Revised Common Lectionary (Semicontinuous)
ಮರಿಯಳು ದೇವರನ್ನು ಸ್ತುತಿಸಿದಳು
46 ಆಗ ಮರಿಯಳು,
47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.
ರಾಜ್ಯವು ತಿರುಗಿ ತರಲ್ಪಡುವದು
6 ಯೆಹೋವನು ಹೇಳುವುದೇನೆಂದರೆ,
“ಜೆರುಸಲೇಮು ಗಾಯಗೊಂಡು ಕುಂಟಾಗಿದೆ;
ತಳ್ಳಲ್ಪಟ್ಟಿದೆ; ಗಾಯಗೊಂಡು ಶಿಕ್ಷಿಸಲ್ಪಟ್ಟಿದೆ.
ಆದರೆ ನಾನು ಆಕೆಯನ್ನು ನನ್ನ ಬಳಿಗೆ ಬರಮಾಡುವೆನು.
7 “ಆ ‘ಕುಂಟು’ ನಗರದ ಜನರೇ ಅಳಿದುಳಿದ ಜನರಾಗುವರು.
ಆ ಪಟ್ಟಣದ ಜನರನ್ನು ಬಲವಂತದಿಂದ ಓಡಿಸಲಾಯಿತು.
ಆದರೆ ನಾನು ಅವರನ್ನು ಬಲಶಾಲಿಯಾದ ಜನಾಂಗವನ್ನಾಗಿ ಮಾಡುವೆನು.”
ಯೆಹೋವನು ಅವರ ಅರಸನಾಗುವನು.
ಆತನು ಚೀಯೋನ್ ಪರ್ವತದಿಂದ ನಿತ್ಯಕಾಲಕ್ಕೂ ಆಳುವನು.
8 ಹಿಂಡುಗಳ ಗೋಪುರವೇ,
ನಿನ್ನ ಸಮಯವು ಬರುವದು.
ಚೀಯೋನಿನ ಒಫೆಲ್ ಗುಡ್ಡವೇ,
ನಿನಗೆ ತಿರುಗಿ ಅಧಿಕಾರ ದೊರಕುವುದು.
ಹೌದು, ಮೊದಲಿನಂತೆಯೇ
ಜೆರುಸಲೇಮಿನಲ್ಲೇ ರಾಜ್ಯವಿರುವುದು.
ಕ್ರಿಸ್ತನ ಮಹಿಮೆಯನ್ನು ನಾವು ನೋಡಿದೆವು
16 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಕ್ತಿಯ ಕುರಿತಾಗಿ ಮತ್ತು ಆತನ ಬರುವಿಕೆಯ ಕುರಿತಾಗಿ ನಿಮಗೆ ತಿಳಿಸಿದ್ದೇವೆ. ಆ ಸಂಗತಿಗಳು ಜನರಿಂದ ಕಲ್ಪಿತವಾದ ಜಾಣ್ಮೆಯ ಕಥೆಗಳಲ್ಲ. ಯೇಸುವಿನ ಮಹಿಮೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ. 17 ಆತನು ಅತ್ಯಂತ ಪ್ರಭಾವವುಳ್ಳ (ದೇವರ) ಸ್ವರವನ್ನು ಕೇಳಿದನು. ಆಗಲೇ ಆತನು ತಂದೆಯಾದ ದೇವರಿಂದ ಮಾನವನ್ನೂ ಪ್ರಭಾವವನ್ನೂ ಹೊಂದಿಕೊಂಡನು. ಆ ಸ್ವರವು, “ಈತನು ನನ್ನ ಪ್ರಿಯ ಮಗ. ಈತನನ್ನು ಬಹಳವಾಗಿ ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು. 18 ನಾವು ಪವಿತ್ರ ಪರ್ವತದ ಮೇಲೆ ಯೇಸುವಿನ ಜೊತೆಯಲ್ಲಿದ್ದಾಗ ಪರಲೋಕದಿಂದ ಬಂದ ಆ ಧ್ವನಿಯನ್ನು ನಾವೂ ಕೇಳಿದೆವು.[a]
19 ಪ್ರವಾದಿಗಳು ಹೇಳಿದ ಸಂಗತಿಗಳನ್ನು ಇದು ನಮಗೆ ಮತ್ತಷ್ಟು ಖಚಿತಪಡಿಸಿತು. ಅವರು ಹೇಳಿದ್ದನ್ನು ನೀವು ಚಾಚು ತಪ್ಪದೆ ಅನುಸರಿಸುವುದು ಒಳ್ಳೆಯದೇ ಸರಿ. ಅವರು ಹೇಳಿದ ಸಂಗತಿಗಳು ಅಂಧಕಾರದಲ್ಲಿ ಪ್ರಕಾಶಿಸುವ ಬೆಳಕಿನಂತಿವೆ. ನಿಮ್ಮ ಹೃದಯಗಳಲ್ಲಿ ಹಗಲು ಆರಂಭವಾಗಿ, ಮುಂಜಾನೆಯ ನಕ್ಷತ್ರವು ಮೂಡುವವರೆಗೂ ಆ ಬೆಳಕು ಪ್ರಕಾಶಿಸುತ್ತದೆ. 20 ನೀವು ಅರ್ಥಮಾಡಿಕೊಳ್ಳಬೇಕಾದ ಮುಖ್ಯವಾದ ಸಂಗತಿಯೇನೆಂದರೆ, ಪವಿತ್ರ ಗ್ರಂಥದಲ್ಲಿರುವ ಯಾವ ಪ್ರವಾದನವಾಕ್ಯವೂ ಒಬ್ಬ ವ್ಯಕ್ತಿಯ ವೈಯಕ್ತಿಕ ವಿವರಣೆಯಿಂದ ಬಂದಿಲ್ಲ. 21 ಯಾವ ಪ್ರವಾದನೆಯೇ ಆಗಲಿ ಮನುಷ್ಯನ ಚಿತ್ತದಿಂದ ಬಂದಿಲ್ಲ. ಆದರೆ ಜನರು ಪವಿತ್ರಾತ್ಮನಿಂದ ನಡೆಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತನಾಡಿದರು.
Kannada Holy Bible: Easy-to-Read Version. All rights reserved. © 1997 Bible League International