Old/New Testament
ಎಲ್ಲಾ ಜನಾಂಗದವರು ಯೆಹೋವನನ್ನು ಅನುಸರಿಸುವರು
56 ಯೆಹೋವನು ಹೇಳುವುದೇನೆಂದರೆ: “ಎಲ್ಲರಿಗೂ ನ್ಯಾಯವಂತರಾಗಿರಿ; ಎಲ್ಲರಿಗೂ ಒಳ್ಳೆಯವರಾಗಿರಿ; ಯಾಕೆಂದರೆ ನನ್ನ ರಕ್ಷಣೆಯು ಬೇಗನೆ ಬರಲಿದೆ; ಇಡೀ ಲೋಕಕ್ಕೆಲ್ಲಾ ನನ್ನ ನೀತಿಯು ಬೇಗನೆ ವ್ಯಕ್ತವಾಗುವುದು. 2 ಸಬ್ಬತ್ತಿನ ವಿಷಯದಲ್ಲಿ ದೇವರ ಕಟ್ಟಳೆಗಳನ್ನು ಅನುಸರಿಸುವವರು ಆಶೀರ್ವಾದ ಹೊಂದುವರು. ದುಷ್ಕೃತ್ಯಗಳನ್ನು ಮಾಡದವನು ಸಂತೋಷದಿಂದಿರುವನು.”
3 ಯೆಹೂದ್ಯರಲ್ಲದ ಜನರು ಯೆಹೋವನ ಬಳಿಗೆ ಬರುವರು. ಅವರು, “ಯೆಹೋವನು ನಮ್ಮನ್ನು ತನ್ನ ಜನರೊಂದಿಗೆ ಸ್ವೀಕರಿಸುವದಿಲ್ಲ” ಎಂದು ಹೇಳಬಾರದು. ಕಂಚುಕಿಯು, “ನಾನು ಕೆಲಸಕ್ಕೆ ಬಾರದ ಒಣಗಿದ ಮರ.” ಎಂದು ಹೇಳಬಾರದು.
4-5 ಯಾಕೆಂದರೆ ಯೆಹೋವನು ಹೇಳುವುದೇನೆಂದರೆ: “ಈ ಕಂಚುಕಿಯರಲ್ಲಿ ಕೆಲವರು ಸಬ್ಬತ್ ನಿಯಮವನ್ನು ಅನುಸರಿಸುತ್ತಾರೆ. ಅವರು ನನ್ನ ಇಷ್ಟಪ್ರಕಾರ ನಡೆದುಕೊಳ್ಳುತ್ತಾರೆ; ಅವರು ನನ್ನ ಒಡಂಬಡಿಕೆಗೆ ಸರಿಯಾಗಿ ನಡೆಯುತ್ತಾರೆ. ಆದ್ದರಿಂದ ನಾನು ಅವರಿಗೋಸ್ಕರ ನನ್ನ ಮಂದಿರದಲ್ಲಿ ಸ್ಮಾರಕಸ್ತಂಭ ನೆಡುವೆನು. ನನ್ನ ಪಟ್ಟಣದಲ್ಲಿ ಅವರ ಹೆಸರುಗಳು ಜ್ಞಾಪಕ ಮಾಡಲ್ಪಡುವವು. ಹೌದು, ಆ ಕಂಚುಕಿಗಳಿಗೆ ನಾನು ಮಕ್ಕಳಿಗಿಂತ ಉತ್ತಮವಾದದ್ದನ್ನು ಕೊಡುವೆನು. ಅವರಿಗೆ ನಿತ್ಯಕಾಲಕ್ಕೂ ಇರುವ ಹೆಸರನ್ನು ಕೊಡುವೆನು. ನನ್ನ ಜನರಿಂದ ಅವರನ್ನು ಬೇರ್ಪಡಿಸುವುದಿಲ್ಲ.”
6 “ಅನ್ಯದೇಶದವರಲ್ಲಿ ಕೆಲವರು ಯೆಹೋವನನ್ನು ಅನುಸರಿಸುವರು. ಆತನನ್ನು ಸೇವಿಸಿ ಆತನ ನಾಮವನ್ನು ಪ್ರೀತಿಸುವರು. ಅವರು ಯೆಹೋವನ ಸೇವಕರಾಗುವುದಕ್ಕಾಗಿ ಆತನೊಂದಿಗೆ ಸೇರಿಕೊಳ್ಳುವರು. ಸಬ್ಬತ್ದಿವಸವನ್ನು ಆರಾಧನೆ ಮಾಡುವ ವಿಶೇಷ ದಿವಸವೆಂದು ನೆನಸಿ ಒಡಂಬಡಿಕೆಯನ್ನು ಪರಿಪಾಲಿಸುವರು. 7 ನಾನು ಅವರನ್ನು ನನ್ನ ಪವಿತ್ರಪರ್ವತಕ್ಕೆ ತರುವೆನು; ನನ್ನ ಪ್ರಾರ್ಥನಾಲಯದಲ್ಲಿ ಅವರನ್ನು ಸಂತೋಷಪಡಿಸುವೆನು. ಅವರು ಅರ್ಪಿಸುವ ಸರ್ವಾಂಗಹೋಮಗಳನ್ನೂ ಯಜ್ಞಗಳನ್ನೂ ನಾನು ಮೆಚ್ಚಿಕೊಳ್ಳುವೆನು. ಯಾಕೆಂದರೆ ನನ್ನ ಆಲಯವು ಎಲ್ಲಾ ಜನಾಂಗದವರಿಗೆ ಪ್ರಾರ್ಥನಾಲಯವೆಂದು ಕರೆಯಲ್ಪಡುವುದು.” 8 ಇದು ನನ್ನ ಒಡೆಯನಾದ ಯೆಹೋವನ ಮಾತುಗಳು.
ಇಸ್ರೇಲ್ ಜನರು ತಮ್ಮ ದೇಶದಿಂದ ಹೊರಗೆ ಹಾಕಲ್ಪಟ್ಟರು. ಆದರೆ ಯೆಹೋವನು ಅವರನ್ನು ಮತ್ತೆ ಬರಮಾಡುತ್ತಾನೆ. ಆತನು, “ಈ ಜನರನ್ನು ನಾನು ಮತ್ತೆ ಒಟ್ಟುಗೂಡಿಸುತ್ತೇನೆ” ಎಂದು ಹೇಳುತ್ತಾನೆ.
9 ಕಾಡುಗಳಲ್ಲಿಯೂ ಹೊಲಗಳಲ್ಲಿಯೂ ಇರುವ ಪ್ರಾಣಿಗಳೇ, ಬಂದು ತಿನ್ನಿರಿ!
10 ಕಾವಲುಗಾರರೆಲ್ಲಾ ಕುರುಡರಾಗಿದ್ದಾರೆ.
ತಾವು ಮಾಡುತ್ತಿರುವುದು ಅವರಿಗೆ ತಿಳಿಯದು.
ಅವರು ಬೊಗಳದ ನಾಯಿಗಳಂತಿರುವರು.
ಅವುಗಳು ನೆಲದ ಮೇಲೆ ಬಿದ್ದುಕೊಂಡು ಮಲಗುವವು.
ಅವುಗಳಿಗೆ ಮಲಗುವುದೆಂದರೆ ತುಂಬಾ ಪ್ರೀತಿ.
11 ಅವರು ಹಸಿದ ನಾಯಿಗಳಂತಿದ್ದಾರೆ.
ಅವರು ಎಂದಿಗೂ ತೃಪ್ತಿ ಹೊಂದುವವರಲ್ಲ.
ಕುರುಬರಿಗೆ ತಾವು ಮಾಡುವುದೇ ತಿಳಿಯದು.
ಅವರು ತಮ್ಮ ಕುರಿಗಳ ಹಾಗೆ ದಾರಿತಪ್ಪಿದ್ದಾರೆ.
ಅವರೆಲ್ಲಾ ಅತ್ಯಾಶೆಯುಳ್ಳವರು;
ತಮ್ಮನ್ನು ತೃಪ್ತಿಪಡಿಸುವದೇ ಅವರ ಕೆಲಸ.
12 ಅವರು ಬಂದು,
“ನಾನು ಸ್ವಲ್ಪ ದ್ರಾಕ್ಷಾರಸ ಕುಡಿಯುತ್ತೇನೆ.
ಅಥವಾ ನಾನು ಸ್ವಲ್ಪ ಮದ್ಯವನ್ನು ಕುಡಿಯುತ್ತೇನೆ.
ನಾನು ನಾಳೆಯೂ ಹೀಗೆ ಮಾಡುವೆನು.
ನಾನು ಇನ್ನೂ ಹೆಚ್ಚಾಗಿ ಕುಡಿಯುವೆನು” ಎಂದು ಹೇಳುವರು.
ಇಸ್ರೇಲರು ದೇವರನ್ನು ಅನುಸರಿಸುವದಿಲ್ಲ
57 ನೀತಿವಂತರು ಇಲ್ಲವಾಗುವರು; ಯಾರೂ ಅದನ್ನು ಗಮನಿಸರು.
ಸದ್ಭಕ್ತರು ಗತಿಸಿಹೋಗುವರು;
ಅದಕ್ಕೆ ಕಾರಣವೇನೆಂದು ಯಾರೂ ಗ್ರಹಿಸರು.
ಕೇಡಿನಿಂದ ಪಾರಾಗಲೆಂದೇ ಸದ್ಭಕ್ತರಿಗೆ ಹೀಗಾಯಿತು
ಎಂದು ಯಾರೂ ಯೋಚಿಸರು.
2 ಆದರೆ ಶಾಂತಿಸಮಾಧಾನಗಳು ಬರುತ್ತವೆ.
ಆಗ ಜನರು ತಮ್ಮ ಸ್ವಂತ ಹಾಸಿಗೆಗಳ ಮೇಲೆ ವಿಶ್ರಮಿಸಿಕೊಳ್ಳುವರು; ದೇವರು ಅಪೇಕ್ಷಿಸುವ ರೀತಿಯಲ್ಲಿ ಜೀವಿಸುವರು.
3 “ಮಾಟಗಾರ್ತಿಯ ಮಕ್ಕಳೇ, ಇಲ್ಲಿಗೆ ಬನ್ನಿರಿ.
ನಿಮ್ಮ ತಂದೆಯು ವ್ಯಭಿಚಾರದ ಅಪರಾಧವೆಸಗಿದ್ದಾನೆ.
ನಿಮ್ಮ ತಾಯಿಯು ಸೂಳೆಯಾಗಿ ತನ್ನ ದೇಹವನ್ನು ಮಾರುತ್ತಿದ್ದಾಳೆ.
4 ನೀವು ಸುಳ್ಳುಹೇಳುವ ದುಷ್ಟಮಕ್ಕಳು.
ನೀವು ನನ್ನನ್ನು ಪರಿಹಾಸ್ಯ ಮಾಡುತ್ತೀರಿ.
ನನ್ನನ್ನು ಹಿಯಾಳಿಸುತ್ತೀರಿ;
ನಿಮ್ಮ ನಾಲಿಗೆಯನ್ನು ನನ್ನತ್ತ ಚಾಚುತ್ತೀರಿ.
5 ನೀವು ಮಾಡಬೇಕೆನ್ನುವುದು, ಪ್ರತಿಯೊಂದು ಹಸಿರು ಮರದಡಿಯಲ್ಲಿ
ಸುಳ್ಳುದೇವರ ಪೂಜೆ ಮಾಡುವದೊಂದನ್ನೇ,
ಪ್ರತಿಯೊಂದು ನೀರಿನ ಬುಗ್ಗೆಗಳ ಬಳಿಯಲ್ಲಿ ನಿಮ್ಮ ಮಕ್ಕಳನ್ನು ಕೊಂದು
ಬಂಡೆಕಲ್ಲಿನ ಮೇಲೆ ಅವರ ಯಜ್ಞಮಾಡುವಿರಿ.
6 ನದಿ ದಡದಲ್ಲಿರುವ ನುಣುಪಾದ ಕಲ್ಲುಗಳನ್ನು ಪೂಜಿಸಲು ಆಶಿಸುತ್ತೀರಿ.
ಅದರ ಮೇಲೆ ದ್ರಾಕ್ಷಾರಸ ಸುರಿದು ಪೂಜೆ ಮಾಡುತ್ತೀರಿ.
ಅವುಗಳಿಗೆ ಬಲಿಯರ್ಪಿಸುತ್ತೀರಿ.
ಆದರೆ ಅದರಿಂದ ನಿಮಗೆ ದೊರಕುವುದು ಕಲ್ಲೇ.
ಈ ವಿಷಯ ನನ್ನನ್ನು ಸಂತೋಷಗೊಳಿಸುತ್ತದೆಂದು ನೆನಸುತ್ತೀರೋ? ಇಲ್ಲ. ಅವು ನನ್ನನ್ನು ಸಂತೋಷಪಡಿಸುವದಿಲ್ಲ.
7 ಪ್ರತಿಯೊಂದು ಬೆಟ್ಟ ಮತ್ತು
ಉನ್ನತ ಶಿಖರಗಳ ಮೇಲೆ ನಿಮ್ಮ ಹಾಸಿಗೆಯನ್ನು ಹಾಸುವಿರಿ.
ನೀವು ಅಲ್ಲಿಗೆ ಹೋಗಿ ಬಲಿಯರ್ಪಿಸುತ್ತೀರಿ.
8 ಆ ಬಳಿಕ ಆ ಹಾಸಿಗೆಯ ಮೇಲೆ ಮಲಗಿ ಆ ದೇವರುಗಳನ್ನು ಪ್ರೀತಿಸಿ
ನನಗೆ ವಿರುದ್ಧವಾಗಿ ಪಾಪ ಮಾಡುತ್ತೀರಿ.
ನೀವು ಆ ದೇವರುಗಳನ್ನು ಪ್ರೀತಿಸುತ್ತೀರಿ.
ಅವುಗಳ ಬೆತ್ತಲೆ ಶರೀರಗಳನ್ನು ನೋಡುವದರಲ್ಲಿ ಸಂತೋಷಿಸುವಿರಿ.
ನೀವು ನನ್ನೊಂದಿಗೆ ಇದ್ದಿರಿ.
ಆದರೆ ಈಗ ನನ್ನನ್ನು ತೊರೆದು ಅವುಗಳನ್ನು ಸೇರಿಕೊಂಡಿದ್ದೀರಿ.
ನನ್ನನ್ನು ಜ್ಞಾಪಕ ಹುಟ್ಟಿಸುವ ವಿಷಯಗಳನ್ನು ನೀವು ಅಡಗಿಸಿಡುತ್ತೀರಿ.
ಅವುಗಳನ್ನು ಬಾಗಿಲ ಹಿಂದೆ ಅಡಗಿಸಿಡುತ್ತೀರಿ.
ಅನಂತರ ನೀವು ಹೋಗಿ ಆ ಸುಳ್ಳುದೇವರೊಂದಿಗೆ ಒಪ್ಪಂದ ಮಾಡುತ್ತೀರಿ.
9 ಮೋಲೆಕನಿಗೆ ಅಂದವಾಗಿ ತೋರುವಂತೆ
ನೀವು ನಿಮಗೆ ಎಣ್ಣೆ, ಸುಗಂಧದ್ರವ್ಯಗಳನ್ನು ಹಚ್ಚಿಕೊಂಡು ಹೋಗುವಿರಿ.
ನಿಮ್ಮ ದೂತರನ್ನು ದೂರದೇಶಕ್ಕೆ ಕಳುಹಿಸುತ್ತೀರಿ.
ಇವೇ ನಿಮ್ಮನ್ನು ನರಕಕ್ಕೆ ನಡಿಸುತ್ತವೆ. ಅಲ್ಲಿ ಮರಣವಿರುವದು.
10 ಇವುಗಳನ್ನೆಲ್ಲಾ ನೀವು ಬಹು ಪ್ರಯಾಸದಿಂದ ಮಾಡಿದರೂ ಆಯಾಸಗೊಂಡಿಲ್ಲ.
ಯಾಕೆಂದರೆ ಇವುಗಳನ್ನು ಮಾಡುವುದರಲ್ಲೇ ನಿಮಗೆ ಸಂತೋಷ.
11 ನೀವು ನನ್ನನ್ನು ಜ್ಞಾಪಕ ಮಾಡಿಕೊಳ್ಳಲಿಲ್ಲ.
ನನ್ನನ್ನು ಗಮನಕ್ಕೇ ತರಲಿಲ್ಲ.
ಹೀಗಿರಲು ನೀವು ಯಾರ ಬಗ್ಗೆ ಚಿಂತಿಸುತ್ತಿದ್ದಿರಿ?
ನೀವು ಯಾರಿಗೆ ಭಯಪಡುತ್ತಿದ್ದಿರಿ?
ನೀವು ಸುಳ್ಳಾಡಿದ್ದು ಯಾಕೆ?
ನೋಡಿ, ನಾನು ಬಹಳ ಸಮಯದಿಂದ ಸುಮ್ಮನಿದ್ದೆನು.
ಆದರೆ ನೀವು ನನ್ನನ್ನು ಗೌರವಿಸಲಿಲ್ಲ.
12 ನೀವು ಮಾಡುವ ಧಾರ್ಮಿಕ ಕಾರ್ಯಗಳನ್ನೂ ನಿಮ್ಮ ಒಳ್ಳೆತನವನ್ನೂ
ನಾನು ಹೇಳಿದರೂ ಅವುಗಳೆಲ್ಲಾ ನಿಷ್ಪ್ರಯೋಜಕವಾದವುಗಳು.
13 ನಿಮಗೆ ಸಹಾಯದ ಅವಶ್ಯಕತೆ ಬಂದಾಗ
ನೀವು ಆ ಸುಳ್ಳುದೇವರುಗಳನ್ನು ಕರೆಯುವಿರಿ.
ಅವುಗಳನ್ನು ನಿಮ್ಮ ಸುತ್ತಲೂ ಸೇರಿಸಿಕೊಂಡಿರುವಿರಿ.
ಆದರೆ ನಾನು ಹೇಳುವುದೇನೆಂದರೆ, ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವುದು.
ಅವುಗಳನ್ನೆಲ್ಲ ಉಸಿರಿನ ಗಾಳಿಯು ನಿಮ್ಮಿಂದ ದೂರಕ್ಕೆ ಕೊಂಡೊಯ್ಯುವುದು.
ಆದರೆ ನನ್ನನ್ನು ಅವಲಂಬಿಸಿರುವವರು ಭೂಮಿಯನ್ನು ಪಡೆದುಕೊಳ್ಳುವರು.
ನನ್ನ ಪವಿತ್ರ ಪರ್ವತವನ್ನು ಬಾಧ್ಯವಾಗಿ ಹೊಂದಿಕೊಳ್ಳುವರು.”
ಯೆಹೋವನು ತನ್ನ ಜನರನ್ನು ಕಾಪಾಡುವನು
14 ದಾರಿಯನ್ನು ಸರಿಪಡಿಸಿರಿ, ದಾರಿಯನ್ನು ಸರಿಪಡಿಸಿರಿ!
ನನ್ನ ಜನರಿಗೆ ದಾರಿಯು ಸರಾಗವಾಗಿರುವಂತೆ ಅಡತಡೆಗಳನ್ನು ತೆಗೆದುಹಾಕಿರಿ ಎಂದು ಒಂದು ಸ್ವರವು ನುಡಿಯುತ್ತದೆ.
15 ದೇವರು ಉನ್ನತಸ್ಥಾನದಲ್ಲಿ ಎತ್ತಲ್ಪಟ್ಟಿದ್ದಾನೆ.
ಆತನು ಸದಾಕಾಲ ಜೀವಿಸುತ್ತಾನೆ.
ಆತನ ಹೆಸರು ಪರಿಶುದ್ಧವಾದದ್ದು.
ದೇವರು ಹೇಳುವುದೇನೆಂದರೆ, “ನಾನು ಉನ್ನತಲೋಕವೆಂಬ ಪವಿತ್ರಸ್ಥಳದಲ್ಲಿ ವಾಸಿಸುತ್ತೇನೆ.
ಅದೇ ಸಮಯದಲ್ಲಿ ದುಃಖಪಡುವವರೂ ದೀನರೂ ಆಗಿರುವ ಜನರೊಂದಿಗೆ ವಾಸಮಾಡುತ್ತೇನೆ.
ಆತ್ಮದಲ್ಲಿ ದೀನರಾಗಿರುವವರಿಗೆ ನಾನು ಹೊಸಜನ್ಮ ಕೊಡುತ್ತೇನೆ.
ಹೃದಯದಲ್ಲಿ ದುಃಖಿಸುವವರಿಗೆ ನಾನು ಹೊಸ ಜೀವ ಕೊಡುತ್ತೇನೆ.
16 ನಾನು ನಿತ್ಯಕಾಲಕ್ಕೂ ಯುದ್ಧ ಮಾಡುವವನಲ್ಲ.
ನಾನು ಎಂದೆಂದಿಗೂ ಕೋಪಗೊಳ್ಳುವವನಲ್ಲ.
ನಾನು ಹಾಗೆ ಮಾಡುವವನಾದರೆ
ನಾನು ಕೊಟ್ಟಿರುವ ಮನುಷ್ಯನ ಆತ್ಮವು ನನ್ನ ಮುಂದೆಯೇ ಸಾಯುವದು.
17 ಈ ಜನರು ದುಷ್ಕೃತ್ಯಗಳನ್ನು ನಡಿಸಿ ನನಗೆ ಕೋಪವನ್ನೆಬ್ಬಿಸಿದರು.
ಆದ್ದರಿಂದ ನಾನು ಇಸ್ರೇಲನ್ನು ಶಿಕ್ಷಿಸಿದೆನು.
ನಾನು ಕೋಪಗೊಂಡು ಅವರಿಗೆ ವಿಮುಖನಾದೆನು.
ಇಸ್ರೇಲ್ ನನ್ನನ್ನು ತೊರೆದು ತನಗಿಷ್ಟವಾದ ಸ್ಥಳಕ್ಕೆ[a] ಹೋದನು.
18 ಇಸ್ರೇಲ್ ಎಲ್ಲಿಗೆ ಹೋದನೆಂದು ನಾನು ನೋಡಿದೆನು.
ನಾನು ಅವನನ್ನು ಸ್ವಸ್ಥ ಮಾಡುವೆನು.
ಅವನನ್ನು ಆದರಿಸುವೆನು.
ಒಳ್ಳೆಯ ಮಾತುಗಳಿಂದ ಅವನನ್ನು ರಮಿಸುವೆನು.
ಆಗ ಅವನೂ ಅವನ ಜನರೂ ವ್ಯಸನಪಡುವದಿಲ್ಲ.
19 ನಾನು ಅವರಿಗೆ ‘ಸಮಾಧಾನ’ ಎಂಬ ಹೊಸ ಪದವನ್ನು ಕಲಿಸುತ್ತೇನೆ.
ನನ್ನ ಬಳಿಯಲ್ಲಿರುವವರಿಗೂ ನನ್ನಿಂದ ದೂರದಲ್ಲಿರುವವರಿಗೂ ಸಮಾಧಾನವನ್ನು ಅನುಗ್ರಹಿಸುವೆನು.
ನಾನು ಅವರನ್ನು ಗುಣಪಡಿಸುವೆನು.”
ಇದು ಯೆಹೋವನ ನುಡಿ.
20 ದುಷ್ಟಜನರು ರೊಚ್ಚಿಗೆದ್ದ ಸಾಗರದಂತೆ,
ಸಮಾಧಾನವಾಗಿಯೂ ಮೌನವಾಗಿಯೂ ಇರಲಾರರು.
ಅವರು ಸಿಟ್ಟುಗೊಂಡು ಸಾಗರದಂತೆ
ಕೆಸರನ್ನು ಕದಡಿಸುವರು.
21 ನನ್ನ ದೇವರು ಹೇಳುವುದೇನೆಂದರೆ:
“ದುಷ್ಟ ಜನರಿಗೆ ಸಮಾಧಾನವಿಲ್ಲ.”
ದೇವರನ್ನು ಅನುಸರಿಸಲು ಜನರಿಗೆ ಉಪದೇಶ
58 ಎಷ್ಟು ಗಟ್ಟಿಯಾಗಿ ಆರ್ಭಟಿಸಬಹುದೋ ಅಷ್ಟು ಆರ್ಭಟಿಸಿರಿ, ನಿಲ್ಲಿಸಬೇಡಿರಿ.
ತುತ್ತೂರಿಯಂತೆ ಗಟ್ಟಿಯಾಗಿ ಕಿರುಚಿರಿ.
ಜನರು ಮಾಡಿದ ಪಾಪಗಳನ್ನು ಅವರಿಗೆ ತಿಳಿಸಿರಿ.
ಯಾಕೋಬನ ವಂಶದವರಿಗೆ ಅವರ ಪಾಪಗಳನ್ನು ತಿಳಿಸಿರಿ.
2 ಆಗ ಅವರು ದಿನನಿತ್ಯ ನನ್ನನ್ನು ಆರಾಧಿಸಲು ಬರುವರು.
ಜನರು ನನ್ನ ವಿಧಿಗಳನ್ನು ಕಲಿತುಕೊಳ್ಳಲು ಇಷ್ಟಪಡುವರು.
ಆಗ ಅವರು ಸರಿಯಾಗಿ ಜೀವಿಸುವ ಜನಾಂಗವಾಗುವರು.
ಅವರು ದೇವರ ಒಳ್ಳೆಯ ಆಜ್ಞೆಗಳನ್ನು ಬಿಡದೆ ಅನುಸರಿಸುವರು.
ಅವರು ಪಕ್ಷಪಾತವಿಲ್ಲದೆ ನ್ಯಾಯತೀರಿಸಲು ನನ್ನನ್ನು ಕೇಳುವರು.
ದೇವರ ನಿರ್ಧಾರವನ್ನು ಕೇಳಲು ಆತನ ಬಳಿಗೆ ಹೋಗಲು ಇಚ್ಛಿಸುವರು.
3 ಈಗ ಆ ಜನರು ಹೀಗೆ ಹೇಳುತ್ತಾರೆ, “ನಾವು ನಿನ್ನನ್ನು ಗೌರವಿಸಲು ಉಪವಾಸಮಾಡಿದೆವು. ನೀನು ನಮ್ಮನ್ನೇಕೆ ಗಮನಿಸುವದಿಲ್ಲ? ನಿನ್ನನ್ನು ಗೌರವಿಸುವದಕ್ಕಾಗಿ ನಾವು ನಮ್ಮ ದೇಹಗಳನ್ನು ದಂಡಿಸಿದೆವು. ನೀನೇಕೆ ನಮ್ಮನ್ನು ಗಮನಿಸುವದಿಲ್ಲ?”
ಆದರೆ ಯೆಹೋವನು ಹೇಳುವುದೇನೆಂದರೆ: “ವಿಶೇಷ ದಿವಸಗಳಲ್ಲಿ ನಿಮ್ಮ ಇಷ್ಟಾನುಸಾರ[b] ಉಪವಾಸ ಮಾಡುವಿರಿ. ನೀವು ನಿಮ್ಮ ಸ್ವಂತ ದೇಹಗಳನ್ನು ದಂಡಿಸದೆ ನಿಮ್ಮ ಸೇವಕರನ್ನು ದಂಡಿಸುತ್ತಿದ್ದೀರಿ. 4 ನೀವು ಆಹಾರಕ್ಕಾಗಿ ಹಸಿವೆಯಿಂದಿಲ್ಲ. ನೀವು ಜಗಳ, ವಾಗ್ವಾದಕ್ಕಾಗಿ ಹಸಿದಿದ್ದೀರಿ. ನಿಮ್ಮ ಕ್ರೂರ ಕೈಗಳಿಂದ ಜನರನ್ನು ಹೊಡೆಯಲು ಹಸಿವೆಯಿಂದಿದ್ದೀರಿ. ನೀವು ಉಪವಾಸ ಮಾಡುವಾಗ ನನಗಾಗಿ ಮಾಡುವದಿಲ್ಲ. ನನ್ನನ್ನು ಸ್ತುತಿಸಲು ನೀವು ನಿಮ್ಮ ಸ್ವರವನ್ನು ಉಪಯೋಗಿಸುವದಿಲ್ಲ. 5 ಉಪವಾಸದ ದಿವಸಗಳಲ್ಲಿ ಜನರು ತಮ್ಮ ದೇಹದಂಡನೆ ಮಾಡುವದನ್ನು ನೋಡಲು ಆಶಿಸುತ್ತೇನೆ ಎಂದು ನೆನಸಿರುವಿರಾ? ಜನರು ತಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಕೆಂದು ನಾನು ಆಶಿಸುವುದಾಗಿ ನೀವು ತಿಳಿದುಕೊಂಡಿದ್ದೀರಾ? ಜನರು ಸತ್ತ ಸಸಿಗಳಂತೆ ನನಗೆ ಅಡ್ಡಬೀಳಬೇಕೆಂದೂ ಶೋಕವಸ್ತ್ರಗಳನ್ನು ಧರಿಸಬೇಕೆಂದೂ ನಾನು ಆಶಿಸುವುದಾಗಿ ತಿಳಿದುಕೊಂಡಿದ್ದೀರಾ? ಅವರು ಬೂದಿಯ ಮೇಲೆ ಕುಳಿತುಕೊಂಡು ತಮ್ಮ ದುಃಖವನ್ನು ವ್ಯಕ್ತಪಡಿಸಬೇಕೆಂದು ನಾನು ಆಶಿಸುತ್ತೇನೋ? ನೀವು ಉಪವಾಸದ ದಿವಸಗಳಲ್ಲಿ ಅದನ್ನೇ ಮಾಡುವವರಾಗಿರುತ್ತೀರಿ. ಯೆಹೋವನು ಅದನ್ನೇ ಆಶಿಸುವನೆಂದು ನಂಬುತ್ತೀರೋ?
6 “ನನಗೆ ಬೇಕಾಗಿರುವ ವಿಶೇಷ ದಿವಸ ಯಾವುದೆಂದು ನಾನು ಹೇಳುತ್ತೇನೆ. ಅದು ಜನರನ್ನು ಸ್ವತಂತ್ರರನ್ನಾಗಿ ಮಾಡುವ ದಿವಸ, ಜನರಿಂದ ಅವರ ಭಾರವನ್ನು ತೆಗೆದುಹಾಕುವ ದಿವಸ; ತೊಂದರೆಗೀಡಾಗಿರುವ ಜನರನ್ನು ವಿಮುಕ್ತರನ್ನಾಗಿ ಮಾಡುವ ದಿವಸ; ಅವರ ಹೆಗಲಿನಿಂದ ಭಾರದ ಹೊರೆಯನ್ನು ಇಳಿಸುವ ದಿವಸ. 7 ನೀವು ನಿಮ್ಮ ಊಟವನ್ನು ಹಸಿದವರೊಂದಿಗೆ ಹಂಚಿಕೊಳ್ಳುವದನ್ನು ನಾನು ನೋಡಲು ಆಶಿಸುತ್ತೇನೆ. ಮನೆಗಳಿಲ್ಲದ ಬಡ ಜನರನ್ನು ಕಂಡುಹಿಡಿದು ಅವರನ್ನು ನಿಮ್ಮ ಮನೆಗಳಿಗೆ ಕರೆದುಕೊಂಡು ಬರುವದನ್ನು ನೋಡಲು ಆಶಿಸುತ್ತೇನೆ. ಬಟ್ಟೆ ಇಲ್ಲದ ಒಬ್ಬ ಮನುಷ್ಯನನ್ನು ನೋಡಿದರೆ ನೀವು ನಿಮ್ಮ ಬಟ್ಟೆಯನ್ನು ಅವನಿಗೆ ಕೊಡಿರಿ. ಅವರಿಗೆ ಸಹಾಯ ಮಾಡಲು ಹಿಂಜರಿಯಬೇಡಿರಿ. ಅವರು ನಿಮ್ಮಂತೆ ಮನುಷ್ಯರಲ್ಲವೋ?”
8 ನೀವು ಹೀಗೆ ಮಾಡಿದ್ದಲ್ಲಿ ನೀವು ಬೆಳಕಿನಂತೆ ಪ್ರಕಾಶಿಸುವಿರಿ. ಆಗ ನಿಮ್ಮ ಗಾಯಗಳು ಗುಣವಾಗುವವು. ನಿಮ್ಮ ಒಳ್ಳೆಯತನವು ನಿಮ್ಮ ಮುಂದೆ ನಡೆಯುವುದು. ಯೆಹೋವನ ಮಹಿಮೆಯು ನಿಮ್ಮ ಹಿಂದಿನಿಂದ ನಿಮ್ಮನ್ನು ಹಿಂಬಾಲಿಸುವದು. 9 ಆಗ ನೀವು ಯೆಹೋವನನ್ನು ಕರೆದಾಗ ಆತನು ನಿಮಗೆ ಉತ್ತರಿಸುವನು. ನೀವು ಆತನನ್ನು ಕೂಗಿದಾಗ, “ಇಗೋ, ನಾನಿದ್ದೇನೆ” ಎಂದು ಅನ್ನುವನು.
ನೀವು ಜನರಿಗೆ ಕಷ್ಟಕೊಡುವದನ್ನೂ ಅವರಿಗೆ ಭಾರ ಹೊರಿಸುವದನ್ನೂ ನಿಲ್ಲಿಸಬೇಕು. ಜನರಿಗೆ ಕಟುವಾಗಿ ಮಾತನಾಡಿ ಅವರನ್ನು ಬಯ್ಯುವದನ್ನು ನಿಲ್ಲಿಸಬೇಕು. 10 ಹಸಿದ ಜನರಿಗಾಗಿ ವ್ಯಸನಪಟ್ಟು ಅವರಿಗೆ ಆಹಾರವನ್ನು ಕೊಡಬೇಕು. ಸಂಕಷ್ಟ ಅನುಭವಿಸುವ ಜನರಿಗೆ ಸಹಾಯಮಾಡಿ ಅವರ ಕೊರತೆಗಳನ್ನು ನೀಗಿಸಬೇಕು. ಆಗ ನಿಮ್ಮ ಬೆಳಕು ಕತ್ತಲಲ್ಲಿ ಪ್ರಕಾಶಿಸುವದು. ನಿಮಗೆ ಆಗ ದುಃಖವಿರದು. ಮಧಾಹ್ನದ ಸೂರ್ಯನಂತೆ ನೀವು ಹೊಳೆಯುವಿರಿ.
11 ಯೆಹೋವನು ಯಾವಾಗಲೂ ನಿಮ್ಮನ್ನು ನಡೆಸುವನು. ಒಣನೆಲದಲ್ಲಿ ನಿಮ್ಮ ಆತ್ಮಗಳನ್ನು ತೃಪ್ತಿಪಡಿಸುವನು. ನಿಮ್ಮ ಎಲುಬುಗಳಿಗೆ ಬಲವನ್ನು ಕೊಡುವನು. ನೀರಿನಿಂದ ತೇವವಾಗಿರುವ ತೋಟದಂತೆ ನೀವು ಇರುವಿರಿ. ನಿತ್ಯವೂ ನೀರಿರುವ ಬುಗ್ಗೆಯಂತೆ ನೀವಿರುವಿರಿ.
12 ಬಹಳ ವರ್ಷಗಳಿಂದ ನಿಮ್ಮ ಪಟ್ಟಣಗಳು ಹಾಳಾಗಿ ಬಿದ್ದಿವೆ. ಆದರೆ ಹೊಸ ಪಟ್ಟಣಗಳು ಏಳುವವು. ಅವುಗಳ ಅಸ್ತಿವಾರಗಳು ಬಹಳ ವರ್ಷ ಬಾಳುವವು. ನೀವು “ಬೇಲಿ ಸರಿಮಾಡುವವರು” ಎಂದು ಕರೆಯಲ್ಪಡುವಿರಿ; “ಮನೆಗಳನ್ನು, ರಸ್ತೆಗಳನ್ನು ನಿರ್ಮಿಸುವವರು” ಎಂದು ನೀವು ಕರೆಯಲ್ಪಡುವಿರಿ.
13 ಸಬ್ಬತ್ತಿನ ವಿಷಯವಾಗಿ ಯೆಹೋವನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ನೀವು ಅನುಸರಿಸಿದರೆ ಮತ್ತು ಆ ವಿಶೇಷ ದಿನದಲ್ಲಿ ಸ್ವೇಚ್ಛೆಯಾಗಿ ನಡೆಯದಿದ್ದರೆ ಇದೆಲ್ಲಾ ನಿಮಗೆ ದೊರೆಯುವುದು. ಸಬ್ಬತ್ದಿವಸವನ್ನು ನೀವು ಸಂತಸದ ದಿವಸವೆಂದು ಕರೆಯಬೇಕು. ದೇವರ ಆ ವಿಶೇಷ ದಿವಸವನ್ನು ನೀವು ಸನ್ಮಾನಿಸಿ ಆ ದಿವಸದಲ್ಲಿ ನಿಮ್ಮ ಸ್ವಕಾರ್ಯಗಳನ್ನು ಮಾಡಕೂಡದು; ಹರಟೆ ಹೊಡೆಯಕೂಡದು. 14 ಆಗ ನೀವು ಯೆಹೋವನಲ್ಲಿ ಉಲ್ಲಾಸಿಸುವಿರಿ. ಆತನು ನಿಮ್ಮನ್ನು ಭೂಮಿಯಿಂದ ಮೇಲಕ್ಕಿರುವ ಉನ್ನತಸ್ಥಾನಕ್ಕೆ ಕೊಂಡೊಯ್ಯುವನು; ನಿಮ್ಮ ಪೂರ್ವಿಕನಾದ ಯಾಕೋಬನ ಸ್ವಾಸ್ತ್ಯವನ್ನು ನೀವು ಅನುಭವಿಸುವಂತೆ ಆತನು ನಿಮಗೆ ಅದನ್ನು ಕೊಡುವನು. ಇದು ಯೆಹೋವನ ನುಡಿ.
ಕೆಟ್ಟಕಾರ್ಯಗಳು ಸಂಭವಿಸುವವು
2 ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವುದನ್ನು ಕುರಿತು ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾವೆಲ್ಲರೂ ಒಟ್ಟಾಗಿ ಸೇರಿ ಆತನನ್ನು ಸಂಧಿಸುವ ಕಾಲವನ್ನು ಕುರಿತು ನಿಮ್ಮೊಡನೆ ಮಾತನಾಡಲು ಇಚ್ಛಿಸುತ್ತೇವೆ. 2 ಪ್ರಭುವಿನ ದಿನವು ಈಗಾಗಲೇ ಬಂದುಬಿಟ್ಟಿತು ಎಂದು ಯಾರಾದರು ನಿಮಗೆ ಹೇಳಿದರೆ ಆ ಕೂಡಲೇ ಕಳವಳಗೊಳ್ಳಬೇಡಿ ಅಥವಾ ಭಯಪಡಬೇಡಿ. ಯಾವನಾದರೂ ತನ್ನ ಪ್ರವಾದನೆಯಲ್ಲಾಗಲಿ ಉಪದೇಶದಲ್ಲಾಗಲಿ ಹಾಗೆ ಹೇಳುವ ಸಾಧ್ಯತೆ ಇದೆ. ಯಾವನಾದರೂ ಸುಳ್ಳುಪತ್ರವನ್ನೇ ನಮ್ಮ ಹೆಸರಿನಲ್ಲಿ ತಾನೇ ಬರೆದು ನಿಮ್ಮ ಮುಂದೆ ಓದಿ ತಿಳಿಸುವ ಸಾಧ್ಯತೆಯೂ ಇದೆ. 3 ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸಲು ಅವಕಾಶ ನೀಡದಿರಿ. ಜನರು ದೇವರಿಗೆ ವಿಮುಖರಾಗದ ಹೊರತು, ಅಧರ್ಮಸ್ವರೂಪನು ಕಾಣಿಸಿಕೊಳ್ಳದ ಹೊರತು ಆ ದಿನವು ಬರುವುದಿಲ್ಲ. 4 ದೇವರೆಂದು ಕರೆಸಿಕೊಳ್ಳುವ ಏನನ್ನೇ ಆಗಲಿ, ಜನರು ಪೂಜಿಸುವ ಯಾವುದನ್ನೇ ಆಗಲಿ ಅಧರ್ಮಸ್ವರೂಪನು ವಿರೋಧಿಸಿ, ಅವುಗಳಿಗಿಂತ ತನ್ನನ್ನು ತಾನೇ ಹೆಚ್ಚಿಸಿಕೊಂಡು ದೇವರ ಆಲಯದೊಳಕ್ಕೆ ಹೋಗಿ ಕುಳಿತುಕೊಂಡು ತಾನೇ ದೇವರೆಂದು ಹೇಳಿಕೊಳ್ಳುತ್ತಾನೆ.
5 ಈ ಸಂಗತಿಗಳೆಲ್ಲವೂ ಸಂಭವಿಸುತ್ತವೆಯೆಂದು ನಾನು ನಿಮಗೆ ಮೊದಲೇ ತಿಳಿಸಿದ್ದೇನೆ. ಜ್ಞಾಪಕವಿಲ್ಲವೇ? 6 ಈಗ ಅಧರ್ಮಸ್ವರೂಪನನ್ನು ತಡೆಹಿಡಿದಿರುವುದು ಯಾವುದೆಂಬುದು ನಿಮಗೆ ತಿಳಿದಿದೆ. ಅವನು ತಕ್ಕಕಾಲದಲ್ಲಿ ಬರಲೆಂದೇ ಅವನನ್ನು ಈಗ ತಡೆಹಿಡಿಯಲಾಗಿದೆ. 7 ರಹಸ್ಯವಾದ ದುಷ್ಟಶಕ್ತಿಯು ಈಗಾಗಲೇ ಪ್ರಪಂಚದಲ್ಲಿ ತನ್ನ ಕಾರ್ಯವನ್ನು ಸಾಧಿಸುತ್ತಾ ಇದೆ. ಆದರೆ ಆ ರಹಸ್ಯವಾದ ದುಷ್ಟಶಕ್ತಿಯನ್ನು ತಡೆಹಿಡಿಯುವ ಒಬ್ಬಾತನಿದ್ದಾನೆ. ಆತನು ತೆಗೆದುಬಿಡಲ್ಪಟ್ಟ ಕೂಡಲೇ 8 ಅಧರ್ಮಸ್ವರೂಪನು ಕಾಣಿಸಿಕೊಳ್ಳುತ್ತಾನೆ. ಪ್ರಭುವಾದ ಯೇಸು ಅವನನ್ನು ತನ್ನ ಬಾಯಿಯ ಉಸಿರಿನಿಂದಲೇ ಕೊಲ್ಲುವನು; ತನ್ನ ಪ್ರತ್ಯಕ್ಷತೆಯ ಮಹಿಮೆಯಿಂದ ನಾಶಪಡಿಸುವನು.
9 ಆ ಅಧರ್ಮಸ್ವರೂಪನು ಸೈತಾನನ ಮಹಾಶಕ್ತಿಯಿಂದ ಕೂಡಿದವನಾಗಿರುತ್ತಾನೆ. ಅವನು ಅನೇಕ ಮೋಸದ ಪವಾಡಗಳನ್ನು, ಸೂಚಕಕಾರ್ಯಗಳನ್ನು, ಅದ್ಭುತಕಾರ್ಯಗಳನ್ನು ಮಾಡುತ್ತಾನೆ. 10 ಸತ್ಯವನ್ನು ಪ್ರೀತಿಸದೆ ತಪ್ಪಿಹೋಗಿರುವ ಜನರನ್ನು ಮೋಸಗೊಳಿಸಲು, ಅವನು ಎಲ್ಲಾ ವಿಧವಾದ ತಂತ್ರಗಳನ್ನು ಮಾಡುವನು. (ಅವರು ಸತ್ಯವನ್ನು ಪ್ರೀತಿಸಿದ್ದರೆ, ರಕ್ಷಣೆ ಹೊಂದುತ್ತಿದ್ದರು.) 11 ಆದರೆ ಆ ಜನರು ಸತ್ಯವನ್ನು ಪ್ರೀತಿಸಲಿಲ್ಲ. ಆದಕಾರಣ, ಸತ್ಯವನ್ನು ತೊರೆದು, ಸತ್ಯವಲ್ಲದ್ದನ್ನು ನಂಬುವಂತೆ ಮಾಡುವ ಶಕ್ತಿಯೊಂದನ್ನು ದೇವರು ಅವರ ಬಳಿಗೆ ಕಳುಹಿಸುತ್ತಾನೆ. 12 ಸತ್ಯವನ್ನು ನಂಬದೆ, ಕೆಟ್ಟಕಾರ್ಯಗಳನ್ನು ಮಾಡುವುದರಲ್ಲಿ ಸಂತೋಷಪಡುವ ಜನರೆಲ್ಲರೂ ದಂಡನೆಗೆ ಒಳಗಾಗುವರು.
ರಕ್ಷಣೆಗಾಗಿ ನೀವು ಆರಿಸಲ್ಪಟ್ಟಿರುವಿರಿ
13 ಸಹೋದರ ಸಹೋದರಿಯರೇ, ಪ್ರಭುವು ನಿಮ್ಮನ್ನು ಪ್ರೀತಿಸುತ್ತಾನೆ. ನಿಮ್ಮನ್ನು ರಕ್ಷಿಸಬೇಕೆಂದು ದೇವರು ನಿಮ್ಮನ್ನು ಆದಿಯಲ್ಲಿಯೇ ಆರಿಸಿಕೊಂಡನು. ಆದ್ದರಿಂದ ನಿಮ್ಮ ವಿಷಯದಲ್ಲಿ ದೇವರಿಗೆ ಯಾವಾಗಲೂ ಕೃತಜ್ಞತೆ ಸಲ್ಲಿಸಬೇಕು. ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವ ಪವಿತ್ರಾತ್ಮನಿಂದ ಮತ್ತು ಸತ್ಯದ ಮೇಲೆ ನಿಮಗಿರುವ ನಂಬಿಕೆಯಿಂದ ನೀವು ರಕ್ಷಣೆ ಹೊಂದಿದ್ದೀರಿ. 14 ನೀವು ರಕ್ಷಣೆಯನ್ನು ಹೊಂದಿಕೊಂಡು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮಹಿಮೆಯಲ್ಲಿ ಪಾಲುಗಾರರಾಗಬೇಕೆಂದು, ನಾವು ಸಾರಿದ ಸುವಾರ್ತೆಯ ಮೂಲಕ ದೇವರು ನಿಮ್ಮನ್ನು ಕರೆದನು. 15 ಸಹೋದರ ಸಹೋದರಿಯರೇ, ದೃಢವಾಗಿರಿ. ನಾವು ಮಾತಿನ ಮೂಲಕ ಮತ್ತು ಪತ್ರಗಳ ಮೂಲಕ ನಿಮಗೆ ತಿಳಿಸಿದ ಬೋಧನೆಗಳನ್ನು ನಂಬಿಕೊಂಡೇ ಇರಿ.
16-17 ನೀವು ಹೇಳುವ ಒಳ್ಳೆಯ ಸಂಗತಿಗಳಲ್ಲಿ ಮತ್ತು ಮಾಡುವ ಒಳ್ಳೆಯ ಕಾರ್ಯಗಳಲ್ಲಿ ನಿಮಗೆ ಬಲವನ್ನೂ ಆದರಣೆಯನ್ನೂ ಪ್ರಭುವಾದ ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರು ನಿಮಗೆ ದಯಪಾಲಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ. ದೇವರು ನಮ್ಮನ್ನು ಪ್ರೀತಿಸಿದನು. ಆತನು ತನ್ನ ಕೃಪೆಯಿಂದಲೇ ನಮಗೆ ಒಳ್ಳೆಯ ನಿರೀಕ್ಷೆಯನ್ನೂ ಶಾಶ್ವತವಾದ ಆದರಣೆಯನ್ನೂ ದಯಪಾಲಿಸಿದನು.
Kannada Holy Bible: Easy-to-Read Version. All rights reserved. © 1997 Bible League International