Revised Common Lectionary (Semicontinuous)
ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
63 ದೇವರೇ, ನೀನೇ ನನ್ನ ದೇವರು.
ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
ನನ್ನ ದೇಹವು ನಿನಗಾಗಿ ಬಯಸಿದೆ.
2 ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
3 ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
4 ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
5 ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
6 ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
7 ನಿಜವಾಗಿಯೂ ನೀನೇ ನನಗೆ ಸಹಾಯಕ.
ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
8 ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.
9 ನನ್ನನ್ನು ಕೊಲ್ಲಬೇಕೆಂದಿರುವವರು
ಪಾತಾಳಕ್ಕೆ ಇಳಿದುಹೋಗುವರು.
10 ಅವರು ಖಡ್ಗಗಳಿಂದ ಕೊಲ್ಲಲ್ಪಡುವರು.
ಅವರ ಶವಗಳು ನರಿಗಳ ಪಾಲಾಗುವವು.
11 ರಾಜನಾದರೋ ತನ್ನ ದೇವರಲ್ಲಿಯೇ ಸಂತೋಷಿಸುವನು.
ಹರಕೆಹೊತ್ತು ಅವನಿಗೆ ವಿಧೇಯರಾಗಿರುವವರು ದೇವರನ್ನು ಕೊಂಡಾಡುವರು,
ಯಾಕೆಂದರೆ ಆ ಸುಳ್ಳುಗಾರರನ್ನೆಲ್ಲಾ ಆತನು ಸೋಲಿಸಿದ್ದಾನೆ.
15 ಯೋಷೀಯನು ಬೇತೇಲಿನ ಉನ್ನತಸ್ಥಳವನ್ನು ಮತ್ತು ಯಜ್ಞವೇದಿಕೆಯನ್ನು ಕೆಡವಿಬಿಟ್ಟನು. ನೆಬಾಟನ ಮಗನಾದ ಯಾರೊಬ್ಬಾಮನು ಈ ಯಜ್ಞವೇದಿಕೆಯನ್ನು ನಿರ್ಮಿಸಿದ್ದನು. ಇಸ್ರೇಲರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಯೋಷೀಯನು ಯಜ್ಞವೇದಿಕೆಯನ್ನು ಮತ್ತು ಉನ್ನತಸ್ಥಳವನ್ನು ಕೆಡವಿಬಿಟ್ಟನು. ಯೋಷೀಯನು ಯಜ್ಞವೇದಿಕೆಯ ಕಲ್ಲುಗಳನ್ನು ಪುಡಿಪುಡಿಮಾಡಿ ಧೂಳಿನಲ್ಲಿ ಬೆರಸಿದನು. ಅವನು ಅಶೇರಸ್ತಂಭವನ್ನು ಸುಟ್ಟುಹಾಕಿದನು. 16 ಯೋಷೀಯನು ಸುತ್ತಲೂ ನೋಡಿದಾಗ ಬೆಟ್ಟದ ಮೇಲಿದ್ದ ಸ್ಮಶಾನಗಳನ್ನು ಕಂಡನು. ಅವನು ಜನರನ್ನು ಕಳುಹಿಸಿ ಆ ಸ್ಮಶಾನಗಳಿಂದ ಎಲುಬುಗಳನ್ನು ತರಿಸಿ ಆ ಎಲುಬುಗಳನ್ನು ಯಜ್ಞವೇದಿಕೆಯ ಮೇಲೆ ಸುಟ್ಟನು. ಈ ರೀತಿಯಲ್ಲಿ, ಯೋಷೀಯನು ಯಜ್ಞವೇದಿಕೆಯನ್ನು ಹೊಲಸು ಮಾಡಿದನು. ಇದು ಪ್ರವಾದಿಯು ಘೋಷಿಸಿದ್ದ[a] ಯೆಹೋವನ ಸಂದೇಶದಂತೆ ಸಂಭವಿಸಿತು. ಯಾರೊಬ್ಬಾಮನು ಯಜ್ಞವೇದಿಕೆಯ ಪಕ್ಕದಲ್ಲಿ ನಿಂತಿದ್ದಾಗ ಪ್ರವಾದಿಯು ಈ ಸಂಗತಿಗಳನ್ನು ಪ್ರಕಟಿಸಿದ್ದನು.
ನಂತರ ಯೋಷೀಯನು ಸುತ್ತಲೂ ನೋಡಿದಾಗ, ದೇವಮನುಷ್ಯನ ಸಮಾಧಿಯನ್ನು ಕಂಡನು.
17 ಯೋಷೀಯನು, “ನಾನು ನೋಡುತ್ತಿರುವ ಆ ಸ್ಮಾರಕ ಯಾವುದು?” ಎಂದು ಕೇಳಿದನು.
ಆ ನಗರದ ಜನರು ಅವನಿಗೆ, “ಅದು ಯೆಹೂದದಿಂದ ಬಂದ ದೇವಮನುಷ್ಯನ ಸಮಾಧಿ. ನೀನು ಬೇತೇಲಿನ ಯಜ್ಞವೇದಿಕೆಗೆ ಮಾಡಿದ ಕಾರ್ಯಗಳನ್ನು ಕುರಿತು ಈ ಪ್ರವಾದಿಯು ಬಹಳ ಕಾಲದ ಹಿಂದೆಯೇ ಹೇಳಿದ್ದನು” ಎಂದರು.
18 ಯೋಷೀಯನು, “ಆ ಸಮಾಧಿಗೆ ಏನೂ ಮಾಡಬೇಡಿ. ಅವನ ಎಲುಬುಗಳನ್ನು ತೆಗೆಯಬೇಡಿ” ಎಂದು ಹೇಳಿದನು.
19 ಯೋಷೀಯನು ಸಮಾರ್ಯದ ನಗರಗಳಲ್ಲಿದ್ದ ಉನ್ನತಸ್ಥಳಗಳ ಆಲಯಗಳನ್ನೆಲ್ಲ ನಾಶಗೊಳಿಸಿದನು. ಇಸ್ರೇಲಿನ ರಾಜರುಗಳು ಈ ಆಲಯಗಳನ್ನು ನಿರ್ಮಿಸಿದ್ದರು. ಇದರಿಂದ ಯೆಹೋವನು ಬಹಳ ಕೋಪಗೊಂಡಿದ್ದನು. ಯೋಷೀಯನು ಬೇತೇಲಿನಲ್ಲಿ ಆರಾಧನೆಯ ಸ್ಥಳಗಳನ್ನು ನಾಶಪಡಿಸಿದಂತೆ ಆ ಆಲಯಗಳನ್ನೂ ನಾಶಗೊಳಿಸಿದನು.
20 ಯೋಷೀಯನು ಸಮಾರ್ಯದ ಉನ್ನತಸ್ಥಳಗಳಲ್ಲಿದ್ದ ಯಾಜಕರನ್ನೆಲ್ಲ ಕೊಂದುಹಾಕಿದನು. ಅವನು ಯಾಜಕರನ್ನು ಯಜ್ಞವೇದಿಕೆಗಳ ಮೇಲೆಯೇ ಕೊಂದುಹಾಕಿದನು. ಅವನು ಜನರ ಎಲುಬುಗಳನ್ನು ಯಜ್ಞವೇದಿಕೆಯ ಮೇಲೆ ಸುಟ್ಟನು. ಈ ರೀತಿ ಅವನು ಪೂಜೆಯ ಸ್ಥಳಗಳನ್ನು ನಾಶಗೊಳಿಸಿದನು. ನಂತರ ಅವನು ಜೆರುಸಲೇಮಿಗೆ ಹಿಂದಿರುಗಿದನು.
ಯೆಹೂದದ ಜನರು ಪಸ್ಕಹಬ್ಬವನ್ನು ಆಚರಿಸಿದರು
21 ರಾಜನಾದ ಯೋಷೀಯನು ಜನರಿಗೆಲ್ಲ, “ನಿಮ್ಮ ದೇವರಾದ ಯೆಹೋವನಿಗಾಗಿ ಪಸ್ಕಹಬ್ಬವನ್ನು ಆಚರಿಸಿರಿ. ಈ ನಿಬಂಧನ ಗ್ರಂಥದಲ್ಲಿ ಬರೆದಿರುವಂತೆಯೇ ಅದನ್ನು ಮಾಡಿ” ಎಂದು ಆಜ್ಞಾಪಿಸಿದನು.
22 ನ್ಯಾಯಾಧೀಶರು ಇಸ್ರೇಲನ್ನು ಆಳಿದ ದಿನಗಳಿಂದ ಜನರು ಪಸ್ಕಹಬ್ಬವನ್ನು ಈ ರೀತಿಯಲ್ಲಿ ಆಚರಿಸಿರಲಿಲ್ಲ. ಇಸ್ರೇಲಿನ ರಾಜರುಗಳಾಗಲಿ ಇಲ್ಲವೆ ಯೆಹೂದದ ರಾಜರುಗಳಾಗಲಿ ಈ ರೀತಿ ಪಸ್ಕಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿರಲಿಲ್ಲ. 23 ಯೋಷೀಯನು ರಾಜನಾಗಿದ್ದ ಹದಿನೆಂಟನೆ ವರ್ಷದಲ್ಲಿ ಅವರು ಯೆಹೋವನಿಗಾಗಿ ಈ ಪಸ್ಕಹಬ್ಬವನ್ನು ಜೆರುಸಲೇಮಿನಲ್ಲಿ ಆಚರಿಸಿದರು.
24 ಯೋಷೀಯನು ಮಾಂತ್ರಿಕರನ್ನು, ತಾಂತ್ರಿಕರನ್ನು, ಮನೆಯ ದೇವರುಗಳನ್ನು, ವಿಗ್ರಹಗಳನ್ನು, ಯೆಹೂದದಲ್ಲಿ ಮತ್ತು ಜೆರುಸಲೇಮಿನಲ್ಲಿ ಜನರು ಪೂಜಿಸುತ್ತಿದ್ದ ತೆರಾಫೀಮ್ ಎಂಬ ಗೊಂಬೆಗಳನ್ನು ನಾಶಪಡಿಸಿದನು. ಯಾಜಕನಾದ ಹಿಲ್ಕೀಯನಿಗೆ ದೇವಾಲಯದಲ್ಲಿ ಸಿಕ್ಕಿದ ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳಿಗೆ ವಿಧೇಯನಾಗಿರಲು ಯೋಷೀಯನು ಹೀಗೆ ಮಾಡಿದನು.
25 ಇದಕ್ಕೆ ಮೊದಲು ಯೋಷೀಯನಂತಹ ರಾಜನು ಇರಲೇ ಇಲ್ಲ. ಯೋಷೀಯನು ತನ್ನ ಪೂರ್ಣ ಹೃದಯದಿಂದಲೂ ತನ್ನ ಪೂರ್ಣ ಆತ್ಮದಿಂದಲೂ ತನ್ನ ಪೂರ್ಣ ಶಕ್ತಿಯಿಂದಲೂ ಯೆಹೋವನ ಕಡೆಗೆ ತಿರುಗಿದನು. ಮೋಶೆಯ ಧರ್ಮಶಾಸ್ತ್ರವನ್ನು ಯೋಷೀಯನಂತೆ ಬೇರೆ ಯಾವ ರಾಜನೂ ಅನುಸರಿಸಿರಲಿಲ್ಲ. ಆ ಕಾಲದವರೆಗೆ ಯೋಷೀಯನಂತಹ ಮತ್ತೊಬ್ಬ ರಾಜನು ಇರಲೇ ಇಲ್ಲ.
ಇಬ್ಬರು ಸಾಕ್ಷಿಗಳು
11 ತರುವಾಯ ದಂಡದಂತಿರುವ ಒಂದು ಅಳತೆಯ ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು: “ಹೋಗು, ದೇವರ ಆಲಯವನ್ನೂ ಯಜ್ಞವೇದಿಕೆಯನ್ನೂ ಅಳತೆಮಾಡು; ಮತ್ತು ಅಲ್ಲಿ ಆರಾಧಿಸುವ ಜನರನ್ನು ಲೆಕ್ಕಹಾಕು. 2 ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳತೆ ಮಾಡದೆ ಬಿಟ್ಟುಬಿಡು. ಅದನ್ನು ಯೆಹೂದ್ಯರಲ್ಲದ ಜನರಿಗೆ ಬಿಟ್ಟಿದೆ. ಆ ಜನರು ಪವಿತ್ರ ನಗರದ ಮೇಲೆ ನಲವತ್ತೆರಡು ತಿಂಗಳ ಕಾಲ ತುಳಿದಾಡುವರು. 3 ನಾನು ನನ್ನ ಇಬ್ಬರು ಸಾಕ್ಷಿಗಳಿಗೆ ಅಧಿಕಾರವನ್ನು ಕೊಡುತ್ತೇನೆ. ಅವರು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪ್ರವಾದನೆ ಮಾಡುತ್ತಾರೆ. ಅವರು ಗೋಣಿತಟ್ಟುಗಳನ್ನು ಧರಿಸಿಕೊಂಡಿರುತ್ತಾರೆ.”
4 ಭೂಲೋಕದ ಪ್ರಭುವಿನ ಸನ್ನಿಧಿಯಲ್ಲಿ ನಿಂತಿರುವ ಎರಡು ಆಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳೇ ಈ ಇಬ್ಬರು ಸಾಕ್ಷಿಗಳು. 5 ಈ ಸಾಕ್ಷಿಗಳಿಗೆ ಯಾರಾದರೂ ಕೇಡು ಮಾಡಲು ಪ್ರಯತ್ನಿಸಿದರೆ, ಸಾಕ್ಷಿಗಳ ಬಾಯಿಂದ ಬೆಂಕಿಯು ಹೊರಬಂದು ಅವರ ಶತ್ರುವನ್ನು ಅಂದರೆ ಅವರಿಗೆ ತೊಂದರೆ ಮಾಡಲು ಪ್ರಯತ್ನಿಸಿದ್ದವರನ್ನೆಲ್ಲ ಸಾಯಿಸುತ್ತದೆ. 6 ಈ ಸಾಕ್ಷಿಗಳು ತಮ್ಮ ಪ್ರವಾದನೆಯ ಕಾಲದಲ್ಲಿ ಆಕಾಶದಿಂದ ಸುರಿಯುವ ಮಳೆಯನ್ನು ನಿಲ್ಲಿಸಲೂ ನೀರನ್ನು ರಕ್ತವನ್ನಾಗಿಸಲೂ ಭೂಮಿಗೆ ಎಲ್ಲಾ ವಿಧವಾದ ವಿಪತ್ತುಗಳನ್ನು ಕಳುಹಿಸಲೂ ಅಧಿಕಾರವನ್ನು ಹೊಂದಿರುತ್ತಾರೆ. ಅವರು ತಮಗೆ ಇಷ್ಟ ಬಂದಷ್ಟು ಸಲ ಹೀಗೆ ಮಾಡಶಕ್ತರಾಗಿದ್ದಾರೆ.
7 ಈ ಇಬ್ಬರು ಸಾಕ್ಷಿಗಳು ತಮ್ಮ ಸಂದೇಶವನ್ನು ಹೇಳಿ ಮುಗಿಸಿದ ನಂತರ, ತಳವಿಲ್ಲದ ಕೂಪದಿಂದ ಮೇಲಕ್ಕೆ ಬರುವ ಮೃಗವು ಅವರ ವಿರುದ್ಧ ಹೋರಾಟ ಮಾಡುತ್ತದೆ. ಈ ಮೃಗವು ಅವರನ್ನು ಸೋಲಿಸಿ, ಕೊಂದು ಹಾಕುತ್ತದೆ. 8 ಈ ಸಾಕ್ಷಿಗಳ ಎರಡು ಶವಗಳು ಮಹಾನಗರದ ಬೀದಿಯಲ್ಲಿ ಬಿದ್ದಿರುತ್ತವೆ. ಈ ನಗರಕ್ಕೆ ಸೊದೋಮ್[a] ಮತ್ತು ಈಜಿಪ್ಟ್ ಎಂದು ಹೆಸರಾಗುತ್ತದೆ. ಆ ನಗರದ ಹೆಸರುಗಳಿಗೆ ವಿಶೇಷ ಅರ್ಥವಿದೆ. ಪ್ರಭುವು ಈ ನಗರದಲ್ಲಿಯೇ ಶಿಲುಬೆಗೇರಿಸಲ್ಪಟ್ಟನು. 9 ಸಕಲ ಪ್ರಜೆ, ಕುಲ, ಭಾಷೆ, ಜನಾಂಗದವರು ಮೂರುವರೆ ದಿನಗಳ ಕಾಲ ಈ ಸಾಕ್ಷಿಗಳ ಶವಗಳನ್ನು ನೋಡುತ್ತಾ ಇರುತ್ತಾರೆ. ಅವರನ್ನು ಸಮಾಧಿ ಮಾಡಲು ಜನರು ಒಪ್ಪುವುದಿಲ್ಲ. 10 ಈ ಇಬ್ಬರು ಸತ್ತದ್ದಕ್ಕಾಗಿ ಭೂಮಿಯ ಮೇಲಿನ ಜನರು ಸಂತೋಷಗೊಳ್ಳುವರು. ಅವರು ಸಮಾರಂಭಗಳನ್ನು ನಡೆಸಿ, ಒಬ್ಬರಿಗೊಬ್ಬರು ಉಡುಗೊರೆಗಳನ್ನು ನೀಡುತ್ತಾರೆ. ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸಿಸುತ್ತಿರುವ ಜನರಿಗೆ ಹೆಚ್ಚು ಸಂಕಟವನ್ನು ಉಂಟುಮಾಡಿದ್ದರಿಂದ ಆ ಜನರು ಹೀಗೆ ಮಾಡುತ್ತಾರೆ.
11 ಆದರೆ ಮೂರುವರೆ ದಿನಗಳ ನಂತರ ದೇವರು ಆ ಇಬ್ಬರು ಪ್ರವಾದಿಗಳೊಳಗೆ ಮತ್ತೆ ಜೀವ ಪ್ರವೇಶಿಸುವಂತೆ ಮಾಡಿದನು. ಆಗ ಅವರು ತಮ್ಮ ಕಾಲೂರಿ ನಿಂತುಕೊಂಡರು. ಅವರನ್ನು ನೋಡಿದ ಜನರೆಲ್ಲರೂ ಭಯಗ್ರಸ್ತರಾದರು. 12 ಅನಂತರ “ಮೇಲೇರಿ ಬನ್ನಿ!” ಎಂದು ಪರಲೋಕದಿಂದ ಮಹಾವಾಣಿಯು ಆ ಪ್ರವಾದಿಗಳಿಗೆ ತಿಳಿಸಿತು. ಆಗ ಆ ಇಬ್ಬರು ಪ್ರವಾದಿಗಳು ಮೋಡದೊಂದಿಗೆ ಪರಲೋಕಕ್ಕೆ ಏರಿಹೋದರು. ಅವರು ಹೋಗುವುದನ್ನು ಅವರ ಶತ್ರುಗಳು ನೋಡುತ್ತಾ ಇದ್ದರು.
13 ಆ ಸಮಯದಲ್ಲಿ ಮಹಾಭೂಕಂಪವಾಯಿತು. ಆ ನಗರದ ಹತ್ತನೆಯ ಒಂದು ಭಾಗ ನಾಶವಾಯಿತು. ಭೂಕಂಪದಲ್ಲಿ ಏಳು ಸಾವಿರ ಜನರು ನಾಶವಾದರು. ಸಾಯದೆ ಉಳಿದಿದ್ದ ಜನರು ಬಹು ಭಯಗೊಂಡು ಪರಲೋಕದ ದೇವರನ್ನು ಘನಪಡಿಸಿದರು.
14 ಎರಡನೆಯ ಮಹಾವಿಪತ್ತು ಮುಗಿಯಿತು. ಮೂರನೆಯ ಮಹಾವಿಪತ್ತು ಬೇಗನೆ ಬರಲಿದೆ.
Kannada Holy Bible: Easy-to-Read Version. All rights reserved. © 1997 Bible League International