Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆರೆಮೀಯ 33:14-16

ಉತ್ತಮ ಕೊಂಬೆ

14 ಇದು ಯೆಹೋವನ ನುಡಿ: “ನಾನು ಇಸ್ರೇಲಿನ ಮತ್ತು ಯೆಹೂದದ ಜನರಿಗೆ ಒಂದು ವಿಶೇಷವಾದ ವಾಗ್ದಾನವನ್ನು ಮಾಡಿದೆ. ನನ್ನ ವಾಗ್ದಾನವು ನೆರವೇರುವ ಸಮಯ ಬರುತ್ತಿದೆ. 15 ಆಗ ನಾನು ದಾವೀದನ ವಂಶದಿಂದ ಒಳ್ಳೆಯದಾದ ‘ಮೊಳಕೆಯೊಂದನ್ನು’ ಚಿಗುರಿಸುವೆನು. ಆ ಮೊಳಕೆಯು ದೇಶಕ್ಕೆ ಒಳ್ಳೆಯದನ್ನೂ ನೀತಿಯುತವಾದುದನ್ನೂ ಮಾಡುವುದು. 16 ಆಗ ಯೆಹೂದ್ಯರು ಸುರಕ್ಷಿತರಾಗಿರುವರು. ಜೆರುಸಲೇಮಿನಲ್ಲಿ ಜನರು ಸುರಕ್ಷಿತರಾಗಿರುವರು. ಆ ‘ಮೊಳಕೆಯ’ ಹೆಸರು ‘ಯೆಹೋವನು ಒಳ್ಳೆಯವನು.’”[a]

ಕೀರ್ತನೆಗಳು 25:1-10

ರಚನೆಗಾರ: ದಾವೀದ.

25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
    ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
    ದ್ರೋಹಿಗಳಾದರೋ ನಿರಾಶರಾಗುವರು.
    ಅವರಿಗೆ ಏನೂ ದೊರೆಯುವುದಿಲ್ಲ.

ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
    ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
    ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
    ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
    ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.

ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
    ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
    ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.
10 ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ
    ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.

1 ಥೆಸಲೋನಿಕದವರಿಗೆ 3:9-13

ನಿಮ್ಮ ನಿಮಿತ್ತದಿಂದ ದೇವರ ಸನ್ನಿಧಿಯಲ್ಲಿ ಬಹಳ ಹರ್ಷಿತರಾಗಿದ್ದೇವೆ! ಆದ್ದರಿಂದ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನಮಗಿರುವ ಆನಂದಕ್ಕೆ ಸರಿಸಮವಾಗಿ ಕೃತಜ್ಞತಾಸ್ತುತಿ ಸಲ್ಲಿಸಲು ನಮಗೆ ಹೇಗೆ ಸಾಧ್ಯವಾದೀತು? 10 ಹಗಲಿರುಳು ನಿಮ್ಮ ವಿಷಯದಲ್ಲಿ ಬಹಳವಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ. ನಿಮ್ಮನ್ನು ಕಣ್ಣಾರೆ ಕಂಡು ನಿಮ್ಮ ನಂಬಿಕೆಯಲ್ಲಿರುವ ಕುಂದುಕೊರತೆಗಳನ್ನು ನಿವಾರಿಸಬೇಕೆಂದು ದೇವರಲ್ಲಿ ಹಗಲಿರುಳು ಪ್ರಾರ್ಥಿಸುತ್ತಿದ್ದೇವೆ.

11 ನಾವು ನಿಮ್ಮ ಬಳಿಗೆ ಬರಲು ಮಾರ್ಗವನ್ನು ಸರಾಗಗೊಳಿಸುವಂತೆ ನಮ್ಮ ತಂದೆಯಾದ ದೇವರಿಗೂ ಪ್ರಭುವಾದ ಯೇಸುವಿಗೂ ಪ್ರಾರ್ಥಿಸುತ್ತೇವೆ. 12 ನಾವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ಪ್ರೀತಿಯು ವೃದ್ಧಿಯಾಗಿ ಒಬ್ಬೊಬ್ಬರ ಮೇಲೆಯೂ ಇತರ ಜನರೆಲ್ಲರ ಮೇಲೆಯೂ ಹೆಚ್ಚಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ. 13 ನಿಮ್ಮ ಹೃದಯಗಳು ಬಲಗೊಳ್ಳಲೆಂದು ಹೀಗೆ ಪ್ರಾರ್ಥಿಸುತ್ತೇವೆ. ನಮ್ಮ ಪ್ರಭುವಾದ ಯೇಸುವು ತನ್ನ ಪವಿತ್ರ ಜನರೊಂದಿಗೆ ಪ್ರತ್ಯಕ್ಷನಾದಾಗ ನೀವು ತಂದೆಯಾದ ದೇವರ ಸನ್ನಿಧಿಯಲ್ಲಿ ಪರಿಶುದ್ಧರೂ ತಪ್ಪಿಲ್ಲದವರೂ ಆಗಿರುವಿರಿ.

ಲೂಕ 21:25-36

ಭಯಪಡಬೇಡಿರಿ

(ಮತ್ತಾಯ 24:29-31; ಮಾರ್ಕ 13:24-27)

25 “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ವಿಚಿತ್ರವಾದ ಸೂಚನೆಗಳು ಕಾಣಿಸಿಕೊಳ್ಳುವವು. ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿ ಹೋಗುವವು. 26 ಗ್ರಹಶಕ್ತಿಗಳು ಕದಲುವುದರಿಂದ ಭೂಮಿಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯದಿಂದ ಮನುಷ್ಯರು ದಿಗ್ಭ್ರಮೆಗೊಳ್ಳುವರು. 27 ಆಗ ಮನುಷ್ಯಕುಮಾರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ನೋಡುವರು. 28 ಈ ಸಂಗತಿಗಳು ಸಂಭವಿಸುವುದಕ್ಕೆ ತೊಡಗುವಾಗ ಭಯಪಡಬೇಡಿರಿ. ಮೇಲೆ ನೋಡಿ ಸಂತೋಷಪಡಿರಿ! ಚಿಂತೆಮಾಡಬೇಡಿರಿ. ಸಂತೋಷಪಡಿರಿ, ಏಕೆಂದರೆ ದೇವರು ನಿಮ್ಮನ್ನು ಬಿಡುಗಡೆಗೊಳಿಸುವ ಕಾಲ ಸಮೀಪವಾಗಿದೆ ಎಂಬುದಕ್ಕೆ ಅವು ಸೂಚನೆಯಾಗಿವೆ.”

ಯೇಸುವಿನ ಮಾತುಗಳಿಗೆ ಅಳಿವಿಲ್ಲ

(ಮತ್ತಾಯ 24:32-35; ಮಾರ್ಕ 13:28-31)

29 ಬಳಿಕ ಯೇಸು ಈ ಸಾಮ್ಯವನ್ನು ಹೇಳಿದನು: “ಎಲ್ಲಾ ಮರಗಳಲ್ಲಿ ಅಂಜೂರದ ಮರ ಒಳ್ಳೆಯ ಉದಾಹರಣೆಯಾಗಿದೆ. 30 ಅದು ಚಿಗುರುತ್ತಲೇ, ಬೇಸಿಗೆ ಹತ್ತಿರವಾಗಿದೆ ಎಂದು ನೀವು ತಿಳಿದುಕೊಳ್ಳುವಿರಿ. 31 ಅದೇರೀತಿಯಲ್ಲಿ ಈ ಎಲ್ಲಾ ಸಂಗತಿಗಳು ಸಂಭವಿಸುವುದನ್ನು ನೀವು ನೋಡುವಾಗ, ದೇವರ ರಾಜ್ಯವು ಬಹುಬೇಗನೆ ಬರುತ್ತದೆ ಎಂದು ತಿಳಿದುಕೊಳ್ಳುವಿರಿ.

32 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದ ಜನರು ಇನ್ನೂ ಜೀವಿಸುತ್ತಿರುವಾಗ ಈ ಸಂಗತಿಗಳೆಲ್ಲಾ ಸಂಭವಿಸುವವು! 33 ಭೂಮ್ಯಾಕಾಶಗಳು ನಾಶವಾಗುವವು; ಆದರೆ ನಾನು ಹೇಳಿದ ಮಾತುಗಳು ಎಂದಿಗೂ ನಾಶವಾಗುವುದಿಲ್ಲ!

ಎಲ್ಲಾ ಸಮಯದಲ್ಲೂ ಸಿದ್ಧರಾಗಿರಿ

34 “ಎಚ್ಚರಿಕೆ! ತಿನ್ನುವುದರಲ್ಲಿಯೂ ಕುಡಿದು ಮತ್ತರಾಗುವುದರಲ್ಲಿಯೂ ಪ್ರಾಪಂಚಿಕ ಚಿಂತೆಗಳಲ್ಲಿಯೂ ಮಗ್ನರಾಗಿರಬೇಡಿರಿ. ಇಲ್ಲವಾದರೆ, ನಿಮ್ಮ ಹೃದಯಗಳು ಭಾರವಾಗಿರುವಾಗಲೇ ಅಂತ್ಯವು ಫಕ್ಕನೆ ಬಂದೀತು. 35 ಆ ದಿವಸವು ಭೂನಿವಾಸಿಗಳೆಲ್ಲರಿಗೂ ವಿಸ್ಮಯಕರವಾಗಿರುವುದು. 36 ಆದ್ದರಿಂದ ಎಲ್ಲಾ ಸಮಯದಲ್ಲಿಯೂ ಸಿದ್ಧರಾಗಿರಿ. ನಡೆಯಲಿರುವ ಈ ಎಲ್ಲಾ ಸಂಗತಿಗಳನ್ನು ಎದುರಿಸಿ ಸುರಕ್ಷಿತವಾಗಿ ಮುಂದುವರಿಯಲು ಮತ್ತು ಮನುಷ್ಯಕುಮಾರನ ಮುಂದೆ ನಿಲ್ಲಲು ಬೇಕಾದ ಶಕ್ತಿಗಾಗಿ ಪ್ರಾರ್ಥಿಸಿರಿ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International