Revised Common Lectionary (Semicontinuous)
ಮರಿಯಳು ದೇವರನ್ನು ಸ್ತುತಿಸಿದಳು
46 ಆಗ ಮರಿಯಳು,
47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.
ಜೆರುಸಲೇಮಿನಿಂದ ಧರ್ಮಶಾಸ್ತ್ರ ಬರುವದು
4 ಅಂತ್ಯದ ದಿವಸಗಳಲ್ಲಿ ಯೆಹೋವನ ಆಲಯದ ಪರ್ವತವು
ಎಲ್ಲಾ ಪರ್ವತಗಳಿಗಿಂತಲೂ ಅತ್ಯುನ್ನತವಾಗಿರುವುದು.
ಅದು ಬೆಟ್ಟಗಳಿಗಿಂತಲೂ ಉನ್ನತವಾಗಿರುವದು.
ಅಲ್ಲಿಗೆ ಜನರು ಗುಂಪುಗುಂಪಾಗಿ ಹೋಗುವರು.
2 ಅನೇಕ ದೇಶಗಳಿಂದ ಜನರು ಅಲ್ಲಿಗೆ ಹೋಗುವರು.
“ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ,
ಯಾಕೋಬನ ದೇವರ ಆಲಯಕ್ಕೆ ನಾವು ಹೋಗೋಣ.
ಆಗ ದೇವರು ನಮಗೆ ಜೀವಿತದ ಮಾರ್ಗವನ್ನು ಕಲಿಸುವನು.
ಮತ್ತು ನಾವು ಆತನನ್ನು ಅನುಸರಿಸುವೆವು” ಎಂದು ಹೇಳುವರು.
ದೇವರ ಉಪದೇಶವು, ಆತನ ಸಂದೇಶವು ಚೀಯೋನ್ ಬೆಟ್ಟದಲ್ಲಿರುವ
ಜೆರುಸಲೇಮಿನಲ್ಲಿ ಪ್ರಾರಂಭವಾಗಿ ಪ್ರಪಂಚದಲ್ಲೆಲ್ಲಾ ಹಬ್ಬುತ್ತದೆ.
3 ಆಗ ಪ್ರಪಂಚದ ಎಲ್ಲಾ ಜನಾಂಗಗಳಿಗೆ ಯೆಹೋವನೇ ನ್ಯಾಯಾಧೀಶನು.
ದೂರದೇಶದಲ್ಲಿರುವ ಅನೇಕ ಜನರ ಜಗಳಗಳನ್ನು ಆತನು ನಿಲ್ಲಿಸುವನು.
ಆ ಜನರು ಯುದ್ಧದ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು.
ತಮ್ಮ ಖಡ್ಗಗಳಿಂದ ನೇಗಿಲ ಗುಳಗಳನ್ನು ತಯಾರಿಸುವರು.
ಭರ್ಜಿಗಳಿಂದ ಕುಡುಗೋಲುಗಳನ್ನು ತಯಾರಿಸುವರು.
ಜನರೊಳಗೆ ಪರಸ್ಪರ ಯುದ್ಧ ಮಾಡುವದನ್ನು ನಿಲ್ಲಿಸುವರು.
ಯುದ್ಧಕ್ಕೆ ತರಬೇತಿ ಎಂದಿಗೂ ಮಾಡರು.
4 ಪ್ರತಿಯೊಬ್ಬನೂ ತನ್ನ ದ್ರಾಕ್ಷಾಲತೆಯ ನೆರಳಿನಲ್ಲಿ ಕುಳಿತುಕೊಳ್ಳುವನು.
ಅವರು ಅಂಜೂರದ ಮರದಡಿಯಲ್ಲಿ ವಿಶ್ರಾಂತಿಯಲ್ಲಿರುವರು.
ಯಾರೂ ಅವರನ್ನು ಭಯಗೊಳಿಸುವದಿಲ್ಲ.
ಯಾಕೆಂದರೆ ಸರ್ವಶಕ್ತನಾದ ಯೆಹೋವನು ಹೀಗೆ ಆಗುವದೆಂದು ಹೇಳಿದ್ದಾನೆ.
5 ಬೇರೆ ದೇಶಗಳವರು ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತಾರೆ.
ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರನ್ನು ನಿತ್ಯಕಾಲಕ್ಕೂ ಸ್ಮರಿಸುವೆವು.
ಕ್ರಿಸ್ತನ ಮೂಲಕ ಸಮಾನತ್ವ
11 ನೀವು ಹುಟ್ಟಿದಂದಿನಿಂದ ಅನ್ಯಜನರಾಗಿದ್ದೀರಿ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಯೆಹೂದ್ಯರು ಕರೆಯುತ್ತಾರೆ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಕರೆಯುವ ಯೆಹೂದ್ಯರು ತಮ್ಮ ಬಗ್ಗೆ “ಸುನ್ನತಿಯವರು” ಎಂದು ಹೇಳಿಕೊಳ್ಳುತ್ತಾರೆ. (ಅವರ ಸುನ್ನತಿಯು ಶರೀರದಲ್ಲಿ ಕೈಯಿಂದ ಮಾಡಲ್ಪಡುತ್ತದೆ.) 12 ಪೂರ್ವಕಾಲದಲ್ಲಿ ನೀವು ಕ್ರಿಸ್ತನಿಲ್ಲದವರಾಗಿದ್ದಿರಿ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನೀವು ಇಸ್ರೇಲಿನ ಪ್ರಜೆಗಳಾಗಿರಲಿಲ್ಲ. ದೇವರು ತನ್ನ ಜನರೊಂದಿಗೆ ಮಾಡಿಕೊಂಡಿದ್ದ ವಾಗ್ದಾನಗಳಿಗೆ ಸಂಬಂಧಪಟ್ಟ ಒಡಂಬಡಿಕೆಗಳನ್ನು ನೀವು ಹೊಂದಿರಲಿಲ್ಲ. ನಿಮಗೆ ನಿರೀಕ್ಷೆಯಿರಲಿಲ್ಲ ಮತ್ತು ನೀವು ದೇವರನ್ನು ತಿಳಿದಿರಲಿಲ್ಲ. 13 ಹೌದು, ಒಂದು ಕಾಲದಲ್ಲಿ ನೀವು ದೇವರಿಗೆ ಬಹು ದೂರವಾಗಿದ್ದಿರಿ. ಆದರೆ ಈಗ ನೀವು ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೇವರಿಗೆ ಸಮೀಪಸ್ಥರಾದಿರಿ.
14 ಕ್ರಿಸ್ತನಿಂದ ಈಗ ನಮಗೆ ಸಮಾಧಾನ ದೊರೆತಿದೆ. ಕ್ರಿಸ್ತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಒಂದೇ ಜನಾಂಗವನ್ನಾಗಿ ಮಾಡಿದ್ದಾನೆ. ಯೆಹೂದ್ಯರೂ ಯೆಹೂದ್ಯರಲ್ಲದವರೂ ತಮ್ಮ ಮಧ್ಯೆ ಒಂದು ಅಡ್ಡಗೋಡೆಯಿದೆಯೋ ಎಂಬಂತೆ ಬೇರ್ಪಟ್ಟಿದ್ದರು. ಅವರು ಒಬ್ಬರನ್ನೊಬ್ಬರು ದ್ವೇಷಿಸಿದರು. ಆದರೆ ಕ್ರಿಸ್ತನು ತನ್ನ ದೇಹವನ್ನೇ ಅರ್ಪಿಸುವುದರ ಮೂಲಕ ದ್ವೇಷವೆಂಬ ಆ ಗೋಡೆಯನ್ನು ಕೆಡವಿದನು. 15 ಯೆಹೂದ್ಯರ ಧರ್ಮಶಾಸ್ತ್ರವು ಅನೇಕ ಆಜ್ಞೆಗಳನ್ನೂ ನಿಯಮಗಳನ್ನೂ ಹೊಂದಿತ್ತು. ಆದರೆ ಕ್ರಿಸ್ತನು ಆ ಧರ್ಮಶಾಸ್ತ್ರವನ್ನು ಅಂತಿಮಗೊಳಿಸಿದನು. ಯೆಹೂದ್ಯರನ್ನು ಮತ್ತು ಯೆಹೂದ್ಯರಲ್ಲದವರನ್ನು ತನ್ನಲ್ಲಿ ಒಂದು ಜನಾಂಗವನ್ನಾಗಿ ಮಾಡಿ ಶಾಂತಿಯನ್ನು ಸ್ಥಾಪಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 16 ಈ ಎರಡು ಜನಾಂಗಗಳ ನಡುವೆ ಇದ್ದ ದ್ವೇಷವನ್ನು ಕ್ರಿಸ್ತನು ಶಿಲುಬೆಯ ಮೂಲಕ ಕೊನೆಗೊಳಿಸಿದನು. ಈ ಜನಾಂಗಗಳು ಒಂದೇ ದೇಹವಾದ ಬಳಿಕ ಅವರನ್ನು ದೇವರ ಬಳಿಗೆ ನಡೆಸಬೇಕೆಂಬುದು ಕ್ರಿಸ್ತನ ಬಯಕೆಯಾಗಿತ್ತು. ಶಿಲುಬೆಯ ಮೇಲೆ ಪ್ರಾಣಕೊಡುವುದರ ಮೂಲಕ ಕ್ರಿಸ್ತನು ತನ್ನ ಈ ಬಯಕೆಯನ್ನು ಪೂರೈಸಿದನು. 17 ದೇವರಿಗೆ ದೂರವಾಗಿದ್ದ ನಿಮ್ಮ ಬಳಿಗೂ ಸಮೀಪಸ್ಥರಾಗಿದ್ದವರ ಬಳಿಗೂ ಕ್ರಿಸ್ತನು ಬಂದು ಸಮಾಧಾನದ ಕುರಿತು ಉಪದೇಶಿಸಿದನು. 18 ಹೌದು, ಕ್ರಿಸ್ತನ ಮೂಲಕ ನಾವೆಲ್ಲರೂ ಒಬ್ಬ ಆತ್ಮನಿಂದ ನಮ್ಮ ತಂದೆಯಾದ ದೇವರ ಬಳಿಗೆ ಬರಲು ಶಕ್ತರಾಗಿದ್ದೇವೆ.
19 ಆದ್ದರಿಂದ ಯೆಹೂದ್ಯರಲ್ಲದವರಾದ ನೀವು ಈಗ ವಿದೇಶಿಯರಲ್ಲ ಮತ್ತು ಅನ್ಯಜನರಲ್ಲ. ಈಗ ನೀವು ದೇವರ ಪರಿಶುದ್ಧ ಜನರೊಂದಿಗೆ ಪ್ರಜೆಗಳಾಗಿದ್ದೀರಿ. ನೀವು ದೇವರ ಕುಟುಂಬಕ್ಕೆ ಸೇರಿದವರಾಗಿದ್ದೀರಿ. 20 ವಿಶ್ವಾಸಿಗಳಾದ ನೀವು ದೇವರ ಸ್ವಂತ ಕಟ್ಟಡವಾಗಿದ್ದೀರಿ. ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ಆ ಕಟ್ಟಡವು ಕಟ್ಟಲ್ಪಟ್ಟಿದೆ. ಕ್ರಿಸ್ತನೇ ಆ ಕಟ್ಟಡಕ್ಕೆ ಮೂಲೆಗಲ್ಲಾಗಿದ್ದಾನೆ. 21 ಇಡೀ ಕಟ್ಟಡವು ಕ್ರಿಸ್ತನಲ್ಲಿ ಒಂದಾಗಿ ಸೇರಿಕೊಂಡಿದೆ. ಕ್ರಿಸ್ತನೇ ಅದನ್ನು ಬೆಳೆಯಿಸಿ ಪ್ರಭುವಿನಲ್ಲಿ ಪರಿಶುದ್ಧವಾದ ದೇವಾಲಯವನ್ನಾಗಿ ಮಾಡುತ್ತಾನೆ. 22 ನೀವು ಕ್ರಿಸ್ತನಲ್ಲಿ ಇತರ ಜನರೊಂದಿಗೆ (ಯೆಹೂದ್ಯರೊಂದಿಗೆ) ಕಟ್ಟಲ್ಪಡುತ್ತಿದ್ದೀರಿ. ದೇವರು ತನ್ನ ಆತ್ಮನ ಮೂಲಕ ವಾಸಿಸತಕ್ಕ ನಿವಾಸಸ್ಥಾನವಾಗಿ ನಿರ್ಮಿತರಾಗುತ್ತಿದ್ದೀರಿ.
Kannada Holy Bible: Easy-to-Read Version. All rights reserved. © 1997 Bible League International