Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 11:1-9

ಸಮಾಧಾನದ ಅರಸನು ಬರುವನು

11 ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು. ಆ ಕೊಂಬೆಯು ಇಷಯನ ಬೇರಿನಿಂದ ಬೆಳೆಯುವುದು. ಯೆಹೋವನ ಆತ್ಮವು ಆತನಲ್ಲಿದ್ದು, ಜ್ಞಾನ, ತಿಳುವಳಿಕೆ, ಮಾರ್ಗದರ್ಶನ ಮತ್ತು ಸಾಮರ್ಥ್ಯವನ್ನು ದಯಪಾಲಿಸುವದು; ಯೆಹೋವನನ್ನು ತಿಳಿದುಕೊಳ್ಳಲು ಮತ್ತು ಗೌರವಿಸಲು ಆ ಮಗುವಿಗೆ ಸಹಾಯಿಸುವುದು. ಆತನು ಯೆಹೋವನನ್ನು ಸನ್ಮಾನಿಸುತ್ತಾ ಸಂತೋಷಿಸುವನು.

ಆತನು ಜನರಿಗೆ ನ್ಯಾಯತೀರಿಸುವುದು ಹೊರತೋರಿಕೆಯ ಆಧಾರದ ಮೇಲಲ್ಲ; ಕೇಳಿಕೊಂಡದ್ದರ ಆಧಾರದ ಮೇಲೂ ಅಲ್ಲ. 4-5 ಆತನು ಬಡಜನರಿಗೆ ಅನ್ಯಾಯಮಾಡದೆ ನ್ಯಾಯವಾದ ತೀರ್ಪನ್ನು ಕೊಡುವನು, ದೇಶದ ಬಡಜನರಿಗೋಸ್ಕರವಾಗಿ ಮಾಡುವ ಆಲೋಚನೆಯನ್ನು ಪಕ್ಷಪಾತವಿಲ್ಲದೆ ಮಾಡುವನು. ಆತನು ಜನರಿಗೆ ಶಿಕ್ಷೆ ಕೊಡಬೇಕೆಂದು ತೀರ್ಮಾನಿಸಿದರೆ ಅದನ್ನು ಆಜ್ಞಾಪಿಸಿ ಶಿಕ್ಷಿಸುವನು. ದುಷ್ಟರಿಗೆ ಮರಣದಂಡನೆಯಾಗಬೇಕೆಂದು ಆತನು ತೀರ್ಮಾನಿಸಿದರೆ, ಆತನು ಆಜ್ಞಾಪಿಸಿ ಕೊಲ್ಲಿಸುವನು. ನ್ಯಾಯವೇ ಆತನಿಗೆ ನಡುಕಟ್ಟು, ಒಳ್ಳೆಯತನವೇ ಆತನಿಗೆ ಸೊಂಟಪಟ್ಟಿಯಾಗಿವೆ.

ಆ ಸಮಯದಲ್ಲಿ ತೋಳಗಳು ಕುರಿಮರಿಯೊಂದಿಗೆ ಸಮಾಧಾನದಿಂದ ಒಟ್ಟಾಗಿ ವಾಸಿಸುವವು. ಚಿರತೆಯು ಆಡಿನ ಮರಿಗಳೊಂದಿಗೆ ಮಲಗಿಕೊಳ್ಳುವದು. ಕರುಗಳು, ಪ್ರಾಯದ ಸಿಂಹಗಳು, ಹೋರಿಗಳು ಒಟ್ಟಾಗಿ ಸಮಾಧಾನದಿಂದ ಜೀವಿಸುವವು. ಒಂದು ಚಿಕ್ಕಮಗು ಅವುಗಳನ್ನು ನಡಿಸುವುದು. ದನಗಳೂ ಕರಡಿಗಳೂ ಜೊತೆಯಾಗಿರುವವು. ಅವುಗಳ ಮರಿಗಳೆಲ್ಲಾ ಒಂದಕ್ಕೊಂದು ಹಾನಿಮಾಡದೆ ಒಟ್ಟಾಗಿ ಮಲಗಿಕೊಳ್ಳುವವು. ಸಿಂಹಗಳು ದನಗಳಂತೆ ಹುಲ್ಲು ತಿನ್ನುವವು. ಹಾವುಗಳು ಸಹ ಜನರಿಗೆ ಹಾನಿ ಮಾಡುವದಿಲ್ಲ. ಮಗುವು ನಾಗರಹಾವಿನ ಹುತ್ತದ ಬಳಿ ಆಡುತ್ತಾ ಹುತ್ತದೊಳಗೆ ಕೈಹಾಕುವದು.

ಯಾರೂ ಪರಸ್ಪರ ಹಾನಿಮಾಡುವದಿಲ್ಲ. ನನ್ನ ಪವಿತ್ರ ಪರ್ವತದಲ್ಲಿನ ಜನರು ವಸ್ತುಗಳನ್ನು ನಾಶಮಾಡಲು ಇಷ್ಟಪಡುವದಿಲ್ಲ. ಯಾಕೆಂದರೆ ಆಗ ಜನರು ನಿಜವಾಗಿಯೂ ಯೆಹೋವನನ್ನು ಅರಿತಿರುವರು. ಸಾಗರದಲ್ಲಿ ನೀರು ತುಂಬಿದಂತೆ ಲೋಕವೆಲ್ಲಾ ಆತನ ವಿಷಯವೆಂಬ ಜ್ಞಾನದಿಂದ ತುಂಬುವದು.

ಅರಣ್ಯಕಾಂಡ 16:1-19

ಮೋಶೆಗೆ ವಿರುದ್ಧ ದಂಗೆ ಎದ್ದದ್ದು

16 ಕೋರಹ, ದಾತಾನ್, ಅಬೀರಾಮ್ ಮತ್ತು ಓನ್ ಎಂಬವರು ಮೋಶೆಗೆ ವಿರುದ್ಧವಾಗಿ ಎದ್ದರು. (ಕೋರಹನು ಇಚ್ಹಾರನ ಮಗನು, ಇಚ್ಹಾರನು ಕೆಹಾತನ ಮಗನು. ಕೆಹಾತನು ಲೇವಿಯ ಮಗನು. ದಾತಾನ್ ಮತ್ತು ಅಬೀರಾಮ್ ಇವರು ಎಲೀಯಾಬನ ಗಂಡುಮಕ್ಕಳು ಮತ್ತು ಓನನು ಪೆಲೆತನ ಮಗನು. ದಾತಾನ್, ಅಬೀರಾಮ್ ಮತ್ತು ಓನ್ ಇವರು ರೂಬೇನನ ಸಂತತಿಯವರು.) ಈ ನಾಲ್ಕು ಮಂದಿ ಇಸ್ರೇಲರು ಇನ್ನಿತರ ಇನ್ನೂರೈವತ್ತು ಗಂಡಸರೊಂದಿಗೆ ಮೋಶೆಗೆ ವಿರುದ್ಧವಾಗಿ ಎದ್ದರು. ಅವರು ಜನರಿಂದ ಆರಿಸಲ್ಪಟ್ಟ ನಾಯಕರಾಗಿದ್ದುದರಿಂದ ಜನರೆಲ್ಲರೂ ಅವರನ್ನು ಬಲ್ಲವರಾಗಿದ್ದರು. ಅವರು ಮೋಶೆ ಮತ್ತು ಆರೋನರ ವಿರುದ್ಧ ಒಟ್ಟಾಗಿ ಸೇರಿಬಂದು, ಅವರಿಗೆ, “ನೀವು ಅಧಿಕಾರವನ್ನು ಮತ್ತು ಘನತೆಯನ್ನು ಅತಿಯಾಗಿ ಅಪೇಕ್ಷಿಸುತ್ತಿರುವಿರಿ. ಈ ಸಮೂಹದವರಲ್ಲಿರುವ ಪ್ರತಿಯೊಬ್ಬನೂ ದೇವರಿಗೆ ಪ್ರತಿಷ್ಠಿತನೇ. ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ಯೆಹೋವನ ಜನರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದೇನು?” ಎಂದು ಕೇಳಿದರು.

ಮೋಶೆ ಇದನ್ನು ಕೇಳಿ ನೆಲದವರೆಗೆ ಬಾಗಿ ಕೋರಹ ಮತ್ತು ಅವನ ಹಿಂಬಾಲಕರೆಲ್ಲರಿಗೆ ಹೇಳಿದ್ದೇನೆಂದರೆ: “ನಾಳೆ ಮುಂಜಾನೆ ಯಾವನು ತನ್ನವನೆಂದು ಮತ್ತು ಪವಿತ್ರನೆಂದು ಯೆಹೋವನು ತೋರಿಸುವನು. ತಾನು ಆರಿಸಿಕೊಂಡವನನ್ನು ಯೆಹೋವನು ತನ್ನ ಹತ್ತಿರ ಬರಮಾಡಿಕೊಳ್ಳುವನು. ಆದ್ದರಿಂದ ಕೋರಹನೇ, ನೀನೂ ನಿನ್ನ ಹಿಂಬಾಲಕರೆಲ್ಲರೂ ಈ ಕಾರ್ಯವನ್ನು ಮಾಡಬೇಕು: ನಾಳೆ ಅಗ್ಗಿಷ್ಠಿಕೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ಉರಿಯುವ ಕೆಂಡಗಳನ್ನು ಹಾಕಿರಿ ಮತ್ತು ಯೆಹೋವನ ಮುಂದೆ ಅವುಗಳ ಮೇಲೆ ಧೂಪವನ್ನು ಹಾಕಿರಿ. ಆಗ ಯೆಹೋವನು ಯಾರನ್ನು ಆರಿಸಿಕೊಳ್ಳುವನೋ ಅವನೇ ನಿಜವಾಗಿಯೂ ಪವಿತ್ರನಾದವನು. ಲೇವಿಯರಾದ ನೀವು ಅಧಿಕಾರವನ್ನು ಮತ್ತು ಘನತೆಯನ್ನು ಅತಿಯಾಗಿ ಅಪೇಕ್ಷಿಸುತ್ತೀರಿ.” ಎಂದು ಹೇಳಿದನು

ಮೋಶೆಯು ಕೋರಹನಿಗೆ, “ಲೇವಿಯರೇ, ಕೇಳಿರಿ! ಇಸ್ರೇಲರ ದೇವರು ನಿಮ್ಮನ್ನು ಸರ್ವಸಮೂಹದಿಂದ ಆರಿಸಿಕೊಂಡದ್ದಕ್ಕಾಗಿ ನೀವು ಸಂತೋಷಪಡಬೇಕು. ದೇವರ ಪವಿತ್ರ ಗುಡಾರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವುದಕ್ಕೂ ಇಸ್ರೇಲರ ಸೇವೆಯನ್ನು ಮಾಡುವುದಕ್ಕೂ ಮತ್ತು ಯಜ್ಞಗಳನ್ನು ಸಿದ್ಧಪಡಿಸುವುದರಲ್ಲಿ ಅವರಿಗೆ ಸಹಾಯಮಾಡುವುದಕ್ಕೂ ಯೆಹೋವನು ನಿಮ್ಮನ್ನು ತನ್ನ ಸಮೀಪಕ್ಕೆ ಬರಗೊಡಿಸಿದ್ದಾನೆ. ಅದು ನಿಮಗೆ ಸಾಕಾಗಲಿಲ್ಲವೇ? 10 ಈ ರೀತಿ ಆತನ ಬಳಿಯಲ್ಲಿ ಸೇವೆಮಾಡಲು ನಿನಗೂ ನಿನ್ನ ಸಹೋದ್ಯೋಗಿಗಳಾದ ಎಲ್ಲಾ ಲೇವಿಯರಿಗೂ ಯೆಹೋವನು ಅವಕಾಶ ಕೊಟ್ಟಿದ್ದಾನೆ. ಆದರೆ ಈಗ ನೀವು ಯಾಜಕರಾಗಬೇಕೆಂದು ಸಹ ಪ್ರಯತ್ನಿಸುತ್ತಿದ್ದೀರಿ. 11 ನೀನು ಮತ್ತು ನಿನ್ನ ಹಿಂಬಾಲಕರು ಒಟ್ಟಾಗಿ ಸೇರಿಕೊಂಡು ಯೆಹೋವನಿಗೆ ವಿರೋಧವಾಗಿ ದಂಗೆ ಎದ್ದಿದ್ದೀರಿ. ಆರೋನನು ತನ್ನನ್ನು ತಾನೇ ಮಹಾಯಾಜಕನನ್ನಾಗಿ ಆರಿಸಿಕೊಂಡನೋ? ಇಲ್ಲ! ಹೀಗಿರಲು ಆರೋನನಿಗೆ ವಿರೋಧವಾಗಿ ಗುಣುಗುಟ್ಟುವುದೇಕೆ?” ಎಂದು ಹೇಳಿದನು.

12 ಬಳಿಕ ಮೋಶೆ ಎಲೀಯಾಬನ ಗಂಡುಮಕ್ಕಳಾದ ದಾತಾನನನ್ನೂ ಅಬೀರಾಮನನ್ನೂ ಕರೇಕಳುಹಿಸಲಾಗಿ, ಅವರು ಅವನಿಗೆ, “ನಾವು ಬರುವುದಿಲ್ಲ. 13 ನೀನು ಹಾಲೂ ಜೇನೂ ಹರಿಯುವ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದು ಮರಳುಗಾಡಿನಲ್ಲಿ ಸಾಯಿಸುವುದು ಸಾಕಾಗಲಿಲ್ಲವೆಂದು ಭಾವಿಸಿ ನಮ್ಮ ಮೇಲೆ ದೊರೆತನ ಮಾಡಲು ಅಪೇಕ್ಷಿಸುತ್ತಿರುವೆಯೋ? 14 ನಾವು ನಿನ್ನನ್ನು ಯಾಕೆ ಹಿಂಬಾಲಿಸಬೇಕು? ನೀನು ನಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ಕರೆದುಕೊಂಡು ಬರಲಿಲ್ಲ. ನೀನು ನಮ್ಮ ಸ್ವಂತಕ್ಕೆ ಹೊಲಗಳನ್ನಾಗಲಿ ದ್ರಾಕ್ಷೇತೋಟಗಳನ್ನಾಗಲಿ ಕೊಡಲಿಲ್ಲ! ನೀನು ಈ ಜನರಿಗೆ ಇದೇ ರೀತಿ ಮೋಸಮಾಡಬೇಕೆಂದಿರುವೆಯೋ? ನಾವು ಬರುವುದಿಲ್ಲ” ಎಂದು ಹೇಳಿದರು.

15 ಇದರಿಂದ ಮೋಶೆ ಬಹಳ ಕೋಪಗೊಂಡನು. ಅವನು ಯೆಹೋವನಿಗೆ, “ನಾನು ಈ ಜನರಿಗೆ ಎಂದೂ ತೊಂದರೆ ಮಾಡಲಿಲ್ಲ. ಅವರಿಂದ ನಾನು ಒಂದು ಕತ್ತೆಯನ್ನಾದರೂ ತೆಗೆದುಕೊಂಡವನಲ್ಲ. ಯೆಹೋವನೇ, ಅವರ ಕಾಣಿಕೆಯನ್ನು ಸ್ವೀಕರಿಸಬೇಡ” ಎಂದು ಮನವಿ ಮಾಡಿದನು.

16 ಆಗ ಮೋಶೆಯು ಕೋರಹನಿಗೆ, “ನೀನು ಮತ್ತು ನಿನ್ನ ಹಿಂಬಾಲಕರೆಲ್ಲರು ನಾಳೆ ಯೆಹೋವನ ಸನ್ನಿಧಿಯಲ್ಲಿ ಆರೋನನೊಡನೆ ನಿಲ್ಲಬೇಕು. 17 ನಿಮ್ಮಲ್ಲಿ ಪ್ರತಿಯೊಬ್ಬನು ತನ್ನತನ್ನ ಧೂಪಾರತಿಯನ್ನು ಅಂದರೆ ಒಟ್ಟಾಗಿ ಇನ್ನೂರೈವತ್ತು ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು. ಹಾಗೆಯೇ ನೀನೂ ಆರೋನನೂ ನಿಮ್ಮನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು” ಎಂದು ಹೇಳಿದನು.

18 ಅದಕ್ಕನುಸಾರವಾಗಿ ಅವರೆಲ್ಲರೂ ತಮ್ಮತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಅವುಗಳಲ್ಲಿ ಕೆಂಡಗಳನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಆರೋನರ ಜೊತೆಯಲ್ಲಿ ದೇವದರ್ಶನಗುಡಾರದ ಪ್ರವೇಶದ್ವಾರದಲ್ಲಿ ನಿಂತುಕೊಂಡರು. 19 ಕೋರಹನು ತಮಗೆ ಎದುರಾಗಿ ಸರ್ವಸಮೂಹದವರನ್ನು ದೇವದರ್ಶನಗುಡಾರದ ಪ್ರವೇಶದ್ವಾರದ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ಮಹಿಮೆ ಸಮೂಹದವರೆಲ್ಲರಿಗೂ ಪ್ರತ್ಯಕ್ಷವಾಯಿತು.

ಇಬ್ರಿಯರಿಗೆ 13:7-17

ನಿಮ್ಮ ಸಭಾನಾಯಕರನ್ನು ನೆನಪು ಮಾಡಿಕೊಳ್ಳಿ. ಅವರು ನಿಮಗೆ ದೇವರ ಸಂದೇಶವನ್ನು ಬೋಧಿಸಿದರು. ಅವರು ಹೇಗೆ ಜೀವಿಸಿದ್ದರು ಮತ್ತು ಹೇಗೆ ಸತ್ತರು ಎಂಬುದನ್ನು ನೆನಪಿಸಿಕೊಳ್ಳಿ. ಅವರ ನಂಬಿಕೆಯನ್ನು ಅನುಸರಿಸಿರಿ. ಯೇಸು ಕ್ರಿಸ್ತನು ನಿನ್ನೆ ಇದ್ದಂತೆ ಇಂದಿಗೂ ಇದ್ದಾನೆ. ಸದಾಕಾಲ ಹಾಗೆಯೇ ಇರುವನು. ನಿಮ್ಮನ್ನು ತಪ್ಪು ಮಾರ್ಗಕ್ಕೆ ಎಳೆಯುವಂತಹ ಅನ್ಯೋಪದೇಶಗಳ ಕಡೆಗೆ ಗಮನಕೊಡಬೇಡಿ. ನಿಮ್ಮ ಹೃದಯಗಳು ದೇವರ ಕೃಪೆಯಿಂದ ಬಲವಾಗಬೇಕೇ ಹೊರತು ಆಹಾರದ ನಿಯಮಗಳ ಪಾಲನೆಯಿಂದಲ್ಲ. ಆ ನಿಯಮಗಳ ಪಾಲನೆಯು ಜನರಿಗೆ ಸಹಾಯಕವಾಗುವುದಿಲ್ಲ.

10 ನಮಗೊಂದು ಯಜ್ಞವಿದೆ. ಪವಿತ್ರ ಗುಡಾರದಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರು ನಮ್ಮ ಯಜ್ಞದಿಂದ ತಿನ್ನಲಾಗುವುದಿಲ್ಲ. 11 ಪ್ರಧಾನಯಾಜಕನು ಪಶುಗಳ ರಕ್ತವನ್ನು ಮಹಾ ಪವಿತ್ರಸ್ಥಳದೊಳಕ್ಕೆ ತೆಗೆದುಕೊಂಡು ಹೋಗುತ್ತಾನೆ. ಅವನು ಪಾಪಗಳಿಗಾಗಿ ಆ ರಕ್ತವನ್ನು ಅರ್ಪಿಸುತ್ತಾನೆ. ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವೆ. 12 ಆದ್ದರಿಂದ ಯೇಸುವು ನಗರದ ಹೊರಗಡೆ ಸಂಕಟವನ್ನು ಅನುಭವಿಸಿದನು. ಆತನು ತನ್ನ ಜನರನ್ನು ಪವಿತ್ರರನ್ನಾಗಿಸಲು, ತನ್ನ ಸ್ವಂತ ರಕ್ತವನ್ನೇ ಅರ್ಪಿಸಿ ಸತ್ತನು. 13 ನಾವು ಪಾಳೆಯದ ಹೊರಗಡೆಯಲ್ಲಿರುವ ಆತನ ಬಳಿಗೆ ಹೋಗಬೇಕು. ಆತನಿಗಾದ ಅಪಮಾನವನ್ನು ನಾವೂ ಸ್ವೀಕರಿಸಿಕೊಳ್ಳಬೇಕು. 14 ಈ ಲೋಕದಲ್ಲಿ ಶಾಶ್ವತವಾಗಿರುವ ನಗರವೇ ಇಲ್ಲ. ಆದರೆ ನಾವು ಮುಂದೆ ಬರುವ ನಗರಕ್ಕಾಗಿ ಕಾಯುತ್ತಿದ್ದೇವೆ. 15 ಆದ್ದರಿಂದ ಆತನ ಮೂಲಕ ನಾವು ದೇವರಿಗೆ ಯಜ್ಞಗಳನ್ನು ಅರ್ಪಿಸುವುದನ್ನು ನಿಲ್ಲಿಸಬಾರದು. ಆತನೇ ಪ್ರಭುವೆಂದು ನಮ್ಮ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16 ಇದಲ್ಲದೆ ಪರೋಪಕಾರವನ್ನೂ ದಾನಧರ್ಮವನ್ನೂ ಮರೆಯದಿರಿ. ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.

17 ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ ಮತ್ತು ಅವರ ಅಧಿಕಾರದ ಅಧೀನದಲ್ಲಿರಿ. ಅವರೇ ನಿಮಗೆ ಜವಾಬ್ದಾರರು. ಅವರು ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಈ ಕಾರ್ಯವನ್ನು ವ್ಯಸನದಿಂದ ಮಾಡದೆ ಸಂತೋಷದಿಂದ ಮಾಡಲು ಸಾಧ್ಯವಾಗುವಂತೆ ಅವರಿಗೆ ವಿಧೇಯರಾಗಿರಿ. ಅವರ ಕಾರ್ಯವನ್ನು ಕಷ್ಟಕರವನ್ನಾಗಿ ಮಾಡುವುದರಿಂದ ನಿಮಗೇನೂ ಪ್ರಯೋಜನವಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International