Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 25:1-10

ರಚನೆಗಾರ: ದಾವೀದ.

25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
    ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
    ದ್ರೋಹಿಗಳಾದರೋ ನಿರಾಶರಾಗುವರು.
    ಅವರಿಗೆ ಏನೂ ದೊರೆಯುವುದಿಲ್ಲ.

ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
    ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
    ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
    ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
    ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.

ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
    ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
    ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.
10 ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ
    ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.

ನೆಹೆಮೀಯ 9:26-31

26 ಅವರು ನಿನಗೆ ಎದುರುಬಿದ್ದು
    ನಿನ್ನ ಬೋಧನೆಯನ್ನು ತಾತ್ಸಾರ ಮಾಡಿದರು;
    ನಿನ್ನ ಪ್ರವಾದಿಗಳನ್ನು ಕೊಂದರು.
ಆ ಪ್ರವಾದಿಗಳಾದರೋ ಜನರನ್ನು ಎಚ್ಚರಿಸಿದರು;
    ನಿನ್ನ ಬಳಿಗೆ ಹಿಂತಿರುಗುವಂತೆ ಜನರನ್ನು ಪ್ರೋತ್ಸಾಹಿಸಿದರು.
    ಆದರೆ ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ಭಯಂಕರವಾದ ಕೃತ್ಯಗಳನ್ನು ಮಾಡಿದರು.
27 ಆದ್ದರಿಂದ ಅವರ ಶತ್ರುಗಳು ಅವರನ್ನು ಸದೆಬಡಿಯುವಂತೆ ಮಾಡಿದೆ.
    ವೈರಿಗಳು ಅವರಿಗೆ ತುಂಬಾ ಕಷ್ಟಕೊಟ್ಟರು.
ಕಷ್ಟಬಂದಾಗ ನಮ್ಮ ಪೂರ್ವಿಕರು ನಿನಗೆ ಮೊರೆಯಿಟ್ಟರು.
    ಪರಲೋಕದಿಂದ ನೀನು ಅವರನ್ನು ಆಲೈಸಿದೆ.
ನಿನ್ನ ಮಹಾಕರುಣೆಗನುಸಾರವಾಗಿ ನೀನು ಅವರ ಬಳಿಗೆ ಜನರನ್ನು ಕಳುಹಿಸಿ
    ಅವರನ್ನು ಅವರ ವೈರಿಗಳ ಕೈಗಳಿಂದ ರಕ್ಷಿಸಿದೆ.
28 ನಮ್ಮ ಪೂರ್ವಿಕರಿಗೆ ವಿಶ್ರಾಂತಿ ಸಿಕ್ಕಿದ ಕೂಡಲೇ
    ಅವರು ಮತ್ತೆ ದುಷ್ಕೃತ್ಯಗಳನ್ನು ಮಾಡಲಾರಂಭಿಸಿದರು.
ಆದ್ದರಿಂದ ಆ ವೈರಿಗಳು ಅವರನ್ನು ಸೋಲಿಸಿ
    ಶಿಕ್ಷಿಸುವಂತೆ ನೀನು ಮಾಡಿದೆ.
ಅವರು ನಿನ್ನ ಸಹಾಯಕ್ಕಾಗಿ ಮೊರೆಯಿಟ್ಟರು.
    ಪರಲೋಕದಲ್ಲಿ ನೀನು ಅವರ ಮೊರೆಯನ್ನು ಕೇಳಿ ಅವರಿಗೆ ಸಹಾಯಮಾಡಿದೆ.
ನೀನು ದಯಾಳು!
    ಈ ರೀತಿ ಅನೇಕಸಲ ಆಯಿತು.
29 ನೀನು ಅವರನ್ನು ಎಚ್ಚರಿಸಿದೆ.
    ನನ್ನ ಕಡೆಗೆ ತಿರುಗಿರಿ ಎಂದು ಎಚ್ಚರಿಸಿದೆ.
ಆದರೆ ಅವರು ಗರ್ವಿಷ್ಟರಾಗಿ ನಿನ್ನ ಆಜ್ಞೆಗಳನ್ನು ನಿರಾಕರಿಸಿದರು.
    ನಿನ್ನ ಆಜ್ಞೆಗಳನ್ನು ಅನುಸರಿಸುವ ಜನರು ನಿಜವಾಗಿಯೂ ಬಾಳುವರು.
ನಮ್ಮ ಪೂರ್ವಿಕರು ನಿನ್ನ ಆಜ್ಞೆಯನ್ನು ಮುರಿದುಹಾಕಿದರು;
    ಅವರು ಹಠಮಾರಿಗಳಾಗಿ ನಿನಗೆ ವಿಮುಖರಾದರು;
    ನಿನ್ನ ಮಾತುಗಳನ್ನು ಕೇಳದೆಹೋದರು.

30 “ನೀನು ನಮ್ಮ ಪೂರ್ವಿಕರ ವಿಷಯದಲ್ಲಿ ತಾಳ್ಮೆಯಿಂದಿದ್ದೆ.
    ನಿನ್ನ ವಿಷಯದಲ್ಲಿ ತಪ್ಪಾಗಿ ನಡೆದುಕೊಳ್ಳಲು ಅನೇಕ ವರ್ಷಗಳವರೆಗೆ ಅವರನ್ನು ಬಿಟ್ಟುಬಿಟ್ಟೆ.
ನೀನು ಅವರನ್ನು ನಿನ್ನ ಆತ್ಮನಿಂದ ಎಚ್ಚರಿಸಿದೆ;
    ಅವರನ್ನು ಎಚ್ಚರಿಸಲು ನಿನ್ನ ಪ್ರವಾದಿಗಳನ್ನು ಕಳುಹಿಸಿದೆ.
ಆದರೆ ನಮ್ಮ ಪೂರ್ವಿಕರು ಕಿವಿಗೊಡಲಿಲ್ಲ.
    ಆದ್ದರಿಂದ ಪರರಾಜ್ಯದ ಜನರಿಗೆ ಅವರನ್ನು ಒಪ್ಪಿಸಿದೆ.

31 “ಆದರೂ ನೀನು ದಯಾವಂತನು,
    ಅವರನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ.
ಅವರನ್ನು ತೊರೆಯಲಿಲ್ಲ.
    ನೀನು ಅಂಥಾ ದಯಾಪರನಾದ ದೇವರು.

ಲೂಕ 21:20-24

ಜೆರುಸಲೇಮಿನ ನಾಶನ

(ಮತ್ತಾಯ 24:15-21; ಮಾರ್ಕ 13:14-19)

20 “ಜೆರುಸಲೇಮಿನ ಸುತ್ತಲೂ ಸೈನ್ಯಗಳು ಮುತ್ತಿಗೆ ಹಾಕುವುದನ್ನು ನೀವು ನೋಡುವಿರಿ. ಆಗ ಜೆರುಸಲೇಮಿನ ನಾಶನದ ಕಾಲ ಬಂತೆಂದು ನೀವು ತಿಳಿದುಕೊಳ್ಳಿರಿ. 21 ಆ ಕಾಲದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಲಿ. ಜೆರುಸಲೇಮಿನಲ್ಲಿರುವ ಜನರು ಬೇಗನೆ ಅಲ್ಲಿಂದ ಪಲಾಯನ ಮಾಡಲಿ. ನೀವು ಪಟ್ಟಣದ ಹತ್ತಿರವಿದ್ದರೂ ಅದರೊಳಗೆ ಹೋಗದಿರಿ! 22 ದೇವರು ತನ್ನ ಜನರನ್ನು ಶಿಕ್ಷಿಸುವ ಕಾಲದ ಬಗ್ಗೆ ಪ್ರವಾದಿಗಳು ಬರೆದಿರುವ ಸಂಗತಿಗಳೆಲ್ಲಾ ಆಗ ನೆರವೇರುತ್ತದೆ. 23 ಆ ಕಾಲದಲ್ಲಿ, ಗರ್ಭಿಣಿ ಸ್ತ್ರೀಯರಿಗೂ ಚಿಕ್ಕ ಕೂಸುಗಳಿರುವವರಿಗೂ ಬಹಳ ಗೋಳಾಟ ಇರುವುದು. ಏಕೆಂದರೆ ಈ ದೇಶವು ಮಹಾವಿಪತ್ತಿಗೆ ಈಡಾಗುವುದು. ದೇವರು ಈ ಜನರ (ಯೆಹೂದ್ಯರ) ವಿಷಯದಲ್ಲಿ ಕೋಪಗೊಂಡಿರುವುದರಿಂದ 24 ಇವರಲ್ಲಿ ಕೆಲವರು ಸೈನಿಕರಿಂದ ಕೊಲ್ಲಲ್ಪಡುವರು. ಇನ್ನು ಕೆಲವರು ಬಂಧಿತರಾಗಿ ಪರದೇಶಕ್ಕೆ ಒಯ್ಯಲ್ಪಡುವರು. ಅನ್ಯದೇಶೀಯರು ತಮ್ಮ ಕಾಲ ಮುಗಿಯುವ ತನಕ ಪರಿಶುದ್ಧ ಪಟ್ಟಣವಾದ ಜೆರುಸಲೇಮಿನಲ್ಲಿ ನಡೆದಾಡುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International