Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 148

148 ಯೆಹೋವನಿಗೆ ಸ್ತೋತ್ರವಾಗಲಿ!
ಮೇಲೋಕದಲ್ಲಿರುವ ದೇವದೂತರೇ, ಆಕಾಶಮಂಡಲದಿಂದ ಯೆಹೋವನನ್ನು ಸ್ತುತಿಸಿರಿ!
ಎಲ್ಲಾ ದೂತರುಗಳೇ, ಆತನಿಗೆ ಸ್ತೋತ್ರಮಾಡಿರಿ!
    ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ!
ಸೂರ್ಯಚಂದ್ರರೇ, ಆತನನ್ನು ಸ್ತುತಿಸಿರಿ!
    ಆಕಾಶದಲ್ಲಿರುವ ನಕ್ಷತ್ರಗಳೇ, ಬೆಳಕುಗಳೇ, ಆತನನ್ನು ಸ್ತುತಿಸಿರಿ!
ಆತನಿಗೆ ಸ್ತೋತ್ರಮಾಡಿರಿ!
    ಆತನ ಸರ್ವಸೈನ್ಯಗಳೇ ಆತನನ್ನು ಸ್ತುತಿಸಿರಿ!
ಉನ್ನತೋನ್ನತವಾದ ಆಕಾಶವೇ, ಆತನನ್ನು ಸ್ತುತಿಸು!
    ಆಕಾಶದ ಮೇಲಿರುವ ನೀರುಗಳೇ ಆತನನ್ನು ಸ್ತುತಿಸಿರಿ!
ಅವು ಯೆಹೋವನ ಹೆಸರನ್ನು ಸ್ತುತಿಸಲಿ.
    ಆತನು ಆಜ್ಞಾಪಿಸಲು ಅವುಗಳೆಲ್ಲಾ ಸೃಷ್ಟಿಯಾದವು!
ಇವುಗಳೆಲ್ಲಾ ಶಾಶ್ವತವಾಗಿರುವಂತೆ ಆತನು ಮಾಡಿದನು.
    ಎಂದಿಗೂ ಕೊನೆಗೊಳ್ಳದ ನಿಯಮಗಳನ್ನು ಆತನು ಮಾಡಿದನು.
ಭೂಮಿಯ ಮೇಲಿರುವ ಸಮಸ್ತವೇ, ಯೆಹೋವನಿಗೆ ಸ್ತೋತ್ರಮಾಡಿರಿ!
    ಮಹಾಸಮುದ್ರ ಪ್ರಾಣಿಗಳೇ, ಆತನನ್ನು ಸ್ತುತಿಸಿರಿ!
ಆತನು ಬೆಂಕಿಯನ್ನೂ ಆಲಿಕಲ್ಲನ್ನೂ ಮಂಜನ್ನೂ
    ಹೊಗೆಯನ್ನೂ ಬಿರುಗಾಳಿಯನ್ನೂ ಉಂಟುಮಾಡಿದನು.
ಆತನು ಬೆಟ್ಟಗಳನ್ನೂ ಗುಡ್ಡಗಳನ್ನೂ
    ಹಣ್ಣಿನ ಮರಗಳನ್ನೂ ದೇವದಾರು ಮರಗಳನ್ನೂ ಸೃಷ್ಟಿಮಾಡಿದನು.
10 ಆತನು ಎಲ್ಲಾ ಕಾಡುಪ್ರಾಣಿಗಳನ್ನೂ ಪಶುಗಳನ್ನೂ ಕ್ರಿಮಿಕೀಟಗಳನ್ನೂ ಪಕ್ಷಿಗಳನ್ನೂ ಸೃಷ್ಟಿಮಾಡಿದನು.
11 ಆತನು ಭೂಮಿಯ ಮೇಲೆ ರಾಜರುಗಳನ್ನೂ ಜನಾಂಗಗಳನ್ನೂ
    ನಾಯಕರುಗಳನ್ನೂ ನ್ಯಾಯಾಧಿಪತಿಗಳನ್ನೂ ಸೃಷ್ಟಿಮಾಡಿದನು.
12 ಆತನು ಪ್ರಾಯಸ್ಥರಾದ ಸ್ತ್ರೀಪುರುಷರನ್ನೂ
    ವೃದ್ಧರನ್ನೂ ಯೌವನಸ್ಥರನ್ನೂ ಸೃಷ್ಟಿಸಿದನು.
13 ಯೆಹೋವನ ಹೆಸರನ್ನು ಕೊಂಡಾಡಿರಿ!
    ಆತನ ಹೆಸರನ್ನು ಶಾಶ್ವತವಾಗಿ ಸನ್ಮಾನಿಸಿರಿ!
    ಭೂಮ್ಯಾಕಾಶಗಳಲ್ಲಿರುವ ಸಮಸ್ತವೇ, ಆತನನ್ನು ಸ್ತುತಿಸು!
14 ಆತನು ತನ್ನ ಜನರನ್ನು ಬಲಿಷ್ಠರನ್ನಾಗಿ ಮಾಡುತ್ತಾನೆ.
    ಆತನ ಭಕ್ತರನ್ನು ಜನರು ಹೊಗಳುವರು.
    ಜನರು ಇಸ್ರೇಲರನ್ನು ಹೊಗಳುವರು.
ಆತನು ಹೋರಾಡುತ್ತಿರುವುದು ಅವರಿಗಾಗಿಯೇ.
    ಯೆಹೋವನಿಗೆ ಸ್ತೋತ್ರವಾಗಲಿ!

2 ಪೂರ್ವಕಾಲವೃತ್ತಾಂತ 24:17-24

17 ಯೆಹೋಯಾದನು ಸತ್ತ ಬಳಿಕ ಯೆಹೂದದೇಶದ ಪ್ರಮುಖರು ಅರಸನಾದ ಯೆಹೋವಾಷನ ಬಳಿಗೆ ಬಂದು ನಮಸ್ಕರಿಸಿದರು. ಅರಸನು ಅವರ ಮಾತುಗಳನ್ನು ಕೇಳಿದನು. 18 ಅರಸನೂ ಆ ನಾಯಕರುಗಳೂ ದೇವಾಲಯವನ್ನು ನಿರಾಕರಿಸಿ ಅಶೇರ ಸ್ತಂಭಗಳನ್ನೂ ಇತರ ವಿಗ್ರಹಗಳನ್ನೂ ಆರಾಧಿಸಿದರು. ಯೆಹೋವನು ಜೆರುಸಲೇಮಿನ ಮತ್ತು ಯೆಹೂದದ ಜನರ ಮೇಲೆ ಕೋಪಗೊಂಡನು. ಯಾಕೆಂದರೆ ಅರಸನೂ ಆ ನಾಯಕರುಗಳೂ ಯೆಹೋವನ ಮುಂದೆ ದೋಷಿಗಳಾಗಿದ್ದರು. 19 ಆತನು ಅವರನ್ನು ತನ್ನ ಕಡೆಗೆ ತಿರುಗಿಕೊಳ್ಳುವಂತೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು. ಪ್ರವಾದಿಗಳು ಜನರನ್ನು ಎಚ್ಚರಿಸಿದರೂ ಅವರ ಮಾತುಗಳಿಗೆ ಅವರು ಗಮನಕೊಡಲಿಲ್ಲ.

20 ಜೆಕರ್ಯನ ಮೇಲೆ ದೇವರಾತ್ಮನು ಬಂದನು. ಅವನು ಯಾಜಕನಾದ ಯೆಹೋಯಾದನ ಮಗ. ಜೆಕರ್ಯನು ಜನರ ಮುಂದೆ ನಿಂತು, “ಯೆಹೋವನು ಹೀಗೆನ್ನುತ್ತಾನೆ: ‘ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲು ನೀವು ಏಕೆ ನಿರಾಕರಿಸುತ್ತೀರಿ? ಏತಕ್ಕೆ? ನೀವು ಉದ್ಧಾರವಾಗುವುದಿಲ್ಲ. ನೀವು ಯೆಹೋವನನ್ನು ತೊರೆದದ್ದರಿಂದ ಆತನು ನಿಮ್ಮನ್ನೂ ತೊರೆದುಬಿಟ್ಟಿರುತ್ತಾನೆ’” ಎಂದು ಹೇಳಿದನು.

21 ಆದರೆ ಅವರು ಜೆಕರ್ಯನ ವಿರೋಧವಾಗಿ ಒಳಸಂಚು ಮಾಡಿದರು. ಅವನನ್ನು ಕೊಲ್ಲಲು ಅರಸನು ಅವರಿಗೆ ಆಜ್ಞಾಪಿಸಿದನು. ಆಗ ಅವರು ಅವನನ್ನು ದೇವಾಲಯದ ಅಂಗಳದಲ್ಲಿಯೇ ಕಲ್ಲೆಸೆದು ಕೊಂದರು. 22 ಯೆಹೋವಾಷನು ಯೆಹೋಯಾದನ ಉಪಕಾರವನ್ನು ನೆನಸಲಿಲ್ಲ. ಯೆಹೋಯಾದನು ಜೆಕರ್ಯನ ತಂದೆ. ಯೆಹೋಯಾದನ ಮಗನನ್ನು ಯೆಹೋವಾಷನು ಕೊಂದನು. ಜೆಕರ್ಯನು ಸಾಯುವಾಗ, ಹೇಳಿದ್ದೇನೆಂದರೆ, “ನೀನು ಮಾಡುತ್ತಿರುವದನ್ನು ಯೆಹೋವನೇ ನೋಡಿ ನ್ಯಾಯ ತೀರಿಸಲಿ” ಎಂದು ಹೇಳಿದನು.

23 ಆ ವರ್ಷಾಂತ್ಯದಲ್ಲಿ ಅರಾಮ್ಯರ ಸೈನ್ಯವು ಯೆಹೋವಾಷನಿಗೆ ವಿರುದ್ಧವಾಗಿ ಬಂತು. ಅವರು ಯೆಹೂದದೇಶ ಮತ್ತು ಜೆರುಸಲೇಮಿನ ಮೇಲೆ ದಾಳಿ ಮಾಡಿ ಎಲ್ಲಾ ನಾಯಕರನ್ನು ಸಂಹರಿಸಿದರು. ಅಲ್ಲಿದ್ದ ಬೆಲೆಬಾಳುವ ಎಲ್ಲಾ ವಸ್ತುಗಳನ್ನು ದಮಸ್ಕದ ಅರಸನಿಗೆ ಕಳುಹಿಸಿದರು. 24 ಅರಾಮ್ಯರ ಸೈನ್ಯವು ಸ್ವಲ್ಪ ಮಂದಿಯಿಂದ ಕೂಡಿದ್ದರೂ ಯೆಹೂದದ ದೊಡ್ಡ ಸೈನ್ಯವನ್ನು ಸೋಲಿಸಿಬಿಟ್ಟಿತು. ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತೊರೆದುದರಿಂದ ದೇವರಾದ ಯೆಹೋವನು ಹಾಗೆ ಮಾಡಿದನು. ಈ ರೀತಿಯಾಗಿ ಯೆಹೋವಾಷನು ಶಿಕ್ಷಿಸಲ್ಪಟ್ಟನು.

ಅಪೊಸ್ತಲರ ಕಾರ್ಯಗಳು 6:1-7

ವಿಶೇಷ ಕಾರ್ಯಕ್ಕೆ ಏಳು ಮಂದಿಯ ಆಯ್ಕೆ

ಯೇಸುವಿನ ಶಿಷ್ಯರ ಸಂಖ್ಯೆಯು ಹೆಚ್ಚುಹೆಚ್ಚಾಗುತ್ತಿತ್ತು. ಆದರೆ ಈ ಸಮಯದಲ್ಲಿ ಗ್ರೀಕ್ ಮಾತಾಡುವ ಶಿಷ್ಯರು ಯೆಹೂದ್ಯ ಶಿಷ್ಯರಿಗೆ ದೂರು ಹೇಳಿದರು. ಪ್ರತಿದಿನ ಶಿಷ್ಯರಿಗೆ ಕೊಡುವಂಥವುಗಳಲ್ಲಿ ತಮ್ಮ ವಿಧವೆಯರಿಗೆ ಅವರ ಪಾಲು ದೊರೆಯುತ್ತಿಲ್ಲವೆಂದು ಅವರು ಆಪಾದಿಸಿದರು.

ಆಗ ಹನ್ನೆರಡು ಮಂದಿ ಅಪೊಸ್ತಲರು ಇಡೀ ಶಿಷ್ಯಸಮುದಾಯದ ಸಭೆಯನ್ನು ಕರೆದು ಅವರಿಗೆ, “ದೇವರ ವಾಕ್ಯವನ್ನು ಬೋಧಿಸುವುದು ನಮ್ಮ ಕೆಲಸ. ಆದರೆ ಅದು ನಿಂತುಹೋಗುವುದು ಸರಿಯಲ್ಲ! ನಾವು ಜನರಿಗೆ ಊಟವನ್ನು ಒದಗಿಸಲು ಸಹಾಯ ಮಾಡುವುದಕ್ಕಿಂತಲೂ ದೇವರ ವಾಕ್ಯೋಪದೇಶವನ್ನು ಮುಂದುವರಿಸುವುದು ಒಳ್ಳೆಯದು. ಆದ್ದರಿಂದ, ಸಹೋದರರೇ, ನಿಮ್ಮ ಜನರಲ್ಲಿ ಏಳು ಮಂದಿಯನ್ನು ಆರಿಸಿಕೊಳ್ಳಿರಿ. ಅವರು ಜನರಿಂದ ಒಳ್ಳೆಯವರು ಎನಿಸಿಕೊಂಡವರಾಗಿರಬೇಕು; ಜ್ಞಾನಪೂರ್ಣರಾಗಿರಬೇಕು ಮತ್ತು ಪವಿತ್ರಾತ್ಮಭರಿತರಾಗಿರಬೇಕು. ನಾವು ಅವರಿಗೆ ಈ ಕೆಲಸವನ್ನು ಒಪ್ಪಿಸಿಕೊಡುತ್ತೇವೆ. ಆಗ ನಾವು ನಮ್ಮ ಸಮಯವನ್ನೆಲ್ಲಾ ಪ್ರಾರ್ಥನೆಗೂ ದೇವರ ವಾಕ್ಯೋಪದೇಶಕ್ಕೂ ಕೊಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಇಡೀ ಸಮುದಾಯವು ಈ ಆಲೋಚನೆಯನ್ನು ಇಷ್ಟಪಟ್ಟಿತು. ಆದ್ದರಿಂದ ಅವರು ಈ ಏಳು ಮಂದಿಯನ್ನು ಆರಿಸಿಕೊಂಡರು: ಸ್ತೆಫನ (ಮಹಾನಂಬಿಕೆಯುಳ್ಳ ಮತ್ತು ಪವಿತ್ರಾತ್ಮಭರಿತನಾಗಿದ್ದ ಮನುಷ್ಯ), ಫಿಲಿಪ್ಪ,[a] ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ನಿಕೊಲಾಯ (ಮತಾಂತರ ಹೊಂದಿ ಯೆಹೂದ್ಯನಾಗಿದ್ದ ಇವನು ಅಂತಿಯೋಕ್ಯಕ್ಕೆ ಸೇರಿದವನು.) ಬಳಿಕ ಅವರು ಈ ಏಳು ಮಂದಿಯನ್ನು ಅಪೊಸ್ತಲರ ಮುಂದೆ ನಿಲ್ಲಿಸಿದರು. ಅಪೊಸ್ತಲರು ಪ್ರಾರ್ಥಿಸಿ, ಅವರ ತಲೆಗಳ ಮೇಲೆ ತಮ್ಮ ಕೈಗಳನ್ನಿಟ್ಟರು.

ದೇವರ ವಾಕ್ಯವು ಹೆಚ್ಚುಹೆಚ್ಚು ಜನರಿಗೆ ತಲುಪತೊಡಗಿತು. ಜೆರುಸಲೇಮಿನ ಶಿಷ್ಯಸಮುದಾಯವು ಹೆಚ್ಚುಹೆಚ್ಚು ದೊಡ್ಡದಾಗ ತೊಡಗಿತು. ಅನೇಕ ಯೆಹೂದ್ಯಯಾಜಕರು ನಂಬಿಕೊಂಡರು ಮತ್ತು ವಿಧೇಯರಾದರು.

ಅಪೊಸ್ತಲರ ಕಾರ್ಯಗಳು 7:51-60

51 ಸ್ತೆಫನನು ಮಾತನ್ನು ಮುಂದುವರಿಸಿದನು: “ಮೊಂಡರಾದ ಯೆಹೂದ್ಯನಾಯಕರೇ! ನೀವು ನಿಮ್ಮ ಹೃದಯಗಳನ್ನು ದೇವರಿಗೆ ಕೊಟ್ಟಿಲ್ಲ. ನೀವು ಆತನಿಗೆ ಕಿವಿಗೊಡುವುದಿಲ್ಲ. ಪವಿತ್ರಾತ್ಮನು ನಿಮಗೆ ತಿಳಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ ನೀವು ಯಾವಾಗಲೂ ವಿರೋಧಿಗಳಾಗಿದ್ದೀರಿ. ನಿಮ್ಮ ಪಿತೃಗಳು ಹೀಗೆಯೇ ಮಾಡಿದರು ಮತ್ತು ನೀವೂ ಅವರಂತೆಯೇ ಇದ್ದೀರಿ! 52 ಜೀವಸಿದ್ದ ಪ್ರವಾದಿಗಳಲ್ಲಿ ಪ್ರತಿಯೊಬ್ಬರನ್ನೂ ನಿಮ್ಮ ಪಿತೃಗಳು ಹಿಂಸಿಸಿದರು. ನೀತಿವಂತನೊಬ್ಬನು (ಕ್ರಿಸ್ತನು) ಬರುತ್ತಾನೆಂದು ಬಹುಕಾಲದ ಹಿಂದೆಯೇ ಆ ಪ್ರವಾದಿಗಳು ತಿಳಿಸಿದ್ದರು. ಆದರೆ ನಿಮ್ಮ ಪಿತೃಗಳು ಆ ಪ್ರವಾದಿಗಳನ್ನು ಕೊಂದುಹಾಕಿದರು. ಈಗ ನೀವು ನೀತಿವಂತನಿಗೆ ವಿರುದ್ಧವಾಗಿ ತಿರುಗಿ ಆತನನ್ನು ಕೊಂದುಹಾಕಿದಿರಿ. 53 ದೇವರು ತನ್ನ ದೂತರ ಮೂಲಕ ಕೊಟ್ಟ ಮೋಶೆಯ ಧರ್ಮಶಾಸ್ತ್ರವನ್ನು ಪಡೆದುಕೊಂಡ ನೀವೇ ಅದಕ್ಕೆ ವಿಧೇಯರಾಗುವುದಿಲ್ಲ!”

ಸ್ತೆಫನನು ಕೊಲ್ಲಲ್ಪಟ್ಟನು

54 ಸ್ತೆಫನನ ಈ ಮಾತುಗಳನ್ನು ಕೇಳಿದ ಆ ಯೆಹೂದ್ಯನಾಯಕರು ಬಹಳ ಕೋಪಗೊಂಡರು. ಅವರು ರೋಷದಿಂದ ಸ್ತೆಫನನ ಮೇಲೆ ಹಲ್ಲು ಕಡಿದರು. 55 ಆದರೆ ಸ್ತೆಫನನು ಪವಿತ್ರಾತ್ಮಭರಿತನಾಗಿದ್ದನು. ಅವನು ಆಕಾಶದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಯೇಸುವು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ಕಂಡು, 56 “ಇಗೋ, ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನು (ಯೇಸು) ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ!” ಎಂದು ಹೇಳಿದನು.

57 ಆಗ ಯೆಹೂದ್ಯನಾಯಕರೆಲ್ಲ ಗಟ್ಟಿಯಾಗಿ ಕೂಗಿ, ತಮ್ಮ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡರು. ಅವರೆಲ್ಲರು ಸ್ತೆಫನನ ಬಳಿಗೆ ಒಟ್ಟಾಗಿ ಓಡಿಬಂದು, 58 ಅವನನ್ನು ಪಟ್ಟಣದಿಂದ ಹೊರಗೆ ಎಳೆದೊಯ್ದು, ಅವನು ಸಾಯುವವರೆಗೂ ಅವನ ಮೇಲೆ ಕಲ್ಲುಗಳನ್ನು ಎಸೆದರು. ಸ್ತೆಫನನ ವಿರುದ್ಧವಾಗಿ ಸುಳ್ಳು ಹೇಳಿದ ಜನರು ತಮ್ಮ ಮೇಲಂಗಿಗಳನ್ನು ಬಿಚ್ಚಿ ಸೌಲನೆಂಬ ಯುವಕನಿಗೆ ಕೊಟ್ಟು, 59 ಸ್ತೆಫನನಿಗೆ ಕಲ್ಲುಗಳನ್ನು ಎಸೆದರು. ಆದರೆ ಸ್ತೆಫನನು ಪ್ರಾರ್ಥಿಸುತ್ತಾ, “ಪ್ರಭುವಾದ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿಕೊ!” ಎಂದನು. 60 ಅವನು ಮೊಣಕಾಲೂರಿ, “ಪ್ರಭುವೇ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡ!” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International