Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 30-31

ಇಸ್ರೇಲರು ದೇವರ ಮೇಲೆ ಭರವಸವಿಡಬೇಕು

30 ಯೆಹೋವನು ಹೀಗೆನ್ನುತ್ತಾನೆ: “ಈ ಮಕ್ಕಳನ್ನು ನೋಡಿರಿ, ಅವರು ನನಗೆ ವಿಧೇಯರಾಗುತ್ತಿಲ್ಲ. ಅವರು ಯೋಜನೆಗಳನ್ನು ತಯಾರಿಸುತ್ತಾರೆ, ಆದರೆ ನನ್ನಿಂದ ಸಹಾಯವನ್ನು ಕೇಳುತ್ತಿಲ್ಲ. ಅವರು ಬೇರೆ ರಾಜ್ಯಗಳೊಂದಿಗೆ ಒಪ್ಪಂದ ಮಾಡುತ್ತಾರೆ; ಆದರೆ ನನ್ನ ಆತ್ಮವು ಅದಕ್ಕೆ ಒಪ್ಪುತ್ತಿಲ್ಲ. ಈ ಜನರು ತಮ್ಮ ಪಾಪಗಳಿಗೆ ಇನ್ನೂ ಹೆಚ್ಚು ಪಾಪವನ್ನು ಕೂಡಿಸಿಟ್ಟುಕೊಳ್ಳುತ್ತಾರೆ. ಈ ಮಕ್ಕಳು ಈಜಿಪ್ಟಿಗೆ ಸಹಾಯಕ್ಕಾಗಿ ಹೋಗುತ್ತಾರೆ, ಆದರೆ ಅವರು ಹಾಗೆ ಮಾಡುವದು ಸರಿಯೋ ಎಂದು ನನ್ನ ಹತ್ತಿರ ಕೇಳುವದಿಲ್ಲ. ಫರೋಹನು ತಮ್ಮನ್ನು ರಕ್ಷಿಸುತ್ತಾನೆಂದು ಅವರು ತಿಳಿದಿದ್ದಾರೆ. ಈಜಿಪ್ಟೇ ತಮ್ಮನ್ನು ಕಾಪಾಡಬೇಕು ಎಂಬುದು ಅವರ ಇಷ್ಟ.

“ಆದರೆ ನಾನು ನಿಮಗೆ ಹೇಳುವುದೇನೆಂದರೆ, ಈಜಿಪ್ಟಿನಲ್ಲಿ ಅಡಗಿಕೊಂಡರೆ ಏನೂ ಪ್ರಯೋಜನವಾಗದು. ಈಜಿಪ್ಟು ನಿಮ್ಮನ್ನು ರಕ್ಷಿಸಲಾರದು. ನಿಮ್ಮ ಅಧಿಕಾರಿಗಳು ಚೋವನಿಗೆ ಹೋಗಿದ್ದಾರೆ, ನಿಮ್ಮ ರಾಯಭಾರಿಗಳು ಹಾನೇಸಿಗೆ ಹೋಗಿದ್ದಾರೆ. ಆದರೆ ಅವರು ನಿರಾಶರಾಗುವರು. ತಮಗೆ ಸಹಾಯ ಮಾಡಲಶಕ್ಯವಾದ ರಾಜ್ಯಗಳಿಗೆ ಸಹಾಯಕ್ಕಾಗಿ ಹೋಗಿದ್ದಾರೆ. ಈಜಿಪ್ಟು, ನಿಷ್ಪ್ರಯೋಜಕವಾಗಿದೆ. ಅದು ಸಹಾಯ ಮಾಡದು. ಅದು ನಾಚಿಕೆ, ಅವಮಾನಗಳನ್ನು ಕೊಡುವದು.”

ಯೆಹೂದಕ್ಕೆ ದೇವರ ಸಂದೇಶ

ನೆಗೆವ್‌ನಲ್ಲಿರುವ ಪ್ರಾಣಿಗಳ ದುಃಖಕರವಾದ ಸಂದೇಶ:

ನೆಗೆವ್ ಬಹು ಅಪಾಯಕಾರಿ ಸ್ಥಳ. ಸಿಂಹ, ವಿಷದ ಹಾವುಗಳು, ವೇಗವಾಗಿ ಚಲಿಸುವ ಹಾವುಗಳಿಂದ ಅದು ತುಂಬಿದೆ. ಆದರೆ ಕೆಲವರು ನೆಗೆವ್ ಮೂಲಕ ಪ್ರಯಾಣ ಮಾಡಿ ಈಜಿಪ್ಟಿಗೆ ಹೋಗುತ್ತಾರೆ. ಅವರು ತಮ್ಮ ಸಂಪತ್ತನ್ನೆಲ್ಲಾ ಕತ್ತೆಯ ಮೇಲೆ ಹೊರಿಸಿರುತ್ತಾರೆ. ಅವರು ತಮ್ಮ ಧನವನ್ನು ಒಂಟೆಯ ಮೇಲೆ ಹೊರಿಸಿರುತ್ತಾರೆ. ತಮಗೆ ಸಹಾಯ ಮಾಡಲಾರದ ದೇಶದ ಮೇಲೆ ಜನರು ಭರವಸವಿಟ್ಟಿದ್ದಾರೆ ಎಂಬುದೇ ಇದರರ್ಥ. ಈಜಿಪ್ಟ್ ಯಾವ ಪ್ರಯೋಜನಕ್ಕೂ ಬಾರದು. ಅದರ ಸಹಾಯವು ಏನೂ ಅಲ್ಲ. ಅದಕ್ಕಾಗಿ ನಾನು ಈಜಿಪ್ಟನ್ನು “ಏನೂ ಮಾಡದ ದೈತ್ಯಾಕಾರದ ಮೃಗ” ಎಂದು ಕರೆಯುತ್ತೇನೆ.

ಎಲ್ಲಾ ಜನರಿಗೆ ಕಾಣುವಂತೆ ಇದನ್ನು ಹಲಗೆಯ ಮೇಲೆ ಬರೆ; ಪುಸ್ತಕದಲ್ಲೂ ಬರೆ. ಕೊನೆಯ ದಿವಸಗಳಿಗಾಗಿ ಇದನ್ನು ಬರೆ. ಬಹುಕಾಲದ ನಂತರ ಇದು ಸಂಭವಿಸುವದು.

ಈ ಜನರು ಹೆತ್ತವರಿಗೆ ವಿಧೇಯರಾಗದ ಮಕ್ಕಳಂತಿದ್ದಾರೆ. ಅವರು ಸುಳ್ಳಾಡಿಕೊಂಡು ಯೆಹೋವನ ಬೋಧನೆಯನ್ನು ನಿರಾಕರಿಸುತ್ತಾರೆ. 10 ಅವರು ಪ್ರವಾದಿಗಳಿಗೆ, “ನಾವು ಮಾಡಬೇಕಿರುವ ಕಾರ್ಯಗಳ ಬಗ್ಗೆ ದೈವೋಕ್ತಿ ನುಡಿಯಬೇಡಿ, ನಮಗೆ ಸತ್ಯವನ್ನು ತಿಳಿಸಬೇಡಿ. ನಮಗೊಪ್ಪುವ ಮನರಂಜನೆಯ ಮಾತುಗಳನ್ನಾಡಿ. ನಮಗೋಸ್ಕರ ಒಳ್ಳೆಯ ಸಂಗತಿಗಳನ್ನೇ ನಿಮ್ಮ ದರ್ಶನಗಳಲ್ಲಿ ನೋಡಿರಿ. 11 ಸತ್ಯವಾಗಿ ನಡೆಯುವ ವಿಷಯಗಳನ್ನು ನೀವು ದರ್ಶನದಲ್ಲಿ ನೋಡಬೇಡಿ. ನಮ್ಮ ದಾರಿಯಿಂದ ತೊಲಗಿರಿ. ಇಸ್ರೇಲಿನ ಪರಿಶುದ್ಧನ ಬಗ್ಗೆ ನಮಗೆ ಹೇಳುವುದನ್ನು ನಿಲ್ಲಿಸಿಬಿಡಿರಿ” ಎಂದು ಹೇಳುವರು.

ಯೆಹೂದಕ್ಕೆ ಸಹಾಯವು ಯೆಹೋವನಿಂದಲೇ ಬರುವದು

12 ಇಸ್ರೇಲಿನ ಪರಿಶುದ್ಧನು ಹೇಳುವುದೇನೆಂದರೆ, “ಯೆಹೋವನಿಂದ ಬರುವ ಸಂದೇಶವನ್ನು ಅಂಗೀಕರಿಸಲು ನೀವು ನಿರಾಕರಿಸುತ್ತೀರಿ. ನೀವು ನಿಮ್ಮ ಯುದ್ಧಗಳಿಂದಲೂ ಸುಳ್ಳಾಡುವದರಿಂದಲೂ ನಿಮಗೆ ಸಹಾಯ ಸಿಗುವದೆಂದು ಭರವಸೆಯಿಂದಿದ್ದೀರಿ. 13 ನೀವು ತಪ್ಪಿತಸ್ಥರಾಗಿದ್ದೀರಿ. ನೀವು ಬಿರುಕು ಬಿಟ್ಟಿರುವ ಎತ್ತರದ ಗೋಡೆಯಂತಿದ್ದೀರಿ. ಆ ಗೋಡೆಯು ಇದ್ದಕ್ಕಿದ್ದಂತೆ ನೆಲಕ್ಕುರುಳಿ ಚೂರುಚೂರಾಗುವದು. ಒಳ್ಳೆಯ ಸಮಯವು ಬರುತ್ತಿದೆ. 14 ಒಂದು ದೊಡ್ಡ ಆವೆಮಣ್ಣಿನ ಭರಣಿ ನಚ್ಚುನೂರಾಗಿ ಹೋಗುವಂತೆ ನೀವಿದ್ದೀರಿ. ಅದರ ತುಂಡುಗಳಿಂದ ಏನೂ ಪ್ರಯೋಜನವಿಲ್ಲ. ಆ ಭರಣಿಯ ಚೂರಿನಿಂದ ಸುಡುವ ಕಲ್ಲಿದ್ದಲನ್ನು ಹೊರತೆಗೆಯಲು ಅಥವಾ ಅದರಿಂದ ನೀರು ಸೇದಲು ಆಗುವದಿಲ್ಲ.”

15 ನನ್ನ ಒಡೆಯನೂ ದೇವರೂ ಇಸ್ರೇಲಿನ ಪರಿಶುದ್ಧನೂ ಹೇಳುವುದೇನೆಂದರೆ, “ನೀವು ನನ್ನ ಕಡೆಗೆ ತಿರುಗಿಕೊಳ್ಳುವುದಾದರೆ ನೀವು ರಕ್ಷಿಸಲ್ಪಡುವಿರಿ. ನೀವು ತಾಳ್ಮೆಯಿಂದ ನನ್ನ ಮೇಲೆ ಭರವಸೆಯಿಟ್ಟರೆ, ನೀವು ಬಲವನ್ನು ಹೊಂದುವಿರಿ.”

ಆದರೆ ಹಾಗೆ ಮಾಡಲು ನಿಮಗೆ ಇಷ್ಟವಿಲ್ಲ. 16 ನೀವು, “ನಮಗೆ ಸಹಾಯ ಬೇಡ. ಓಡಿಹೋಗಲು ಕುದುರೆಗಳು ಬೇಕು” ಎಂದು ಹೇಳುವಿರಿ. ಅದು ಸರಿಯಾದ ಮಾತು. ನೀವು ಕುದುರೆಗಳ ಮೂಲಕವೇ ಓಡುವಿರಿ. ಆದರೆ ಶತ್ರುಗಳು ನಿಮ್ಮನ್ನು ಹಿಂದಟ್ಟುವರು. ಅವರು ನಿಮ್ಮ ಕುದುರೆಗಳಿಗಿಂತ ವೇಗಶಾಲಿಗಳಾಗಿದ್ದಾರೆ. 17 ಶತ್ರುವಿನಲ್ಲಿ ಒಬ್ಬನು ಬೆದರಿಸಿದರೆ ನಿಮ್ಮಲ್ಲಿರುವ ಸಾವಿರ ಮಂದಿ ಓಡುವರು. ಐದು ಮಂದಿ ವೈರಿಗಳು ಬೆದರಿಕೆ ಹಾಕಿದರೆ ನೀವೆಲ್ಲರೂ ಅವರ ಮುಂದಿನಿಂದ ಓಡಿಹೋಗುವಿರಿ. ಕೊನೆಗೆ ನಿಮ್ಮ ಸೈನ್ಯದಲ್ಲಿ ಉಳಿಯುವ ವಸ್ತು ಯಾವದೆಂದರೆ ಬೆಟ್ಟದ ಮೇಲೆ ನೆಟ್ಟಿರುವ ನಿಮ್ಮ ಧ್ವಜಸ್ತಂಭವೊಂದೇ.

ದೇವರು ತನ್ನ ಜನರಿಗೆ ಸಹಾಯ ಮಾಡುವನು

18 ಯೆಹೋವನು ನಿಮಗೆ ಕರುಣೆ ತೋರಿಸಲು ಇಷ್ಟಪಡುತ್ತಾನೆ. ಆತನು ನಿಮ್ಮನ್ನು ಎದುರು ನೋಡುತ್ತಿದ್ದಾನೆ. ಆತನು ಎದ್ದು ನಿಮ್ಮನ್ನು ಸಂತೈಸಲು ಬಯಸುತ್ತಾನೆ. ದೇವರಾದ ಯೆಹೋವನು ನ್ಯಾಯವಂತನಾಗಿದ್ದಾನೆ. ಆತನ ಸಹಾಯವನ್ನು ನಿರೀಕ್ಷಿಸುವವರೆಲ್ಲರೂ ಆಶೀರ್ವದಿಸಲ್ಪಡುವರು.

19 ಚೀಯೋನ್ ಪರ್ವತದಲ್ಲಿರುವ ಜೆರುಸಲೇಮಿನಲ್ಲಿ ಯೆಹೋವನ ಜನರು ವಾಸಿಸುವರು. ನೀವು ಇನ್ನು ಮೇಲೆ ಅಳುವದಿಲ್ಲ. ಯೆಹೋವನು ನಿಮ್ಮ ಅಳುವಿಕೆಯನ್ನು ನೋಡಿ ನಿಮ್ಮನ್ನು ಆದರಿಸುವನು. ಆತನು ನಿಮ್ಮ ಮೊರೆಯನ್ನು ಕೇಳಿ ನಿಮಗೆ ಸಹಾಯಿಸುವನು.

20 ಹಿಂದಿನ ದಿವಸಗಳಲ್ಲಿ ನನ್ನ ಒಡೆಯನು ನಿಮಗೆ ದುಃಖವನ್ನೂ ಬೇನೆಯನ್ನೂ ಕೊಟ್ಟನು. ಅದು ನಿಮಗೆ ದಿನನಿತ್ಯ ತಿನ್ನುವಂಥ ರೊಟ್ಟಿಯಂತೆಯೂ ನೀರಿನಂತೆಯೂ ಇತ್ತು. ಆದರೆ ನಿಮ್ಮ ಬೋಧಕನಾದ ದೇವರು ನಿಮ್ಮಿಂದ ಎಂದಿಗೂ ಅಡಗಿಕೊಂಡಿರಲಾರನು. ನಿಮ್ಮ ಬೋಧಕನನ್ನು ನೀವು ಕಣ್ಣಾರೆ ಕಾಣುವಿರಿ. 21 ಆದರೆ ನೀವು ತಪ್ಪು ಕಾರ್ಯಮಾಡಿದರೆ, ದುಷ್ಟತ್ವದಲ್ಲಿ ಜೀವಿಸಿದರೆ ನಿಮ್ಮ ಹಿಂದಿನಿಂದ ಒಂದು ಸ್ವರ, “ಇದು ಸರಿಯಾದ ಮಾರ್ಗ. ಈ ಮಾರ್ಗದಲ್ಲಿ ಮುಂದುವರಿಯಿರಿ” ಎಂದು ಹೇಳುವುದು ಕೇಳಿಸುವದು.

22 ನಿಮ್ಮಲ್ಲಿ ಬೆಳ್ಳಿಬಂಗಾರಗಳ ವಿಗ್ರಹಗಳಿವೆ. ಆ ಸುಳ್ಳುದೇವರುಗಳು ನಿಮ್ಮನ್ನು ಹೊಲೆಯನ್ನಾಗಿ ಮಾಡಿವೆ. ನೀವು ಅವುಗಳ ಸೇವೆಯನ್ನು ನಿಲ್ಲಿಸುವಿರಿ. ಅವು ಹೊಲಸು ವಸ್ತುಗಳೋ ಎಂಬಂತೆ ಅವುಗಳನ್ನೆತ್ತಿ ಬಿಸಾಡಿಬಿಡುವಿರಿ.

23 ಆ ಸಮಯದಲ್ಲಿ ಯೆಹೋವನು ನಿಮಗಾಗಿ ಮಳೆ ಸುರಿಸುವನು. ನೀವು ಭೂಮಿಯಲ್ಲಿ ಬೀಜಬಿತ್ತಿದ್ದಾಗ ಫಸಲನ್ನು ಹೊಂದುವಿರಿ. ನಿಮಗೆ ಬಹುದೊಡ್ಡ ಸುಗ್ಗಿ ಆಗುವದು. ಹೊಲದಲ್ಲಿ ನಿಮ್ಮ ಪಶುಗಳಿಗೆ ಬೇಕಾದಷ್ಟು ಹುಲ್ಲು ಇರುವದು. ಮೇಯಲು ನಿಮ್ಮ ಕುರಿಗಳಿಗೆ ಬೇಕಾದಷ್ಟು ಬಯಲಿವೆ. 24 ನಿಮ್ಮ ದನಕರುಗಳಿಗೂ ಕತ್ತೆಗಳಿಗೂ ಬೇಕಾದಷ್ಟು ಮೇವಿದೆ. ಆಹಾರವು ಯಥೇಚ್ಛವಾಗಿರುವದು. ನಿಮ್ಮ ದನಕರುಗಳು ಮೊರದಿಂದಲೂ ಕವೇಕೋಲಿನಿಂದಲೂ ತೂರಿದ ಉಪ್ಪುಪ್ಪಾದ ಮೇವನ್ನು ತಿನ್ನುವವು. 25 ಪ್ರತಿಯೊಂದು ಬೆಟ್ಟದಲ್ಲಿಯೂ ಪರ್ವತದಲ್ಲಿಯೂ ಹರಿಯುವ ನೀರಿನ ತೊರೆಗಳಿರುವವು. ಇವೆಲ್ಲಾ ಅನೇಕ ಜನರು ಕೊಲ್ಲಲ್ಪಟ್ಟ ನಂತರವೂ ಬುರುಜುಗಳು ಕೆಡವಲ್ಪಟ್ಟ ನಂತರವೂ ಸಂಭವಿಸುವವು.

26 ಆ ಸಮಯದಲ್ಲಿ ಚಂದ್ರನ ಪ್ರಕಾಶವು ಸೂರ್ಯನಂತಿರುವದು. ಸೂರ್ಯನ ಪ್ರಕಾಶವು ಈಗ ಇರುವದಕ್ಕಿಂತ ಏಳರಷ್ಟು ಹೆಚ್ಚಾಗಿರುವದು. ಸೂರ್ಯನ ಒಂದು ದಿವಸದ ಬೆಳಕು ಒಂದು ವಾರದ ಬೆಳಕಿನಷ್ಟಿರುವದು. ಯೆಹೋವನು ತನ್ನ ಮುರಿದುಹೋದ ಜನರಿಗೆ ಆದ ಗಾಯದ ಪೆಟ್ಟುಗಳನ್ನು ಗುಣಪಡಿಸುವಾಗ ಇವೆಲ್ಲಾ ಸಂಭವಿಸುತ್ತವೆ.

27 ಇಗೋ, ಯೆಹೋವನ ನಾಮವು ಬಹುದೂರದಿಂದ ಬರುವದು. ಆತನ ಕೋಪವು ದಟ್ಟವಾದ ಹೊಗೆಯೊಂದಿಗೆ ಇರುವ ಬೆಂಕಿಯೋಪಾದಿಯಲ್ಲಿರುವದು. ಯೆಹೋವನ ಬಾಯಿ ಕೋಪದಿಂದಲೂ ನಾಲಿಗೆಯು ಸುಡುವ ಬೆಂಕಿಯಂತೆಯೂ ಇರುವದು. 28 ಆತನ ಶ್ವಾಸವು (ಆತ್ಮ) ಒಂದು ಮಹಾನದಿಯಂತಿರುವದು. ಅದರ ನೀರು ಕುತ್ತಿಗೆಯ ತನಕ ಏರುವದು. ಯೆಹೋವನು ಜನಾಂಗಗಳಿಗೆ ನ್ಯಾಯತೀರಿಸುವನು. ಅವುಗಳನ್ನು ಜರಡಿಯಿಂದ ಜಾಲಾಡಿಸುವನು. ಯೆಹೋವನು ಅವುಗಳನ್ನು ನಿಯಂತ್ರಿಸುವನು. ಅದು ಪ್ರಾಣಿಗಳನ್ನು ನಿಯಂತ್ರಿಸುವ ಬಾಯಿಯಲ್ಲಿ ಹಾಕುವ ಕಡಿವಾಣದಂತಿರುವದು.

29 ಆ ಸಮಯದಲ್ಲಿ ನೀವು ಹರ್ಷಗಾನ ಹಾಡುವಿರಿ. ಅದು ಹಬ್ಬದ ರಾತ್ರಿಯ ಸಮಯದಂತಿರುವದು. ದೇವರ ಪರ್ವತದಲ್ಲಿ ನಡೆಯುತ್ತಿರುವಾಗ ನೀವು ಅತ್ಯಂತ ಸಂತೋಷಪಡುವಿರಿ. ಇಸ್ರೇಲಿನ ಬಂಡೆಯಾಗಿರುವ ಯೆಹೋವನನ್ನು ಆರಾಧಿಸಲು ಹೋಗುವಾಗ ಕೊಳಲಿನ ಗಾನವನ್ನು ಕೇಳಿ ಸಂತೋಷಿಸುವಿರಿ.

30 ಯೆಹೋವನು ತನ್ನ ಮಹಾಸ್ವರವನ್ನು ಜನರು ಕೇಳುವಂತೆ ಮಾಡುವನು. ತನ್ನ ಸಾಮರ್ಥ್ಯದ ಬಾಹುವು ಕೋಪದಿಂದ ನಡುಗುವದನ್ನು ಜನರು ನೋಡುವಂತೆ ಮಾಡುವನು. ಆ ಬಾಹುವು ಎಲ್ಲವನ್ನು ಸುಡುವ ದೊಡ್ಡ ಅಗ್ನಿಯಂತಿರುವದು. ಯೆಹೋವನ ಶಕ್ತಿಯು ಆಲಿಕಲ್ಲಿನಿಂದಲೂ ಮಳೆಯಿಂದಲೂ ಕೂಡಿರುವ ಬಿರುಗಾಳಿಯಂತಿರುವುದು. 31 ಯೆಹೋವನ ಸ್ವರವನ್ನು ಕೇಳುವಾಗ ಅಶ್ಶೂರವು ನಡುಗುವದು. ಆತನು ಕೋಲಿನಿಂದ ಅಶ್ಶೂರವನ್ನು ಹೊಡೆಯುವನು. 32 ಅಶ್ಶೂರವನ್ನು ಆತನು ಹೊಡೆಯುವಾಗ ಹಾರ್ಪ್‌ವಾದ್ಯಗಳನ್ನು ಮತ್ತು ದಮ್ಮಡಿಗಳನ್ನು ಬಾರಿಸಿದಂತಾಗುವದು. ಯೆಹೋವನು ಅಶ್ಶೂರವನ್ನು ತನ್ನ ಮಹಾಶಕ್ತಿಯಿಂದ ಸೋಲಿಸುವನು.

33 ಬಹುಕಾಲದವರೆಗೆ ಅಗ್ನಿಕುಂಡ[a] ಸಿದ್ಧವಾಗಿತ್ತು. ಅದು ರಾಜನಿಗಾಗಿ ಸಿದ್ಧವಾಗಿದೆ. ಅದು ಆಳವಾಗಿಯೂ ಅಗಲವಾಗಿಯೂ ಮಾಡಲ್ಪಟ್ಟಿದೆ. ಅಲ್ಲಿ ಒಂದು ದೊಡ್ಡ ಕಟ್ಟಿಗೆಯ ರಾಶಿಯೂ ಬೆಂಕಿಯೂ ಇದೆ ಮತ್ತು ಯೆಹೋವನ ಬಾಯುಸಿರು ಗಂಧಕದ ಪ್ರವಾಹದಂತೆ ಬಂದು ಎಲ್ಲವನ್ನು ನಾಶಮಾಡುವದು.

ಇಸ್ರೇಲು, ದೇವರ ಶಕ್ತಿಯ ಮೇಲೆ ಅವಲಂಬಿಸಬೇಕು

31 ಸಹಾಯಕ್ಕಾಗಿ ಈಜಿಪ್ಟಿಗೆ ಹೋಗುವ ಜನರನ್ನು ನೋಡಿರಿ. ಆ ಜನರು ಕುದುರೆಗಳಿಗಾಗಿ ಕೇಳುತ್ತಿದ್ದಾರೆ. ಕುದುರೆಗಳು ಅವರನ್ನು ರಕ್ಷಿಸುತ್ತವೆ ಎಂದು ಅವರು ಭಾವಿಸುತ್ತಾರೆ. ಈಜಿಪ್ಟಿನ ಬಹಳ ರಥಗಳು ಮತ್ತು ಬಹಳ ಕುದುರೆಗಳು ಅವರನ್ನು ಕಾಪಾಡುವವು ಎಂದು ಜನರು ತಿಳಿದುಕೊಳ್ಳುತ್ತಾರೆ. ಸೈನ್ಯವು ದೊಡ್ಡದಾಗಿರುವದರಿಂದ ಯಾವ ಅಪಾಯವೂ ಬಾರದು ಎಂದು ಅವರು ತಿಳಿದುಕೊಳ್ಳುತ್ತಾರೆ. ಜನರು ಇಸ್ರೇಲಿನ ಪರಿಶುದ್ಧನನ್ನು ನಂಬುವದಿಲ್ಲ. ಅವರು ಯೆಹೋವನ ಸಹಾಯವನ್ನು ಕೋರುವದಿಲ್ಲ. ಆದರೆ ಯೆಹೋವನು ಜ್ಞಾನವಂತನಾಗಿದ್ದಾನೆ. ಆತನೇ ಅವರಿಗೆ ವಿರುದ್ಧವಾಗಿ ಸಂಕಟಗಳನ್ನು ಬರಮಾಡುವನು. ದೇವರ ಆಜ್ಞೆಯನ್ನು ಜನರು ಬದಲಾಯಿಸಲಾಗುವದಿಲ್ಲ. ಯೆಹೋವನು ಎದ್ದು ದುಷ್ಟಜನರ (ಯೆಹೂದ) ವಿರುದ್ಧ ಯುದ್ಧ ಮಾಡುವನು. ಅವರಿಗೆ ಸಹಾಯ ಕೊಡುವವರ (ಈಜಿಪ್ಟ್) ವಿರುದ್ಧವಾಗಿಯೂ ಯುದ್ಧ ಮಾಡುವನು.

ಈಜಿಪ್ಟಿನ ಜನರು ಮನುಷ್ಯಮಾತ್ರದವರೇ. ಅವರು ದೇವರಲ್ಲ. ಈಜಿಪ್ಟಿನ ಕುದುರೆಗಳು ಪ್ರಾಣಿಗಳಾಗಿವೆ. ಅವುಗಳು ಆತ್ಮವಲ್ಲ. ಯೆಹೋವನು ತನ್ನ ಕೈಯನ್ನು ಚಾಚುವಾಗ ಸಹಾಯ ಮಾಡುವವನು (ಈಜಿಪ್ಟ್) ಸೋಲುವನು. ಸಹಾಯ ಪಡೆದವನು (ಯೆಹೂದ) ಬೀಳುವನು. ಅವರೆಲ್ಲರೂ ಒಟ್ಟಿಗೆ ನಾಶವಾಗುವರು.

ಯೆಹೋವನು ನನಗೆ ಹೀಗೆ ಹೇಳಿದನು: “ಸಿಂಹವು ಅಥವಾ ಪ್ರಾಯದ ಸಿಂಹವು ಒಂದು ಪ್ರಾಣಿಯನ್ನು ಹಿಡಿದು ಕೊಂದಾಗ ಅದರ ಮೇಲೆ ನಿಂತು ಗರ್ಜಿಸುವದು. ಆ ಸಮಯದಲ್ಲಿ ಯಾವುದೂ ಆ ಸಿಂಹವನ್ನು ಹೆದರಿಸಲಾರದು. ಜನರು ಬಂದು ಗಟ್ಟಿಯಾಗಿ ಚೀರಿಕೊಂಡರೂ ಸಿಂಹಕ್ಕೆ ಹೆದರಿಕೆಯುಂಟಾಗದು; ದೊಡ್ಡ ಶಬ್ದ ಮಾಡಿದರೂ ಸಿಂಹವು ಓಡಿಹೋಗದು.”

ಅದೇ ರೀತಿಯಲ್ಲಿ ಸರ್ವಶಕ್ತನಾದ ಯೆಹೋವನು ಚೀಯೋನ್ ಪರ್ವತಕ್ಕೆ ಬಂದು ಯುದ್ಧ ಮಾಡುವನು. ಆತನು ಜೆರುಸಲೇಮನ್ನು ಹಕ್ಕಿಯು ತನ್ನ ಗೂಡಿನ ಸುತ್ತಲೂ ಹಾರಾಡುತ್ತಾ ಕಾಪಾಡುವಂತೆ ಸಂರಕ್ಷಿಸುವನು. ಯೆಹೋವನು ಜೆರುಸಲೇಮನ್ನು ರಕ್ಷಿಸುವನು. ಯೆಹೋವನು “ಹಾದುಹೋಗಿ” ಜೆರುಸಲೇಮನ್ನು ರಕ್ಷಿಸುವನು.

ದೇವರಿಗೆ ವಿರುದ್ಧವಾಗಿರುವ ಇಸ್ರೇಲಿನ ಮಕ್ಕಳೇ, ನೀವು ದೇವರ ಬಳಿಗೆ ಹಿಂತಿರುಗಿ ಬನ್ನಿರಿ. ಆಗ ಜನರು ತಯಾರಿಸಿರುವ ಬೆಳ್ಳಿಬಂಗಾರದ ವಿಗ್ರಹಗಳನ್ನು ಪೂಜಿಸುವದನ್ನು ನಿಲ್ಲಿಸುವರು. ನೀವು ಆ ವಿಗ್ರಹಗಳನ್ನು ತಯಾರಿಸಿದಾಗ ನಿಜವಾಗಿಯೂ ಪಾಪಮಾಡಿದಿರಿ.

ಅಶ್ಶೂರವು ಕತ್ತಿಯಿಂದ ನಾಶವಾಗುವದು ಖಂಡಿತ. ಆದರೆ ಆ ಕತ್ತಿಯು ಮನುಷ್ಯನ ಕತ್ತಿಯಲ್ಲ. ಖಡ್ಗವು ಅವರನ್ನು ನುಂಗುವುದು, ಆದರೆ ಅದು ಮನುಷ್ಯನ ಖಡ್ಗವಲ್ಲ. ಅಶ್ಶೂರವು ದೇವರ ಖಡ್ಗದಿಂದ ಓಡಿಹೋಗುವದು. ಅದರ ಯೌವನಸ್ಥರು ಸೆರೆಹಿಡಿಯಲ್ಪಟ್ಟು ಗುಲಾಮರನ್ನಾಗಿ ಮಾಡಲ್ಪಡುವರು. ಅವರ ಸುರಕ್ಷತೆಯ ಸ್ಥಳ ನಾಶವಾಗುವದು. ಅವರ ಅಧಿಪತಿಗಳು ಧ್ವಜವನ್ನು ಬಿಟ್ಟು ಸೋತುಹೋಗುವರು.

ಯೆಹೋವನೇ ಇದನ್ನು ನುಡಿದಿದ್ದಾನೆ. ಆತನ ಅಗ್ನಿವೇದಿಕೆಯು ಚೀಯೋನಿನಲ್ಲಿದೆ. ಆತನ ಒಲೆಯು ಜೆರುಸಲೇಮಿನಲ್ಲಿದೆ.

ಫಿಲಿಪ್ಪಿಯವರಿಗೆ 4

ಮಾಡಬೇಕಾದ ಕಾರ್ಯಗಳು

ನನ್ನ ಸಹೋದರ ಸಹೋದರಿಯರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮ್ಮನ್ನು ನೋಡಬಯಸುತ್ತೇನೆ. ನೀವು ನನಗೆ ಆನಂದವನ್ನು ಉಂಟುಮಾಡಿ, ನಿಮ್ಮ ವಿಷಯದಲ್ಲಿ ನಾನು ಹೆಮ್ಮಪಡುವಂತೆ ಮಾಡಿದ್ದೀರಿ. ನಾನು ನಿಮಗೆ ಹೇಳಿದಂತೆ ಪ್ರಭುವನ್ನು ಅನುಸರಿಸಿರಿ.

ಪ್ರಭುವಿನಲ್ಲಿ ಒಂದೇ ಮನಸ್ಸನ್ನು ಹೊಂದಿರಬೇಕೆಂದು ನಾನು ಯವೋದ್ಯಳನ್ನೂ ಸಂತುಕೆಯನ್ನೂ ಕೇಳಿಕೊಳ್ಳುತ್ತೇನೆ. ನನ್ನ ಸ್ನೇಹಿತನೇ, ನೀನು ನನ್ನ ಜೊತೆಕೆಲಸದವನಾಗಿ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವುದರಿಂದ ಈ ಸ್ತ್ರೀಯರಿಗೂ ನೀನು ಸಹಾಯ ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ. ಈ ಸ್ತ್ರೀಯರು ನನ್ನೊಂದಿಗೆ ಸುವಾರ್ತೆಗೋಸ್ಕರ ಸೇವೆ ಮಾಡಿದ್ದಾರೆ. ನನ್ನೊಂದಿಗೆ ಸೇವೆ ಮಾಡುತ್ತಿದ್ದ ಕ್ಲೇಮೆನ್ಸ್ ಮತ್ತು ಇತರ ಸೇವಕರೊಡನೆ ಈ ಸ್ತ್ರೀಯರು ಸೇವೆ ಮಾಡಿದ್ದಾರೆ. ಅವರ ಹೆಸರುಗಳು ಜೀವಬಾಧ್ಯರ ಪುಸಕ್ತದಲ್ಲಿ[a] ಬರೆಯಲ್ಪಟ್ಟಿವೆ.

ಯಾವಾಗಲೂ ಪ್ರಭುವಿನಲ್ಲಿ ಆನಂದಿಸಿರಿ; ಆನಂದಪಡಿರಿ ಎಂದು ಮತ್ತೆ ಹೇಳುತ್ತೇನೆ.

ನಿಮ್ಮ ಮೃದುಸ್ವಭಾವವನ್ನೂ ಕರುಣೆಯನ್ನೂ ಜನರೆಲ್ಲರೂ ನೋಡುವಂತಾಗಲಿ. ಪ್ರಭುವು ಬೇಗನೆ ಬರುತ್ತಾನೆ. ಯಾವುದರ ಬಗ್ಗೆಯೂ ಚಿಂತಿಸಬೇಡಿ. ಆದರೆ ಪ್ರಾರ್ಥನೆ ಮಾಡುತ್ತಾ ನಿಮ್ಮ ಅಗತ್ಯತೆಗಳಿಗೆಲ್ಲಾ ದೇವರಲ್ಲಿ ವಿಜ್ಞಾಪಿಸಿರಿ. ನೀವು ಪ್ರಾರ್ಥನೆ ಮಾಡುವಾಗಲೆಲ್ಲಾ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ. ದೇವಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯಗಳನ್ನೂ ಮನಸ್ಸುಗಳನ್ನೂ ಕಾಯುವುದು. ದೇವರು ಕೊಡುವ ಆ ಶಾಂತಿಯು ನಾವು ಅರ್ಥಮಾಡಿಕೊಳ್ಳಲಾಗದಷ್ಟು ಅಗಮ್ಯವಾಗಿದೆ.

ಸಹೋದರ ಸಹೋದರಿಯರೇ, ಒಳ್ಳೆಯದಾದ ಮತ್ತು ಸ್ತುತಿಗೆ ಯೋಗ್ಯವಾದ ಸಂಗತಿಗಳ ಬಗ್ಗೆ ಆಲೋಚಿಸಿರಿ. ಸತ್ಯವಾದ, ಮಾನ್ಯವಾದ, ನ್ಯಾಯವಾದ, ಶುದ್ಧವಾದ, ಸುಂದರವಾದ ಮತ್ತು ಗೌರವಯುತವಾದ ವಿಷಯಗಳ ಬಗ್ಗೆ ಆಲೋಚಿಸಿರಿ. ನೀವು ನನ್ನಿಂದ ಕಲಿತುಕೊಂಡದ್ದನ್ನು, ಹೊಂದಿಕೊಂಡದ್ದನ್ನು, ಕೇಳಿದ್ದನ್ನು ಮತ್ತು ಕಣ್ಣಾರೆ ಕಂಡದ್ದನ್ನು ಮಾಡಿರಿ. ಆಗ, ಶಾಂತಿಯನ್ನು ಕೊಡುವ ದೇವರು ನಿಮ್ಮೊಂದಿಗಿರುವನು.

ಫಿಲಿಪ್ಪಿ ಕ್ರೈಸ್ತರಿಗೆ ಪೌಲನ ವಂದನೆ

10 ನನ್ನ ಮೇಲೆ ನಿಮಗಿರುವ ಚಿಂತೆಯನ್ನು ನೀವು ಮತ್ತೆ ತೋರಿಸಿದ್ದಕ್ಕಾಗಿ ನಾನು ಪ್ರಭುವಿನಲ್ಲಿ ಬಹು ಸಂತೋಷಪಡುತ್ತೇನೆ. ನೀವು ನನ್ನ ಬಗ್ಗೆ ಚಿಂತಿಸುತ್ತಲೇ ಇದ್ದೀರಿ. ಆದರೆ ಅದನ್ನು ತೋರಿಸಲು ನಿಮಗೆ ಅವಕಾಶವೇ ಇರಲಿಲ್ಲ. 11 ನಾನು ಈ ಮಾತುಗಳನ್ನು ಹೇಳುತ್ತಿರುವುದು ನನಗಿರುವ ಕೊರತೆಯ ದೆಸೆಯಿಂದಲ್ಲ. ನನ್ನಲ್ಲಿರುವಂಥವುಗಳಲ್ಲಿ ಮತ್ತು ನನಗೆ ಸಂಭವಿಸುವ ಪ್ರತಿಯೊಂದರಲ್ಲಿ ತೃಪ್ತನಾಗಿರಲು ನಾನು ಕಲಿತುಕೊಂಡಿದ್ದೇನೆ. 12 ಹಸಿವೆಯಿಂದಿರುವಾಗಲೂ ಸಮೃದ್ಧಿಯುಳ್ಳವನಾಗಿರುವಾಗಲೂ ಹೇಗೆ ಜೀವಿಸಬೇಕೆಂಬುದು ನನಗೆ ತಿಳಿದಿದೆ. ಯಾವ ಸಮಯದಲ್ಲಾಗಲಿ ಯಾವ ಪರಿಸ್ಥಿತಿಯಲ್ಲಾಗಲಿ ಸಂತೋಷದಿಂದಿರುವ ಗುಟ್ಟು ನನಗೆ ತಿಳಿದಿದೆ. ಊಟಕ್ಕೆ ಬೇಕಾದಷ್ಟು ಇರುವಾಗಲೂ ಇಲ್ಲದಿರುವಾಗಲೂ ನನಗೆ ಅಗತ್ಯವಾದವುಗಳನ್ನು ಹೊಂದಿರುವಾಗಲೂ ಹೊಂದಿಲ್ಲದಿರುವಾಗಲೂ ಸಂತೋಷವಾಗಿರಲು ಕಲಿತುಕೊಂಡಿದ್ದೇನೆ. 13 ಕ್ರಿಸ್ತನ ಮೂಲಕ ನಾನು ಎಲ್ಲಾ ಕಾರ್ಯಗಳನ್ನು ಮಾಡಬಲ್ಲೆನು. ಏಕೆಂದರೆ ಆತನು ನನ್ನನ್ನು ಬಲಪಡಿಸುತ್ತಾನೆ.

14 ಆದರೂ ನಾನು ಕೊರತೆಯಲ್ಲಿದ್ದಾಗ ನೀವು ನನಗೆ ಸಹಾಯ ಮಾಡಿದ್ದು ಒಳ್ಳೆಯದಾಯಿತು. 15 ಇದಲ್ಲದೆ ಫಿಲಿಪ್ಪಿ ಪಟ್ಟಣದವರೇ, ನಾನು ಮೊದಲು ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ ಮಕೆದೋನಿಯಕ್ಕೆ ಹೊರಟಾಗ, ನಿಮ್ಮ ಸಭೆಯೊಂದೇ ನನಗೆ ಸಹಾಯ ಮಾಡಿದ್ದು ನಿಮಗೆ ಗೊತ್ತಿದೆ. 16 ನಾನು ಥೆಸಲೋನಿಕದಲ್ಲಿದ್ದಾಗ ನನಗೆ ಅಗತ್ಯವಾದವುಗಳನ್ನು ನೀವು ಹಲವಾರು ಸಲ ಕಳುಹಿಸಿಕೊಟ್ಟಿರಿ. 17 ನಿಜವಾಗಿಯೂ, ನಿಮ್ಮಿಂದ ಕೊಡುಗೆಗಳನ್ನು ಪಡೆದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಲ್ಲ. ಆದರೆ ಕೊಡುವುದರ ಮೂಲಕ ಮುಂದೆ ಹೇರಳವಾಗಿ ದೊರೆಯುವ ಆಶೀರ್ವಾದಗಳನ್ನು ನೀವು ಹೊಂದಿಕೊಳ್ಳಬೇಕೆಂಬುದೇ ನನ್ನ ಅಪೇಕ್ಷೆ. 18 ಎಪಫ್ರೊದೀತನು ನಿಮ್ಮ ಕೊಡುಗೆಯನ್ನು ತಂದು ಕೊಟ್ಟಿದ್ದರಿಂದ ಬೇಕಾದದ್ದೆಲ್ಲ ನನ್ನಲ್ಲಿ ಹೇರಳವಾಗಿದೆ. ನಿಮ್ಮ ಕೊಡುಗೆಯು ದೇವರಿಗೆ ಅರ್ಪಿಸಲ್ಪಟ್ಟ ಪರಿಮಳಭರಿತವಾದ ಯಜ್ಞವಾಗಿದೆ. ಇದು ದೇವರಿಗೆ ಮೆಚ್ಚಿಕೆಯಾದದ್ದೂ ಆಗಿದೆ. 19 ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ಅನುಗುಣವಾಗಿ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು. 20 ನಮ್ಮ ತಂದೆಯಾದ ದೇವರಿಗೆ ಸದಾಕಾಲ ಮಹಿಮೆಯಾಗಲಿ. ಆಮೆನ್.

21 ದೇವಜನರೆಲ್ಲರಿಗೂ ಕ್ರಿಸ್ತ ಯೇಸುವಿನಲ್ಲಿ ನನ್ನ ವಂದನೆ ತಿಳಿಸಿ. ನನ್ನೊಂದಿಗಿರುವ ಸಹೋದರರು ನಿಮಗೆ ವಂದನೆ ತಿಳಿಸಿದ್ದಾರೆ. 22 ಎಲ್ಲಾ ದೇವಮಕ್ಕಳು ನಿಮಗೆ ವಂದನೆ ತಿಳಿಸಿದ್ದಾರೆ. ಸೀಸರನ ಅರಮನೆಯಲ್ಲಿರುವ ವಿಶ್ವಾಸಿಗಳೂ ಸಹ ನಿಮಗೆ ವಂದನೆ ತಿಳಿಸಿದ್ದಾರೆ.

23 ಪ್ರಭು ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International