Revised Common Lectionary (Semicontinuous)
ಜನರಲ್ಲಿ ನಂಬಿಕೆ, ದೇವರಲ್ಲಿ ನಂಬಿಕೆ
5 ಯೆಹೋವನು ಹೀಗೆ ಹೇಳಿದನು:
“ಕೇವಲ ಜನರನ್ನು ನಂಬಿದವರಿಗೆ ಕೇಡಾಗುವುದು.
ಮನುಷ್ಯರ ಬಲವನ್ನು ಆತುಕೊಂಡವರಿಗೆ ಕೇಡಾಗುವುದು.
ಯಾಕೆಂದರೆ ಅಂಥವರು ಯೆಹೋವನಲ್ಲಿ ನಂಬಿಕೆ ಇಡುವದನ್ನು ಬಿಟ್ಟುಬಿಟ್ಟಿರುತ್ತಾರೆ.
6 ಆ ಜನರು ನಿರ್ಜನವಾದ ಪ್ರದೇಶದಲ್ಲಿದ್ದ,
ಸುಡುವ ಬರಡು ಭೂಮಿಯಲ್ಲಿದ್ದ, ಬಂಜರು ಭೂಮಿಯಲ್ಲಿ ಬೆಳೆದ,
ದೇವರು ನೀಡಬಹುದಾದ ಒಳ್ಳೆಯ ವಸ್ತುಗಳ ಬಗ್ಗೆ
ಏನೂ ಅರಿಯದ ಒಂದು ಪೊದೆಯಂತಿರುತ್ತಾರೆ.
7 ಆದರೆ ಯೆಹೋವನಲ್ಲಿ ನಂಬಿಕೆಯುಳ್ಳ ಮನುಷ್ಯನು ದೇವರ ಕೃಪೆಗೆ ಪಾತ್ರನಾಗುವನು.
ಏಕೆಂದರೆ ತಾನು ನಂಬಿಕೆಯುಳ್ಳವನೆಂದು ಅವನು ಯೆಹೋವನಿಗೆ ತೋರಿಸಿಕೊಡುವನು.
8 ಆ ಮನುಷ್ಯನು ನೀರಿನ ಸಮೀಪದಲ್ಲಿ ನೆಟ್ಟಿರುವ,
ಆಳವಾಗಿ ಬೇರೂರಿ ನೀರಿನ ಸೆಲೆಗಳನ್ನು ತಲುಪಿರುವ,
ಉಷ್ಣಕ್ಕೆ ಹೆದರದ, ಯಾವಾಗಲೂ
ಹಸಿರೆಲೆಗಳಿಂದ ಸೊಂಪಾದ,
ಮಳೆ ಬೀಳದ ವರ್ಷದಲ್ಲಿಯೂ ಚಿಂತಿಸದ,
ಯಾವಾಗಲೂ ಫಲಭರಿತವಾಗಿರುವ ಮರದಂತೆ ಇರುವನು.
9 “ಮನುಷ್ಯನ ಬುದ್ಧಿಯು ವಂಚನೆ ಮಾಡುತ್ತದೆ.
ಆ ಬುದ್ಧಿಯು ಅತೀ ವ್ಯಾಧಿಗ್ರಸ್ತವಾಗಿರಬಹುದು,
ಯಾರಿಂದಲೂ ಬುದ್ಧಿಯ ನಿಜವಾದ ಸ್ವರೂಪವನ್ನರಿಯಲಾಗುವದಿಲ್ಲ.
10 ನಾನೇ ಯೆಹೋವನು,
ನಾನು ಮನುಷ್ಯನ ಹೃದಯದ ಆಳವನ್ನು ನೋಡಬಲ್ಲೆ,
ಮನುಷ್ಯನ ಬುದ್ಧಿಯನ್ನು ಪರೀಕ್ಷಿಸಬಲ್ಲೆ.
ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೆ ತಕ್ಕ ಪ್ರತಿಫಲವನ್ನು ನಾನು ನಿರ್ಧರಿಸಬಲ್ಲೆ.
ಪ್ರತಿಯೊಬ್ಬ ಮನುಷ್ಯನಿಗೆ ಅವನ ಕೆಲಸಕ್ಕೆ ತಕ್ಕಂತೆ ಸರಿಯಾಗಿ ಫಲವನ್ನು ಕೊಡುವೆನು.
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
ನಾವು ಪುನರುತ್ಥಾನ ಹೊಂದುವೆವು
12 ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ನಾವು ಬೋಧಿಸಿದ್ದೇವೆ. ಹೀಗಿರಲಾಗಿ, ಜನರಿಗೆ ಪುನರುತ್ಥಾನವಿಲ್ಲವೆಂದು ನಿಮ್ಮಲ್ಲಿ ಕೆಲವರು ಹೇಳುತ್ತಿರುವುದೇಕೆ? 13 ಜನರಿಗೆ ಪುನರುತ್ಥಾನವಿಲ್ಲದಿದ್ದರೆ ಕ್ರಿಸ್ತನು ಸಹ ಸತ್ತವರೊಳಗಿಂದ ಎದ್ದೇಬಂದಿಲ್ಲ. 14 ಕ್ರಿಸ್ತನು ಎದ್ದೇಬಂದಿಲ್ಲವಾದರೆ ನಮ್ಮ ಬೋಧನೆಗೂ ನಿಮ್ಮ ನಂಬಿಕೆಗೂ ಯಾವ ಬೆಲೆಯೂ ಇಲ್ಲ. 15 ಅಲ್ಲದೆ, ದೇವರ ಬಗ್ಗೆ ನಾವು ಸುಳ್ಳುಸಾಕ್ಷಿ ಹೇಳಿದಂತಾಗುವುದು. ಏಕೆಂದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಿದನೆಂದು ನಾವು ದೇವರ ಬಗ್ಗೆ ಬೋಧಿಸಿದೆವು. ಜನರು ಜೀವಂತವಾಗಿ ಎದ್ದುಬರದಿದ್ದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಲೇ ಇಲ್ಲ. 16 ಸತ್ತುಹೋದ ಜನರು ಎಬ್ಬಿಸಲ್ಪಡದಿದ್ದರೆ, ಕ್ರಿಸ್ತನು ಸಹ ಎಬ್ಬಿಸಲ್ಪಡಲೇ ಇಲ್ಲ. 17 ಕ್ರಿಸ್ತನು ಜೀವಂತವಾಗಿ ಎಬ್ಬಿಸಲ್ಪಟ್ಟಿಲ್ಲದಿದ್ದರೆ, ನಿಮ್ಮ ನಂಬಿಕೆಯು ನಿಷ್ಪ್ರಯೋಜಕವಾಗಿದೆ ಮತ್ತು ನೀವು ನಿಮ್ಮ ಪಾಪಗಳಿಂದ ಇನ್ನೂ ಅಪರಾಧಿಗಳಾಗಿದ್ದೀರಿ. 18 ಇದಲ್ಲದೆ ಕ್ರಿಸ್ತನಲ್ಲಿದ್ದು ಸತ್ತುಹೋದವರು ನಾಶವಾಗಿದ್ದಾರೆ. 19 ನಮಗೆ ಕ್ರಿಸ್ತನಲ್ಲಿರುವ ನಿರೀಕ್ಷೆಯು ಈ ಲೋಕಕ್ಕೆ ಮಾತ್ರ ಸೀಮಿತವಾಗಿದ್ದರೆ, ನಾವು ಬೇರೆಲ್ಲ ಜನರಿಗಿಂತಲೂ ದುಃಖಕ್ಕೆ ಪಾತ್ರರಾಗಿದ್ದೇವೆ.
20 ಆದರೆ ಕ್ರಿಸ್ತನು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ. ನಿದ್ರೆಹೋದವರಲ್ಲಿ ಅಂದರೆ ಸತ್ತುಹೋದ ಎಲ್ಲಾ ವಿಶ್ವಾಸಿಗಳಲ್ಲಿ ಆತನೇ ಪ್ರಥಮ ಫಲವಾದನು.
ಯೇಸುವಿನ ಉಪದೇಶ ಮತ್ತು ಜನರಿಗೆ ಆರೋಗ್ಯದಾನ
(ಮತ್ತಾಯ 4:23-25; 5:1-12)
17 ಯೇಸು ಮತ್ತು ಅಪೊಸ್ತಲರು ಬೆಟ್ಟದಿಂದಿಳಿದು ಸಮತಟ್ಟಾದ ಸ್ಥಳಕ್ಕೆ ಬಂದರು. ಆತನ ಹಿಂಬಾಲಕರ ಒಂದು ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮಿನಿಂದಲೂ ಜನಸಮೂಹವು ಅಲ್ಲಿಗೆ ಬಂದಿತ್ತು. 18 ಅವರೆಲ್ಲರು ಯೇಸುವಿನ ಉಪದೇಶವನ್ನು ಕೇಳುವುದಕ್ಕೂ ಆತನಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಜನರನ್ನು ಯೇಸು ವಾಸಿಮಾಡಿದನು. 19 ಜನರೆಲ್ಲರೂ ಯೇಸುವನ್ನು ಮುಟ್ಟುವುದಕ್ಕೆ ಪ್ರಯತ್ನಿಸಿದರು, ಏಕೆಂದರೆ ಆತನಿಂದ ಶಕ್ತಿಯು ಹರಿದುಬಂದು ಎಲ್ಲರನ್ನೂ ಗುಣಪಡಿಸುತ್ತಿತ್ತು!
20 ಯೇಸು ತನ್ನ ಶಿಷ್ಯರನ್ನು ನೋಡಿ ಹೇಳಿದ್ದೇನೆಂದರೆ,
“ಬಡವರಾದ ನೀವು ಧನ್ಯರು;
ದೇವರ ರಾಜ್ಯವು ನಿಮ್ಮದೇ.
21 ಹಸಿವೆಗೊಂಡಿರುವ ನೀವು ಧನ್ಯರು;
ನಿಮಗೆ ತೃಪ್ತಿಯಾಗುವುದು.
ಅಳುತ್ತಿರುವ ನೀವು ಧನ್ಯರು;
ಆನಂದದಿಂದ ನೀವು ನಗುವಿರಿ.
22 “ನೀವು ಮನುಷ್ಯಕುಮಾರನಿಗೆ ಸೇರಿದವರಾಗಿರುವುದರಿಂದ ಜನರು ನಿಮ್ಮನ್ನು ದ್ವೇಷಿಸಿದರೆ, ತುಚ್ಛೀಕರಿಸಿದರೆ, ಅವಮಾನ ಮಾಡಿದರೆ, ನಿಮ್ಮನ್ನು ಕೆಟ್ಟವರೆಂದು ಹೇಳಿದರೆ ನೀವು ಧನ್ಯರು. 23 ಆ ಸಮಯದಲ್ಲಿ ಆನಂದಪಡಿರಿ. ಏಕೆಂದರೆ ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು. ಈ ಜನರು ನಿಮಗೆ ಮಾಡಿದಂತೆಯೇ ಅವರ ಪಿತೃಗಳು ಪ್ರವಾದಿಗಳಿಗೆ ಮಾಡಿದರು.
24 “ಐಶ್ವರ್ಯವಂತರೇ, ನಿಮ್ಮ ಗತಿಯನ್ನು ಏನು ಹೇಳಲಿ!
ನೀವು ಸುಖಕರವಾದ ಜೀವನವನ್ನು ಅನುಭವಿಸಿದಿರಿ.
25 ಈಗ ಹೊಟ್ಟೆ ತುಂಬಿರುವ ಜನರೇ, ನಿಮ್ಮ ಗತಿಯನ್ನು ಏನು ಹೇಳಲಿ!
ನೀವು ಹಸಿಯುವಿರಿ.
ನಗುವ ಜನರೇ, ನಿಮ್ಮ ಗತಿಯನ್ನು ಏನು ಹೇಳಲಿ!
ನೀವು ದುಃಖಪಡುವಿರಿ ಮತ್ತು ಅಳುವಿರಿ.
26 “ಜನರಿಂದ ಯಾವಾಗಲೂ ಹೊಗಳಿಸಿಕೊಳ್ಳುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪಿತೃಗಳು ಸುಳ್ಳು ಪ್ರವಾದಿಗಳನ್ನು ಯಾವಾಗಲೂ ಹೊಗಳುತ್ತಿದ್ದರು.
Kannada Holy Bible: Easy-to-Read Version. All rights reserved. © 1997 Bible League International