Old/New Testament
ಒಂದು ಹೊಸ ದಿನ ಬರುವುದು
9 ಹಿಂದಿನ ಕಾಲದಲ್ಲಿ, ಜೆಬುಲೋನ್ ಮತ್ತು ನಫ್ತಾಲಿ ಪ್ರಾಂತ್ಯಗಳು ವಿಶೇಷವಾದವುಗಳಲ್ಲ ಎಂದು ಜನರು ತಿಳಿದುಕೊಂಡಿದ್ದರು. ಆದರೆ ಆಮೇಲೆ ಸಮುದ್ರಕ್ಕೆ ಸಮೀಪದಲ್ಲಿರುವ ಪ್ರಾಂತ್ಯ, ಜೋರ್ಡನಿನ ಆಚೆಗಿರುವ ಸ್ಥಳ ಮತ್ತು ಯೆಹೂದ್ಯರಲ್ಲದವರು ವಾಸಿಸುವ ಗಲಿಲಾಯ ಪ್ರಾಂತ್ಯ ಇವುಗಳನ್ನು ಮುಂದೆ ದೇವರು ಮಹಾದೇಶವನ್ನಾಗಿ ಮಾಡುವನು. 2 ಈಗ ಅವರು ಕತ್ತಲಲ್ಲಿ ವಾಸಿಸುವರು. ಆದರೆ ಒಂದು ದೊಡ್ಡ ಬೆಳಕನ್ನು ಅವರು ನೋಡುವರು. ಅವರಿರುವ ಸ್ಥಳವು ಮರಣದ ಸ್ಥಳದಂತೆ ಅಂಧಕಾರದಿಂದ ತುಂಬಿದೆ. ಆದರೆ ದೊಡ್ಡ ಬೆಳಕು ಅವರ ಮೇಲೆ ಪ್ರಕಾಶಿಸುವದು.
3 ದೇವರೇ, ಆ ದೇಶವನ್ನು ನೀನು ಅಭಿವೃದ್ಧಿಪಡಿಸುವೆ. ನೀನು ಆ ಜನರನ್ನು ಸಂತೋಷಪಡಿಸುವೆ. ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸುವರು. ಅದು ಸುಗ್ಗಿಕಾಲದಲ್ಲಿರುವ ಸಂತಸದಂತೆಯೂ ಯುದ್ಧದಲ್ಲಿ ಗಳಿಸಿದ ಕೊಳ್ಳೆಯ ಪಾಲು ದೊರೆತಾಗ ಉಂಟಾಗುವ ಸಂತಸದಂತೆಯೂ ಇರುವುದು. 4 ಯಾಕೆಂದರೆ ಅವರ ಮೇಲಿದ್ದ ಭಾರವನ್ನು ನೀನು ತೆಗೆದುಬಿಡುವೆ. ಅವರ ಬೆನ್ನಿನ ಮೇಲಿದ್ದ ಭಾರವಾದ ನೊಗವನ್ನು ನೀನು ತೆಗೆದುಹಾಕುವೆ; ವೈರಿಗಳು ನಿನ್ನ ಜನರನ್ನು ಶಿಕ್ಷಿಸಲು ಉಪಯೋಗಿಸುವ ಬೆತ್ತವನ್ನು ತೆಗೆದುಬಿಡುವೆ. ಆ ಸಮಯವು ನೀನು ಮಿದ್ಯಾನರನ್ನು ಸೋಲಿಸಿದ ಸಮಯದಂತಿರುವದು.
5 ರಣರಂಗದಲ್ಲಿ ನಡೆಯುವ ಪ್ರತಿಯೊಂದು ಪಾದರಕ್ಷೆಯನ್ನೂ ನಾಶಮಾಡಲಾಗುವುದು; ರಕ್ತದ ಕಲೆಯಿರುವ ಪ್ರತಿಯೊಂದು ಸಮವಸ್ತ್ರವನ್ನೂ ನಾಶಮಾಡಲಾಗುವದು. ಅವುಗಳೆಲ್ಲವನ್ನು ಬೆಂಕಿಯಲ್ಲಿ ಹಾಕಲಾಗುವದು. 6 ವಿಶೇಷವಾದ ಗಂಡುಮಗುವು ಜನಿಸಿದಾಗ ಇವೆಲ್ಲಾ ಸಂಭವಿಸುವದು. ದೇವರು ನಮಗೊಬ್ಬ ವರದ ಮಗನನ್ನು ಕೊಡುವನು. ಈ ವರದ ಮಗನು ಜನರನ್ನು ನಡಿಸುವದಕ್ಕೆ ಜವಾಬ್ದಾರಿಯನ್ನು ಹೊಂದಿದವನಾಗುವನು. ಆತನ ಹೆಸರು “ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭುವು” ಎಂಬುದಾಗಿ ಇರುವದು. 7 ಆತನ ರಾಜ್ಯದಲ್ಲಿ ಸಮಾಧಾನವೂ ಅಧಿಕಾರವೂ ಇರುತ್ತದೆ. ದಾವೀದನ ಕುಟುಂಬದವನ ರಾಜ್ಯದಲ್ಲಿ ಅವು ಸ್ಥಿರವಾಗಿರುತ್ತವೆ. ಈ ಅರಸನು ನ್ಯಾಯನೀತಿಗಳಿಂದ ನಿತ್ಯಕಾಲಕ್ಕೂ ರಾಜ್ಯವಾಳುವನು. ಸರ್ವಶಕ್ತನಾದ ಯೆಹೋವನಿಗೆ ತನ್ನ ಜನರ ಮೇಲೆ ಬಲವಾದ ಪ್ರೀತಿಯಿದೆ. ಆತನ ಈ ಕಾರ್ಯಗಳನ್ನೆಲ್ಲಾ ಮಾಡಲು ಬಲವಾದ ಪ್ರೀತಿಯೇ ಕಾರಣ.
ದೇವರು ಇಸ್ರೇಲನ್ನು ಶಿಕ್ಷಿಸುವನು
8 ಯಾಕೋಬನ ಜನರಿಗೆ, ನನ್ನ ದೇವರಾದ ಯೆಹೋವನು ಆಜ್ಞೆಯನ್ನು ಕೊಟ್ಟಿದ್ದಾನೆ. ಇಸ್ರೇಲರಿಗೆ ವಿರುದ್ಧವಾಗಿರುವ ಈ ಆಜ್ಞೆಯು ನೆರವೇರಲ್ಪಡುವುದು. 9 ಆಗ ಎಫ್ರಾಯೀಮಿನಲ್ಲಿರುವ (ಇಸ್ರೇಲಿನಲ್ಲಿರುವ) ಪ್ರತಿಯೊಬ್ಬನೂ, ಸಮಾರ್ಯದ ನಾಯಕರೂ, ದೇವರು ತಮ್ಮನ್ನು ಶಿಕ್ಷಿಸಿದ್ದಾನೆಂದು ತಿಳಿದುಕೊಳ್ಳುವರು.
ಅವರು ಬಹು ಗರ್ವಿಷ್ಠರಾಗಿ ಹೆಚ್ಚಳಪಡುತ್ತಿದ್ದಾರೆ. ಅವರು ಹೇಳುವುದೇನೆಂದರೆ, 10 “ಈ ಇಟ್ಟಿಗೆಗಳು ಕೆಳಗೆ ಬಿದ್ದರೂ ನಾವು ಅವುಗಳನ್ನು ಮತ್ತೆ ಕಟ್ಟುತ್ತೇವೆ. ನಾವು ಅದನ್ನು ಬಲವಾದ ಕಲ್ಲುಗಳಿಂದ ಕಟ್ಟುವೆವು. ಈ ಸಣ್ಣಸಣ್ಣ ಮರಗಳು ಕಡಿದುಹಾಕಲ್ಪಟ್ಟರೂ ಆ ಸ್ಥಳದಲ್ಲಿ ನಾವು ದೇವದಾರು ಮರಗಳನ್ನು ನೆಡುವೆವು. ಆ ದೇವದಾರು ಮರಗಳು ಎತ್ತರವಾಗಿಯೂ ಬಲವಾಗಿಯೂ ಇರುತ್ತವೆ.”
11 ಹೀಗೆ ಯೆಹೋವನು ಇಸ್ರೇಲಿಗೆ ವಿರುದ್ಧವಾಗಿ ಯುದ್ಧ ಮಾಡುವವರನ್ನು ಕಂಡುಹಿಡಿಯುವನು. ಯೆಹೋವನು ರೆಚೀನನ ವೈರಿಗಳನ್ನು ಅವರಿಗೆ ವಿರುದ್ಧವಾಗಿ ಎಬ್ಬಿಸುವನು. 12 ಯೆಹೋವನು ಪೂರ್ವದಿಂದ ಅರಾಮ್ಯರನ್ನೂ ಪಶ್ಚಿಮದಿಂದ ಫಿಲಿಷ್ಟಿಯರನ್ನೂ ಕರೆತರುವನು. ಆ ಶತ್ರುಗಳು ಇಸ್ರೇಲರನ್ನು ಅವರ ಸೈನ್ಯದೊಂದಿಗೆ ಸೋಲಿಸಿಬಿಡುವರು. ಆದರೆ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡಿರುವುದರಿಂದ ಅವರನ್ನು ಶಿಕ್ಷಿಸಲು ಇನ್ನೂ ಸಿದ್ಧನಾಗಿರುವನು.
13 ದೇವರು ಜನರನ್ನು ಶಿಕ್ಷಿಸಿದರೂ ಅವರು ಪಾಪ ಮಾಡುವದನ್ನು ನಿಲ್ಲಿಸುವದಿಲ್ಲ. ಅವರು ಆತನ ಬಳಿಗೆ ಹಿಂದಿರುಗಿಬರುವದಿಲ್ಲ. ಸರ್ವಶಕ್ತನಾದ ಯೆಹೋವನನ್ನು ಅವರು ಹಿಂಬಾಲಿಸುವುದಿಲ್ಲ. 14 ಆದ್ದರಿಂದ ಯೆಹೋವನು ಇಸ್ರೇಲರ ತಲೆಯನ್ನೂ ಬಾಲವನ್ನೂ ಕತ್ತರಿಸುವನು. ಒಂದೇ ದಿವಸದಲ್ಲಿ ಯೆಹೋವನು ಮರದ ಕಾಂಡವನ್ನೂ ಕೊಂಬೆಗಳನ್ನೂ ಕತ್ತರಿಸಿಬಿಡುವನು. 15 ತಲೆ ಅಂದರೆ ಹಿರಿಯರು ಮತ್ತು ಪ್ರಮುಖರು. ಬಾಲವೆಂದರೆ ಸುಳ್ಳುಪ್ರವಾದಿಗಳು.
16 ಜನರಿಗೆ ಮಾರ್ಗದರ್ಶನ ಮಾಡುವ ನಾಯಕರು ಜನರನ್ನು ತಪ್ಪುದಾರಿಯಲ್ಲಿ ನಡಿಸುತ್ತಿದ್ದಾರೆ. ಅವರನ್ನು ಹಿಂಬಾಲಿಸುವ ಜನರು ನಾಶವಾಗುವರು. 17 ಜನರೆಲ್ಲರೂ ದುಷ್ಟರಾಗಿದ್ದಾರೆ. ಆದ್ದರಿಂದ ಯೆಹೋವನು ಯುವಕರಲ್ಲಿ ಸಂತೋಷಿಸುವದಿಲ್ಲ. ಅವರ ವಿಧವೆಯರಿಗೆ ಮತ್ತು ಅನಾಥರಿಗೆ ದೇವರು ದಯೆ ತೋರಿಸುವುದಿಲ್ಲ; ಯಾಕೆಂದರೆ ಎಲ್ಲಾ ಜನರು ದುಷ್ಟರಾಗಿದ್ದಾರೆ. ಅವರು ದೇವರಿಗೆ ವಿರುದ್ಧವಾಗಿ ನಡೆಯುತ್ತಾರೆ. ಅವರು ಸುಳ್ಳಾಡುತ್ತಾರೆ.
ಆದ್ದರಿಂದ ದೇವರು ಅವರ ಮೇಲೆ ಕೋಪದಿಂದಲೇ ಇರುವನು; ಅವರನ್ನು ದಂಡಿಸುತ್ತಲೇ ಇರುವನು.
18 ದುಷ್ಟತನವು ಒಂದು ಚಿಕ್ಕ ಬೆಂಕಿಯಂತಿದೆ. ಮೊಟ್ಟ ಮೊದಲು ಬೆಂಕಿಯು ಹಣಜಿಗಳನ್ನು ಮತ್ತು ಮುಳ್ಳುಗಿಡಗಳನ್ನು ಸುಡುವುದು. ಅನಂತರ ಬೆಂಕಿಯು ಕಾಡಿನ ದೊಡ್ಡ ಪೊದೆಗಳನ್ನು ಸುಡುವುದು. ಕೊನೆಗದು ದೊಡ್ಡ ಗಾತ್ರದ ಬೆಂಕಿಯಾಗಿ ಎಲ್ಲವನ್ನೂ ಸುಟ್ಟುಬಿಟ್ಟು ಎಲ್ಲವೂ ಹೊಗೆಯಾಗಿ ಪರಿಣಮಿಸುವದು.
19 ಸರ್ವಶಕ್ತನಾದ ಯೆಹೋವನು ಕೋಪಗೊಂಡಿರುವುದರಿಂದ ದೇಶವೆಲ್ಲಾ ಸುಟ್ಟುಹೋಗುವದು. ಆ ಬೆಂಕಿಯಲ್ಲಿ ಜನರೆಲ್ಲಾ ಸುಟ್ಟುಹೋಗುವರು. ಯಾರೂ ತನ್ನ ಸಹೋದರರನ್ನು ರಕ್ಷಿಸಲು ಪ್ರಯತ್ನಿಸುವದಿಲ್ಲ. 20 ಜನರು ತಮ್ಮ ಬಲಗಡೆಯಲ್ಲಿರುವದನ್ನು ಕಿತ್ತುಕೊಳ್ಳುವರು. ಆದರೆ ಅದು ಅವರ ಹಸಿವೆಯನ್ನು ನೀಗುವುದಿಲ್ಲ. ಜನರು ಎಡಬದಿಯಲ್ಲಿರುವದನ್ನು ತಿನ್ನುವರು; ಆದರೆ ಅವರ ಹೊಟ್ಟೆತುಂಬುವದಿಲ್ಲ. ಆ ಬಳಿಕ ಪ್ರತಿಯೊಬ್ಬನು ತನ್ನ ಶರೀರವನ್ನೇ ತಿನ್ನಲು ಪ್ರಾರಂಭಿಸುವನು. 21 ಇದರರ್ಥವೇನೆಂದರೆ ಮನಸ್ಸೆಯು ಎಫ್ರಾಯೀಮನೊಡನೆ ಯುದ್ಧ ಮಾಡುವನು ಮತ್ತು ಎಫ್ರಾಯೀಮನು ಮನಸ್ಸೆಯೊಂದಿಗೆ ಯುದ್ಧಮಾಡುವನು. ಆಮೇಲೆ ಅವರಿಬ್ಬರೂ ಸೇರಿ ಯೆಹೂದದೊಂದಿಗೆ ಯುದ್ಧ ಮಾಡುವರು.
ಯೆಹೋವನು ಇಸ್ರೇಲರ ಮೇಲೆ ಇನ್ನೂ ಕೋಪದಿಂದಿದ್ದಾನೆ; ತನ್ನ ಜನರನ್ನು ಇನ್ನೂ ಶಿಕ್ಷಿಸಲು ಸಿದ್ಧನಾಗಿದ್ದಾನೆ.
10 ಕೆಟ್ಟ ನಿಯಮವನ್ನು ಬರೆಯುವ ನ್ಯಾಯಶಾಸ್ತ್ರಿಗಳನ್ನು ನೋಡಿರಿ. ಆ ನ್ಯಾಯಶಾಸ್ತ್ರಿಗಳು ಜನರಿಗೆ ಕಷ್ಟವಾಗಿರುವ ನಿಯಮಗಳನ್ನೇ ಮಾಡುತ್ತಾರೆ. 2 ಅವರು ಬಡವರಿಗೆ ನ್ಯಾಯವಂತರಾಗಿರುವುದಿಲ್ಲ. ಅವರು ಬಡಜನರ ಹಕ್ಕನ್ನು ತೆಗೆದುಬಿಡುವರು. ಜನರು ವಿಧವೆಯರಿಂದಲೂ ಅನಾಥರಿಂದಲೂ ಹಣ ಕಿತ್ತುಕೊಳ್ಳುವಂತೆ ಮಾಡುವರು.
3 ನ್ಯಾಯಶಾಸ್ತ್ರಿಗಳೇ, ನಿಮ್ಮ ಕಾರ್ಯಗಳಿಗೆ ನೀವೇ ಉತ್ತರ ಕೊಡಬೇಕು. ಆಗ ನೀವು ಏನು ಮಾಡುವಿರಿ? ದೂರದೇಶದಿಂದ ನಿಮ್ಮ ನಾಶನವು ಬರುತ್ತಲಿದೆ. ಸಹಾಯಕ್ಕಾಗಿ ಎಲ್ಲಿಗೆ ಓಡುವಿರಿ? ನಿಮ್ಮ ಐಶ್ವರ್ಯವೂ ನಿಮ್ಮ ಧನರಾಶಿಯೂ ನಿಮ್ಮನ್ನು ರಕ್ಷಿಸಲಾರವು. 4 ನೀವು ಕೈದಿಗಳಂತೆ ತಲೆತಗ್ಗಿಸುವಿರಿ, ಸತ್ತಹೆಣಗಳಂತೆ ನೆಲದ ಮೇಲೆ ಬೀಳುವಿರಿ. ಆದರೆ ಅದರಿಂದ ನಿಮಗೆ ಪ್ರಯೋಜನವಾಗದು. ದೇವರು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ. ನಿಮ್ಮನ್ನು ಇನ್ನೂ ಶಿಕ್ಷಿಸಲು ಸಿದ್ಧನಾಗಿದ್ದಾನೆ.
ಅಶ್ಶೂರದ ಶಕ್ತಿಯನ್ನು ದೇವರು ನಿಯಂತ್ರಿಸುತ್ತಾನೆ
5 ದೇವರು ಹೀಗೆ ಹೇಳುವನು: “ನಾನು ಕೋಪಗೊಂಡಾಗ ಬೆತ್ತವನ್ನು ಹೇಗೆ ಉಪಯೋಗಿಸುವೆನೋ ಹಾಗೆಯೇ ಇಸ್ರೇಲನ್ನು ಶಿಕ್ಷಿಸಲು ಅಶ್ಶೂರವನ್ನು ಉಪಯೋಗಿಸುವೆನು. 6 ದುಷ್ಕೃತ್ಯಗಳನ್ನು ಮಾಡುವವರ ವಿರುದ್ಧವಾಗಿ ಯುದ್ಧಮಾಡಲು ನಾನು ಅಶ್ಶೂರವನ್ನು ಕಳುಹಿಸುವೆನು. ನಾನು ಅವರ ಮೇಲೆ ಕೋಪಗೊಂಡಿರುವೆನು. ಅಶ್ಶೂರಕ್ಕೆ ಅವರ ಮೇಲೆ ಯುದ್ಧ ಮಾಡುವಂತೆ ಆಜ್ಞಾಪಿಸುವೆನು. ಅಶ್ಶೂರವು ಅವರನ್ನು ಸೋಲಿಸಿ ಅವರ ಐಶ್ವರ್ಯವನ್ನೆಲ್ಲಾ ಸೂರೆಮಾಡುವದು. ಇಸ್ರೇಲು ಅಶ್ಶೂರದವರಿಗೆ ಬೀದಿಯ ಧೂಳಿನಂತಾಗುವದು.
7 “ಆದರೆ ನಾನು ಅಶ್ಶೂರವನ್ನು ಉಪಯೋಗಿಸುತ್ತೇನೆಂದು ಅದಕ್ಕೆ ತಿಳಿಯದು. ಅಶ್ಶೂರಕ್ಕೆ ತಾನು ನನ್ನ ಕೈಯಲ್ಲಿರುವ ಒಂದು ಸಾಧನವೆಂದು ಗೊತ್ತಿರದು. ಅನೇಕಾನೇಕ ಜನಾಂಗಗಳನ್ನು ನಾಶಮಾಡಲು ಅಶ್ಶೂರವು ಬಯಸುತ್ತದೆ ಮತ್ತು ಅದಕ್ಕಾಗಿ ಯೋಜನೆಗಳನ್ನು ಮಾಡುತ್ತದೆ. 8 ಅಶ್ಶೂರವು ಹೀಗೆ ಹೇಳುತ್ತದೆ: ‘ನನ್ನ ನಾಯಕರೆಲ್ಲಾ ರಾಜರಂತಿರುತ್ತಾರೆ. 9 ಕಲ್ನೋ ನಗರವು ಕರ್ಕೆಮೀಷ್ ಹಾಗೆ ಇರುವದು. ಹಮಾತ್ ನಗರವು ಅರ್ಪದ್ ನಗರದಂತಿರುವದು. ಸಮಾರ್ಯಪಟ್ಟಣವು ದಮಸ್ಕದಂತಿರುವದು. 10 ನಾನು ಆ ದುಷ್ಟರಾಜ್ಯಗಳನ್ನು ಸೋಲಿಸಿಬಿಟ್ಟೆನು, ಈಗ ನಾನು ಅವುಗಳನ್ನು ಆಳುತ್ತಿದ್ದೇನೆ. ಆ ಜನರು ಪೂಜಿಸುವ ವಿಗ್ರಹಗಳು ಜೆರುಸಲೇಮ್ ಮತ್ತು ಸಮಾರ್ಯಗಳಲ್ಲಿರುವ ವಿಗ್ರಹಗಳಿಗಿಂತ ವಿಶೇಷವಾಗಿವೆ. 11 ನಾನು ಸಮಾರ್ಯವನ್ನೂ ಅದರ ವಿಗ್ರಹಗಳನ್ನೂ ನಾಶಮಾಡಿದೆ. ಈಗ ಜೆರುಸಲೇಮನ್ನೂ ಅದರ ಜನರು ಮಾಡಿರುವ ವಿಗ್ರಹಗಳನ್ನೂ ನಾನು ನಾಶಮಾಡುವೆನು.’”
12 ಜೆರುಸಲೇಮಿಗೂ ಚೀಯೋನ್ ಪರ್ವತಕ್ಕೂ ಮಾಡಬೇಕೆಂದಿರುವ ಕಾರ್ಯಗಳನ್ನು ನನ್ನ ಒಡೆಯನು ಮಾಡಿ ತೀರಿಸುವನು. ಆ ಬಳಿಕ ಯೆಹೋವನು ಅಶ್ಶೂರವನ್ನು ಶಿಕ್ಷಿಸುವನು. ಅಶ್ಶೂರದ ಅರಸನು ಬಹಳವಾಗಿ ಉಬ್ಬಿಕೊಂಡಿರುತ್ತಾನೆ. ಅವನ ಗರ್ವವು ಅನೇಕ ದುಷ್ಕೃತ್ಯಗಳನ್ನು ನಡೆಸಿದೆ. ಅದಕ್ಕಾಗಿ ದೇವರು ಅವನನ್ನು ಶಿಕ್ಷಿಸುವನು.
13 ಅಶ್ಶೂರದ ಅರಸನು ಹೇಳುವುದೇನೆಂದರೆ, “ನಾನು ಜ್ಞಾನಿಯಾಗಿದ್ದೇನೆ, ನನ್ನ ಸ್ವಂತ ಜ್ಞಾನದಿಂದಲೂ ಸಾಮರ್ಥ್ಯದಿಂದಲೂ ನಾನು ಅನೇಕ ಮಹಾಕಾರ್ಯಗಳನ್ನು ನಡಿಸಿದ್ದೇನೆ. ಅನೇಕ ಜನಾಂಗಗಳನ್ನು ಸೋಲಿಸಿದ್ದೇನೆ; ಅವರ ಐಶ್ವರ್ಯಗಳನ್ನು ಸೂರೆಮಾಡಿದ್ದೇನೆ. ಅವರ ಜನರನ್ನು ನನ್ನ ಗುಲಾಮರನ್ನಾಗಿ ಮಾಡಿದ್ದೇನೆ. ನಾನು ಮಹಾ ವೀರನಾಗಿರುವೆ. 14 ಒಬ್ಬನು ಹಕ್ಕಿಯ ಗೂಡಿನಿಂದ ಮೊಟ್ಟೆಗಳನ್ನು ತೆಗೆಯುವಂತೆ ನಾನು ಅವರ ಐಶ್ವರ್ಯವನ್ನು ತೆಗೆದುಕೊಂಡಿರುವೆನು. ಹಕ್ಕಿಯು ತನ್ನ ಗೂಡಿಗೆ ಯಾವ ಭದ್ರತೆಯನ್ನೂ ಮಾಡದೆ ಆಹಾರಕ್ಕಾಗಿ ಹೋಗುವದು, ರೆಕ್ಕೆಯಾಡಿಸಿ, ಬಾಯಿದೆರೆದು, ಕಿಚುಗುಟ್ಟಿ ಮೊಟ್ಟೆಯನ್ನು ಶತ್ರುವಿನಿಂದ ರಕ್ಷಿಸಲು ಅದು ಗೂಡಿನಲ್ಲಿರದು, ಆದ್ದರಿಂದ ಅದರ ಮೊಟ್ಟೆಗಳು ತೆಗೆಯಲ್ಪಡುವವು. ಅದೇ ರೀತಿಯಲ್ಲಿ ನಾನು ಭೂಮಿಯ ಮೇಲಿನ ಜನರನ್ನು ಕೈದಿಗಳನ್ನಾಗಿ ಮಾಡುವಾಗ ನನ್ನನ್ನು ತಡೆಯುವವರು ಇಲ್ಲವೇ ಇಲ್ಲ.”
15 ಕೊಡಲಿಯು ಅದನ್ನು ಉಪಯೋಗಿಸುವವನಿಗಿಂತ ಉತ್ತಮವಲ್ಲ. ಗರಗಸವು ಅದನ್ನು ಉಪಯೋಗಿಸುವವನಿಗಿಂತ ಉತ್ತಮವಲ್ಲ. ಆದರೆ ಅಶ್ಶೂರವು ತಾನು ದೇವರಿಗಿಂತಲೂ ಶಕ್ತಿಶಾಲಿ, ಸಾಮರ್ಥ್ಯವುಳ್ಳವನು ಎಂದು ನೆನಸುತ್ತಾನೆ. ಬೆತ್ತವು, ತನ್ನನ್ನು ಎತ್ತಿಹಿಡಿದು ಬೇರೆಯವರನ್ನು ಶಿಕ್ಷಿಸುವವನಿಗಿಂತ ತಾನು ಬಲಿಷ್ಠನೂ ಪ್ರಮುಖನೂ ಎಂದು ಹೇಳುವಂತಿದೆ ಇದು. 16 ತಾನು ಮಹಾದೊಡ್ಡ ಜನವೆಂದು ಅಶ್ಶೂರವು ನೆನಸುತ್ತದೆ. ಆದರೆ ಸರ್ವಶಕ್ತನಾದ ಯೆಹೋವನು ಅಶ್ಶೂರದ ಮೇಲೆ ಭಯಂಕರವಾದ ವ್ಯಾಧಿಯನ್ನು ಬರಮಾಡುತ್ತಾನೆ. ಒಬ್ಬ ರೋಗಿ ತನ್ನ ಅಸ್ವಸ್ಥತೆಯಿಂದ ಹೇಗೆ ಕೃಶವಾಗುತ್ತಾನೋ ಹಾಗೆಯೇ ತನ್ನ ಶಕ್ತಿಯನ್ನೂ ಐಶ್ವರ್ಯವನ್ನೂ ಅಶ್ಶೂರವು ಕಳೆದುಕೊಂಡು ಬಲಹೀನನಾಗುವನು. ಅಶ್ಶೂರದ ಮಹಿಮಾಪ್ರಭಾವಗಳು ಇಲ್ಲದೆ ಹೋಗುವವು. ಬೆಂಕಿಯು ಸರ್ವವನ್ನು ಸುಟ್ಟು ನಾಶಮಾಡುವಂತೆ ಇರುವದು. 17 ಇಸ್ರೇಲಿನ ಬೆಳಕು ಬೆಂಕಿಯಂತಿದೆ. ಪರಿಶುದ್ಧನಾಗಿರುವಾತನು ಬೆಂಕಿಯ ಜ್ವಾಲೆಯಂತಿದ್ದಾನೆ. ಮೊದಲು ಹಣಜಿ ಕಸಕಡ್ಡಿಗಳನ್ನು ಸುಡುವ ಬೆಂಕಿಯಂತೆ ಆತನಿರುವನು. 18 ಆಮೇಲೆ ಆ ಬೆಂಕಿಯು ದೊಡ್ಡದೊಡ್ಡ ಮರಗಳನ್ನು ಮತ್ತು ದ್ರಾಕ್ಷಿತೋಟಗಳನ್ನು ಸುಟ್ಟುಹಾಕುವದು. ಕೊನೆಗೆ ಜನರನ್ನು ಮೊದಲುಗೊಂಡು ಪ್ರತಿಯೊಂದೂ ನಾಶವಾಗುವುದು. ದೇವರು ಅಶ್ಶೂರವನ್ನು ನಾಶಮಾಡುವಾಗ ಹಾಗೆಯೇ ಆಗುವದು. ಅಶ್ಶೂರವು ಗೆದ್ದಲುಹುಳ ತಿಂದ ಮರದ ದಿಮ್ಮಿಯಂತಿರುವದು. 19 ಆಗ ಅಡವಿಯಲ್ಲಿ, ಒಂದು ಮಗು ಎಣಿಸಲು ಸಾಧ್ಯವಾಗುವಷ್ಟು ಮರಗಳಿರುವವು.
20 ಆಗ ಯಾಕೋಬನ ಮನೆತನದವರು, ಇಸ್ರೇಲರಲ್ಲಿ ಅಳಿದುಳಿದವರು, ತಮ್ಮನ್ನು ಹೊಡೆಯುವವರನ್ನು ಆಧಾರಮಾಡಿಕೊಳ್ಳದೆ ಇಸ್ರೇಲಿನ ಅತೀ ಪರಿಶುದ್ಧನಾದ ಯೆಹೋವನನ್ನೇ ಆಧಾರಮಾಡಿಕೊಳ್ಳುವರು. 21 ಯಾಕೋಬನ ಮನೆತನದಲ್ಲಿ ಅಳಿದುಳಿದವರು ಪರಾಕ್ರಮಿಯಾದ ದೇವರನ್ನು ಮತ್ತೆ ಅನುಸರಿಸತೊಡಗುವರು.
22 ನಿನ್ನ ಜನರು ಸಮುದ್ರದ ಮರಳಿನಂತೆ ಬಹಳವಿರುವರು. ಆದರೆ ಅವರಲ್ಲಿ ಕೆಲವರೇ ಉಳಿದು ಕರ್ತನ ಬಳಿಗೆ ಬರುವರು. ಆ ಜನರು ದೇವರ ಬಳಿಗೆ ಹಿಂತಿರುಗುವರು. ಅದಕ್ಕಿಂತ ಮೊದಲು ನಿನ್ನ ದೇಶವು ನಾಶವಾಗುವದು. ದೇಶವು ನಾಶವಾಗುವದೆಂದು ದೇವರು ಪ್ರಕಟಿಸಿದ್ದಾನೆ. ಆ ಬಳಿಕ ದೇವರ ಒಳ್ಳೆತನವು ಆ ದೇಶಕ್ಕೆ ಬರುವದು. ಅದು ದಡತುಂಬಿ ಹರಿಯುವ ನದಿಯೋಪಾದಿಯಲ್ಲಿರುವದು. 23 ಸರ್ವಶಕ್ತನೂ ಒಡೆಯನೂ ಆದ ಯೆಹೋವನು ಖಂಡಿತವಾಗಿಯೂ ಈ ದೇಶವನ್ನು ನಾಶಮಾಡುತ್ತಾನೆ.
24 ನನ್ನ ಒಡೆಯನೂ ಸರ್ವಶಕ್ತನೂ ಆದ ಯೆಹೋವನು ಹೇಳುವುದೇನೆಂದರೆ: “ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಅಶ್ಶೂರಕ್ಕೆ ನೀವು ಭಯಪಡಬೇಡಿ. ಹಿಂದಿನ ಕಾಲದಲ್ಲಿ ಈಜಿಪ್ಟ್ ನಿಮ್ಮನ್ನು ಬಾಧಿಸಿದಂತೆ ಇವನೂ ನಿಮ್ಮನ್ನು ಬಾಧಿಸುವನು. ಅವನ ಬಾಧೆಯು ನಿಮ್ಮ ಬೆನ್ನಿನ ಮೇಲೆ ಬೆತ್ತದಿಂದ ಹೊಡೆದಂತೆ ಇರುವದು. 25 ಆದರೆ ಸ್ವಲ್ಪ ಸಮಯದ ನಂತರ ನನ್ನ ಸಿಟ್ಟು ತಣ್ಣಗಾಗುವದು. ಅಶ್ಶೂರವು ಸಾಕಷ್ಟು ನಿಮ್ಮನ್ನು ಶಿಕ್ಷಿಸಿದನೆಂದು ನಾನು ತೃಪ್ತಿಗೊಳ್ಳುವೆನು.”
26 ಆ ಬಳಿಕ ಸರ್ವಶಕ್ತನಾದ ಯೆಹೋವನು ಕೊರಡೆಯಿಂದ ಅಶ್ಶೂರವನ್ನು ಹೊಡೆಯುವನು. ಹಿಂದಿನ ಕಾಲದಲ್ಲಿ ಓರೇಬ್ ಬಂಡೆಯ ಮೇಲೆ ಮಿದ್ಯಾನ್ಯರನ್ನು ಯೆಹೋವನು ಹೇಗೆ ಸೋಲಿಸಿದನೋ ಹಾಗೆಯೇ ಅಶ್ಶೂರವನ್ನು ಸೋಲಿಸುವನು. ಹಿಂದಿನ ಕಾಲದಲ್ಲಿ ಯೆಹೋವನು ಈಜಿಪ್ಟನ್ನು ಶಿಕ್ಷಿಸಿದನು. ಆತನು ಕೋಲನ್ನೆತ್ತಿ ಸಮುದ್ರ ಮಾರ್ಗವಾಗಿ ತನ್ನ ಜನರನ್ನು ಈಜಿಪ್ಟಿನಿಂದ ಹೊರನಡಿಸಿದನು. ಅದೇ ರೀತಿಯಲ್ಲಿ ಅಶ್ಶೂರದಿಂದ ಯೆಹೋವನು ತನ್ನ ಜನರನ್ನು ರಕ್ಷಿಸಿ ಬಿಡಿಸುವನು.
27 ಅಶ್ಶೂರವು ನಿಮಗೆ ಸಂಕಟವನ್ನು ಉಂಟುಮಾಡುವದು. ಅದು ನಿಮಗೆ ನಿತ್ಯವೂ ಹೊರುವ ಭಾರವಾಗಿ ಪರಿಣಮಿಸುವದು. ನಿಮ್ಮ ಹೆಗಲಿನ ಮೇಲೆ ನೊಗವನ್ನು ಹಾಕುವದು. ಆದರೆ ಅದು ತೆಗೆದುಹಾಕಲ್ಪಡುವದು. ಅದು ನಿನ್ನ ದೇವರ ಶಕ್ತಿಯಿಂದ ಮುರಿಯಲ್ಪಡುವದು.
ಅಶ್ಶೂರದ ಸೈನ್ಯವು ಇಸ್ರೇಲನ್ನು ಮುತ್ತಿತು
28 ಸೈನಿಕರು ಅಯ್ಯಾಥಿನ ಮೇಲೆ ಬಂದಿದ್ದಾರೆ; ಮಿಗ್ರೋನನ್ನು ಹಾದುಹೋಗಿದ್ದಾರೆ. ಮಿಕ್ಮಾಷಿನಲ್ಲಿ ತಮ್ಮ ಉಪಕರಣಗಳನ್ನಿಟ್ಟಿರುತ್ತಾರೆ. 29 ಸೈನಿಕರು ಮಾಬರ ಎಂಬ ಸ್ಥಳದಲ್ಲಿ ಕಣಿವೆಯನ್ನು ದಾಟುತ್ತಾರೆ. ಗೆಬ ಎಂಬಲ್ಲಿ ಮಲಗುವರು. ಆಗ ರಾಮಾವು ಭಯಪಡುವದು. ಸೌಲನ ಗಿಬೆಯದ ಜನರು ಪಲಾಯನ ಮಾಡುವರು.
30 ಬಾತ್‌ಗಲ್ಲೀಮ್‌ನವರೇ, ಚೀರಾಡಿರಿ! ಲಯೆಷವೇ, ಕಿವಿಗೊಡು. ಅನಾತೋತೇ, ನನಗೆ ಉತ್ತರಕೊಡು! 31 ಮದ್ಮೇನಾದ ಜನರು ಓಡಿಹೋಗುತ್ತಿದ್ದಾರೆ. ಗೇಬೀಮಿನ ಜನರು ಅವಿತುಕೊಂಡಿದ್ದಾರೆ. 32 ಈ ದಿವಸ ನೋಬಿನಲ್ಲಿ ಸೈನ್ಯವು ತಂಗುವದು. ಜೆರುಸಲೇಮಿನ ಪರ್ವತವಾಗಿರುವ ಚೀಯೋನ್ ಪರ್ವತಕ್ಕೆ ವಿರುದ್ಧವಾಗಿ ಯುದ್ಧಮಾಡಲು ಸೈನ್ಯವು ಸಿದ್ಧವಾಗುವುದು.
33 ನಮ್ಮ ಸರ್ವಶಕ್ತನೂ ಒಡೆಯನೂ ಆಗಿರುವ ಯೆಹೋವನು ಆ ದೊಡ್ಡ ಮರವನ್ನು (ಅಶ್ಶೂರವನ್ನು) ಕಡಿದುಹಾಕುವದನ್ನು ನೋಡು! ತನ್ನ ಮಹಾಶಕ್ತಿಯಿಂದ ಆತನು ಮಹಾವೀರರೂ ದೊಡ್ಡಜನರೂ ಎನ್ನದೆ ಎಲ್ಲರನ್ನೂ ಕಡಿದುಹಾಕುವನು. ಇನ್ನುಮೇಲೆ ಅವರು ಮಹಾಜನರೆಂದು ಕರೆಯಲ್ಪಡರು. 34 ಯೆಹೋವನು ತನ್ನ ಕೊಡಲಿಯಿಂದ ಅಡವಿಯನ್ನು ಕಡಿದುಹಾಕುವನು. ಲೆಬನೋನಿನ ಉನ್ನತ ಮರಗಳು (ಪ್ರಮುಖರು) ಉರುಳಿಬೀಳುವವು.
ಅನ್ಯಜನರಿಗಾಗಿ ಪೌಲನ ಸೇವೆ
3 ನಾನು ಕ್ರಿಸ್ತಯೇಸುವಿನ ಸೆರೆಯಾಳು. ಯೆಹೂದ್ಯರಲ್ಲದ ನಿಮಗೋಸ್ಕರ ನಾನು ಸೆರೆಯಾಳಾಗಿದ್ದೇನೆ. 2 ದೇವರು ತನ್ನ ಕೃಪೆಯ ಮೂಲಕ ನನಗೆ ಈ ಕೆಲಸವನ್ನು ಕೊಟ್ಟನೆಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮಗೆ ಸಹಾಯ ಮಾಡುವುದಕ್ಕಾಗಿ ದೇವರು ಈ ಕೆಲಸವನ್ನು ನನಗೆ ಕೊಟ್ಟನು. 3 ದೇವರು ತನ್ನ ರಹಸ್ಯವಾದ ಯೋಜನೆಯನ್ನು ನನಗೆ ತಿಳಿಸಿದನು ಮತ್ತು ತೋರಿಸಿದನು. ಇದರ ಬಗ್ಗೆ ನಾನು ಆಗಲೇ ನಿಮಗೆ ಸ್ವಲ್ಪ ಬರೆದಿದ್ದೇನೆ. 4 ನಾನು ಬರೆದಿರುವ ಈ ಸಂಗತಿಗಳನ್ನು ನೀವು ಓದಿದರೆ ಕ್ರಿಸ್ತನ ರಹಸ್ಯವಾದ ಸತ್ಯವನ್ನು ನಾನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇನೆ ಎಂಬುದು ನಿಮಗೇ ತಿಳಿಯುತ್ತದೆ. 5 ಹಿಂದಿನ ಕಾಲಗಳಲ್ಲಿದ್ದ ಜನರಿಗೆ ಆ ರಹಸ್ಯಸತ್ಯವನ್ನು ಆತನು ತಿಳಿಸಲಿಲ್ಲ. ಈಗಲಾದರೊ ದೇವರು ತನ್ನ ಆತ್ಮನ ಮೂಲಕವಾಗಿ ಆ ರಹಸ್ಯಸತ್ಯವನ್ನು ತನ್ನ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ತೋರಿಸಿದ್ದಾನೆ. 6 ಇದು ಆ ರಹಸ್ಯಸತ್ಯ: ಯೆಹೂದ್ಯರಲ್ಲದವರು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ ಇರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹಕ್ಕೆ ಸೇರಿದವರೂ ಅಬ್ರಹಾಮನಿಗುಂಟಾದ ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆ.
7 ದೇವರು ನೀಡಿದ ವಿಶೇಷವಾದ ಕೃಪಾವರದಿಂದ ನಾನು ಸುವಾರ್ತೆಯನ್ನು ತಿಳಿಸಲು ಸೇವಕನಾದೆನು. ದೇವರು ತನ್ನ ಶಕ್ತಿಯನ್ನು ಪ್ರಯೋಗಿಸಿ ನನಗೆ ಆ ಕೃಪಾವರವನ್ನು ಕೊಟ್ಟನು. 8 ದೇವಜನರಲ್ಲಿ ನಾನೇ ಅತ್ಯಲ್ಪನು. ಕ್ರಿಸ್ತನ ಐಶ್ವರ್ಯವನ್ನು ಕುರಿತಾದ ಸುವಾರ್ತೆಯನ್ನು ನಾನು ಯೆಹೂದ್ಯರಲ್ಲದವರಿಗೆ ತಿಳಿಸಬೇಕೆಂದು ದೇವರು ನನಗೆ ಈ ಕೃಪಾವರವನ್ನು ಕೊಟ್ಟನು. ಆ ಐಶ್ವರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. 9 ರಹಸ್ಯವಾಗಿದ್ದ ತನ್ನ ಯೋಜನೆಯನ್ನು ಜನರೆಲ್ಲರಿಗೆ ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. ಆದಿಯಿಂದಲೂ ಅದು ದೇವರಲ್ಲಿ ಮರೆಯಾಗಿತ್ತು. ಪ್ರತಿಯೊಂದನ್ನೂ ಸೃಷ್ಟಿಸಿದಾತನು ದೇವರೇ. 10 ತನ್ನ ನಾನಾ ವಿಧವಾದ ಜ್ಞಾನವು ಆಕಾಶಮಂಡಲದಲ್ಲಿರುವ ಎಲ್ಲಾ ಅಧಿಪತಿಗಳಿಗೂ ಅಧಿಕಾರಿಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂಬುದೇ ದೇವರ ಉದ್ದೇಶವಾಗಿತ್ತು. 11 ಅನಾದಿಕಾಲದಿಂದಲೂ ಇದೇ ದೇವರ ಯೋಜನೆಯಾಗಿತ್ತು. ದೇವರು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ತನ್ನ ಯೋಜನೆಗನುಸಾರವಾಗಿ ಮಾಡಿದನು. 12 ನಾವು ಕ್ರಿಸ್ತನಲ್ಲಿರುವ ನಂಬಿಕೆಯ ಮೂಲಕ ದೇವರ ಬಳಿಗೆ ಸ್ವತಂತ್ರದಿಂದ ಮತ್ತು ನಿರ್ಭಯದಿಂದ ಹೋಗಲು ಸಾಧ್ಯವಾಯಿತು. 13 ಹೀಗಿರಲಾಗಿ ನಾನು ನಿಮಗೋಸ್ಕರ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ನಿರಾಶರಾಗಿ ಧೈರ್ಯಗೆಡಬೇಡಿ. ನನ್ನ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.
ಕ್ರಿಸ್ತನ ಪ್ರೀತಿ
14 ಆದ್ದರಿಂದ ತಂದೆಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತೇನೆ. 15 ಭೂಪರಲೋಕಗಳಲ್ಲಿರುವ ಪ್ರತಿಯೊಂದು ಕುಟುಂಬವು ಆತನಿಂದ ತನ್ನ ನಿಜ ಹೆಸರನ್ನು ಪಡೆದುಕೊಳ್ಳುತ್ತದೆ. 16 ನೀವು ನಿಮ್ಮ ಆತ್ಮಗಳಲ್ಲಿ ಬಲವಾಗಿರಲು ಅಗತ್ಯವಾದ ಶಕ್ತಿಯನ್ನು ತನ್ನ ಮಹಿಮಾತಿಶಯದ ಪ್ರಕಾರ ಕೊಡಬೇಕೆಂದು ತಂದೆಯನ್ನು ಕೇಳಿಕೊಳ್ಳುತ್ತೇನೆ. ಆತನು ತನ್ನ ಆತ್ಮನ ಮೂಲಕವಾಗಿ ನಿಮಗೆ ಆ ಶಕ್ತಿಯನ್ನು ಕೊಡುತ್ತಾನೆ. 17 ನಿಮ್ಮ ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಬೇಕೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಜೀವಿತವು ಪ್ರೀತಿಯಲ್ಲಿ ಬಲವಾಗಿ ಬೇರೂರಿರಬೇಕೆಂದು ಮತ್ತು ಪ್ರೀತಿಯ ಮೇಲೆ ಕಟ್ಟಲ್ಪಟ್ಟಿರಬೇಕೆಂದು ಪ್ರಾರ್ಥಿಸುತ್ತೇನೆ. 18 ನೀವು ಮತ್ತು ದೇವರ ಪರಿಶುದ್ಧ ಜನರೆಲ್ಲರೂ ಕ್ರಿಸ್ತನ ಪ್ರೀತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಶಕ್ತಿಯನ್ನು ಹೊಂದಿದವರಾಗಿರಬೇಕೆಂದು ಪ್ರಾರ್ಥಿಸುತ್ತೇನೆ. ಕ್ರಿಸ್ತನ ಪ್ರೀತಿಯ ಉದ್ದಗಲಗಳನ್ನು ಮತ್ತು ಆಳ ಎತ್ತರಗಳನ್ನು ನೀವು ಅರ್ಥಮಾಡಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. 19 ಕ್ರಿಸ್ತನ ಪ್ರೀತಿಯನ್ನು ಮನುಷ್ಯನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಪ್ರೀತಿಯನ್ನು ನೀವು ತಿಳಿದುಕೊಳ್ಳಶಕ್ತರಾಗಲೆಂದು ಪ್ರಾರ್ಥಿಸುತ್ತೇನೆ. ಆಗ ನೀವು ದೇವರ ಸಂಪೂರ್ಣತೆಯಿಂದ ತುಂಬಿದವರಾಗಲು ಸಾಧ್ಯವಾಗುತ್ತದೆ.
20 ನಮ್ಮಲ್ಲಿ ಕಾರ್ಯಮಾಡುತ್ತಿರುವ ತನ್ನ ಶಕ್ತಿಯಿಂದ ನಾವು ಕೇಳುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಎಷ್ಟೋ ಹೆಚ್ಚೆಚ್ಚಾಗಿ ದೇವರು ಮಾಡಬಲ್ಲನು. 21 ಆತನಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರವಾಗಲಿ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International