೇಲರೇ, ಯೆಹೋವನಲ್ಲಿ ಭರವಸವಿಡಿರಿ.
ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
11 ಯೆಹೋವನ ಭಕ್ತರು ಆತನಲ್ಲಿ ಭರವಸವಿಡುವರು.
ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
12 ಯೆಹೋವನು ನಮ್ಮನ್ನು ಜ್ಞಾಪಕಮಾಡಿಕೊಂಡು ಆಶೀರ್ವದಿಸುವನು.
ಆತನು ಇಸ್ರೇಲನ್ನೂ ಆರೋನನ ಮನೆತನವನ್ನೂ ಆಶೀರ್ವದಿಸುವನು.
13 ಆತನು ದೊಡ್ಡವರೂ ಚಿಕ್ಕವರೂ ಎಂದೆನ್ನದೆ ತನ್ನ ಭಕ್ತರನ್ನೆಲ್ಲಾ ಆಶೀರ್ವದಿಸುವನು.
14 ಯೆಹೋವನು ನಿಮ್ಮ ಕುಟುಂಬಗಳನ್ನೂ ನಿಮ್ಮ ಮಕ್ಕಳ ಕುಟುಂಬಗಳನ್ನೂ ಅಭಿವೃದ್ಧಿಪಡಿಸಲಿ.
15 ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಮಾಡಿದಾತನು ಆತನೇ.
16 ಪರಲೋಕವು ಯೆಹೋವನದು.
ಆತನು ಭೂಲೋಕವನ್ನು ಮನುಷ್ಯರಿಗೆ ಕೊಟ್ಟನು.
17 ಸತ್ತುಹೋದವರು ಯೆಹೋವನನ್ನು ಕೊಂಡಾಡುವುದಿಲ್ಲ.
ಸಮಾಧಿಯೊಳಗಿರುವವರು ಆತನನ್ನು ಸ್ತುತಿಸುವುದಿಲ್ಲ.
18 ನಾವಾದರೋ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು!
ಯೆಹೋವನಿಗೆ ಸ್ತೋತ್ರ!
ದೆಬೋರಳ ಜಯಗೀತೆ
5 ಇಸ್ರೇಲರು ಸೀಸೆರನನ್ನು ಸೋಲಿಸಿದ ದಿನ ದೆಬೋರಳು ಮತ್ತು ಅಬೀನೋವಮನ ಮಗನಾದ ಬಾರಾಕನು ಈ ಗೀತೆಯನ್ನು ಹಾಡಿದರು:
2 “ಇಸ್ರೇಲರು ಯುದ್ಧ ಸನ್ನದ್ಧರಾಗುತ್ತಿದ್ದಾರೆ;
ಜನರು ಸ್ವಇಚ್ಛೆಯಿಂದ ಯುದ್ಧಕ್ಕೆ ಹೋಗಲು ಒಪ್ಪಿದ್ದಾರೆ;
ಯೆಹೋವನಿಗೆ ಸ್ತೋತ್ರವಾಗಲಿ!
3 “ಅರಸರೇ ಕೇಳಿರಿ,
ಆಳುವವರೇ ಗಮನಿಸಿರಿ!
ನಾನು ಹಾಡುವೆನು.
ನಾನು ಯೆಹೋವನನ್ನು ಕೀರ್ತಿಸುವೆನು.
ಇಸ್ರೇಲಿನ ದೇವರಾದ ಯೆಹೋವನಿಗೆ
ನಾನು ಗಾನ ಮಾಡುವೆನು.
4 “ಯೆಹೋವನೇ, ನೀನು ಹಿಂದೆ ಸೆಯೀರಿನ ಪ್ರದೇಶದಿಂದ ಬಂದೆ.
ನೀನು ಎದೋಮ್ಯರ ಪ್ರದೇಶದಿಂದ ನಡೆದುಕೊಂಡು ಹೋದೆ.
ನೀನು ನಡೆಯುವಾಗ ಭೂಮಿ ನಡುಗಿತು; ಆಕಾಶ ಹನಿಗರೆಯಿತು.
ಮೇಘಮಂಡಲವು ಮಳೆಗರೆಯಿತು.
5 ಸೀನಾಯಿ ಬೆಟ್ಟದ ದೇವರಾದ ಯೆಹೋವನ ಎದುರಿಗೆ,
ಇಸ್ರೇಲರ ದೇವರಾದ ಯೆಹೋವನ ಎದುರಿಗೆ, ಪರ್ವತಗಳು ನಡುಗಿದವು.
6 “ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ ಯಾಯೇಲಳ ದಿನಗಳಲ್ಲಿಯೂ
ಮುಖ್ಯಮಾರ್ಗಗಳು ಬರಿದಾಗಿದ್ದವು.
ವ್ಯಾಪಾರಿಗಳು[a] ಮತ್ತು ಪ್ರಯಾಣಿಕರು ಸೀಳುದಾರಿಯಿಂದ ಹೋಗುತ್ತಿದ್ದರು.
7 “ದೆಬೋರಳೇ, ನೀನು ಬರುವವರೆಗೆ,
ನೀನು ಇಸ್ರೇಲರಿಗೆ ತಾಯಿಯಾಗಿ ಬರುವವರೆಗೆ, ಶೂರರೇ ಇರಲಿಲ್ಲ.
ಇಸ್ರೇಲಿನಲ್ಲಿ ವೀರರೇ ಇರಲಿಲ್ಲ.
8 ಅವರು ಹೊಸ ದೇವರುಗಳನ್ನು ಆರಿಸಿಕೊಂಡರು;
ಅದಕ್ಕಾಗಿ ಅವರು ತಮ್ಮ ಪಟ್ಟಣ ದ್ವಾರಗಳಲ್ಲಿ ಯುದ್ಧ ಮಾಡಬೇಕಾಯಿತು.
ಇಸ್ರೇಲರ ನಲವತ್ತು ಸಾವಿರ ಸೈನಿಕರಲ್ಲಿ
ಒಬ್ಬನಿಗೂ ಗುರಾಣಿ ಬರ್ಜಿಗಳಿರಲಿಲ್ಲ.
9 “ನನ್ನ ಹೃದಯವು ಇಸ್ರೇಲಿನ ಸೇನಾಧಿಪತಿಗಳ ಸಂಗಡವಿದೆ.
ಈ ಸೇನಾಧಿಪತಿಗಳು ಇಸ್ರೇಲಿಗಾಗಿ ಯುದ್ಧಮಾಡಲು ಸ್ವಇಚ್ಛೆಯಿಂದ ಬಂದರು.
ಯೆಹೋವನಿಗೆ ಸ್ತೋತ್ರವಾಗಲಿ.
10 “ಬಿಳಿಯ ಕತ್ತೆಗಳ ಮೇಲೆ ಸವಾರಿ ಮಾಡುವವರೇ,
ರತ್ನಗಂಬಳಿಯ ಮೇಲೆ ಕುಳಿತುಕೊಳ್ಳುವವರೇ,
ಮಾರ್ಗಗಳ ಮೇಲೆ ಹೋಗುವ ಪ್ರಯಾಣಿಕರೇ, ಗಮನಿಸಿರಿ!
11 ತಾಳ ಝಲ್ಲರಿಗಳ ಧ್ವನಿಯನ್ನು ಕೇಳಿರಿ;
ಬಾವಿಗಳ ಹತ್ತಿರ ನೆರೆದ ಜನಸಮೂಹದ ಧ್ವನಿಯನ್ನು ಕೇಳಿರಿ;
ಅಲ್ಲಿ ಅವು ಯೆಹೋವನ ವಿಜಯದ ಬಗ್ಗೆ ಹೇಳುತ್ತವೆ.
ಯೆಹೋವನ ಜನರು ಪಟ್ಟಣ ದ್ವಾರದಲ್ಲಿ ಯುದ್ಧಕ್ಕೆ ಹೋದಾಗ
ಇಸ್ರೇಲಿನಲ್ಲಿ ಅವರ ವಿಜಯದ ಬಗ್ಗೆ ಹೇಳುತ್ತವೆ.
ನಿಮ್ಮ ಸಭಾಕೂಟಗಳು ಸಭೆಗೆ ಸಹಾಯಕವಾಗಿರಬೇಕು
26 ಆದ್ದರಿಂದ ಸಹೋದರ ಸಹೋದರಿಯರೇ, ನೀವು ಮಾಡತಕ್ಕದ್ದೇನು? ನೀವು ಸಭೆಸೇರಿದಾಗ, ಒಬ್ಬನು ಹಾಡುತ್ತಾನೆ; ಒಬ್ಬನು ಉಪದೇಶ ಮಾಡುತ್ತಾನೆ; ಒಬ್ಬನು ದೇವರಿಂದ ಹೊಸ ಸತ್ಯವನ್ನು ತಿಳಿಸುತ್ತಾನೆ; ಒಬ್ಬನು ಪರಭಾಷೆಯಲ್ಲಿ ಮಾತಾಡುತ್ತಾನೆ; ಒಬ್ಬನು ಆ ಪರಭಾಷೆಯನ್ನು ಅನುವಾದಿಸುತ್ತಾನೆ. ಸಭೆಯು ದೃಢವಾಗಿ ಬೆಳೆಯಬೇಕೆಂಬುದೇ ಇವುಗಳ ಉದ್ದೇಶವಾಗಿರಬೇಕು. 27 ನೀವು ಸಭೆಸೇರಿರುವಾಗ, ಯಾರಾದರೂ ಪರಭಾಷೆಯಲ್ಲಿ ಮಾತಾಡಲು ಬಯಸಿದರೆ, ಇಬ್ಬರು ಅಥವಾ ಮೂವರಿಗಿಂತಲೂ ಹೆಚ್ಚು ಜನರು ಪರಭಾಷೆಯಲ್ಲಿ ಮಾತಾಡಬಾರದು. ಅವರು ಹೇಳುವುದನ್ನು ಮತ್ತೊಬ್ಬ ವ್ಯಕ್ತಿಯು ಅನುವಾದಿಸಬೇಕು. 28 ಆದರೆ ಅನುವಾದಕನು ಇಲ್ಲದಿದ್ದರೆ, ಪರಭಾಷೆಯಲ್ಲಿ ಮಾತಾಡುವವನು ಸಭೆಯಲ್ಲಿ ಮೌನವಾಗಿರಬೇಕು. ಆ ವ್ಯಕ್ತಿಯು ತನ್ನೊಂದಿಗೂ ದೇವರೊಂದಿಗೂ ಮಾತ್ರ ಮಾತಾಡಬೇಕು.
29 ಇಬ್ಬರು ಅಥವಾ ಮೂವರು ಪ್ರವಾದಿಗಳು ಮಾತ್ರ ಮಾತಾಡಬೇಕು. ಅವರು ಹೇಳುವುದನ್ನು ಇತರರು ವಿವೇಚಿಸಬೇಕು. 30 ಸಭೆಯಲ್ಲಿ ಕುಳಿತಿರುವ ಮತ್ತೊಬ್ಬ ವ್ಯಕ್ತಿಗೆ ದೇವರ ಸಂದೇಶವು ದೊರೆತರೆ, ಮೊದಲು ಮಾತಾಡುತ್ತಿರುವವನು ತನ್ನ ಮಾತನ್ನು ನಿಲ್ಲಿಸಲಿ. 31 ನೀವೆಲ್ಲರೂ ಒಬ್ಬರಾದ ನಂತರ ಒಬ್ಬರು ಪ್ರವಾದಿಸಬಹುದು. ಈ ರೀತಿಯಲ್ಲಿ ಎಲ್ಲಾ ಜನರು ಕಲಿತುಕೊಳ್ಳುವರು ಮತ್ತು ಪ್ರೋತ್ಸಾಹಿತರಾಗುವರು. 32 ಪ್ರವಾದಿಗಳ ಜೀವಾತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿಯೇ ಇರುತ್ತವೆ. 33 ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.
34 ಸ್ತ್ರೀಯರು ಸಭಾಕೂಟಗಳಲ್ಲಿ ಮೌನವಾಗಿರಬೇಕು. ದೇವಮಕ್ಕಳ ಎಲ್ಲಾ ಸಭೆಗಳಲ್ಲಿಯೂ ಇದೇ ಪದ್ಧತಿ ರೂಢಿಯಲ್ಲಿದೆ. ಸ್ತ್ರೀಯರಿಗೆ ಮಾತಾಡಲು ಅನುಮತಿಯಿಲ್ಲ. ಅವರು ಅಧೀನರಾಗಿರಬೇಕು. ಮೋಶೆಯ ಧರ್ಮಶಾಸ್ತ್ರವು ಸಹ ಇದನ್ನೇ ಹೇಳುತ್ತದೆ. 35 ಸ್ತ್ರೀಯರು ಏನಾದರು ತಿಳಿದುಕೊಳ್ಳಬೇಕೆಂದಿದ್ದರೆ, ತಮ್ಮ ಮನೆಗಳಲ್ಲಿ ತಮ್ಮ ಗಂಡಂದಿರನ್ನು ಕೇಳಬೇಕು. ಬಹಿರಂಗ ಕೂಟದಲ್ಲಿ ಸ್ತ್ರೀಯರು ಮಾತಾಡುವಂಥದ್ದು ನಾಚಿಕೆಕರವಾದದ್ದು.
36 ದೇವರ ಉಪದೇಶವು ನಿಮ್ಮಿಂದ ಬರುತ್ತದೆಯೇ? ಇಲ್ಲ! ಆ ಉಪದೇಶವನ್ನು ಹೊಂದಿಕೊಂಡವರು ನೀವು ಮಾತ್ರವೋ? ಇಲ್ಲ! 37 ಯಾವನಾದರೂ ತಾನು ಪ್ರವಾದಿಯೆಂದು ಅಥವಾ ತನ್ನಲ್ಲಿ ಆತ್ಮಿಕ ವರವಿದೆಯೆಂದು ಯೋಚಿಸುವುದಾದರೆ, ಇದು ಪ್ರಭುವಿನ ಆಜ್ಞೆಯೆಂದು ಅವನು ಅರ್ಥಮಾಡಿಕೊಳ್ಳಬೇಕು. 38 ಯಾವನಾದರೂ ಇದನ್ನು ಒಪ್ಪಿಕೊಳ್ಳದಿದ್ದರೆ, ನೀವೂ ಅವನನ್ನು ಒಪ್ಪಿಕೊಳ್ಳಬಾರದು.
39 ಆದ್ದರಿಂದ ಸಹೋದರ ಸಹೋದರಿಯರೇ, ನೀವು ಪ್ರವಾದನಾ ವರವನ್ನು ನಿಜವಾಗಿಯೂ ಬಯಸಿರಿ. ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ಹೊಂದಿರುವವರು ತಮ್ಮ ವರವನ್ನು ಉಪಯೋಗಿಸಲಿ. ಅವರನ್ನು ತಡೆಯಬೇಡಿರಿ. 40 ಆದರೆ ಪ್ರತಿಯೊಂದನ್ನೂ ಸರಿಯಾದ ರೀತಿಯಲ್ಲಿ ಮತ್ತು ಕ್ರಮಬದ್ಧವಾಗಿ ಮಾಡಿರಿ.
Kannada Holy Bible: Easy-to-Read Version. All rights reserved. © 1997 Bible League International