Old/New Testament
27 ಭವಿಷ್ಯತ್ತಿನ ಕುರಿತು ಜಂಬಪಡಬೇಡ. ನಾಳೆ ಏನಾಗುವುದೋ ನಿನಗೆ ತಿಳಿಯದು.
2 ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ; ಬೇಕಿದ್ದರೆ ಬೇರೆಯವರೇ ನಿನ್ನನ್ನು ಹೊಗಳಲಿ.
3 ಕಲ್ಲು ಭಾರ, ಮರಳು ಭಾರ, ಮೂಢನಿಂದಾಗುವ ಕೇಡು ಇವೆರಡಕ್ಕಿಂತಲೂ ಬಹು ಭಾರ.
4 ಕೋಪವು ಕ್ರೂರ; ಅದು ಪ್ರವಾಹದಂತೆ ನಾಶಕರ. ಹೊಟ್ಟೆಕಿಚ್ಚು ಅದಕ್ಕಿಂತಲೂ ನಾಶಕರ.
5 ಬಹಿರಂಗವಾದ ಟೀಕೆ ಗುಟ್ಟಾದ ಪ್ರೀತಿಗಿಂತಲೂ ಉತ್ತಮ.
6 ಸ್ನೇಹಿತನಿಂದಾಗುವ ಗಾಯಗಳು ಸಹಾಯಕರ. ಶತ್ರುವಿನ ಮುತ್ತುಗಳಾದರೋ ಮೋಸಕರ.
7 ಹೊಟ್ಟೆ ತುಂಬಿದವನು ಜೇನುತುಪ್ಪವನ್ನೂ ತಿರಸ್ಕರಿಸುವನು; ಹಸಿವೆಗೊಂಡಿರುವವನಿಗೋ ಕಹಿಯೂ ಸಿಹಿ.
8 ಮನೆಯಿಂದ ದೂರವಿರುವ ಗಂಡಸು ಗೂಡಿನಿಂದ ದೂರವಿರುವ ಪಕ್ಷಿಯಂತಿರುವನು.
9 ಪರಿಮಳತೈಲ ಮತ್ತು ಧೂಪ ನಿನ್ನನ್ನು ಸಂತೋಷಗೊಳಿಸುತ್ತವೆ; ಆದರೆ ಸ್ನೇಹಿತನ ಮಧುರವಾದ ಉಪದೇಶದಿಂದ ಸ್ವಂತ ನಿರ್ಧಾರಕ್ಕಿಂತಲೂ ಹೆಚ್ಚು ಆನಂದವಾಗುವುದು.
10 ನಿನ್ನ ಸ್ನೇಹಿತರನ್ನೂ ನಿನ್ನ ತಂದೆಯ ಸ್ನೇಹಿತರನ್ನೂ ಮರೆಯಬೇಡ. ಕಷ್ಟಬಂದಾಗ ಸಹಾಯ ಕೇಳಲು ಬಹುದೂರವಿರುವ ನಿನ್ನ ಸಹೋದರನ ಮನೆಗೆ ಹೋಗುವುದಕ್ಕಿಂತ ನಿನ್ನ ಸಮೀಪದಲ್ಲಿರುವ ನೆರೆಯವನನ್ನು ಕೇಳುವುದೇ ಉತ್ತಮ.
11 ನನ್ನ ಮಗನೇ, ನೀನು ಜ್ಞಾನಿಯಾಗಿದ್ದರೆ ನನಗೆ ಸಂತೋಷ ಆಗ, ನನ್ನನ್ನು ಟೀಕಿಸುವವನಿಗೆ ಉತ್ತರ ಕೊಡಲು ನಾನು ಶಕ್ತನಾಗುವೆ.
12 ಜ್ಞಾನಿಯು ಕೇಡನ್ನು ಕಂಡು ಆ ದಾರಿಯನ್ನೇ ಬಿಟ್ಟುಹೋಗುವನು. ಮೂಢನಾದರೋ ಕೇಡಿಗೆ ನೇರವಾಗಿ ನಡೆದು ಕಷ್ಟಕ್ಕೆ ಗುರಿಯಾಗುವನು.
13 ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾದರೆ, ನಿನ್ನ ಅಂಗಿಯನ್ನೂ ಕಳೆದುಕೊಳ್ಳುವೆ.
14 ಹೊತ್ತಾರೆಯಲ್ಲಿ ನಿನ್ನ ನೆರೆಯವನಿಗೆ, “ನಮಸ್ಕಾರ!” ಎಂದು ಕೂಗಿ ಎಬ್ಬಿಸಬೇಡ. ಅವನಿಗೆ ಅದು ಆಶೀರ್ವಾದದಂತೆ ಕಾಣದೆ ಶಾಪದಂತೆಯೇ ಕಾಣುವುದು.
15 ವಾದವನ್ನೇ ಇಚ್ಛಿಸುವ ಹೆಂಡತಿ ಮಳೆ ದಿನದಲ್ಲಿ ಸೋರುತ್ತಲೇ ಇರುವ ಮೇಲ್ಛಾವಣಿಯಂತಿರುವಳು. 16 ಆಕೆಯ ಬಾಯನ್ನು ಮುಚ್ಚಿಸಲು ಮಾಡುವ ಪ್ರಯತ್ನ ಗಾಳಿಯನ್ನು ನಿಲ್ಲಿಸಲು ಪ್ರಯತ್ನಿಸಿದಂತೆಯೂ ಅಂಗೈಯಲಿ ಎಣ್ಣೆಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಂತೆಯೂ ಇದೆ.
17 ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸುವುದು; ಅಂತೆಯೇ ಸ್ನೇಹಿತನು ಸ್ನೇಹಿತನನ್ನು ಉತ್ತಮಪಡಿಸುವನು.
18 ಅಂಜೂರದ ಮರಗಳನ್ನು ನೋಡಿಕೊಳ್ಳುವವನು ಅವುಗಳ ಹಣ್ಣನ್ನು ತಿನ್ನುವನು; ಯಜಮಾನನನ್ನು ನೋಡಿಕೊಳ್ಳುವವನು ಪ್ರತಿಫಲವನ್ನು ಹೊಂದುವನು.
19 ನೀರನ್ನು ನೋಡುವವನಿಗೆ ಅವನ ಮುಖವು ಕಾಣುವುದು. ಅಂತೆಯೇ ಹೃದಯವು ವ್ಯಕ್ತಿಯ ನಿಜರೂಪವನ್ನು ತೋರುವುದು.
20 ಮರಣಕ್ಕಾಗಲಿ ಸಮಾಧಿಗಾಗಲಿ ತೃಪ್ತಿಯೇ ಇಲ್ಲ. ಅಂತೆಯೇ ಮನುಷ್ಯನ ಬಯಕೆಗಳಿಗೂ ಕೊನೆಯಿಲ್ಲ.
21 ಚಿನ್ನವಾಗಲಿ ಬೆಳ್ಳಿಯಾಗಲಿ ಬೆಂಕಿಯಿಂದ ಶುದ್ಧೀಕರಿಸಲ್ಪಡುವಂತೆಯೇ ಮನುಷ್ಯನು ಜನರಿಂದ ಬರುವ ಹೊಗಳಿಕೆಯಿಂದ ಪರೀಕ್ಷಿತನಾಗುವನು.
22 ನೀನು ಮೂಢನನ್ನು ಅರೆದು ಪುಡಿಪುಡಿ ಮಾಡಿದರೂ ಅವನ ಮೂಢತನವನ್ನು ತೊಲಗಿಸಲಾರೆ.
23 ನಿನ್ನ ಕುರಿಗಳನ್ನೂ ಪಶುಗಳನ್ನೂ ಎಚ್ಚರಿಕೆಯಿಂದ ಕಾಯ್ದುಕೊಂಡಿರು; ನಿನ್ನಿಂದಾದಷ್ಟು ಮಟ್ಟಿಗೆ ಅವುಗಳ ಮೇಲೆ ಗಮನವಿಟ್ಟು ನೋಡಿಕೊ. 24 ಐಶ್ವರ್ಯ ಸದಾಕಾಲ ಇರುವಂಥದ್ದಲ್ಲ. ಅಂತೆಯೇ ಸಾಮ್ರಾಜ್ಯಗಳು ಶಾಶ್ವತವಾಗಿರುವುದಿಲ್ಲ. 25 ಹುಲ್ಲನ್ನು ಕತ್ತರಿಸಿದ ಮೇಲೆ ಹೊಸಹುಲ್ಲು ಬೆಳೆಯಲಾರಂಭಿಸುವುದು; ಒಣಹುಲ್ಲನ್ನು ಬೆಟ್ಟಗಳ ಮೇಲೆ ಸಂಗ್ರಹಿಸಲಾಗುವುದು. 26 ಬಳಿಕ ನಿನ್ನ ಕುರಿಗಳ ಉಣ್ಣೆಯಿಂದ ಬಟ್ಟೆಗಳನ್ನು ತಯಾರಿಸಬಹುದು. ನಿನ್ನ ಆಡುಗಳನ್ನು ಮಾರಿ ಬಂದ ಹಣದಿಂದ ಜಮೀನನ್ನು ಕೊಂಡುಕೊಳ್ಳಬಹುದು. 27 ನಿನ್ನ ಇನ್ನಿತರ ಆಡುಗಳು ನಿನಗೆ ಬೇಕಾದಷ್ಟು ಹಾಲನ್ನು ಕೊಡುತ್ತವೆ. ಅದರಿಂದ ನಿನಗೂ ನಿನ್ನ ಕುಟುಂಬಕ್ಕೂ ನಿನ್ನ ಸೇವಕಿಯರಿಗೂ ಬೇಕಾದಷ್ಟು ಆಹಾರವಿರುವುದು.
28 ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡಿಹೋಗುವನು. ಆದರೆ ಒಳ್ಳೆಯವನು ಸಿಂಹದಂತೆ ಧೀರನಾಗಿರುವನು.
2 ದೇಶದಲ್ಲಿ ದಂಗೆಯೇಳುತ್ತಲೇ ಇದ್ದರೆ ಅಧಿಪತಿಗಳು ಬದಲಾಗುತ್ತಲೇ ಇರುವರು. ಜ್ಞಾನಿಯೂ ಅನುಭವಸ್ಥನೂ ಆಗಿರುವ ಅಧಿಪತಿಯ ದೇಶ ಸ್ಥಿರವಾಗಿರುವುದು.
3 ಬಡಜನರನ್ನು ದರೋಡೆಮಾಡುವ ಬಡವನು ಬೆಳೆಯನ್ನು ನಾಶಮಾಡುವ ಬಿರುಸಾದ ಮಳೆಯಂತಿರುವನು.
4 ನೀನು ನ್ಯಾಯಪ್ರಮಾಣಕ್ಕೆ ವಿಧೇಯನಾಗದಿದ್ದರೆ ಕೆಡುಕರ ಪರವಾಗಿರುವೆ. ನೀನು ನ್ಯಾಯಪ್ರಮಾಣಕ್ಕೆ ವಿಧೇಯನಾಗಿದ್ದರೆ ಕೆಡುಕರಿಗೆ ವಿರೋಧವಾಗಿರುವೆ.
5 ಕೆಡುಕರು ನ್ಯಾಯವನ್ನು ಅರ್ಥಮಾಡಿಕೊಳ್ಳಲಾರರು; ಯೆಹೋವನನ್ನು ಪ್ರೀತಿಸುವ ಜನರಾದರೋ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವರು.
6 ಮೋಸದಿಂದ ಐಶ್ವರ್ಯವಂತರಾಗುವುದಕ್ಕಿಂತ ಯಥಾರ್ಥವಾಗಿದ್ದು ಬಡವರಾಗಿರುವುದೇ ಮೇಲು.
7 ನ್ಯಾಯಪ್ರಮಾಣಕ್ಕೆ ವಿಧೇಯನಾಗುವವನು ಜಾಣ. ಅಯೋಗ್ಯರ ಸ್ನೇಹಿತನು ತನ್ನ ತಂದೆಗೇ ಅವಮಾನ ತರುವನು.
8 ಬಡವರಿಗೆ ಮೋಸಮಾಡಿ ಗಳಿಸಿದ ಐಶ್ವರ್ಯ ಕಳೆದುಹೋಗುವುದು; ಬಡವರಿಗೆ ದಯೆ ತೋರುವವನಿಗೆ ಅದು ದೊರೆಯುವುದು.
9 ದೇವರ ಉಪದೇಶವನ್ನು ತಿರಸ್ಕರಿಸುವವನ ಪ್ರಾರ್ಥನೆಯನ್ನು ದೇವರೂ ತಿರಸ್ಕರಿಸುವನು.
10 ಯಥಾರ್ಥವಂತರನ್ನು ದಾರಿತಪ್ಪಿಸಿ ಅಪಾಯದ ಮಾರ್ಗದಲ್ಲಿ ನಡೆಸುವವನು ತಾನು ತೋಡಿದ ಗುಂಡಿಗೆ ತಾನೇ ಬೀಳುವನು.
11 ಐಶ್ವರ್ಯವಂತನು ತಾನೇ ಬುದ್ಧಿವಂತನೆಂದು ಭಾವಿಸುತ್ತಾನೆ. ವಿವೇಕಿಯಾದ ಬಡವನಾದರೋ ಸತ್ಯವನ್ನು ಕಾಣಬಲ್ಲನು.
12 ಒಳ್ಳೆಯವರು ನಾಯಕರಾದಾಗ ಎಲ್ಲರಿಗೂ ಸಂತೋಷ. ಆದರೆ ಕೆಡುಕನು ಅಧಿಪತಿಯಾದಾಗ ಎಲ್ಲರೂ ಅಡಗಿಕೊಳ್ಳುವರು.
13 ಪಾಪಗಳನ್ನು ಅಡಗಿಸಿಕೊಳ್ಳುವವನಿಗೆ ಯಶಸ್ಸು ಇಲ್ಲವೇ ಇಲ್ಲ. ತನ್ನ ಪಾಪವನ್ನು ಅರಿಕೆಮಾಡಿ ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು.
14 ಕೇಡನ್ನು ಮಾಡಲು ಭಯಪಡುವವನು ಆಶೀರ್ವಾದ ಹೊಂದುವನು. ಆದರೆ ಮೊಂಡನು ಆಪತ್ತಿಗೆ ಸಿಕ್ಕಿಬೀಳುವನು.
15 ಬಲಹೀನರನ್ನು ಆಳುವ ಕೆಡುಕನು ಗರ್ಜಿಸುವ ಸಿಂಹದಂತಿರುವನು; ಮೇಲೆರಗಲಿರುವ ಕರಡಿಯಂತಿರುವನು.
16 ವಿವೇಕವಿಲ್ಲದ ಅಧಿಪತಿ ತನ್ನ ಅಧೀನದಲ್ಲಿರುವವರಿಗೆ ಕೇಡುಮಾಡುವನು. ಅನ್ಯಾಯದ ಹಣವನ್ನು ತೆಗೆದುಕೊಳ್ಳದ ಅಧಿಪತಿ ಬಹುಕಾಲ ಆಳುವನು.
17 ಕೊಲೆಮಾಡಿದ ಅಪರಾಧಿಯು ತನ್ನ ಸಮಾಧಿಗೆ ಓಡಿಹೋಗಲಿ. ಅವನಿಗೆ ಸಹಾಯಮಾಡಬೇಡ.
18 ಒಳ್ಳೆಯವನು ಕ್ಷೇಮವಾಗಿರುವನು; ಕೆಡುಕನಾದರೋ ಇದ್ದಕ್ಕಿದ್ದಂತೆ ಹಾಳಾಗುವನು.
19 ಕಷ್ಟಪಟ್ಟು ದುಡಿಯುವವನಿಗೆ ಬೇಕಾದಷ್ಟು ಆಹಾರವಿರುವುದು. ನನಸಾಗದ ಕನಸುಗಳನ್ನೇ ಆಲೋಚಿಸಿಕೊಂಡಿರುವವನು ಬಡವನಾಗಿಯೇ ಇರುವನು.
20 ನಂಬಿಗಸ್ತನು ಬಹಳವಾಗಿ ಆಶೀರ್ವದಿಸಲ್ಪಡುವನು. ಐಶ್ವರ್ಯವಂತನಾಗುವುದಕ್ಕಾಗಿಯೇ ಪ್ರಯತ್ನಿಸುವವನು ದಂಡನೆ ಹೊಂದುವನು.
21 ಪಕ್ಷಪಾತ ತಪ್ಪು. ಕೆಲವರಾದರೋ ಒಂದು ತುಂಡು ರೊಟ್ಟಿಗಾಗಿಯೂ ತಪ್ಪು ಮಾಡುವರು.
22 ಜಿಪುಣನು ಐಶ್ವರ್ಯವಂತನಾಗಲು ಆತುರಪಡುವನು: ಆದರೆ ತಾನು ಬೇಗನೆ ಬಡವನಾಗಲಿರುವುದನ್ನು ಅವನು ಗ್ರಹಿಸಿಕೊಳ್ಳಲಾರನು.
23 ಗದರಿಸುವವನು ಸ್ವಲ್ಪಕಾಲದ ನಂತರ ಮುಖಸ್ತುತಿ ಮಾಡುವವನಿಗಿಂತಲೂ ಹೆಚ್ಚಾಗಿ ಗೌರವಿಸಲ್ಪಡುವನು.
24 ಕೆಲವರು ತಮ್ಮ ತಂದೆತಾಯಿಗಳಿಂದ ಕದ್ದುಕೊಂಡು, “ಅದು ತಪ್ಪಲ್ಲ” ಎಂದು ಹೇಳುವರು. ಆದರೆ ಆ ವ್ಯಕ್ತಿಯು ಮನೆಯೊಳಗೆ ನುಗ್ಗಿ ಸರ್ವಸ್ವವನ್ನು ನಾಶಮಾಡುವ ವ್ಯಕ್ತಿಯಂತೆಯೇ ಕೆಟ್ಟವನಾಗಿದ್ದಾನೆ.
25 ದುರಾಶೆಯುಳ್ಳವನು ಜಗಳಗಳನ್ನು ಎಬ್ಬಿಸುತ್ತಾನೆ. ಯೆಹೋವನಲ್ಲಿ ಭರವಸೆ ಇಡುವವನಾದರೋ ಅಭಿವೃದ್ಧಿ ಹೊಂದುವನು.
26 ಸ್ವಂತ ಆಲೋಚನೆಯ ಮೇಲೆ ಭರವಸೆ ಇಡುವವನು ಮೂರ್ಖನಾಗಿದ್ದಾನೆ. ಜ್ಞಾನಮಾರ್ಗದಲ್ಲಿ ನಡೆಯುವವನು ಸುರಕ್ಷಿತನಾಗಿರುವನು.
27 ಬಡವರಿಗೆ ಕೊಡುವವನು ತನಗೆ ಅಗತ್ಯವಾದ ಪ್ರತಿಯೊಂದನ್ನೂ ಹೊಂದಿಕೊಳ್ಳುವನು. ಬಡವರಿಗೆ ಸಹಾಯಮಾಡದವನಿಗೆ ಅನೇಕ ಶಾಪಗಳು ಬರುತ್ತವೆ.
28 ಕೆಡುಕನು ಅಧಿಕಾರಕ್ಕೆ ಬಂದರೆ, ಜನರೆಲ್ಲರೂ ಅಡಗಿಕೊಳ್ಳುವರು. ಕೆಡುಕನು ಸೋತುಹೋದಾಗ ಒಳ್ಳೆಯವರು ಮತ್ತೆ ಆಳುವರು.
29 ಪದೇಪದೇ ಎಚ್ಚರಿಸಿದರೂ ಮೊಂಡನಾಗಿರುವವನು ಪಕ್ಕನೆ ಏಳದ ಹಾಗೆ ನಾಶವಾಗುವನು.
2 ಅಧಿಪತಿಯು ಒಳ್ಳೆಯವನಾಗಿರುವಾಗ ಜನರೆಲ್ಲರೂ ಸಂತೋಷವಾಗಿರುವರು. ಕೆಡುಕನು ಆಳುವಾಗ ಜನರೆಲ್ಲರೂ ಸಂಕಟಪಡುವರು.
3 ಜ್ಞಾನವನ್ನು ಪ್ರೀತಿಸುವವನ ತಂದೆ ಬಹು ಸಂತೋಷವಾಗಿರುವನು. ಆದರೆ ಸೂಳೆಯರ ಸಹವಾಸ ಮಾಡುವವನು ತನ್ನ ಐಶ್ವರ್ಯವನ್ನು ಕಳೆದುಕೊಳ್ಳುವನು.
4 ರಾಜನು ನ್ಯಾಯವಂತನಾಗಿದ್ದರೆ ದೇಶವು ಬಲಿಷ್ಠವಾಗಿರುವುದು. ರಾಜನು ತನ್ನ ಐಶ್ವರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವಿಪರೀತ ತೆರಿಗೆಗಳನ್ನು ಹಾಕಿದರೆ, ದೇಶವು ಹಾಳಾಗುವುದು.
5 ನೆರೆಯವನ ಮುಖಸ್ತುತಿ ಮಾಡುವವನು ಅವನ ಕಾಲಿಗೆ ಬಲೆಯನ್ನು ಒಡ್ಡುತ್ತಿದ್ದಾನೆ.
6 ಕೆಡುಕರು ತಮ್ಮ ಪಾಪದಿಂದಲೇ ಸಿಕ್ಕಿಕೊಳ್ಳುವರು. ಒಳ್ಳೆಯವರಾದರೋ ಸಂತೋಷದಿಂದ ಹಾಡುವರು.
7 ನೀತಿವಂತರು ಬಡವರಿಗೆ ಒಳ್ಳೆಯದನ್ನು ಮಾಡಲು ಇಷ್ಟಪಡುತ್ತಾರೆ. ಕೆಡುಕರಾದರೋ ಬಡವರನ್ನು ಲಕ್ಷಿಸುವುದಿಲ್ಲ.
8 ದುರಾಭಿಮಾನಿಗಳು ಇಡೀ ಪಟ್ಟಣವನ್ನೇ ಬೇಸರಗೊಳಿಸುವರು. ಜ್ಞಾನಿಗಳಾದರೋ ಕೋಪದ ಜ್ವಾಲೆಗಳನ್ನು ನಂದಿಸುವರು.
9 ಜ್ಞಾನಿಯು ಮೂಢನೊಂದಿಗೆ ನ್ಯಾಯಾಲಯಕ್ಕೆ ಹೋದರೆ, ಮೂಢನು ಕೇವಲ ಆರ್ಭಟಿಸುವನು; ಹುಚ್ಚುಚ್ಚಾಗಿ ಕೂಗಾಡುವನು; ಅವರಿಗೆ ಪರಿಹಾರ ದೊರೆಯುವುದಿಲ್ಲ.
10 ಕೊಲೆಗಾರರು ಯಥಾರ್ಥವಂತರನ್ನು ಯಾವಾಗಲೂ ದ್ವೇಷಿಸುವರು. ಆ ಕೆಡುಕರು ಅವರನ್ನು ಕೊಲ್ಲಬಯಸುವರು.
11 ಮೂಢನು ತನ್ನ ಕೋಪವನ್ನೆಲ್ಲಾ ವ್ಯಕ್ತಪಡಿಸುವನು; ಆದರೆ ಜ್ಞಾನಿಯು ತನ್ನನ್ನು ಹತೋಟಿಯಲ್ಲಿಟ್ಟುಕೊಳ್ಳುವನು.
12 ಅಧಿಪತಿಯು ಸುಳ್ಳುಮಾತುಗಳಿಗೆ ಕಿವಿಗೊಟ್ಟರೆ, ಅವನ ಅಧೀನದಲ್ಲಿರುವ ಅಧಿಕಾರಿಗಳೆಲ್ಲರು ಕೆಡುಕರಾಗುವರು.
13 ಒಂದು ರೀತಿಯಲ್ಲಿ ಬಡವನಿಗೂ ಅವನನ್ನು ಕುಗ್ಗಿಸುವವನಿಗೂ ವ್ಯತ್ಯಾಸವಿಲ್ಲ; ಅವರಿಬ್ಬರಿಗೂ ಜೀವಕೊಟ್ಟಾತನು ಯೆಹೋವನೇ; ಅವರಿಬ್ಬರನ್ನು ಸೃಷ್ಟಿಮಾಡಿದವನು ಯೆಹೋವನೇ.
14 ಬಡಜನರಿಗೆ ನ್ಯಾಯದೊರಕಿಸುವ ರಾಜನು ಬಹುಕಾಲ ಆಳುವನು.
15 ಶಿಕ್ಷೆಯು ಮತ್ತು ತಿದ್ದುಪಡಿಯು ಮಕ್ಕಳನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ. ಶಿಸ್ತುಪಡಿಸಿಲ್ಲದ ಯೌವನಸ್ಥನು ತನ್ನ ತಾಯಿಯನ್ನು ನಾಚಿಕೆಗೆ ಗುರಿಪಡಿಸುತ್ತಾನೆ.
16 ಕೆಡುಕರು ದೇಶವನ್ನು ಆಳುತ್ತಿದ್ದರೆ, ಎಲ್ಲೆಲ್ಲೂ ಪಾಪವಿರುವುದು. ಆದರೆ ಒಳ್ಳೆಯವರಿಗೆ ಕೊನೆಯಲ್ಲಿ ಜಯವಾಗುವುದು.
17 ನಿನ್ನ ಮಗನನ್ನು ತಿದ್ದಿ ಸರಿಪಡಿಸು; ಆಗ ನೀನು ಅವನ ಬಗ್ಗೆ ಹೆಮ್ಮೆಯಿಂದಿರುವೆ. ಅವನು ನಿನ್ನನ್ನು ತೃಪ್ತಿಪಡಿಸುವನು.
18 ಪ್ರವಾದಿಗಳಿಗೆ ದರ್ಶನವಾಗದಿದ್ದರೆ ಜನರು ಹತೋಟಿ ತಪ್ಪುತ್ತಾರೆ. ಆದರೆ ದೇವರ ಕಟ್ಟಳೆಗೆ ವಿಧೇಯನಾಗಿರುವವನು ಸಂತೋಷವಾಗಿರುವನು.
19 ನೀನು ಸೇವಕನಿಗೆ ಕೇವಲ ಮಾತಿನಿಂದ ಹೇಳಿದರೆ ಅವನು ಪಾಠವನ್ನು ಕಲಿತುಕೊಳ್ಳುವುದಿಲ್ಲ. ಅವನು ನಿನ್ನ ಮಾತುಗಳನ್ನು ಅರ್ಥಮಾಡಿಕೊಂಡರೂ ವಿಧೇಯನಾಗುವುದಿಲ್ಲ.
20 ವಿವೇಚಿಸದೆ ಮಾತಾಡುವವನನ್ನು ನೀನು ಕಂಡಿರುವಿಯೋ? ಅವನಿಗಿಂತಲೂ ಮೂಢನಿಗೇ ಹೆಚ್ಚು ನಿರೀಕ್ಷೆಯಿದೆ.
21 ನೀನು ಚಿಕ್ಕಂದಿನಿಂದಲೇ ಗುಲಾಮನನ್ನು ಕೋಮಲನಾಗಿ ಸಾಕಿದರೆ, ಕೊನೆಯಲ್ಲಿ ಅವನು ಮೊಂಡನಾಗಿರುವನು.
22 ಕೋಪಿಷ್ಠನು ಜಗಳ ಎಬ್ಬಿಸುವನು. ಉದ್ರೇಕಗೊಂಡವನು ಅನೇಕ ಪಾಪಗಳನ್ನು ಮಾಡುವನು.
23 ದುರಾಭಿಮಾನಿಯನ್ನು ಅವನ ದುರಾಭಿಮಾನವೇ ನಾಶಪಡಿಸುವುದು. ಆದರೆ ದೀನನನ್ನು ಬೇರೆ ಜನರು ಗೌರವಿಸುವರು.
24 ಕಳ್ಳನ ಸಂಗಡಿಗನು ತನಗೆ ತಾನೆ ಕಡುವೈರಿ. ಸಾಕ್ಷಿ ಹೇಳದ ಜನರಿಗೆ ಬರತಕ್ಕ ಶಾಪದ ಬಗ್ಗೆ ಕೇಳಿದರೂ ಅವನು ಹೇಳುವುದಿಲ್ಲ.
25 ಮನುಷ್ಯರ ಭಯ ಉರುಲಾಗಬಹುದು. ಆದರೆ ಯೆಹೋವನ ಮೇಲಿರುವ ಭರವಸೆ ಕ್ಷೇಮವಾಗಿಡುವುದು.
26 ಅನೇಕರು ಅಧಿಪತಿಯಿಂದ ಸಹಾಯ ಬಯಸುವರು. ಆದರೆ ನ್ಯಾಯ ದೊರೆಯುವುದು ಯೆಹೋವನಿಂದಲೇ.
27 ಒಳ್ಳೆಯವರಿಗೆ ಯಥಾರ್ಥರಲ್ಲದವರು ಅಸಹ್ಯ. ಕೆಡುಕರು ಯಥಾರ್ಥರನ್ನು ದ್ವೇಷಿಸುವರು.
ತನ್ನ ಸೇವೆಯ ಕುರಿತು ಪೌಲನ ಪ್ರತಿವಾದ
10 ಪೌಲನಾದ ನಾನು ಕ್ರಿಸ್ತನ ಮೃದುಸ್ವಭಾವದಿಂದಲೂ ಕನಿಕರದಿಂದಲೂ ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ನಾನು ನಿಮ್ಮೊಂದಿಗಿರುವಾಗ ದೀನನಾಗಿರುತ್ತೇನೆಂದೂ, ನಿಮ್ಮಿಂದ ದೂರದಲ್ಲಿರುವಾಗ ಧೀರನಾಗಿರುತ್ತೇನೆಂದೂ ಕೆಲವರು ಹೇಳುತ್ತಾರೆ. 2 ನಾವು ಲೌಕಿಕರಂತೆ ಜೀವಿಸುತ್ತೇವೆಂದು ಕೆಲವರು ಯೋಚಿಸುತ್ತಾರೆ. ನಾನು ಬಂದಾಗ ಅವರ ವಿರೋಧವಾಗಿ ಬಹು ದಿಟ್ಟತನದಿಂದಿರಬೇಕೆಂದು ಯೋಚಿಸಿಕೊಂಡಿದ್ದೇನೆ. ಆದರೆ ನಿಮಗೂ ಅದೇ ದಿಟ್ಟತನವನ್ನು ಉಪಯೋಗಿಸುವ ಅಗತ್ಯತೆ ಇಲ್ಲದಿರಲಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. 3 ನಾವು ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ಆದರೆ ಪ್ರಪಂಚದವರು ಹೊಡೆದಾಡುವ ರೀತಿಯಲ್ಲಿ ನಾವು ಹೊಡೆದಾಡುವುದಿಲ್ಲ. 4 ಪ್ರಪಂಚದವರು ಉಪಯೋಗಿಸುವ ಆಯುಧಗಳಿಗೆ ತದ್ವಿರುದ್ಧವಾದ ಆಯುಧಗಳೊಂದಿಗೆ ನಾವು ಹೋರಾಡುತ್ತೇವೆ. ನಮ್ಮ ಆಯುಧಗಳು ದೇವರ ಶಕ್ತಿಯನ್ನು ಹೊಂದಿವೆ. ಅವು ಶತ್ರುವಿನ ಬಲವಾದ ಕೋಟೆಗಳನ್ನು ನಾಶ ಮಾಡಬಲ್ಲವು. ನಾವು ಜನರ ವಾದಗಳನ್ನು ನಾಶಮಾಡುತ್ತೇವೆ. 5 ದೇವರ ಜ್ಞಾನಕ್ಕೆ ವಿರೋಧವಾಗಿ ಎದ್ದೇಳುವ ಪ್ರತಿಯೊಂದು ಗರ್ವದ ಸಂಗತಿಯನ್ನು ನಾಶಮಾಡುತ್ತೇವೆ; ಪ್ರತಿಯೊಂದು ಯೋಚನೆಯನ್ನು ಸ್ವಾಧೀನಪಡಿಸಿಕೊಂಡು ಅವುಗಳನ್ನು ಪರಿವರ್ತಿಸಿ ಕ್ರಿಸ್ತನಿಗೆ ವಿಧೇಯರಾಗುವಂತೆ ಮಾಡುತ್ತೇವೆ. 6 ನಿಮ್ಮಲ್ಲಿ ಕ್ರಿಸ್ತನಿಗೆ ವಿಧೇಯರಾಗದಿರುವ ಯಾರನ್ನೇ ಆಗಲಿ ಶಿಕ್ಷಿಸಲು ಸಿದ್ಧರಾಗಿದ್ದೇವೆ. ಆದರೆ ಮೊಟ್ಟಮೊದಲನೆಯದಾಗಿ, ನೀವು ಪೂರ್ಣ ವಿಧೇಯರಾಗಬೇಕೆಂದು ಅಪೇಕ್ಷಿಸುತ್ತೇವೆ.
7 ನಿಮ್ಮ ಮುಂದಿರುವ ನಿಜಾಂಶಗಳನ್ನು ನೀವು ಗಮನಿಸಬೇಕು. ಒಬ್ಬ ವ್ಯಕ್ತಿಯು ತಾನು ನಿಜವಾಗಿಯೂ ಕ್ರಿಸ್ತನವನೆಂದು ತಿಳಿದುಕೊಂಡಿದ್ದರೆ ಅವನಂತೆಯೇ ನಾವೂ ಕ್ರಿಸ್ತನವರೆಂಬುದನ್ನು ಅವನು ತಿಳಿದುಕೊಳ್ಳಬೇಕು. 8 ಪ್ರಭುವು ನಮಗೆ ಕೊಟ್ಟಿರುವ ಅಧಿಕಾರದ ಬಗ್ಗೆ ನಾವು ಹೆಚ್ಚು ಹೆಮ್ಮೆಪಡುತ್ತೇವೆ ಎಂಬುದೇನೋ ಸತ್ಯ. ಆದರೆ ಆತನು ನಮಗೆ ಈ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಪಡಿಸುವುದಕ್ಕಾಗಿಯೇ ಹೊರತು ನಿಮಗೆ ನೋವನ್ನು ಉಂಟುಮಾಡುವುದಕ್ಕಾಗಿಯಲ್ಲ. ಆದ್ದರಿಂದ ಅದರ ಬಗ್ಗೆ ಹೆಮ್ಮೆಪಡುವುದರಲ್ಲಿ ನಾನು ನಾಚಿಕೊಳ್ಳುವುದಿಲ್ಲ. 9 ನನ್ನ ಪತ್ರಗಳ ಮೂಲಕ ನಿಮ್ಮನ್ನು ಭಯಪಡಿಸಲು ಪ್ರಯತ್ನಿಸುತ್ತಿದ್ದೇನೆಂದು ನೀವು ಯೋಚಿಸಬೇಕೆಂಬುದು ನನ್ನ ಅಪೇಕ್ಷೆಯಲ್ಲ. 10 “ಪೌಲನ ಪತ್ರಗಳು ಬಲಯುತವಾಗಿವೆ ಮತ್ತು ಪ್ರಾಮುಖ್ಯವಾಗಿವೆ, ಆದರೆ ಅವನು ನಮ್ಮೊಂದಿಗಿರುವಾಗ ಬಲಹೀನನಾಗಿರುತ್ತಾನೆ, ಅವನ ಮಾತುಗಳು ನಿಸ್ಸಾರವಾಗಿರುತ್ತವೆ” ಎಂದು ಕೆಲವರು ಹೇಳುತ್ತಾರೆ. 11 ಆ ಜನರಿಗೆ ಈ ವಿಷಯ ತಿಳಿದಿರಬೇಕು. ಅದೇನೆಂದರೆ, ಈಗ ನಾವು ನಿಮ್ಮೊಂದಿಗಿಲ್ಲ. ಆದ್ದರಿಂದ ಈ ಸಂಗತಿಗಳನ್ನು ಪತ್ರಗಳ ಮೂಲಕ ಹೇಳುತ್ತಿದ್ದೇವೆ. ಆದರೆ ನಾವು ನಿಮ್ಮೊಂದಿಗಿರುವಾಗ ನಮ್ಮ ಪತ್ರಗಳಲ್ಲಿ ತೋರಿದ ಅಧಿಕಾರವನ್ನೇ ತೋರಿಸುತ್ತೇವೆ.
12 ತಾವು ಬಹಳ ಪ್ರಾಮುಖ್ಯವಾದವರೆಂದು ಯೋಚಿಸುವ ಆ ಜನರ ಗುಂಪಿನೊಡನೆ ಸೇರಿಕೊಳ್ಳಲು ನಮಗೆ ಧೈರ್ಯಸಾಲದು. ನಾವು ನಮ್ಮನ್ನು ಅವರೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ಅವರು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತಾರೆ; ತಮ್ಮನ್ನು ತಾವೇ ಮೌಲ್ಯಮಾಪನ ಮಾಡಿಕೊಳ್ಳುತ್ತಾರೆ. ಅವರಿಗೆ ಏನೂ ಗೊತ್ತಿಲ್ಲವೆಂದು ಇದೇ ತೋರಿಸುತ್ತದೆ.
13 ಆದರೆ ನಾವು ನಮಗೆ ಕೊಡಲ್ಪಟ್ಟಿರುವ ಕೆಲಸದ ಮೇರೆಯನ್ನು ಮೀರಿ ನಮ್ಮನ್ನು ಹೊಗಳಿಕೊಳ್ಳದೆ ದೇವರು ನಮಗೆ ಕೊಟ್ಟಿರುವ ಕೆಲಸದ ಮೇರೆಯೊಳಗೆ ಹೆಮ್ಮೆಪಡುತ್ತೇವೆ. ಆದರೆ ನಮ್ಮ ಈ ಕೆಲಸವು ನಿಮ್ಮ ಮಧ್ಯ ನಾವು ಮಾಡುವ ಈ ಸೇವೆಯನ್ನು ಒಳಗೊಂಡಿದೆ. 14 ನಾವು ಬಹಳವಾಗಿ ಹೊಗಳಿಕೊಳ್ಳುವುದಿಲ್ಲ. ನಾವು ನಿಮ್ಮಲ್ಲಿಗೆ ಈಗಾಗಲೇ ಬಂದಿಲ್ಲದಿದ್ದರೆ ಬಹಳವಾಗಿ ಹೊಗಳಿಕೊಳ್ಳುತ್ತಿದ್ದೆವು. ಆದರೆ ನಾವು ನಿಮ್ಮಲ್ಲಿಗೆ ಬಂದಿದ್ದೇವೆ. ಕ್ರಿಸ್ತನ ಸುವಾರ್ತೆಯೊಂದಿಗೆ ನಾವು ಬಂದೆವು. 15 ನಾವು ಹೊಗಳಿಕೊಳ್ಳುವುದನ್ನು ನಮ್ಮ ಕೆಲಸದ ಮೇರೆಗೆ ಸೀಮಿತಗೊಳಿಸುತ್ತೇವೆ. ಇತರರು ಮಾಡಿದ ಕೆಲಸದ ಬಗ್ಗೆ ನಾವು ನಮ್ಮನ್ನು ಹೊಗಳಿಕೊಳ್ಳುವುದಿಲ್ಲ. ನಿಮ್ಮ ನಂಬಿಕೆಯು ವೃದ್ಧಿಯಾಗುತ್ತಾ ಬಂದಂತೆ ನಮ್ಮ ಕೆಲಸವು ಮತ್ತಷ್ಟು ವಿಶಾಲವಾಗಿ ಬೆಳೆಯಲು ನೀವು ಸಹಾಯ ಮಾಡುತ್ತೀರೆಂಬ ನಿರೀಕ್ಷೆ ನಮಗಿದೆ. 16 ನಿಮ್ಮ ಪಟ್ಟಣಕ್ಕೆ ದೂರವಾಗಿರುವ ಸ್ಥಳಗಳಲ್ಲಿಯೂ ಸುವಾರ್ತೆಯನ್ನು ತಿಳಿಸಬೇಕೆಂಬ ಅಪೇಕ್ಷೆ ನಮಗುಂಟು. ಮತ್ತೊಬ್ಬ ವ್ಯಕ್ತಿಯ ಪ್ರದೇಶದಲ್ಲಿ ಈಗಾಗಲೇ ಮಾಡಲ್ಪಟ್ಟಿರುವ ಕೆಲಸದ ಬಗ್ಗೆ ಹೊಗಳಿಕೊಳ್ಳಬೇಕೆಂಬ ಅಪೇಕ್ಷೆ ನಮಗಿಲ್ಲ. 17 ಆದರೆ “ಹೊಗಳಿಕೊಳ್ಳುವವನು ಪ್ರಭುವಿನಲ್ಲಿಯೇ ಹೊಗಳಿಕೊಳ್ಳಬೇಕು”(A) 18 ಒಬ್ಬನು ತನ್ನನ್ನು ಒಳ್ಳೆಯವನೆಂದು ಹೇಳಿಕೊಂಡ ಮಾತ್ರಕ್ಕೆ ಅವನು ಸ್ವೀಕೃತನೆಂದಲ್ಲ. ಪ್ರಭುವು ಯಾರನ್ನು ಒಳ್ಳೆಯವನೆಂದು ಯೋಚಿಸುತ್ತಾನೊ ಅವನೇ ಸ್ವೀಕೃತನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International