Revised Common Lectionary (Semicontinuous)
12 ಜೆರುಸಲೇಮೇ, ಯೆಹೋವನನ್ನು ಸ್ತುತಿಸು!
ಚೀಯೋನೇ, ನಿನ್ನ ದೇವರನ್ನು ಸ್ತುತಿಸು!
13 ಜೆರುಸಲೇಮೇ, ದೇವರು ನಿನ್ನ ಬಾಗಿಲುಗಳ ಸರಳುಗಳನ್ನು ಬಲಪಡಿಸುವನು;
ನಿನ್ನ ನಗರದಲ್ಲಿರುವ ಜನರನ್ನು ಆಶೀರ್ವದಿಸುವನು.
14 ಆತನು ನಿಮ್ಮ ದೇಶದಲ್ಲಿ ಶಾಂತಿಯನ್ನು ನೆಲೆಗೊಳಿಸಿದನು.
ನಿಮ್ಮನ್ನು ಶ್ರೇಷ್ಠವಾದ ಗೋಧಿಯಿಂದ ತೃಪ್ತಿಪಡಿಸಿದನು.
15 ಆತನು ಭೂಮಿಗೆ ಆಜ್ಞಾಪಿಸಲು
ಅದು ಕೂಡಲೆ ವಿಧೇಯವಾಗುತ್ತದೆ.
16 ನೆಲವು ಉಣ್ಣೆಯಂತೆ ಬಿಳುಪಾಗುವವರೆಗೆ ಆತನು ಮಂಜನ್ನು ಬೀಳಿಸುವನು;
ಹಿಮವನ್ನು ಗಾಳಿಯ ಮೂಲಕ ಧೂಳಿನಂತೆ ಹರಡುವನು.
17 ಆತನು ಆಕಾಶದಿಂದ ಕಲ್ಲುಗಳಂತಿರುವ ಆಲಿಕಲ್ಲನ್ನು ಸುರಿಸುವನು;
ಯಾವನೂ ಚಳಿಯಲ್ಲಿ ಹೊರಗಡೆ ಇರಲಾರನು.
18 ಆತನು ಮತ್ತೊಂದು ಆಜ್ಞೆಯನ್ನು ಹೊರಡಿಸುವನು; ಆಗ ಬಿಸಿಗಾಳಿಯು ಮತ್ತೆ ಬೀಸುವುದು;
ಮಂಜು ಕರಗಿಹೋಗುವುದು. ನೀರು ಹರಿಯತೊಡಗುವುದು.
19 ಆತನು ಯಾಕೋಬಿಗೆ ತನ್ನ ಆಜ್ಞೆಗಳನ್ನು ಕೊಟ್ಟನು.
ಇಸ್ರೇಲಿಗೆ ತನ್ನ ಕಟ್ಟಳೆಗಳನ್ನೂ ನಿಯಮಗಳನ್ನೂ ಕೊಟ್ಟನು.
20 ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ.
ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ.
ಯೆಹೋವನಿಗೆ ಸ್ತೋತ್ರವಾಗಲಿ!
7 ಆ ರಾತ್ರಿ ದೇವರು ಸೊಲೊಮೋನನಿಗೆ ದರ್ಶನ ನೀಡಿ, “ಸೊಲೊಮೋನನೇ, ನಿನ್ನ ಕೋರಿಕೆಯೇನು?” ಎಂದು ಕೇಳಿದನು.
8 ಆಗ ಸೊಲೊಮೋನನು ದೇವರಿಗೆ, “ನೀನು ನನ್ನ ತಂದೆಯಾದ ದಾವೀದನ ಮೇಲೆ ಮಹಾಕೃಪೆಯನ್ನು ತೋರಿ ಅವನ ಸ್ಥಾನದಲ್ಲಿ ಅರಸನಾಗುವದಕ್ಕೆ ನನ್ನನ್ನು ಆರಿಸಿಕೊಂಡಿರುವೆ. 9 ದೇವರಾದ ಯೆಹೋವನೇ ನೀನು ನನ್ನ ತಂದೆಯಾದ ದಾವೀದನಿಗೆ ಮಾಡಿರುವ ವಾಗ್ದಾನವನ್ನು ನೆರವೇರಿಸು. ಒಂದು ದೊಡ್ಡ ರಾಜ್ಯಕ್ಕೆ ನನ್ನನ್ನು ಅರಸನನ್ನಾಗಿ ನೇಮಿಸಿರುತ್ತೀ. ಅದರಲ್ಲಿ ಭೂಮಿಯ ಧೂಳಿನೋಪಾದಿಯಲ್ಲಿ ಜನರು ತುಂಬಿದ್ದಾರೆ. 10 ಈ ಜನರನ್ನು ಸರಿಯಾದ ರೀತಿಯಲ್ಲಿ ಆಳುವ ಹಾಗೆ ನನಗೆ ಜ್ಞಾನವನ್ನೂ ವಿವೇಕವನ್ನೂ ದಯಪಾಲಿಸು. ನಿನ್ನ ಸಹಾಯವಿಲ್ಲದೆ ಈ ನಿನ್ನ ಜನರನ್ನು ಆಳಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದನು.
11 ಆಗ ದೇವರು ಸೊಲೊಮೋನನಿಗೆ, “ನಿನ್ನ ಕೋರಿಕೆ ಒಳ್ಳೆಯದಾಗಿದೆ. ನೀನು ಐಶ್ವರ್ಯವನ್ನಾಗಲಿ ಗೌರವವನ್ನಾಗಲಿ ಬೆಳ್ಳಿಬಂಗಾರಗಳನ್ನಾಗಲಿ ಕೇಳಲಿಲ್ಲ. ನಿನ್ನ ವೈರಿಗಳನ್ನು ನಿರ್ಮೂಲ ಮಾಡುವಂತಾಗಲಿ ಅಥವಾ ನಿನಗೆ ದೀರ್ಘಾಯುಷ್ಯವನ್ನು ಕೊಡು ಎಂದಾಗಲಿ ನೀನು ಕೇಳಿಕೊಳ್ಳದೆ ರಾಜ್ಯವನ್ನು ನ್ಯಾಯವಾಗಿ ಆಳಲು ಬೇಕಾದ ಜ್ಞಾನವಿವೇಕಗಳನ್ನು ಕೇಳಿಕೊಂಡೆ. ನಾನು ಆರಿಸಿಕೊಂಡಿರುವ ಜನಾಂಗದ ಮೇಲೆ ಆಡಳಿತ ನಡಿಸುವಾಗ ಯೋಗ್ಯವಾದ ಸಲಹೆ ಕೊಡುವಂತೆ ಜ್ಞಾನವನ್ನು ಕೇಳಿರುತ್ತೀ. 12 ನಾನು ನಿನಗೆ ಜ್ಞಾನವಿವೇಕಗಳನ್ನು ಕೊಡುವೆನು. ಅದರ ಜೊತೆಯಲ್ಲಿ ನಿನಗೆ ಐಶ್ವರ್ಯವನ್ನೂ ಘನತೆಯನ್ನೂ ದಯಪಾಲಿಸುವೆನು. ನಿನಗಿಂತ ಮುಂಚೆ ಇದ್ದ ಯಾವ ಅರಸನಿಗೂ ಇಂಥಾ ಐಶ್ವರ್ಯಗಳಾಗಲಿ ಘನತೆಯಾಗಲಿ ಇರಲಿಲ್ಲ. ಮತ್ತು ಇನ್ನು ಮುಂದೆಯೂ ಯಾವ ರಾಜನಿಗೂ ಇಂಥಾ ಘನತೆ ಮತ್ತು ಐಶ್ವರ್ಯಗಳಿರುವುದಿಲ್ಲ” ಎಂದು ಹೇಳಿದನು.
13 ಸೊಲೊಮೋನನು ಗಿಬ್ಯೋನಿನಲ್ಲಿ ಆರಾಧನಾಸ್ಥಳಕ್ಕೆ ಹೋದನು. ಬಳಿಕ ಅವನು ದೇವದರ್ಶನ ಗುಡಾರದಿಂದ ಜೆರುಸಲೇಮಿಗೆ ಹಿಂದಿರುಗಿ ಇಸ್ರೇಲಿನ ಮೇಲೆ ರಾಜ್ಯಭಾರವನ್ನು ಮಾಡತೊಡಗಿದನು.
32 “ಆ ದಿನವಾಗಲಿ ಸಮಯವಾಗಲಿ ಯಾವಾಗ ಬರುತ್ತದೆಂಬುದು ಪರಲೋಕದಲ್ಲಿರುವ ಮಗನಿಗಾಗಲಿ ದೇವದೂತರಿಗಾಗಲಿ ತಿಳಿದಿಲ್ಲ. ತಂದೆಗೆ ಮಾತ್ರ ತಿಳಿದಿದೆ. 33 ಎಚ್ಚರಿಕೆಯಿಂದಿರಿ! ಯಾವಾಗಲೂ ಸಿದ್ಧರಾಗಿರಿ! ಆ ಸಮಯ ಯಾವಾಗ ಬರುತ್ತದೆಂದು ನಿಮಗೆ ತಿಳಿದಿಲ್ಲ.
34 “ತನ್ನ ಮನೆಯನ್ನು ಬಿಟ್ಟು ಪ್ರವಾಸಕ್ಕಾಗಿ ಹೋದ ಮನುಷ್ಯನಿಗೆ ಇದು ಹೋಲಿಕೆಯಾಗಿದೆ. ಅವನು ತನ್ನ ಮನೆಯನ್ನು ನೋಡಿಕೊಳ್ಳುವುದಕ್ಕಾಗಿ ಸೇವಕರಿಗೆ ಒಪ್ಪಿಸಿಕೊಟ್ಟನು. ಅವನು ಪ್ರತಿಯೊಬ್ಬ ಸೇವಕನಿಗೂ ಒಂದೊಂದು ವಿಶೇಷ ಕೆಲಸವನ್ನು ಕೊಟ್ಟು ದ್ವಾರಪಾಲಕನಿಗೆ, ‘ನೀನು ಯಾವಾಗಲೂ ಸಿದ್ಧವಾಗಿರು’ ಎಂದು ಹೇಳಿದನು. ಅಂತೆಯೇ ನಾನೂ ನಿಮಗೆ ಹೇಳುವುದೇನೆಂದರೆ, 35 ಯಾವಾಗಲೂ ಸಿದ್ಧವಾಗಿರಿ. ಮನೆಯ ಯಜಮಾನನು ಯಾವಾಗ ಹಿಂತಿರುಗಿ ಬರುವನೋ ನಿಮಗೆ ತಿಳಿದಿಲ್ಲ. ಅವನು ಮಧ್ಯಾಹ್ನದಲ್ಲಾಗಲಿ ಮಧ್ಯರಾತ್ರಿಯಲ್ಲಾಗಲಿ ಮುಂಜಾನೆಯಲ್ಲಾಗಲಿ ಸೂರ್ಯೋದಯದಲ್ಲಾಗಲಿ ಬರಬಹುದು. 36 ಯಜಮಾನನು ಬೇಗನೆ ಹಿಂತಿರುಗಿ ಬರಬಹುದು. ನೀವು ಯಾವಾಗಲೂ ಸಿದ್ಧವಾಗಿದ್ದರೆ, ಅವನು ಬಂದಾಗ ನೀವು ನಿದ್ರಿಸುತ್ತಿರುವುದಿಲ್ಲ. 37 ನಾನು ನಿಮಗೂ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ, ‘ಸಿದ್ಧರಾಗಿರಿ!’”
Kannada Holy Bible: Easy-to-Read Version. All rights reserved. © 1997 Bible League International