Old/New Testament
ನೀತಿಯುತವಾದ ಹೊಸ ಜೆರುಸಲೇಮ್
62 ಚೀಯೋನನ್ನು ನಾನು ಪ್ರೀತಿಸುತ್ತೇನೆ.
ಆಕೆಯ ವಿಷಯವಾಗಿ ನಾನು ಮಾತಾಡುತ್ತಲೇ ಇರುವೆನು.
ನಾನು ಜೆರುಸಲೇಮನ್ನು ಪ್ರೀತಿಸುತ್ತೇನೆ.
ಅದರ ವಿಷಯವಾಗಿ ಮಾತನಾಡುವದನ್ನು ನಾನು ನಿಲ್ಲಿಸುವದಿಲ್ಲ.
ಧರ್ಮವು ಬೆಳಕಿನಂತೆ ಪ್ರಕಾಶಿಸುವ ತನಕ ನಾನು ಮಾತನಾಡುವೆನು.
ರಕ್ಷಣೆಯು ಬೆಂಕಿಯಂತೆ ಪ್ರಜ್ವಲಿಸುವವರೆಗೆ ನಾನು ಮಾತನಾಡುವೆನು.
2 ಆಗ ಎಲ್ಲಾ ಜನಾಂಗದವರು ಆಕೆಯ ನ್ಯಾಯವನ್ನು ನೋಡುವರು.
ಎಲ್ಲಾ ಅರಸರುಗಳು ಆಕೆಯ ಮಹಿಮೆಯನ್ನು ನೋಡುವರು.
ಆಗ ನಿನಗೊಂದು ಹೊಸ ಹೆಸರನ್ನು ಕೊಡುವೆನು;
ಯೆಹೋವನು ತಾನೇ ಆ ಹೆಸರನ್ನು ಕೊಡುವನು.
3 ಯೆಹೋವನು ನಿನ್ನಲ್ಲಿ ಬಹಳವಾಗಿ ಹೆಚ್ಚಳಪಡುವನು.
ನೀನು ಆತನ ಕೈಯಲ್ಲಿ ಒಂದು ಸುಂದರವಾದ ಕಿರೀಟದಂತಿರುವೆ.
4 ದೇವರು ತೊರೆದ ಜನಾಂಗವೆಂದೂ ದೇವರು ನಾಶಮಾಡಿದ ದೇಶವೆಂದೂ
ನಿನ್ನನ್ನು ಇನ್ನು ಮುಂದೆ ಯಾರೂ ಕರೆಯುವದಿಲ್ಲ.
“ದೇವರ ಪ್ರಿಯ ಜನರು” ಎಂದು ನೀನು ಕರೆಯಲ್ಪಡುವಿ.
ನಿನ್ನ ದೇಶವು “ದೇವರ ಮದಲಗಿತ್ತಿ” ಎಂದು ಕರೆಯಲ್ಪಡುವದು.
ಯಾಕೆಂದರೆ ಯೆಹೋವನು ನಿನ್ನನ್ನು ಪ್ರೀತಿಸುತ್ತಾನೆ;
ನಿನ್ನ ದೇಶವು ಆತನಿಗೆ ಸೇರಿದೆ.
5 ಯೌವನಸ್ಥನು ಕನ್ನಿಕೆಯನ್ನು ಪ್ರೀತಿಸಿ ಮದುವೆಯಾಗುವನು; ತನ್ನ ಹೆಂಡತಿಯನ್ನಾಗಿ ಆಕೆಯನ್ನು ಸ್ವೀಕರಿಸುವನು.
ಅದೇ ರೀತಿಯಲ್ಲಿ ದೇವರು ನಿನ್ನನ್ನು ವಿವಾಹವಾಗುತ್ತಾನೆ.
ದೇಶವು ತುಂಬಿಹೋಗುವಷ್ಟು ಮಕ್ಕಳನ್ನು ಆತನು ಪಡೆದುಕೊಳ್ಳುತ್ತಾನೆ.
ಒಬ್ಬನು ಹೊಸದಾಗಿ ಮದುವೆಯಾದ ತನ್ನ ಹೆಂಡತಿಯೊಡನೆ
ಉಲ್ಲಾಸದಿಂದಿರುವಂತೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು.
6 ಜೆರುಸಲೇಮೇ, ನಿನ್ನ ಗೋಡೆಯ ಮೇಲೆ ನಾನು ಕಾವಲುಗಾರರನ್ನು ಇಟ್ಟಿರುತ್ತೇನೆ.
ಆ ಕಾವಲುಗಾರರು ಮೌನವಾಗಿರುವದಿಲ್ಲ.
ಅವರು ಹಗಲಿರುಳು ಪ್ರಾರ್ಥಿಸುತ್ತಾ ಇರುವರು.
ಕಾವಲುಗಾರರೇ, ನೀವು ಯೆಹೋವನಿಗೆ ಪ್ರಾರ್ಥಿಸುತ್ತಾ ಇರಬೇಕು.
ಆತನ ವಾಗ್ದಾನಗಳನ್ನು ನೀವು ಆತನ ನೆನಪಿಗೆ ತರಬೇಕು.
ಪ್ರಾರ್ಥಿಸುವುದನ್ನು ಎಂದಿಗೂ ನಿಲ್ಲಿಸಬೇಡಿ.
7 ಜೆರುಸಲೇಮ್ ನಗರವು ಜನರ ಹೊಗಳಿಕೆಗೆ ಪಾತ್ರವಾಗುವಂತೆ
ಯೆಹೋವನು ಮಾಡುವ ತನಕ ನೀವು ಆತನಿಗೆ ಪ್ರಾರ್ಥಿಸುತ್ತಿರಬೇಕು.
8 ಯೆಹೋವನು ವಾಗ್ದಾನವನ್ನು ಮಾಡಿರುತ್ತಾನೆ. ಆತನ ಸ್ವಂತ ಹೆಸರೇ ಅದಕ್ಕೆ ಸಾಕ್ಷಿಯಾಗಿದೆ.
ಆತನು ತನ್ನ ಸಾಮರ್ಥ್ಯದಿಂದ ವಾಗ್ದಾನವನ್ನು ನೆರವೇರಿಸುವನು.
ಯೆಹೋವನು ಹೇಳಿದ್ದೇನೆಂದರೆ, “ನಿನ್ನ ಆಹಾರವನ್ನು ನಾನು ನಿನ್ನ ವೈರಿಗಳಿಗೆ ಮತ್ತೆ ಕೊಡುವದಿಲ್ಲವೆಂದು ವಾಗ್ದಾನ ಮಾಡುತ್ತೇನೆ.
ನೀನು ತಯಾರಿಸುವ ದ್ರಾಕ್ಷಾರಸವನ್ನು ಇನ್ನು ಮುಂದೆ ನಿನ್ನ ವೈರಿಗಳು ಸೇವಿಸುವದಿಲ್ಲವೆಂದು ನಾನು ವಾಗ್ದಾನ ಮಾಡುತ್ತೇನೆ.
9 ಒಬ್ಬನು ಆಹಾರವನ್ನು ಒಟ್ಟುಗೂಡಿಸಿ ತಾನೇ ತಿನ್ನುವನು. ಅವನು ದೇವರನ್ನು ಸ್ತುತಿಸುವನು.
ದ್ರಾಕ್ಷಿಹಣ್ಣನ್ನು ಶೇಖರಿಸುವವನು ಅದರ ರಸವನ್ನು ಕುಡಿಯುವನು. ಇವೆಲ್ಲವೂ ನನ್ನ ಪರಿಶುದ್ಧ ದೇಶದಲ್ಲಿ ಆಗುವದು.”[a]
10 ದ್ವಾರಗಳೊಳಗಿಂದ ಬನ್ನಿರಿ.
ಜನರು ಬರುವದಕ್ಕೆ ದಾರಿಯನ್ನು ಸರಿಮಾಡಿರಿ.
ರಸ್ತೆಯನ್ನು ಸಿದ್ಧಪಡಿಸಿರಿ.
ಅದರ ಮೇಲಿರುವ ಕಲ್ಲುಗಳನ್ನು ತೆಗೆದುಬಿಡಿರಿ.
ಜನಾಂಗಗಳು ಕಾಣುವಂತೆ ಧ್ವಜವನ್ನು ಏರಿಸಿರಿ.
11 ಇಗೋ, ಯೆಹೋವನು ದೂರದೇಶಗಳವರಿಗೆ ಹೇಳುವುದೇನೆಂದರೆ,
“ಚೀಯೋನಿನ ಜನರಿಗೆ ತಿಳಿಸಿರಿ:
‘ನೋಡು, ನಿನ್ನ ರಕ್ಷಕನು ಬರುತ್ತಿದ್ದಾನೆ.
ತನ್ನ ಕೈಯಲ್ಲಿ ನಿನಗೆ ಪ್ರತಿಫಲವನ್ನು ತೆಗೆದುಕೊಂಡು ಬರುತ್ತಿದ್ದಾನೆ.’”
12 ಆತನ ಜನರು “ಪವಿತ್ರಜನ”ರೆಂದೂ,
“ಯೆಹೋವನಿಂದ ರಕ್ಷಿಸಲ್ಪಟ್ಟವ”ರೆಂದೂ ಕರೆಯಲ್ಪಡುವರು.
ಜೆರುಸಲೇಮ್, “ದೇವರಿಗೆ ಬೇಕಾದ ಪಟ್ಟಣ”ವೆಂದೂ,
“ದೇವರಿರುವ ಪಟ್ಟಣ”ವೆಂದೂ ಕರೆಯಲ್ಪಡುವದು.
ಯೆಹೋವನು ತನ್ನ ಜನರಿಗೆ ನ್ಯಾಯತೀರಿಸುವನು
63 ಎದೋಮಿನಿಂದ ಬರುತ್ತಿರುವ ಇವನು ಯಾರು?
ಅವನು ಬೊಜ್ರದಿಂದ ಬರುತ್ತಿದ್ದಾನೆ.
ಆತನ ಬಟ್ಟೆಯು ಕಡುಕೆಂಪು ಬಣ್ಣದಿಂದ ತುಂಬಿದೆ.
ತನ್ನ ಬಟ್ಟೆಯಲ್ಲಿ ಆತನು ಮಹಿಮಾಸ್ವರೂಪನಾಗಿ ಕಾಣುತ್ತಿದ್ದಾನೆ.
ಆತನು ತನ್ನ ಬಲಸಾಮರ್ಥ್ಯಗಳಿಂದಾಗಿ ನೇರವಾಗಿ ನಡೆಯುತ್ತಿದ್ದಾನೆ.
ಆತನು, “ನಾನು ಸತ್ಯವನ್ನೇ ಹೇಳುತ್ತೇನೆ,
ನಿನ್ನನ್ನು ರಕ್ಷಿಸಲು ನನಗೆ ಸಾಮರ್ಥ್ಯ ಉಂಟು” ಎಂದು ಹೇಳುವನು.
2 “ನಿನ್ನ ಬಟ್ಟೆ ಕಡುಕೆಂಪಾಗಲು ಕಾರಣವೇನು?
ದ್ರಾಕ್ಷಿಹಣ್ಣುಗಳನ್ನು ತುಳಿದು ರಸ ತೆಗೆಯುವವನ ಬಟ್ಟೆಯಂತೆ ಅವು ಇವೆ.”
3 ಅವನ ಉತ್ತರ: “ದ್ರಾಕ್ಷಿತೊಟ್ಟಿಯಲ್ಲಿ ನಾನೊಬ್ಬನೇ ತುಳಿದೆನು.
ಯಾರೂ ನನಗೆ ಸಹಾಯ ಮಾಡಲಿಲ್ಲ.
ನಾನು ಕೋಪಗೊಂಡು ದ್ರಾಕ್ಷಿಹಣ್ಣಿನ ಮೇಲೆ ತುಳಿದೆನು.
ಅದರ ರಸ ನನ್ನ ಬಟ್ಟೆಯ ಮೇಲೆ ಹಾರಿತು. ಆದ್ದರಿಂದ ನನ್ನ ಬಟ್ಟೆಗಳು ಮಲಿನವಾದವು.
4 ಜನರನ್ನು ಶಿಕ್ಷಿಸಲು ನಾನೊಂದು ಸಮಯವನ್ನು ನಿಗದಿ ಮಾಡಿರುತ್ತೇನೆ.
ಈಗ ನನ್ನ ಜನರನ್ನು ರಕ್ಷಿಸಿ ಕಾಪಾಡುವ ಸಮಯ ಬಂದಿದೆ.
5 ನಾನು ಸುತ್ತಲೂ ನೋಡಿದಾಗ ನನಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ.
ನನ್ನನ್ನು ಯಾರೂ ಬೆಂಬಲಿಸದೆ ಇರುವದನ್ನು ನೋಡಿ ನನಗೆ ಆಶ್ಚರ್ಯವಾಯಿತು.
ಆಗ ನನ್ನ ಜನರನ್ನು ರಕ್ಷಿಸಲು ನನ್ನ ಬಲವನ್ನೇ ಪ್ರಯೋಗಿಸಿದೆನು.
ನನ್ನ ಕೋಪವೇ ನನ್ನನ್ನು ಬಲಪಡಿಸಿತು.
6 ನಾನು ಕೋಪಗೊಂಡಾಗ ಜನಾಂಗಗಳ ಮೇಲೆ ತುಳಿದಾಡಿದೆನು.
ನಾನು ಸಿಟ್ಟುಗೊಂಡಾಗ ಅವರನ್ನು ಶಿಕ್ಷಿಸಿದೆನು. ಅವರ ರಕ್ತವನ್ನು ನೆಲದ ಮೇಲೆ ಚೆಲ್ಲಿದೆನು.”
ಯೆಹೋವನು ತನ್ನ ಜನರಿಗೆ ಕರುಣೆತೋರುವನು
7 ಯೆಹೋವನು ಕರುಣಾಶೀಲನೆಂಬುದನ್ನು ನೆನಪು ಮಾಡಿಕೊಳ್ಳುವೆನು.
ಆತನನ್ನು ಸ್ತುತಿಸಲು ನೆನಪುಮಾಡಿಕೊಳ್ಳುವೆನು.
ಇಸ್ರೇಲ್ ಕುಟುಂಬಕ್ಕೆ ಯೆಹೋವನು ಎಷ್ಟೋ ಮೇಲನ್ನು ಮಾಡಿದ್ದಾನೆ.
ನಮ್ಮ ಮೇಲೆ ಯೆಹೋವನು ತನ್ನ ದಯೆಯನ್ನು ಸುರಿಸಿದ್ದಾನೆ.
ನಮಗೆ ಕರುಣೆಯನ್ನು ತೋರಿಸಿದ್ದಾನೆ.
8 ಯೆಹೋವನು ಹೇಳಿದ್ದೇನೆಂದರೆ: “ಇವರೇ ನನ್ನ ಜನರು.
ಇವರೆಲ್ಲಾ ನನ್ನ ಸ್ವಂತ ಮಕ್ಕಳು.”
ಆದ್ದರಿಂದ ಯೆಹೋವನು ಅವರನ್ನು ರಕ್ಷಿಸಿದ್ದಾನೆ.
9 ಜನರಿಗೆ ಅನೇಕ ತೊಂದರೆಗಳು ಪ್ರಾಪ್ತವಾಗಿದ್ದವು.
ಆದರೆ ಯೆಹೋವನು ಅವರಿಗೆ ವಿರುದ್ಧನಾಗಿರಲಿಲ್ಲ.
ಆತನು ಅವರನ್ನು ಪ್ರೀತಿಸಿ ಅವರಿಗಾಗಿ ಚಿಂತಿಸಿದನು;
ತನ್ನ ವಿಶೇಷ ದೂತನನ್ನು ಕಳುಹಿಸಿ ಅವರನ್ನು ರಕ್ಷಿಸಿದನು.
ಯೆಹೋವನು ಅವರನ್ನು ನಿತ್ಯಕಾಲಕ್ಕೂ ಸಲಹುವನು.
ತನ್ನ ಜನರಿಗೆ ಯೆಹೋವನು ಸಲಹುವದನ್ನು ನಿಲ್ಲಿಸಲಿಲ್ಲ.
10 ಆದರೆ ಜನರು ಯೆಹೋವನಿಗೆ ವಿರುದ್ಧವಾಗಿ ಎದ್ದರು.
ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು.
ಯೆಹೋವನು ಅವರ ಶತ್ರುವಾಗಿ ಪರಿಣಮಿಸಿದನು.
ಅಂಥಾ ಜನರಿಗೆ ವಿರುದ್ಧವಾಗಿ ಯೆಹೋವನು ಯುದ್ಧಮಾಡಿದನು.
11 ಆದರೆ ಯೆಹೋವನು ಬಹಳ ಕಾಲದ ಹಿಂದೆ ನಡೆದುದನ್ನು ಇನ್ನೂ ಜ್ಞಾಪಕದಲ್ಲಿಟ್ಟುಕೊಂಡಿದ್ದಾನೆ.
ಆತನು ಮೋಶೆಯನ್ನೂ ಅವನ ಜನರನ್ನೂ ನೆನಪುಮಾಡಿಕೊಳ್ಳುತ್ತಾನೆ.
ಆ ಜನರನ್ನು ಸಮುದ್ರದ ಮೂಲಕ ಬರಮಾಡಿದವನು ಯೆಹೋವನೇ.
ಆತನು ತನ್ನ ಕುರಿಮಂದೆಯನ್ನು ನಡೆಸಲು ತನ್ನ ಕುರುಬರನ್ನು ಉಪಯೋಗಿಸಿದನು.
ಆದರೆ ಈಗ ಯೆಹೋವನೆಲ್ಲಿ?
ಮೋಶೆಯಲ್ಲಿ ತನ್ನ ಪವಿತ್ರಾತ್ಮನನ್ನು ಇಟ್ಟ ಯೆಹೋವನೆಲ್ಲಿ?
12 ಯೆಹೋವನು ಮೋಶೆಯನ್ನು ತನ್ನ ಬಲವಾದ ಹಸ್ತದಿಂದ ನಡೆಸಿದನು.
ತನ್ನ ಅದ್ಭುತ ಶಕ್ತಿಯಿಂದ ಮೋಶೆಯನ್ನು ನಡೆಸಿದನು.
ತನ್ನ ಜನರು ಸಮುದ್ರದೊಳಗಿಂದ ನಡೆದುಹೋಗಲೆಂದು ಯೆಹೋವನು ಸಮುದ್ರವನ್ನು ಇಬ್ಭಾಗ ಮಾಡಿದನು.
ಅಂಥಾ ಅದ್ಭುತಕಾರ್ಯಗಳ ನಿಮಿತ್ತ ತನ್ನ ಹೆಸರನ್ನು ಪ್ರಸಿದ್ಧಿಪಡಿಸಿದನು.
13 ಆಳವಾದ ಸಮುದ್ರದೊಳಗಿಂದ ಯೆಹೋವನು ತನ್ನ ಜನರನ್ನು ನಡೆಸಿದನು.
ಕುದುರೆಯು ಮರುಭೂಮಿಯಲ್ಲಿ ನಡೆಯುವಂತೆ
ಜನರು ಎಡವಿಬೀಳದೆ ನಡೆದರು.
14 ಹೊಲದಲ್ಲಿ ನಡೆಯುತ್ತಿರುವಾಗ ಒಂದು ದನವೂ ಬೀಳಲಿಲ್ಲ.
ಅದೇ ರೀತಿಯಲ್ಲಿ ಸಮುದ್ರದ ಮಧ್ಯದಲ್ಲಿ ನಡೆಯುವಾಗ ಅವರು ಬೀಳಲಿಲ್ಲ.
ವಿಶ್ರಾಂತಿಯ ಸ್ಥಳಕ್ಕೆ ಯೆಹೋವನ ಆತ್ಮವು ಅವರನ್ನು ನಡೆಸಿತು.
ದಾರಿಯುದ್ದಕ್ಕೂ ಜನರು ಸುರಕ್ಷಿತರಾಗಿದ್ದರು.
ಯೆಹೋವನೇ, ಹೀಗೆ ನೀನು ನಿನ್ನ ಜನರನ್ನು ನಡೆಸಿದೆ.
ಹೀಗೆ ನೀನು ನಿನ್ನ ಹೆಸರನ್ನು ಆಶ್ಚರ್ಯಕರವನ್ನಾಗಿ ಮಾಡಿರುವೆ.
ಸಹಾಯಕ್ಕಾಗಿ ದೇವರಿಗೆ ಪ್ರಾರ್ಥನೆ
15 ಯೆಹೋವನೇ, ಈಗ ನಡೆಯುವ ಸಂಗತಿಗಳನ್ನು
ಪರಲೋಕದಿಂದ ನೋಡು.
ಪರಲೋಕದಲ್ಲಿರುವ ನಿನ್ನ ಪವಿತ್ರಸ್ಥಾನದಿಂದ ನಮ್ಮನ್ನು ದೃಷ್ಟಿಸು.
ನಮ್ಮ ಮೇಲಿನ ಗಾಢವಾದ ಪ್ರೀತಿ ಎಲ್ಲಿದೆ?
ನಿನ್ನ ಅಂತರಂಗದೊಳಗಿಂದ ಬಂದ ಕಾರ್ಯಗಳೆಲ್ಲಿ?
ನಮ್ಮ ಮೇಲೆ ನಿನಗಿರುವ ಕರುಣೆ ಎಲ್ಲಿ?
ನಿನ್ನ ದಯಾಪರವಾದ ಪ್ರೀತಿಯನ್ನು ನಮ್ಮಿಂದ ಯಾಕೆ ಅಡಗಿಸುವೆ?
16 ನೀನು ನಮ್ಮ ತಂದೆಯಾಗಿರುವೆ.
ಅಬ್ರಹಾಮನಿಗೆ ನಮ್ಮ ಪರಿಚಯವಿಲ್ಲ.
ಇಸ್ರೇಲನು ನಮ್ಮನ್ನು ಗುರುತಿಸುವುದಿಲ್ಲ.
ಯೆಹೋವನೇ, ನೀನೇ ನಮ್ಮ ತಂದೆ.
ನೀನೇ ನಮ್ಮನ್ನು ಯಾವಾಗಲೂ ರಕ್ಷಿಸಿದಾತನು.
17 ಯೆಹೋವನೇ, ನೀನು ನಮ್ಮನ್ನು ನಿನ್ನಿಂದ ದೂರ ಮಾಡಿರುವೆ.
ನಾವು ನಿನ್ನನ್ನು ಹಿಂಬಾಲಿಸಬೇಕೆಂದರೂ ಹಾಗೆ ಆಗದಂತೆ ಅದನ್ನೇಕೆ ಕಷ್ಟಕರವಾಗಿ ಮಾಡಿರುವೆ?
ಯೆಹೋವನೇ, ನಮ್ಮ ಬಳಿಗೆ ಹಿಂದಿರುಗಿ ಬಾ.
ನಾವು ನಿನ್ನ ಸೇವಕರಾಗಿದ್ದೇವೆ.
ನಮ್ಮ ಬಳಿಗೆ ಬಂದು ಸಹಾಯಮಾಡು.
ನಮ್ಮ ಕುಟುಂಬಗಳು ನಿನ್ನವೇ.
18 ನಿನ್ನ ಪವಿತ್ರ ಜನರು ತಮ್ಮ ದೇಶದಲ್ಲಿ ಸ್ವಲ್ಪಕಾಲಕ್ಕೆ ಮಾತ್ರ ವಾಸಿಸಿದರು.
ಆಗ ನಮ್ಮ ಶತ್ರುಗಳು ಬಂದು ನಿನ್ನ ಪವಿತ್ರ ಆಲಯದಲ್ಲಿ ತುಳಿದಾಡಿದರು.
19 ಕೆಲವರು ನಿನ್ನನ್ನು ಅನುಸರಿಸುವದಿಲ್ಲ.
ಅವರು ನಿನ್ನ ಹೆಸರಿನಿಂದ ಕರೆಯಲ್ಪಡುವದಿಲ್ಲ.
ನಾವು ಅವರಂತೆ ಇದ್ದೆವು.
64 ನೀನು ಆಕಾಶವನ್ನು ಹರಿದು ಕೆಳಗೆ ಭೂಮಿಗಿಳಿದು ಬರುವದಾದರೆ
ಎಲ್ಲವೂ ಬದಲಾಗುವದು.
ಪರ್ವತಗಳು ನಿನ್ನ ಎದುರು ಕರಗಿಹೋಗುವವು.
2 ಒಣಎಲೆಯು ಸುಟ್ಟುಹೋಗುವಂತೆ ಪರ್ವತಗಳು ಸುಟ್ಟು ಭಸ್ಮವಾಗುವವು.
ಬೆಂಕಿಯಲ್ಲಿ ನೀರು ಕುದಿಯುವಂತೆ ಪರ್ವತಗಳು ಕುದಿಯುವವು.
ಆಗ ನಿನ್ನ ಶತ್ರುಗಳು ನಿನ್ನ ವಿಷಯವಾಗಿ ತಿಳಿಯುವರು.
ಆಗ ಜನಾಂಗದವರೆಲ್ಲಾ ನಿನ್ನನ್ನು ನೋಡಿ ಭಯದಿಂದ ನಡುಗುವರು.
3 ಆದರೆ ನೀನು ಹೀಗೆ ಮಾಡುವುದು ನಿಜವಾಗಿಯೂ ನಮಗಿಷ್ಟವಿಲ್ಲ.
ಪರ್ವತಗಳು ನಿನ್ನೆದುರು ಕರಗಿಹೋದರೂ
4 ನಿನ್ನ ಜನರು ನಿನಗೆ ಕಿವಿಗೊಡಲಿಲ್ಲ.
ನೀನು ಹೇಳಿದ್ದನ್ನು ನಿನ್ನ ಜನರು ನಿಜವಾಗಿಯೂ ಕೇಳಲಿಲ್ಲ.
ನಿನ್ನಂಥ ದೇವರನ್ನು ಯಾರೂ ನೋಡಿಲ್ಲ.
ನಿನ್ನ ಹೊರತು ಬೇರೆ ಯಾರೂ ದೇವರಿಲ್ಲ.
ಜನರು ತಾಳ್ಮೆಯಿಂದಿದ್ದು ನಿನ್ನ ಸಹಾಯಕ್ಕಾಗಿ ಕಾದಿದ್ದರೆ
ನೀನು ಅವರಿಗಾಗಿ ಮಹಾಕಾರ್ಯಗಳನ್ನು ಮಾಡುವೆ.
5 ಒಳ್ಳೆಯದನ್ನು ಮಾಡುವದರಲ್ಲಿ ಸಂತೋಷಪಡುವವರೊಂದಿಗೆ ನೀನಿರುವೆ.
ಅವರು ನಿನ್ನ ಮಾರ್ಗಗಳನ್ನು ನೆನಪಿನಲ್ಲಿಡುತ್ತಾರೆ.
ಇಗೋ, ಗತಿಸಿದ ದಿವಸಗಳಲ್ಲಿ ನಾವು ನಿನಗೆ ವಿರುದ್ಧವಾಗಿ ಪಾಪಮಾಡಿದೆವು.
ಆದ್ದರಿಂದ ನೀನು ನಮ್ಮ ಮೇಲೆ ಕೋಪಗೊಂಡೆ.
ಈಗ ನಾವು ಹೇಗೆ ರಕ್ಷಿಸಲ್ಪಡುವೆವು?
6 ನಾವೆಲ್ಲರೂ ಪಾಪದಿಂದ ಮಲಿನರಾಗಿದ್ದೇವೆ.
ನಮ್ಮ ಸುಕಾರ್ಯಗಳೆಲ್ಲಾ ಹಳೇ ಕೊಳಕು ಬಟ್ಟೆಯಂತಿವೆ.
ನಾವೆಲ್ಲಾ ಒಣಗಿಹೋದ ಎಲೆಗಳಂತಿದ್ದೇವೆ.
ನಮ್ಮ ಪಾಪಗಳು ಬಿರುಗಾಳಿಯಂತೆ ನಮ್ಮನ್ನು ಬಡಿದುಕೊಂಡುಹೋಗಿವೆ.
7 ನಿನ್ನ ಹೆಸರನ್ನು ಯಾರೂ ಕರೆಯುವದಿಲ್ಲ.
ನಿನ್ನನ್ನು ಹಿಂಬಾಲಿಸಲು ಯಾರಿಗೂ ಇಷ್ಟವಿಲ್ಲ;
ಯಾಕೆಂದರೆ ನೀನು ನಮಗೆ ವಿಮುಖನಾಗಿರುವೆ
ಮತ್ತು ನಮ್ಮನ್ನು ನಮ್ಮ ಪಾಪಗಳ ದೋಷಕ್ಕೆ ಒಪ್ಪಿಸಿಕೊಟ್ಟಿರುವಿ.
8 ಯೆಹೋವನೇ, ನೀನು ನಮ್ಮ ತಂದೆಯಾಗಿರುವೆ.
ನಾವು ಜೇಡಿಮಣ್ಣಿನಂತಿದ್ದೇವೆ.
ನೀನಾದರೋ ಕುಂಬಾರನಾಗಿರುವೆ.
ನಿನ್ನ ಕೈಗಳು ನಮ್ಮನ್ನು ನಿರ್ಮಿಸಿದವು.
9 ಯೆಹೋವನೇ, ನಮ್ಮ ಮೇಲೆ ಸಿಟ್ಟಿನಿಂದಲೇ ಇರಬೇಡ.
ನಮ್ಮ ಪಾಪಗಳನ್ನು ನಿನ್ನ ನೆನಪಿನಲ್ಲಿಟ್ಟುಕೊಂಡೇ ಇರಬೇಡ.
ದಯಮಾಡಿ ನಮ್ಮ ಕಡೆಗೆ ನೋಡು.
ನಾವು ನಿನ್ನ ಜನರೇ.
10 ನಿನ್ನ ಪವಿತ್ರ ಪಟ್ಟಣಗಳು ಜನಶೂನ್ಯವಾಗಿವೆ.
ಆ ಪಟ್ಟಣಗಳು ಈಗ ಮರುಭೂಮಿಯಂತಿವೆ.
ಚೀಯೋನು ಈಗ ಮರುಭೂಮಿಯಾಗಿದೆ.
ಜೆರುಸಲೇಮ್ ನಿರ್ಜನವಾಗಿದೆ.
11 ನಮ್ಮ ಪವಿತ್ರ ಆಲಯವು ಬೆಂಕಿಯಿಂದ ಸುಡಲ್ಪಟ್ಟಿದೆ.
ಆ ದೇವಾಲಯವು ನಮಗೆ ಅತ್ಯಂತ ಅಮೂಲ್ಯವಾದದ್ದಾಗಿದೆ.
ನಮ್ಮ ಪೂರ್ವಿಕರು ನಿನ್ನನ್ನು ಅಲ್ಲಿ ಆರಾಧಿಸಿದರು.
ನಾವು ಹೊಂದಿದಂಥ ಎಲ್ಲಾ ಒಳ್ಳೆಯವುಗಳು ಈಗ ನಾಶವಾದವು.
12 ನಮ್ಮ ಮೇಲೆ ನಿನ್ನ ಪ್ರೀತಿಯನ್ನು ತೋರಿಸಲು ಇವುಗಳು ಯಾವಾಗಲೂ ನಿನಗೆ ಅಡ್ಡಿಮಾಡುತ್ತವೋ?
ನಮ್ಮೊಂದಿಗೆ ಮಾತನಾಡದೆ ಇನ್ನೂ ಇರುವಿಯೋ?
ನಮ್ಮನ್ನು ಸದಾಕಾಲ ನೀನು ಶಿಕ್ಷಿಸುವಿಯೋ?
1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವ ಪತ್ರ. ನಮ್ಮ ರಕ್ಷಕನಾದ ದೇವರು ಮತ್ತು ನಮ್ಮ ನಿರೀಕ್ಷೆಗೆ ಆಧಾರವಾದ ಕ್ರಿಸ್ತ ಯೇಸುವಿನ ಆಜ್ಞೆಗನುಸಾರವಾಗಿ ನಾನು ಅಪೊಸ್ತಲನಾದೆನು.
2 ನೀನು ನಂಬಿಕೆ ಉಳ್ಳವನಾಗಿರುವುದರಿಂದ ನನಗೆ ನಿಜವಾದ ಮಗನಂತಿರುವೆ.
ತಂದೆಯಾದ ದೇವರಿಂದ ಮತ್ತು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಿಂದ ಕೃಪೆಯೂ ಕರುಣೆಯೂ ಶಾಂತಿಯೂ ನಿನಗೆ ಲಭಿಸಲಿ.
ದುರ್ಬೋಧನೆಗಳ ವಿರುದ್ಧ ಎಚ್ಚರಿಕೆ
3 ನಾನು ಮಕೆದೋನಿಯಕ್ಕೆ ಹೋಗುವಾಗ, ನೀನು ಎಫೆಸದಲ್ಲೇ ಇರು ಎಂದು ನಿನಗೆ ತಿಳಿಸಿದ್ದೆ. ಏಕೆಂದರೆ ಕೆಲವರು ಅಲ್ಲಿ ಸುಳ್ಳು ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. ನೀನು ಅದನ್ನು ನಿಲ್ಲಿಸಬೇಕು. 4 ಕಲ್ಪನಾಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಗಮನಕೊಡಬಾರದೆಂದು ಅವರಿಗೆ ಆಜ್ಞಾಪಿಸು. ಆ ಸಂಗತಿಗಳು ವಾದವಿವಾದಗಳನ್ನು ಮಾತ್ರ ತರುತ್ತವೆ. ಅವುಗಳಿಂದ ದೇವರ ಕಾರ್ಯಕ್ಕೆ ಪ್ರಯೋಜನವೇನೂ ಇಲ್ಲ. ದೇವರ ಕಾರ್ಯವನ್ನು ನಂಬಿಕೆಯಿಂದ ಮಾಡಬೇಕು. 5 ಪ್ರೀತಿಯೇ ಈ ಆಜ್ಞೆಯ ಗುರಿಯಾಗಿದೆ. ಈ ಪ್ರೀತಿಯನ್ನು ಹೊಂದಿಕೊಳ್ಳಲು ಜನರು ಶುದ್ಧಹೃದಯ ಉಳ್ಳವರಾಗಿರಬೇಕು; ಯೋಗ್ಯವಾದ ಕಾರ್ಯವನ್ನೇ ಮಾಡುವವರಾಗಿರಬೇಕು; ಮತ್ತು ನಿಷ್ಕಪಟವಾದ ನಂಬಿಕೆಯನ್ನು ಹೊಂದಿದವರಾಗಿರಬೇಕು. 6 ಕೆಲವರು ಈ ಗುರಿತಪ್ಪಿ ನಿರರ್ಥಕವಾದ ವಿಷಯಗಳನ್ನು ಕುರಿತು ಮಾತಾಡುತ್ತಿದ್ದಾರೆ. 7 ತಾವು ಧರ್ಮೋಪದೇಶಕರಾಗಬೇಕೆಂಬುದು ಅವರ ಅಪೇಕ್ಷೆ. ಆದರೆ ತಾವು ಏನು ಮಾತಾಡುತ್ತಿದ್ದೇವೆ ಎಂಬುದೇ ಅವರಿಗೆ ತಿಳಿದಿಲ್ಲ. ತಮಗೆ ಖಚಿತವಾಗಿ ತಿಳಿದಿದೆ ಎಂದು ತಾವು ಹೇಳುವ ಸಂಗತಿಗಳನ್ನೂ ಅವರು ಅರ್ಥಮಾಡಿಕೊಳ್ಳುವುದಿಲ್ಲ.
8 ಧರ್ಮಶಾಸ್ತ್ರವು ಒಳ್ಳೆಯದೇ. ಆದರೆ ಅದನ್ನು ನಿಷ್ಠೆಯಿಂದ ಅನುಸರಿಸಬೇಕು. 9 ಧರ್ಮಶಾಸ್ತ್ರವನ್ನು ರೂಪಿಸಿದ್ದು ಒಳ್ಳೆಯವರಿಗಾಗಿಯಲ್ಲ ಎಂಬುದು ನಮಗೆ ತಿಳಿದಿದೆ. ಅದನ್ನು ರೂಪಿಸಿದ್ದು ಅದರ ವಿರುದ್ಧವಾಗಿ ನಡೆಯುವ ಮತ್ತು ಅದನ್ನು ಅನುಸರಿಸಲು ಒಪ್ಪದಿರುವ ಜನರಿಗಷ್ಟೇ. ದೇವರಿಗೆ ವಿರುದ್ಧವಾದ ಜನರಿಗೆ ಮತ್ತು ಪಾಪಿಷ್ಠರಿಗೆ, ಅಧರ್ಮಿಗಳಿಗೆ ಮತ್ತು ಪರಿಶುದ್ಧರಲ್ಲದವರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ ಮತ್ತು ಕೊಲೆಗಾರರಿಗೆ, 10 ಲೈಂಗಿಕ ಪಾಪಗಳನ್ನು ಮಾಡುವವರಿಗೆ, ಸಲಿಂಗಕಾಮಿಗಳಿಗೆ, ಗುಲಾಮರನ್ನು ಮಾರಾಟ ಮಾಡುವವರಿಗೆ, ಸುಳ್ಳನ್ನು ಹೇಳುವವರಿಗೆ, ಒಪ್ಪಂದವನ್ನು ಮೀರುವ ಜನರಿಗೆ, ದೇವರ ಸತ್ಯೋಪದೇಶಕ್ಕೆ ವಿರುದ್ಧವಾಗಿ ಏನನ್ನು ಬೇಕಾದರೂ ಮಾಡುವವರಿಗೆ ಅದನ್ನು ರೂಪಿಸಲಾಗಿದೆ. 11 ಈ ಉಪದೇಶವು ಜನರಿಗೆ ತಿಳಿಸುವುದಕ್ಕಾಗಿ ದೇವರು ನನಗೆ ಕೊಟ್ಟ ಸುವಾರ್ತೆಯ ಒಂದು ಭಾಗವಾಗಿದೆ. ಭಾಗ್ಯವಂತನಾದ ದೇವರಿಂದಲೇ ಈ ಮಹಿಮೆಯ ಸುವಾರ್ತೆಯು ಬಂದಿತು.
ದೇವರ ಕರುಣೆಗಾಗಿ ಕೃತಜ್ಞತೆಗಳು
12 ನಮ್ಮ ಪ್ರಭುವಾದ ಕ್ರಿಸ್ತ ಯೇಸು ನನ್ನ ಮೇಲಿನ ನಂಬಿಕೆಯಿಂದ, ಆತನ ಸೇವೆ ಮಾಡುವ ಈ ಕಾರ್ಯವನ್ನು ನನಗೆ ದಯಪಾಲಿಸಿದ್ದರಿಂದ ನಾನು ಆತನಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆತನು ನನ್ನನ್ನು ಬಲಪಡಿಸುತ್ತಾನೆ. 13 ಮೊದಲು, ನಾನು ಕ್ರಿಸ್ತನ ವಿರುದ್ಧ ಮಾತನಾಡಿದ್ದೆನು. ಆತನನ್ನು ಹಿಂಸಿಸಿದ್ದೆನು. ಆತನಿಗೆ ನೋವಾಗುವಂಥ ಕಾರ್ಯಗಳನ್ನು ಮಾಡಿದ್ದೆನು. ಆದರೆ ನಾನೇನು ಮಾಡುತ್ತಿದ್ದೇನೆಂಬುದು ನನಗೆ ತಿಳಿದಿರಲಿಲ್ಲವಾದ್ದರಿಂದ ದೇವರು ನನಗೆ ಕರುಣೆ ತೋರಿದನು. ನಂಬದಿರುವಾಗ ನಾನು ಅವುಗಳನ್ನು ಮಾಡಿದೆನು. 14 ಆದರೆ ನಮ್ಮ ಪ್ರಭುವಿನ ಕೃಪೆಯು ಸಂಪೂರ್ಣವಾಗಿ ನನಗೆ ಲಭಿಸಿತು. ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಗಳು ಆ ಕೃಪೆಯೊಂದಿಗೆ ಬಂದವು.
15 ನಾನು ಹೇಳುತ್ತಿರುವ ಈ ಸಂಗತಿ ಸತ್ಯವಾದದ್ದು. ಆದ್ದರಿಂದ ನೀವು ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಅದೇನೆಂದರೆ: ಪಾಪಿಗಳನ್ನು ರಕ್ಷಿಸುವುದಕ್ಕೆ ಕ್ರಿಸ್ತ ಯೇಸು ಈ ಲೋಕದಲ್ಲಿ ಪ್ರತ್ಯಕ್ಷನಾದನು. ಆ ಪಾಪಿಗಳಲ್ಲಿ ನಾನೇ ಮುಖ್ಯನು. 16 ಆದರೆ ನನಗೆ ಕರುಣೆ ದೊರೆಯಿತು. ಕ್ರಿಸ್ತ ಯೇಸು ತನ್ನ ಅಮಿತವಾದ ತಾಳ್ಮೆಯನ್ನು ನನ್ನಲ್ಲಿ ತೋರ್ಪಡಿಸುವುದಕ್ಕಾಗಿಯೇ ನನಗೆ ಕರುಣೆಯನ್ನು ದಯಪಾಲಿಸಿದನು. ಪಾಪಿಗಳಲ್ಲೆಲ್ಲಾ ಮುಖ್ಯನಾಗಿದ್ದ ನನಗೆ ಕ್ರಿಸ್ತನು ತನ್ನ ತಾಳ್ಮೆಯನ್ನು ತೋರಿದನು. ನಿತ್ಯಜೀವಕ್ಕಾಗಿ ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಜನರಿಗೆ ನಾನು ದೃಷ್ಟಾಂತವಾಗಿರಬೇಕೆಂದೇ ಆತನು ನನ್ನನ್ನು ಕರುಣಿಸಿದನು. 17 ಸದಾಕಾಲ ಆಳುವ ಅರಸನಿಗೆ ಗೌರವವೂ ಮಹಿಮೆಯೂ ಇರಲಿ. ಆತನಿಗೆ ಲಯವೆಂಬುದೇ ಇಲ್ಲ. ಆತನು ಅದೃಶ್ಯನಾಗಿರುವನು. ಒಬ್ಬನೇ ದೇವರಾದ ಆತನಿಗೆ ಗೌರವವೂ ಮಹಿಮೆಯೂ ಉಂಟಾಗಲಿ. ಆಮೆನ್.
18 ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಮೊದಲು ನಿನ್ನ ವಿಷಯದಲ್ಲಿ ತಿಳಿಸಲಾದ ಪ್ರವಾದನೆಗಳಿಗೆ ಅನುಗುಣವಾಗಿ ನಂಬಿಕೆಯ ದಿವ್ಯ ಹೋರಾಟವನ್ನು ಮಾಡು. 19 ನಂಬಿಕೆಯು ನಿನ್ನಲ್ಲಿ ಅಚಲವಾಗಿರಲಿ, ನಿನಗೆ ಯೋಗ್ಯವೆನಿಸಿದ್ದನ್ನೇ ಮಾಡು. ಕೆಲವು ಜನರು ಹೀಗೆ ಮಾಡಲಿಲ್ಲ. ಅವರ ನಂಬಿಕೆಯೆಲ್ಲವೂ ನಾಶವಾಯಿತು. 20 ಹುಮೆನಾಯನು ಮತ್ತು ಅಲೆಗ್ಸಾಂಡರನು ಹಾಗೆ ಮಾಡಿದರು. ದೇವರ ವಿರುದ್ಧವಾಗಿ ಮಾತನಾಡಕೂಡದೆಂದು ಅವರು ತಿಳಿದುಕೊಳ್ಳಲೆಂದೇ ಅವರನ್ನು ಸೈತಾನನಿಗೆ ಒಪ್ಪಿಸಿದೆನು.
Kannada Holy Bible: Easy-to-Read Version. All rights reserved. © 1997 Bible League International