Revised Common Lectionary (Semicontinuous)
ರಚನೆಗಾರ: ದಾವೀದ.
25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
2 ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
3 ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
ದ್ರೋಹಿಗಳಾದರೋ ನಿರಾಶರಾಗುವರು.
ಅವರಿಗೆ ಏನೂ ದೊರೆಯುವುದಿಲ್ಲ.
4 ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
5 ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
6 ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
7 ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.
8 ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
9 ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.
10 ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ
ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.
6 ನೀನು ದೇವರಾಗಿರುವೆ.
ಯೆಹೋವನೇ, ನೀನೊಬ್ಬನೇ ದೇವರು.
ನೀನು ಆಕಾಶವನ್ನು ಉಂಟುಮಾಡಿರುವೆ.
ಪರಲೋಕವನ್ನು ನೀನೇ ಮಾಡಿರುವೆ.
ಅದರಲ್ಲಿರುವದನ್ನೆಲ್ಲಾ ನೀನೇ ನಿರ್ಮಿಸಿರುವೆ.
ಭೂಮಿಯನ್ನೂ ಅದರಲ್ಲಿರುವ
ಸಮಸ್ತವನ್ನೂ ಸೃಷ್ಟಿಸಿದ್ದು ನೀನೇ.
ಸಮುದ್ರಗಳನ್ನೂ ಅವುಗಳಲ್ಲಿರುವ
ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ.
ಎಲ್ಲಾದಕ್ಕೂ ಜೀವಕೊಡುವಾತನು ನೀನೇ.
ಪರಲೋಕದ ದೂತರು ನಿನಗಡ್ಡಬಿದ್ದು ಆರಾಧಿಸುವರು.
7 ನೀನೇ ದೇವರಾದ ಯೆಹೋವನು.
ಅಬ್ರಾಮನನ್ನು ನೀನೇ ಆರಿಸಿಕೊಂಡೆ.
ಬಾಬಿಲೋನಿನ ಊರ್ ಎಂಬಲ್ಲಿಂದ ನೀನು ಅವನನ್ನು ನಡೆಸಿದೆ.
ಅವನ ಹೆಸರನ್ನು ಬದಲಾಯಿಸಿ ಅಬ್ರಹಾಮನೆಂದು ಕರೆದೆ.
8 ಅವನು ನ್ಯಾಯವಂತನೂ ಪ್ರಾಮಾಣಿಕನೂ ಆಗಿದ್ದಾನೆಂದು ತಿಳಿದು
ಅವನೊಂದಿಗೆ ಒಡಂಬಡಿಕೆ ಮಾಡಿಕೊಂಡೆ.
ಹಿತ್ತಿಯರ, ಕಾನಾನ್ಯರ, ಅಮೋರಿಯರ, ಪೆರಿಜ್ಜೀಯರ, ಯೆಬೂಸಿಯರ ಮತ್ತು ಗಿರ್ಗಾಷಿಯರ ನಾಡನ್ನು
ಅವನಿಗೂ ಅವನ ಸಂತತಿಯವರಿಗೂ ಕೊಡುವುದಾಗಿ ವಾಗ್ದಾನ ಮಾಡಿದೆ.
ನೀನು ನಿನ್ನ ವಾಗ್ದಾನವನ್ನು ನೆರವೇರಿಸಿದೆ.
ಯಾಕೆಂದರೆ ನೀನು ಒಳ್ಳೆಯವನಾಗಿರುವೆ.
9 ನಮ್ಮ ಪೂರ್ವಿಕರು ಈಜಿಪ್ಟಿನಲ್ಲಿ ಸಂಕಟ ಅನುಭವಿಸುವುದನ್ನು ನೀನು ನೋಡಿದೆ.
ಕೆಂಪು ಸಮುದ್ರದ ಬಳಿ ಸಹಾಯಕ್ಕಾಗಿ ಅವರು ಮೊರೆಯಿಟ್ಟಾಗ ನೀನು ಅವರಿಗೆ ಕಿವಿಗೊಟ್ಟೆ.
10 ಫರೋಹನಿಗೂ ಅವನ ಅಧಿಕಾರಿಗಳಿಗೂ ಅವನ ಜನರಿಗೂ
ವಿರೋಧವಾಗಿ ನೀನು ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡಿದೆ.
ಈಜಿಪ್ಟಿನವರು ತಮ್ಮನ್ನು ನಮ್ಮ ಪೂರ್ವಿಕರಿಗಿಂತ ಉತ್ತಮರೆಂದು
ಭಾವಿಸಿಕೊಂಡದ್ದು ನಿನಗೆ ಗೊತ್ತಿತ್ತು.
ಆದರೆ ನೀನು ಎಂಥಾ ಮಹಾ ವ್ಯಕ್ತಿಯೆಂದು ಅವರಿಗೆ ರುಜುವಾತುಪಡಿಸಿದೆ!
ಅದನ್ನು ಈಗಲೂ ಅವರು ನೆನಪು ಮಾಡುತ್ತಿರುತ್ತಾರೆ.
11 ಕೆಂಪುಸಮುದ್ರವನ್ನು ಅವರ ಕಣ್ಣು ಮುಂದೆಯೇ ಇಬ್ಬಾಗ ಮಾಡಿದೆ.
ಅವರು ಆ ಒಣನೆಲದಲ್ಲಿ ನಡೆದರು.
ಈಜಿಪ್ಟಿನ ವೈರಿಗಳು ಅವರನ್ನು ಹಿಂಬಾಲಿಸುತ್ತಿದ್ದರು.
ಆದರೆ ಆ ವೈರಿಗಳನ್ನು ನೀನು ಸಮುದ್ರದೊಳಗೆ ಬಿಸಾಡಿದೆ;
ಅವರು ಗುಂಡುಕಲ್ಲಿನಂತೆ ಸಮುದ್ರದಲ್ಲಿ ಮುಳುಗಿದರು.
12 ಹಗಲಿನಲ್ಲಿ ಅವರನ್ನು ನಡೆಸಲು ಮೇಘಸ್ತಂಭವನ್ನು ಉಪಯೋಗಿಸಿದೆ.
ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವನ್ನು ಉಪಯೋಗಿಸಿದೆ.
ಹೀಗೆ ಅವರ ಮಾರ್ಗವನ್ನು ಬೆಳಕಿನಿಂದ ಹೊದಿಸಿದೆ.
ಎಲ್ಲಿಗೆ ಹೋಗಬೇಕೆಂದು ಅವರಿಗೆ ತೋರಿಸಿದಿ.
13 ಆಮೇಲೆ ಸೀನಾಯ ಬೆಟ್ಟಕ್ಕೆ ಇಳಿದುಬಂದೆ.
ಪರಲೋಕದಿಂದ ಅವರೊಂದಿಗೆ ಮಾತನಾಡಿದೆ.
ಅವರಿಗೆ ಒಳ್ಳೆಯ ಕಟ್ಟಳೆಗಳನ್ನು ದಯಪಾಲಿಸಿದೆ;
ಸತ್ಯಬೋಧನೆಯನ್ನು ನೀಡಿದೆ,
ವಿಧಿನಿಯಮಗಳನ್ನು ಕಲಿಸಿದೆ. ಅವುಗಳೆಲ್ಲಾ ಉತ್ತಮವಾದವುಗಳೇ.
14 ಅವರಿಗೆ ನಿನ್ನ ವಿಶೇಷ ದಿನವಾದ ಸಬ್ಬತ್ತನ್ನು ತಿಳಿಸಿದೆ.
ನಿನ್ನ ಸೇವಕನಾದ ಮೋಶೆಯ ಮುಖಾಂತರ
ಅವರಿಗೆ ಕಟ್ಟಳೆಗಳನ್ನು ತಿಳಿಸಿದೆ.
15 ಅವರು ಹಸಿದಿದ್ದಾಗ
ಪರಲೋಕದಿಂದ ಊಟವನ್ನು ಅವರಿಗೆ ದಯಪಾಲಿಸಿದೆ.
ಅವರು ಬಾಯಾರಿದಾಗ
ಬಂಡೆಯಿಂದ ಅವರಿಗೆ ನೀರನ್ನು ಕೊಟ್ಟೆ.
ನೀನು ಅವರಿಗೆ,
‘ಬನ್ನಿ, ಈ ದೇಶವನ್ನು ತೆಗೆದುಕೊಳ್ಳಿರಿ’ ಎಂದು ಹೇಳಿದೆ.
ನಿನ್ನ ಪರಾಕ್ರಮವನ್ನು ತೋರಿಸಿದೆ.
ಅವರಿಗಾಗಿ ಭೂಮಿಯನ್ನು ತೆಗೆದುಕೊಂಡೆ.
ಪ್ರಭುವು ಪ್ರತ್ಯಕ್ಷನಾಗುವಾಗ ಸಿದ್ಧರಾಗಿರಿ
5 ಸಹೋದರ ಸಹೋದರಿಯರೇ, ಈಗ ನಾವು ಕಾಲ ಮತ್ತು ದಿನಗಳ ಬಗ್ಗೆ ನಿಮಗೆ ಬರೆಯುವ ಅವಶ್ಯವಿಲ್ಲ. 2 ಪ್ರಭುವು ಪ್ರತ್ಯಕ್ಷನಾಗುವ ದಿನವು ರಾತ್ರಿಕಾಲದಲ್ಲಿ ಕಳ್ಳನು ಬರುವಂತೆ ಇದ್ದಕ್ಕಿದ್ದಂತೆ ಬರುತ್ತದೆ ಎಂಬುದು ನಿಮಗೆಲ್ಲ ಚೆನ್ನಾಗಿ ತಿಳಿದಿದೆ. 3 “ನಮಗೆ ಶಾಂತಿಯಿದೆ. ನಾವು ಸುರಕ್ಷಿತರಾಗಿದ್ದೇವೆ” ಎಂದು ಜನರು ಹೇಳುವಾಗಲೇ ಅವರಿಗೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ ಬರುತ್ತದೆ. ಆ ಜನರು ತಪ್ಪಿಸಿಕೊಳ್ಳಲಾಗುವುದಿಲ್ಲ.
4 ಆದರೆ ಸಹೋದರ ಸಹೋದರಿಯರೇ, ನೀವು ಕತ್ತಲಿನಲ್ಲಿ (ಪಾಪದಲ್ಲಿ) ವಾಸಿಸುತ್ತಿಲ್ಲ. ಆ ದಿನವು ನಿಮಗೆ ಕಳ್ಳನಂತೆ ಇದ್ದಕ್ಕಿದ್ದಂತೆ ಬರುವುದಿಲ್ಲ. 5 ನೀವೆಲ್ಲರೂ ಬೆಳಕಿಗೆ ಸೇರಿದವರು ಮತ್ತು ಹಗಲಿಗೆ ಸೇರಿದವರು. ನಾವು ರಾತ್ರಿಗಾಗಲಿ ಅಥವಾ ಕತ್ತಲೆಗಾಗಲಿ ಸೇರಿದವರಲ್ಲ. 6 ಆದುದರಿಂದ ನಾವು ಇತರ ಜನರಂತಿರಬಾರದು. ನಾವು ನಿದ್ರೆ ಮಾಡುವುದೇ ಬೇಡ. ನಾವು ಎಚ್ಚರದಿಂದ ಇದ್ದು, ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. 7 ನಿದ್ದೆ ಮಾಡುವ ಜನರು ರಾತ್ರಿಯಲ್ಲಿ ನಿದ್ರಿಸುತ್ತಾರೆ. ಕುಡಿದು ಅಮಲೇರುವವರು ರಾತ್ರಿಯಲ್ಲಿ ಕುಡಿದು ಅಮಲೇರುತ್ತಾರೆ. 8 ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪ್ರೀತಿಯನ್ನೂ ನಂಬಿಕೆಯನ್ನೂ ಧರಿಸಿಕೊಳ್ಳಬೇಕು. ರಕ್ಷಣೆಯ ನಿರೀಕ್ಷೆಯು ನಮಗೆ ಶಿರಸ್ತ್ರಾಣವಾಗಿರಬೇಕು.
9 ದೇವರು ನಮ್ಮನ್ನು ಆರಿಸಿಕೊಂಡದ್ದು ತನ್ನ ಕೋಪಕ್ಕೆ ಗುರಿಯಾಗಲಿ ಎಂದಲ್ಲ. ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ರಕ್ಷಣೆಯಾಗಲೆಂದೇ ದೇವರು ನಮ್ಮನ್ನು ಆರಿಸಿಕೊಂಡನು. 10 ನಾವು ತನ್ನೊಂದಿಗೆ ಜೀವಿಸಲೆಂದು ಯೇಸು ನಮಗಾಗಿ ಸತ್ತನು. ಯೇಸು ಪ್ರತ್ಯಕ್ಷನಾದಾಗ, ನಾವು ಜೀವಿಸುತ್ತಿರುತ್ತೇವೋ ಇಲ್ಲವೆ ಸತ್ತಿರುತ್ತೇವೋ ಎಂಬುದು ಮುಖ್ಯವಲ್ಲ. 11 ಆದ್ದರಿಂದ ಒಬ್ಬರನ್ನೊಬ್ಬರು ಸಂತೈಸಿ ಬಲಪಡಿಸಿರಿ. ಈಗ ನೀವು ಮಾಡುತ್ತಿರುವುದು ಅದನ್ನೇ.
Kannada Holy Bible: Easy-to-Read Version. All rights reserved. © 1997 Bible League International