Revised Common Lectionary (Semicontinuous)
ಮರಿಯಳು ದೇವರನ್ನು ಸ್ತುತಿಸಿದಳು
46 ಆಗ ಮರಿಯಳು,
47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.
ನಮ್ಮಿಂದ ದೇವರು ಏನನ್ನು ಅಪೇಕ್ಷಿಸುತ್ತಾನೆ?
6 ನಾನು ದೇವರಾದ ಯೆಹೋವನನ್ನು ಸಂಧಿಸಲು ಬರುವಾಗ ಏನನ್ನು ತೆಗೆದುಕೊಂಡು ಬರಲಿ?
ಪರಲೋಕದ ದೇವರಿಗೆ ನಾನು ಅಡ್ಡಬಿದ್ದು ಆರಾಧಿಸುವಾಗ ಏನು ಮಾಡಲಿ?
ನಾನು ಕರ್ತನ ಬಳಿಗೆ ಬರುವಾಗ ಸರ್ವಾಂಗಹೋಮದೊಡನೆ
ಒಂದು ವರ್ಷದ ಕರುವನ್ನು ತೆಗೆದುಕೊಂಡು ಬರಲೋ?
7 ದೇವರಾದ ಯೆಹೋವನು ಒಂದು ಸಾವಿರ ಟಗರು,
ಹತ್ತುಸಾವಿರ ಎಣ್ಣೆಯ ಹೊಳೆಗಳಲ್ಲಿ ಸಂತೋಷಿಸುವನೋ?
ನಾನು ಮಾಡಿದ ತಪ್ಪಿನ ಪರಿಹಾರಕ್ಕಾಗಿ ನನ್ನ ಚೊಚ್ಚಲ ಮಗನನ್ನು ಸಮರ್ಪಿಸಲೋ?
ನನ್ನ ಶರೀರದಿಂದ ಬಂದ ಮಗನನ್ನು ನನ್ನ ಪಾಪಗಳಿಗಾಗಿ ಸಮರ್ಪಿಸಲೋ?
8 ಮನುಷ್ಯನೇ, ಒಳ್ಳೆಯದು ಏನೆಂದು ಯೆಹೋವನು ನಿನಗೆ ತಿಳಿಸಿದ್ದಾನೆ.
ಯೆಹೋವನು ನಿನ್ನಿಂದ ಅಪೇಕ್ಷಿಸುವದೇನೆಂದರೆ,
ಇತರರಿಗೆ ನೀನು ಅನ್ಯಾಯ ಮಾಡದಿರು.
ದಯೆ ಮತ್ತು ನಂಬಿಗಸ್ತಿಕೆಗಳನ್ನು ಪ್ರೀತಿಸು.
ದೀನತೆಯಿಂದ ನಿನ್ನ ದೇವರಿಗೆ ವಿಧೇಯನಾಗಿರು.
5 ಕ್ರಿಸ್ತನು ಈ ಲೋಕದಲ್ಲಿ ಪ್ರತ್ಯಕ್ಷನಾದಾಗ ಹೇಳಿದ್ದೇನೆಂದರೆ:
“ದೇವರೇ, ನಿನಗೆ ಯಜ್ಞನೈವೇದ್ಯಗಳು ಬೇಕಾಗಿಲ್ಲ.
ಆದರೆ ನೀನು ನನಗಾಗಿ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ.
6 ನೀನು ಸರ್ವಾಂಗಹೋಮಗಳಲ್ಲಿಯೂ
ಪಾಪಪರಿಹಾರಕ ಯಜ್ಞಗಳಲ್ಲಿಯೂ ಸಂತೋಷಪಡಲಿಲ್ಲ.
7 ಆಗ ನಾನು, ‘ದೇವರೇ, ನಾನು ಇಲ್ಲಿದ್ದೇನೆ.
ಧರ್ಮಶಾಸ್ತ್ರದಲ್ಲಿ ನನ್ನ ಬಗ್ಗೆ ಬರೆದಿರುವಂತೆಯೇ
ನಿನ್ನ ಚಿತ್ತಕ್ಕನುಸಾರವಾಗಿ ಮಾಡಲು ನಾನು ಬಂದಿದ್ದೇನೆ’ ಎಂದು ಹೇಳಿದೆ.”(A)
8 ಈ ಪವಿತ್ರ ಗ್ರಂಥದಲ್ಲಿ ಕ್ರಿಸ್ತನು ಮೊದಲನೆಯದಾಗಿ ಹೇಳಿದ್ದೇನೆಂದರೆ: “ನಿನಗೆ ಯಜ್ಞನೈವೇದ್ಯಗಳು ಬೇಕಾಗಿಲ್ಲ. ನೀನು ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ಸಂತೋಷಪಡಲಿಲ್ಲ.” (ಇವುಗಳೆಲ್ಲ ಧರ್ಮಶಾಸ್ತ್ರವು ಆಜ್ಞಾಪಿಸುವ ಯಜ್ಞಗಳು.) 9 ನಂತರ ಕ್ರಿಸ್ತನು ಹೇಳಿದ್ದೇನೆಂದರೆ, “ದೇವರೇ, ನಾನು ಇಲ್ಲಿದ್ದೇನೆ. ನಿನ್ನ ಚಿತ್ತಕ್ಕನುಸಾರವಾಗಿ ಮಾಡಲು ನಾನು ಬಂದಿದ್ದೇನೆ.”(B) ಆದ್ದರಿಂದ ದೇವರು ಯಜ್ಞಗಳ ಮೊದಲನೆ ವ್ಯವಸ್ಥೆಯನ್ನು ಕೊನೆಗೊಳಿಸಿ, ತನ್ನ ಹೊಸ ಮಾರ್ಗವನ್ನು ಆರಂಭಿಸಿದ್ದಾನೆ. 10 ದೇವರ ಇಷ್ಟಕ್ಕನುಸಾರವಾದ ಕಾರ್ಯಗಳನ್ನು ಯೇಸು ಕ್ರಿಸ್ತನು ಮಾಡಿದನು. ಆ ಕಾರಣದಿಂದಲೇ, ಯಜ್ಞವಾಗಿ ಅರ್ಪಿತವಾದ ಆತನ ದೇಹದ ಮೂಲಕ ನಾವು ಪರಿಶುದ್ಧರಾದೆವು. ಆತನು ಶಾಶ್ವತವಾದ ಯಜ್ಞವನ್ನು ಒಂದೇ ಸಲ ಅರ್ಪಿಸಿದನು.
Kannada Holy Bible: Easy-to-Read Version. All rights reserved. © 1997 Bible League International