Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 80:1-7

ಸ್ತುತಿಗೀತೆ. ರಚನೆಗಾರ: ಆಸಾಫ.

80 ಇಸ್ರೇಲನ್ನು ಕಾಯುವ ಕುರುಬನೇ,
    ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
    ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
    ಬಂದು ನಮ್ಮನ್ನು ರಕ್ಷಿಸು.
ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
    ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
    ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
    ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
    ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
    ಶತ್ರುಗಳು ನಮ್ಮನ್ನು ನೋಡಿ ನಗುವರು.
ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಯೆಶಾಯ 66:7-11

7-8 “ಪ್ರಸವವೇದನೆಗಿಂತ ಮೊದಲು ಸ್ತ್ರೀಯು ಮಗುವನ್ನು ಹೆರುವದಿಲ್ಲ. ತಾನು ಹೆರುವ ಶಿಶುವನ್ನು ನೋಡುವ ಮೊದಲು ಸ್ತ್ರೀಯು ಪ್ರಸವವೇದನೆ ಅನುಭವಿಸಲೇಬೇಕು. ಅದೇ ರೀತಿಯಲ್ಲಿ ಒಂದೇ ದಿನದಲ್ಲಿ ಹೊಸ ಭೂಮ್ಯಾಕಾಶಗಳು ಉಂಟಾಗುವದನ್ನು ಯಾರೂ ನೋಡುವದಿಲ್ಲ. ಒಂದೇ ದಿವಸದಲ್ಲಿ ಉಂಟಾದ ಜನಾಂಗದ ಬಗ್ಗೆ ಯಾರೂ ಕೇಳಲಿಲ್ಲ. ದೇಶವು ಪ್ರಸವವೇದನೆಯಂಥ ಬೇನೆಯನ್ನು ಅನುಭವಿಸಬೇಕು. ಆ ಬಳಿಕ ದೇಶವು ಹೊಸ ಜನಾಂಗವೆಂಬ ಮಕ್ಕಳನ್ನು ಹೆರುವುದು. ಅದೇ ರೀತಿಯಲ್ಲಿ ಹೊಸದಾಗಿ ಹುಟ್ಟುವ ಕಾರಣದಿಂದಲೇ ನಾನು ಬೇನೆಯನ್ನು ನಿಮಗೆ ಕೊಡುವೆನು.”

ಯೆಹೋವನು ಹೇಳುವುದೇನೆಂದರೆ: “ನಾನು ನಿಮಗೆ ಹೆರಿಗೆ ಬೇನೆಯನ್ನು ಕೊಡದೆಹೋದರೆ ನೀವು ಹೊಸ ಜನಾಂಗವಾಗಲಾರಿರಿ.” ಇದು ಯೆಹೋವನ ನುಡಿ.

10 ಜೆರುಸಲೇಮೇ, ಹರ್ಷಿಸು. ಜೆರುಸಲೇಮನ್ನು ಪ್ರೀತಿಸುವ ಜನರೇ, ಹರ್ಷಿಸಿರಿ.
    ಜೆರುಸಲೇಮಿಗೆ ದುಃಖಕೊಡುವ ವಿಷಯಗಳು ಜರುಗಿದ್ದರಿಂದ ನೀವು ದುಃಖಪಡುತ್ತಿದ್ದೀರಿ.
    ಆದರೆ ನೀವೀಗ ಸಂತೋಷಪಡಬೇಕು.
11 ಯಾಕೆಂದರೆ ಆಕೆಯ ಎದೆಯಿಂದ ದೊರಕುವ ಹಾಲಿನಂತೆ ನಿಮಗೆ ಕರುಣೆಯು ದೊರಕುವದು.
    ಆ ಹಾಲು ನಿಮ್ಮನ್ನು ಪೂರ್ಣವಾಗಿ ತೃಪ್ತಿಗೊಳಿಸುವದು.
    ನೀವು ಆ ಹಾಲನ್ನು ಕುಡಿದು ಜೆರುಸಲೇಮಿನ ವೈಭವದಲ್ಲಿ ಆನಂದಿಸುವಿರಿ.

ಲೂಕ 13:31-35

ಜೆರುಸಲೇಮಿನಲ್ಲಿ ಯೇಸುವಿನ ಮರಣ

(ಮತ್ತಾಯ 23:37-39)

31 ಆ ಸಮಯದಲ್ಲಿ ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು, “ಇಲ್ಲಿಂದ ಹೋಗಿ ಅಡಗಿಕೊ! ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ!” ಎಂದು ಹೇಳಿದರು.

32 ಯೇಸು ಅವರಿಗೆ, “ನೀವು ಹೋಗಿ ಆ ನರಿಗೆ (ಹೆರೋದನಿಗೆ), ‘ಈ ದಿನ ಮತ್ತು ನಾಳೆ ನಾನು ಜನರನ್ನು ದೆವ್ವಗಳಿಂದ ಬಿಡಿಸುತ್ತೇನೆ ಮತ್ತು ರೋಗಿಗಳನ್ನು ಗುಣಪಡಿಸುವ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ. ನಾಳಿದ್ದು, ನನ್ನ ಕಾರ್ಯವೆಲ್ಲಾ ಸಂಪೂರ್ಣ ಮುಕ್ತಾಯವಾಗುವುದು’ ಎಂದು ಹೇಳಿರಿ. 33 ಅನಂತರ ನಾನು ಜೆರುಸಲೇಮಿಗೆ ಹೋಗಬೇಕು. ಏಕೆಂದರೆ ಪ್ರವಾದಿಗಳು ಅಲ್ಲೇ ಕೊಲ್ಲಲ್ಪಡತಕ್ಕದ್ದು.

34 “ಜೆರುಸಲೇಮೇ, ಜೆರುಸಲೇಮೇ! ನೀನು ಪ್ರವಾದಿಗಳನ್ನು ಕೊಲ್ಲುವವಳು. ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ನೀನು ಕಲ್ಲೆಸೆದು ಕೊಲ್ಲುವೆ. ಕೋಳಿ ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಾನು ನಿನ್ನ ಜನರಿಗೆ ಸಹಾಯ ಮಾಡಲು ಎಷ್ಟೋ ಸಲ ಅಪೇಕ್ಷಿಸಿದೆ. ಆದರೆ ನೀನು ನನಗೆ ಆಸ್ಪದವನ್ನು ಕೊಡಲಿಲ್ಲ. 35 ನಿನ್ನ ಆಲಯವು ಬರಿದಾಗುವುದು. ‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ಆಶೀರ್ವಾದ!’(A) ಎಂದು ಹೇಳುವ ಸಮಯದ ತನಕ ನೀನು ನನ್ನನ್ನು ನೋಡುವುದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International