Revised Common Lectionary (Semicontinuous)
ಸಮಾಧಾನದ ಅರಸನು ಬರುವನು
11 ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು. ಆ ಕೊಂಬೆಯು ಇಷಯನ ಬೇರಿನಿಂದ ಬೆಳೆಯುವುದು. 2 ಯೆಹೋವನ ಆತ್ಮವು ಆತನಲ್ಲಿದ್ದು, ಜ್ಞಾನ, ತಿಳುವಳಿಕೆ, ಮಾರ್ಗದರ್ಶನ ಮತ್ತು ಸಾಮರ್ಥ್ಯವನ್ನು ದಯಪಾಲಿಸುವದು; ಯೆಹೋವನನ್ನು ತಿಳಿದುಕೊಳ್ಳಲು ಮತ್ತು ಗೌರವಿಸಲು ಆ ಮಗುವಿಗೆ ಸಹಾಯಿಸುವುದು. 3 ಆತನು ಯೆಹೋವನನ್ನು ಸನ್ಮಾನಿಸುತ್ತಾ ಸಂತೋಷಿಸುವನು.
ಆತನು ಜನರಿಗೆ ನ್ಯಾಯತೀರಿಸುವುದು ಹೊರತೋರಿಕೆಯ ಆಧಾರದ ಮೇಲಲ್ಲ; ಕೇಳಿಕೊಂಡದ್ದರ ಆಧಾರದ ಮೇಲೂ ಅಲ್ಲ. 4-5 ಆತನು ಬಡಜನರಿಗೆ ಅನ್ಯಾಯಮಾಡದೆ ನ್ಯಾಯವಾದ ತೀರ್ಪನ್ನು ಕೊಡುವನು, ದೇಶದ ಬಡಜನರಿಗೋಸ್ಕರವಾಗಿ ಮಾಡುವ ಆಲೋಚನೆಯನ್ನು ಪಕ್ಷಪಾತವಿಲ್ಲದೆ ಮಾಡುವನು. ಆತನು ಜನರಿಗೆ ಶಿಕ್ಷೆ ಕೊಡಬೇಕೆಂದು ತೀರ್ಮಾನಿಸಿದರೆ ಅದನ್ನು ಆಜ್ಞಾಪಿಸಿ ಶಿಕ್ಷಿಸುವನು. ದುಷ್ಟರಿಗೆ ಮರಣದಂಡನೆಯಾಗಬೇಕೆಂದು ಆತನು ತೀರ್ಮಾನಿಸಿದರೆ, ಆತನು ಆಜ್ಞಾಪಿಸಿ ಕೊಲ್ಲಿಸುವನು. ನ್ಯಾಯವೇ ಆತನಿಗೆ ನಡುಕಟ್ಟು, ಒಳ್ಳೆಯತನವೇ ಆತನಿಗೆ ಸೊಂಟಪಟ್ಟಿಯಾಗಿವೆ.
6 ಆ ಸಮಯದಲ್ಲಿ ತೋಳಗಳು ಕುರಿಮರಿಯೊಂದಿಗೆ ಸಮಾಧಾನದಿಂದ ಒಟ್ಟಾಗಿ ವಾಸಿಸುವವು. ಚಿರತೆಯು ಆಡಿನ ಮರಿಗಳೊಂದಿಗೆ ಮಲಗಿಕೊಳ್ಳುವದು. ಕರುಗಳು, ಪ್ರಾಯದ ಸಿಂಹಗಳು, ಹೋರಿಗಳು ಒಟ್ಟಾಗಿ ಸಮಾಧಾನದಿಂದ ಜೀವಿಸುವವು. ಒಂದು ಚಿಕ್ಕಮಗು ಅವುಗಳನ್ನು ನಡಿಸುವುದು. 7 ದನಗಳೂ ಕರಡಿಗಳೂ ಜೊತೆಯಾಗಿರುವವು. ಅವುಗಳ ಮರಿಗಳೆಲ್ಲಾ ಒಂದಕ್ಕೊಂದು ಹಾನಿಮಾಡದೆ ಒಟ್ಟಾಗಿ ಮಲಗಿಕೊಳ್ಳುವವು. ಸಿಂಹಗಳು ದನಗಳಂತೆ ಹುಲ್ಲು ತಿನ್ನುವವು. ಹಾವುಗಳು ಸಹ ಜನರಿಗೆ ಹಾನಿ ಮಾಡುವದಿಲ್ಲ. 8 ಮಗುವು ನಾಗರಹಾವಿನ ಹುತ್ತದ ಬಳಿ ಆಡುತ್ತಾ ಹುತ್ತದೊಳಗೆ ಕೈಹಾಕುವದು.
9 ಯಾರೂ ಪರಸ್ಪರ ಹಾನಿಮಾಡುವದಿಲ್ಲ. ನನ್ನ ಪವಿತ್ರ ಪರ್ವತದಲ್ಲಿನ ಜನರು ವಸ್ತುಗಳನ್ನು ನಾಶಮಾಡಲು ಇಷ್ಟಪಡುವದಿಲ್ಲ. ಯಾಕೆಂದರೆ ಆಗ ಜನರು ನಿಜವಾಗಿಯೂ ಯೆಹೋವನನ್ನು ಅರಿತಿರುವರು. ಸಾಗರದಲ್ಲಿ ನೀರು ತುಂಬಿದಂತೆ ಲೋಕವೆಲ್ಲಾ ಆತನ ವಿಷಯವೆಂಬ ಜ್ಞಾನದಿಂದ ತುಂಬುವದು.
20 ಯೆಹೋವನು ಮೋಶೆ ಆರೋನರಿಗೆ, 21 “ಈ ಜನರನ್ನು ಬಿಟ್ಟು ಪ್ರತ್ಯೇಕವಾಗಿ ನಿಲ್ಲಿರಿ. ನಾನು ಅವರನ್ನು ಈಗ ನಾಶ ಮಾಡಬಯಸುತ್ತೇನೆ” ಅಂದನು.
22 ಆದರೆ ಮೋಶೆ ಆರೋನರು ನೆಲದವರೆಗೆ ಬಾಗಿ, “ದೇವರೇ, ಎಲ್ಲಾ ಜನರ ಆಲೋಚನೆ ನಿನಗೆ ಗೊತ್ತಿದೆ. ದಯಮಾಡಿ ಎಲ್ಲಾ ಜನರ ಮೇಲೆ ಕೋಪಗೊಳ್ಳಬೇಡ. ನಿಜವಾಗಿ ಪಾಪಮಾಡಿದವನು ಕೇವಲ ಒಬ್ಬನಲ್ಲವೇ?” ಎಂದು ಮೊರೆಯಿಟ್ಟರು.
23 ಆಗ ಯೆಹೋವನು ಮೋಶೆಗೆ, 24 “ಜನರಿಗೆ ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದ ಸುತ್ತಮುತ್ತಲಿಂದ ದೂರಹೋಗಬೇಕೆಂದು ಆಜ್ಞಾಪಿಸು” ಎಂದು ಹೇಳಿದನು.
25 ಮೋಶೆಯು ಎದ್ದು ಕೋರಹ, ದಾತಾನ್ ಮತ್ತು ಅಬೀರಾಮರ ಬಳಿಗೆ ಹೋದನು. ಇಸ್ರೇಲರ ಹಿರಿಯರೆಲ್ಲರೂ ಅವನನ್ನು ಹಿಂಬಾಲಿಸಿದರು. 26 ಮೋಶೆಯು ಜನರನ್ನು ಎಚ್ಚರಿಸಿ, “ಈ ಕೆಟ್ಟ ಜನರ ಗುಡಾರಗಳಿಂದ ಹೊರಟುಹೋಗಿರಿ. ಇವರ ಸ್ವತ್ತಿನಲ್ಲಿ ಯಾವುದನ್ನೂ ಮುಟ್ಟಬಾರದು. ಇಲ್ಲವಾದರೆ ಅವರ ಪಾಪಗಳ ದೆಸೆಯಿಂದ ನೀವೂ ನಾಶವಾಗುವಿರಿ” ಎಂದು ಹೇಳಿದನು.
27 ಆದ್ದರಿಂದ ಜನರು ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರಗಳನ್ನು ಬಿಟ್ಟು ದೂರಹೋದರು. ದಾತಾನ್ ಮತ್ತು ಅಬೀರಾಮ್ ಹೊರಗೆ ಬಂದು ತಮ್ಮ ತಮ್ಮ ಡೇರೆಗಳ ಪ್ರವೇಶದ್ವಾರದ ಬಳಿ ತಮ್ಮ ಹೆಂಡತಿಯರೊಡನೆ, ಮಕ್ಕಳೊಡನೆ ಮತ್ತು ಕೂಸುಗಳೊಡನೆ ನಿಂತುಕೊಂಡರು.
28 ಆಗ ಮೋಶೆ ಜನರಿಗೆ, “ಈ ಕಾರ್ಯಗಳೆಲ್ಲಾ ನನ್ನ ಆಲೋಚನೆಯಿಂದ ಆಗಲಿಲ್ಲವೆಂದೂ ಯೆಹೋವನೇ ಈ ಕಾರ್ಯಗಳನ್ನು ಮಾಡುವುದಕ್ಕೆ ನನ್ನನ್ನು ಕಳುಹಿಸಿದನೆಂದೂ ನೀವು ತಿಳಿದುಕೊಳ್ಳುವಂತೆ ನಾನು ಸಾಕ್ಷಿಯನ್ನು ಕೊಡುವೆನು. 29 ಇಲ್ಲಿರುವ ಜನರು ಸಾಯುವರು. ಆದರೆ ಇವರ ಅಂತ್ಯವು ಎಲ್ಲರಿಗೂ ಸಂಭವಿಸುವ ಅಂತ್ಯವಾಗಿದ್ದರೆ, ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳಿದುಕೊಳ್ಳಬೇಕು. 30 ಆದರೆ ಯೆಹೋವನು ಇವರಿಗೋಸ್ಕರ ಅಪೂರ್ವ ಶಿಕ್ಷೆಯನ್ನು ಕಲ್ಪಿಸಿದರೆ ಅಂದರೆ ಭೂಮಿಯು ಬಾಯ್ದೆರೆದು ಇವರನ್ನೂ ಇವರ ಸರ್ವಸ್ವವನ್ನೂ ನುಂಗುವುದರಿಂದ ಇವರೆಲ್ಲರೂ ಸಜೀವಿಗಳಾಗಿ ಸಮಾಧಿಯಾದರೆ, ಇವರು ನಿಜವಾಗಿಯೂ ಯೆಹೋವನನ್ನು ತಿರಸ್ಕರಿಸಿದವರೆಂದು ನೀವು ತಿಳಿದುಕೊಳ್ಳಬೇಕು” ಎಂದನು.
31 ಕೂಡಲೇ, ಆ ಜನರು ನಿಂತಿದ್ದ ನೆಲವು ಸೀಳಿತು. 32 ಭೂಮಿಯೇ ಬಾಯಿತೆರೆದು ಅವರನ್ನು ನುಂಗಿಬಿಟ್ಟಿತೊ ಎಂಬಂತೆ, ಅವರ ಕುಟುಂಬಗಳವರನ್ನು ಕೋರಹನ ಎಲ್ಲಾ ಹಿಂಬಾಲಕರನ್ನು ಮತ್ತು ಅವರ ಆಸ್ತಿಯೆಲ್ಲವನ್ನು ನುಂಗಿಬಿಟ್ಟಿತು. 33 ಆ ಜನರೆಲ್ಲಾ ಸಜೀವ ಸಮಾಧಿಯಾದರು. ಅವರ ಆಸ್ತಿಪಾಸ್ತಿಯೆಲ್ಲಾ ಅವರೊಡನೆ ಭೂಸಮಾಧಿಯಾಯಿತು. ಆ ಬಳಿಕ ಭೂಮಿ ಅವರ ಸಮೇತವಾಗಿ ಮುಚ್ಚಿಕೊಂಡಿತು. ಅದೇ ಅವರ ಅಂತ್ಯವಾಯಿತು. ಅವರು ಸಮುದಾಯದಿಂದ ಶಾಶ್ವತವಾಗಿ ಇಲ್ಲವಾದರು!
34 ನಾಶವಾಗುತ್ತಿರುವ ಜನರ ಗೋಳಾಟವನ್ನು ಕೇಳಿದ ಇಸ್ರೇಲ್ ಜನರು, “ಭೂಮಿಯು ನಮ್ಮನ್ನೂ ನುಂಗಿಬಿಡುತ್ತದೆ!” ಎಂದುಕೊಂಡು ನಾನಾ ದಿಕ್ಕುಗಳಿಗೆ ಓಡಿಹೋದರು.
35 ಅಲ್ಲದೆ ಯೆಹೋವನಿಂದ ಬೆಂಕಿಯು ಹೊರಟುಬಂದು ಧೂಪವನ್ನು ಅರ್ಪಿಸುತ್ತಿದ್ದ ಇನ್ನೂರೈವತ್ತು ಮಂದಿಯನ್ನು ದಹಿಸಿಬಿಟ್ಟಿತು.
23 ಪೌಲನು ಮತ್ತು ಯೆಹೂದ್ಯರು ಸಭೆಸೇರಲು ಒಂದು ದಿನವನ್ನು ಗೊತ್ತುಮಾಡಿದರು. ಅಂದು ಇನ್ನೂ ಅನೇಕ ಮಂದಿ ಯೆಹೂದ್ಯರು ಪೌಲನ ಮನೆಯಲ್ಲಿ ಸಭೆಸೇರಿದರು. ಪೌಲನು ಬೆಳಗ್ಗೆಯಿಂದ ಸಂಜೆಯವರೆಗೂ ಅವರೊಂದಿಗೆ ಮಾತಾಡಿದನು; ದೇವರ ರಾಜ್ಯದ ಬಗ್ಗೆ ಅವರಿಗೆ ವಿವರಿಸಿದನು. ಯೇಸುವಿನ ವಿಷಯವಾದ ಸಂಗತಿಗಳಲ್ಲಿ ನಂಬಿಕೆ ಇಡುವಂತೆ ಅವರನ್ನು ಒಪ್ಪಿಸಲು ಪ್ರಯತ್ನಿಸಿದನು. ಇದಕ್ಕಾಗಿ ಅವನು ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಬಳಸಿಕೊಂಡನು. 24 ಪೌಲನು ಹೇಳಿದ ಕೆಲವು ಸಂಗತಿಗಳನ್ನು ಕೆಲವು ಮಂದಿ ಯೆಹೂದ್ಯರು ನಂಬಿದರು. ಆದರೆ ಉಳಿದವರು ನಂಬಲಿಲ್ಲ. 25 ಅವರು ವಾದಮಾಡಿ ಅಲ್ಲಿಂದ ಹೊರಡಲು ಸಿದ್ಧರಾದಾಗ ಪೌಲನು ಅವರಿಗೆ ಹೀಗೆಂದನು: “ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಮೂಲಕ ಪಿತೃಗಳಿಗೆ ಸತ್ಯವನ್ನು ತಿಳಿಸಿದನು. ಆತನು ಹೀಗೆ ಹೇಳಿದ್ದಾನೆ:
26 ‘ಈ ಜನರ ಬಳಿಗೆ ಹೋಗಿ ಇಂತೆನ್ನಿರಿ:
ನೀನು ಕಿವಿಗೊಟ್ಟು ಕೇಳಿದರೂ
ಅರ್ಥಮಾಡಿಕೊಳ್ಳವುದಿಲ್ಲ;
ಕಣ್ಣಾರೆ ಕಂಡರೂ
ಗ್ರಹಿಸಿಕೊಳ್ಳುವುದಿಲ್ಲ.
27 ಹೌದು, ಈ ಜನರ ಹೃದಯಗಳು ಕಠಿಣವಾಗಿವೆ.
ಈ ಜನರಿಗೆ ಕಿವಿಗಳಿದ್ದರೂ ಕೇಳುವುದಿಲ್ಲ.
ಸತ್ಯವಿದ್ದರೂ ನೋಡಬಯಸರು.
ಅಲ್ಲದಿದ್ದರೆ ಇವರು
ಕಣ್ಣಾರೆ ಕಂಡು,
ಕಿವಿಯಾರೆ ಕೇಳಿ,
ಮನಸಾರೆ ಗ್ರಹಿಸಿಕೊಂಡು
ನನ್ನತ್ತ ತಿರುಗಿಕೊಳ್ಳುತ್ತಿದ್ದರು; ನನ್ನಿಂದ ಗುಣಹೊಂದುತ್ತಿದ್ದರು.’(A)
28 “ದೇವರು ತನ್ನ ರಕ್ಷಣೆಯನ್ನು ಯೆಹೂದ್ಯರಲ್ಲದವರಿಗೆ ಕಳುಹಿಸಿದ್ದಾನೆ. ಅವರು ಅದಕ್ಕೆ ಕಿವಿಗೊಡುವರು. ಯೆಹೂದ್ಯರಾದ ನಿಮಗೆ ಇದು ತಿಳಿದಿರಲಿ!” 29 [a]
30 ಪೌಲನು ತನ್ನ ಬಾಡಿಗೆ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ಸಂದರ್ಶಿಸಲು ಬಂದ ಜನರೆಲ್ಲರನ್ನು ಆದರದಿಂದ ಬರಮಾಡಿಕೊಂಡು, 31 ದೇವರ ರಾಜ್ಯದ ಬಗ್ಗೆ ಬೋಧಿಸುತ್ತಿದ್ದನು; ಪ್ರಭು ಯೇಸುಕ್ರಿಸ್ತನ ಬಗ್ಗೆ ಉಪದೇಶಿಸುತ್ತಿದ್ದನು; ಬಹು ಧೈರ್ಯದಿಂದ ಮಾತಾಡುತ್ತಿದ್ದನು. ಅವನಿಗೆ ಅಡ್ಡಿಮಾಡಲು ಯಾರೂ ಪ್ರಯತ್ನಿಸಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International