Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 11-13

ಸಮಾಧಾನದ ಅರಸನು ಬರುವನು

11 ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು. ಆ ಕೊಂಬೆಯು ಇಷಯನ ಬೇರಿನಿಂದ ಬೆಳೆಯುವುದು. ಯೆಹೋವನ ಆತ್ಮವು ಆತನಲ್ಲಿದ್ದು, ಜ್ಞಾನ, ತಿಳುವಳಿಕೆ, ಮಾರ್ಗದರ್ಶನ ಮತ್ತು ಸಾಮರ್ಥ್ಯವನ್ನು ದಯಪಾಲಿಸುವದು; ಯೆಹೋವನನ್ನು ತಿಳಿದುಕೊಳ್ಳಲು ಮತ್ತು ಗೌರವಿಸಲು ಆ ಮಗುವಿಗೆ ಸಹಾಯಿಸುವುದು. ಆತನು ಯೆಹೋವನನ್ನು ಸನ್ಮಾನಿಸುತ್ತಾ ಸಂತೋಷಿಸುವನು.

ಆತನು ಜನರಿಗೆ ನ್ಯಾಯತೀರಿಸುವುದು ಹೊರತೋರಿಕೆಯ ಆಧಾರದ ಮೇಲಲ್ಲ; ಕೇಳಿಕೊಂಡದ್ದರ ಆಧಾರದ ಮೇಲೂ ಅಲ್ಲ. 4-5 ಆತನು ಬಡಜನರಿಗೆ ಅನ್ಯಾಯಮಾಡದೆ ನ್ಯಾಯವಾದ ತೀರ್ಪನ್ನು ಕೊಡುವನು, ದೇಶದ ಬಡಜನರಿಗೋಸ್ಕರವಾಗಿ ಮಾಡುವ ಆಲೋಚನೆಯನ್ನು ಪಕ್ಷಪಾತವಿಲ್ಲದೆ ಮಾಡುವನು. ಆತನು ಜನರಿಗೆ ಶಿಕ್ಷೆ ಕೊಡಬೇಕೆಂದು ತೀರ್ಮಾನಿಸಿದರೆ ಅದನ್ನು ಆಜ್ಞಾಪಿಸಿ ಶಿಕ್ಷಿಸುವನು. ದುಷ್ಟರಿಗೆ ಮರಣದಂಡನೆಯಾಗಬೇಕೆಂದು ಆತನು ತೀರ್ಮಾನಿಸಿದರೆ, ಆತನು ಆಜ್ಞಾಪಿಸಿ ಕೊಲ್ಲಿಸುವನು. ನ್ಯಾಯವೇ ಆತನಿಗೆ ನಡುಕಟ್ಟು, ಒಳ್ಳೆಯತನವೇ ಆತನಿಗೆ ಸೊಂಟಪಟ್ಟಿಯಾಗಿವೆ.

ಆ ಸಮಯದಲ್ಲಿ ತೋಳಗಳು ಕುರಿಮರಿಯೊಂದಿಗೆ ಸಮಾಧಾನದಿಂದ ಒಟ್ಟಾಗಿ ವಾಸಿಸುವವು. ಚಿರತೆಯು ಆಡಿನ ಮರಿಗಳೊಂದಿಗೆ ಮಲಗಿಕೊಳ್ಳುವದು. ಕರುಗಳು, ಪ್ರಾಯದ ಸಿಂಹಗಳು, ಹೋರಿಗಳು ಒಟ್ಟಾಗಿ ಸಮಾಧಾನದಿಂದ ಜೀವಿಸುವವು. ಒಂದು ಚಿಕ್ಕಮಗು ಅವುಗಳನ್ನು ನಡಿಸುವುದು. ದನಗಳೂ ಕರಡಿಗಳೂ ಜೊತೆಯಾಗಿರುವವು. ಅವುಗಳ ಮರಿಗಳೆಲ್ಲಾ ಒಂದಕ್ಕೊಂದು ಹಾನಿಮಾಡದೆ ಒಟ್ಟಾಗಿ ಮಲಗಿಕೊಳ್ಳುವವು. ಸಿಂಹಗಳು ದನಗಳಂತೆ ಹುಲ್ಲು ತಿನ್ನುವವು. ಹಾವುಗಳು ಸಹ ಜನರಿಗೆ ಹಾನಿ ಮಾಡುವದಿಲ್ಲ. ಮಗುವು ನಾಗರಹಾವಿನ ಹುತ್ತದ ಬಳಿ ಆಡುತ್ತಾ ಹುತ್ತದೊಳಗೆ ಕೈಹಾಕುವದು.

ಯಾರೂ ಪರಸ್ಪರ ಹಾನಿಮಾಡುವದಿಲ್ಲ. ನನ್ನ ಪವಿತ್ರ ಪರ್ವತದಲ್ಲಿನ ಜನರು ವಸ್ತುಗಳನ್ನು ನಾಶಮಾಡಲು ಇಷ್ಟಪಡುವದಿಲ್ಲ. ಯಾಕೆಂದರೆ ಆಗ ಜನರು ನಿಜವಾಗಿಯೂ ಯೆಹೋವನನ್ನು ಅರಿತಿರುವರು. ಸಾಗರದಲ್ಲಿ ನೀರು ತುಂಬಿದಂತೆ ಲೋಕವೆಲ್ಲಾ ಆತನ ವಿಷಯವೆಂಬ ಜ್ಞಾನದಿಂದ ತುಂಬುವದು.

10 ಆ ಸಮಯದಲ್ಲಿ ಇಷಯನ ವಂಶದಿಂದ ಒಬ್ಬ ವಿಶೇಷ ವ್ಯಕ್ತಿಯು ಹುಟ್ಟುವನು. ಆತನು ಒಂದು ಧ್ವಜದಂತಿರುವನು. ಎಲ್ಲಾ ಜನಾಂಗಗಳು ಆತನ ಸುತ್ತಲೂ ಸೇರಿಬರಬೇಕೆಂದು ಈ ಧ್ವಜವು ತೋರಿಸುವುದು. ಆ ಜನಾಂಗಗಳು ತಾವು ಏನು ಮಾಡಬೇಕೆಂದು ಕೇಳುವರು. ಆತನಿರುವ ಸ್ಥಳವು ಮಹಿಮೆಯಿಂದ ತುಂಬುವದು.

11 ಆ ಸಮಯದಲ್ಲಿ ನನ್ನ ಒಡೆಯನು ಎರಡನೆ ಸಾರಿ ಕೈಚಾಚಿ, ಉಳಿದ ತನ್ನ ಜನರನ್ನು ತೆಗೆದುಕೊಳ್ಳುವನು. ಇವರು ಅಶ್ಶೂರ, ಉತ್ತರ ಈಜಿಪ್ಟ್, ದಕ್ಷಿಣ ಈಜಿಪ್ಟ್, ಇಥಿಯೋಪ್ಯ, ಏಲಾಮ್, ಬಾಬಿಲೋನಿಯ, ಹಮಾಥ್ ಮತ್ತು ಕರಾವಳಿ ಪ್ರದೇಶಗಳಲ್ಲಿರುವ ಎಲ್ಲಾ ಜನಾಂಗಗಳವರು. 12 ದೇವರು ಜನಾಂಗಗಳಿಗೆ ಒಂದು ಗುರುತಾಗಿ ಧ್ವಜವನ್ನೆತ್ತುವನು. ಇಸ್ರೇಲ್ ಮತ್ತು ಯೆಹೂದದ ಜನರು ತಮ್ಮ ಸ್ಥಳಗಳಿಂದ ಕಡ್ಡಾಯವಾಗಿ ತೆಗೆದುಹಾಕಲ್ಪಡುವರು. ಆ ಜನರು ಪ್ರಪಂಚದ ಬಹುದೂರದ ಸ್ಥಳಗಳಿಗೆ ಚದರಿ ಹೋಗುವರು. ಆದರೆ ದೇವರು ಅವರನ್ನು ಒಟ್ಟಾಗಿ ಸೇರಿಸುವನು.

13 ಆ ಸಮಯದಲ್ಲಿ ಎಫ್ರಾಯೀಮು ಯೆಹೂದದ ಮೇಲೆ ಹೊಟ್ಟೆಕಿಚ್ಚುಪಡುವುದಿಲ್ಲ. ಯೆಹೂದಕ್ಕೆ ವೈರಿಗಳಿರುವದಿಲ್ಲ ಮತ್ತು ಎಫ್ರಾಯೀಮನಿಗೆ ಯೆಹೂದವು ತೊಂದರೆಯನ್ನು ಮಾಡುವದಿಲ್ಲ. 14 ಆದರೆ ಎಫ್ರಾಯೀಮ್ಯರು ಮತ್ತು ಯೆಹೂದ್ಯರು ಒಟ್ಟುಸೇರಿ ಫಿಲಿಷ್ಟಿಯರನ್ನು ಎದುರಿಸುವರು. ನೆಲದ ಮೇಲೆ ಇರುವ ಸಣ್ಣ ಪ್ರಾಣಿಯನ್ನು ಹಿಡಿಯಲು ಆಕಾಶದಿಂದ ಬರುವ ಹಕ್ಕಿಗಳಂತೆ ಈ ಎರಡು ರಾಷ್ಟ್ರಗಳಿರುವವು. ಅವರು ಒಟ್ಟಾಗಿ ಪೂರ್ವದ ಜನರ ಐಶ್ವರ್ಯವನ್ನು ಕಿತ್ತುಕೊಳ್ಳುವರು. ಎಫ್ರಾಯೀಮ್ ಮತ್ತು ಯೆಹೂದಗಳು ಏದೋಮನ್ನು, ಮೋವಾಬನ್ನು ಮತ್ತು ಅಮ್ಮೋನನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವವು.

15 ಯೆಹೋವನು ಸಿಟ್ಟುಗೊಂಡು ಈಜಿಪ್ಟಿನ ಸಮುದ್ರವನ್ನು ವಿಂಗಡಿಸಿದನು. ಅದೇ ರೀತಿಯಲ್ಲಿ ಯೂಫ್ರೇಟೀಸ್ ನದಿಯ ಮೇಲೆ ತನ್ನ ಕೈಯನ್ನು ಚಾಚುವನು. ಆತನು ನದಿಯ ನೀರಿಗೆ ಹೊಡೆಯುವನು. ಆಗ ಅದು ಏಳು ಚಿಕ್ಕ ನದಿಗಳಾಗಿ ಹರಿಯುವುದು. ಆ ನದಿಗಳು ಆಳವಾಗಿರುವದಿಲ್ಲ. ಜನರು ತಮ್ಮ ಕೆರಗಳೊಂದಿಗೆ ದಾಟಬಹುದು. 16 ಅಳಿದುಳಿದ ದೇವಜನರು ಅಶ್ಶೂರ ದೇಶವನ್ನು ಬಿಡಲು ಒಂದು ಮಾರ್ಗವಿರುವದು. ಅದು ದೇವರು ತನ್ನ ಜನರನ್ನು ಈಜಿಪ್ಟಿನಿಂದ ಬಿಡಿಸಿದ ಕಾಲದಂತಿರುವುದು.

ದೇವರಿಗೆ ಸ್ತೋತ್ರದ ಹಾಡು

12 ಆ ಸಮಯದಲ್ಲಿ ನೀನು ಹೀಗೆನ್ನುವೆ:
“ಯೆಹೋವನೇ, ನಾನು ನಿನ್ನನ್ನು ಸ್ತುತಿಸುವೆ!
ನೀನು ನನ್ನ ಮೇಲೆ ಕೋಪಿಸಿಕೊಂಡಿರುವೆ.
    ಆದರೆ ಈಗ ನೀನು ನನ್ನ ಮೇಲೆ ಕೋಪಗೊಳ್ಳಬೇಡ!
ನಿನ್ನ ಪ್ರೀತಿಯನ್ನು ನನ್ನ ಮೇಲೆ ತೋರಿಸು.
ದೇವರು ನನ್ನನ್ನು ರಕ್ಷಿಸುತ್ತಾನೆ.
    ಆತನಲ್ಲಿ ಭರವಸವಿಟ್ಟಿದ್ದೇನೆ. ಆದ್ದರಿಂದ ನಾನು ಭಯಪಡೆನು. ಆತನು ನನ್ನನ್ನು ರಕ್ಷಿಸುತ್ತಾನೆ.
ಯೆಹೋವನೇ ನನ್ನ ಬಲವು.
    ಆತನು ನನ್ನನ್ನು ರಕ್ಷಿಸುತ್ತಾನೆ. ನಾನು ಆತನಿಗೆ ಸ್ತೋತ್ರಗಾನ ಹಾಡುವೆನು.”

ರಕ್ಷಣೆಯೆಂಬ ಬುಗ್ಗೆಯಿಂದ ನೀರನ್ನು ತೆಗೆದುಕೊ.
    ಆಗ ನೀನು ಸಂತೋಷಗೊಳ್ಳುವೆ.
ಆಗ ನೀನು, “ಯೆಹೋವನಿಗೆ ಸ್ತೋತ್ರವಾಗಲಿ, ಆತನ ಹೆಸರಿನ ಮಹತ್ವವನ್ನು ವರ್ಣಿಸಿರಿ!
    ಆತನು ಜನಾಂಗಗಳಲ್ಲಿ ಮಾಡಿದ ಕಾರ್ಯಗಳನ್ನು ಸಾರಿರಿ.
    ಆತನ ಹೆಸರು ಮಹೋನ್ನತವೆಂದು ಜ್ಞಾಪಕಪಡಿಸಿರಿ!” ಎಂದು ಹೇಳುವೆ.
ಯೆಹೋವನಿಗೆ ಸ್ತೋತ್ರಗಾನ ಹಾಡಿರಿ.
    ಯಾಕೆಂದರೆ ಆತನು ಮಹಾಕಾರ್ಯಗಳನ್ನು ನಡೆಸಿದ್ದಾನೆ.
ದೇವರ ಬಗ್ಗೆ ಎಲ್ಲರಿಗೂ ಪ್ರಕಟಿಸಿರಿ. ಇಡೀ ಲೋಕಕ್ಕೆ ಸಾರಿರಿ.
    ಎಲ್ಲಾ ಜನರು ಇದನ್ನು ತಿಳಿಯಲಿ.
ಚೀಯೋನಿನ ನಿವಾಸಿಗಳೇ, ಇದರ ವಿಷಯವಾಗಿ ಹರ್ಷಧ್ವನಿ ಮಾಡಿರಿ.
    ಇಸ್ರೇಲರ ಪರಿಶುದ್ಧನು ನಿಮ್ಮೊಂದಿಗೆ ಬಲವಾಗಿದ್ದಾನೆ.
    ಆದ್ದರಿಂದ ಹರ್ಷಿಸಿರಿ.

ಬಾಬಿಲೋನಿಗೆ ದೇವರ ಸಂದೇಶ

13 ಆಮೋಚನ ಮಗನಾದ ಯೆಶಾಯನಿಗೆ ಬಾಬಿಲೋನಿನ ಬಗ್ಗೆ ದೊರೆತ ದೈವಸಂದೇಶ:

“ಬೋಳುಗುಡ್ಡದ ಮೇಲೆ ಧ್ವಜವನ್ನೆತ್ತಿರಿ.
    ಜನರನ್ನು ಕರೆಯಿರಿ;
ಕೈಸನ್ನೆ ಮಾಡಿರಿ;
    ದ್ವಾರಗಳ ಮೂಲಕ ಪ್ರವೇಶಿಸಲು ಪ್ರಮುಖರಿಗೆ ಹೇಳಿರಿ.

“ನಾನು ಅವರನ್ನು ಆ ಜನರಿಂದ ಪ್ರತ್ಯೇಕಿಸಿದ್ದೇನೆ;
    ನಾನೇ ಅವರಿಗೆ ಆಜ್ಞಾಪಿಸುವೆನು.
ನಾನು ಕೋಪಗೊಂಡಿರುವುದರಿಂದ ಆ ಜನರನ್ನು ಶಿಕ್ಷಿಸಲು ನನ್ನ ಉತ್ತಮವಾದ ಜನರನ್ನು ಒಟ್ಟಾಗಿ ಸೇರಿಸಿದ್ದೇನೆ.
    ಉತ್ಸಾಹಶಾಲಿಗಳಾದ ನನ್ನ ಜನರ ಬಗ್ಗೆ ನಾನು ಹೆಮ್ಮೆಪಡುತ್ತೇನೆ.

“ಪರ್ವತಗಳಲ್ಲಿ ಒಂದು ದೊಡ್ಡ ಶಬ್ದ ಕೇಳಿಸುತ್ತದೆ. ಆ ಶಬ್ದಕ್ಕೆ ಕಿವಿಗೊಡಿರಿ.
    ದೊಡ್ಡ ಜನಸಮೂಹದ ಶಬ್ದದಂತೆ ಕೇಳಿಸುತ್ತದೆ.
ಅನೇಕ ರಾಜ್ಯಗಳ ಜನರು ಒಟ್ಟಾಗಿ ಸೇರುತ್ತಿದ್ದಾರೆ.
    ಸರ್ವಶಕ್ತನಾದ ಯೆಹೋವನು ತನ್ನ ಸೈನ್ಯವನ್ನು ಒಟ್ಟುಗೂಡಿಸುತ್ತಿದ್ದಾನೆ.
ಯೆಹೋವನೂ ಆ ಸೈನ್ಯವೂ ದೂರದಿಂದ ಬರುತ್ತಿದ್ದಾರೆ.
    ದಿಗಂತದ ಆಚೆಯಿಂದ ಅವರು ಬರುತ್ತಿದ್ದಾರೆ.
ತನ್ನ ಸಿಟ್ಟನ್ನು ಪ್ರದರ್ಶಿಸುವದಕೋಸ್ಕರ ಯೆಹೋವನು ಈ ಸೈನ್ಯವನ್ನು ಉಪಯೋಗಿಸುವನು.
    ಈ ಸೈನ್ಯವು ಇಡೀ ಭೂಮಿಯನ್ನು ಹಾಳು ಮಾಡುವುದು.”

ಯೆಹೋವನ ದಿನವು ಹತ್ತಿರವಾಗಿದೆ. ಆದ್ದರಿಂದ ದುಃಖಿಸಿರಿ, ರೋಧಿಸಿರಿ. ವೈರಿಯು ಬಂದು ನಿಮ್ಮ ಐಶ್ವರ್ಯವನ್ನು ಸೂರೆಮಾಡುವ ಸಮಯವು ಬರುತ್ತದೆ. ಸರ್ವಶಕ್ತನಾದ ದೇವರು ಅದನ್ನು ನೆರವೇರಿಸುವನು. ಜನರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು. ಭಯದಿಂದ ಬಲಹೀನರಾಗುವರು. ಪ್ರತಿಯೊಬ್ಬರೂ ಭಯಪೀಡಿತರಾಗುವರು. ಯಾತನೆವೇದನೆಗಳು ಅವರನ್ನು ಆಕ್ರಮಿಸುವವು. ಪ್ರಸವವೇದನೆಯಿಂದ ನರಳುವ ಹೆಂಗಸಿನಂತೆ ಅವರ ಹೊಟ್ಟೆಯಲ್ಲಿ ನೋವು ಉಂಟಾಗುವದು; ಅವರ ಮುಖಗಳು ಬೆಂಕಿಯಂತೆ ಕೆಂಪಗಾಗುವವು. ಭಯದ ಮುಖವು ತಮ್ಮ ನೆರೆಯವರಲ್ಲಿಯೂ ಇರುವದನ್ನು ನೋಡಿ ಜನರು ಆಶ್ಚರ್ಯಪಡುವರು.

ಬಾಬಿಲೋನಿನ ವಿರುದ್ಧವಾಗಿ ದೇವರ ತೀರ್ಪು

ಇಗೋ, ಯೆಹೋವನ ದಿನವು ಬರುತ್ತಿದೆ. ಅದು ಭಯಂಕರವಾದ ದಿನವಾಗಿದೆ. ದೇವರು ಅತ್ಯಂತ ಕೋಪದಿಂದ ದೇಶವನ್ನೆಲ್ಲಾ ನಾಶಮಾಡುವನು; ದುಷ್ಟಜನರನ್ನೆಲ್ಲಾ ದೇಶವನ್ನು ಬಿಟ್ಟುಹೋಗುವಂತೆ ಮಾಡುವನು. 10 ಆಕಾಶವು ಕತ್ತಲಾಗುವದು; ಸೂರ್ಯ, ಚಂದ್ರ, ನಕ್ಷತ್ರಾದಿಗಳು ಪ್ರಕಾಶವನ್ನು ಕಳೆದುಕೊಳ್ಳುವವು.

11 ದೇವರು ಹೇಳುವುದೇನೆಂದರೆ: “ಈ ಲೋಕಕ್ಕೆ ನಾನು ಕೆಡುಕನ್ನು ಉಂಟುಮಾಡುವೆನು. ದುಷ್ಟಜನರನ್ನು ಅವರ ಪಾಪಗಳಿಗಾಗಿ ನಾನು ಶಿಕ್ಷಿಸುವೆನು. ಅಹಂಕಾರಿಗಳು ಗರ್ವವನ್ನು ಕಳೆದುಕೊಳ್ಳುವಂತೆ ಮಾಡುವೆನು; ಕೀಳುಜನರ ಹೊಗಳಿಕೆಗಳನ್ನು ನಿಲ್ಲಿಸುವೆನು. 12 ಬಂಗಾರವು ಯಾವ ರೀತಿಯಲ್ಲಿ ಅಪರೂಪವಾಗಿ ದೊರಕುವದೋ, ಅದೇ ಪ್ರಕಾರ ದೇಶದಲ್ಲಿ ಬಹು ಸ್ವಲ್ಪವೇ ಜನರು ಉಳಿಯುವದರಿಂದ ಅವರು ನೋಡಸಿಗುವದೇ ಅಪರೂಪ. ಅಂಥವರು ಚೊಕ್ಕಬಂಗಾರಕ್ಕಿಂತಲೂ ಬೆಲೆಬಾಳುವರು. 13 ನನ್ನ ಕೋಪದಿಂದ ಆಕಾಶಮಂಡಲವನ್ನು ನಡುಗಿಸುವೆನು. ಭೂಮಿಯನ್ನು ಅದರ ಸ್ಥಳದಿಂದ ಕದಲಿಸುವೆನು.”

ಸರ್ವಶಕ್ತನಾದ ಯೆಹೋವನು ತನ್ನ ಮಹಾಕೋಪವನ್ನು ಪ್ರದರ್ಶಿಸುವ ದಿನದಲ್ಲಿ ಅದು ನೆರವೇರುವುದು. 14 ಆಗ ಗಾಯಗೊಂಡ ಜಿಂಕೆಯಂತೆ ಬಾಬಿಲೋನು ಓಡಿಹೋಗುವದು. ಅವರು ಕುರುಬನಿಲ್ಲದ ಕುರಿಗಳಂತೆ ಚದರಿ ಹೋಗುವರು. ಪ್ರತಿಯೊಬ್ಬನು ಹಿಂದಿರುಗಿ ತನ್ನ ದೇಶಕ್ಕೂ ತನ್ನ ಜನರ ಬಳಿಗೂ ಓಡುವನು. 15 ಆದರೆ ಶತ್ರುವು ಬಾಬಿಲೋನಿನವರನ್ನು ಹಿಂದಟ್ಟಿಕೊಂಡು ಹೋಗುವನು. ಶತ್ರುವು ಅವನನ್ನು ಹಿಡಿದು ತನ್ನ ಕತ್ತಿಯಿಂದ ಕೊಲ್ಲುವನು. 16 ಅವರ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಕಿತ್ತುಕೊಳ್ಳುವರು; ಅವರ ಹೆಂಡತಿಯರನ್ನು ಬಲಾತ್ಕಾರದಿಂದ ಸಂಭೋಗಿಸುವರು; ಅವರ ಮಕ್ಕಳನ್ನು ಜನರ ಕಣ್ಣೆದುರಿನಲ್ಲಿಯೇ ಹೊಡೆದು ಸಾಯಿಸುವರು.

17 ದೇವರು ಹೇಳುವುದೇನೆಂದರೆ: “ಮೇದ್ಯರ ಸೈನ್ಯವು ಬಾಬಿಲೋನನ್ನು ಮುತ್ತುವಂತೆ ಮಾಡುವೆನು. ಮೇದ್ಯರ ಸೈನ್ಯಕ್ಕೆ ಬೆಳ್ಳಿಬಂಗಾರ ಸುರಿಸಿದರೂ ಅವರು ಬಾಬಿಲೋನಿನ ಮೇಲೆ ಧಾಳಿ ಮಾಡುವದನ್ನು ನಿಲ್ಲಿಸುವದಿಲ್ಲ. 18 ಸೈನಿಕರು ಬಾಬಿಲೋನಿನ ಯುವಕರನ್ನು ಹಿಡಿದು ಕೊಲ್ಲುವರು. ಶಿಶುಗಳಿಗೂ ದಯೆತೋರುವುದಿಲ್ಲ; ಮಕ್ಕಳಿಗೆ ಕರುಣೆತೋರುವುದಿಲ್ಲ. 19 ಬಾಬಿಲೋನು ಸೊದೋಮ್ ಗೊಮೋರಗಳಂತೆ ನಾಶವಾಗುವದು. ದೇವರೇ ಇದನ್ನು ಮಾಡುವನು. ಆಗ ಅಲ್ಲಿ ಏನೂ ಉಳಿಯದು.

“ಎಲ್ಲಾ ರಾಜ್ಯಗಳಿಗಿಂತ ಬಾಬಿಲೋನ್ ಬಹಳ ಸುಂದರವಾಗಿದೆ. ಬಾಬಿಲೋನಿಯರು ತಮ್ಮ ನಗರದ ಬಗ್ಗೆ ತುಂಬಾ ಹೆಚ್ಚಳಪಡುತ್ತಾರೆ. 20 ಆದರೆ ಬಾಬಿಲೋನ್ ಇನ್ನು ಮುಂದೆ ಸುಂದರವಾಗಿರದು. ಮುಂದಿನ ದಿವಸಗಳಲ್ಲಿ, ಜನರು ಅಲ್ಲಿ ವಾಸಿಸರು. ಅರಬ್ಬಿಯರು ತಮ್ಮ ಗುಡಾರಗಳನ್ನು ಅಲ್ಲಿ ಹಾಕುವದಿಲ್ಲ. ಕುರುಬರು ತಮ್ಮ ಮಂದೆಯನ್ನು ಮೇಯಿಸಲು ಅಲ್ಲಿಗೆ ಬರುವದಿಲ್ಲ. 21 ಅಲ್ಲಿ ಮರುಭೂಮಿಯ ಕಾಡುಪ್ರಾಣಿಗಳು ಮಾತ್ರವೇ ವಾಸಿಸುವವು. ಜನರು ಬಾಬಿಲೋನಿನಲ್ಲಿರುವ ತಮ್ಮ ಮನೆಗಳಲ್ಲಿ ವಾಸಿಸುವದಿಲ್ಲ. ಅವರ ಮನೆಗಳಲ್ಲಿ ಗೂಬೆಗಳು ಮತ್ತು ಉಷ್ಟ್ರಪಕ್ಷಿಗಳು ವಾಸಮಾಡುವವು. ಕಾಡುಮೇಕೆಗಳು ಮನೆಯೊಳಗೆ ಆಡುವವು. 22 ಕಾಡುನಾಯಿ ಮತ್ತು ತೋಳಗಳು ಬಾಬಿಲೋನಿನ ಭವ್ಯಭವನಗಳೊಳಗಿಂದ ಅರಚುವವು. ಬಾಬಿಲೋನ್ ಕೊನೆಗೊಳ್ಳುವುದು. ಅದರ ಅಂತ್ಯವು ಸಮೀಪದಲ್ಲಿಯೇ ಇದೆ. ಅದರ ಪೂರ್ಣ ನಾಶನಕ್ಕಾಗಿ ನಾನು ಇನ್ನು ಹೆಚ್ಚು ಹೊತ್ತು ಕಾಯುವದಿಲ್ಲ.”

ಎಫೆಸದವರಿಗೆ 4

ದೇಹದ ಐಕ್ಯತೆ

ನಾನು ಪ್ರಭುವಿಗೆ ಸೇರಿದವನಾದ್ದರಿಂದ ಸೆರೆಯಲ್ಲಿದ್ದೇನೆ. ನೀವು ದೇವರಿಂದ ಕರಯಲ್ಪಟ್ಟಿದ್ದೀರಿ. ಆದ್ದರಿಂದ ನಿಮ್ಮ ಕರೆಯುವಿಕೆಗೆ ತಕ್ಕಂತೆ ಯೋಗ್ಯವಾಗಿ ಜೀವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಯಾವಾಗಲೂ ದೀನತೆಯಿಂದ, ಸಾತ್ವಿಕತೆಯಿಂದ ಮತ್ತು ತಾಳ್ಮೆಯಿಂದ ಕೂಡಿದವರಾಗಿದ್ದು ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ. ನೀವು ಆತ್ಮನ ಮೂಲಕವಾಗಿ ಸಮಾಧಾನವೆಂಬ ಬಂಧನದಿಂದ ಒಂದಾಗಿದ್ದೀರಿ. ಈ ರೀತಿ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ಸಮಾಧಾನವು ನಿಮ್ಮೆಲ್ಲರನ್ನು ಒಂದಾಗಿಸಲಿ. ದೇಹವು ಒಂದೇ ಮತ್ತು ಆತ್ಮನು ಒಬ್ಬನೇ. ನೀವೆಲ್ಲರೂ ಒಂದೇ ನಿರೀಕ್ಷೆಯನ್ನು ಹೊಂದಿರಬೇಕೆಂದು ದೇವರು ನಿಮ್ಮನ್ನು ಕರೆದನು. ಒಬ್ಬನೇ ಪ್ರಭು, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ. ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಸಮಸ್ತವನ್ನೂ ಆಳುತ್ತಾನೆ. ಆತನು ಸರ್ವವ್ಯಾಪಿಯಾಗಿದ್ದಾನೆ ಮತ್ತು ಎಲ್ಲರಲ್ಲಿ ವಾಸಿಸುವವನಾಗಿದ್ದಾನೆ.

ಕ್ರಿಸ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ವರವನ್ನು ಕೊಟ್ಟಿದ್ದಾನೆ. ಪ್ರತಿಯೊಬ್ಬನು ಕ್ರಿಸ್ತನ ಇಷ್ಟಾನುಸಾರವಾಗಿ ವರವನ್ನು ಪಡೆದುಕೊಂಡಿದ್ದಾನೆ. ಆದಕಾರಣವೇ ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆದಿದೆ:

“ಆತನು ಆಕಾಶದ ಉನ್ನತಸ್ಥಾನಕ್ಕೆ ಏರಿಹೋದಾಗ,
    ಶತ್ರುಗಳನ್ನು ಸೆರೆಯಾಳುಗಳಾಗಿ ಕೊಂಡೊಯ್ದು ಜನರಿಗೆ ದಾನಗಳನ್ನು ಮಾಡಿದನು.”(A)

“ಆತನು ಉನ್ನತಸ್ಥಾನಕ್ಕೆ ಏರಿಹೋದನು” ಎಂದರೆ ಆತನು ಭೂಲೋಕಕ್ಕೆ ಇಳಿದುಬಂದು, 10 ಭೂಮಿಯ ಅಧೋಭಾಗಕ್ಕೆ ಇಳಿದುಹೋಗಿ, ಅಲ್ಲಿಂದ ಆಕಾಶದ ಅತ್ಯುನ್ನತಸ್ಥಾನಕ್ಕೆ ಏರಿಹೋದನು ಎಂದರ್ಥ. ಸಮಸ್ತದಲ್ಲಿ ತಾನೇ ತುಂಬಿರಬೇಕೆಂದು ಕ್ರಿಸ್ತನು ಹಾಗೆ ಮಾಡಿದನು. 11 ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಉಪದೇಶಕರನ್ನಾಗಿಯೂ ನೇಮಿಸಿದನು. 12 ಸಭೆಯ ಸೇವೆಗೋಸ್ಕರ ದೇವರ ಪರಿಶುದ್ಧ ಜನರನ್ನು ಸಿದ್ಧಪಡಿಸುವುದಕ್ಕಾಗಿ ಆತನು ಅವರನ್ನು ನೇಮಿಸಿದನು. 13 ನಾವೆಲ್ಲರೂ ಒಂದೇ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಐಕ್ಯರಾಗುವತನಕ ಈ ಸೇವೆಯು ಮುಂದುವರಿಯಬೇಕು. ನಾವು ಪರಿಪೂರ್ಣರಾಗುವ ತನಕ ಅಂದರೆ ಕ್ರಿಸ್ತನ ಸರ್ವಸಂಪೂರ್ಣತೆಯನ್ನು ಮುಟ್ಟುವತನಕ ಬೆಳೆಯಬೇಕು.

14 ನಾವು ಇನ್ನು ಮೇಲೆ ಕೂಸುಗಳಾಗಿರಬಾರದು. ಸಮುದ್ರದ ಅಲೆಗಳಿಂದ ಅತ್ತಿಂದಿತ್ತ ಚಲಿಸುವ ಹಡಗಿನಂತೆ ಚಂಚಲರಾಗಿರಬಾರದು. ನಮ್ಮನ್ನು ವಂಚಿಸುವುದಕ್ಕಾಗಿ ಜನರು ಹೇಳುವ ಯಾವುದೇ ಹೊಸ ಉಪದೇಶದಿಂದಾಗಲಿ ನಾವು ಚಂಚಲರಾಗಬಾರದು. ಜನರನ್ನು ಮೋಸಗೊಳಿಸಿ ಕೆಟ್ಟದಾರಿಗೆ ನಡೆಸಬೇಕೆಂಬ ಉದ್ದೇಶದಿಂದ ಆ ದುರ್ಬೋಧಕರು ನಾನಾ ಬಗೆಯ ಕುತಂತ್ರವನ್ನು ಮಾಡುತ್ತಾರೆ. 15 ನಾವಾದರೊ ಸತ್ಯವನ್ನು ಪ್ರೀತಿಯಿಂದ ಹೇಳಬೇಕು; ಎಲ್ಲಾ ವಿಷಯಗಳಲ್ಲಿಯೂ ಬೆಳೆದು ಕ್ರಿಸ್ತನಂತಾಗಲು ಪ್ರಯತ್ನಿಸಬೇಕು. ಕ್ರಿಸ್ತನು ಶಿರಸ್ಸಾಗಿದ್ದಾನೆ ಮತ್ತು ನಾವು ದೇಹವಾಗಿದ್ದೇವೆ. 16 ಇಡೀ ದೇಹವು ಕ್ರಿಸ್ತನನ್ನು ಅವಲಂಬಿಸಿಕೊಂಡಿದೆ. ದೇಹದ ಒಂದೊಂದು ಅಂಗಗಳೂ ಒಂದಕ್ಕೊಂದು ಬಿಗಿದುಕೊಂಡಿವೆ. ಪ್ರತಿಯೊಂದು ಅಂಗವು ತನ್ನದೇ ಆದ ಕೆಲಸವನ್ನು ಮಾಡುವುದರಿಂದ ಇಡೀ ದೇಹವು ಬೆಳೆದು ಪ್ರೀತಿಯಲ್ಲಿ ಬಲವಾಗಿರಲು ಸಾಧ್ಯವಾಗುತ್ತದೆ.

ನೀವು ಜೀವಿಸಬೇಕಾದ ರೀತಿ

17 ಪ್ರಭುವಿಗೋಸ್ಕರ ನಾನು ನಿಮಗೆ ಇದನ್ನು ಹೇಳುತ್ತೇನೆ ಮತ್ತು ಎಚ್ಚರಿಸುತ್ತೇನೆ. ಅವಿಶ್ವಾಸಿಗಳಂತೆ ಇನ್ನು ಮೇಲೆ ಜೀವಿಸದಿರಿ. ಅವರ ಆಲೋಚನೆಗಳು ನಿಷ್ಪ್ರಯೋಜಕವಾಗಿವೆ. 18 ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಕಿವಿಗೊಡದ ಕಾರಣ ಅವರಿಗೆ ಏನೂ ಗೊತ್ತಿಲ್ಲ. ಆದ್ದರಿಂದ ದೇವರು ಕೊಡುವ ಜೀವಿತವನ್ನು ಹೊಂದಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. 19 ಅವರಿಗೆ ನಾಚಿಕೆಯೇ ಇಲ್ಲ. ಅವರು ತಮ್ಮ ಜೀವಿತಗಳನ್ನು ದುಷ್ಕೃತ್ಯಗಳಿಗೆ ಉಪಯೋಗಿಸುತ್ತಾರೆ; ಎಲ್ಲಾ ಬಗೆಯ ಕೆಟ್ಟಕಾರ್ಯಗಳನ್ನು ಇನ್ನೂ ಹೆಚ್ಚೆಚ್ಚಾಗಿ ಮಾಡಲು ತವಕಪಡುತ್ತಾರೆ. 20 ಆದರೆ ಕ್ರಿಸ್ತನಿಂದ ನೀವು ಕಲಿತುಕೊಂಡದ್ದು ಅವುಗಳನ್ನಲ್ಲ. 21 ನೀವು ಆತನ ವಿಷಯವಾಗಿ ಕೇಳಿದ್ದೀರೆಂಬುದು ನನಗೆ ಗೊತ್ತಿದೆ. ನೀವು ಆತನಲ್ಲಿರುವುದರಿಂದ ಸತ್ಯವನ್ನು ಕಲಿತುಕೊಂಡಿರಿ. ಹೌದು, ಸತ್ಯವು ಯೇಸುವಿನಲ್ಲಿದೆ. 22 ನೀವು ನಿಮ್ಮ ಹಿಂದಿನ ಕೆಟ್ಟ ನಡತೆಯನ್ನು ಬಿಟ್ಟುಬಿಡಬೇಕೆಂಬುದನ್ನು ಅಂದರೆ ನಿಮ್ಮ ಹಳೆಯ ಸ್ವಭಾವವನ್ನು ತೊರೆದುಬಿಡಬೇಕೆಂಬುದನ್ನು ಕಲಿತುಕೊಂಡಿರಿ. ಜನರು ತಾವು ಮಾಡ ಬಯಸುವ ದುಷ್ಕೃತ್ಯಗಳಿಂದ ವಂಚಿತರಾಗಿರುವುದರಿಂದ ಆ ಹಳೆಯ ಸ್ವಭಾವವು ದಿನದಿಂದ ದಿನಕ್ಕೆ ಮತ್ತಷ್ಟು ಕೆಟ್ಟು ಹೋಗುತ್ತದೆ. 23 ಆದರೆ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಹೊಂದಿಕೊಳ್ಳತಕ್ಕ ರೀತಿಯನ್ನು ನೀವು ಕಲಿತುಕೊಂಡಿರಿ. 24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯವಾದ ನೀತಿಯುಳ್ಳದಾಗಿಯೂ ಪರಿಶುದ್ಧವಾಗಿಯೂ ನಿರ್ಮಿಸಲ್ಪಟ್ಟಿದೆ.

25 ಆದ್ದರಿಂದ ನೀವು ಸುಳ್ಳು ಹೇಳದೆ ಒಬ್ಬರಿಗೊಬ್ಬರು ಯಾವಾಗಲೂ ಸತ್ಯವನ್ನೇ ಹೇಳಿರಿ. ಏಕೆಂದರೆ ನಾವೆಲ್ಲರೂ ಒಂದೇ ದೇಹಕ್ಕೆ ಸೇರಿದ ಅಂಗಗಳಾಗಿದ್ದೇವೆ. 26 ಕೋಪಗೊಂಡರೂ ಪಾಪ ಮಾಡಬೇಡಿ ಮತ್ತು ದಿನವೆಲ್ಲಾ ಕೋಪದಿಂದಿರಬೇಡಿ.(B) 27 ನಿಮ್ಮನ್ನು ಸೋಲಿಸಲು ಸೈತಾನನಿಗೆ ಅವಕಾಶಕೊಡಬೇಡಿ. 28 ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.

29 ನಿಮ್ಮ ಬಾಯಿಂದ ಕೆಟ್ಟ ಮಾತುಗಳು ಬಾರದಿರಲಿ. ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. 30 ಪವಿತ್ರಾತ್ಮನನ್ನು ದುಃಖಪಡಿಸಬೇಡಿ. ನೀವು ದೇವರಿಗೆ ಸೇರಿದವರೆಂಬುದಕ್ಕೆ ಆತನೇ ದೇವರ ಪ್ರಮಾಣವಾಗಿದ್ದಾನೆ. ಸೂಕ್ತ ಸಮಯದಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇನೆ ಎಂಬುದನ್ನು ತೋರಿಸುವುದಕ್ಕಾಗಿಯೇ ದೇವರು ನಿಮಗೆ ಆತನನ್ನು ಕೊಟ್ಟನು. 31 ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. 32 ಒಬ್ಬರಿಗೊಬ್ಬರು ಕರುಣೆ ತೋರಿರಿ. ಒಬ್ಬರನ್ನೊಬ್ಬರು ಪ್ರೀತಿಸಿರಿ. ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆ ನೀವೂ ಒಬ್ಬರನ್ನೊಬ್ಬರು ಕ್ಷಮಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International