Revised Common Lectionary (Semicontinuous)
20 ನಾನು ನಿರಪರಾಧಿಯಾಗಿದ್ದರಿಂದ ಯೆಹೋವನು ನನಗೆ ಪ್ರತಿಫಲ ನೀಡಿದನು;
ನಾನು ತಪ್ಪನ್ನು ಮಾಡಿಲ್ಲದ ಕಾರಣ ನನಗೆ ಒಳ್ಳೆಯದನ್ನು ಮಾಡಿದನು.
21 ಯಾಕೆಂದರೆ ನಾನು ಯೆಹೋವನಿಗೆ ವಿಧೇಯನಾಗಿದ್ದೆನು;
ನನ್ನ ದೇವರ ವಿರೋಧನಾಗಿ ನಾನು ಪಾಪಮಾಡಲಿಲ್ಲ.
22 ನಾನು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ
ಯಾವಾಗಲೂ ಜ್ಞಾಪಿಸಿಕೊಳ್ಳುವೆ.
23 ಆತನ ಎದುರಿನಲ್ಲಿ ನಿರ್ದೋಷಿಯಾಗಿದ್ದೆನು.
ಪಾಪದಲ್ಲಿ ಬೀಳದಂತೆ ಎಚ್ಚರಿಕೆಯಾಗಿದ್ದೆನು.
24 ಯೆಹೋವನ ದೃಷ್ಟಿಯಲ್ಲಿ ನಾನು ನೀತಿವಂತನೂ ನಿರಪರಾಧಿಯೂ ಆಗಿರುವುದರಿಂದ
ಆತನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.
25 ಯೆಹೋವನೇ, ನಿನ್ನನ್ನು ನಿಜವಾಗಿಯೂ ಪ್ರೀತಿಸುವವರನ್ನು
ನೀನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವೆ.
ನಿನಗೆ ನಂಬಿಗಸ್ತರಾಗಿರುವವರಿಗೆ
ನೀನೂ ನಂಬಿಗಸ್ತನಾಗಿರುವೆ.
26 ನೀನು ಒಳ್ಳೆಯವರಿಗೂ ಶುದ್ಧರಿಗೂ ಒಳ್ಳೆಯವನಾಗಿಯೂ ಪರಿಶುದ್ಧನಾಗಿಯೂ ಇರುವೆ;
ದುಷ್ಟರಿಗಾದರೋ ಶತ್ರುವಾಗಿರುವೆ.
27 ಯೆಹೋವನೇ, ನೀನು ದೀನರಿಗೆ ಸಹಾಯಮಾಡುವೆ.
ಗರ್ವಿಷ್ಠರಿಗಾದರೋ ಅವಮಾನ ಮಾಡುವೆ.
28 ಯೆಹೋವನೇ, ನನ್ನ ದೀಪವನ್ನು ಹೊತ್ತಿಸುವವನು ನೀನೇ.
ನನ್ನ ದೇವರು ನನ್ನ ಸುತ್ತಲೂ ಇರುವ ಕತ್ತಲೆಯನ್ನು ಬೆಳಕನ್ನಾಗಿ ಮಾಡುವನು.
29 ಯೆಹೋವನೇ, ನಿನ್ನ ಸಹಾಯದಿಂದ ನಾನು ಸೈನಿಕರೊಡನೆ ಓಡಬಲ್ಲೆ.
ನನ್ನ ದೇವರ ಸಹಾಯದಿಂದ ನಾನು ಶತ್ರುಗಳ ಕೋಟೆಗಳನ್ನು ಹತ್ತುವೆನು.
30 ದೇವರ ಮಾರ್ಗಗಳು ನಿಷ್ಕಳಂಕವಾಗಿವೆ;
ಯೆಹೋವನ ಮಾತುಗಳು ಸತ್ಯವಾಗಿವೆ.
ಆತನು ತನ್ನಲ್ಲಿ ಭರವಸೆಯಿಟ್ಟಿರುವವರನ್ನು ಸಂರಕ್ಷಿಸುವನು.
ಕಣ
3 ರೂತಳ ಅತ್ತೆಯಾದ ನೊವೊಮಿಯು ಅವಳಿಗೆ, “ನನ್ನ ಮಗಳೇ, ನೀನು ಮದುವೆಮಾಡಿಕೊಂಡು ಕುಟುಂಬಸ್ತಳಾಗಿರುವುದು ಎಷ್ಟೋ ಒಳ್ಳೆಯದು. 2 ಬೋವಜನು ನಮ್ಮ ಸಂಬಂಧಿಕನಾಗಿದ್ದಾನೆ. ನೀನು ಅವನ ಹೆಣ್ಣಾಳುಗಳ ಜೊತೆಯಲ್ಲಿದ್ದುಕೊಂಡು ಹಕ್ಕಲಾಯ್ದಿರುವೆ. ಇಂದು ರಾತ್ರಿ ಅವನು ಕಣದಲ್ಲಿ ಜವೆಗೋಧಿಯನ್ನು ತೂರುವನು. 3 ನೀನು ಸ್ನಾನ ಮಾಡಿ ಶೃಂಗರಿಸಿಕೊಂಡು ಶ್ರೇಷ್ಠವಾದ ಉಡುಪುಗಳನ್ನು ಧರಿಸಿಕೊಂಡು ಕಣಕ್ಕೆ ಹೋಗು. ಆದರೆ ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವರೆಗೆ ಅವನಿಗೆ ಮರೆಯಾಗಿರು. 4 ಊಟವಾದ ಮೇಲೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ಅವನು ಮಲಗುತ್ತಾನೆ. ಅವನು ಎಲ್ಲಿ ಮಲಗುತ್ತಾನೆಂಬುದನ್ನು ನೋಡಿಕೊಂಡಿದ್ದು ಅಲ್ಲಿಗೆ ಹೋಗಿ ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಅಲ್ಲಿಯೇ ಮಲಗಿಕೋ. ನೀನು ಮಾಡತಕ್ಕದ್ದನ್ನು ಅವನು ನಿನಗೆ ತಿಳಿಸುತ್ತಾನೆ” ಎಂದಳು.
5 ಆಗ ರೂತಳು, “ನೀನು ಹೇಳಿದಂತೆಯೇ ಮಾಡುತ್ತೇನೆ” ಎಂದು ಉತ್ತರಕೊಟ್ಟಳು.
6 ರೂತಳು ಕಣಕ್ಕೆ ಹೋದಳು. ಅತ್ತೆಯು ಹೇಳಿದಂತೆಯೇ ರೂತಳು ಮಾಡಿದಳು. 7 ಅನ್ನಪಾನಗಳನ್ನು ತೆಗೆದುಕೊಂಡು ಸಂತೃಪ್ತನಾಗಿದ್ದ ಬೋವಜನು ಧಾನ್ಯದ ರಾಶಿಯ ಹತ್ತಿರ ಮಲಗಲು ಹೋದನು. ಆಗ ರೂತಳು ರಹಸ್ಯವಾಗಿ ಬಂದು ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಅವನ ಪಾದಗಳ ಬಳಿಯಲ್ಲಿಯೇ ಮಲಗಿದಳು.
17 “ಈಜಿಪ್ಟಿನಲ್ಲಿ ನಮ್ಮ ಜನರಾದ ಯೆಹೂದ್ಯರ ಸಂಖ್ಯೆಯು ಹೆಚ್ಚತೊಡಗಿತು. (ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಕಾಲ ಬಹು ಶೀಘ್ರದಲ್ಲೇ ಬರಲಿತ್ತು.) 18 ಬಳಿಕ, ಬೇರೊಬ್ಬ ರಾಜನು ಈಜಿಪ್ಟನ್ನು ಆಳಲಾರಂಭಿಸಿದನು. ಅವನಿಗೆ ಯೋಸೇಫನ ಬಗ್ಗೆ ಏನೂ ತಿಳಿದಿರಲಿಲ್ಲ. 19 ಈ ರಾಜನು ನಮ್ಮ ಜನರಿಗೆ ಮೋಸ ಮಾಡಿದನು. ಅವನು ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದನು. ಅವರ ಕೂಸುಗಳನ್ನು ಸಾಯಿಸಬೇಕೆಂದು ಹೊರಗೆ ಹಾಕಿಸಿದನು.
20 “ಮೋಶೆಯು ಜನಿಸಿದ್ದು ಈ ಕಾಲದಲ್ಲೇ. ಅವನು ಬಹು ಸುಂದರನಾಗಿದ್ದನು. ಮೋಶೆಯನ್ನು ಅವನ ತಂದೆಯ ಮನೆಯಲ್ಲಿ ಮೂರು ತಿಂಗಳವರೆಗೆ ನೋಡಿಕೊಳ್ಳಲಾಯಿತು. 21 ಅವರು ಮೋಶೆಯನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ತೆಗೆದುಕೊಂಡಳು. ಆಕೆಯು ಅವನನ್ನು ತನ್ನ ಸ್ವಂತ ಮಗನಂತೆ ಬೆಳೆಸಿದಳು. 22 ಈಜಿಪ್ಟಿನವರು ತಮಗೆ ಗೊತ್ತಿದ್ದ ಸಕಲ ವಿದ್ಯೆಗಳನ್ನು ಮೋಶೆಗೆ ಕಲಿಸಿದರು. ಅವನು ವಿಷಯಗಳನ್ನು ಹೇಳುವುದರಲ್ಲಿಯೂ ಕಾರ್ಯಗಳನ್ನು ಮಾಡುವು ದರಲ್ಲಿಯೂ ಬಹು ಸಮರ್ಥನಾಗಿದ್ದನು.
23 “ಮೋಶೆಗೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಸಹೋದರರಾದ ಯೆಹೂದ್ಯ ಜನರನ್ನು ಸಂದರ್ಶಿಸುವುದು ಒಳ್ಳೆಯದೆಂದು ಯೋಚಿಸಿಕೊಂಡನು. 24 ಈಜಿಪ್ಟಿನವನೊಬ್ಬನು ಯೆಹೂದ್ಯನೊಬ್ಬನಿಗೆ ಅನ್ಯಾಯ ಮಾಡಿ ಹಿಂಸಿಸುತ್ತಿರುವುದನ್ನು ಕಂಡ ಮೋಶೆಯು ಆ ಈಜಿಪ್ಟಿನವನಿಗೆ ಬಲವಾಗಿ ಹೊಡೆದು ಕೊಂದುಹಾಕಿದನು. 25 ತಮ್ಮನ್ನು ರಕ್ಷಿಸಲು ದೇವರು ಮೋಶೆಯನ್ನು ಉಪಯೋಗಿಸುತ್ತಿದ್ದಾನೆ ಎಂಬುದಾಗಿ ತನ್ನ ಯೆಹೂದ್ಯ ಸಹೋದರರು ಅರ್ಥಮಾಡಿಕೊಳ್ಳುತ್ತಾರೆ ಎಂದು ಮೋಶೆ ಭಾವಿಸಿಕೊಂಡನು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ.
26 “ಮರುದಿನ, ಇಬ್ಬರು ಯೆಹೂದ್ಯರು ಹೊಡೆದಾಡುವುದನ್ನು ಮೋಶೆಯು ಕಂಡನು. ಅವರನ್ನು ಸಮಾಧಾನಪಡಿಸಲು ಅವನು ಪ್ರಯತ್ನಿಸಿ ‘ಗೆಳೆಯರೇ, ನೀವು ಸಹೋದರರಾಗಿದ್ದೀರಿ! ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡುವುದೇಕೆ?’ ಎಂದು ಅವರನ್ನು ಕೇಳಿದನು. 27 ಮತ್ತೊಬ್ಬನಿಗೆ ಅನ್ಯಾಯ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ಯಾರಾದರೂ ಹೇಳಿದರೇ? ಇಲ್ಲ! 28 ನಿನ್ನೆ ಆ ಈಜಿಪ್ಟಿನವನನ್ನು ಕೊಂದಂತೆ ನನ್ನನ್ನೂ ಕೊಲ್ಲುವೆಯಾ?’(A) ಎಂದು ಹೇಳಿದನು. 29 ಇದನ್ನು ಕೇಳಿದ್ದೇ ಮೋಶೆಯು ಈಜಿಪ್ಟನ್ನು ಬಿಟ್ಟು ಮಿದ್ಯಾನ್ಯರ ನಾಡಿಗೆ ಹೋಗಿ ವಿದೇಶಿಯವನಂತೆ ವಾಸಿಸತೊಡಗಿದನು. ಅಲ್ಲಿ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು.
Kannada Holy Bible: Easy-to-Read Version. All rights reserved. © 1997 Bible League International