Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 25:1-10

ರಚನೆಗಾರ: ದಾವೀದ.

25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
    ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
    ದ್ರೋಹಿಗಳಾದರೋ ನಿರಾಶರಾಗುವರು.
    ಅವರಿಗೆ ಏನೂ ದೊರೆಯುವುದಿಲ್ಲ.

ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
    ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
    ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
    ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
    ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.

ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
    ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
    ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.
10 ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ
    ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.

ನೆಹೆಮೀಯ 9:16-25

16 ನಮ್ಮ ಪೂರ್ವಿಕರು ಹೆಮ್ಮೆಯಿಂದ ತುಂಬಿದರು; ಅವರು ಹಠಮಾರಿಗಳಾದರು;
    ನಿನ್ನ ಆಜ್ಞೆಯನ್ನು ಪರಿಪಾಲಿಸಲು ನಿರಾಕರಿಸಿದರು.
17 ನಿನ್ನ ಮಾತನ್ನು ಕೇಳಲು ನಿರಾಕರಿಸಿದರು.
    ಅವರಿಗಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನ್ನು ಅವರು ಮರೆತರು.
ಅವರು ಹಠಮಾರಿಗಳಾಗಿದ್ದರಿಂದ
    ತಮ್ಮನ್ನು ಈಜಿಪ್ಟಿನ ಗುಲಾಮಗಿರಿಗೆ ಮತ್ತೆ ಕರೆದೊಯ್ಯಲು ಒಬ್ಬ ನಾಯಕನನ್ನು ನೇಮಿಸಲು ಅವರು ನಿರ್ಧರಿಸಿದರು.[a]

“ಆದರೆ ನೀನು ಕ್ಷಮಿಸುವ ದೇವರಾಗಿರುವೆ.
    ನೀನು ಕನಿಕರ ಉಳ್ಳವನಾಗಿರುವೆ.
ನೀನು ತಾಳ್ಮೆಯುಳ್ಳವನೂ ಪ್ರೀತಿಸ್ವರೂಪನೂ ಆಗಿರುವೆ.
ಆದ್ದರಿಂದ ನೀನು ಅವರನ್ನು ತೊರೆಯಲಿಲ್ಲ.
18 ಅವರು ಬಂಗಾರದಿಂದ ಕರುವಿನಾಕೃತಿಯ ವಿಗ್ರಹವನ್ನು ಮಾಡಿ,
    ‘ಈ ವಿಗ್ರಹವೇ ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದದ್ದು’ ಎಂದು ಹೇಳಿದರೂ
ನೀನು ಅವರನ್ನು ತೊರೆದುಬಿಡಲಿಲ್ಲ.
    ಅವರು ನಿನಗೆ ವಿರೋಧವಾಗಿ ದೂಷಿಸಿ ಪಾಪಮಾಡಿದರು.
19 ನೀನು ತುಂಬಾ ಕನಿಕರವುಳ್ಳ ದೇವರು.
    ಆದ್ದರಿಂದ ಅವರನ್ನು ಮರುಭೂಮಿಯಲ್ಲಿಯೇ ಬಿಡಲಿಲ್ಲ.
ಹಗಲಿನಲ್ಲಿ ಅವರಿಂದ ಎತ್ತರವಾದ
    ಮೋಡವನ್ನು ತೆಗೆದುಬಿಡಲಿಲ್ಲ.
ನೀನು ಅವರನ್ನು ಮುನ್ನಡೆಸಿಕೊಂಡೇ ಹೋದೆ.
ರಾತ್ರಿಯಲ್ಲಿ ಅವರಿಂದ
    ಅಗ್ನಿಸ್ತಂಭವನ್ನು ತೆಗೆದುಬಿಡಲಿಲ್ಲ.
ಅವರ ದಾರಿಗೆ ಬೆಳಕನ್ನು ನೀಡುತ್ತಾ
    ಅವರು ಹೋಗತಕ್ಕ ದಾರಿಯಲ್ಲಿ ಮುನ್ನಡೆಸಿದೆ.
20 ಅವರು ಬುದ್ಧಿವಂತರಾಗುವಂತೆ ನಿನ್ನ ಒಳ್ಳೆಯ ಆತ್ಮನನ್ನು ಕೊಟ್ಟೆ.
    ಮನ್ನವನ್ನು ಅವರಿಗೆ ಆಹಾರವಾಗಿ ಕೊಟ್ಟೆ.
    ಅವರು ಬಾಯಾರಿದಾಗ ನೀರು ಕೊಟ್ಟೆ.
21 ನಲವತ್ತು ವರ್ಷ ಅವರನ್ನು ಸಾಕಿದೆ.
    ಆ ಮರುಭೂಮಿಯಲ್ಲಿ ಅವರಿಗೆ ಬೇಕಾದದ್ದೇ ದೊರಕಿತು.
ಅವರ ಬಟ್ಟೆಗಳು ಹರಿದುಹೋಗಲಿಲ್ಲ.
    ಅವರ ಪಾದಗಳು ನೋವಿನಿಂದ ಊದಿಕೊಳ್ಳಲಿಲ್ಲ.
22 ಯೆಹೋವನೇ, ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಕೊಟ್ಟೆ.
    ಕೆಲವೇ ಜನರು ವಾಸವಾಗಿದ್ದ ಬಹುದೂರದ ಸ್ಥಳಗಳನ್ನು ಕೊಟ್ಟೆ.
ಹೆಷ್ಬೋನಿನ ರಾಜನಾದ ಸೀಹೋನನ ನಾಡನ್ನು
    ಮತ್ತು ಬಾಷಾನಿನ ರಾಜನಾದ ಓಗನ ನಾಡನ್ನು ಅವರು ಪಡೆದುಕೊಂಡರು.
23 ಅವರ ಸಂತತಿಯವರನ್ನು
    ಆಕಾಶದ ನಕ್ಷತ್ರಗಳಷ್ಟು ಮಾಡಿದೆ.
ಅವರ ಪೂರ್ವಿಕರಿಗೆ ಕೊಡುತ್ತೇನೆಂದು
    ವಾಗ್ದಾನ ಮಾಡಿದ ದೇಶಕ್ಕೆ ತಂದೆ.
    ಅವರು ಒಳಹೊಕ್ಕು ದೇಶವನ್ನು ಆಕ್ರಮಿಸಿದರು.
24 ಆ ಮಕ್ಕಳು ದೇಶವನ್ನು ಸ್ವಾಧೀನಪಡಿಸಿಕೊಂಡರು;
ಅಲ್ಲಿ ವಾಸಿಸಿದ್ದ ಕಾನಾನ್ಯರನ್ನು ಓಡಿಸಿದರು.
    ಅವರನ್ನು ಸೋಲಿಸುವಂತೆ ನೀನೇ ಮಾಡಿದೆ.
ಆ ರಾಜ್ಯಗಳಿಗೆ, ರಾಜರುಗಳಿಗೆ ಅವರು ಮಾಡಬೇಕೆಂದಿದ್ದನ್ನು
    ಮಾಡುವಂತೆ ಅವರಿಗೇ ಅವಕಾಶಮಾಡಿಕೊಟ್ಟೆ.
25 ಬಲಾಢ್ಯ ನಗರಗಳನ್ನು ಸ್ವಾಧೀನಪಡಿಸಿಕೊಂಡರು.
    ಉತ್ತಮವಾದ ಭೂಮಿಯನ್ನು ವಶಪಡಿಸಿಕೊಂಡರು.
ಒಳ್ಳೆಯ ವಸ್ತುಗಳಿಂದ ತುಂಬಿದ್ದ ಮನೆಗಳನ್ನು ಅವರು ವಶಪಡಿಸಿಕೊಂಡರು.
    ಅಗೆದು ತಯಾರಾಗಿದ್ದ ಬಾವಿಗಳನ್ನು ಅವರಿಗೆ ನೀನು ಕೊಟ್ಟೆ,
ದ್ರಾಕ್ಷಿತೋಟವನ್ನು, ಎಣ್ಣೆಮರಗಳ ತೋಪನ್ನು, ಬೇಕಾದಷ್ಟು ಹಣ್ಣಿನ ಮರಗಳನ್ನು ನೀನು ಅವರಿಗೆ ಕೊಟ್ಟೆ.
    ಅವರ ಹೊಟ್ಟೆ ತುಂಬಿ ಕೊಬ್ಬೇರುವಷ್ಟು ಅವರಿಗೆ ಕೊಟ್ಟೆ.
ನೀನು ಕೊಟ್ಟ ಉತ್ತಮವಾದ ವಸ್ತುಗಳಲ್ಲಿ ಅವರು ಆನಂದಿಸಿದರು.

1 ಥೆಸಲೋನಿಕದವರಿಗೆ 5:12-22

ಕೊನೆಯ ಮಾತುಗಳು ಮತ್ತು ವಂದನೆಗಳು

12 ಸಹೋದರ ಸಹೋದರಿಯರೇ, ಈಗ ನಿಮ್ಮಲ್ಲಿ ಪ್ರಯಾಸದಿಂದ ಕೆಲಸ ಮಾಡುತ್ತಾ ನಿಮ್ಮನ್ನು ಪ್ರಭುವಿನ ಮಾರ್ಗದಲ್ಲಿ ನಡೆಸುವವರನ್ನು ಮತ್ತು ಉಪದೇಶಿಸುವವರನ್ನು ಗೌರವಿಸಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇವೆ. 13 ಅವರು ನಿಮ್ಮಲ್ಲಿ ಮಾಡುವ ಸೇವೆಗಾಗಿ ಅವರನ್ನು ವಿಶೇಷವಾದ ಪ್ರೀತಿಯಿಂದ ಗೌರವಿಸಿರಿ.

ನೀವೆಲ್ಲರೂ ಸಮಾಧಾನದಿಂದ ಜೀವಿಸಿರಿ. 14 ಸಹೋದರ ಸಹೋದರಿಯರೇ, ಕೆಲಸ ಮಾಡದೆ ಇರುವ ಜನರಿಗೆ ಎಚ್ಚರಿಕೆ ನೀಡಬೇಕೆಂದು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ಹೆದರಿಕೊಂಡಿರುವವರನ್ನು ಪ್ರೋತ್ಸಾಹಿಸಿರಿ; ಬಲಹೀನರಿಗೆ ಸಹಾಯ ಮಾಡಿ; ಎಲ್ಲರ ಜೊತೆಯಲ್ಲಿ ತಾಳ್ಮೆಯಿಂದಿರಿ; 15 ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿಕೊಳ್ಳಿರಿ; ಒಬ್ಬರಿಗೊಬ್ಬರಿಗೆ ಮತ್ತು ಎಲ್ಲರಿಗೆ ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿರಿ.

16 ಯಾವಾಗಲೂ ಸಂತೋಷದಿಂದಿರಿ. 17 ಎಡೆಬಿಡದೆ ಪ್ರಾರ್ಥಿಸಿರಿ. 18 ದೇವರಿಗೆ ಎಲ್ಲಾ ಕಾಲದಲ್ಲಿಯೂ ಕೃತಜ್ಞತೆಗಳನ್ನು ಸಲ್ಲಿಸಿರಿ. ಇದುವೇ ನಿಮ್ಮ ವಿಷಯವಾಗಿ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಚಿತ್ತ.

19 ಪವಿತ್ರಾತ್ಮನ ಕಾರ್ಯವನ್ನು ನಂದಿಸಬೇಡಿ. 20 ಪ್ರವಾದನೆಯನ್ನು ಹೀನೈಸಬೇಡಿ. 21 ಎಲ್ಲವನ್ನೂ ಪರಿಶೋಧಿಸಿ, ಒಳ್ಳೆಯದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. 22 ಎಲ್ಲಾ ವಿಧವಾದ ಕೆಟ್ಟತನದಿಂದ ದೂರವಾಗಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International