Revised Common Lectionary (Semicontinuous)
148 ಯೆಹೋವನಿಗೆ ಸ್ತೋತ್ರವಾಗಲಿ!
ಮೇಲೋಕದಲ್ಲಿರುವ ದೇವದೂತರೇ, ಆಕಾಶಮಂಡಲದಿಂದ ಯೆಹೋವನನ್ನು ಸ್ತುತಿಸಿರಿ!
2 ಎಲ್ಲಾ ದೂತರುಗಳೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ!
3 ಸೂರ್ಯಚಂದ್ರರೇ, ಆತನನ್ನು ಸ್ತುತಿಸಿರಿ!
ಆಕಾಶದಲ್ಲಿರುವ ನಕ್ಷತ್ರಗಳೇ, ಬೆಳಕುಗಳೇ, ಆತನನ್ನು ಸ್ತುತಿಸಿರಿ!
ಆತನಿಗೆ ಸ್ತೋತ್ರಮಾಡಿರಿ!
ಆತನ ಸರ್ವಸೈನ್ಯಗಳೇ ಆತನನ್ನು ಸ್ತುತಿಸಿರಿ!
4 ಉನ್ನತೋನ್ನತವಾದ ಆಕಾಶವೇ, ಆತನನ್ನು ಸ್ತುತಿಸು!
ಆಕಾಶದ ಮೇಲಿರುವ ನೀರುಗಳೇ ಆತನನ್ನು ಸ್ತುತಿಸಿರಿ!
5 ಅವು ಯೆಹೋವನ ಹೆಸರನ್ನು ಸ್ತುತಿಸಲಿ.
ಆತನು ಆಜ್ಞಾಪಿಸಲು ಅವುಗಳೆಲ್ಲಾ ಸೃಷ್ಟಿಯಾದವು!
6 ಇವುಗಳೆಲ್ಲಾ ಶಾಶ್ವತವಾಗಿರುವಂತೆ ಆತನು ಮಾಡಿದನು.
ಎಂದಿಗೂ ಕೊನೆಗೊಳ್ಳದ ನಿಯಮಗಳನ್ನು ಆತನು ಮಾಡಿದನು.
7 ಭೂಮಿಯ ಮೇಲಿರುವ ಸಮಸ್ತವೇ, ಯೆಹೋವನಿಗೆ ಸ್ತೋತ್ರಮಾಡಿರಿ!
ಮಹಾಸಮುದ್ರ ಪ್ರಾಣಿಗಳೇ, ಆತನನ್ನು ಸ್ತುತಿಸಿರಿ!
8 ಆತನು ಬೆಂಕಿಯನ್ನೂ ಆಲಿಕಲ್ಲನ್ನೂ ಮಂಜನ್ನೂ
ಹೊಗೆಯನ್ನೂ ಬಿರುಗಾಳಿಯನ್ನೂ ಉಂಟುಮಾಡಿದನು.
9 ಆತನು ಬೆಟ್ಟಗಳನ್ನೂ ಗುಡ್ಡಗಳನ್ನೂ
ಹಣ್ಣಿನ ಮರಗಳನ್ನೂ ದೇವದಾರು ಮರಗಳನ್ನೂ ಸೃಷ್ಟಿಮಾಡಿದನು.
10 ಆತನು ಎಲ್ಲಾ ಕಾಡುಪ್ರಾಣಿಗಳನ್ನೂ ಪಶುಗಳನ್ನೂ ಕ್ರಿಮಿಕೀಟಗಳನ್ನೂ ಪಕ್ಷಿಗಳನ್ನೂ ಸೃಷ್ಟಿಮಾಡಿದನು.
11 ಆತನು ಭೂಮಿಯ ಮೇಲೆ ರಾಜರುಗಳನ್ನೂ ಜನಾಂಗಗಳನ್ನೂ
ನಾಯಕರುಗಳನ್ನೂ ನ್ಯಾಯಾಧಿಪತಿಗಳನ್ನೂ ಸೃಷ್ಟಿಮಾಡಿದನು.
12 ಆತನು ಪ್ರಾಯಸ್ಥರಾದ ಸ್ತ್ರೀಪುರುಷರನ್ನೂ
ವೃದ್ಧರನ್ನೂ ಯೌವನಸ್ಥರನ್ನೂ ಸೃಷ್ಟಿಸಿದನು.
13 ಯೆಹೋವನ ಹೆಸರನ್ನು ಕೊಂಡಾಡಿರಿ!
ಆತನ ಹೆಸರನ್ನು ಶಾಶ್ವತವಾಗಿ ಸನ್ಮಾನಿಸಿರಿ!
ಭೂಮ್ಯಾಕಾಶಗಳಲ್ಲಿರುವ ಸಮಸ್ತವೇ, ಆತನನ್ನು ಸ್ತುತಿಸು!
14 ಆತನು ತನ್ನ ಜನರನ್ನು ಬಲಿಷ್ಠರನ್ನಾಗಿ ಮಾಡುತ್ತಾನೆ.
ಆತನ ಭಕ್ತರನ್ನು ಜನರು ಹೊಗಳುವರು.
ಜನರು ಇಸ್ರೇಲರನ್ನು ಹೊಗಳುವರು.
ಆತನು ಹೋರಾಡುತ್ತಿರುವುದು ಅವರಿಗಾಗಿಯೇ.
ಯೆಹೋವನಿಗೆ ಸ್ತೋತ್ರವಾಗಲಿ!
32 “ಆದ್ದರಿಂದ ಮಕ್ಕಳೇ, ನನಗೆ ಕಿವಿಗೊಡಿರಿ!
ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರಾಗಿದ್ದಾರೆ.
33 ನನ್ನ ಉಪದೇಶಗಳನ್ನು ಕೇಳಿ ಜ್ಞಾನವಂತರಾಗಿರಿ.
ಕಿವಿಗೊಡದಿರಬೇಡಿ!
34 ನನಗೆ ಕಿವಿಗೊಡುವವನು ಧನ್ಯನಾಗಿದ್ದಾನೆ.
ಅವನು ಪ್ರತಿದಿನ ನನ್ನ ಮನೆಬಾಗಿಲುಗಳ ಬಳಿಯಲ್ಲೂ ನನ್ನ ಬಾಗಿಲಿನ ನಿಲುವುಗಳ ಬಳಿಯಲ್ಲೂ ಕಾದುಕೊಂಡಿರುತ್ತಾನೆ.
35 ನನ್ನನ್ನು ಕಂಡುಕೊಂಡಂಥವನು ಜೀವವನ್ನು ಕಂಡುಕೊಳ್ಳುತ್ತಾನೆ.
ಅವನಿಗೆ ಯೆಹೋವನ ಕೃಪೆಯು ದೊರೆಯುತ್ತದೆ.
36 ಆದರೆ ನನ್ನನ್ನು ಕಂಡುಕೊಳ್ಳಲಾರದವನು
ತನಗೇ ಕೇಡುಮಾಡಿಕೊಳ್ಳುವನು.
ನನ್ನನ್ನು ದ್ವೇಷಿಸುವ ಜನರೆಲ್ಲರೂ ಮರಣವನ್ನು ಪ್ರೀತಿಸುವರು.”
19 (ದೇವರನ್ನು ಮಹಿಮೆಪಡಿಸುವುದಕ್ಕಾಗಿ ಪೇತ್ರನು ಯಾವ ರೀತಿ ಸಾಯುತ್ತಾನೆ ಎಂಬುದನ್ನು ಸೂಚಿಸಲು ಯೇಸು ಹೀಗೆ ಹೇಳಿದನು.) ಬಳಿಕ ಯೇಸು ಪೇತ್ರನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.
20 ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿನ ಪ್ರೀತಿಯ ಶಿಷ್ಯನು ತಮ್ಮ ಹಿಂದೆ ನಡೆದುಕೊಂಡು ಬರುತ್ತಿರುವುದನ್ನು ಕಂಡನು. (ರಾತ್ರಿಭೋಜನದ ಸಮಯದಲ್ಲಿ ಯೇಸುವಿನ ಎದೆಯ ಕಡೆಗೆ ಬಾಗಿ, “ಪ್ರಭುವೇ, ನಿನಗೆ ದ್ರೋಹ ಮಾಡುವವನು ಯಾರು?” ಎಂದು ಕೇಳಿದ ಶಿಷ್ಯನೇ ಇವನು.) 21 ಪೇತ್ರನು ತಮ್ಮ ಹಿಂದೆ ಬರುತ್ತಿದ್ದ ಈ ಶಿಷ್ಯನನ್ನು ಕಂಡಾಗ ಯೇಸುವಿಗೆ, “ಪ್ರಭುವೇ, ಇವನ ವಿಷಯವೇನು?” ಎಂದು ಕೇಳಿದನು.
22 ಯೇಸು, “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.
23 ಆದ್ದರಿಂದ ಸಹೋದರರ (ಶಿಷ್ಯರ) ಮಧ್ಯೆ ಒಂದು ಕಥೆಯೇ ಹರಡಿಕೊಂಡಿತು. ಯೇಸುವಿನ ಪ್ರೀತಿಯ ಈ ಶಿಷ್ಯನು ಸಾಯುವುದಿಲ್ಲವೆಂದು ಅವರು ಹೇಳುತ್ತಿದ್ದರು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಹೇಳಲಿಲ್ಲ. “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು?” ಎಂದಷ್ಟೇ ಆತನು ಹೇಳಿದ್ದನು.
24 ಈ ಸಂಗತಿಗಳನ್ನು ಈಗ ಬರೆದಿರುವವನು ಮತ್ತು ಇವುಗಳ ವಿಷಯವಾಗಿ ಈಗ ಸಾಕ್ಷಿ ಹೇಳಿರುವ ಶಿಷ್ಯನು ಅವನೇ. ಅವನು ಹೇಳುವುದು ಸತ್ಯವೆಂದು ನಮಗೆ ಗೊತ್ತಿದೆ.
Kannada Holy Bible: Easy-to-Read Version. All rights reserved. © 1997 Bible League International