Old/New Testament
ಕುಂಬಾರ ಮತ್ತು ಜೇಡಿಮಣ್ಣು
18 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು: 2 “ಯೆರೆಮೀಯನೇ, ನೀನು ಕುಂಬಾರನ ಮನೆಗೆ ಹೋಗು. ನಾನು ಕುಂಬಾರನ ಮನೆಯಲ್ಲಿಯೇ ನಿನಗೆ ಸಂದೇಶವನ್ನು ಕೊಡುತ್ತೇನೆ.”
3 ನಾನು ಕುಂಬಾರನ ಮನೆಗೆ ಹೋದೆನು. ಅವನು ಜೇಡಿಮಣ್ಣನ್ನು ಉಪಯೋಗಿಸಿ ಚಕ್ರದಿಂದ ಕೆಲಸ ಮಾಡುವದನ್ನು ನಾನು ಕಂಡೆನು. 4 ಅವನು ಜೇಡಿಮಣ್ಣಿನಿಂದ ಒಂದು ಮಡಕೆಯನ್ನು ಮಾಡುತ್ತಿದ್ದನು. ಆ ಮಡಕೆಯಲ್ಲಿ ಯಾವುದೋ ಒಂದು ದೋಷವಿತ್ತು. ಆದ್ದರಿಂದ ಆ ಕುಂಬಾರನು ಪುನಃ ಆ ಜೇಡಿಮಣ್ಣನ್ನು ಬಳಸಿ ಮತ್ತೊಂದು ಮಡಕೆಯನ್ನು ಮಾಡಿದನು. ಮಡಕೆಗೆ ತಾನು ಬಯಸಿದ ಆಕಾರವನ್ನು ಕೊಡಲು ತನ್ನ ಕೈಗಳನ್ನು ಉಪಯೋಗಿಸಿದನು.
5 ಆಗ ನನಗೆ ಯೆಹೋವನಿಂದ ಈ ಸಂದೇಶ ಬಂದಿತು: 6 “ಇಸ್ರೇಲ್ ಮನೆತನದವರೇ, ನಾನು ನಿಮಗೆ ಹೀಗೆಯೇ ಮಾಡಲು ಸಾಧ್ಯವೆಂಬುದನ್ನು ನೀವು ಬಲ್ಲಿರಿ. ನೀವು ಕುಂಬಾರನ ಕೈಯಲ್ಲಿದ್ದ ಜೇಡಿಮಣ್ಣಿನಂತಿದ್ದೀರಿ. ನಾನು ಆ ಕುಂಬಾರನಂತಿದ್ದೇನೆ. 7 ಒಮ್ಮೆ ನಾನು ಒಂದು ಜನಾಂಗವನ್ನಾಗಲಿ ಅಥವಾ ರಾಜ್ಯವನ್ನಾಗಲಿ ಕುರಿತು ಮಾತನಾಡುವಾಗ ಆ ಜನಾಂಗವನ್ನು ನಾನು ಖಂಡಿಸುವೆನೆಂದು ಮತ್ತು ಆ ಜನಾಂಗವನ್ನು ನಾನು ನಾಶಪಡಿಸುವೆನೆಂದು ಹೇಳಬಹುದು. 8 ಆದರೆ ಆ ಜನಾಂಗದ ಜನರು ತಮ್ಮ ಮನಸ್ಸನ್ನು ಮತ್ತು ಜೀವನವನ್ನು ಪರಿವರ್ತಿಸಿಕೊಳ್ಳಬಹುದು. ಆ ಜನಾಂಗದ ಜನರು ಮಾಡುವ ದುಷ್ಕೃತ್ಯಗಳನ್ನು ನಿಲ್ಲಿಸಬಹುದು. ಆಗ ನಾನು ನನ್ನ ವಿಚಾರವನ್ನು ಬದಲಾಯಿಸಿ, ಆ ಜನಾಂಗವನ್ನು ನಾಶಪಡಿಸಬೇಕೆಂದು ಮಾಡಿದ ನನ್ನ ಮುಂಚಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಿರಬಹುದು. 9 ಇನ್ನೊಮ್ಮೆ ಒಂದು ಜನಾಂಗದ ಬಗ್ಗೆ ಹೇಳುವಾಗ ಆ ಜನಾಂಗವನ್ನು ನಾನು ಅಭಿವೃದ್ಧಿಗೆ ತರುತ್ತೇನೆ, ಅದನ್ನು ನೆಟ್ಟು ಕಟ್ಟುತ್ತೇನೆ ಎಂದು ಹೇಳಬಹುದು. 10 ಆದರೆ ಆ ಜನಾಂಗವು ನನ್ನ ಆಜ್ಞಾಪಾಲನೆಯನ್ನು ಮಾಡದೆ ದುಷ್ಕೃತ್ಯಗಳಲ್ಲಿ ತೊಡಗಿದರೆ ಅದನ್ನು ನೋಡಿ ಆ ಜನಾಂಗಕ್ಕೆ ನಾನು ಮಾಡಬೇಕೆಂದಿದ್ದ ಒಳಿತಿನ ಬಗ್ಗೆ ಮತ್ತೊಮ್ಮೆ ವಿಚಾರ ಮಾಡಬಹುದು.
11 “ಯೆರೆಮೀಯನೇ, ಯೆಹೂದದ ಜನರಿಗೆ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಜನರಿಗೆ ಯೆಹೋವನು ಹೀಗೆನ್ನುವನು: ‘ಈಗಲೇ ನಾನು ನಿಮಗೋಸ್ಕರ ತೊಂದರೆಗಳನ್ನು ಎಬ್ಬಿಸುತ್ತೇನೆ. ನಿಮ್ಮ ವಿರುದ್ಧ ಯೋಜನೆಗಳನ್ನು ಹಾಕುತ್ತಿದ್ದೇನೆ. ಆದ್ದರಿಂದ ನೀವು ಮಾಡುತ್ತಿರುವ ದುಷ್ಕೃತ್ಯಗಳನ್ನು ನಿಲ್ಲಿಸಬೇಕು. ಪ್ರತಿಯೊಬ್ಬನು ಪರಿವರ್ತನೆ ಹೊಂದಿ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಾರಂಭಿಸಬೇಕು’ ಎಂದು ಹೇಳು. 12 ಆದರೆ ಯೆಹೂದದ ಜನರು, ‘ಪ್ರಯತ್ನ ಮಾಡುವದರಿಂದ ಏನೂ ಪ್ರಯೋಜನವಿಲ್ಲ. ನಮ್ಮ ಮನಸ್ಸಿಗೆ ಬಂದಂತೆ ನಾವು ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ದುಷ್ಟ ಮತ್ತು ಮೊಂಡುಮನಸ್ಸು ಹೇಳಿದಂತೆ ನಡೆಯುವೆವು’ ಎಂಬುದಾಗಿ ಉತ್ತರಿಸುವರು” ಎಂದನು.
13 ಯೆಹೋವನು ಹೇಳುವದನ್ನು ಆಲಿಸಿರಿ:
“ಬೇರೆ ಜನಾಂಗದ ಜನರಿಗೆ ಈ ಪ್ರಶ್ನೆಯನ್ನು ಕೇಳಿರಿ,
‘ಇಸ್ರೇಲ್ ಮಾಡಿದಂಥ ದುಷ್ಕೃತ್ಯಗಳನ್ನು ಬೇರೆ ಯಾರಾದರೂ ಮಾಡಿದ್ದನ್ನು ನೀವು ಎಂದಾದರೂ ಕೇಳಿದ್ದೀರಾ?’
ಇಸ್ರೇಲ್ ದೇಶವು ದೇವರ ವಧುವಿನಂತಿದೆ.
14 ಲೆಬನೋನಿನ ಪರ್ವತಗಳ ಮೇಲಿನ ಹಿಮವು ಇಳಿಜಾರಿನ ಬಂಡೆಯಿಂದ ಎಂದಾದರೂ ಕರಗುವುದೇ?
ಬಹುದೂರದಲ್ಲಿ ಹುಟ್ಟಿ ಹರಿದುಬರುವ ತೊರೆಗಳು ಎಂದಾದರೂ ಹರಿಯದೆ ನಿಂತುಹೋಗುವುದೇ?[a]
15 ಆದರೆ ನನ್ನ ಜನರು ನನ್ನನ್ನು ಮರೆತಿದ್ದಾರೆ.
ಅವರು ನಿಷ್ಪ್ರಯೋಜಕವಾದ ವಿಗ್ರಹಗಳಿಗೆ ನೈವೇದ್ಯ ಮಾಡುತ್ತಾರೆ.
ನನ್ನ ಜನರು ತಾವು ಮಾಡುವ ಕೆಲಸಗಳಲ್ಲಿ ಮುಗ್ಗರಿಸುತ್ತಾರೆ.
ಅವರು ತಮ್ಮ ಪೂರ್ವಿಕರ ಹಳೆಯ ಹಾದಿಯಲ್ಲಿಯೇ ಮುಗ್ಗರಿಸುತ್ತಾರೆ.
ನನ್ನ ಜನರು ಒಳ್ಳೆಯ ರಾಜಬೀದಿಯ ಮೇಲೆ ನನ್ನನ್ನು ಹಿಂಬಾಲಿಸುವದನ್ನು
ತೊರೆದು ಹಾಳಾದ ಹಾದಿಯನ್ನು ಹಿಡಿಯುತ್ತಾರೆ.
16 ಆದ್ದರಿಂದ ಯೆಹೂದ್ಯರ ದೇಶವು ಬರಿದಾದ ಮರುಭೂಮಿಯಾಗುವುದು.
ಜನರು ಇಲ್ಲಿಂದ ಹಾದುಹೋಗುವಾಗಲೆಲ್ಲಾ ಸಿಳ್ಳುಹಾಕಿ ತಲೆಯಾಡಿಸುವರು.
ದೇಶವು ಹಾಳಾದುದನ್ನು ನೋಡಿ ಬೆರಗಾಗುವರು.
17 ಪೂರ್ವದಿಂದ ಬರುವ ಗಾಳಿಯಂತೆ
ಯೆಹೂದದ ಜನರನ್ನು ಅವರ ವೈರಿಗಳ ಎದುರಿನಲ್ಲಿ ಚದರಿಸಿಬಿಡುವೆನು.
ನಾನು ಅವರನ್ನು ನಾಶಮಾಡುವೆನು.
ಆ ಸಮಯದಲ್ಲಿ ಅವರಿಗೆ ಸಹಾಯಮಾಡಲು ನಾನು ಬರುವದಿಲ್ಲ.
ಇಲ್ಲ! ನಾನು ಬಿಟ್ಟುಹೋಗುವುದನ್ನು ಅವರು ನೋಡುವರು.”
ಯೆರೆಮೀಯನ ನಾಲ್ಕನೇ ದೂರು
18 ಆಗ ಯೆರೆಮೀಯನ ವೈರಿಗಳು ಹೀಗೆಂದರು: “ಬನ್ನಿ, ನಾವು ಯೆರೆಮೀಯನ ವಿರುದ್ಧ ಒಳಸಂಚು ಮಾಡೋಣ. ಯಾಜಕನಿಂದ ಧರ್ಮೋಪದೇಶವು ತಪ್ಪುವದಿಲ್ಲ, ಇದು ಖಂಡಿತ. ಜ್ಞಾನಿಗಳಿಂದ ಮಂತ್ರಾಲೋಚನೆಯು ಇದ್ದೇ ಇರುತ್ತದೆ. ದೈವೋಕ್ತಿಯು ಪ್ರವಾದಿಯಿಂದ ಎಂದಿಗೂ ತಪ್ಪದು. ಆದ್ದರಿಂದ ಅವನ ಬಗ್ಗೆ ಸುಳ್ಳು ಹೇಳಿ ನಾಶಮಾಡೋಣ. ಅವನು ಹೇಳುವ ಯಾವುದಕ್ಕೂ ನಾವು ಗಮನಕೊಡಬೇಕಾಗಿಲ್ಲ.”
19 ಯೆಹೋವನೇ, ನನ್ನ ಮಾತನ್ನು ಆಲಿಸು,
ನನ್ನ ವಾದವನ್ನು ಆಲಿಸಿ ಯಾರು ಹೇಳುವುದು ಸರಿ ಎನ್ನುವುದನ್ನು ನಿರ್ಣಯಿಸು.
20 ನಾನು ಯೆಹೂದದ ಜನರಿಗೆ ಒಳ್ಳೆಯದನ್ನು ಮಾಡಿದೆನು.
ಆದರೆ ಅವರೀಗ ನನಗೆ ಕೆಟ್ಟದ್ದನ್ನು ಮಾಡುತ್ತಿದ್ದಾರೆ.
ಈಗ ಅವರು ನನ್ನನ್ನು ಕೊಲ್ಲುವುದಕ್ಕಾಗಿ ಒಂದು ಗುಂಡಿಯನ್ನು ತೋಡಿದ್ದಾರೆ.
ಯೆಹೋವನೇ, ನಾನು ಮಾಡಿದ್ದು ನಿನ್ನ ಜ್ಞಾಪಕದಲ್ಲಿದೆಯೇ?
ನಾನು ನಿನ್ನ ಎದುರಿಗೆ ನಿಂತುಕೊಂಡು ಈ ಜನರಿಗೆ ಒಳ್ಳೆಯದನ್ನು ಮಾಡೆಂದೂ
ಅವರ ಮೇಲೆ ಕೋಪಗೊಳ್ಳಬಾರದೆಂದೂ ನಿನ್ನಲ್ಲಿ ಕೇಳಿಕೊಂಡೆ.
21 ಆದ್ದರಿಂದ ಈಗ ಅವರ ಮಕ್ಕಳು ಕ್ಷಾಮಪೀಡಿತರಾಗಿ ಉಪವಾಸಬೀಳುವಂತೆ ಮಾಡು.
ಅವರ ಶತ್ರುಗಳು ಅವರನ್ನು ಖಡ್ಗದಿಂದ ಸೋಲಿಸುವಂತೆ ಮಾಡು.
ಅವರ ಹೆಂಡತಿಯರು ಮಕ್ಕಳನ್ನು ಕಳೆದುಕೊಳ್ಳಲಿ ಮತ್ತು ವಿಧವೆಯರಾಗಲಿ.
ಅವರ ಯೌವನಸ್ಥರು ಯುದ್ಧದಲ್ಲಿ ಖಡ್ಗದಿಂದ ಹತರಾಗಲಿ.
22 ಅವರ ಮನೆಗಳಲ್ಲಿ ರೋಧನದ ಧ್ವನಿ ಬರಲಿ.
ನೀನು ಫಕ್ಕನೆ ಅವರ ಮುಂದೆ ಶತ್ರುವನ್ನು ತಂದು ನಿಲ್ಲಿಸಿದಾಗ ಅವರು ಅಳುವಂತಾಗಲಿ.
ನನ್ನ ವೈರಿಗಳು ನನ್ನನ್ನು ಬಲೆಯಲ್ಲಿ ಸಿಕ್ಕಿಸಬೇಕೆಂದು ಪ್ರಯತ್ನ ಮಾಡಿದ್ದಾರೆ.
ನಾನು ಸಿಕ್ಕಿಹಾಕಿಕೊಳ್ಳುವಂಥ ಮತ್ತು ನನ್ನ ಕಣ್ಣಿಗೆ ಕಾಣದ ಗುಪ್ತವಾದ ಬಲೆಗಳನ್ನು ಅವರು ಹಾಕಿದ್ದಾರೆ.
23 ಯೆಹೋವನೇ, ನನ್ನನ್ನು ಕೊಲ್ಲಲು ಅವರು ಹಾಕಿದ ಯೋಜನೆಗಳನ್ನೆಲ್ಲ ನೀನು ಬಲ್ಲೆ.
ಅವರ ಅಪರಾಧಗಳನ್ನು ಮನ್ನಿಸಬೇಡ.
ಅವರ ಪಾಪಗಳನ್ನು ಅಳಿಸಬೇಡ.
ನನ್ನ ವೈರಿಗಳನ್ನು ನಾಶಪಡಿಸು, ನೀನು ಕೋಪದಲ್ಲಿದ್ದಾಗ ಆ ಜನರನ್ನು ಶಿಕ್ಷಿಸು.
ಮುರಿದ ಮಣ್ಣಿನ ಕೊಡ
19 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಒಬ್ಬ ಕುಂಬಾರನ ಹತ್ತಿರ ಹೋಗಿ ಅವನಿಂದ ಒಂದು ಮಣ್ಣಿನ ಕೊಡವನ್ನು ಕೊಂಡುಕೊಂಡು 2 ಬೋಕಿಯ ದ್ವಾರದ[b] ಸಮೀಪದಲ್ಲಿರುವ ಬೆನ್‌ಹಿನ್ನೊಮ್ ತಗ್ಗಿಗೆ ಹೋಗು. ನಿನ್ನ ಸಂಗಡ ಜನರ ಹಿರಿಯರಲ್ಲಿ ಕೆಲವರನ್ನೂ ಯಾಜಕರ ಹಿರಿಯರಲ್ಲಿ ಕೆಲವರನ್ನೂ ಕರೆದುಕೊಂಡು ಹೋಗು. ನಾನು ನಿನಗೆ ಹೇಳುವುದನ್ನು ನೀನು ಅಲ್ಲಿ ಅವರಿಗೆ ಹೇಳು. 3 ನಿನ್ನ ಜೊತೆಯಲ್ಲಿದ್ದ ಜನರಿಗೆ ಹೇಳು, ‘ಯೆಹೂದದ ರಾಜನೇ, ಜೆರುಸಲೇಮಿನ ಜನರೇ, ಯೆಹೋವನ ಈ ಸಂದೇಶವನ್ನು ಕೇಳಿರಿ. ಇಸ್ರೇಲರ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆ ಹೇಳುತ್ತಾನೆ: ನಾನು ಈ ಸ್ಥಳಕ್ಕೆ ಒಂದು ಭಯಂಕರವಾದ ಕೇಡನ್ನು ಉಂಟುಮಾಡುವೆನು. ಅದರ ಬಗ್ಗೆ ಕೇಳಿದ ಪ್ರತಿಯೊಬ್ಬ ವ್ಯಕ್ತಿಯು ವಿಸ್ಮಯಪಡುವನು ಮತ್ತು ಭಯಪಡುವನು. 4 ಯೆಹೂದದ ಜನರು ನನ್ನ ಅನುಸರಣೆಯನ್ನು ಬಿಟ್ಟಿದ್ದರಿಂದ ನಾನು ಹೀಗೆ ಮಾಡುವೆನು. ಇದನ್ನು ಅವರು ಅನ್ಯದೇವರುಗಳ ಸ್ಥಳವನ್ನಾಗಿ ಮಾಡಿದ್ದಾರೆ. ಯೆಹೂದದ ಜನರು ಈ ಸ್ಥಳದಲ್ಲಿ ಅನ್ಯದೇವರುಗಳಿಗಾಗಿ ಧೂಪವನ್ನು ಹಾಕಿದ್ದಾರೆ. ಬಹಳ ಹಿಂದೆ ಈ ಜನರು ಆ ದೇವರುಗಳನ್ನು ಪೂಜಿಸುತ್ತಿರಲಿಲ್ಲ. ಅವರ ಹಿರಿಯರೂ ಆ ದೇವರುಗಳನ್ನು ಪೂಜಿಸುತ್ತಿರಲಿಲ್ಲ. ಇವುಗಳು ಅನ್ಯದೇಶದ ಹೊಸ ದೇವರುಗಳು. ಯೆಹೂದದ ರಾಜರು ಈ ಸ್ಥಳವನ್ನು ಮುಗ್ಧಮಕ್ಕಳ ರಕ್ತದಿಂದ ತುಂಬಿದರು. 5 ಯೆಹೂದದ ರಾಜರು ಬಾಳ್ ದೇವರಿಗಾಗಿ ಉನ್ನತವಾದ ಸ್ಥಳಗಳನ್ನು ಕಟ್ಟಿಸಿದರು. ಅವರು ಆ ಸ್ಥಳಗಳಲ್ಲಿ ತಮ್ಮ ಗಂಡುಮಕ್ಕಳನ್ನು ಹೋಮಮಾಡಿದರು. ಅವರು ಬಾಳ್ ದೇವರಿಗೆ ತಮ್ಮ ಗಂಡುಮಕ್ಕಳನ್ನು ಆಹುತಿಕೊಟ್ಟರು. ನಾನು ಹಾಗೆ ಮಾಡಲು ಅವರಿಗೆ ಹೇಳಿರಲಿಲ್ಲ. ನಿಮ್ಮ ಗಂಡುಮಕ್ಕಳನ್ನು ಆಹುತಿಯಾಗಿ ಕೊಡಿ ಎಂದು ನಿಮಗೆ ಹೇಳಲಿಲ್ಲ. ಅಂಥ ವಿಚಾರ ನನ್ನ ಮನಸ್ಸಿನಲ್ಲಿ ಬರಲೇ ಇಲ್ಲ. 6 ಈಗ, ಬೆನ್‌ಹಿನ್ನೊಮೀನ ಕಣಿವೆಯಲ್ಲಿದ್ದ ಈ ಸ್ಥಳವನ್ನು ಜನರು “ತೋಫೆತ್” ಎಂದು ಕರೆಯುತ್ತಾರೆ. ಆದರೆ ಜನರು ಇದನ್ನು “ಕೊಲೆಯ ಕಣಿವೆ” ಎಂದು ಕರೆಯುವ ದಿನಗಳು ಬರುತ್ತಿವೆ ಎಂದು ನಾನು ನಿಮಗೆ ಮುನ್ನೆಚ್ಚರಿಕೆಯನ್ನು ಕೊಡುತ್ತೇನೆ. ಇದು ಯೆಹೋವನ ನುಡಿ. 7 ಈ ಸ್ಥಳದಲ್ಲಿ ನಾನು ಯೆಹೂದದ ಮತ್ತು ಜೆರುಸಲೇಮಿನ ಜನರ ಯೋಜನೆಗಳನ್ನು ಹಾಳು ಮಾಡುತ್ತೇನೆ. ಶತ್ರುವು ಈ ಜನರನ್ನು ಬೆನ್ನಟ್ಟಿ ಬರುವನು. ನಾನು ಈ ಸ್ಥಳದಲ್ಲಿ ಖಡ್ಗದಿಂದ ಯೆಹೂದದ ಜನರ ಕೊಲೆಯಾಗುವಂತೆ ಮಾಡುವೆನು. ಅವರ ಹೆಣಗಳು ಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುವೆನು. 8 ನಾನು ಈ ನಗರವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಜೆರುಸಲೇಮಿನಿಂದ ಹಾದುಹೋಗುವಾಗ ಜನರು ಸಿಳ್ಳುಹಾಕಿ ತಲೆಯಾಡಿಸಿ ಹೋಗುವರು. ನಗರವು ಹಾಳಾಗಿರುವುದನ್ನು ಕಂಡು ಅವರು ಬೆರಗಾಗುವರು. 9 ಶತ್ರುವು ನಗರದ ಸುತ್ತಲೂ ತನ್ನ ಸೈನ್ಯವನ್ನು ತರುವನು. ಜನರು ಆಹಾರವನ್ನು ಶೇಖರಿಸಲು ಹೊರಗೆ ಹೋಗದಂತೆ ಆ ಸೈನ್ಯವು ತಡೆಯುವದು. ನಗರದಲ್ಲಿದ್ದ ಜನರು ಉಪವಾಸ ಬೀಳುವರು. ಅವರು ಹಸಿವು ತಾಳಲಾರದೆ ತಮ್ಮ ಮಕ್ಕಳನ್ನೇ ತಿನ್ನುವರು. ಆಮೇಲೆ ಅವರು ಒಬ್ಬರನ್ನೊಬ್ಬರು ತಿನ್ನಲು ಪ್ರಾರಂಭಿಸುವರು.’
10 “ಯೆರೆಮೀಯನೇ, ನೀನು ಜನರಿಗೆ ಆ ವಿಷಯಗಳನ್ನು ಹೇಳು. ಅವರು ಗಮನವಿಟ್ಟು ಕೇಳುತ್ತಿರುವಾಗ ಆ ಮಣ್ಣಿನ ಕೊಡವನ್ನು ಒಡೆದುಹಾಕಿ 11 ಹೀಗೆ ಹೇಳು: ‘ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ಈ ಮಣ್ಣಿನ ಕೊಡವನ್ನು ಒಡೆದುಹಾಕಿದಂತೆ ನಾನು ಯೆಹೂದ ಜನಾಂಗವನ್ನು ಮತ್ತು ಜೆರುಸಲೇಮ್ ನಗರವನ್ನು ಒಡೆದುಹಾಕುವೆನು. ಈ ಕೊಡವನ್ನು ಪುನಃ ಜೋಡಿಸಲು ಸಾಧ್ಯವಿಲ್ಲ. ಯೆಹೂದ ಜನಾಂಗದ ಸ್ಥಿತಿಯೂ ಹೀಗೆಯೇ ಆಗುವುದು. ತೋಫೆತಿನಲ್ಲಿ ಸ್ಥಳವಿಲ್ಲದಂತಾಗುವವರೆಗೂ ಸತ್ತವರನ್ನು ಅಲ್ಲಿ ಹೂಳಲಾಗುವುದು. 12 ನಾನು ಈ ಜನರಿಗೂ ಮತ್ತು ಈ ಸ್ಥಳಕ್ಕೂ ಹೀಗೆ ಮಾಡುತ್ತೇನೆ. ನಾನು ಈ ನಗರವನ್ನು ತೋಫೆತಿನಂತೆ ಮಾಡುತ್ತೇನೆ’ ಇದು ಯೆಹೋವನ ನುಡಿ. 13 ‘ಜೆರುಸಲೇಮಿನ ಮನೆಗಳು ಈ ತೋಫೆತಿನಷ್ಟೆ “ಹೊಲಸಾಗುವವು.” ಯೆಹೂದದ ರಾಜರ ಅರಮನೆಗಳು ಈ ತೋಫೆತಿನಂತೆ ಹಾಳಾಗುವವು. ಏಕೆಂದರೆ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರುಗಳನ್ನು ಪೂಜಿಸಿದರು. ಅವರು ನಕ್ಷತ್ರಗಳನ್ನು ಪೂಜಿಸಿ ಅವುಗಳ ಗೌರವಾರ್ಥವಾಗಿ ಧೂಪಹಾಕಿದರು. ಅವರು ಸುಳ್ಳುದೇವರುಗಳಿಗೆ ಪಾನನೈವೇದ್ಯಗಳನ್ನು ಅರ್ಪಿಸಿದರು.’”
14 ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಬಂದು ಪವಿತ್ರಾಲಯದ ಪ್ರಾಕಾರದಲ್ಲಿ ನಿಂತುಕೊಂಡು, ಎಲ್ಲಾ ಜನರನ್ನುದ್ದೇಶಿಸಿ ಹೀಗೆ ಹೇಳಿದನು: 15 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: ‘ನಾನು ಜೆರುಸಲೇಮಿಗೂ ಅದರ ಸುತ್ತಲಿನ ಹಳ್ಳಿಗಳಿಗೂ ಅನೇಕ ವಿಪತ್ತುಗಳನ್ನು ಬರಮಾಡುವುದಾಗಿ ಹೇಳಿದೆನು. ಅವುಗಳನ್ನು ಬೇಗನೆ ಬರಮಾಡುತ್ತೇನೆ. ಏಕೆಂದರೆ ಜನರು ಬಹಳ ಮೊಂಡರಾಗಿದ್ದಾರೆ. ನಾನು ಹೇಳಿದ್ದನ್ನು ಅವರು ಕೇಳುವುದೂ ಇಲ್ಲ, ಅನುಸರಿಸುವುದೂ ಇಲ್ಲ.’”
ಕೊನೆಯ ದಿನಗಳು
3 ನೆನಪಿನಲ್ಲಿಡಿರಿ! ಕಡೇ ದಿನಗಳಲ್ಲಿ ಅನೇಕ ತೊಂದರೆಗಳು ಬರುತ್ತವೆ. 2 ಆ ಕಾಲದಲ್ಲಿ ಜನರು ಸ್ವಾರ್ಥಿಗಳಾಗಿರುತ್ತಾರೆ, ಹಣದಾಸೆ ಉಳ್ಳವರಾಗಿರುತ್ತಾರೆ; ಬಡಾಯಿಕೊಚ್ಚುವವರಾಗಿರುತ್ತಾರೆ; ಗರ್ವಿಷ್ಠರಾಗಿರುತ್ತಾರೆ; ಚಾಡಿಕೋರರಾಗಿರುತ್ತಾರೆ; ತಂದೆತಾಯಿಗಳಿಗೆ ಅವಿಧೇಯರಾಗಿರುತ್ತಾರೆ; ಕೃತಜ್ಞತೆಯಿಲ್ಲದವರಾಗಿರುತ್ತಾರೆ; ಅಪವಿತ್ರರಾಗಿರುತ್ತಾರೆ; 3 ಇತರರನ್ನು ಪ್ರೀತಿಸದವರಾಗಿರುತ್ತಾರೆ; ಕ್ಷಮಿಸದವರಾಗಿರುತ್ತಾರೆ; ದೂಷಿಸುವವರಾಗಿರುತ್ತಾರೆ. ತಮ್ಮ ಮೇಲೆ ತಮಗೇ ಹತೋಟಿಯಿಲ್ಲದವರಾಗಿರುತ್ತಾರೆ; ಉತ್ತಮವಾದದ್ದನ್ನು ದ್ವೇಷಿಸುವವರಾಗಿರುತ್ತಾರೆ; ಕೋಪಿಷ್ಠರಾಗಿರುತ್ತಾರೆ; ಸಂಕುಚಿತ ಗುಣವುಳ್ಳವರಾಗಿರುತ್ತಾರೆ. 4 ಕೊನೆಯ ದಿನಗಳಲ್ಲಿ ಜನರು ಮಿತ್ರದ್ರೋಹಿಗಳಾಗಿರುತ್ತಾರೆ; ದುಡುಕಿ ಮೂರ್ಖ ಕೆಲಸಗಳನ್ನು ಮಾಡುವವರಾಗಿರುತ್ತಾರೆ; ಜಂಬದಿಂದ ಉಬ್ಬಿಕೊಂಡವರಾಗಿರುತ್ತಾರೆ; ದೇವರನ್ನು ಪ್ರೀತಿಸದೆ ವಿಲಾಸಪ್ರಿಯರಾಗಿರುತ್ತಾರೆ; 5 ಆ ಜನರು ತಾವು ದೇವರ ಸೇವೆ ಮಾಡುತ್ತಿರುವುದಾಗಿ ನಟಿಸುತ್ತಲೇ ಇರುವರು. ಆದರೆ ಅವರು ನಿಜವಾಗಿಯೂ ದೇವರ ಸೇವೆ ಮಾಡುತ್ತಿಲ್ಲವೆಂಬುದನ್ನು ಅವರ ಜೀವಿತವೇ ತೋರ್ಪಡಿಸುತ್ತದೆ. ತಿಮೊಥೆಯನೇ, ಅಂತಹ ಜನರಿಂದ ದೂರವಾಗಿರು.
6 ಅವರಲ್ಲಿ ಕೆಲವರು ಮನೆಗಳಿಗೆ ನುಸುಳಿಕೊಂಡು ಹೋಗಿ, ಪಾಪಿಷ್ಠರಾದ ಸ್ತ್ರೀಯರನ್ನು ವಶಪಡಿಸಿಕೊಳ್ಳುತ್ತಾರೆ. ಆ ಸ್ತ್ರೀಯರು ಅನೇಕ ಪಾಪದೋಷಗಳಿಂದ ತುಂಬಿದವರಾಗಿದ್ದಾರೆ. 7 ಆ ಸ್ತ್ರೀಯರು ಯಾವಾಗಲೂ ಹೊಸ ಉಪದೇಶಗಳನ್ನು ಕಲಿಯಲು ಪ್ರಯತ್ನಿಸಿದರೂ ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ. 8 ಯನ್ನ ಮತ್ತು ಯಂಬ್ರರನ್ನು ನೆನಪುಮಾಡಿಕೊ. ಅವರು ಮೋಶೆಯನ್ನು ವಿರೋಧಿಸಿದರು. ಈ ಜನರೂ ಅವರಂತೆಯೇ. ಅವರು ಸತ್ಯವನ್ನು ವಿರೋಧಿಸುತ್ತಾರೆ. ಆ ಜನರ ಆಲೋಚನೆಗಳೆಲ್ಲ ಗಲಿಬಿಲಿಗೊಂಡಿವೆ. ಅವರು ನಂಬಿಕೆಯನ್ನು ಅನುಸರಿಸುವ ತಮ್ಮ ಪ್ರಯತ್ನದಲ್ಲಿ ಸೋತುಹೋಗಿದ್ದಾರೆ. 9 ಅವರ ಕಾರ್ಯಗಳಲ್ಲಿ ಅವರಿಗೆ ಯಶಸ್ಸಾಗುವುದಿಲ್ಲ. ಅವರು ಮೂರ್ಖರೆಂಬುದು ಜನರೆಲ್ಲರಿಗೂ ಕಾಣುತ್ತದೆ. ಯನ್ನ, ಯಂಬ್ರರಿಗೆ ಹೀಗೆಯೇ ಆಯಿತು.
ಅಂತಿಮ ಸಲಹೆಗಳು
10 ಆದರೆ ನನ್ನನ್ನು ಕುರಿತು ನಿನಗೆ ಎಲ್ಲವೂ ತಿಳಿದಿದೆ. ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ತಾಳ್ಮೆ, ಪ್ರೀತಿ, ಸೈರಣೆ ನಿನಗೆ ತಿಳಿದಿವೆ. 11 ನನಗೆ ಸಂಭವಿಸಿದ ಹಿಂಸೆ ಮತ್ತು ಸಂಕಟಗಳ ಬಗ್ಗೆಯೂ ನಿನಗೆ ತಿಳಿದಿದೆ. ಅಂತಿಯೋಕ್ಯ, ಇಕೋನ್ಯ, ಲುಸ್ತ್ರಗಳಲ್ಲಿ ನನಗೆ ಸಂಭವಿಸಿದ ಸಂಗತಿಗಳೆಲ್ಲವೂ ನಿನಗೆ ತಿಳಿದಿವೆ. ನಾನು ಆ ಸ್ಥಳಗಳಲ್ಲಿ ಅನುಭವಿಸಿದ ಹಿಂಸೆಯು ನಿನಗೆ ತಿಳಿದಿದೆ. ಆದರೆ ಆ ಎಲ್ಲ ತೊಂದರೆಗಳಿಂದ ಪ್ರಭುವು ನನ್ನನ್ನು ಕಾಪಾಡಿದನು. 12 ಕ್ರಿಸ್ತ ಯೇಸುವಿನಲ್ಲಿ ದೇವರ ಚಿತ್ತಕ್ಕನುಸಾರವಾಗಿ ಜೀವಿಸುವ ಪ್ರತಿಯೊಬ್ಬರೂ ಹಿಂಸೆಗೆ ಒಳಗಾಗುವರು. 13 ದುಷ್ಟರು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನದಿಂದ ದಿನಕ್ಕೆ ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ.
14 ಆದರೆ ನೀನು ಕಲಿತಿರುವ ಉಪದೇಶಗಳನ್ನು ಅನುಸರಿಸು. ಅವು ಸತ್ಯವೆಂಬುದು ನಿನಗೆ ತಿಳಿದಿದೆ. ಅವುಗಳನ್ನು ನಿನಗೆ ಕಲಿಸಿದ ಜನರು ನಂಬಿಕೆಗೆ ಯೋಗ್ಯರೆಂಬುದು ನಿನಗೆ ತಿಳಿದಿದೆ. 15 ಚಿಕ್ಕಂದಿನಿಂದಲೂ ನಿನಗೆ ಪವಿತ್ರ ಗ್ರಂಥದ ಪರಿಚಯವಿದೆ. ನಿನ್ನನ್ನು ಜ್ಞಾನಿಯನ್ನಾಗಿ ಮಾಡಲು ಆ ಪವಿತ್ರ ಗ್ರಂಥವು ಶಕ್ತವಾಗಿದೆ. ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ಆ ಜ್ಞಾನವು ರಕ್ಷಣೆಯ ಕಡೆಗೆ ನಡೆಸುತ್ತದೆ. 16 ಪವಿತ್ರ ಗ್ರಂಥವನ್ನು ದೇವರು ದಯಪಾಲಿಸಿದನು. ಉಪದೇಶವನ್ನು ಮಾಡುವುದಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಅದು ಉಪಯುಕ್ತವಾಗಿದೆ. 17 ಆದ್ದರಿಂದ ದೇವರ ಸೇವಕರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.
Kannada Holy Bible: Easy-to-Read Version. All rights reserved. © 1997 Bible League International