Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 56

ಗತ್ ಎಂಬ ಊರಲ್ಲಿ ಫಿಲಿಷ್ಟಿಯರು ಸೆರೆಹಿಡಿದಾಗ ರಚಿಸಿಲ್ಪಟ್ಟಿತು. ರಚನೆಗಾರ: ದಾವೀದ.

56 ದೇವರೇ, ನನ್ನನ್ನು ಕರುಣಿಸು; ವೈರಿಗಳು ನನ್ನ ಮೇಲೆ ಆಕ್ರಮಣಮಾಡಿದ್ದಾರೆ.
    ಅವರು ಸತತವಾಗಿ ನನ್ನನ್ನು ಬೆನ್ನಟ್ಟಿ ಹೋರಾಡುತ್ತಿದ್ದಾರೆ.
ನನ್ನ ವೈರಿಗಳು ಸತತವಾಗಿ ನನ್ನ ಮೇಲೆ ಆಕ್ರಮಣ ಮಾಡುವರು.
    ಅವರಲ್ಲಿರುವ ಹೋರಾಟಗಾರರು ಅಸಂಖ್ಯಾತ.
ನಾನು ಭಯಗೊಂಡಾಗ, ನಿನ್ನಲ್ಲೇ ಭರವಸೆ ಇಡುವೆ.
ನಾನು ದೇವರಲ್ಲಿ ಭರವಸೆ ಇಟ್ಟಿರುವುದರಿಂದ ಜನರಿಗೆ ಭಯಪಡುವುದಿಲ್ಲ.
    ಕ್ಷಣಿಕರಾದ ಮಾನವರು ನನಗೇನು ಮಾಡಬಲ್ಲರು?
    ದೇವರ ವಾಗ್ದಾನಕ್ಕಾಗಿ ಆತನನ್ನು ಕೊಂಡಾಡುವೆನು.
ನನ್ನ ವೈರಿಗಳು ನನ್ನ ಮಾತುಗಳಿಗೆ ಅಪಾರ್ಥ ಮಾಡುವರು.
    ನನಗೆ ಕೇಡುಮಾಡಬೇಕೆಂದೇ ಅವರು ಯಾವಾಗಲೂ ಯೋಚಿಸುವರು.
ಅವರು ಒಟ್ಟುಗೂಡಿ ನನ್ನನ್ನು ಕೊಲ್ಲಲು
    ನನ್ನ ಹೆಜ್ಜೆಯನ್ನೇ ಹಿಂಬಾಲಿಸಿಕೊಂಡು ಬರುತ್ತಾರೆ.
ದೇವರೇ, ಅವರ ದುಷ್ಟತನದ ನಿಮಿತ್ತ ಅವರನ್ನು ಸೆರೆಯಾಳುಗಳಾಗಿ ಕಳುಹಿಸು.
    ಅವರು ಅನ್ಯ ಜನಾಂಗಗಳ ಕೋಪವನ್ನು ಅನುಭವಿಸುವಂತೆ ಹೊರಗಟ್ಟು.
ನನಗಾಗಿರುವ ದುಃಖವು ನಿನಗೆ ಗೊತ್ತಿದೆ.
    ನಾನು ಎಷ್ಚು ಅತ್ತಿರುವೆನೆಂದು ನಿನಗೆ ಗೊತ್ತಿದೆ.
ನನ್ನ ಕಣ್ಣೀರಿಗೆ ನೀನು ಖಂಡಿತವಾಗಿ ಲೆಕ್ಕವಿಟ್ಟಿರುವೆ.

ಆದ್ದರಿಂದ, ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುವಾಗ ನನ್ನ ಶತ್ರುಗಳನ್ನು ಸೋಲಿಸು.
ನೀನು ಮಾಡಬಲ್ಲೆ ಎಂದು ನನಗೆ ಗೊತ್ತಿದೆ; ನೀನೇ ದೇವರು!

10 ನಾನು ದೇವರನ್ನು ಆತನ ವಾಗ್ದಾನಕ್ಕಾಗಿ ಕೊಂಡಾಡುವೆನು.
    ಯೆಹೋವನು ನನಗೆ ಮಾಡಿರುವ ವಾಗ್ದಾನಕ್ಕಾಗಿ ನಾನು ಆತನನ್ನು ಕೊಂಡಾಡುವೆನು.
11 ನಾನು ದೇವರಲ್ಲಿ ಭರವಸವಿಟ್ಟಿರುವುದರಿಂದ ಜನರಿಗೆ ಭಯಪಡುವುದಿಲ್ಲ.
    ಕ್ಷಣಿಕರಾದ ಮಾನವರು ನನಗೇನು ಮಾಡಬಲ್ಲರು?

12 ದೇವರೇ, ನಾನು ನಿನಗೆ ವಿಶೇಷ ಹರಕೆಗಳನ್ನು ಮಾಡಿದ್ದೇನೆ.
    ನಾನು ಮಾಡಿದ ಹರಕೆಗಳನ್ನು ಸಲ್ಲಿಸುವೆನು.
    ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
13 ಯಾಕೆಂದರೆ ನೀನು ನನ್ನನ್ನು ಮರಣದಿಂದ ರಕ್ಷಿಸಿದೆ;
    ನೀನು ನನ್ನನ್ನು ಸೋಲಿನಿಂದ ತಪ್ಪಿಸಿದೆ.
ಆದ್ದರಿಂದ, ಜೀವಂತರಾಗಿರುವ ಜನರು ಮಾತ್ರ
    ನೋಡಬಹುದಾದ ಬೆಳಕಿನಲ್ಲಿ ನಾನು ದೇವರನ್ನು ಆರಾಧಿಸುವೆನು.

ಯೆರೆಮೀಯ 1:11-19

ಎರಡು ದರ್ಶನಗಳು

11 ಯೆಹೋವನಿಂದ ನನಗೆ ಈ ಸಂದೇಶ ಬಂದಿತು: “ಯೆರೆಮೀಯನೇ, ನಿನಗೆ ಏನು ಕಾಣುತ್ತಿದೆ?” ಎಂದು ಯೆಹೋವನು ಕೇಳಿದನು.

ನಾನು ಆತನಿಗೆ, “ಬಾದಾಮಿಯ ಮರದಿಂದ ಮಾಡಿದ ಒಂದು ದಂಡ ಕಾಣಿಸುತ್ತಿದೆ” ಎಂದು ಉತ್ತರಕೊಟ್ಟೆನು.

12 ಆಗ ಯೆಹೋವನು, “ನೀನು ಸರಿಯಾಗಿ ನೋಡಿರುವೆ, ನನ್ನ ಮಾತನ್ನು ನೆರವೇರಿಸಲು ಎಚ್ಚರಗೊಂಡಿದ್ದೇನೆ” ಎಂದು ತಿಳಿದುಕೊ ಎಂಬುದಾಗಿ ಹೇಳಿದನು.

13 ಇನ್ನೊಂದು ಸಲ ಯೆಹೋವನು, “ನಿನಗೆ ಏನು ಕಾಣುತ್ತಿದೆ?” ಎಂದು ಕೇಳಿದನು.

ನಾನು ಯೆಹೋವನಿಗೆ, “ಕುದಿಯುವ ನೀರಿನ ಒಂದು ಹಂಡೆ ಕಾಣುತ್ತಿದೆ. ಆ ಹಂಡೆಯು ಉತ್ತರದಿಂದ ಈ ಕಡೆಗೆ ಬಾಗಿಕೊಂಡಿದೆ” ಎಂದು ಉತ್ತರಿಸಿದೆನು.

14 ಯೆಹೋವನು ನನಗೆ, “ಉತ್ತರ ದಿಕ್ಕಿನಿಂದ
    ಈ ದೇಶದ ನಿವಾಸಿಗಳೆಲ್ಲರ ಮೇಲೆ ಒಂದು ಕೇಡು ಬರುವದು.
15 ಸ್ವಲ್ಪ ಸಮಯದಲ್ಲಿಯೇ ನಾನು ಉತ್ತರ ರಾಜ್ಯಗಳ ಎಲ್ಲಾ ಜನರನ್ನು ಕರೆಯುತ್ತೇನೆ” ಎಂದನು.
ಮತ್ತೆ ಯೆಹೋವನು ಹೀಗೆ ಹೇಳಿದನು:

“ಆ ದೇಶಗಳ ರಾಜರು ಬರುವರು.
    ಅವರು ಜೆರುಸಲೇಮಿನ ಹೆಬ್ಬಾಗಿಲಿನ ಹತ್ತಿರ ತಮ್ಮ ಆಸನಗಳನ್ನು ಹಾಕುವರು.
ಅವರು ಜೆರುಸಲೇಮಿನ ಎಲ್ಲಾ ಕೋಟೆಗೋಡೆಗಳಿಗೆ ಮುತ್ತಿಗೆಹಾಕುವರು.
    ಅವರು ಯೆಹೂದ ಪ್ರದೇಶದ ಎಲ್ಲಾ ನಗರಗಳ ಮೇಲೆ ಧಾಳಿ ಮಾಡುವರು.
16 ನಾನು ನನ್ನ ಜನರ ವಿರುದ್ಧ ನನ್ನ ನ್ಯಾಯನಿರ್ಣಯವನ್ನು ಘೋಷಿಸುವೆನು.
    ಅವರು ಕೆಟ್ಟ ಜನರು, ಅವರು ನನ್ನ ವಿರೋಧಿಗಳಾಗಿದ್ದಾರೆ.
ನನ್ನ ಜನರು ನನ್ನನ್ನು ತ್ಯಜಿಸಿದ್ದಾರೆ.
    ಅವರು ನನ್ನನ್ನು ಹೇಗೆ ತ್ಯಜಿಸಿದರು?
ಅವರು ಅನ್ಯದೇವರುಗಳಿಗೆ ಹೋಮ ಮಾಡಿದರು.
    ಅವರು ತಮ್ಮ ಕೈಗಳಿಂದಲೇ ಮಾಡಿದ ವಿಗ್ರಹಗಳನ್ನು ಪೂಜಿಸಿದರು.

17 “ಯೆರೆಮೀಯನೇ, ಸಿದ್ಧನಾಗು! ಎದ್ದುನಿಲ್ಲು!
    ನಾನು ಹೇಳಿದ್ದೆಲ್ಲವನ್ನು ಜನರಿಗೆ ಹೇಳು.
    ಅವರಿಗೆ ಹೆದರಬೇಡ.
ನೀನು ಅವರಿಗೆ ಹೆದರಿಕೊಂಡರೆ,
    ನಾನು ನಿನ್ನನ್ನು ಅವರೆದುರಿನಲ್ಲಿ ಹೆದರಿಸುವೆನು.
18 ಇಗೋ, ನೀನು ನನ್ನ ವಿಷಯವಾಗಿ ಹೇಳಬೇಕು.
    ನಾನು ನಿನ್ನನ್ನು ಭದ್ರವಾದ ನಗರವನ್ನಾಗಿಯೂ
    ಕಬ್ಬಿಣದ ಕಂಬವನ್ನಾಗಿಯೂ
    ಕಂಚಿನ ಗೋಡೆಯನ್ನಾಗಿಯೂ ಮಾಡುತ್ತೇನೆ.
ನೀನು ದೇಶದಲ್ಲಿ ಎಲ್ಲರಿಗೂ ಎದುರಾಗಿ ನಿಲ್ಲಬಹುದು,
    ಯೆಹೂದ ದೇಶದ ರಾಜರ ವಿರುದ್ಧವಾಗಿಯೂ
    ಯೆಹೂದದ ನಾಯಕರ ವಿರುದ್ಧವಾಗಿಯೂ
    ಯೆಹೂದದ ಯಾಜಕರ ವಿರುದ್ಧವಾಗಿಯೂ
    ಯೆಹೂದದೇಶದ ಜನರ ವಿರುದ್ಧವಾಗಿಯೂ ನೀನು ನಿಲ್ಲುವೆ.
19 ಆ ಜನರೆಲ್ಲಾ ನಿನ್ನ ವಿರುದ್ಧ ಹೋರಾಡುವರು,
    ಆದರೆ ಅವರು ನಿನ್ನನ್ನು ಸೋಲಿಸಲಾಗುವುದಿಲ್ಲ.
ಏಕೆಂದರೆ ನಾನೇ ನಿನ್ನೊಂದಿಗೆ ಇರುವೆನು.
    ನಾನೇ ನಿನ್ನನ್ನು ರಕ್ಷಿಸುವೆನು.”
ಇದು ಯೆಹೋವನಾದ ನನ್ನ ಮಾತು.

ಲೂಕ 19:41-44

ಜೆರುಸಲೇಮಿನ ವಿಷಯದಲ್ಲಿ ಯೇಸು ಅತ್ತನು

41 ಯೇಸು ಜೆರುಸಲೇಮಿನ ಸಮೀಪಕ್ಕೆ ಬಂದಾಗ ಆ ಪಟ್ಟಣವನ್ನು ನೋಡಿ ಅದರ ವಿಷಯದಲ್ಲಿ ಕಣ್ಣೀರಿಟ್ಟು 42 ಜೆರುಸಲೇಮಿಗೆ, “ನಿನಗೆ ಯಾವುದರಿಂದ ಸಮಾಧಾನವಾಗುತ್ತದೆ ಎಂಬುದನ್ನು ನೀನು ಇಂದೇ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದಾಗಿತ್ತು! ಆದರೆ ನೀನು ಅದನ್ನು ತಿಳಿಯಲಾರೆ, ಏಕೆಂದರೆ ಅದು ನಿನಗೆ ಮರೆಯಾಗಿದೆ. 43 ನಿನ್ನ ವೈರಿಗಳು ನಿನ್ನ ಸುತ್ತಲೂ ಗೋಡೆ ಕಟ್ಟಿ ನಿನ್ನನ್ನು ಎಲ್ಲಾ ಕಡೆಗಳಿಂದಲೂ ಮುತ್ತಿಗೆ ಹಾಕಿ, 44 ನಿನ್ನನ್ನೂ ನಿನ್ನ ಜನರೆಲ್ಲರನ್ನೂ ನಾಶಮಾಡುವರು. ನಿನ್ನ ಕಟ್ಟಡಗಳಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ದೇವರು ನಿನ್ನನ್ನು ರಕ್ಷಿಸುವುದಕ್ಕೆ ಬಂದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ ಇದೆಲ್ಲಾ ನಿನಗೆ ಸಂಭವಿಸುವುದು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International