Revised Common Lectionary (Semicontinuous)
ಕಣ
3 ರೂತಳ ಅತ್ತೆಯಾದ ನೊವೊಮಿಯು ಅವಳಿಗೆ, “ನನ್ನ ಮಗಳೇ, ನೀನು ಮದುವೆಮಾಡಿಕೊಂಡು ಕುಟುಂಬಸ್ತಳಾಗಿರುವುದು ಎಷ್ಟೋ ಒಳ್ಳೆಯದು. 2 ಬೋವಜನು ನಮ್ಮ ಸಂಬಂಧಿಕನಾಗಿದ್ದಾನೆ. ನೀನು ಅವನ ಹೆಣ್ಣಾಳುಗಳ ಜೊತೆಯಲ್ಲಿದ್ದುಕೊಂಡು ಹಕ್ಕಲಾಯ್ದಿರುವೆ. ಇಂದು ರಾತ್ರಿ ಅವನು ಕಣದಲ್ಲಿ ಜವೆಗೋಧಿಯನ್ನು ತೂರುವನು. 3 ನೀನು ಸ್ನಾನ ಮಾಡಿ ಶೃಂಗರಿಸಿಕೊಂಡು ಶ್ರೇಷ್ಠವಾದ ಉಡುಪುಗಳನ್ನು ಧರಿಸಿಕೊಂಡು ಕಣಕ್ಕೆ ಹೋಗು. ಆದರೆ ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವರೆಗೆ ಅವನಿಗೆ ಮರೆಯಾಗಿರು. 4 ಊಟವಾದ ಮೇಲೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ಅವನು ಮಲಗುತ್ತಾನೆ. ಅವನು ಎಲ್ಲಿ ಮಲಗುತ್ತಾನೆಂಬುದನ್ನು ನೋಡಿಕೊಂಡಿದ್ದು ಅಲ್ಲಿಗೆ ಹೋಗಿ ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಅಲ್ಲಿಯೇ ಮಲಗಿಕೋ. ನೀನು ಮಾಡತಕ್ಕದ್ದನ್ನು ಅವನು ನಿನಗೆ ತಿಳಿಸುತ್ತಾನೆ” ಎಂದಳು.
5 ಆಗ ರೂತಳು, “ನೀನು ಹೇಳಿದಂತೆಯೇ ಮಾಡುತ್ತೇನೆ” ಎಂದು ಉತ್ತರಕೊಟ್ಟಳು.
13 ಬೋವಜನು ರೂತಳನ್ನು ಮದುವೆಯಾದನು. ಯೆಹೋವನ ಕೃಪೆಯಿಂದ ರೂತಳು ಗರ್ಭವತಿಯಾಗಿ ಗಂಡುಮಗುವಿಗೆ ಜನ್ಮಕೊಟ್ಟಳು. 14 ನಗರದ ಸ್ತ್ರೀಯರು ನೊವೊಮಿಗೆ, “ನಿನಗೆ ಈ ಬಾಧ್ಯಸ್ಥನನ್ನು ದಯಪಾಲಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಇವನು ಇಸ್ರೇಲಿನಲ್ಲಿ ಸುಪ್ರಸಿದ್ಧನಾಗಲಿ. 15 ಅವನು ನಿನ್ನನ್ನು ಉಜ್ಜೀವಿಸಮಾಡುವನು. ವೃದ್ಧಾಪ್ಯದಲ್ಲಿ ನಿನ್ನ ಸಂರಕ್ಷಕನಾಗಿರಲಿ. ನಿನ್ನನ್ನು ಪ್ರೀತಿಸುವ ನಿನ್ನ ಸೊಸೆಯು ನಿನಗಾಗಿ ಈ ಮಗುವನ್ನು ಹೆತ್ತಿದ್ದಾಳೆ. ಅವಳು ನಿನಗೆ, ಏಳುಮಂದಿ ಗಂಡುಮಕ್ಕಳಿಗಿಂತಲೂ ಶ್ರೇಷ್ಠವಾಗಿದ್ದಾಳೆ” ಎಂದು ಹೇಳಿದರು.
16 ನೊವೊಮಿಯು ಆ ಮಗುವನ್ನು ತನ್ನ ಉಡಿಲಲ್ಲಿಟ್ಟುಕೊಂಡು ಸಾಕಿಸಲುಹಿದಳು. 17 ನೆರೆಹೊರೆಯವರು ಮಗುವಿಗೆ ಹೆಸರಿಟ್ಟರು. ಆ ಸ್ತ್ರೀಯರು, “ನೊವೊಮಿಗೆ ಗಂಡುಮಗು ಹುಟ್ಟಿದೆ” ಎಂದರು. ನೆರೆಯವರು ಓಬೇದನೆಂದು ಹೆಸರಿಟ್ಟರು. ಓಬೇದನು ಇಷಯನ ತಂದೆ, ಇಷಯನು ರಾಜನಾದ ದಾವೀದನ ತಂದೆ.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ಸೊಲೋಮೋನ.
127 ಯೆಹೋವನು ಮನೆಯನ್ನು ಕಟ್ಟದಿದ್ದರೆ,
ಕಟ್ಟುವವರ ಸಮಯವೆಲ್ಲಾ ವ್ಯರ್ಥ.
ಯೆಹೋವನು ಪಟ್ಟಣವನ್ನು ಕಾಯದಿದ್ದರೆ,
ಕಾವಲುಗಾರರ ಸಮಯವೆಲ್ಲಾ ವ್ಯರ್ಥ.
2 ಕೇವಲ ಹೊಟ್ಟೆಪಾಡಿಗಾಗಿ ಮುಂಜಾನೆಯಲ್ಲೇ ಎದ್ದು
ರಾತ್ರಿಯವರೆಗೂ ದುಡಿಯುವುದು ಕೇವಲ ವ್ಯರ್ಥ.
ಯಾಕೆಂದರೆ ದೇವರು ತನ್ನ ಪ್ರಿಯರಿಗೆ
ಆಹಾರವನ್ನು ನಿದ್ರೆಯಲ್ಲೂ ದಯಪಾಲಿಸುವನು.
3 ಮಕ್ಕಳು ಯೆಹೋವನ ಕೊಡುಗೆ.
ತಾಯಿಯ ಗರ್ಭಫಲವು ಆತನ ಬಹುಮಾನ.
4 ಯೌವನಸ್ಥನ ಗಂಡುಮಕ್ಕಳು ಸೈನಿಕನ ಬತ್ತಳಿಕೆಯಲ್ಲಿರುವ ಬಾಣಗಳಂತಿದ್ದಾರೆ.
5 ತನ್ನ ಬತ್ತಳಿಕೆಯಲ್ಲಿ ಗಂಡುಮಕ್ಕಳನ್ನು ತುಂಬುವವನು ಭಾಗ್ಯವಂತನಾಗಿದ್ದಾನೆ.
ಅವನಿಗೆ ಸೋಲೇ ಇಲ್ಲ.
ಅವನ ಗಂಡುಮಕ್ಕಳು ಅವನ ಪರವಾಗಿಯೂ ಅವನ ಶತ್ರುಗಳ ವಿರೋಧವಾಗಿಯೂ ನ್ಯಾಯಸ್ಥ್ಥಾನಗಳಲ್ಲಿ ವಾದಿಸುವರು.
24 ಕ್ರಿಸ್ತನು ಮಹಾ ಪವಿತ್ರಸ್ಥಳದೊಳಕ್ಕೆ ಹೋದನು. ಆದರೆ ಆತನು ಮಾನವನಿರ್ಮಿತವಾದ ಮಹಾಪವಿತ್ರಸ್ಥಳಕ್ಕೆ ಹೋಗಲಿಲ್ಲ. ಈ ಮಹಾಪವಿತ್ರಸ್ಥಳವು ನಿಜವಾದದ್ದರ ಪ್ರತಿರೂಪ ಮಾತ್ರವಾಗಿದೆ. ಆತನು ಪರಲೋಕಕ್ಕೆ ಹೋದನು; ನಮಗೆ ಸಹಾಯ ಮಾಡುವುದಕ್ಕೋಸ್ಕರ ಈಗ ದೇವರ ಸನ್ನಿಧಿಯಲ್ಲಿದ್ದಾನೆ.
25 ಪ್ರಧಾನಯಾಜಕನು ವರ್ಷಕ್ಕೊಮ್ಮೆ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸುವಾಗ ಅರ್ಪಿಸುವುದಕ್ಕಾಗಿ ಪಶುರಕ್ತವನ್ನು ತನ್ನೊಡನೆ ತೆಗೆದುಕೊಂಡು ಹೋಗುತ್ತಿದ್ದನು. ಆದರೆ ಅವನು ತನ್ನ ಸ್ವಂತ ರಕ್ತವನ್ನು ಅರ್ಪಿಸುತ್ತಿರಲಿಲ್ಲ. ಕ್ರಿಸ್ತನು ಪರಲೋಕಕ್ಕೆ ಹೋದದ್ದು, ಪ್ರಧಾನ ಯಾಜಕನು ಮತ್ತೆಮತ್ತೆ ರಕ್ತವನ್ನು ಅರ್ಪಿಸಿದಂತೆ ತನ್ನನ್ನು ಮತ್ತೆಮತ್ತೆ ಅರ್ಪಿಸಿಕೊಳ್ಳುವುದಕ್ಕಾಗಿಯಲ್ಲ. 26 ಕ್ರಿಸ್ತನು ಅನೇಕ ಸಲ ತನ್ನನ್ನು ಅರ್ಪಿಸಿಕೊಂಡಿದ್ದರೆ, ಈ ಲೋಕವು ಸೃಷ್ಟಿಯಾದಂದಿನಿಂದ ಆತನು ಅನೇಕ ಸಲ ಸಂಕಟವನ್ನು ಅನಭವಿಸ ಬೇಕಾಗುತ್ತಿತ್ತು. ಆದರೆ ಕ್ರಿಸ್ತನು ಯುಗಾಂತ್ಯದಲ್ಲಿ ಪಾಪನಿವಾರಣೆ ಮಾಡುವುದಕ್ಕಾಗಿ ಬಂದು ಒಂದೇ ಸಲ ತನ್ನನ್ನು ಅರ್ಪಿಸಿಕೊಂಡನು.
27 ಪ್ರತಿಯೊಬ್ಬರೂ ಒಂದೇಸಾರಿ ಸಾಯುವರು. ಅನಂತರ ಅವರಿಗೆ ನ್ಯಾಯತೀರ್ಪಾಗುವುದು. 28 ಅದರಂತೆಯೇ ಕ್ರಿಸ್ತನು ಅನೇಕ ಜನರ ಪಾಪಗಳನ್ನು ತೆಗೆದುಹಾಕಲು ಒಂದು ಸಲ ಮಾತ್ರ ತನ್ನನ್ನು ಯಜ್ಞವನ್ನಾಗಿ ಅರ್ಪಿಸಿಕೊಂಡನು. ಕ್ರಿಸ್ತನು ಎರಡನೆ ಸಲ ಪ್ರತ್ಯಕ್ಷನಾಗುವುದು ಜನರ ಪಾಪನಿವಾರಣೆಗೋಸ್ಕರವಲ್ಲ. ತನಗಾಗಿ ಕಾಯುತ್ತಿರುವ ಜನರನ್ನು ಬಿಡುಗಡೆ ಮಾಡುವುದಕ್ಕಾಗಿಯಷ್ಟೇ.
ಯೇಸು ಧರ್ಮೋಪದೇಶಕರನ್ನು ಖಂಡಿಸಿದ್ದು
(ಮತ್ತಾಯ 23:6-7; ಲೂಕ 20:45-47)
38 ಯೇಸು ತನ್ನ ಉಪದೇಶವನ್ನು ಮುಂದುವರಿಸಿ, “ಧರ್ಮೋಪದೇಶಕರ ಬಗ್ಗೆ ಎಚ್ಚರಿಕೆಯಿಂದಿರಿ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ. ಅವರು ಪೇಟೆಬೀದಿಗಳಲ್ಲಿ ಜನರಿಂದ ಗೌರವ ಪಡೆಯಲು ಅಪೇಕ್ಷಿಸುತ್ತಾರೆ. 39 ಸಭಾಮಂದಿರಗಳಲ್ಲಿ ಮತ್ತು ಔತಣಗಳಲ್ಲಿ ಉನ್ನತ ಆಸನಗಳನ್ನು ಬಯಸುತ್ತಾರೆ. 40 ಅವರು ವಿಧವೆಯರ ಆಸ್ತಿಯನ್ನು ಕಸಿದುಕೊಳ್ಳುತ್ತಾರೆ. ಉದ್ದುದ್ದ ಪ್ರಾರ್ಥನೆಗಳನ್ನು ಮಾಡುವುದರ ಮೂಲಕ ತಮ್ಮನ್ನು ತಾವೇ ಒಳ್ಳೆಯವರೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ದೇವರು ಈ ಜನರನ್ನು ಕಠಿಣವಾಗಿ ಶಿಕ್ಷಿಸುತ್ತಾನೆ” ಎಂದು ಹೇಳಿದನು.
ಬಡವಿಧವೆಯ ಕಾಣಿಕೆ
(ಲೂಕ 21:1-4)
41 ಯೇಸು ದೇವಾಲಯದಲ್ಲಿ ಕಾಣಿಕೆ ಪೆಟ್ಟಿಗೆಗಳ ಎದುರಿನಲ್ಲಿ ಕುಳಿತಿದ್ದಾಗ, ಜನರು ಪೆಟ್ಟಿಗೆಯಲ್ಲಿ ಹಣ ಹಾಕುವುದನ್ನು ಗಮನಿಸಿದನು. ಅನೇಕ ಶ್ರೀಮಂತ ಜನರು ಹೆಚ್ಚು ಹಣವನ್ನು ಕೊಟ್ಟರು. 42 ನಂತರ ಒಬ್ಬ ಬಡವಿಧವೆ ಬಂದು, ಎರಡು ತಾಮ್ರದ ನಾಣ್ಯಗಳನ್ನು[a] ಅಂದರೆ ಒಂದು ಪೈಸೆಯನ್ನು ಹಾಕಿದಳು.
43 ಯೇಸು ತನ್ನ ಶಿಷ್ಯರನ್ನು ಬಳಿಗೆ ಕರೆದು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಕಾಣಿಕೆ ಹಾಕಿದವರೆಲ್ಲರಲ್ಲಿ ಈ ಬಡವಿಧವೆ ಹೆಚ್ಚು ಹಾಕಿದ್ದಾಳೆ. 44 ಉಳಿದವರಾದರೊ ತಮಗೆ ಸಾಕಾಗಿ ಉಳಿದದ್ದರಲ್ಲಿ ಸ್ವಲ್ಪ ಹಾಕಿದರು. ಈಕೆಯಾದರೊ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲ ಕೊಟ್ಟುಬಿಟ್ಟಳು. ಈಕೆಗೆ ಆ ಹಣದ ಅಗತ್ಯವಿತ್ತು” ಎಂದನು.
Kannada Holy Bible: Easy-to-Read Version. All rights reserved. © 1997 Bible League International