Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 115

115 ಯೆಹೋವನೇ, ಘನಮಾನಗಳು ನಮ್ಮವಲ್ಲ!
    ಅವು ನಿನ್ನವೇ.
ನಿನ್ನ ಪ್ರೀತಿಯ ನಿಮಿತ್ತವಾಗಿಯೂ ನಂಬಿಗಸ್ತಿಕೆಯ ನಿಮಿತ್ತವಾಗಿಯೂ ಘನಮಾನಗಳು ನಿನಗೇ ಸಲ್ಲತಕ್ಕದ್ದು.
ಅವರ ದೇವರು ಎಲ್ಲಿದ್ದಾನೆಂದು ಜನಾಂಗಗಳು ಯಾಕೆ ಹೇಳಬೇಕು?
ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಬಯಸಿದ್ದನ್ನೆಲ್ಲಾ ಮಾಡುತ್ತಾನೆ.
ಅನ್ಯಜನಾಂಗಗಳ “ದೇವರುಗಳು” ಬೆಳ್ಳಿಬಂಗಾರಗಳಿಂದ ಮಾಡಿದ ವಿಗ್ರಹಗಳಷ್ಟೇ.
    ಅವುಗಳನ್ನು ಮಾಡಿದವರು ಮನುಷ್ಯರೇ.
ಆ ವಿಗ್ರಹಗಳಿಗೆ ಬಾಯಿಗಳಿವೆ, ಆದರೆ ಮಾತಾಡಲಾರವು.
    ಕಣ್ಣುಗಳಿವೆ, ಆದರೆ ನೋಡಲಾರವು.
ಕಿವಿಗಳಿವೆ, ಆದರೆ ಕೇಳಲಾರವು.
    ಮೂಗುಗಳಿವೆ, ಆದರೆ ಮೂಸಲಾರವು.
ಕೈಗಳಿವೆ, ಆದರೆ ಯಾವುದನ್ನೂ ಮುಟ್ಟಲಾರವು.
    ಕಾಲುಗಳಿವೆ, ಆದರೆ ನಡೆಯಲಾರವು.
    ಅವುಗಳ ಗಂಟಲುಗಳಿಂದ ಶಬ್ದವೇ ಹೊರಡದು.
ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಟ್ಟಿರುವವರೂ ಅವುಗಳಂತೆಯೇ.

ಇಸ್ರೇಲರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
11 ಯೆಹೋವನ ಭಕ್ತರು ಆತನಲ್ಲಿ ಭರವಸವಿಡುವರು.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.

12 ಯೆಹೋವನು ನಮ್ಮನ್ನು ಜ್ಞಾಪಕಮಾಡಿಕೊಂಡು ಆಶೀರ್ವದಿಸುವನು.
    ಆತನು ಇಸ್ರೇಲನ್ನೂ ಆರೋನನ ಮನೆತನವನ್ನೂ ಆಶೀರ್ವದಿಸುವನು.
13 ಆತನು ದೊಡ್ಡವರೂ ಚಿಕ್ಕವರೂ ಎಂದೆನ್ನದೆ ತನ್ನ ಭಕ್ತರನ್ನೆಲ್ಲಾ ಆಶೀರ್ವದಿಸುವನು.

14 ಯೆಹೋವನು ನಿಮ್ಮ ಕುಟುಂಬಗಳನ್ನೂ ನಿಮ್ಮ ಮಕ್ಕಳ ಕುಟುಂಬಗಳನ್ನೂ ಅಭಿವೃದ್ಧಿಪಡಿಸಲಿ.
15     ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
    ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಮಾಡಿದಾತನು ಆತನೇ.
16 ಪರಲೋಕವು ಯೆಹೋವನದು.
    ಆತನು ಭೂಲೋಕವನ್ನು ಮನುಷ್ಯರಿಗೆ ಕೊಟ್ಟನು.
17 ಸತ್ತುಹೋದವರು ಯೆಹೋವನನ್ನು ಕೊಂಡಾಡುವುದಿಲ್ಲ.
    ಸಮಾಧಿಯೊಳಗಿರುವವರು ಆತನನ್ನು ಸ್ತುತಿಸುವುದಿಲ್ಲ.
18 ನಾವಾದರೋ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು!

ಯೆಹೋವನಿಗೆ ಸ್ತೋತ್ರ!

1 ಸಮುವೇಲನು 9:15-10:1

15 ಹಿಂದಿನ ದಿನ, ಯೆಹೋವನು ಸಮುವೇಲನಿಗೆ, 16 “ನಾಳೆ ಇದೇ ಸಮಯಕ್ಕೆ ನಾನು ನಿನ್ನ ಬಳಿಗೆ ಒಬ್ಬ ಮನುಷ್ಯನನ್ನು ಕಳುಹಿಸುತ್ತೇನೆ. ಅವನು ಬೆನ್ಯಾಮೀನ್ ಕುಟುಂಬಕ್ಕೆ ಸೇರಿದವನು. ನೀನು ಅವನನ್ನು ಅಭಿಷೇಕಿಸು. ನನ್ನ ಜನರಾದ ಇಸ್ರೇಲರಿಗೆ ಅವನು ರಾಜನಾಗುತ್ತಾನೆ. ಈ ಮನುಷ್ಯನು ನನ್ನ ಜನರನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ. ನನ್ನ ಜನರ ಸಂಕಟವನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳನ್ನು ನಾನು ಆಲಿಸಿದ್ದೇನೆ” ಎಂದು ತಿಳಿಸಿದ್ದನು.

17 ಸಮುವೇಲನು ಸೌಲನನ್ನು ಕಂಡಾಗ ಯೆಹೋವನು ಅವನಿಗೆ, “ನಾನು ನಿನಗೆ ಹೇಳಿದ ಮನುಷ್ಯ ಇವನೇ. ಇವನು ನನ್ನ ಜನರನ್ನು ಆಳುತ್ತಾನೆ” ಎಂದು ಹೇಳಿದನು.

18 ಸೌಲನು ಹೊರಬಾಗಿಲಿನ ಬಳಿಯಿಂದ ಸಮುವೇಲನ ಬಳಿಗೆ ಬಂದನು. ಸೌಲನು ಸಮುವೇಲನನ್ನು, “ದರ್ಶಿಯ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ನನಗೆ ಹೇಳಿ” ಎಂದು ಕೇಳಿದನು.

19 ಸಮುವೇಲನು, “ನಾನೇ ಆ ದರ್ಶಿ. ನನ್ನೊಡನೆ ಆರಾಧನೆಯ ಸ್ಥಳಕ್ಕೆ ಬಾ. ನೀನು ಮತ್ತು ನಿನ್ನ ಸೇವಕ ಈ ದಿನ ನನ್ನ ಜೊತೆಯಲ್ಲಿ ಊಟಮಾಡಬೇಕು. ನಾನು ನಿಮ್ಮನ್ನು ನಾಳೆ ಬೆಳಿಗ್ಗೆ ನಿಮ್ಮ ಮನೆಗೆ ಕಳುಹಿಸುತ್ತೇನೆ. ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತೇನೆ. 20 ಮೂರು ದಿನಗಳ ಹಿಂದೆ ಕಳೆದು ಹೋದ ನಿನ್ನ ಕತ್ತೆಗಳಿಗಾಗಿ ಚಿಂತಿಸಬೇಡ. ಅವುಗಳೆಲ್ಲ ಸಿಕ್ಕಿವೆ. ಈಗ ಇಸ್ರೇಲರಿಗೆಲ್ಲ ನೀನು ಬೇಕಾಗಿರುವೆ. ಅವರಿಗೆ ನೀನು ಮತ್ತು ನಿನ್ನ ತಂದೆಯ ಕುಟುಂಬದ ಜನರೆಲ್ಲ ಬೇಕಾಗಿದ್ದಾರೆ” ಎಂದು ಹೇಳಿದನು.

21 ಅದಕ್ಕೆ ಸೌಲನು, “ನಾನು ಬೆನ್ಯಾಮೀನ್ ಕುಲದವನು. ಅದು ಇಸ್ರೇಲರಲ್ಲಿ ಒಂದು ಚಿಕ್ಕ ಕುಲ. ನನ್ನ ಕುಟುಂಬವು ಬೆನ್ಯಾಮೀನ್ ಕುಲದಲ್ಲಿ ತೀರ ಕನಿಷ್ಠವಾದುದು. ಇಸ್ರೇಲರಿಗೆ ನಾನು ಬೇಕಾಗಿದ್ದೇನೆ ಎಂದು ಏಕೆ ಹೇಳುತ್ತಿರುವೆ?” ಎಂದು ಕೇಳಿದನು.

22 ಆಗ ಸಮುವೇಲನು ಸೌಲನನ್ನು ಮತ್ತು ಅವನ ಸೇವಕನನ್ನು ಊಟದ ಸ್ಥಳಕ್ಕೆ ಕರೆದುಕೊಂಡು ಹೋದನು. ಒಟ್ಟಿಗೆ ಊಟ ಮಾಡಲು ಮತ್ತು ಯಜ್ಞವಸ್ತುಗಳನ್ನು ಹಂಚಿಕೊಳ್ಳಲು ಸುಮಾರು ಮೂವತ್ತು ಜನರನ್ನು ಆಹ್ವಾನಿಸಲಾಗಿತ್ತು. ಸಮುವೇಲನು ಸೌಲನಿಗೆ ಮತ್ತು ಅವನ ಸೇವಕನಿಗೆ ಊಟದ ಮೇಜಿನಲ್ಲಿ ಅತೀ ಮುಖ್ಯವಾದ ಸ್ಥಳವನ್ನು ನೀಡಿದನು. 23 ಸಮುವೇಲನು ಅಡಿಗೆಯವನಿಗೆ, “ನಾನು ನಿನಗೆ ಕೊಟ್ಟಿದ್ದ ಮಾಂಸವನ್ನು ತೆಗೆದುಕೊಂಡು ಬಾ; ಪ್ರತ್ಯೇಕವಾಗಿಡಬೇಕೆಂದು ನಾನು ನಿನಗೆ ಹೇಳಿದ್ದ ಭಾಗವೇ ಅದು” ಎಂದು ಹೇಳಿದನು.

24 ಅಡಿಗೆಯವನು ತೊಡೆಯ ಮಾಂಸವನ್ನು ತೆಗೆದುಕೊಂಡು ಬಂದು ಸೌಲನ ಎದುರಿಗೆ ಮೇಜಿನ ಮೇಲಿಟ್ಟನು. ಸಮುವೇಲನು, “ನಾನು ನಿನಗಾಗಿ ಈ ಮಾಂಸವನ್ನು ಪ್ರತ್ಯೇಕವಾಗಿರಿಸಿದ್ದೇನೆ. ಇದನ್ನು ತಿನ್ನು, ಏಕೆಂದರೆ ಇದನ್ನು ಈ ವಿಶೇಷವಾದ ಸಂದರ್ಭದಲ್ಲಿ ನಿನಗೆ ಕೊಡುವುದಕ್ಕಾಗಿಯೇ ಪ್ರತ್ಯೇಕಿಸಲಾಗಿತ್ತು” ಎಂದು ಹೇಳಿದನು. ಆದ್ದರಿಂದ ಸೌಲನು ಸಮುವೇಲನ ಜೊತೆಯಲ್ಲಿ ಆ ದಿನ ಊಟಮಾಡಿದನು.

25 ಅವರು ಊಟಮಾಡಿದ ನಂತರ, ಆರಾಧನಾ ಸ್ಥಳದಿಂದ ಇಳಿದುಬಂದು, ಪಟ್ಟಣಕ್ಕೆ ಹಿಂದಿರುಗಿದರು. ಸಮುವೇಲನು ಮಲಗಲು ಸೌಲನಿಗಾಗಿ ಮಾಳಿಗೆಯ ಮೇಲೆ ಹಾಸಿಗೆಯನ್ನು ಸಿದ್ಧಪಡಿಸಿದನು. ಸೌಲನು ಅಲ್ಲಿ ಮಲಗಿಕೊಂಡನು.

26 ಮಾರನೆಯ ದಿನ ಬೆಳಗಿನ ಜಾವ, ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು ಎಬ್ಬಿಸಿ, “ಎದ್ದೇಳು, ನಿನ್ನನ್ನು ಕಳುಹಿಸಿಕೊಡುತ್ತೇನೆ” ಎಂದು ಹೇಳಿದನು. ಸೌಲನು ಮೇಲೆದ್ದನು ಮತ್ತು ಸಮುವೇಲನೊಂದಿಗೆ ಮನೆಯಿಂದ ಹೊರಗೆ ಹೊರಟನು.

27 ಸೌಲನೂ ಅವನ ಸೇವಕನೂ ಸಮುವೇಲನೂ ಪಟ್ಟಣದ ಅಂಚಿನಲ್ಲಿ ಒಟ್ಟಾಗಿ ನಡೆಯುತ್ತಿದ್ದಾಗ, ಸಮುವೇಲನು ಸೌಲನಿಗೆ, “ನಿನ್ನ ಸೇವಕನಿಗೆ ನಮ್ಮಿಂದ ಮುಂದೆ ಹೋಗಲು ತಿಳಿಸು. ನಾನು ದೇವರ ಸಂದೇಶವನ್ನು ನಿನಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. ಆದಕಾರಣ ಸೇವಕನು ಅವರಿಂದ ಮುಂದೆ ನಡೆದನು.

ಸಮುವೇಲನಿಂದ ಸೌಲನಿಗೆ ಅಭಿಷೇಕ

10 ಸಮುವೇಲನು ವಿಶೇಷವಾದ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ಸೌಲನ ತಲೆಯ ಮೇಲೆ ಆ ಎಣ್ಣೆಯನ್ನು ಸುರಿದನು. ಸಮುವೇಲನು ಸೌಲನಿಗೆ ಮುದ್ದಿಟ್ಟು, “ಯೆಹೋವನು ತನ್ನ ಜನರನ್ನು ಮುಂದೆ ನಡೆಸಲು ನಿನ್ನನ್ನು ಅವರಿಗೆ ನಾಯಕನನ್ನಾಗಿ ಅಭಿಷೇಕಿಸಿದ್ದಾನೆ. ನೀನು ಯೆಹೋವನ ಜನರನ್ನು ಆಳುವೆ; ಅವರನ್ನು ಸುತ್ತುವರೆದಿರುವ ಶತ್ರುಗಳಿಂದ ರಕ್ಷಿಸುವೆ. ಯೆಹೋವನು ತನ್ನ ಜನರನ್ನು ಆಳುವುದಕ್ಕಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ. ಇದು ನಿಜವೆಂಬುದಕ್ಕೆ ಸಾಕ್ಷಿಯೇನೆಂದರೆ:

1 ತಿಮೊಥೆಯನಿಗೆ 3:1-9

ಸಭಾನಾಯಕರು

ನಾನು ಹೇಳುವ ಈ ಸಂಗತಿ ಸತ್ಯವಾದದ್ದು. ಅದೇನೆಂದರೆ, ಸಭಾಧ್ಯಕ್ಷನಾಗಲು ಬಹಳವಾಗಿ ಪ್ರಯತ್ನಿಸುವವನು ಒಳ್ಳೆಯ ಕೆಲಸವನ್ನೇ ಅಪೇಕ್ಷಿಸುವವನಾಗಿದ್ದಾನೆ. ಅವನು ಜನರ ಟೀಕೆಗೆ ಒಳಗಾಗದಷ್ಟು ಉತ್ತಮನಾಗಿರಬೇಕು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನು ಜಿತೇಂದ್ರಿಯನೂ ಜ್ಞಾನಿಯೂ ಆಗಿರಬೇಕು; ಜನರ ಗೌರವಕ್ಕೆ ಪಾತ್ರನಾಗಿರಬೇಕು; ಜನರನ್ನು ತನ್ನ ಮನೆಗೆ ಸ್ವಾಗತಿಸಿ ಅವರಿಗೆ ಸಹಾಯ ಮಾಡಲು ಸಿದ್ಧನಾಗಿರಬೇಕು; ಒಳ್ಳೆಯ ಉಪದೇಶಕನಾಗಿರಬೇಕು; ಮದ್ಯಪಾನದಲ್ಲಿ ಆಸ್ತಕನಾಗಿರಬಾರದು ಮತ್ತು ಹಿಂಸಾತ್ಮಕನಾಗಿರಬಾರದು. ಅವನು ಸಾತ್ವಿಕನೂ ಶಾಂತನೂ ಆಗಿರಬೇಕು; ಹಣದಾಸೆ ಉಳ್ಳವನಾಗಿರಬಾರದು. ಅವನು ತನ್ನ ಸ್ವಂತ ಕುಟುಂಬಕ್ಕೆ ಒಳ್ಳೆಯ ನಾಯಕನಾಗಿರಬೇಕು. ಅವನ ಮಕ್ಕಳು ಅವನಿಗೆ ವಿಧೇಯರಾಗಿದ್ದು ಪೂರ್ಣ ಗೌರವವನ್ನು ನೀಡುವಂತಿರಬೇಕೆಂಬುದು ಇದರ ಅರ್ಥ. (ತನ್ನ ಸ್ವಂತ ಕುಟುಂಬವನ್ನು ಆಳಲು ತಿಳಿಯದವನು ದೇವರ ಸಭೆಯನ್ನು ಪರಾಮರಿಸಲು ಸಮರ್ಥನಲ್ಲ.)

ಅವನು ಹೊಸ ವಿಶ್ವಾಸಿಯಾಗಿರಬಾರದು. ಹೊಸ ವಿಶ್ವಾಸಿಯನ್ನು ಸಭಾಧ್ಯಕ್ಷನನ್ನಾಗಿ ಮಾಡಿದರೆ, ಅವನು ಗರ್ವಿಷ್ಠನಾಗುವನು. ಸೈತಾನನು ತನ್ನ ಗರ್ವದ ನಿಮಿತ್ತ ಶಿಕ್ಷೆಗೆ ಒಳಗಾದಂತೆ ಇವನೂ ಶಿಕ್ಷೆಗೆ ಗುರಿಯಾಗುವನು. ಸಭಾಧ್ಯಕ್ಷನು ಸಭೆಯಲ್ಲಿಲ್ಲದ ಜನರ ಗೌರವಕ್ಕೆ ಸಹ ಪಾತ್ರನಾಗಿರಬೇಕು. ಆಗ ಅವನು ಇತರರ ಟೀಕೆಗೆ ಗುರಿಯಾಗುವುದೂ ಇಲ್ಲ, ಸೈತಾನನ ವಂಚನೆಗೆ ಸಿಕ್ಕಿಬೀಳುವುದೂ ಇಲ್ಲ.

ವಿಶೇಷ ಸೇವಕರು

ಅದೇ ರೀತಿಯಲ್ಲಿ ಸಭೆಯಲ್ಲಿ ವಿಶೇಷ ಸೇವಕರಾದವರು ತಮ್ಮ ನಡತೆಯ ನಿಮಿತ್ತ ಇತರರಿಂದ ಗೌರವ ಹೊಂದಿದವರಾಗಿರಬೇಕು. ಯಥಾರ್ಥವಾಗಿ ಮಾತಾಡುವಂಥವರಾಗಿರಬೇಕು. ಅವರು ಮದ್ಯಪಾನದಲ್ಲಿ ಆಸ್ತಕರಾಗಿದ್ದು ತಮ್ಮ ಕಾಲವನ್ನು ಕಳೆಯುವವರಾಗಿರಬಾರದು; ಯಾವಾಗಲೂ ಇತರರನ್ನು ಮೋಸಗೊಳಿಸಿ ಶ್ರೀಮಂತರಾಗಲು ಪ್ರಯತ್ನಿಸುವವರಾಗಿರಬಾರದು; ದೇವರು ನಮಗೆ ತಿಳಿಸಿಕೊಟ್ಟ ಸತ್ಯವನ್ನು ಶುದ್ಧ ಮನಸ್ಸಾಕ್ಷಿಯಿಂದ ಮಾಡುವವರಾಗಿರಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International