Revised Common Lectionary (Semicontinuous)
ರಚನೆಗಾರ: ದಾವೀದ.
145 ನನ್ನ ದೇವರೇ, ನನ್ನ ರಾಜನೇ, ನಿನ್ನನ್ನು ಸ್ತುತಿಸುವೆನು;
ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
2 ನಿನ್ನನ್ನು ಪ್ರತಿದಿನವೂ ಸ್ತುತಿಸುವೆನು.
ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
3 ಯೆಹೋವನು ಮಹೋನ್ನತನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
ಆತನ ಮಹತ್ಕಾರ್ಯಗಳು ಅಸಂಖ್ಯಾತವಾಗಿವೆ.
4 ಯೆಹೋವನೇ, ನಿನ್ನ ಕಾರ್ಯಗಳನ್ನು ಜನರು ಎಂದೆಂದಿಗೂ ಸ್ತುತಿಸುವರು;
ನಿನ್ನ ಮಹತ್ಕಾರ್ಯಗಳ ವಿಷಯವಾಗಿ ಜನರು ಬೇರೆಯವರಿಗೆ ಹೇಳುವರು.
5 ನಿನ್ನ ಪ್ರಭಾವವುಳ್ಳ ಮಹಿಮೆಯ ಕುರಿತು ಜನರು ಹೇಳುವರು.
ನಾನು ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವೆನು.
6 ನಿನ್ನ ಅತ್ಯಾಶ್ಚರ್ಯಕರವಾದ ಕಾರ್ಯಗಳನ್ನು ಜನರು ಕೊಂಡಾಡುವರು.
ನಿನ್ನ ಮಹತ್ಕಾರ್ಯಗಳನ್ನು ನಾನು ವರ್ಣಿಸುವೆನು.
7 ನಿನ್ನ ಒಳ್ಳೆಯ ಕಾರ್ಯಗಳ ಕುರಿತಾಗಿ ಜನರು ಹೇಳುವರು.
ನಿನ್ನ ನೀತಿಯು ಕುರಿತಾಗಿ ಜನರು ಹಾಡುವರು.
8 ಯೆಹೋವನು ದಯೆಯುಳ್ಳವನೂ ಕನಿಕರವುಳ್ಳವನೂ
ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ.
9 ಯೆಹೋವನು ಪ್ರತಿಯೊಬ್ಬನಿಗೂ ಒಳ್ಳೆಯವನಾಗಿದ್ದಾನೆ.
ಆತನು ತಾನು ನಿರ್ಮಿಸಿದವುಗಳಿಗೆಲ್ಲಾ ಕನಿಕರ ತೋರಿಸುವನು.
10 ಯೆಹೋವನೇ, ನಿನ್ನ ಸೃಷ್ಟಿಯೆಲ್ಲವೂ ನಿನ್ನನ್ನು ಸ್ತುತಿಸುತ್ತವೆ.
ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.
11 ಅವರು ನಿನ್ನ ರಾಜ್ಯದ ಮಹತ್ವವನ್ನು ಕುರಿತು ಹೇಳುವರು.
ನಿನ್ನ ಪರಾಕ್ರಮವನ್ನು ವರ್ಣಿಸುವರು.
12 ಹೀಗೆ ನಿನ್ನ ಮಹತ್ಕಾರ್ಯಗಳನ್ನು ಇತರ ಜನರು ತಿಳಿದುಕೊಳ್ಳುವರು.
ನಿನ್ನ ರಾಜ್ಯದ ಮಹತ್ವವನ್ನೂ ವೈಭವವನ್ನೂ ಅವರು ತಿಳಿದುಕೊಳ್ಳುವರು.
13 ಯೆಹೋವನೇ, ನಿನ್ನ ರಾಜ್ಯವು ಶಾಶ್ವತವಾಗಿದೆ.
ನೀನು ಎಂದೆಂದಿಗೂ ಆಳುವೆ.
14 ಯೆಹೋವನು ಬಿದ್ದುಹೋಗಿರುವವರನ್ನು ಮೇಲೆತ್ತುವವನೂ
ಕುಗ್ಗಿಹೋದವರನ್ನು ಉದ್ಧರಿಸುವವನೂ ಆಗಿದ್ದಾನೆ.
15 ಎಲ್ಲಾ ಜೀವಿಗಳು ತಮ್ಮ ಆಹಾರಕ್ಕಾಗಿ ನಿನ್ನನ್ನೇ ನೋಡುತ್ತವೆ.
ನೀನು ಸಮಯಕ್ಕೆ ಸರಿಯಾಗಿ ಅವುಗಳಿಗೆ ಆಹಾರವನ್ನು ಕೊಡುವೆ.
16 ನೀನು ಕೈಯನ್ನು ತೆರೆದು
ಜೀವಿಗಳ ಅವಶ್ಯಕತೆಗಳನ್ನೆಲ್ಲಾ ಪೂರೈಸುವೆ.
17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
19 ಆತನು ತನ್ನ ಭಕ್ತರ ಇಷ್ಟವನ್ನು ನೆರವೇರಿಸುವನು.
ಆತನು ಅವರ ಮೊರೆಗೆ ಕಿವಿಗೊಟ್ಟು ಅವರನ್ನು ರಕ್ಷಿಸುವನು.
20 ಯೆಹೋವನು ತನ್ನನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಸಂರಕ್ಷಿಸುವನು,
ದುಷ್ಟರನ್ನಾದರೋ ಆತನು ನಾಶಮಾಡುವನು.
21 ನಾನು ಯೆಹೋವನನ್ನು ಕೊಂಡಾಡುತ್ತೇನೆ!
ಎಲ್ಲಾ ಜೀವಿಗಳು ಆತನ ಪವಿತ್ರ ಹೆಸರನ್ನು ಸದಾಕಾಲ ಕೊಂಡಾಡಲಿ!
ದೇವರು ತನ್ನ ಜನರನ್ನು ಸ್ವದೇಶಕ್ಕೆ ಬರಮಾಡುವನು
54 ಬಂಜೆಯೇ, ಸಂತೋಷಿಸು, ನಿನಗೆ ಮಕ್ಕಳಿಲ್ಲ.
ಆದ್ದರಿಂದ ನೀನು ಬಹಳವಾಗಿ ಸಂತೋಷಿಸು.
ಯೆಹೋವನು ಹೇಳುವುದೇನೆಂದರೆ,
“ಗಂಡ ಬಿಟ್ಟಿರುವ ಹೆಂಗಸಿಗೆ ಮದುವೆಯಾದ ಹೆಂಗಸಿಗಿಂತ ಹೆಚ್ಚು ಮಕ್ಕಳಿರುವರು.”
2 “ನಿನ್ನ ಡೇರೆಗಳನ್ನು ವಿಸ್ತರಿಸು.
ನಿನ್ನ ಬಾಗಿಲುಗಳನ್ನು ಅಗಲವನ್ನಾಗಿ ಮಾಡು.
ನಿನ್ನ ಮನೆಯನ್ನು ಅಭಿವೃದ್ಧಿಪಡಿಸು.
ನಿನ್ನ ಡೇರೆಯನ್ನು ದೊಡ್ಡದಾಗಿಯೂ ಬಲವಾಗಿಯೂ ಮಾಡು.
3 ಯಾಕೆಂದರೆ ನೀನು ಅಧಿಕವಾಗಿ ಬೆಳೆಯುವಿ.
ನಿನ್ನ ಮಕ್ಕಳು ಅನೇಕ ಜನಾಂಗಗಳನ್ನು ವಶಮಾಡಿಕೊಳ್ಳುವರು.
ಕೆಡವಿಹಾಕಿದ ಪಟ್ಟಣಗಳಲ್ಲಿ ನಿನ್ನ ಮಕ್ಕಳು ತಿರಿಗಿ ವಾಸಿಸುವರು.
4 ಹೆದರಬೇಡ, ನೀನು ನಿರಾಶಳಾಗುವದಿಲ್ಲ.
ಜನರು ನಿನ್ನ ವಿಷಯವಾಗಿ ಕೆಟ್ಟದ್ದನ್ನು ಆಡುವದಿಲ್ಲ.
ನೀನು ಬೇಸರಗೊಳ್ಳುವದಿಲ್ಲ.
ನೀನು ಯೌವ್ವನಸ್ಥಳಾಗಿರುವಾಗ ನಿನಗೆ ನಾಚಿಕೆಯಾಯಿತು.
ಆದರೆ ಈಗ ನೀನು ಆ ನಾಚಿಕೆಯನ್ನು ಮರೆತುಬಿಟ್ಟವಳಾಗಿದ್ದಿ.
ನಿನ್ನ ಗಂಡನನ್ನು ನೀನು ಕಳೆದುಕೊಂಡಾಗ
ನೀನು ಪಟ್ಟ ನಾಚಿಕೆಯನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ.
5 ಯಾಕೆಂದರೆ ನಿನ್ನ ಗಂಡನೇ (ದೇವರು) ನಿನ್ನನ್ನು ನಿರ್ಮಿಸಿದನು.
ಆತನ ಹೆಸರು ಸರ್ವಶಕ್ತನಾದ ಯೆಹೋವನು.
ಆತನು ಇಸ್ರೇಲನ್ನು ಕಾಪಾಡುವಾತನಾಗಿದ್ದಾನೆ. ಆತನು ಇಸ್ರೇಲಿನ ಪರಿಶುದ್ಧ ದೇವರಾಗಿದ್ದಾನೆ.
ಆತನನ್ನು ‘ಇಡೀ ಭೂಲೋಕದ ದೇವರು’ ಎಂದು ಕರೆಯುವರು.
6 “ನೀನು ಗಂಡಬಿಟ್ಟ ಹೆಂಗಸಿನಂತಿದ್ದಿ.
ನಿನ್ನ ಆತ್ಮದಲ್ಲಿ ನೀನು ತುಂಬಾ ದುಃಖಿತಳಾಗಿದ್ದಿ.
ಆದರೆ ಯೆಹೋವನು ನಿನ್ನನ್ನು ತನ್ನವಳನ್ನಾಗಿ ಮಾಡಲು ಕರೆದನು.
ಎಳೇ ಪ್ರಾಯದಲ್ಲಿ ಮದುವೆಯಾದ ಮತ್ತು ಗಂಡಬಿಟ್ಟ ಹೆಂಗಸಿನಂತೆ ನೀನಿದ್ದಿ.
ಆದರೆ ದೇವರು ತನ್ನವಳನ್ನಾಗಿ ಮಾಡಿಕೊಳ್ಳಲು ನಿನ್ನನ್ನು ಕರೆದನು.”
7 ದೇವರು ಹೇಳುವುದೇನೆಂದರೆ: “ನಾನು ನಿನ್ನನ್ನು ತೊರೆದೆನು. ಆದರೆ ಸ್ವಲ್ಪ ಸಮಯಕ್ಕಾಗಿ ಮಾತ್ರ.
ನಿನ್ನನ್ನು ಮತ್ತೆ ನನಗಾಗಿ ಒಟ್ಟುಗೂಡಿಸುವೆನು. ಆಗ ನಿನಗೆ ಅತ್ಯಂತ ದಯೆಯನ್ನು ತೋರಿಸುವೆನು.
8 ನಾನು ತುಂಬಾ ಸಿಟ್ಟುಗೊಂಡಿದ್ದೆನು ಮತ್ತು ಸ್ವಲ್ಪ ಕಾಲಕ್ಕೆ ನಿನಗೆ ಮರೆಯಾದೆನು.
ಆದರೆ ನಿನ್ನನ್ನು ಕರುಣೆಯಿಂದ ನಿರಂತರವೂ ಸಂತೈಸುವೆನು.”
ನಿನ್ನ ರಕ್ಷಕನಾದ ಯೆಹೋವನ ನುಡಿಗಳಿವು.
9 ನಿಮ್ಮ ಪ್ರೀತಿಯು ಯಥಾರ್ಥವಾಗಿರಲಿ. ದುಷ್ಕೃತ್ಯಗಳನ್ನು ದ್ವೇಷಿಸಿರಿ. ಒಳ್ಳೆಯ ಕಾರ್ಯಗಳನ್ನು ಮಾತ್ರ ಮಾಡಿರಿ. 10 ಸಹೋದರ ಸಹೋದರಿಯರೆಂಬ ಅನ್ಯೋನ್ಯಭಾವದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. ನೀವು ನಿಮಗೋಸ್ಕರ ಬಯಸುವ ಮರ್ಯಾದೆಗಿಂತಲೂ ಹೆಚ್ಚು ಮರ್ಯಾದೆಯನ್ನು ನಿಮ್ಮ ಸಹೋದರ ಸಹೋದರಿಯರಿಗೆ ಕೊಡಿರಿ. 11 ನೀವು ಪ್ರಭುವಿಗೋಸ್ಕರ ಸೇವೆಮಾಡುವುದು ಅಗತ್ಯವಿರುವಾಗ ಸೋಮಾರಿಗಳಾಗಿರಬೇಡಿರಿ. ಆತ್ಮಿಕವಾದ ಉತ್ಸಾಹದಿಂದ ಆತನ ಸೇವೆಮಾಡಿರಿ. 12 ನಿಮಗೆ ನಿರೀಕ್ಷೆಯಿರುವುದರಿಂದ ಸಂತೋಷವಾಗಿರಿ. ನಿಮಗೆ ಸಂಕಟಗಳಿರುವಾಗ ತಾಳ್ಮೆಯಿಂದಿರಿ. ಎಲ್ಲಾ ಸಮಯದಲ್ಲಿ ಪ್ರಾರ್ಥಿಸಿರಿ. 13 ಕೊರತೆಯಲ್ಲಿರುವ ದೇವಜನರಿಗೆ ಸಹಾಯ ಮಾಡಿರಿ. ಅತಿಥಿಸತ್ಕಾರದ ಅಗತ್ಯವಿರುವವರನ್ನು ಗುರುತಿಸಿ, ನಿಮ್ಮ ಮನೆಗಳಿಗೆ ಆಹ್ವಾನಿಸಿರಿ.
14 ನಿಮಗೆ ಕೇಡುಮಾಡುವವರನ್ನು ಶಪಿಸದೆ ಆಶೀರ್ವದಿಸಿರಿ. 15 ಸಂತೋಷಪಡುವವರ ಸಂಗಡ ಸಂತೋಷಪಡಿರಿ. ದುಃಖಪಡುವವರೊಂದಿಗೆ ದುಃಖಪಡಿರಿ. 16 ನೀವು ಒಬ್ಬರಿಗೊಬ್ಬರು ಸಮಾಧಾನದಿಂದ ಒಟ್ಟಾಗಿ ಜೀವಿಸಿರಿ. ಗರ್ವಪಡಬೇಡಿರಿ. ಸಮಾಜದಲ್ಲಿ ಗಣನೆಗೆ ಬಾರದ ಜನರೊಂದಿಗೆ ಸ್ನೇಹದಿಂದಿರಲು ಅಪೇಕ್ಷಿಸಿರಿ. ನಿಮ್ಮನ್ನು ನೀವೆ, ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ.
17 ಯಾವನಾದರು ನಿಮಗೆ ಕೇಡುಮಾಡಿದರೆ, ಅದಕ್ಕೆ ಪ್ರತಿಯಾಗಿ ಅವನಿಗೆ ಕೇಡುಮಾಡಬೇಡಿ. ಎಲ್ಲಾ ಜನರು ಒಳ್ಳೆಯದೆಂದು ಯೋಚಿಸುವ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿರಿ. 18 ಎಲ್ಲಾ ಜನರೊಂದಿಗೆ ಶಾಂತಿಯಿಂದ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಪ್ರಯತ್ನಿಸಿರಿ. 19 ನನ್ನ ಸ್ನೇಹಿತರೇ, ನಿಮಗೆ ಕೇಡುಮಾಡುವ ಜನರನ್ನು ದಂಡಿಸಲು ಪ್ರಯತ್ನಿಸಬೇಡಿ. ದೇವರು ತನ್ನ ಕೋಪದಿಂದ ಅವರನ್ನು ದಂಡಿಸುವವರೆಗೆ ಕಾದುಕೊಂಡಿರಿ. “ನಾನೇ ದಂಡಿಸುವವನು; ನಾನೇ ಜನರಿಗೆ ಮುಯ್ಯಿತೀರಿಸುವವನು ಎಂದು ಪ್ರಭುವು ಹೇಳುತ್ತಾನೆ”(A) ಎಂಬುದಾಗಿ ಬರೆಯಲ್ಪಟ್ಟಿದೆ. 20 ನೀವು ಮಾಡಬೇಕಾದದ್ದೇನೆಂದರೆ,
“ನಿಮ್ಮ ವೈರಿಯು ಹಸಿವೆಗೊಂಡಿದ್ದರೆ,
ಅವನಿಗೆ ಊಟ ಕೊಡಿರಿ.
ನಿಮ್ಮ ವೈರಿಯು ಬಾಯಾರಿದ್ದರೆ,
ಅವನಿಗೆ ಕುಡಿಯಲು ನೀರು ಕೊಡಿರಿ.
ನೀವು ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.”(B)
21 ಕೆಟ್ಟತನವು ನಿಮ್ಮನ್ನು ಸೋಲಿಸುವುದಕ್ಕೆ ಅವಕಾಶಕೊಡದೆ ಒಳ್ಳೆಯದನ್ನು ಮಾಡುವುದರ ಮೂಲಕವಾಗಿ ಕೆಟ್ಟತನವನ್ನು ಸೋಲಿಸಿರಿ.
Kannada Holy Bible: Easy-to-Read Version. All rights reserved. © 1997 Bible League International