Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 115

115 ಯೆಹೋವನೇ, ಘನಮಾನಗಳು ನಮ್ಮವಲ್ಲ!
    ಅವು ನಿನ್ನವೇ.
ನಿನ್ನ ಪ್ರೀತಿಯ ನಿಮಿತ್ತವಾಗಿಯೂ ನಂಬಿಗಸ್ತಿಕೆಯ ನಿಮಿತ್ತವಾಗಿಯೂ ಘನಮಾನಗಳು ನಿನಗೇ ಸಲ್ಲತಕ್ಕದ್ದು.
ಅವರ ದೇವರು ಎಲ್ಲಿದ್ದಾನೆಂದು ಜನಾಂಗಗಳು ಯಾಕೆ ಹೇಳಬೇಕು?
ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಬಯಸಿದ್ದನ್ನೆಲ್ಲಾ ಮಾಡುತ್ತಾನೆ.
ಅನ್ಯಜನಾಂಗಗಳ “ದೇವರುಗಳು” ಬೆಳ್ಳಿಬಂಗಾರಗಳಿಂದ ಮಾಡಿದ ವಿಗ್ರಹಗಳಷ್ಟೇ.
    ಅವುಗಳನ್ನು ಮಾಡಿದವರು ಮನುಷ್ಯರೇ.
ಆ ವಿಗ್ರಹಗಳಿಗೆ ಬಾಯಿಗಳಿವೆ, ಆದರೆ ಮಾತಾಡಲಾರವು.
    ಕಣ್ಣುಗಳಿವೆ, ಆದರೆ ನೋಡಲಾರವು.
ಕಿವಿಗಳಿವೆ, ಆದರೆ ಕೇಳಲಾರವು.
    ಮೂಗುಗಳಿವೆ, ಆದರೆ ಮೂಸಲಾರವು.
ಕೈಗಳಿವೆ, ಆದರೆ ಯಾವುದನ್ನೂ ಮುಟ್ಟಲಾರವು.
    ಕಾಲುಗಳಿವೆ, ಆದರೆ ನಡೆಯಲಾರವು.
    ಅವುಗಳ ಗಂಟಲುಗಳಿಂದ ಶಬ್ದವೇ ಹೊರಡದು.
ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಟ್ಟಿರುವವರೂ ಅವುಗಳಂತೆಯೇ.

ಇಸ್ರೇಲರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
11 ಯೆಹೋವನ ಭಕ್ತರು ಆತನಲ್ಲಿ ಭರವಸವಿಡುವರು.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.

12 ಯೆಹೋವನು ನಮ್ಮನ್ನು ಜ್ಞಾಪಕಮಾಡಿಕೊಂಡು ಆಶೀರ್ವದಿಸುವನು.
    ಆತನು ಇಸ್ರೇಲನ್ನೂ ಆರೋನನ ಮನೆತನವನ್ನೂ ಆಶೀರ್ವದಿಸುವನು.
13 ಆತನು ದೊಡ್ಡವರೂ ಚಿಕ್ಕವರೂ ಎಂದೆನ್ನದೆ ತನ್ನ ಭಕ್ತರನ್ನೆಲ್ಲಾ ಆಶೀರ್ವದಿಸುವನು.

14 ಯೆಹೋವನು ನಿಮ್ಮ ಕುಟುಂಬಗಳನ್ನೂ ನಿಮ್ಮ ಮಕ್ಕಳ ಕುಟುಂಬಗಳನ್ನೂ ಅಭಿವೃದ್ಧಿಪಡಿಸಲಿ.
15     ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
    ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಮಾಡಿದಾತನು ಆತನೇ.
16 ಪರಲೋಕವು ಯೆಹೋವನದು.
    ಆತನು ಭೂಲೋಕವನ್ನು ಮನುಷ್ಯರಿಗೆ ಕೊಟ್ಟನು.
17 ಸತ್ತುಹೋದವರು ಯೆಹೋವನನ್ನು ಕೊಂಡಾಡುವುದಿಲ್ಲ.
    ಸಮಾಧಿಯೊಳಗಿರುವವರು ಆತನನ್ನು ಸ್ತುತಿಸುವುದಿಲ್ಲ.
18 ನಾವಾದರೋ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು!

ಯೆಹೋವನಿಗೆ ಸ್ತೋತ್ರ!

ಯೆಶಾಯ 8:1-15

ಅಶ್ಶೂರವು ಬೇಗನೇ ಬರುವದು

ಯೆಹೋವನು ಹೇಳಿದ್ದೇನೆಂದರೆ, “ಒಂದು ದೊಡ್ಡ ಸುರುಳಿಯನ್ನು ತಂದು ಅದರ ಮೇಲೆ ಹೀಗೆ ಲೇಖನಿಯಿಂದ ಬರೆ: ‘ಮಹೇರ್ ಶಾಲಾಲ್ ಹಾಷ್ ಬಜ್‌.’” (ಇದರರ್ಥ: “ಕೊಳ್ಳೆಗೆ ಅವಸರ, ಸೂರೆಗೆ ಆತುರ.”)

ನಾನು ನಂಬಿಗಸ್ತರಾದ ಕೆಲವು ಜನರನ್ನು ಸಾಕ್ಷಿಗೋಸ್ಕರವಾಗಿ ಆರಿಸಿಕೊಂಡೆನು. (ಅವರು ಯಾರೆಂದರೆ, ಯಾಜಕನಾದ ಊರೀಯ ಮತ್ತು ಯೆಬೆರೆಕ್ಯನ ಮಗನಾದ ಜೆಕರ್ಯ.) ನಾನು ಆ ವಾಕ್ಯವನ್ನು ಬರೆಯುವಾಗ ಇವರು ನೋಡುತ್ತಿದ್ದರು. ಆಮೇಲೆ ನಾನು ಒಬ್ಬ ಪ್ರವಾದಿನಿಯ ಬಳಿಗೆ ಹೋದೆನು. ಆಕೆಯನ್ನು ಕೂಡಲು, ಆಕೆ ಗರ್ಭವತಿಯಾಗಿ ಒಬ್ಬ ಮಗನನ್ನು ಹಡೆದಳು. ಆಗ ಯೆಹೋವನು ನನಗೆ, “‘ಆ ಮಗನಿಗೆ ಮಹೇರ್ ಶಾಲಾಲ್ ಹಾಷ್ ಬಜ್‌’ ಎಂಬ ಹೆಸರನ್ನಿಡು. ಯಾಕೆಂದರೆ ಆ ಮಗನು ಅಪ್ಪಾ, ಅಮ್ಮಾ ಎಂದು ಕರೆಯಲು ತೊಡಗುವ ಮೊದಲೇ ದೇವರು ದಮಸ್ಕ ಮತ್ತು ಸಮಾರ್ಯದ ಎಲ್ಲಾ ಐಶ್ವರ್ಯವನ್ನು ತೆಗೆದು ಅದನ್ನು ಅಶ್ಶೂರದ ಅರಸನಿಗೆ ಕೊಡುವನು” ಎಂದು ಹೇಳಿದನು.

ಮತ್ತೆ ಯೆಹೋವನು ನನ್ನೊಂದಿಗೆ ಮಾತನಾಡಿದನು. ನನ್ನ ಒಡೆಯನು ಹೀಗೆಂದನು: “ಈ ಜನರು ನಿಧಾನವಾಗಿ ಹರಿಯುವ ಸಿಲೋವ ಕೊಳದ ನೀರನ್ನು ಸ್ವೀಕರಿಸುವುದಿಲ್ಲ. ಇವರು ರೆಚೀನ್ ಮತ್ತು ರೆಮಲ್ಯನ ಮಗನೊಂದಿಗೆ ಸಂತೋಷದಲ್ಲಿದ್ದಾರೆ. ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ಅಶ್ಶೂರದ ಅರಸನನ್ನೂ ಅವನ ಸಮಸ್ತ ಸೈನ್ಯವನ್ನೂ ತರುವೆನು. ಅವರು ಯೂಫ್ರೇಟೀಸ್ ನದಿಯ ರಭಸದ ಪ್ರವಾಹದ ನೀರಿನಂತೆ ಬರುವರು. ಅವರು ನದಿಯ ದಂಡೆಯ ಮೇಲೆ ಏರಿಬರುವ ನೀರಿನಂತಿರುವರು. ಆ ನೀರು ಹೊಳೆಯಿಂದಾಚೆ ಬಂದು ಯೆಹೂದದ ಮೇಲೆ ಹರಿಯುವುದು. ಆ ನೀರು ಏರುತ್ತಾಬಂದು ಯೆಹೂದವನ್ನು ಕುತ್ತಿಗೆಯ ತನಕ ಮುಳುಗಿಸುವದು ಮಾತ್ರವಲ್ಲ ಅದನ್ನು ಸಂಪೂರ್ಣವಾಗಿ ಮುಳುಗಿಸಿಬಿಡುವದು.

“ಇಮ್ಮಾನುವೇಲನೇ, ಈ ಜಲಪ್ರವಾಹವು ಎಲ್ಲಾ ಕಡೆಗಳಿಗೆ ಹಬ್ಬುತ್ತಾ ನಿಮ್ಮ ದೇಶವನ್ನು ಪೂರ್ತಿಯಾಗಿ ಮುಚ್ಚಿಬಿಡುವದು.”

ಸಮಸ್ತ ಜನಾಂಗಗಳೇ, ಯುದ್ಧಕ್ಕೆ ಸಿದ್ಧರಾಗಿ!
    ನೀವು ಸೋಲುವಿರಿ.
ದೂರದೇಶದವರೇ, ಕೇಳಿರಿ,
    ರಣರಂಗಕ್ಕಿಳಿಯಲು ಸಿದ್ಧರಾಗಿ!
    ನೀವು ಸೋಲುವಿರಿ.
10 ಯುದ್ಧ ಮಾಡಲು ಯೋಜನೆ ಹಾಕಿರಿ.
    ಆದರೆ ನಿಮ್ಮ ಯೋಜನೆಯೆಲ್ಲಾ ನಿಷ್ಫಲವಾಗುವುದು.
ನಿಮ್ಮ ಸೈನ್ಯಕ್ಕೆ ಆಜ್ಞೆಕೊಡಿರಿ.
    ಆದರೆ ಅದು ನಿಷ್ಪ್ರಯೋಜಕವಾಗುವುದು.
    ಯಾಕೆಂದರೆ ದೇವರು ನಮ್ಮೊಂದಿಗಿದ್ದಾನೆ!

ಯೆಶಾಯನಿಗೆ ಎಚ್ಚರಿಕೆ

11 ಯೆಹೋವನು ತನ್ನ ಮಹಾಶಕ್ತಿಯಿಂದ ನನ್ನೊಡನೆ ಮಾತನಾಡಿದನು. ನಾನು ಇತರರಂತೆ ಇರಬಾರದೆಂದು ಯೆಹೋವನು ನನ್ನನ್ನು ಎಚ್ಚರಿಸಿದನು. ಆತನು ನನಗೆ, 12 “ಪ್ರತಿಯೊಬ್ಬನೂ ‘ಇನ್ನೊಬ್ಬನು ನಿನಗೆ ವಿರುದ್ಧವಾಗಿ ಕೇಡು ಬಗೆಯುತ್ತಾನೆ’ ಎಂದು ಹೇಳುವನು. ಅದನ್ನು ನೀನು ನಂಬಬೇಡ. ಆ ಜನರು ಭಯಪಡುವ ವಿಷಯಗಳಿಗೆ ನೀನು ಭಯಪಡಬೇಡ.

13 “ಸರ್ವಶಕ್ತನಾದ ಯೆಹೋವನೊಬ್ಬನಿಗೇ ನೀನು ಭಯಪಡಬೇಕು. ಆತನನ್ನೇ ನೀನು ಗೌರವಿಸಬೇಕು. ನೀನು ಭಯಪಡಬೇಕಾದದ್ದು ಆತನೊಬ್ಬನಿಗೇ. 14 ನೀನು ಯೆಹೋವನನ್ನು ಪರಿಶುದ್ಧನೆಂದು ಪರಿಗಣಿಸಿ ಗೌರವಿಸಿದರೆ, ಆತನು ನಿನಗೆ ಆಶ್ರಯನಾಗುವನು. ಆದರೆ ನೀನು ಆತನನ್ನು ಸನ್ಮಾನಿಸದೆ ಹೋದರೆ ಆತನು ನಿನಗೆ ಮುಗ್ಗರಿಸುವ ಕಲ್ಲಾಗಿ ಪರಿಣಮಿಸುವನು. ಆತನು ಇಸ್ರೇಲಿನ ಎರಡು ಕುಟುಂಬಗಳವರಿಗೆ ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಗಿರುವನು. ಯೆಹೋವನು ಜೆರುಸಲೇಮಿನ ಎಲ್ಲಾ ಜನರನ್ನು ಹಿಡಿಯುವ ಬಲೆಯಾಗಿರುವನು. 15 ಎಷ್ಟೋ ಜನರು ಈ ಬಂಡೆಯಿಂದ ಎಡವಿಬೀಳುವರು. ಅವರು ಬಿದ್ದು ಮುರಿಯಲ್ಪಡುವರು; ಬಲೆಗೆ ಸಿಕ್ಕಿಕೊಳ್ಳುವರು.”

ಲೂಕ 5:27-32

ಯೇಸುವನ್ನು ಹಿಂಬಾಲಿಸಿದ ಲೇವಿ

(ಮತ್ತಾಯ 9:9-13; ಮಾರ್ಕ 2:13-17)

27 ಬಳಿಕ, ಯೇಸು ಅಲ್ಲಿಂದ ಹೋಗುತ್ತಿರುವಾಗ, ಸುಂಕದಕಟ್ಟೆಯಲ್ಲಿ ಕುಳಿತುಕೊಂಡಿದ್ದ ಒಬ್ಬನನ್ನು ಕಂಡನು. ಅವನ ಹೆಸರು ಲೇವಿ. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು!” ಎಂದು ಹೇಳಿದನು. 28 ಲೇವಿಯು ಎದ್ದು, ಎಲ್ಲವನ್ನೂ ಅಲ್ಲಿಯೇ ಬಿಟ್ಟು ಯೇಸುವನ್ನು ಹಿಂಬಾಲಿಸಿದನು.

29 ಬಳಿಕ ಲೇವಿಯು ಯೇಸುವಿಗೆ ತನ್ನ ಮನೆಯಲ್ಲಿ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಅನೇಕ ಸುಂಕವಸೂಲಿಗಾರರು ಮತ್ತು ಇನ್ನಿತರ ಜನರು ಸಹ ಊಟಕ್ಕೆ ಕುಳಿತಿದ್ದರು. 30 ಆದರೆ ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿನ ಶಿಷ್ಯರಿಗೆ, “ನೀವು ಸುಂಕದವರೊಡನೆ ಮತ್ತು ಇತರ ಕೆಟ್ಟ ಜನರೊಂದಿಗೆ ಏಕೆ ಊಟಮಾಡುತ್ತೀರಿ ಮತ್ತು ಕುಡಿಯುತ್ತೀರಿ?” ಎಂದು ಆಕ್ಷೇಪಿಸಿದರು.

31 ಯೇಸು ಅವರಿಗೆ, “ವೈದ್ಯನ ಅಗತ್ಯವಿರುವುದು ಆರೋಗ್ಯವಂತರಿಗಲ್ಲ, ಕಾಯಿಲೆಯವರಿಗಷ್ಟೆ. 32 ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರಿಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯಲು ನಾನು ಬಂದವನಲ್ಲ, ಪಾಪಿಗಳನ್ನು ಕರೆಯಲು ಬಂದವನು!” ಎಂದು ಉತ್ತರಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International