Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 71:1-6

71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
    ಎಂದಿಗೂ ಆಶಾಭಂಗಪಡಿಸಬೇಡ.
ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
    ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
    ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
ನನ್ನ ದೇವರೇ, ದುಷ್ಟರಿಂದಲೂ
    ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
    ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
    ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
    ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.

2 ಪೂರ್ವಕಾಲವೃತ್ತಾಂತ 35:20-27

ಯೋಷೀಯನ ಮರಣ

20 ದೇವಾಲಯಕ್ಕಾಗಿ ಎಲ್ಲಾ ಒಳ್ಳೆಯ ಕಾರ್ಯಗಳನ್ನು ಯೋಷೀಯನು ಮಾಡಿದನು. ಸ್ವಲ್ಪಕಾಲವಾದ ಬಳಿಕ ಈಜಿಪ್ಟಿನ ಅರಸನಾದ ನೆಕೋ ಯೂಫ್ರೇಟೀಸ್ ನದಿಯ ಬಳಿಯಲ್ಲಿದ್ದ ಕರ್ಕೆಮೀಷ್ ಪಟ್ಟಣದ ಮೇಲೆ ಯುದ್ಧಮಾಡಲು ಹೊರಟನು. ಅರಸನಾದ ಯೋಷೀಯನು ನೆಕೋನ ಮೇಲೆ ಯುದ್ಧಮಾಡಲು ಹೊರಟನು. 21 ಆದರೆ ನೆಕೋ ಯೋಷೀಯನಿಗೆ ಸಂದೇಶವನ್ನು ಕಳುಹಿಸಿ ಅದರಲ್ಲಿ,

“ಅರಸನಾದ ಯೋಷೀಯನೇ, ನಾನು ನಿನಗೆ ವಿರುದ್ಧವಾಗಿ ಬರಲಿಲ್ಲ. ಆದ್ದರಿಂದ ನೀನು ಯುದ್ಧಕ್ಕೆ ಕೈಹಾಕಬೇಡ. ನಾನು ನನ್ನ ವೈರಿಗಳ ಮೇಲೆ ಯುದ್ಧಮಾಡಲು ಬಂದಿದ್ದೇನೆ. ಬೇಗನೆ ಯುದ್ಧಮಾಡಲು ದೇವರು ನನ್ನನ್ನು ಅವಸರಪಡಿಸುತ್ತಿದ್ದಾನೆ. ದೇವರು ನಿನ್ನೊಂದಿಗಿದ್ದಾನೆ. ಆದ್ದರಿಂದ ನನಗೆ ತೊಂದರೆ ಕೊಡಬೇಡ. ನೀನು ನನ್ನ ಮೇಲೆ ಯುದ್ಧ ಮಾಡಿದರೆ ದೇವರು ನಿನ್ನನ್ನು ನಾಶಮಾಡುವನು” ಎಂದು ಹೇಳಿದನು.

22 ಆದರೆ ಅರಸನಾದ ಯೋಷೀಯನು ಹಿಂದಕ್ಕೆ ಹೋಗಲಿಲ್ಲ. ಅವನು ನೆಕೋನನ್ನು ಎದುರಿಸಲು ನಿರ್ಧರಿಸಿದನು. ತನ್ನ ವೇಷ ಬದಲಾಯಿಸಿ ಯುದ್ಧಕ್ಕೆ ಹೋದನು. ದೇವರ ಅಪ್ಪಣೆಯ ಬಗ್ಗೆ ನೆಕೋ ಹೇಳಿದ್ದನ್ನು ಕೇಳಲು ಯೋಷೀಯನು ನಿರಾಕರಿಸಿ ಮೆಗಿದ್ದೋ ಕಣಿವೆಯಲ್ಲಿ ಯುದ್ಧಕ್ಕೆ ಹೊರಟನು. 23 ರಣರಂಗದಲ್ಲಿ ಅರಸನಾದ ಯೋಷೀಯನಿಗೆ ಬಾಣಗಳು ತಾಗಿದ್ದವು. ಆಗ ತನ್ನ ಸೇವಕರಿಗೆ, “ನನ್ನನ್ನು ಇಲ್ಲಿಂದ ಕೊಂಡೊಯ್ಯಿರಿ. ನಾನು ತೀವ್ರವಾಗಿ ಗಾಯಗೊಂಡಿದ್ದೇನೆ” ಅಂದನು.

24 ಆಗ ಸೇವಕರು ಯೋಷೀಯನನ್ನು ಅವನಿದ್ದ ರಥದಿಂದ ತೆಗೆದು ಅವನ ಜೊತೆಯಲ್ಲಿ ತಂದಿದ್ದ ಇನ್ನೊಂದು ರಥದಲ್ಲಿ ಹಾಕಿ ರಣರಂಗದಿಂದ ನೇರವಾಗಿ ಜೆರುಸಲೇಮಿಗೆ ಕೊಂಡೊಯ್ದರು. ಅಲ್ಲಿ ಅವನು ಸತ್ತನು. ಅವನ ಪೂರ್ವಿಕರ ಬಳಿಯಲ್ಲಿ ಅವನನ್ನು ಸಮಾಧಿಮಾಡಿದರು. ಅವನು ಸತ್ತದ್ದನ್ನು ಕೇಳಿ ಯೆಹೂದದ ಮತ್ತು ಜೆರುಸಲೇಮಿನ ಜನರು ತುಂಬಾ ಶೋಕಿಸಿದರು. 25 ಯೆರೆಮೀಯನು ಅವನ ಬಗ್ಗೆ ಶೋಕಗೀತೆಗಳನ್ನು ರಚಿಸಿ ಹಾಡಿದನು. ಆ ಗೀತೆಗಳನ್ನು ಗಂಡಸರು ಹೆಂಗಸರು ಈಗಲೂ ಹಾಡುತ್ತಾರೆ. ಯೋಷೀಯನ ಕುರಿತು ದುಃಖದ ಹಾಡನ್ನು ಹಾಡುವದು ಅವರಿಗೆ ರೂಢಿಯಾಗಿದೆ. ಆ ಗೀತೆಗಳನ್ನು ಮರಣದ ಹಾಡಿನ ಪುಸ್ತಕದಲ್ಲಿ ಬರೆಯಲಾಗಿದೆ.

26-27 ಯೋಷೀಯನು ಅರಸನಾಗಿದ್ದಾಗ ಮಾಡಿದ ಇತರ ಕಾರ್ಯಗಳನ್ನೂ ಅವನ ಆಳ್ವಿಕೆಯ ಪ್ರಾರಂಭದಿಂದ ಕೊನೆಯ ತನಕದ ವಿಷಯಗಳನ್ನೂ ಇಸ್ರೇಲಿನ ಮತ್ತು ಯೆಹೂದದ ಅರಸರ ಗ್ರಂಥದಲ್ಲಿ ಬರೆಯಲಾಗಿದೆ. ದೇವರ ಮೇಲೆ ಯೋಷೀಯನಿಗಿದ್ದ ಭಕ್ತಿಯನ್ನೂ ಅವನು ಯೆಹೋವನಿಗೆ ಹೇಗೆ ವಿಧೇಯನಾಗಿದ್ದನೆಂಬುದನ್ನೂ ಆ ಗ್ರಂಥದಲ್ಲಿ ವಿವರಿಸಿದೆ.

ಅಪೊಸ್ತಲರ ಕಾರ್ಯಗಳು 19:1-10

ಪೌಲ ಎಫೆಸದಲ್ಲಿ

19 ಅಪೊಲ್ಲೋಸನು ಕೊರಿಂಥ ಪಟ್ಟಣದಲ್ಲಿದ್ದಾಗ ಪೌಲನು ಎಫೆಸ ಪಟ್ಟಣಕ್ಕೆ ಪ್ರಯಾಣ ಮಾಡುತ್ತಾ ದಾರಿಯಲ್ಲಿ ಸಿಕ್ಕಿದ ಕೆಲವು ಊರುಗಳನ್ನು ಸಂದರ್ಶಿಸಿದನು. ಅವನು ಎಫೆಸ ಪಟ್ಟಣವನ್ನು ತಲುಪಿದಾಗ, ಕೆಲವು ಮಂದಿ ಶಿಷ್ಯರನ್ನು ಕಂಡು, “ನೀವು ನಂಬಿಕೊಂಡಾಗ ಪವಿತ್ರಾತ್ಮನನ್ನು ಹೊಂದಿಕೊಂಡಿರಾ?” ಎಂದು ಕೇಳಿದನು.

ಆ ಶಿಷ್ಯರು ಅವನಿಗೆ, “ಪವಿತ್ರಾತ್ಮನು ಇದ್ದಾನೆ ಎಂಬುದನ್ನು ನಾವು ಇದುವರೆಗೆ ಕೇಳಿಯೂ ಇಲ್ಲ!” ಎಂದರು.

ಪೌಲನು ಅವರಿಗೆ, “ನೀವು ಯಾವ ಬಗೆಯ ದೀಕ್ಷಾಸ್ನಾನ ಪಡೆದಿರಿ?” ಎಂದು ಕೇಳಿದನು.

ಅವರು, “ಯೋಹಾನನು ಬೋಧಿಸಿದ ದೀಕ್ಷಾಸ್ನಾನವನ್ನು ನಾವು ಮಾಡಿಸಿಕೊಂಡೆವು” ಎಂದು ಹೇಳಿದರು.

ಅದಕ್ಕೆ ಪೌಲನು, “ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದನು. ಅಲ್ಲದೆ ತನ್ನ ತರುವಾಯ ಬರುವಾತನಲ್ಲಿ ನಂಬಿಕೆ ಇಡಬೇಕೆಂದು ಅವರಿಗೆ ಹೇಳಿದನು. ಆ ವ್ಯಕ್ತಿಯೇ ಯೇಸು” ಎಂದನು.

ಇದನ್ನು ಕೇಳಿದಾಗ ಆ ಶಿಷ್ಯರು ಪ್ರಭುವಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರು. ಬಳಿಕ ಪೌಲನು ಅವರ ಮೇಲೆ ತನ್ನ ಕೈಗಳನ್ನಿಟ್ಟಾಗ ಅವರು ಪವಿತ್ರಾತ್ಮಭರಿತರಾದರು. ಅವರು ವಿವಿಧ ಭಾಷೆಗಳಲ್ಲಿ ಮಾತಾಡಿದರು ಮತ್ತು ಪ್ರವಾದನೆ ಮಾಡಿದರು. ಈ ಗುಂಪಿನಲ್ಲಿ ಸುಮಾರು ಹನ್ನೆರಡು ಮಂದಿ ಇದ್ದರು.

ಅನಂತರ ಮೂರು ತಿಂಗಳ ಕಾಲ ಪೌಲನು ಸಭಾಮಂದಿರಕ್ಕೆ ಹೋಗಿ ಬಹು ಧೈರ್ಯದಿಂದ ಮಾತಾಡಿದನು. ಅವನು ಯೆಹೂದ್ಯರಿಗೆ ದೇವರ ರಾಜ್ಯದ ಸಂಗತಿಗಳನ್ನು ತಿಳಿಸಿ ಅವರನ್ನು ಒಡಂಬಡಿಸಲು ಪ್ರಯತ್ನಿಸಿದನು. ಆದರೆ ಆ ಯೆಹೂದ್ಯರಲ್ಲಿ ಕೆಲವರು ಮೊಂಡರಾದರು. ಅವರು ನಂಬದೆ ದೇವರ ಮಾರ್ಗವನ್ನು ಜನರೆಲ್ಲರ ಎದುರಿನಲ್ಲಿ ದೂಷಿಸಿದರು. ಆದ್ದರಿಂದ ಪೌಲನು ಏಷ್ಯಾ ಪ್ರಾಂತ್ಯದ ಆ ಯೆಹೂದ್ಯರನ್ನೆಲ್ಲ ಬಿಟ್ಟು, ಯೇಸುವಿನ ಶಿಷ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ತುರನ್ನನ ಶಾಲೆಯಲ್ಲಿ ಪ್ರತಿದಿನವೂ ಚರ್ಚೆ ನಡೆಸಿದನು. 10 ಹೀಗೆ ಎರಡು ವರ್ಷಗಳು ಕಳೆದವು. ಇದರಿಂದಾಗಿ, ಏಷ್ಯಾದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರು ಮತ್ತು ಗ್ರೀಕರು ಪ್ರಭುವಿನ ವಾಕ್ಯವನ್ನು ಕೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International