Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 41-42

ನಿರ್ಮಾಣಿಕನಾದ ಯೆಹೋವನು ನಿರಂತರವೂ ಜೀವಿಸುವನು

41 ಯೆಹೋವನು ಹೇಳುವುದೇನೆಂದರೆ:
“ಬಹು ದೂರದಲ್ಲಿರುವ ಜನಾಂಗಗಳವರೇ, ಮೌನವಾಗಿದ್ದು ನನ್ನ ಬಳಿಗೆ ಬನ್ನಿರಿ.
ಜನಾಂಗಗಳೇ, ಮತ್ತೆ ಬಲಿಷ್ಠರಾಗಿರಿ.
    ನನ್ನ ಬಳಿಗೆ ಬಂದು ನನ್ನೊಂದಿಗೆ ಮಾತಾಡಿರಿ.
ನಾವು ಒಟ್ಟಾಗಿ ಸೇರಿಬಂದು
    ಯಾರು ಸರಿ ಎಂದು ವಾದಿಸೋಣ!
ಈ ಪ್ರಶ್ನೆಗಳಿಗೆ ಉತ್ತರಿಸಿರಿ: ಪೂರ್ವದಿಕ್ಕಿನಿಂದ ಬರುವ ಮನುಷ್ಯನನ್ನು ಎಚ್ಚರಿಸಿದವರು ಯಾರು?
    ಅವನು ಒಳ್ಳೆಯತನವನ್ನು ತನ್ನೊಂದಿಗಿರಲು ಕೇಳುತ್ತಾನೆ.
ತನ್ನ ಖಡ್ಗವನ್ನು ಉಪಯೋಗಿಸಿ ಜನಾಂಗಗಳನ್ನು ಸೋಲಿಸುವನು.
    ಅವರನ್ನು ಧೂಳಿನಂತೆ ಮಾಡುವನು. ತನ್ನ ಬಿಲ್ಲನ್ನು ಉಪಯೋಗಿಸಿ ರಾಜರನ್ನು ವಶಪಡಿಸಿಕೊಳ್ಳುತ್ತಾನೆ.
    ಅವರು ಗಾಳಿಯಲ್ಲಿ ತೂರಾಡುವ ಹುಲ್ಲಿನಂತೆ ಓಡಿಹೋಗುವರು.
ಅವನು ಸೈನ್ಯವನ್ನು ಓಡಿಸಿದರೂ ಗಾಯಗೊಳ್ಳುವದಿಲ್ಲ.
    ತಾನು ಹಿಂದೆಂದೂ ಹೋಗದ ಸ್ಥಳಗಳಿಗೆ ಹೋಗುವನು.
ಇವೆಲ್ಲಾ ನೆರವೇರುವಂತೆ ಮಾಡಿದವರು ಯಾರು?
    ಆದಿಯಿಂದ ಎಲ್ಲಾ ಜನರನ್ನು ಕರೆದವರು ಯಾರು?
    ಯೆಹೋವನೆಂಬ ನಾನೇ ಇವೆಲ್ಲವನ್ನು ಮಾಡಿದೆನು.
ನಾನೇ ಮೊದಲನೆಯವನಾಗಿದ್ದೇನೆ.
    ಅನಾದಿಕಾಲಕ್ಕಿಂತ ಮೊದಲು ನಾನಿದ್ದೆನು.
    ಎಲ್ಲವೂ ಅಂತ್ಯವಾಗುವ ತನಕ ನಾನು ಇರುತ್ತೇನೆ.
ದೂರ ಸ್ಥಳಗಳವರೇ,
    ನೋಡಿರಿ, ಭಯಗೊಳ್ಳಿರಿ.
ಭೂಮಿಯ ಕಟ್ಟಕಡೆಗಿರುವ ದೇಶಗಳೇ,
    ಭಯದಿಂದ ನಡುಗಿರಿ.
ನನ್ನ ಬಳಿಗೆ ಬಂದು
    ನನ್ನ ಮಾತನ್ನು ಕೇಳಿರಿ ಎಂದಾಗ ಅವರು ಬಂದರು.

“ಕೆಲಸಗಾರರು ಒಬ್ಬರಿಗೊಬ್ಬರು ಸಹಾಯ ಮಾಡುವರು. ಅವರು ಬಲಶಾಲಿಗಳಾಗಬೇಕೆಂದು ಪರಸ್ಪರ ಪ್ರೋತ್ಸಾಹಿಸುವರು. ಒಬ್ಬ ಕೆಲಸಗಾರನು ಮರವನ್ನು ಕಡಿದು ಅದರಿಂದ ವಿಗ್ರಹವನ್ನು ಮಾಡುವನು. ಅವನು ಬಂಗಾರದ ಕೆಲಸದವನನ್ನು ಪ್ರೋತ್ಸಾಹಿಸುವನು. ಇನ್ನೊಬ್ಬನು ತನ್ನ ಸುತ್ತಿಗೆಯಿಂದ ತಗಡನ್ನು ಸಮತಟ್ಟು ಮಾಡುವನು. ಅವನು ಕಬ್ಬಿಣದ ಕೆಲಸದವನನ್ನು ಪ್ರೋತ್ಸಾಹಿಸುವನು. ಈ ಕೆಲಸದವನು ‘ಇದು ಒಳ್ಳೆಯ ಕೆಲಸ. ತಗಡು ಹೊರಗೆ ಬರಲಾರದು’ ಎಂದು ಹೇಳಿ ಆ ವಿಗ್ರಹವನ್ನು ಪೀಠಕ್ಕೆ ಮೊಳೆ ಹೊಡೆದು ಭದ್ರಪಡಿಸುವನು. ಈಗ ವಿಗ್ರಹವು ಅಲ್ಲಾಡುವದಿಲ್ಲ, ಕೆಳಕ್ಕೆ ಬೀಳುವದಿಲ್ಲ.”

ಯೆಹೋವನೊಬ್ಬನೇ ನಮ್ಮನ್ನು ರಕ್ಷಿಸುವನು

ಯೆಹೋವನು ಹೀಗೆನ್ನುತ್ತಾನೆ, “ಇಸ್ರೇಲೇ, ನೀನು ನನ್ನ ಸೇವಕನಾಗಿರುವೆ.
    ಯಾಕೋಬೇ, ನಾನು ನಿನ್ನನ್ನು ಆರಿಸಿಕೊಂಡೆನು.
    ನೀನು ನನ್ನ ಸ್ನೇಹಿತನಾದ ಅಬ್ರಹಾಮನ ಕುಟುಂಬದವನಾಗಿರುವೆ.
ನೀನು ದೂರದೇಶದಲ್ಲಿದ್ದೆ.
    ಆದರೆ ಕೈಚಾಚಿ ಆ ದೇಶದಿಂದ ನಿನ್ನನ್ನು ಕರೆದೆನು.
    ‘ನೀನು ನನ್ನ ಸೇವಕ’ ಎಂದು ಹೇಳಿದೆನು.
ನಾನು ನಿನ್ನನ್ನು ಆರಿಸಿಕೊಂಡೆನು.
    ಆದರೆ ನಿನ್ನನ್ನು ತಳ್ಳಿಬಿಡಲಿಲ್ಲ.
10 ನಾನೇ ನಿನ್ನ ಸಂಗಡವಿದ್ದೇನೆ. ಆದ್ದರಿಂದ ಚಿಂತಿಸದಿರು.
    ನಾನೇ ನಿನ್ನ ದೇವರು, ಆದ್ದರಿಂದ ಭಯಪಡಬೇಡ.
ನಿನ್ನನ್ನು ಬಲಪಡಿಸುವೆನು.
    ನಿನಗೆ ಸಹಾಯ ಮಾಡುವೆನು.
ನನ್ನ ನೀತಿಯ ಬಲಗೈಯಿಂದ ನಿನಗೆ ಆಧಾರ ಕೊಡುವೆನು.
11 ನೋಡು, ಕೆಲವರು ನಿನ್ನ ಮೇಲೆ ಕೋಪಗೊಂಡಿದ್ದಾರೆ.
    ಆದರೆ ಅವರು ನಾಚಿಕೆಪಡುವರು.
ನಿನ್ನ ಶತ್ರುಗಳು ಕಳೆದುಹೋಗಿ ಕಾಣದೆಹೋಗುವರು.
12 ನಿನಗೆ ವಿರುದ್ಧವಾಗಿದ್ದ ಜನರನ್ನು ನೀನು ಹುಡುಕುವೆ.
    ಆದರೆ ಅವರು ನಿನಗೆ ಕಾಣಿಸುವುದಿಲ್ಲ.
ನಿನ್ನ ವಿರುದ್ಧವಾಗಿ ಯುದ್ಧ ಮಾಡಿದವರು ಕಾಣದೆಹೋಗುವರು.
13 ನಿನ್ನ ದೇವರಾದ ಯೆಹೋವನು ನಾನೇ.
    ನಾನು ನಿನ್ನ ಬಲಗೈಯನ್ನು ಹಿಡಿದಿದ್ದೇನೆ.
‘ನೀನು ಹೆದರಬೇಡ, ನಾನೇ ನಿನಗೆ ಸಹಾಯ ಮಾಡುತ್ತೇನೆ’
    ಎಂದು ಹೇಳುತ್ತಿದ್ದೇನೆ.
14     ನನಗೆ ಅಮೂಲ್ಯವಾದ ಯಾಕೋಬೇ, ಭಯಪಡಬೇಡ.
    ನನ್ನ ಪ್ರಿಯ ಇಸ್ರೇಲೇ, ಹೆದರಬೇಡ.
ನಾನು ನಿಜವಾಗಿಯೂ ನಿನಗೆ ಸಹಾಯ ಮಾಡುತ್ತೇನೆ.”

ಇದು ಯೆಹೋವನ ನುಡಿ.

“ಇಸ್ರೇಲರ ಪರಿಶುದ್ಧನೂ ನಿನ್ನನ್ನು ರಕ್ಷಿಸುವಾತನೂ
    ಈ ಮಾತುಗಳನ್ನು ಹೇಳಿದ್ದಾನೆ:
15 ಇಗೋ, ನಾನು ನಿನ್ನನ್ನು ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ. ಅದಕ್ಕೆ ಅನೇಕ ಹರಿತವಾದ ಹಲ್ಲುಗಳಿವೆ.
    ಬೇಸಾಯಗಾರರು ಧಾನ್ಯವನ್ನು ಹುಲ್ಲಿನಿಂದ ಪ್ರತ್ಯೇಕಿಸುವದಕ್ಕಾಗಿ ಅದನ್ನು ಉಪಯೋಗಿಸುವರು.
    ನೀವು ಬೆಟ್ಟದ ಶಿಖರಗಳಲ್ಲಿ ತುಳಿದಾಡಿ ಅದನ್ನು ಪುಡಿ ಮಾಡುವಿರಿ.
    ಆ ಬೆಟ್ಟಗಳನ್ನು ನೀವು ಕುಂಟೆಯಂತೆ ಮಾಡುವಿರಿ.
16 ನೀವು ಅವುಗಳನ್ನು ಗಾಳಿಗೆ ತೂರಿಬಿಡುವಿರಿ.
    ಗಾಳಿಯು ಅವುಗಳನ್ನು ಹಾರಿಸಿ ಚದರಿಸಿಬಿಡುವುದು.
ಆಗ ನೀವು ಯೆಹೋವನಲ್ಲಿ ಸಂತಸಪಡುವಿರಿ.
    ಇಸ್ರೇಲರ ಪರಿಶುದ್ಧನಲ್ಲಿ ಹೆಚ್ಚಳಪಡುವಿರಿ.

17 “ಬಡಜನರು ನೀರಿಗಾಗಿ ಹುಡುಕಾಡುವರು.
    ಆದರೆ ನೀರು ಅವರಿಗೆ ದೊರಕುವದಿಲ್ಲ.
    ಅವರು ದಾಹಗೊಂಡಿದ್ದಾರೆ, ಅವರ ನಾಲಿಗೆ ಒಣಗಿಹೋಗಿದೆ.
ನಾನು ಅವರ ಮೊರೆಯನ್ನು ಕೇಳುವೆನು.
    ನಾನು ಅವರನ್ನು ತೊರೆಯುವುದಿಲ್ಲ, ಅವರನ್ನು ಸಾಯಲು ಬಿಡುವುದಿಲ್ಲ.
18 ಒಣಬೆಟ್ಟಗಳಲ್ಲಿ ನದಿಗಳು ಹರಿಯುವಂತೆ ನಾನು ಮಾಡುವೆನು.
    ಕಣಿವೆಗಳ ಮೂಲಕ ಬುಗ್ಗೆಯ ನೀರು ಹರಿಯುವಂತೆ ಮಾಡುವೆನು.
ಮರುಭೂಮಿಯನ್ನು ಸರೋವರವನ್ನಾಗಿ ಮಾಡುವೆನು.
    ಆ ಒಣನೆಲದಲ್ಲಿ ನೀರಿನ ಬುಗ್ಗೆಗಳು ಕಾಣುವವು.
19 ಮರುಭೂಮಿಯ ಮೇಲೆ ಮರಗಳು ಬೆಳೆಯುವವು.
    ಅಲ್ಲಿ ದೇವದಾರು, ಆಲೀವ್, ಕಸ್ತೂರಿಜಾಲಿ, ತುರಾಯಿ, ತಪಸಿ ಮತ್ತು ತಿಲಕ ವೃಕ್ಷಗಳು ಇರುವವು.
20 ಜನರು ಇವುಗಳನ್ನು ನೋಡಿ,
    ಇವು ಯೆಹೋವನ ಶಕ್ತಿಯಿಂದ ಆದವು ಎಂದು ತಿಳಿದುಕೊಳ್ಳುವರು.
ಜನರು ಈ ಸಂಗತಿಗಳನ್ನು ನೋಡಿ ಇಸ್ರೇಲರ ಪರಿಶುದ್ಧನಾದ ಯೆಹೋವನೇ
    ಇವುಗಳನ್ನು ಮಾಡಿದನೆಂದು ತಿಳಿದುಕೊಳ್ಳುವರು.”

ಸುಳ್ಳುದೇವರಿಗೆ ಯೆಹೋವನ ಸವಾಲು

21 ಯಾಕೋಬ್ಯರ ಅರಸನಾದ ಯೆಹೋವನು ಹೇಳುವುದೇನೆಂದರೆ: “ಬನ್ನಿ ನಿಮ್ಮ ವಾದಗಳನ್ನು ಮಂಡಿಸಿರಿ, ನಿಮ್ಮ ಆಧಾರಗಳನ್ನು ತೋರಿಸಿರಿ. 22 ನಿಮ್ಮ ವಿಗ್ರಹಗಳು ನಮ್ಮ ಬಳಿಗೆ ಬಂದು ನಡೆಯುತ್ತಿರುವುದನ್ನು ತಿಳಿಸಲಿ. ಪ್ರಾರಂಭದಲ್ಲಿ ನಡೆದಿದ್ದೇನು? ಮುಂದೆ ನಡೆಯಲಿರುವುದೇನು? ನಮಗೆ ತಿಳಿಸಿರಿ. ನಾವು ಸೂಕ್ಷ್ಮವಾಗಿ ಕೇಳಿ ಭವಿಷ್ಯವನ್ನು ತಿಳಿದುಕೊಳ್ಳುವೆವು. 23 ಮುಂದೆ ಸಂಭವಿಸುವುದನ್ನು ತಿಳಿದುಕೊಳ್ಳಲು ನಾವು ಯಾವ ಸೂಚನೆಗಳಿಗಾಗಿ ಎದುರು ನೋಡಬೇಕು? ತಿಳಿಸಿರಿ. ನೀವೇ ದೇವರುಗಳೆಂದು ಆಗ ನಮಗೆ ಖಚಿತವಾಗುವುದು. ಏನನ್ನಾದರೂ ಮಾಡಿರಿ. ಯಾವದನ್ನಾದರೂ ಮಾಡಿರಿ. ಒಳ್ಳೆಯದನ್ನು, ಕೆಟ್ಟದ್ದನ್ನು ಮಾಡಿರಿ. ಆಗ ನೀವು ಜೀವವುಳ್ಳವರೆಂದು ತಿಳಿದು ನಿಮಗೆ ಗೌರವಿಸಿ, ಭಯಪಟ್ಟು ನಿಮ್ಮನ್ನು ಹಿಂಬಾಲಿಸುವೆವು.

24 “ಸುಳ್ಳುದೇವರುಗಳೇ, ಕೇಳಿ. ನೀವು ಶೂನ್ಯಕ್ಕಿಂತ ಕಡಿಮೆಯಾದವರು. ನೀವು ಏನನ್ನೂ ಮಾಡಲಾರಿರಿ. ದೇವರ ದೃಷ್ಠಿಯಲ್ಲಿ ತುಚ್ಛನಾದವನು ಮಾತ್ರ ನಿಮ್ಮನ್ನು ಪೂಜಿಸುವನು.”

ಯೆಹೋವನೊಬ್ಬನೇ ದೇವರು

25 “ಉತ್ತರದಿಕ್ಕಿನಲ್ಲಿರುವ ಒಬ್ಬ ಮನುಷ್ಯನನ್ನು ನಾನು ಎಚ್ಚರಪಡಿಸಿದೆನು.
    ಅವನು ಪೂರ್ವದಿಕ್ಕಿನಿಂದ ಬರುವನು.
    ನನ್ನ ನಾಮವನ್ನು ಅವನು ಆರಾಧಿಸುವನು.
ಕುಂಬಾರನು ಜೇಡಿಮಣ್ಣನ್ನು ತುಳಿದು ಹದಗೊಳಿಸುವಂತೆ ಅವನು ಅರಸರುಗಳ ಮೇಲೆ ತುಳಿದಾಡುವನು.

26 “ಇವುಗಳು ಸಂಭವಿಸುವ ಮೊದಲೇ ಇವುಗಳನ್ನು ತಿಳಿಸಿದಾತನನ್ನೇ ದೇವರೆಂದು ಕರೆಯಬೇಕು.
    ನಿಮ್ಮ ವಿಗ್ರಹಗಳಲ್ಲಿ ಯಾವದಾದರೂ ನಮಗೆ ಇದನ್ನು ತಿಳಿಸಿತೋ?
ಯಾವ ವಿಗ್ರಹವೂ ನಮಗೆ ಇವುಗಳ ವಿಷಯದಲ್ಲಿ ತಿಳಿಸಲಿಲ್ಲ.
    ಆ ವಿಗ್ರಹಗಳು ಒಂದು ಮಾತನ್ನಾದರೂ ಹೇಳಲಿಲ್ಲ;
    ಮತ್ತು ನೀವು ಹೇಳಿದ್ದನ್ನು ಆ ಸುಳ್ಳುದೇವರುಗಳು ಕೇಳಿಸಿಕೊಳ್ಳುವದೂ ಇಲ್ಲ.
27 ಈ ವಿಷಯಗಳ ಬಗ್ಗೆ ತಿಳಿಸಿದವರಲ್ಲಿ ಯೆಹೋವನೆಂಬ ನಾನೇ ಮೊದಲನೆಯವನು.
    ‘ನೋಡು ನಿನ್ನ ಜನರು ಹಿಂತಿರುಗಿ ಬರುತ್ತಿದ್ದಾರೆ’
    ಎಂಬ ಸಂದೇಶವನ್ನು ನಾನು ಜೆರುಸಲೇಮಿಗೆ ಕಳುಹಿಸಿದೆನು.”

28 ನಾನು ಆ ಸುಳ್ಳುದೇವರುಗಳನ್ನು ದೃಷ್ಟಿಸಿ ನೋಡಿದೆನು.
    ಅವುಗಳಲ್ಲಿ ಯಾವುದೂ ಮಾತಾಡುವಷ್ಟು ಜ್ಞಾನಿಯಾಗಿರಲಿಲ್ಲ.
ನಾನು ಅವುಗಳನ್ನು ಪ್ರಶ್ನಿಸಿದೆನು.
    ಆದರೆ ಅವು ಉತ್ತರಿಸಲಿಲ್ಲ.
29 ಆ ದೇವರುಗಳೆಲ್ಲಾ ಶೂನ್ಯಕ್ಕಿಂತಲೂ ಕಡಿಮೆಯೇ.
    ಅವುಗಳು ಏನೂ ಮಾಡಲಾರವು.
    ಆ ಪ್ರತಿಮೆಗಳು ಸಂಪೂರ್ಣವಾಗಿ ಬೆಲೆಯಿಲ್ಲದವುಗಳಾಗಿವೆ.
    ಅವುಗಳು ಖಂಡಿತವಾಗಿಯೂ ನಿಷ್ಪ್ರಯೋಜಕವಾದವುಗಳಾಗಿವೆ.

ಯೆಹೋವನ ವಿಶೇಷ ಸೇವಕನು

42 “ನನ್ನ ಸೇವಕನನ್ನು ನೋಡಿರಿ!
    ನಾನು ಆತನಿಗೆ ಬೆಂಬಲ ನೀಡುತ್ತೇನೆ.
    ನಾನು ಆರಿಸಿಕೊಂಡಿದ್ದು ಆತನನ್ನೇ.
    ನಾನು ಆತನನ್ನು ಮೆಚ್ಚಿಕೊಂಡಿದ್ದೇನೆ.
ನನ್ನ ಆತ್ಮವನ್ನು ಆತನಲ್ಲಿರಿಸುವೆನು.
    ಆತನು ಜನಾಂಗಗಳನ್ನು ನ್ಯಾಯವಾಗಿ ತೀರ್ಪು ಮಾಡುವನು.
ಆತನು ಬೀದಿಗಳಲ್ಲಿ ಗಟ್ಟಿಯಾಗಿ ಮಾತನಾಡನು,
    ಗಟ್ಟಿಯಾಗಿ ಕರೆಯುವದಿಲ್ಲ, ಕೂಗುವದಿಲ್ಲ.
ಮೃದುವಾಗಿರುವ ಆತನು ಹುಲ್ಲಿನ ಕಡ್ಡಿಯನ್ನೂ ತುಂಡುಮಾಡುವದಿಲ್ಲ.
    ಕಿಡಿ ಬೆಂಕಿಯನ್ನೂ ಆತನು ಆರಿಸನು.
    ಆತನು ನೀತಿಯಿಂದ ನ್ಯಾಯವಿಚಾರಣೆಮಾಡಿ ಸತ್ಯವನ್ನು ಕಂಡುಕೊಳ್ಳುವನು.
ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ
    ಆತನು ಬಲಹೀನನಾಗುವದಿಲ್ಲ; ಮುಗ್ಗರಿಸುವುದೂ ಇಲ್ಲ.
ದೂರದೇಶದಲ್ಲಿರುವವರು ಸಹ ಆತನ ಬೋಧನೆಯನ್ನು ನಂಬುವರು.”

ಯೆಹೋವನೇ ಸೃಷ್ಟಿಕರ್ತ ಮತ್ತು ಆಡಳಿತಗಾರ

ನಿಜದೇವರಾದ ಯೆಹೋವನು ಹೀಗೆನ್ನುತ್ತಾನೆ: ಆಕಾಶವನ್ನು ನಿರ್ಮಿಸಿ ಅದನ್ನು ಭೂಮಿಯ ಮೇಲೆ ಹರಡಿದಾತನು ಯೆಹೋವನೇ. ಭೂಮಿಯ ಮೇಲಿರುವದನ್ನೆಲ್ಲಾ ಸೃಷ್ಟಿಸಿದಾತನು ಯೆಹೋವನೇ. ಭೂಮಿಯ ಮೇಲಿರುವ ಮನುಷ್ಯರಿಗೆಲ್ಲಾ ಜೀವಶ್ವಾಸವನ್ನು ಕೊಟ್ಟವನು ಆತನೇ. ಭೂಮಿಯ ಮೇಲೆ ನಡೆಯುವ ಪ್ರತಿಯೊಬ್ಬನಿಗೂ ಪ್ರಾಣವನ್ನು ಕೊಟ್ಟವನು ಆತನೇ.

“ಯೆಹೋವನೆಂಬ ನಾನು ನ್ಯಾಯವನ್ನು ಸ್ಥಾಪಿಸಲು ನಿನ್ನನ್ನು ಕರೆದೆನು.
    ನಾನು ನಿನ್ನ ಕೈಗಳನ್ನು ಹಿಡಿದು ಸಂರಕ್ಷಿಸುವೆನು.
ಜನರೊಂದಿಗೆ ಮಾಡಿಕೊಂಡ ಒಡಂಬಡಿಕೆ ನನ್ನಲ್ಲಿದೆಯೆಂಬುದಕ್ಕೆ ನೀನು ಗುರುತಾಗಿರುವೆ.
    ಎಲ್ಲಾ ಜನರಿಗೆ ನೀನು ಹೊಳೆಯುವ ಪ್ರಕಾಶವಾಗಿರುವೆ.
ನೀನು ಕುರುಡರ ಕಣ್ಣುಗಳಿಗೆ ದೃಷ್ಟಿಯನ್ನು ಕೊಡುವೆ;
    ಸೆರೆಮನೆಯಲ್ಲಿರುವ ಎಷ್ಟೋ ಜನರನ್ನು ನೀನು ಬಿಡಿಸುವೆ.
    ಕತ್ತಲೆಯಲ್ಲಿ ವಾಸಿಸುವ ಎಷ್ಟೋ ಜನರನ್ನು ನೀನು ಸೆರೆಮನೆಯಿಂದ ಬಿಡಿಸುವೆ.

“ನಾನೇ ಕರ್ತನು.
    ಯೆಹೋವನೆಂಬುದೇ ನನ್ನ ಹೆಸರು.
ನನ್ನ ಮಹಿಮೆಯನ್ನು ನಾನು ಇತರರಿಗೆ ಕೊಡೆನು.
    ನನಗೆ ಸಲ್ಲತಕ್ಕ ಮಹಿಮೆಯನ್ನು ಸುಳ್ಳುದೇವರ ವಿಗ್ರಹಗಳಿಗೆ ಬಿಟ್ಟುಕೊಡೆನು.
ಇಗೋ, ಆದಿಯಲ್ಲಿಯೇ ಮುಂದಿನ ಸಂಗತಿಗಳನ್ನು ತಿಳಿಸಿದೆನು.
    ಅವೆಲ್ಲವೂ ಸಂಭವಿಸಿದವು.
ಈಗ ಕೆಲವು ವಿಷಯಗಳು ನಿನಗೆ ಪ್ರಕಟಿಸುತ್ತೇನೆ;
    ಸಂಭವಿಸುವ ಮೊದಲೇ ಅವುಗಳನ್ನು ನಿನಗೆ ತಿಳಿಸುವೆನು.”

ದೇವರಿಗೆ ಸ್ತೋತ್ರಗಾನ

10 ದೂರದೇಶಗಳಲ್ಲಿರುವ ಜನರೇ,
    ಯೆಹೋವನಿಗೆ ಹೊಸ ಗೀತೆಯನ್ನು ಹಾಡಿರಿ.
    ಸಾಗರಗಳಲ್ಲಿ ಪ್ರಯಾಣಿಸುವ ಜನರೆಲ್ಲರೂ
    ಸಮುದ್ರಜೀವಿಗಳೆಲ್ಲವೂ
    ದೂರದೇಶಗಳವರೆಲ್ಲರೂ ದೇವರಿಗೆ ಸ್ತೋತ್ರಮಾಡಲಿ.
11 ಮರುಭೂಮಿಗಳೂ ನಗರಗಳೂ ಕೇದಾರಿನ ಹಳ್ಳಿಗಳೂ
    ಯೆಹೋವನನ್ನು ಸ್ತುತಿಸಲಿ.
ಸೆಲಾ ಪಟ್ಟಣವಾಸಿಗಳೇ, ಹರ್ಷದಿಂದ ಹಾಡಿರಿ.
    ನಿಮ್ಮ ಪರ್ವತಗಳ ತುದಿಯಿಂದ ಗಾನ ಮಾಡಿರಿ.
12 ಯೆಹೋವನನ್ನು ಘನಪಡಿಸಿರಿ.
    ದೂರದೇಶಗಳ ಜನರೆಲ್ಲರೇ, ಆತನನ್ನು ಸ್ತುತಿಸಿರಿ.
13 ಯೆಹೋವನು ಯುದ್ಧವೀರನಂತೆ ಹೊರಡುವನು.
    ಆತನು ಯುದ್ಧಮಾಡಲು ತಯಾರಾಗಿರುವ ಶೂರನಂತಿದ್ದಾನೆ.
ಆತನು ಉತ್ಸಾಹದಿಂದ ಗಟ್ಟಿಯಾಗಿ ಕೂಗುತ್ತಾ
    ತನ್ನ ವೈರಿಗಳನ್ನು ಸೋಲಿಸುವನು.

ದೇವರು ತಾಳ್ಮೆಯುಳ್ಳವನಾಗಿದ್ದಾನೆ

14 “ನಾನು ಬಹುಕಾಲದಿಂದ ಮೌನವಾಗಿದ್ದೆನು.
    ನಾನು ಏನೂ ಹೇಳದ ಹಾಗೆ ನನ್ನನ್ನು ನಿಯಂತ್ರಿಸಿಕೊಂಡಿದ್ದೆನು.
ಈಗ ನಾನು ಹೆರಿಗೆ ಬೇನೆಯನ್ನು ಅನುಭವಿಸುವ ಹೆಂಗಸಿನಂತೆ ಕಿರುಚುವೆನು;
    ಗಟ್ಟಿಯಾಗಿ ಏದುಸಿರು ಬಿಡುವೆನು.
15 ಬೆಟ್ಟಗಳನ್ನೂ ಪರ್ವತಗಳನ್ನೂ ನಾಶಪಡಿಸುವೆನು.
    ಅಲ್ಲಿ ಬೆಳೆಯುವ ಸಸ್ಯಗಳನ್ನೆಲ್ಲಾ ಒಣಗಿಸಿಬಿಡುವೆನು.
ನದಿಗಳನ್ನು ಒಣ ನೆಲವನ್ನಾಗಿ ಮಾರ್ಪಡಿಸುವೆನು;
    ನೀರಿನ ಹಳ್ಳಗಳನ್ನು ಒಣಗಿಸಿಬಿಡುವೆನು.
16 ಅವರು ಹಿಂದೆಂದೂ ತಿಳಿಯದ ರೀತಿಯಲ್ಲಿ ನಾನು ಕುರುಡರನ್ನು ನಡೆಸುವೆನು.
    ಕುರುಡರು ಹೋಗಿರದ ಸ್ಥಳಕ್ಕೆ ನಾನು ಅವರನ್ನು ನಡಿಸುವೆನು.
ನಾನು ಅವರಿಗಾಗಿ ಕತ್ತಲೆಯನ್ನು ಬೆಳಕಾಗಿ ಮಾರ್ಪಡಿಸುವೆನು.
    ನಾನು ಕೊರಕಲು ನೆಲವನ್ನು ಸಮತಟ್ಟಾಗಿ ಮಾಡುವೆನು.
ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
    ನನ್ನ ಜನರನ್ನು ನಾನು ಎಂದಿಗೂ ತೊರೆಯುವದಿಲ್ಲ.
17 ಆದರೆ ಕೆಲವರು ನನ್ನನ್ನು ಹಿಂಬಾಲಿಸುವದನ್ನು ನಿಲ್ಲಿಸಿಬಿಟ್ಟಿದ್ದಾರೆ.
    ಅವರ ಬಳಿಯಲ್ಲಿ ಬಂಗಾರದ ತಗಡಿನಿಂದ ಹೊದಿಸಿದ ವಿಗ್ರಹಗಳಿವೆ.
    ಅವರು ಆ ವಿಗ್ರಹಗಳಿಗೆ, ‘ನೀನೇ ನಮ್ಮ ದೇವರು’ ಎಂದು ಹೇಳುವರು.
ಸುಳ್ಳುದೇವರುಗಳನ್ನು ಅವರು ಅವಲಂಬಿಸಿರುವದರಿಂದ ನಿರಾಶರಾಗುವರು.

ದೇವರಿಗೆ ವಿಧೇಯರಾಗಲು ಇಸ್ರೇಲರು ನಿರಾಕರಿಸಿದರು

18 “ಕಿವುಡರೇ, ನನ್ನ ಮಾತನ್ನು ಕೇಳಿರಿ.
    ಕುರುಡರೇ ನನ್ನ ಕಡೆಗೆ ನೋಡಿರಿ.
19 ಬೇರೆ ಎಲ್ಲರಿಗಿಂತ ನನ್ನ ಸೇವಕನು ಕುರುಡನಾಗಿದ್ದಾನೆ.
    ಬೇರೆ ಎಲ್ಲರಿಗಿಂತ ನನ್ನ ದೂತನು ಕಿವುಡನಾಗಿದ್ದಾನೆ.
ನಾನು ಒಡಂಬಡಿಕೆ ಮಾಡಿಕೊಂಡ ನನ್ನ ಸೇವಕನು ಪೂರ್ಣ ಕುರುಡನಾಗಿದ್ದಾನೆ.
20 ತಾನು ಮಾಡತಕ್ಕದ್ದನ್ನು ಕಣ್ಣಾರೆ ಕಂಡರೂ
    ಅವನು ನನಗೆ ವಿಧೇಯನಾಗುವುದಿಲ್ಲ.
ಅವನು ಕಿವಿಯಾರೆ ಕೇಳಿದರೂ ನನ್ನ ಮಾತುಗಳಿಗೆ ವಿಧೇಯನಾಗುವದಿಲ್ಲ;
    ಅದನ್ನು ಕೇಳಿಸಿಕೊಳ್ಳುವದೂ ಇಲ್ಲ.”
21 ತನ್ನ ಸೇವಕನು ನೀತಿವಂತನಾಗಿರಬೇಕೆಂದೂ
    ತನ್ನ ಉತ್ಕೃಷ್ಟವಾದ ಉಪದೇಶವನ್ನು ಗೌರವಿಸಬೇಕೆಂದೂ ಯೆಹೋವನು ಬಯಸುತ್ತಾನೆ.
22 ಆದರೆ, ಜನರನ್ನು ನೋಡಿರಿ. ಅವರನ್ನು ಬೇರೆಯವರು ಸೋಲಿಸಿದ್ದಾರೆ.
    ಅವರಿಂದ ವಸ್ತುಗಳನ್ನು ದೋಚಿದ್ದಾರೆ.
ತರುಣರೆಲ್ಲರೂ ಭಯಪಟ್ಟಿದ್ದಾರೆ;
    ಅವರನ್ನು ಸೆರೆಮನೆಯಲ್ಲಿ ಬಂಧಿಸಿದ್ದಾರೆ.
ಅವರಿಂದ ಹಣವನ್ನು ಜನರು ಕಿತ್ತುಕೊಂಡಿದ್ದಾರೆ.
    ಅವರನ್ನು ರಕ್ಷಿಸಲು ಯಾರೂ ಇಲ್ಲ.
ಅವರಲ್ಲಿ ಹಣವನ್ನು “ಹಿಂದಕ್ಕೆ ಕೊಡು”
    ಎಂದು ಹೇಳುವವರೇ ಇಲ್ಲ.

23 ನನ್ನ ಜನರಲ್ಲಿ ಯಾರಾದರೂ ದೇವರ ಮಾತನ್ನು ಕೇಳಿದ್ದಾರೋ? ಇಲ್ಲ! ಆದರೆ ನೀವು ಆತನ ಮಾತುಗಳಿಗೆ ಲಕ್ಷ್ಯಗೊಟ್ಟು ಕೇಳಿ ಸಂಭವಿಸಿರುವದನ್ನು ಗಮನಿಸಬೇಕು. 24 ಯಾಕೋಬ್ ಮತ್ತು ಇಸ್ರೇಲ್ ಜನರಿಂದ ಅವರ ಸಂಪತ್ತನ್ನು ದೋಚಿಕೊಳ್ಳಲು ಅವರನ್ನು ಬಿಟ್ಟವರು ಯಾರು? ಯೆಹೋವನು ತಾನೇ ಅವರಿಗೆ ಹಾಗೆ ಮಾಡಿಬಿಟ್ಟನು. ನಾವು ಆತನ ವಿರುದ್ಧವಾಗಿ ಪಾಪಮಾಡಿದೆವು. ಆದ್ದರಿಂದ, ಆತನು ನಮ್ಮ ಆಸ್ತಿಯನ್ನು ದೋಚಿ ಹೋಗುವಂತೆ ಮಾಡಿದನು. ಯೆಹೋವನು ಬಯಸಿದ ರೀತಿಯಲ್ಲಿ ನಡೆಯಲು ಇಸ್ರೇಲರಿಗೆ ಇಷ್ಟವಿರಲಿಲ್ಲ, ಆತನ ಉಪದೇಶಗಳಿಗೆ ಕಿವಿಗೊಡಲಿಲ್ಲ. 25 ಆದ್ದರಿಂದ ಯೆಹೋವನು ಅವರ ಮೇಲೆ ಕೋಪಗೊಂಡನು. ಅವರಿಗೆ ವಿರುದ್ಧವಾಗಿ ಬಲವಾದ ಯುದ್ಧಗಳು ನಡೆಯುವಂತೆ ಮಾಡಿದನು. ಇಸ್ರೇಲ್ ಜನರ ಸುತ್ತಲೂ ಬೆಂಕಿಯು ಆವರಿಸಿಕೊಂಡಿರುವಂತಿದ್ದರೂ ಅವರಿಗೆ ಅದರ ಪ್ರಜ್ಞೆಯಿರಲಿಲ್ಲ. ಅವರೇ ಉರಿಯುತ್ತಿರುವಂತೆ ಅದಿತ್ತು. ಆದರೆ ಅವರು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ.

1 ಥೆಸಲೋನಿಕದವರಿಗೆ 1

ತಂದೆಯಾದ ದೇವರಲ್ಲಿಯೂ ಮತ್ತು ಪ್ರಭುವಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ ಮತ್ತು ತಿಮೊಥೆ ಬರೆಯುವ ಪತ್ರ.

ದೇವರ ಕೃಪೆಯೂ ಶಾಂತಿಯೂ ನಿಮಗಿರಲಿ.

ಥೆಸಲೋನಿಕದವರ ಜೀವನ ಮತ್ತು ನಂಬಿಕೆ

ದೇವರಿಗೆ ಪ್ರಾರ್ಥನೆ ಮಾಡುವಾಗ ನಿಮ್ಮನ್ನು ಯಾವಾಗಲೂ ಜ್ಞಾಪಿಸಿಕೊಂಡು ನಿಮ್ಮೆಲ್ಲರ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ನಮ್ಮ ತಂದೆಯಾದ ದೇವರಿಗೆ ಪ್ರಾರ್ಥನೆ ಮಾಡುವಾಗ ನಿಮ್ಮ ನಂಬಿಕೆಯ ಮತ್ತು ಪ್ರೀತಿಯ ಫಲವಾಗಿ ಮಾಡಿದ ಕಾರ್ಯಗಳಿಗಾಗಿಯೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಿಮಗಿರುವ ನಿರೀಕ್ಷೆಯಿಂದ ನೀವು ದೃಢವಾಗಿರುವುದಕ್ಕಾಗಿಯೂ ನಾವು ಆತನಿಗೆ ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇವೆ.

ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಪ್ರೀತಿಸುತ್ತಾನೆ. ಆತನು ನಿಮ್ಮನ್ನು ತನ್ನವರನ್ನಾಗಿ ಆರಿಸಿಕೊಂಡಿದ್ದಾನೆಂಬುದೂ ನಮಗೆ ತಿಳಿದಿದೆ. ನಿಮಗೆ ಸುವಾರ್ತೆಯನ್ನು ಶಕ್ತಿಯೊಡನೆ ತಂದಿದ್ದೇವೆ. ಕೇವಲ ನುಡಿಗಳನ್ನು ಬಳಸದೆ ಅದನ್ನು ಪವಿತ್ರಾತ್ಮನೊಡನೆಯೂ ಮತ್ತು ಅದು ಸತ್ಯವೆಂಬ ನಿಶ್ಚಿತ ಜ್ಞಾನದೊಡನೆಯೂ ತಂದಿದ್ದೇವೆ. ಇದಲ್ಲದೆ ನಾವು ನಿಮ್ಮೊಡನೆ ಇದ್ದಾಗ ನಿಮಗೋಸ್ಕರ ಹೇಗೆ ಜೀವಿಸಿದ್ದೆವು ಎಂಬುದು ನಿಮಗೆ ತಿಳಿದಿದೆ. ನಿಮಗೆ ಸಹಾಯ ಮಾಡುವುದಕ್ಕಾಗಿ ಹಾಗೆ ಜೀವಿಸಿದೆವು. ನೀವು ನಮ್ಮನ್ನೂ ಪ್ರಭುವನ್ನೂ ಅನುಸರಿಸಿದಿರಿ; ಬಹಳ ಹಿಂಸೆಯನ್ನು ಅನುಭವಿಸಿದಿರಿ; ನಮ್ಮ ಉಪದೇಶವನ್ನು ನೀವು ಸಂತಸದಿಂದ ಒಪ್ಪಿಕೊಂಡಿರಿ. ಪವಿತ್ರಾತ್ಮನೇ ನಿಮಗೆ ಆ ಸಂತಸವನ್ನು ನೀಡಿದನು.

ಮಕೆದೋನಿಯ ಮತ್ತು ಅಖಾಯದಲ್ಲಿದ್ದ ನಂಬಿಗಸ್ತರಿಗೆಲ್ಲಾ ನೀವು ಮಾದರಿಯಾದಿರಿ. ಪ್ರಭುವಿನ ಉಪದೇಶವು ಮಕೆದೋನಿಯ ಮತ್ತು ಅಖಾಯದಲ್ಲಿ ನಿಮ್ಮಿಂದ ಪ್ರಚಾರವಾಯಿತು. ಇದಲ್ಲದೆ ದೇವರ ಮೇಲಿನ ನಿಮ್ಮ ನಂಬಿಕೆಯು ಎಲ್ಲಾ ಕಡೆಗಳಲ್ಲಿಯೂ ತಿಳಿದುಬಂದಿತು. ಆದುದರಿಂದ ನಿಮ್ಮ ನಂಬಿಕೆಯ ಬಗ್ಗೆ ಏನೂ ಹೇಳಬೇಕಾಗಿಲ್ಲ. ನಾವು ನಿಮ್ಮೊಡನೆ ಇದ್ದಾಗ ನೀವು ನಮ್ಮ ಬೋಧನೆಯನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿಕೊಂಡದ್ದರ ಕುರಿತಾಗಿಯೂ ವಿಗ್ರಹಾರಾಧನೆಯನ್ನು ನಿಲ್ಲಿಸಿ ಜೀವವುಳ್ಳ ಸತ್ಯದೇವರನ್ನು ಆರಾಧಿಸತೊಡಗಿದ್ದರ ಕುರಿತಾಗಿಯೂ ಅಲ್ಲಿನ ಜನರೆಲ್ಲರೂ ತಿಳಿಸುತ್ತಾರೆ. 10 ದೇವಕುಮಾರನು ಪರಲೋಕದಿಂದ ಬರುವುದನ್ನು ಎದುರುನೋಡುವುದಕ್ಕಾಗಿ ನೀವು ಹಾಗೆ ಮಾಡಿದಿರಿ. ದೇವರೇ ಆ ಕುಮಾರನನ್ನು ಸತ್ತವರೊಳಗಿಂದ ಜೀವಂತವಾಗಿ ಮೇಲಕ್ಕೆಬ್ಬಿಸಿದನು. ಆತನೇ ಯೇಸು. ಮುಂದೆ ಬರುವ ದೇವರ ಕೋಪದ ತೀರ್ಪಿನಿಂದ ನಮ್ಮನ್ನು ರಕ್ಷಿಸುವವನು ಆತನೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International