Revised Common Lectionary (Semicontinuous)
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
ಯೆಹೂದಕ್ಕೆ ಕೊಟ್ಟ ಎಚ್ಚರಿಕೆಗಳು
12 “ಯೆರೆಮೀಯನೇ, ಯೆಹೂದದ ಜನರಿಗೆ, ‘ಇಸ್ರೇಲಿನ ದೇವರಾದ ಯೆಹೋವನು ಪ್ರತಿಯೊಂದು ಚರ್ಮದ ಬುದ್ದಲಿಯು ದ್ರಾಕ್ಷಾರಸದಿಂದ ತುಂಬಿರಬೇಕು ಎಂದು ಹೇಳುತ್ತಾನೆ’ ಎಂದು ಹೇಳು. ಆಗ ಆ ಜನರು ನಕ್ಕು, ‘ಪ್ರತಿಯೊಂದು ಚರ್ಮದ ಬುದ್ದಲಿಯು ದ್ರಾಕ್ಷಾರಸದಿಂದ ತುಂಬಿರಬೇಕೆಂಬುದು ನಮಗೆ ಚೆನ್ನಾಗಿ ಗೊತ್ತು’ ಎಂದು ನಿನಗೆ ಹೇಳುತ್ತಾರೆ. 13 ಆಗ ನೀನು ಅವರಿಗೆ, ‘ಯೆಹೋವನು ಹೀಗೆ ಹೇಳುತ್ತಾನೆ ಎಂದು ಹೇಳು. ಈ ಪ್ರದೇಶದಲ್ಲಿ ವಾಸಮಾಡುವ ಪ್ರತಿಯೊಬ್ಬ ಮನುಷ್ಯನನ್ನು ಕುಡಿದು ಮತ್ತನಾದವನಂತೆ ಅಸಹಾಯಕನನ್ನಾಗಿ ಮಾಡುತ್ತೇನೆ. ನಾನು ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ರಾಜರ ಬಗ್ಗೆ ಹೇಳುತ್ತಿದ್ದೇನೆ. ನಾನು ಯಾಜಕರ, ಪ್ರವಾದಿಗಳ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಎಲ್ಲಾ ಜನರ ಬಗ್ಗೆಯೂ ಹೇಳುತ್ತಿದ್ದೇನೆ. 14 ಯೆಹೂದದ ಜನರು ಎಡವಿ, ಒಬ್ಬರಮೇಲೊಬ್ಬರು ಬೀಳುವಂತೆ ನಾನು ಮಾಡುವೆನು. ತಂದೆ ಮತ್ತು ಮಕ್ಕಳು ಒಬ್ಬರಮೇಲೊಬ್ಬರು ಬೀಳುವರು.’” ಇದು ಯೆಹೋವನ ನುಡಿ. “‘ನಾನು ಅವರಿಗಾಗಿ ಕನಿಕರಪಡುವದಿಲ್ಲ ಅಥವಾ ಕರುಣೆ ತೋರಿಸುವದಿಲ್ಲ. ಯೆಹೂದದ ಜನರ ವಿನಾಶವನ್ನು ಕರುಣೆಯು ತಡೆಯದಂತೆ ನೋಡಿಕೊಳ್ಳುತ್ತೇನೆ.’”
15 ಕೇಳಿರಿ, ಗಮನ ಕೊಡಿರಿ;
ದೇವರು ನಿಮಗೆ ಹೇಳಿದ್ದಾನೆ.
ಗರ್ವಪಡಬೇಡಿರಿ.
16 ನಿಮ್ಮ ದೇವರಾದ ಯೆಹೋವನು
ಅಂಧಕಾರವನ್ನು ಉಂಟುಮಾಡುವ ಮೊದಲೇ ಆತನನ್ನು ಗೌರವಿಸಿರಿ,
ಕಗ್ಗತ್ತಲಿನ ಬೆಟ್ಟಗಳ ಮೇಲೆ ನೀವು ಬೀಳುವ ಮೊದಲೇ ಆತನನ್ನು ಸ್ತುತಿಸಿರಿ.
ಯೆಹೂದದ ಜನರಾದ ನೀವು ಬೆಳಕನ್ನು ನಿರೀಕ್ಷಿಸುತ್ತಿದ್ದೀರಿ.
ಆದರೆ ಯೆಹೋವನು ಬೆಳಕನ್ನು ಗಾಢಾಂಧಕಾರವನ್ನಾಗಿ ಪರಿವರ್ತಿಸುವನು.
17 ಯೆಹೂದದ ಜನರಾದ ನೀವು ಯೆಹೋವನ ಮಾತನ್ನು ಕೇಳದಿದ್ದರೆ,
ನಾನು ಗುಟ್ಟಾದ ಸ್ಥಳದಲ್ಲಿ ಅಳುವೆನು.
ನಿಮ್ಮ ಅಹಂಕಾರವು ನನ್ನನ್ನು ಅಳುವ ಹಾಗೆ ಮಾಡುವುದು.
ನಾನು ಬಹಳ ಗಟ್ಟಿಯಾಗಿ ಅಳುವೆನು,
ನನ್ನ ಕಣ್ಣುಗಳಿಂದ ಕಣ್ಣೀರು ಹೊರಸೂಸುವುದು.
ಏಕೆಂದರೆ ಯೆಹೋವನ ಮಂದೆಯು ಸೆರೆಹಿಡಿಯಲ್ಪಡುವುದು.
18 ಈ ಸಂಗತಿಗಳನ್ನು ರಾಜನಿಗೂ ರಾಣಿಗೂ ಹೇಳಿರಿ:
“ನಿಮ್ಮ ಸಿಂಹಾಸನಗಳಿಂದ ಕೆಳಗಿಳಿದು ಬನ್ನಿ.
ನಿಮ್ಮ ಸುಂದರವಾದ ಕಿರೀಟಗಳು ನಿಮ್ಮ ತಲೆಯಿಂದ ಉರುಳಿ ಕೆಳಗೆ ಬಿದ್ದಿವೆ” ಎಂದು ಹೇಳಿರಿ.
19 ನೆಗೆವ್ ಮರುಭೂಮಿಯ ಎಲ್ಲಾ ನಗರಗಳಿಗೆ ಬೀಗ ಹಾಕಲಾಗಿದೆ.
ಅವುಗಳನ್ನು ತೆರೆಯುವುದು ಯಾರಿಂದಲೂ ಸಾಧ್ಯವಿಲ್ಲ.
ಯೆಹೂದದ ಎಲ್ಲಾ ಜನರು ಸೆರೆ ಒಯ್ಯಲ್ಪಟ್ಟಿದ್ದಾರೆ.
ಅವರೆಲ್ಲರನ್ನು ಸೆರೆಯಾಳುಗಳಾಗಿ ತೆಗೆದುಕೊಂಡು ಹೋಗಲಾಗಿದೆ.
26 “ನನ್ನ ಸಹೋದರರೇ, ಅಬ್ರಹಾಮನ ಕುಟುಂಬದ ಪುತ್ರರೇ, ನಿಜದೇವರನ್ನು ಆರಾಧಿಸುತ್ತಿರುವ ಯೆಹೂದ್ಯರಲ್ಲದವರೇ, ಕೇಳಿರಿ! ಈ ರಕ್ಷಣೆಯ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ. 27 ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಹೂದ್ಯರು ಮತ್ತು ಯೆಹೂದ್ಯನಾಯಕರು ಯೇಸುವೇ ರಕ್ಷಕನೆಂಬುದನ್ನು ಅರ್ಥಮಾಡಿಕೊಳ್ಳಲಿಲ್ಲ. ಪ್ರವಾದಿಗಳು ಯೇಸುವಿನ ಬಗ್ಗೆ ಬರೆದಿದ್ದ ಮಾತುಗಳನ್ನು ಪ್ರತಿ ಸಬ್ಬತ್‌ದಿನದಂದು ಓದಲಾಗುತ್ತಿತ್ತು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ. ಆ ಯೆಹೂದ್ಯರು ಯೇಸುವನ್ನು ಅಪರಾಧಿಯೆಂದು ತೀರ್ಪುಮಾಡಿದರು. ಹೀಗೆ ಮಾಡುವುದರ ಮೂಲಕವಾಗಿ ಅವರು ಪ್ರವಾದಿಗಳ ನುಡಿಗಳನ್ನು ನೆರವೇರಿಸಿದರು! 28 ಯೇಸು ಸಾಯಲೇಬೇಕೆಂಬುದಕ್ಕೆ ಸರಿಯಾದ ಕಾರಣವನ್ನು ಅವರು ಕಂಡುಹಿಡಿಯಲಾಗದಿದ್ದರೂ ಯೇಸುವನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು.
29 “ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಯೇಸುವಿಗೆ ಸಂಭವಿಸಬೇಕಾಗಿದ್ದ ಕೆಟ್ಟವುಗಳನ್ನೆಲ್ಲ ಯೆಹೂದ್ಯರು ಆತನಿಗೆ ಮಾಡಿದರು. ಬಳಿಕ ಅವರು ಯೇಸುವನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಯಲ್ಲಿಟ್ಟರು. 30 ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ಇದಾದ ಮೇಲೆ ಗಲಿಲಾಯದಿಂದ ಯೇಸುವಿನೊಂದಿಗೆ ಜೆರುಸಲೇಮಿಗೆ ಬಂದಿದ್ದವರು, ಅನೇಕ ದಿನಗಳವರೆಗೆ ಆತನನ್ನು ನೋಡಿದರು. ಈಗ ಅವರೇ ಜನರಿಗೆ ಸಾಕ್ಷಿಗಳಾಗಿದ್ದಾರೆ.
32 “ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ವಿಷಯವಾದ ಸುವಾರ್ತೆಯನ್ನು ನಾವು ನಿಮಗೆ ಹೇಳುತ್ತೇವೆ. 33 ನಾವು ಅವರ ಸಂತತಿಯವರಾಗಿದ್ದೇವೆ. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವುದರ ಮೂಲಕ ಆ ವಾಗ್ದಾನವನ್ನು ನಮಗಾಗಿ ನೆರವೇರಿಸಿದ್ದಾನೆ. ಇದರ ಬಗ್ಗೆ ಎರಡನೆ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ:
‘ನೀನೇ ನನ್ನ ಮಗನು.
ಇಂದೇ ನಾನು ನಿನ್ನನ್ನು ಪಡೆದೆನು.’(A)
34 ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಸಮಾಧಿಗೆ ಸೇರಿ ಕೊಳೆಯುವುದಿಲ್ಲ ಎಂಬ ವಿಷಯದಲ್ಲಿ ದೇವರು ಇಂತೆಂದಿದ್ದಾನೆ:
‘ನಾನು ದಾವೀದನಿಗೆ ಮಾಡಿದ ಸತ್ಯವೂ ಪವಿತ್ರವೂ
ಆದ ವಾಗ್ದಾನಗಳನ್ನು ನಿನಗೆ ಕೊಡುತ್ತೇನೆ.’(B)
Kannada Holy Bible: Easy-to-Read Version. All rights reserved. © 1997 Bible League International