Revised Common Lectionary (Semicontinuous)
ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
3 ಯೆಹೋವನೇ, ನನಗೆ ವೈರಿಗಳು ಎಷ್ಟೋ ಹೆಚ್ಚಾಗಿದ್ದಾರೆ.
ಎಷ್ಟೋ ಜನರು ನನಗೆ ಶತ್ರುಗಳಾಗಿ ನಿಂತಿದ್ದಾರೆ.
2 ಅನೇಕರು ನನ್ನ ಬಗ್ಗೆ ಮಾತಾಡುತ್ತಾ, “ದೇವರು ಅವನನ್ನು ರಕ್ಷಿಸುವುದಿಲ್ಲ!” ಎಂದು ಹೇಳುತ್ತಿದ್ದಾರೆ.
3 ಆದರೆ ಯೆಹೋವನೇ, ನೀನೇ ನನ್ನ ಗುರಾಣಿ.
ನೀನೇ ನನ್ನ ಗೌರವಕ್ಕೆ ಆಧಾರ.
ನನ್ನನ್ನು ಜಯವೀರನನ್ನಾಗಿ ಮಾಡು.
4 ನಾನು ಯೆಹೋವನಿಗೆ ಪ್ರಾರ್ಥಿಸಲು,
ಆತನು ತನ್ನ ಪವಿತ್ರ ಪರ್ವತದಿಂದ ಉತ್ತರಿಸುವನು.
5 ಯೆಹೋವನು ನನ್ನನ್ನು ಕಾಪಾಡುವುದರಿಂದ
ನಾನು ಸುಖವಾಗಿ ನಿದ್ರಿಸಿ ಎಚ್ಚರಗೊಳ್ಳುವೆನು.
6 ಸಾವಿರಾರು ಶತ್ರು ಸೈನಿಕರು ನನ್ನನ್ನು ಮುತ್ತಿಕೊಂಡರೂ
ನನಗೆ ಭಯವಿಲ್ಲ.
7 ಯೆಹೋವನೇ, ಎದ್ದೇಳು!
ನನ್ನ ದೇವರೇ, ಬಂದು ನನ್ನನ್ನು ರಕ್ಷಿಸು!
ನೀನು ನನ್ನ ಶತ್ರುಗಳ ದವಡೆಗೆ ಬಡಿದರೆ
ಅವರ ಹಲ್ಲುಗಳು ಉದುರಿಹೋಗುತ್ತವೆ.
8 ಯೆಹೋವನು ತನ್ನ ಜನರನ್ನು ರಕ್ಷಿಸಬಲ್ಲನು.
ಯೆಹೋವನೇ, ದಯವಿಟ್ಟು ನಿನ್ನ ಜನರಿಗೆ ಒಳ್ಳೆಯದನ್ನು ಮಾಡು.
19 ಯೆಹೋವನು ಸಮುವೇಲನ ಸಂಗಡವಿದ್ದನು; ಸಮುವೇಲನು ಬೆಳೆದು ದೊಡ್ಡವನಾದನು; ಸಮುವೇಲನ ಯಾವ ಸಂದೇಶವೂ ಸುಳ್ಳಾಗದಂತೆ ಯೆಹೋವನು ನೋಡಿಕೊಂಡನು. 20 ಸಮುವೇಲನು ಯೆಹೋವನ ನಿಜಪ್ರವಾದಿಯೆಂಬುದು ದಾನಿನಿಂದ ಬೇರ್ಷೆಬದವರೆಗಿದ್ದ ಎಲ್ಲಾ ಇಸ್ರೇಲರಿಗೂ ಆಗ ತಿಳಿದು ಬಂದಿತು. 21 ಯೆಹೋವನು ಶೀಲೋವಿನಲ್ಲಿ ಸಮುವೇಲನಿಗೆ ದರ್ಶನ ಕೊಡುವುದನ್ನು ಮುಂದುವರಿಸಿದನು. ಯೆಹೋವನು ಸಮುವೇಲನಿಗೆ ತನ್ನ ವಾಕ್ಯದ ಮೂಲಕ ತನ್ನನ್ನು ಪ್ರಕಟಿಸಿಕೊಂಡನು.
4 ಸಮುವೇಲನ ಸುದ್ದಿಯು ಇಸ್ರೇಲಿನಲ್ಲೆಲ್ಲಾ ಹರಡಿತು. ಏಲಿಯು ಬಹು ವೃದ್ಧನಾದನು. ಅವನ ಮಕ್ಕಳು ಯೆಹೋವನ ಸನ್ನಿಧಿಯಲ್ಲಿ ಕೆಟ್ಟಕಾರ್ಯಗಳನ್ನು ನಡೆಸುತ್ತಲೇ ಇದ್ದರು.
ಇಸ್ರೇಲರನ್ನು ಫಿಲಿಷ್ಟಿಯರು ಸೋಲಿಸುವರು
ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರೇಲರಿಗೆ ವಿರುದ್ಧವಾಗಿ ಯುದ್ಧಮಾಡಲು ಒಟ್ಟುಗೂಡಿದರು. ಇಸ್ರೇಲರು ಫಿಲಿಷ್ಟಿಯರಿಗೆ ವಿರುದ್ಧವಾಗಿ ಹೊರಟು ಎಬೆನೆಜೆರಿನಲ್ಲಿ ಪಾಳೆಯ ಮಾಡಿಕೊಂಡರು; ಫಿಲಿಷ್ಟಿಯರು ಅಫೇಕಿನಲ್ಲಿ ಪಾಳೆಯ ಮಾಡಿಕೊಂಡರು. 2 ಫಿಲಿಷ್ಟಿಯರು ಇಸ್ರೇಲರ ಮೇಲೆ ಆಕ್ರಮಣಮಾಡಲು ಸಿದ್ಧರಾದರು. ಹೋರಾಟ ಆರಂಭವಾಯಿತು.
ಫಿಲಿಷ್ಟಿಯರು ಇಸ್ರೇಲರನ್ನು ಸೋಲಿಸಿ ಇಸ್ರೇಲಿನ ಸೈನ್ಯದಲ್ಲಿ ನಾಲ್ಕು ಸಾವಿರ ಸೈನಿಕರನ್ನು ಸಂಹರಿಸಿದರು.
ಕ್ರಿಸ್ತನಿಂದ ದೂರ ಸರಿಯದಿರಿ
26 ನಾವು ಸತ್ಯವನ್ನು ತಿಳಿದುಕೊಂಡ ಮೇಲೆಯೂ ಪಾಪಗಳನ್ನು ಮಾಡುತ್ತಲೇ ಇದ್ದರೆ, ನಮ್ಮ ಪಾಪಗಳನ್ನು ಯಾವ ಯಜ್ಞವೂ ಪರಿಹರಿಸುವುದಿಲ್ಲ. 27 ನಾವು ಪಾಪಗಳಲ್ಲಿಯೇ ಮುಂದುವರಿದರೆ, ನ್ಯಾಯತೀರ್ಪಿನ ಭಯದಲ್ಲಿ ಮತ್ತು ದೇವರ ವಿರುದ್ಧವಾಗಿ ಜೀವಿಸುವವರನ್ನು ದಹಿಸುವ ಭಯಂಕರ ಬೆಂಕಿಯ ಭಯದಲ್ಲಿ ಜೀವಿಸಬೇಕಾಗುತ್ತದೆ. 28 ಮೋಶೆಯ ನಿಯಮಗಳಿಗೆ ಅವಿಧೇಯನಾದ ವ್ಯಕ್ತಿಯು ಇಬ್ಬರು ಅಥವಾ ಮೂವರು ಸಾಕ್ಷಿಗಳಿಂದ ತಪ್ಪಿತಸ್ಥನೆಂದು ನಿರ್ಧರಿಸಲ್ಪಟ್ಟರೆ, ಅವನಿಗೆ ಕ್ಷಮೆ ದೊರೆಯುತ್ತಿರಲಿಲ್ಲ. ಅವನನ್ನು ಕೊಂದುಹಾಕುತ್ತಿದ್ದರು. 29 ಹೀಗಿರಲು ದೇವರ ಮಗನನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಏನು ಮಾಡಬೇಕೆಂದು ನೀವು ಆಲೋಚಿಸುವಿರಿ? ನಿಜವಾಗಿಯೂ ಆ ವ್ಯಕ್ತಿಗೆ ಇದಕ್ಕಿಂತಲೂ ತೀವ್ರವಾದ ದಂಡನೆಯನ್ನು ವಿಧಿಸಬೇಕಲ್ಲವೇ? ಹೌದು, ಹೊಸ ಒಡಂಬಡಿಕೆಯ ರಕ್ತಕ್ಕೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ಕ್ರೂರವಾದ ದಂಡನೆಯಾಗಬೇಕು. ಆ ರಕ್ತವು ಅವನನ್ನು ಪವಿತ್ರನನ್ನಾಗಿಸಿತು. ದೇವರಾತ್ಮನ ಕೃಪೆಗೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ತೀವ್ರವಾದ ದಂಡನೆಯಾಗಬೇಕು. 30 “ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.”(A) ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ. 31 “ಪ್ರಭುವು ತನ್ನ ಜನರಿಗೆ ನ್ಯಾಯತೀರ್ಪು ನೀಡುತ್ತಾನೆ” ಎಂದು ಸಹ ದೇವರು ಹೇಳಿದ್ದಾನೆ. ಜೀವಸ್ವರೂಪನಾದ ದೇವರ ಹಿಡಿತಕ್ಕೆ ಸಿಕ್ಕಿ ಬೀಳುವುದು ಪಾಪಿಗೆ ಭಯಂಕರವಾಗಿದೆ.
Kannada Holy Bible: Easy-to-Read Version. All rights reserved. © 1997 Bible League International