Revised Common Lectionary (Semicontinuous)
ದಾವೀದನ ಕೊನೆಯ ಮಾತುಗಳು
23 ಇವು ಇಷಯನ ಮಗನಾದ ದಾವೀದನ ಕೊನೆಯ ಮಾತುಗಳು:
“ದಾವೀದನು ಈ ಹಾಡನ್ನು ಹಾಡಿದನು.
ದೇವರಿಂದ ಉನ್ನತಿಗೇರಿಸಲ್ಪಟ್ಟವನ ಸಂದೇಶವಿದು.
ಯಾಕೋಬನ ದೇವರಿಂದ ಆರಿಸಲ್ಪಟ್ಟ ರಾಜನೇ ಅವನು.
ಅವನು ಇಸ್ರೇಲಿನ ಒಳ್ಳೆಯ ಹಾಡುಗಾರ.
2 ಯೆಹೋವನ ಆತ್ಮವು ನನ್ನ ಮೂಲಕ ಮಾತನಾಡಿತು.
ಆತನ ನುಡಿಗಳು ನನ್ನ ನಾಲಿಗೆಯ ಮೇಲಿವೆ.
3 ಇಸ್ರೇಲಿನ ದೇವರು ಮಾತನಾಡಿದನು.
ಇಸ್ರೇಲಿನ ಬಂಡೆಯಾದಾತನು ನನಗೆ ತಿಳಿಸಿದನು.
‘ದೇವರಲ್ಲಿ ಭಯಭಕ್ತಿಯನ್ನಿಟ್ಟು
ಜನರನ್ನು ನ್ಯಾಯವಾಗಿ ಆಳುವ ವ್ಯಕ್ತಿಯು
4 ಹೊತ್ತಾರೆಯ ಬೆಳಕಿನ ಕಿರಣಗಳಂತೆಯೂ
ಮೋಡಗಳೇ ಇಲ್ಲದ ಮುಂಜಾನೆಯಂತೆಯೂ
ಮಳೆ ಬಿದ್ದನಂತರ ಬರುವ ಸೂರ್ಯನ ಬೆಳಕಿನಂತೆಯೂ
ಗರಿಕೆಯನ್ನು ನೆಲದಿಂದ ಮೂಡಿಸುವ ಮಳೆಯಂತೆಯೂ ಇದ್ದಾನೆ.’
5 “ಯೆಹೋವನು ನನ್ನ ಕುಟುಂಬವನ್ನು ಸ್ಥಿರಗೊಳಿಸಿದನು.
ಆತನು ನನ್ನೊಡನೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
ಆತನು ಈ ಒಡಂಬಡಿಕೆಯನ್ನು ಸಂಪೂರ್ಣವಾಗಿ ಸುಭದ್ರಗೊಳಿಸಿದನು.
ಆತನು ನನಗೆ ಎಲ್ಲೆಲ್ಲಿಯೂ ಜಯ ಕೊಡುವನು.
ಆತನು ನನಗೆ ಬೇಕಾದದ್ದನ್ನೆಲ್ಲಾ ಕೊಡುವನು.
6 “ಆದರೆ ಕೆಟ್ಟಜನರೆಲ್ಲರೂ ಮುಳ್ಳುಗಳಂತಿದ್ದಾರೆ.
ಜನರು ಮುಳ್ಳುಗಳನ್ನು ಹಿಡಿದುಕೊಳ್ಳುವುದಿಲ್ಲ;
ಅವರು ಅವುಗಳನ್ನು ಎಸೆದುಬಿಡುವರು.
7 ಒಬ್ಬ ವ್ಯಕ್ತಿಯು ಅವುಗಳನ್ನು ಮುಟ್ಟಿದರೆ,
ಅವು ಮರದ ಮತ್ತು ಕಬ್ಬಿಣದ ಕತ್ತಿಗಳಿಂದ ಚುಚ್ಚಿದಂತಾಗುತ್ತದೆ.
ಆ ಜನರು ಮುಳ್ಳುಗಳಂತಿದ್ದಾರೆ.
ಅವರನ್ನು ಬೆಂಕಿಯಲ್ಲಿ ಎಸೆದು ಸಂಪೂರ್ಣವಾಗಿ ಸುಟ್ಟುಬಿಡುವರು!”
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
132 ಯೆಹೋವನೇ, ದಾವೀದನು ಅನುಭವಿಸಿದ ಕಷ್ಟವನ್ನು ಜ್ಞಾಪಿಸಿಕೋ.
2 ದಾವೀದನು ಯೆಹೋವನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದನು;
ಇಸ್ರೇಲರ ಶೂರನಾದ ದೇವರಿಗೆ ಆತನು ವಿಶೇಷವಾದ ಹರಕೆಯೊಂದನ್ನು ಮಾಡಿಕೊಂಡನು.
3 “ನಾನು ಯೆಹೋವನಿಗೋಸ್ಕರ ಒಂದು ಆಲಯವನ್ನು ಕಟ್ಟುವ ತನಕ ನನ್ನ ಮನೆಯೊಳಗೆ ಪ್ರವೇಶಿಸುವುದಿಲ್ಲ;
ನನ್ನ ಹಾಸಿಗೆಯ ಮೇಲೆ ಮಲಗಿಕೊಳ್ಳುವುದಿಲ್ಲ;
4 ನಾನು ನಿದ್ರಿಸುವುದೂ ಇಲ್ಲ;
ನನ್ನ ಕಣ್ಣುಗಳಿಗೆ ವಿಶ್ರಾಂತಿಯನ್ನು ಕೊಡುವುದೂ ಇಲ್ಲ.
5 ಇಸ್ರೇಲರ ಶೂರನಾದ ದೇವರಿಗೆ ಒಂದು ಆಲಯವನ್ನು ಕಟ್ಟುವೆನು”
ಎಂದು ದಾವೀದನು ಹೇಳಿದನು.
6 ನಾವು ಅದರ ಬಗ್ಗೆ ಎಫ್ರಾತದಲ್ಲಿ ಕೇಳಿದೆವು.
ನಾವು ಒಡಂಬಡಿಕೆಯ ಪೆಟ್ಟಿಗೆಯನ್ನು ಕಿರ್ಯತ್ಯಾರೀಮಿನಲ್ಲಿ ಕಂಡುಕೊಂಡೆವು.
7 ಬನ್ನಿರಿ, ಆತನ ಪವಿತ್ರ ಮಂದಿರಕ್ಕೆ ಹೋಗೋಣ;
ಆತನ ಪಾದಪೀಠದ ಮುಂದೆ ಆರಾಧಿಸೋಣ.
8 ಯೆಹೋವನೇ, ನಿನ್ನ ವಿಶ್ರಾಂತಿಯ ಸ್ಥಳದಿಂದ ಎದ್ದೇಳು.
ನಿನ್ನ ಶಕ್ತಿಪೂರ್ಣವಾದ ಪೆಟ್ಟಿಗೆಯೊಂದಿಗೆ ಎದ್ದೇಳು.
9 ನಿನ್ನ ಯಾಜಕರು ನೀತಿಯೆಂಬ ವಸ್ತ್ರವನ್ನು ಧರಿಸಿಕೊಂಡಿದ್ದಾರೆ.
ನಿನ್ನ ಭಕ್ತರು ಉಲ್ಲಾಸಿಸಲಿ.
10 ನಿನ್ನ ಸೇವಕನಾದ ದಾವೀದನಿಗೆ ನೀನು ವಾಗ್ದಾನ ಮಾಡಿರುವೆ.
ನೀನು ಅಭಿಷೇಕಿಸಿರುವ ರಾಜನನ್ನು ತಿರಸ್ಕರಿಸಬೇಡ.
11 ಯೆಹೋವನು ದಾವೀದನಿಗೆ ಸ್ಥಿರವಾದ ವಾಗ್ದಾನವನ್ನು ಮಾಡಿದನು.
ಆತನು ಅದನ್ನು ಬದಲಾಯಿಸುವುದೇ ಇಲ್ಲ.
“ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು.
12 ನಿನ್ನ ಮಕ್ಕಳು ನನ್ನ ಒಡಂಬಡಿಕೆಗೂ ನಾನು ಆಜ್ಞಾಪಿಸಿದ ಕಟ್ಟಳೆಗಳಿಗೂ ವಿಧೇಯರಾದರೆ,
ನಿನ್ನ ಸಂತಾನದ ಒಬ್ಬನು ಯಾವಾಗಲೂ ರಾಜನಾಗಿರುವನು.”
13 ಯೆಹೋವನು ತನ್ನ ಆಲಯಕ್ಕಾಗಿ
ಚೀಯೋನನ್ನೇ ಆರಿಸಿಕೊಂಡನು.
14 “ಇದು ನನ್ನ ಶಾಶ್ವತ ನಿವಾಸಸ್ಥಾನ.
ನಾನು ಇಲ್ಲೇ ಆಸನಾರೂಢನಾಗಿರುವೆನು.
ಇದೇ ನನಗೆ ಇಷ್ಟವಾದ ಸ್ಥಳ.
15 ನಾನು ಚೀಯೋನಿಗೆ ಬೇಕಾದದ್ದನ್ನೆಲ್ಲಾ ಒದಗಿಸುವೆನು;
ಇಲ್ಲಿಯ ಬಡವರಿಗೂ ಆಹಾರವನ್ನು ಸಮೃದ್ಧಿಯಾಗಿ ದಯಪಾಲಿಸುವೆನು;
16 ಯಾಜಕರಿಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವೆನು.
ನನ್ನ ಭಕ್ತರು ಉಲ್ಲಾಸಿಸುವರು.
17 ಇಲ್ಲಿಯೇ ನಾನು ದಾವೀದನನ್ನು ಬಲಗೊಳಿಸುವೆನು.
ನಾನು ಅಭಿಷೇಕಿಸಿದ ಅವನಿಗೆ ದೀಪವನ್ನು ಒದಗಿಸುವೆನು.
18 ನಾನು ಅವನ ಶತ್ರುಗಳಿಗೆ ನಾಚಿಕೆಯೆಂಬ ವಸ್ತ್ರವನ್ನು ಹೊದಿಸುವೆನು.
ಅವನ ರಾಜ್ಯವನ್ನಾದರೋ ಅಭಿವೃದ್ಧಿಗೊಳಿಸುವೆನು.”
ಯೋಹಾನನು ಸಭೆಗಳಿಗೆ ಬರೆದ ಯೇಸುವಿನ ಸಂದೇಶ
4 ಏಷ್ಯಾ[a] ಪ್ರದೇಶದಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನೆಂದರೆ:
ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು 5 ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ. ಯೇಸು ನಂಬಿಗಸ್ತ ಸಾಕ್ಷಿಯಾಗಿದ್ದಾನೆ. ಸತ್ತವರೊಳಗಿಂದ ಮೇಲೆದ್ದು ಬಂದವರಲ್ಲಿ ಆತನೇ ಮೊದಲಿಗನಾಗಿದ್ದಾನೆ. ಆತನು ಲೋಕದ ರಾಜರುಗಳಿಗೆ ಅಧಿಪತಿಯಾಗಿದ್ದಾನೆ.
ಯೇಸು ನಮ್ಮನ್ನು ಪ್ರೀತಿಸುತ್ತಾನೆ. ಆತನು ತನ್ನ ರಕ್ತದಿಂದ (ಮರಣ) ನಮ್ಮ ಪಾಪಗಳನ್ನು ನಿವಾರಿಸಿ ಬಿಡುಗಡೆಗೊಳಿಸಿದನು; 6 ನಮ್ಮನ್ನು ಒಂದು ರಾಜ್ಯವನ್ನಾಗಿ ಮಾಡಿ ನಮ್ಮನ್ನು ತನ್ನ ತಂದೆಯಾದ ದೇವರ ಸೇವೆ ಮಾಡುವ ಯಾಜಕರನ್ನಾಗಿ ಮಾಡಿದನು. ಯೇಸುವಿಗೆ ಎಂದೆಂದಿಗೂ ಮಹಿಮೆ ಪ್ರಭಾವಗಳಿರಲಿ! ಆಮೆನ್.
7 ಇಗೋ, ಯೇಸು ಮೋಡಗಳ ಸಂಗಡ ಬರುತ್ತಿದ್ದಾನೆ. ಪ್ರತಿಯೊಬ್ಬರು ಆತನನ್ನು ನೋಡುವರು, ಆತನನ್ನು ಇರಿದವರು[b] ಸಹ ನೋಡುವರು. ಆತನನ್ನು ಕಂಡು ಲೋಕದ ಜನರೆಲ್ಲರೂ ಎದೆಬಡಿದುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೆನ್.
8 ಪ್ರಭುವಾದ ದೇವರು ಹೇಳುವುದೇನೆಂದರೆ: “ನಾನೇ ಆದಿಯೂ ಅಂತ್ಯವೂ[c] ಆಗಿದ್ದೇನೆ. ನಾನು ವರ್ತಮಾನ, ಭೂತ ಮತ್ತು ಭವಿಷ್ಯತ್ ಕಾಲಗಳಲ್ಲಿರುವಾತನು. ನಾನೇ ಸರ್ವಶಕ್ತನು.”
33 ಬಳಿಕ ಪಿಲಾತನು, ಭವನದೊಳಗೆ ಹಿಂತಿರುಗಿ ಹೋಗಿ, ಯೇಸುವನ್ನು ಕರೆದು, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.
34 ಯೇಸು, “ಇದು ನಿನ್ನ ಪ್ರಶ್ನೆಯೋ? ಅಥವಾ ನನ್ನ ಬಗ್ಗೆ ಬೇರೆ ಜನರು ನಿನಗೆ ತಿಳಿಸಿದರೋ?” ಎಂದನು.
35 ಪಿಲಾತನು, “ನಾನು ಯೆಹೂದ್ಯನಲ್ಲ! ನಿನ್ನ ಸ್ವಂತ ಜನರು ಮತ್ತು ಅವರ ಮಹಾಯಾಜಕರು ನಿನ್ನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಿದ್ದಾರೆ. ನೀನು ಏನು ಮಾಡಿದೆ?” ಎಂದು ಕೇಳಿದನು.
36 ಯೇಸು, “ನನ್ನ ರಾಜ್ಯವು ಈ ಲೋಕಕ್ಕೆ ಸೇರಿದ್ದಲ್ಲ. ಅದು ಈ ಲೋಕಕ್ಕೆ ಸೇರಿದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಸಿಗದಂತೆ ನನ್ನ ಸೇವಕರು ಹೋರಾಡುತ್ತಿದ್ದರು. ಆದರೆ ನನ್ನ ರಾಜ್ಯವು ಮತ್ತೊಂದು ಸ್ಥಳದ್ದು” ಎಂದನು.
37 ಪಿಲಾತನು, “ಹಾಗಾದರೆ ನೀನು ರಾಜ!” ಎಂದನು.
ಯೇಸು, “ನೀನೇ ನನ್ನನ್ನು ರಾಜನೆಂದು ಹೇಳುತ್ತಿರುವೆ. ಅದು ಸತ್ಯ. ನಾನು ಜನರಿಗೆ ಸತ್ಯದ ಬಗ್ಗೆ ಹೇಳುವುದಕ್ಕಾಗಿಯೇ ಹುಟ್ಟಿದೆನು. ಆದಕಾರಣವೇ ನಾನು ಈ ಲೋಕಕ್ಕೆ ಬಂದೆನು. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನೂ ನನಗೆ ಕಿವಿಗೊಡುತ್ತಾನೆ” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International