Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 37-38

ಹಿಜ್ಕೀಯನು ದೇವರ ಸಹಾಯಕ್ಕಾಗಿ ಪ್ರಾರ್ಥಿಸಿದ್ದು

37 ಅರಸನಾದ ಹಿಜ್ಕೀಯನು ಎಲ್ಲಾ ವಿಷಯಗಳನ್ನು ಕೇಳಿ ಮನಸ್ಸಿನಲ್ಲಿ ಬಹಳ ದುಃಖಪಟ್ಟು ತನ್ನ ಬಟ್ಟೆಗಳನ್ನು ಹರಿದುಕೊಂಡನು. ತರುವಾಯ ಶೋಕವಸ್ತ್ರವನ್ನು ಧರಿಸಿ ದೇವಾಲಯದೊಳಕ್ಕೆ ಹೋದನು.

ಹಿಜ್ಕೀಯನು ಅರಮನೆಯ ಅಡಳಿತಗಾರನಾದ ಎಲ್ಯಾಕೀಮನನ್ನು, ಕಾರ್ಯದರ್ಶಿಯಾದ ಶೆಬ್ನನನ್ನು ಯಾಜಕರ ಹಿರಿಯರೊಂದಿಗೆ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನ ಬಳಿಗೆ ಕಳುಹಿಸಿದನು. ಇವರು ತಮ್ಮ ಮನಸ್ಸಿನ ದುಗುಡವನ್ನು ಪ್ರದರ್ಶಿಸುವಂತೆ ಶೋಕವಸ್ತ್ರಗಳನ್ನು ಧರಿಸಿದ್ದರು. ಇವರು ಯೆಶಾಯನಿಗೆ, “ಅರಸನಾದ ಹಿಜ್ಕೀಯನು ಈ ದಿವಸವನ್ನು ಶೋಕದ ದಿವಸವನ್ನಾಗಿ ಘೋಷಿಸಿದ್ದಾನೆ. ಇದು ದುಃಖದ ಸಮಯವಾಗಿದೆ. ಇದು ದಿನತುಂಬಿ ತಾಯಿಯ ಹೊಟ್ಟೆಯೊಳಗಿಂದ ಹೊರಬರಲು ಶಕ್ತವಾಗಿಲ್ಲದ ಕೂಸಿನಂತಿದೆ. ಅಶ್ಶೂರದ ಅರಸನು ತನ್ನ ಸೇನಾದಂಡನಾಯಕನು ನಮ್ಮ ಜೀವಸ್ವರೂಪನಾದ ದೇವರ ಬಗ್ಗೆ ಕೆಟ್ಟಮಾತುಗಳನ್ನು ಹೇಳಲು ಕಳುಹಿಸಿರುತ್ತಾನೆ. ನಿನ್ನ ದೇವರಾದ ಯೆಹೋವನು ಇದನ್ನೆಲ್ಲಾ ಕೇಳಿರುವನು. ವೈರಿಗಳು ನುಡಿದ ಆ ಮಾತುಗಳು ಸತ್ಯವಾದವುಗಳಲ್ಲ ಎಂಬುದನ್ನು ಆತನು ತೋರಿಸುವನು. ಆದ್ದರಿಂದ ಇನ್ನೂ ಜೀವದಿಂದ ಉಳಿದಿರುವವರಿಗಾಗಿ ಪ್ರಾರ್ಥಿಸು” ಎಂದು ಹಿಜ್ಕೀಯನು ಹೇಳಿದ್ದಾನೆ ಅಂದರು.

5-6 ಆಗ ಯೆಶಾಯನು ಅರಸನಾದ ಹಿಜ್ಕೀಯನ ಕಡೆಯಿಂದ ಬಂದ ಅಧಿಪತಿಗಳಿಗೆ, “ನಿಮ್ಮ ಅರಸನಾದ ಹಿಜ್ಕೀಯನಿಗೆ ಈ ಸಂದೇಶವನ್ನು ಕೊಡಿರಿ: ಯೆಹೋವನು ಹೇಳುವುದೇನೆಂದರೆ, ‘ಸೇನಾದಂಡನಾಯಕನು ಹೇಳಿದ ಮಾತುಗಳಿಗೆ ನೀವು ಭಯಪಡಬೇಡಿರಿ. ಅಶ್ಶೂರದ ಅರಸನಿಂದ ಬಂದ “ಹುಡುಗರು” ನಿನ್ನ ವಿಷಯವಾಗಿ ಹೇಳಿದ ಮಾತುಗಳನ್ನು ನಂಬಬೇಡಿರಿ. ಇಗೋ, ನಾನು ಒಂದು ಆತ್ಮವನ್ನು ಅಶ್ಶೂರದ ವಿರುದ್ಧವಾಗಿ ಕಳುಹಿಸುತ್ತೇನೆ. ದೇಶಕ್ಕೆ ಬರಲಿರುವ ಅಪಾಯದ ಬಗ್ಗ ಎಚ್ಚರಿಕೆಯ ವರದಿಯು ರಾಜನಿಗೆ ಬರುತ್ತದೆ. ಅದನ್ನು ಕೇಳಿ ಅವನು ತನ್ನ ದೇಶಕ್ಕೆ ಹಿಂದಿರುಗುವನು. ಆಗ ಅವನ ದೇಶದಲ್ಲಿಯೇ ನಾನು ಅವನನ್ನು ಖಡ್ಗದಿಂದ ಸಂಹರಿಸುವೆನು.’” ಎಂದು ಹೇಳಿದನು.

ಅಶ್ಶೂರದ ಸೈನ್ಯವು ಜೆರುಸಲೇಮಿನಿಂದ ಹಿಂತಿರುಗಿತು

8-9 ಅಶ್ಶೂರದ ಅರಸನಿಗೆ ಒಂದು ಸಂದೇಶವು ಬಂದು ತಲುಪಿತು. ಅದರಲ್ಲಿ, “ಇಥಿಯೋಪ್ಯದ ಅರಸನಾದ ತಿರ್ಹಾಕನು ನಿನ್ನೊಂದಿಗೆ ಯುದ್ಧಮಾಡಲು ಬರುತ್ತಿದ್ದಾನೆ” ಎಂದು ಬರೆದಿತ್ತು. ಅದನ್ನು ಕೇಳಿ ಅಶ್ಶೂರದ ಅರಸನು ಲಾಕೀಷನ್ನು ಬಿಟ್ಟು ಲಿಬ್ನಕ್ಕೆ ಹೋದನು. ಸೇನಾದಂಡನಾಯಕನಿಗೆ ಈ ಸಮಾಚಾರ ಮುಟ್ಟಿದ ಕೂಡಲೇ ಅವನು ತನ್ನ ಅರಸನು ಯುದ್ಧಮಾಡುತ್ತಿದ್ದ ಲಿಬ್ನ ಪಟ್ಟಣಕ್ಕೆ ಹೋದನು.

ಅಲ್ಲಿಂದ ಅವನು ಹಿಜ್ಕೀಯನ ಬಳಿಗೆ ತನ್ನ ದೂತರನ್ನು ಕಳುಹಿಸಿ, 10 “ಯೆಹೂದದ ಅರಸನಾದ ಹಿಜ್ಕೀಯನಿಗೆ ನೀವು ಹೀಗೆ ಹೇಳಬೇಕು:

‘ನೀನು ನಂಬುವ ದೇವರಿಂದ ನೀನು ಮೋಸ ಹೋಗಬೇಡ. “ಜೆರುಸಲೇಮ್ ಅಶ್ಶೂರದ ಅರಸನ ಕೈಯಿಂದ ಸೋಲಿಸಲ್ಪಡಲು ದೇವರು ಅವಕಾಶ ಕೊಡುವುದಿಲ್ಲ” ಎಂದು ಹೇಳಬೇಡ. 11 ಅಶ್ಶೂರದ ಅರಸರು ಬೇರೆ ಎಲ್ಲಾ ದೇಶಗಳವರಿಗೆ ಏನು ಮಾಡಿದ್ದಾರೆಂದು ನೀವು ಕೇಳಿದ್ದೀರಿ. ಅವರು ಸಂಪೂರ್ಣವಾಗಿ ತಮ್ಮ ವೈರಿಗಳನ್ನು ನಾಶಮಾಡಿದರು. ನೀವು ರಕ್ಷಿಸಲ್ಪಡುವಿರಾ? ಇಲ್ಲ! 12 ಅವರ ದೇವರುಗಳು ಅವರನ್ನು ರಕ್ಷಿಸಿದರೋ? ಇಲ್ಲ! ನನ್ನ ಪೂರ್ವಿಕರು ಅವರನ್ನು ಸಂಪೂರ್ಣವಾಗಿ ನಾಶಮಾಡಿದರು. ಅವರು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣಗಳ ಜನರನ್ನೂ ತೆಲಸ್ಸಾರ್‌ನಲ್ಲಿ ವಾಸವಾಗಿದ್ದ ಎದೆನಿನ ಜನರನ್ನೂ ನಾಶಮಾಡಿದರು. 13 ಹಮಾತಿನ ಅರಸನೆಲ್ಲಿ? ಅರ್ಪಾದಿನ ಅರಸನೆಲ್ಲಿ? ಸೆಫರ್ವಯಿಮ್ ನಗರದ ಅರಸನೆಲ್ಲಿ? ಹೇನ, ಇವ್ವಾ ಎಂಬ ಪಟ್ಟಣಗಳ ಅರಸರೆಲ್ಲಿ? ಅವರೆಲ್ಲರೂ ಹತರಾಗಿದ್ದಾರೆ. ಎಲ್ಲಾ ನಾಶವಾಗಿ ಹೋದರು.’”

ದೇವರಿಗೆ ಹಿಜ್ಕೀಯನ ಪ್ರಾರ್ಥನೆ

14 ಹಿಜ್ಕೀಯನು ಆ ದೂತರ ಕೈಗಳಿಂದ ಪತ್ರಗಳನ್ನು ತೆಗೆದುಕೊಂಡು ಓದಿದನು. ಅನಂತರ ನೇರವಾಗಿ ಯೆಹೋವನ ಆಲಯಕ್ಕೆ ಹೋಗಿ ಆ ಪತ್ರವನ್ನು ಯೆಹೋವನ ಮುಂದಿಟ್ಟನು. 15 ಹಿಜ್ಕೀಯನು ಯೆಹೋವನಿಗೆ ಪ್ರಾರ್ಥಿಸುತ್ತಾ ಹೇಳಿದ್ದೇನೆಂದರೆ: 16 “ಇಸ್ರೇಲರ ದೇವರೇ, ಸರ್ವಶಕ್ತನಾದ ಯೆಹೋವನೇ, ನೀನು ಕೆರೂಬಿಯರ ರೆಕ್ಕೆಯ ಮೇಲೆ ಆಸೀನನಾಗಿರುವೆ. ಇಡೀ ಭೂಮಂಡಲದಲ್ಲಿರುವ ರಾಜ್ಯಗಳನ್ನೆಲ್ಲಾ ನೀನೇ ಆಳುವವನಾಗಿರುವೆ; ಹೌದು, ನೀನೊಬ್ಬನೇ ಆಳುವವನಾಗಿರುವೆ. ನೀನು ಆಕಾಶವನ್ನೂ ಭೂಮಿಯನ್ನೂ ನಿರ್ಮಿಸಿರುವೆ. 17 ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು. ಯೆಹೋವನೇ, ನಿನ್ನ ಕಣ್ಣುಗಳನ್ನು ತೆರೆದು ಈ ಪತ್ರವನ್ನು ನೋಡು. ಸನ್ಹೇರೀಬನು ಜೀವಸ್ವರೂಪ ದೇವರಾದ ನಿನ್ನನ್ನು ಅವಮಾನಮಾಡಿ ಬರೆದ ಪತ್ರವನ್ನು ಕೇಳಿಸಿಕೊ! 18 ಅಶ್ಶೂರದ ಅರಸರು ಆ ಎಲ್ಲಾ ಜನಾಂಗಗಳನ್ನು ನಾಶಮಾಡಿದ್ದು ನಿಜ. 19 ಅಶ್ಶೂರದ ಅರಸರು ಆ ಜನಾಂಗಗಳ ದೇವರುಗಳನ್ನು ಸುಟ್ಟುಹಾಕಿದರು. ಆದರೆ ಆ ದೇವರುಗಳು ಸತ್ಯವಾದುವುಗಳಲ್ಲ. ಅವುಗಳು ಮನುಷ್ಯರು ಕಲ್ಲಿನಿಂದ ಮತ್ತು ಮರದಿಂದ ಕೆತ್ತಿದ ವಿಗ್ರಹಗಳಾಗಿದ್ದವು. ಆದ್ದರಿಂದ ಅಶ್ಶೂರದ ಅರಸರು ಅವುಗಳನ್ನು ನಾಶಮಾಡಲು ಸಾಧ್ಯವಾಯಿತು. 20 ಆದರೆ ನೀನು ನಮ್ಮ ದೇವರಾದ ಯೆಹೋವನು. ಆದ್ದರಿಂದ ದಯಮಾಡಿ ನಮ್ಮನ್ನು ಅಶ್ಶೂರದ ಅರಸನ ಕೈಯಿಂದ ರಕ್ಷಿಸು. ಆಗ ಭೂಮಿಯ ಎಲ್ಲಾ ರಾಜ್ಯಗಳೂ ಯೆಹೋವನಾದ ನೀನೇ ದೇವರೆಂದು ತಿಳಿದುಕೊಳ್ಳುವವು.”

ಹಿಜ್ಕೀಯನಿಗೆ ದೇವರ ಉತ್ತರ

21 ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಈ ಸಂದೇಶವನ್ನು ಕಳುಹಿಸಿದನು: “ಇಸ್ರೇಲರ ದೇವರಾದ ಯೆಹೋವನು ಹೇಳುವುದೇನೆಂದರೆ: ‘ಅಶ್ಶೂರದ ಅರಸನಾದ ಸನ್ಹೇರೀಬನ ಪತ್ರದ ವಿಷಯವಾಗಿ ನೀನು ಪ್ರಾರ್ಥಿಸುವದನ್ನು ನಾನು ಕೇಳಿದೆನು.’

22 “ಸನ್ಹೇರೀಬನ ಕುರಿತು ಯೆಹೋವನ ಸಂದೇಶವಿದು:

‘ಅಶ್ಶೂರದ ಅರಸನೇ, ಚೀಯೋನಿನ ಕುಮಾರಿಯು ನಿನ್ನನ್ನು ಪ್ರಾಮುಖ್ಯವಾದವನೆಂದು ಎಣಿಸುವದಿಲ್ಲ.
    ಆಕೆ ನಿನ್ನನ್ನು ನೋಡಿ ಪರಿಹಾಸ್ಯ ಮಾಡುವಳು.
ಜೆರುಸಲೇಮಿನ ಕುಮಾರಿಯು ನಿನ್ನ ಹಿಂದೆ ತಲೆಯಾಡಿಸುತ್ತಾ
    ನಿನ್ನನ್ನು ಹಾಸ್ಯ ಮಾಡುವಳು.
23 ನೀನು ಅವಮಾನಪಡಿಸಿ ಪರಿಹಾಸ್ಯ ಮಾಡಿ ವಿರೋಧವಾಗಿ ಮಾತಾಡಿದ್ದು ಯಾರಿಗೆ?
    ನೀನು ಇಸ್ರೇಲಿನ ಪರಿಶುದ್ಧನಿಗೆ ವಿರುದ್ಧವಾಗಿರುವೆ.
ಆತನಿಗಿಂತ ನೀನೇ ಉತ್ತಮನೆಂಬ
    ರೀತಿಯಲ್ಲಿ ನೀನು ವರ್ತಿಸಿರುವೆ.
24 ನನ್ನ ಒಡೆಯನಾದ ಯೆಹೋವನನ್ನು ತುಚ್ಛೀಕರಿಸಲಿಕ್ಕೆ ನೀನು ನಿನ್ನ ಅಧಿಕಾರಿಯನ್ನು ಕಳುಹಿಸಿದೆ.
“ನನ್ನಲ್ಲಿ ಬಲ ಸಾಮರ್ಥ್ಯಗಳಿವೆ; ನನ್ನಲ್ಲಿ ಅನೇಕಾನೇಕ ರಥಗಳಿವೆ. ನನ್ನ ಬಲದಿಂದ ನಾನು ಲೆಬನೋನನ್ನು ಸೋಲಿಸಿದೆ.
ಲೆಬನೋನಿನ ಉನ್ನತ ಶಿಖರಗಳನ್ನು ನಾನು ಏರಿದೆನು.
    ಲೆಬನೋನಿನ ಎತ್ತರವಾದ ದೇವದಾರು ಮರಗಳನ್ನೂ
ಶ್ರೇಷ್ಠವಾದ ತುರಾಯಿ ಮರಗಳನ್ನೂ (ಸೈನ್ಯ) ನಾನು ಕಡಿದುಹಾಕಿದೆನು.
    ನಾನು ಅತ್ಯುನ್ನತ ಶಿಖರಕ್ಕೂ ದಟ್ಟವಾದ ಕಾಡಿನೊಳಗೂ ಹೋಗಿದ್ದೇನೆ.
25 ನಾನು ಬಾವಿಗಳನ್ನು ತೋಡಿ ಹೊಸಹೊಸ ಸ್ಥಳದ ನೀರು ಕುಡಿದಿರುವೆನು.
ಈಜಿಪ್ಟಿನ ನದಿಗಳನ್ನು ಬತ್ತಿಸಿ
    ದೇಶದಲ್ಲೆಲ್ಲಾ ಸಂಚರಿಸಿದೆನು” ಎಂದು ನೀನು ಹೇಳಿದೆ.’

26 “ಆದರೆ ದೇವರು ಏನು ಹೇಳುತ್ತಾನೆಂದು ಕೇಳಿದೆಯಾ?
    ಬಹುಕಾಲದ ಹಿಂದೆ ನಾನು ಯೋಜನೆಯನ್ನು ಮಾಡಿದ್ದೆನು.
    ಪ್ರಾಚೀನ ಕಾಲದಿಂದ ಅದರ ವಿಷಯವಾಗಿ ಆಲೋಚನೆ ಮಾಡಿದ್ದೆನು.
ಈಗ ಅದು ನೆರವೇರುವಂತೆ ಮಾಡಿದ್ದೇನೆ.
    ಬಲಿಷ್ಠವಾದ ನಗರಗಳನ್ನು ನಾಶಮಾಡಿ ಅವುಗಳನ್ನು ಕಲ್ಲಿನ ರಾಶಿಗಳನ್ನಾಗಿ ಮಾಡಲು ನಿನ್ನನ್ನು ಬಿಟ್ಟಿರುತ್ತೇನೆ.
27 ಆ ಪಟ್ಟಣಗಳಲ್ಲಿದ್ದ ಜನರು ನಿಸ್ಸಹಾಯಕರಾದರು ಮತ್ತು ಬಲಹೀನರಾದರು.
    ಅವರು ಹೆದರಿ ಗಲಿಬಿಲಿಗೊಂಡಿದ್ದರು.
ಅವರು ಹೊಲದ ಹುಲ್ಲಿನಂತೆಯೂ
    ಸಸಿಗಳಂತೆಯೂ ಕಡಿದುಹಾಕಲ್ಪಡಲಿದ್ದಾರೆ.
ಅವರು ಮನೆಯ ಮೇಲೆ ಬೆಳೆಯುವ ಹುಲ್ಲಿನಂತಿದ್ದಾರೆ.
    ಅವು ಉದ್ದವಾಗಿ ಬೆಳೆಯುವ ಮೊದಲೇ ಸಾಯುವವು.
28 ನಿನ್ನ ಸೈನ್ಯದ ಬಗ್ಗೆಯೂ ನಿನ್ನ ಯುದ್ಧಗಳ ಬಗ್ಗೆಯೂ ನನಗೆ ಗೊತ್ತಿದೆ.
    ನೀನು ವಿಶ್ರಾಂತಿ ತೆಗೆದುಕೊಂಡದ್ದೂ ನನಗೆ ಗೊತ್ತಿದೆ.
    ನೀನು ಯುದ್ಧಕ್ಕೆ ಹೋದದ್ದೂ ನನಗೆ ಗೊತ್ತಿದೆ.
    ನೀನು ಯುದ್ಧದಿಂದ ಹಿಂತಿರುಗಿ ಮನೆಗೆ ಬಂದದ್ದೂ ನನಗೆ ಗೊತ್ತಿದೆ.
ನೀನು ನನ್ನ ಮೇಲೆ ಕೋಪಗೊಂಡಿರುವುದೂ ನನಗೆ ಗೊತ್ತಿದೆ.
29 ಹೌದು, ನೀನು ನನ್ನ ವಿಷಯದಲ್ಲಿ ಕೋಪಗೊಂಡಿರುವೆ.
    ಗರ್ವದಿಂದ ತುಂಬಿದ ನಿನ್ನ ಪರಿಹಾಸ್ಯದ ಮಾತುಗಳನ್ನು ನಾನು ಕೇಳಿದ್ದೇನೆ.
ನಾನು ನಿನ್ನ ಮೂಗಿಗೆ ಕೊಕ್ಕೆ ಸಿಕ್ಕಿಸಿ,
    ನಿನ್ನ ಬಾಯಿಗೆ ಕಡಿವಾಣವನ್ನು ಹಾಕಿ,
ನೀನು ಎಲ್ಲಿಂದ ಬಂದಿದ್ದೆಯೋ
    ಅಲ್ಲಿಗೆ ನಿನ್ನನ್ನು ಹಿಂತಿರುಗಿಸುತ್ತೇನೆ.”

ಹಿಜ್ಕೀಯನಿಗೆ ಯೆಹೋವನ ಸಂದೇಶ

30 ಆಗ ಯೆಹೋವನು ಹಿಜ್ಕೀಯನಿಗೆ, “ಈ ಮಾತುಗಳೆಲ್ಲಾ ಸತ್ಯವೆಂಬುದಕ್ಕೆ ನಿನಗೊಂದು ಗುರುತನ್ನು ಕೊಡುತ್ತೇನೆ. ಬೀಜ ಬಿತ್ತಲು ನಿನಗೆ ಸಾಧ್ಯವಿರಲಿಲ್ಲ. ಆದ್ದರಿಂದ ಈ ವರ್ಷದಲ್ಲಿ ಕೂಳೆಬೆಳೆಯನ್ನೂ ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ನೀನು ಊಟಮಾಡುವೆ. ಆದರೆ ಮೂರನೆಯ ವರ್ಷದಲ್ಲಿ ನೀನೇ ಬಿತ್ತಿದ ಬೀಜದಲ್ಲಿ ಬೆಳೆದ ಬೆಳೆಯನ್ನು ಊಟಮಾಡುವೆ. ಆ ಬೆಳೆಯಿಂದ ನಿನಗೆ ಬೇಕಾದಷ್ಟು ಆಹಾರ ಸಂಗ್ರಹವಾಗುವದು. ನೀನು ದ್ರಾಕ್ಷಾಲತೆಗಳನ್ನು ನೆಟ್ಟು ಅದರ ಫಲಗಳನ್ನು ತಿನ್ನುವೆ.

31 “ಯೆಹೂದ ಕುಲದವರಲ್ಲಿ ತಪ್ಪಿಸಿಕೊಂಡು ಜೀವಂತವಾಗಿ ಉಳಿದವರು ಮತ್ತೆ ಅಭಿವೃದ್ಧಿಯಾಗುವರು. ತಮ್ಮ ಬೇರುಗಳನ್ನು ಆಳವಾಗಿ ಇಳಿಯಬಿಟ್ಟು ಹಣ್ಣುಗಳನ್ನು ಬಿಡುವ ಗಿಡಗಳಂತೆ ಅವರಿರುವರು. 32 ಯಾಕೆಂದರೆ ಸ್ವಲ್ಪಮಂದಿ ಮಾತ್ರವೇ ಜೀವಂತವಾಗಿ ಉಳಿಯುವರು. ಅವರು ಜೆರುಸಲೇಮಿನಿಂದ ಹೊರಟುಹೋಗುವರು. ಉಳಿದವರು ಚೀಯೋನ್ ಪರ್ವತದಿಂದ ಬರುವರು.” ಯೆಹೋವನ ಗಾಢವಾದ ಪ್ರೀತಿಯೇ ಇದನ್ನು ಮಾಡುವದು.

33 ಆದ್ದರಿಂದ ಯೆಹೋವನು ಅಶ್ಶೂರದ ಅರಸನ ಬಗ್ಗೆ ಹೇಳುವನು:

“ಅವನು ಈ ಪಟ್ಟಣದೊಳಗೆ ಬರುವದಿಲ್ಲ.
    ಅವನು ಒಂದು ಬಾಣವನ್ನೂ ಈ ಪಟ್ಟಣದ ಮೇಲೆ ಹಾರಿಸುವದಿಲ್ಲ.
ಅವನು ತನ್ನ ಗುರಾಣಿಗಳನ್ನು ಈ ಪಟ್ಟಣಕ್ಕೆ ತರುವದಿಲ್ಲ.
    ಈ ಪಟ್ಟಣದ ಗೋಡೆಗಳ ಮೇಲೆ ಆಕ್ರಮಣಮಾಡಲು ಅವನು ದಿಬ್ಬ ಹಾಕುವದಿಲ್ಲ.
34 ಅವನು ಬಂದ ದಾರಿಯಿಂದಲೇ ಹಿಂದಕ್ಕೆ ಹೋಗುವನು.
    ಅವನು ಈ ಪಟ್ಟಣದೊಳಗೆ ಬರುವದಿಲ್ಲ.
    ಇದು ಯೆಹೋವನ ನುಡಿ.
35 ನಾನು ಈ ಪಟ್ಟಣವನ್ನು ರಕ್ಷಿಸಿ ಕಾಪಾಡುವೆನು.
    ನನಗೋಸ್ಕರವಾಗಿಯೇ ಇದನ್ನು ಮಾಡುವೆನು.
    ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಇದನ್ನು ಮಾಡುವೆನು.”

ಅಶ್ಶೂರರ ಸೈನ್ಯವು ನಾಶಗೊಂಡದ್ದು

36 ಆ ರಾತ್ರಿ, ಯೆಹೋವನ ದೂತನು ಹೊರಟುಹೋಗಿ ಅಶ್ಶೂರದ ಪಾಳೆಯದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಸಂಹರಿಸಿದನು. ಜನರು ಬೆಳಿಗ್ಗೆ ಎದ್ದಾಗ ಸುತ್ತಲೂ ಹೆಣಗಳು ಬಿದ್ದಿದ್ದವು. 37 ಅಶ್ಶೂರದ ಅರಸನಾದ ಸನ್ಹೇರೀಬನು ನಿನೆವೆಗೆ ಹಿಂದಿರುಗಿ ಅಲ್ಲಿಯೇ ಉಳಿದನು.

38 ಒಂದು ದಿವಸ ಸನ್ಹೇರೀಬನು ತನ್ನ ದೇವರಾದ ನಿಸ್ರೋಕನ ಮಂದಿರದಲ್ಲಿ ಪೂಜಿಸುತ್ತಿರುವಾಗ ಅವನ ಇಬ್ಬರು ಮಕ್ಕಳಾದ ಅದ್ರಮ್ಮೆಲೆಕ್ ಮತ್ತು ಸರೆಚರ್ ಎಂಬವರು ಅವನನ್ನು ಕತ್ತಿಯಿಂದ ಸಂಹರಿಸಿ ಅರರಾಟ್‌ಗೆ ಪಲಾಯನಗೈದರು. ಅನಂತರ ಸನ್ಹೇರೀಬನ ಮಗ ಏಸರ್‌ಹದ್ದೋನನು ಅಶ್ಶೂರದ ಹೊಸ ಅರಸನಾದನು.

ಹಿಜ್ಕೀಯನ ಅಸ್ವಸ್ಥತೆ

38 ಆ ಸಮಯದಲ್ಲಿ ಹಿಜ್ಕೀಯನು ರೋಗಗ್ರಸ್ತನಾಗಿ ಸಾಯುವ ಸ್ಥಿತಿಯಲ್ಲಿದ್ದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನನ್ನು ನೋಡಲು ಹೋದನು. ಯೆಶಾಯನು ಅರಸನಿಗೆ, “ಯೆಹೋವನು ಈ ವಿಷಯಗಳನ್ನು ನಿನಗೆ ತಿಳಿಸಲು ಹೇಳಿದ್ದಾನೆ: ‘ನೀನು ಬೇಗನೇ ಸಾಯುವೆ. ಆದ್ದರಿಂದ ನೀನು ಸಾಯುವಾಗ ನಿನ್ನ ಕುಟುಂಬದವರು ಮಾಡಬೇಕಾದದ್ದನ್ನು ಅವರಿಗೆ ತಿಳಿಸು. ನಿನಗೆ ಗುಣವಾಗುವುದಿಲ್ಲ’” ಎಂದು ಹೇಳಿದನು.

ಹಿಜ್ಕೀಯನು ದೇವಾಲಯದ ಕಡೆಗಿರುವ ಗೋಡೆಯ ಕಡೆಗೆ ಮುಖ ಮಾಡಿ ದೇವರಿಗೆ, “ಯೆಹೋವನೇ, ನಾನು ನಿನಗೆ ಪೂರ್ಣಹೃದಯದಿಂದ ನಂಬಿಗಸ್ತನಾಗಿ ಸೇವೆಮಾಡಿದ್ದನ್ನು ಜ್ಞಾಪಿಸಿಕೋ. ನಿನಗೆ ಇಷ್ಟವಾದದ್ದನ್ನೆಲ್ಲ ನಾನು ಮಾಡಿದ್ದೇನೆ” ಎಂದು ಪ್ರಾರ್ಥಿಸಿ ಬಹಳವಾಗಿ ಅತ್ತನು.

ಆಗ ಯೆಶಾಯನಿಗೆ ಈ ಸಂದೇಶವು ಯೆಹೋವನಿಂದ ಬಂದಿತು: “ಹಿಜ್ಕೀಯನ ಬಳಿಗೆ ಹೋಗಿ ಹೇಳು, ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೇಳುವುದೇನೆಂದರೆ: ‘ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಸೇರಿಸಿದ್ದೇನೆ. ನಾನು ನಿನ್ನನ್ನೂ ಈ ಪಟ್ಟಣವನ್ನೂ ಕಾಪಾಡುವೆನು. ಅಶ್ಶೂರದ ಅರಸನಿಂದ ರಕ್ಷಿಸುವೆನು.’”

“ದೇವರು ತಾನು ಹೇಳಿದ್ದನ್ನು ನೆರವೇರಿಸುತ್ತಾನೆ ಎಂಬುದಕ್ಕೆ ಗುರುತೇನೆಂದರೆ: ಇಗೋ, ಆಹಾಜನ ಮೆಟ್ಟಿಲಲ್ಲಿರುವ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಹೋಗುವಂತೆ ಮಾಡುವೆನು ಎಂದು ನಿನ್ನ ದೇವರಾಗಿರುವ ಯೆಹೋವನು ಹೇಳುತ್ತಾನೆಂಬದಾಗಿ ತಿಳಿಸು” ಎಂದು ಹೇಳಿದನು. ಅದರಂತೆ ಮೆಟ್ಟಿಲಲ್ಲಿರುವ ಸೂರ್ಯನ ನೆರಳು ಹತ್ತು ಮೆಟ್ಟಿಲು ಹಿಂದಕ್ಕೆ ಹೋಯಿತು.

ಹಿಜ್ಕೀಯನ ಹಾಡು

ಹಿಜ್ಕೀಯನು ತನ್ನ ಕಾಯಿಲೆಯಿಂದ ಗುಣಹೊಂದಿದ ಬಳಿಕ ಬರೆದ ಪತ್ರ:

10 ನಾನು ವೃದ್ಧನಾಗುವ ತನಕ ಬದುಕುವೆನೆಂದು ನಾನು ನನ್ನೊಳಗೆ ಅಂದುಕೊಂಡಿದ್ದೆನು.
    ಆದರೆ ನಾನು ಮರಣದ್ವಾರದ ಮೂಲಕ ಹೋಗುವ ಸಮಯ ಬಂತು.
    ನನ್ನ ಜೀವಮಾನವೆಲ್ಲ ಅಲ್ಲಿ ಕಳೆಯುವೆನು.
11 ಅದಕ್ಕೆ ನಾನೆಂದೆ: “ಇನ್ನು ಮೇಲೆ ಜೀವಿತರ ಲೋಕದಲ್ಲಿ ಇನ್ನು ದೇವರಾದ ಯೆಹೋವನನ್ನು ನೋಡುವದಿಲ್ಲ.
    ಇನ್ನು ಮೇಲೆ ಜನರು ಲೋಕದಲ್ಲಿ ಜೀವಿಸುವದನ್ನು ನಾನು ನೋಡುವದಿಲ್ಲ.
12 ನನ್ನ ಮನೆಯು ಅಂದರೆ ನನ್ನ ಕುರುಬನ ಗುಡಾರವು ಕೀಳಲ್ಪಟ್ಟು ನನ್ನಿಂದ ತೆಗೆಯಲ್ಪಡುತ್ತಿದೆ.
    ಒಬ್ಬನು ಮಗ್ಗದಲ್ಲಿ ಬಟ್ಟೆಯನ್ನು ಸುತ್ತಿ ಕತ್ತರಿಸಿಬಿಡುವಂತೆ ನಾನು ಕತ್ತರಿಸಲ್ಪಟ್ಟಿದ್ದೇನೆ.
    ನನ್ನ ಆಯುಷ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಮುಗಿಸಿಬಿಟ್ಟಿರುವೆ.
13 ಇಡೀರಾತ್ರಿ ನಾನು ಸಿಂಹದಂತೆ ಗರ್ಜಿಸಿದೆನು.
    ಆದರೆ ಸಿಂಹವು ಎಲುಬುಗಳನ್ನು ಜಗಿದು ಪುಡಿಮಾಡುವಂತೆ ನನ್ನ ನಿರೀಕ್ಷೆಯೆಲ್ಲಾ ಜಜ್ಜಿಹೋಯಿತು.
ನೀನು ನನ್ನ ಜೀವಿತವನ್ನು ಅಷ್ಟು ಅಲ್ಪಕಾಲಕ್ಕೇ ಕೊನೆಗೊಳಿಸಿದೆ!
14 ನಾನು ಪಾರಿವಾಳದಂತೆ ಕೂಗಿಕೊಂಡೆನು.
    ಪಕ್ಷಿಯಂತೆ ಅರಚಿಕೊಂಡೆನು.
ನನ್ನ ಕಣ್ಣುಗಳು ಸ್ವರ್ಗದ ಕಡೆಗೆ
    ನೋಡುತ್ತಾ ಆಯಾಸಗೊಂಡವು.
ನನ್ನ ಒಡೆಯನೇ, ನಾನು ತುಂಬಾ ಚಿಂತಾಕ್ರಾಂತನಾಗಿದ್ದೇನೆ.
    ನೀನು ನನಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡು.”
15 ನಾನೇನು ಹೇಳಲಿ?
    ನನಗೆ ಸಂಭವಿಸಲಿರುವುದನ್ನು ನನ್ನ ಒಡೆಯನು ತಿಳಿಸಿದ್ದಾನೆ.
    ನನ್ನ ಒಡೆಯನು ಅದನ್ನು ನೆರವೇರಿಸುತ್ತಾನೆ.
ನನ್ನ ಆತ್ಮದಲ್ಲಿ ಸಂಕಟಗಳೆಲ್ಲಾ ತುಂಬಿವೆ.
    ನಾನು ನನ್ನ ಜೀವಮಾನವೆಲ್ಲಾ ದೀನನಾಗುವೆನು.
16 ನನ್ನ ಒಡೆಯನೇ, ನನ್ನ ಆತ್ಮವು ಪುನರುಜ್ಜೀವಿಸುವಂತೆ ಮಾಡು.
    ನನ್ನ ಆತ್ಮವು ಬಲಗೊಂಡು ಆರೋಗ್ಯದಾಯಕವಾಗುವಂತೆ ಸಹಾಯಮಾಡು.
    ನಾನು ತಿರುಗಿ ಸ್ವಸ್ಥತೆ ಹೊಂದುವಂತೆ ಮಾಡು.
    ನಾನು ಮತ್ತೆ ಜೀವಿಸುವಂತೆ ಮಾಡು.

17 ಇಗೋ, ನನ್ನ ಸಂಕಟವೆಲ್ಲಾ ಹೊರಟುಹೋಯಿತು.
    ನನಗೀಗ ಸಮಾಧಾನವಿದೆ.
ನೀನು ನನ್ನನ್ನು ಬಹಳವಾಗಿ ಪ್ರೀತಿಸುವದರಿಂದ
    ನನ್ನ ಶರೀರವು ಸಮಾಧಿಯಲ್ಲಿ ಕೊಳೆಯುವಂತೆ ಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
    ನನ್ನ ಪಾಪಗಳನ್ನು ಬಹುದೂರ ಬಿಸಾಡಿದೆ.
18 ಸತ್ತವರು ನಿನ್ನನ್ನು ಸ್ತುತಿಸುವದಿಲ್ಲ.
    ಪಾತಾಳದಲ್ಲಿರುವ ಜನರು ನಿನ್ನನ್ನು ಸ್ತುತಿಸುವದಿಲ್ಲ.
ಸತ್ತುಹೋದವರು ಸಹಾಯಕ್ಕಾಗಿ ನಿನ್ನ ಮೇಲೆ ಭರವಸವಿಡರು.
    ಅವರು ಭೂಮಿಯಲ್ಲಿರುವ ಆಳವಾದ ಕುಣಿಗೆ ಸೇರುವರು.
    ಅವರು ತಿರುಗಿ ಮಾತನಾಡುವದೇ ಇಲ್ಲ.
19 ನನ್ನ ಹಾಗೆ ಈ ದಿನ ಜೀವಿಸುವವರೆಲ್ಲಾ ನಿನ್ನನ್ನು ಕೊಂಡಾಡುವರು.
    ತಂದೆಯು ತನ್ನ ಮಕ್ಕಳಿಗೆ ನಿನ್ನ ಮೇಲೆ ಭರವಸವಿಡಲು ಕಲಿಸುವರು.
20 ನಾನು ಹೇಳುವುದೇನೆಂದರೆ: “ಯೆಹೋವನು ನನ್ನನ್ನು ರಕ್ಷಿಸಿದನು.
    ನಮ್ಮ ಜೀವಮಾನದ ಕಾಲವೆಲ್ಲಾ ಯೆಹೋವನ ಆಲಯದಲ್ಲಿ ನಾವು ಹಾಡುತ್ತಾ ವಾದ್ಯಬಾರಿಸುತ್ತಾ ಆತನನ್ನು ಸ್ತುತಿಸುವೆವು.”

21 ಆಗ ಯೆಶಾಯನು ಹಿಜ್ಕೀಯನಿಗೆ, “ನೀನು ಅಂಜೂರದ ಉಂಡೆ ಮಾಡಿ ಅದನ್ನು ನಿನ್ನ ಗಾಯದ ಮೇಲಿಡು. ಆಗ ನೀನು ಗುಣಹೊಂದುವೆ” ಎಂದು ಹೇಳಿದನು.

22 ಆಗ ಹಿಜ್ಕೀಯನು ಯೆಶಾಯನಿಗೆ, “ನಾನು ಸ್ವಸ್ಥ ಹೊಂದುವೆನೆಂಬುದಕ್ಕೆ ಗುರುತೇನು? ನಾನು ದೇವರ ಆಲಯಕ್ಕೆ ಮತ್ತೆ ಹೋಗುವೆನೆಂಬುದಕ್ಕೆ ಗುರುತೇನು?” ಎಂದು ಕೇಳಿದನು.

ಕೊಲೊಸ್ಸೆಯವರಿಗೆ 3

ಕ್ರಿಸ್ತನಲ್ಲಿ ನಿಮ್ಮ ಹೊಸಜೀವನ

ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ. ಪರಲೋಕದವುಗಳನ್ನು ಮಾತ್ರ ಆಲೋಚಿಸಿ, ಭೂಲೋಕದವುಗಳನ್ನು ಆಲೋಚಿಸಬೇಡಿ. ನಿಮ್ಮ ಹಳೆಯ ಸ್ವಭಾವ ಸತ್ತುಹೋಗಿದೆ, ನಿಮ್ಮ ಹೊಸ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿದೆ. ಕ್ರಿಸ್ತನೇ ನಿಮ್ಮ ಜೀವ, ಆತನು ಮರಳಿ ಪ್ರತ್ಯಕ್ಷನಾದಾಗ, ನೀವೂ ಆತನ ಪ್ರಭಾವದೊಂದಿಗೆ ಪ್ರತ್ಯಕ್ಷರಾಗುವಿರಿ.

ಆದ್ದರಿಂದ ದುಷ್ಕೃತ್ಯಗಳಾದ ಲೈಂಗಿಕ ಪಾಪ, ದುರಾಚಾರ, ಕಾಮಾಭಿಲಾಷೆ, ದುರಾಶೆ ಮತ್ತು ಸ್ವಾರ್ಥತೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಸ್ವಾರ್ಥವು ವಿಗ್ರಹಾರಾಧನೆಗೆ ಸಮವಾಗಿದೆ. ಇವು ದೇವರನ್ನು ಕೋಪಗೊಳಿಸುತ್ತವೆ. ಪೂರ್ವಕಾಲದ ನಿಮ್ಮ ದುಷ್ಟಜೀವನದಲ್ಲಿ ಈ ಕಾರ್ಯಗಳನ್ನೆಲ್ಲ ನೀವು ಮಾಡಿರುವಿರಿ.

ಈಗಲಾದರೋ ಕೋಪ, ಕ್ರೋಧ, ಮತ್ಸರ, ಚುಚ್ಚು ಮಾತು ಮತ್ತು ದುರ್ಭಾಷೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ನಿಮ್ಮ ಹಳೆಯ ಪಾಪಪೂರಿತ ಜೀವನವನ್ನು ಮತ್ತು ನಿಮ್ಮ ಮೊದಲಿನ ಕಾರ್ಯಗಳನ್ನು ಬಿಟ್ಟುಬಿಟ್ಟಿದ್ದೀರಿ. 10 ನೀವು ಹೊಸ ಜೀವನವನ್ನು ಆರಂಭಿಸಿರುವಿರಿ. ಈ ಹೊಸ ಜೀವನದಲ್ಲಿ ನೀವು ನಿಮ್ಮನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ನೂತನರಾಗುತ್ತಿದ್ದೀರಿ. ದೇವರ ಬಗ್ಗೆ ನಿಜವಾದ ತಿಳುವಳಿಕೆಯನ್ನು ಈ ಹೊಸ ಜೀವನ ಕೊಡುತ್ತದೆ. 11 ಈ ಹೊಸ ಜೀವನದಲ್ಲಿ ಗ್ರೀಕರ ಮತ್ತು ಯೆಹೂದ್ಯರ ಮಧ್ಯದಲ್ಲಾಗಲಿ, ಸುನ್ನತಿಯನ್ನು ಮಾಡಿಸಿಕೊಂಡಿರುವ ಮತ್ತು ಮಾಡಿಸಿಕೊಂಡಿಲ್ಲದ ಜನರ ಮಧ್ಯದಲ್ಲಾಗಲಿ ಪರದೇಶದವರ ಅಥವಾ ಅನಾಗರೀಕರ ಮಧ್ಯದಲ್ಲಾಗಲಿ, ಗುಲಾಮರ ಅಥವಾ ಸ್ವತಂತ್ರರಾದ ಜನರ ಮಧ್ಯದಲ್ಲಾಗಲಿ ಯಾವ ಭೇದವೂ ಇಲ್ಲ. ಎಲ್ಲಾ ವಿಶ್ವಾಸಿಗಳಲ್ಲಿಯೂ ಕ್ರಿಸ್ತನಿದ್ದಾನೆ. ಅವರಿಗೆ ಕ್ರಿಸ್ತನೊಬ್ಬನೇ ಅಗತ್ಯ.

ಇತರರೊಂದಿಗೆ ನಿಮ್ಮ ಹೊಸ ಜೀವನ

12 ದೇವರು ನಿಮ್ಮನ್ನು ಆರಿಸಿಕೊಂಡಿದ್ದಾನೆ ಮತ್ತು ನಿಮ್ಮನ್ನು ತನ್ನ ಪವಿತ್ರ ಜನರನ್ನಾಗಿಸಿದ್ದಾನೆ. ಆತನು ನಿಮ್ಮನ್ನು ಪ್ರೀತಿಸುತ್ತಾನೆ. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. 13 ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಬೇರೆಯವರ ಮೇಲೆ ಹೇಳುವಂಥ ದೂರುಗಳು ನಿಮ್ಮಲ್ಲಿದ್ದರೂ ಕ್ಷಮಿಸಿಬಿಡಿರಿ. ಪ್ರಭುವು ನಿಮ್ಮನ್ನು ಕ್ಷಮಿಸಿದ್ದರಿಂದ ನೀವೂ ಇತರರನ್ನು ಕ್ಷಮಿಸಿರಿ. 14 ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯು ನಿಮ್ಮನ್ನೆಲ್ಲರನ್ನೂ ಸಂಪೂರ್ಣವಾದ ಒಗ್ಗಟ್ಟಿನಲ್ಲಿರಿಸುವುದು. 15 ಕ್ರಿಸ್ತನು ನೀಡುವ ಶಾಂತಿಯು ನಿಮ್ಮ ಆಲೋಚನಗಳನ್ನೆಲ್ಲ ತನ್ನ ಹತೋಟಿಯಲ್ಲಿಟ್ಟುಕೊಂಡಿರಲಿ. ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರಾದ್ದರಿಂದ ಶಾಂತಿಯಿಂದಿರಲು ಕರೆಯಲ್ಪಟ್ಟಿದ್ದೀರಿ. ಯಾವಾಗಲು ಕೃತಜ್ಞರಾಗಿರಿ.

16 ಕ್ರಿಸ್ತನ ಉಪದೇಶವು ನಿಮ್ಮ ಅಂತರಂಗದಲ್ಲಿ ಸಮೃದ್ಧವಾಗಿ ನೆಲಸಿರಲಿ. ನೀವು ದೇವರಿಂದ ಕಲಿತುಕೊಂಡದ್ದನ್ನು ಉಪದೇಶಿಸುವುದಕ್ಕೂ ಒಬ್ಬರನ್ನೊಬ್ಬರು ಬಲಪಡಿಸುವುದಕ್ಕೂ ಉಪಯೋಗಿಸಿರಿ. ನಿಮ್ಮ ಹೃದಯದಲ್ಲಿ ದೇವರಿಗೆ ಕೃತಜ್ಞರಾಗಿದ್ದು ಹಾಡುಗಳನ್ನು, ಕೀರ್ತನೆಗಳನ್ನು, ಸಂಗೀತಗಳನ್ನು ಹಾಡಿರಿ. 17 ನೀವು ನುಡಿಯಿಂದಾಗಲಿ, ನಡೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ನಿಮ್ಮ ಪ್ರಭುವಾದ ಯೇಸುವಿಗಾಗಿ ಮಾಡಿರಿ. ನೀವು ಏನು ಮಾಡಿದರೂ ಯೇಸುವಿನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

ಮನೆಯವರೊಂದಿಗೆ ನಿಮ್ಮ ಹೊಸ ಜೀವನ

18 ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ವಿಧೇಯರಾಗಿರಿ. ಇದು ಪ್ರಭುವಿನಲ್ಲಿ ನೀವು ಮಾಡುವ ಯೋಗ್ಯ ಕಾರ್ಯವಾಗಿದೆ.

19 ಪುರುಷರೇ, ನಿಮ್ಮ ಪತ್ನಿಯರನ್ನು ಪ್ರೀತಿಸಿ, ಅವರೊಡನೆ ಸಾತ್ವಿಕರಾಗಿರಿ.

20 ಮಕ್ಕಳೇ, ನಿಮ್ಮ ತಂದೆತಾಯಿಗಳಿಗೆ ಎಲ್ಲಾ ವಿಷಯಗಳಲ್ಲಿಯೂ ವಿಧೇಯರಾಗಿರಿ. ಇದು ಪ್ರಭುವಿಗೆ ಸಂತೋಷವನ್ನು ಉಂಟುಮಾಡುವುದು.

21 ತಂದೆಗಳೇ, ನಿಮ್ಮ ಮಕ್ಕಳಿಗೆ ಕಿರುಕುಳ ಕೊಡಬೇಡಿ. ಇಲ್ಲವಾದರೆ ಅವರು ಕುಂದಿಹೋಗುವರು.

22 ಸೇವಕರೇ, ಎಲ್ಲಾ ಕಾರ್ಯಗಳಲ್ಲಿಯೂ ನಿಮ್ಮ ಯಜಮಾನರಿಗೆ ವಿಧೇಯರಾಗಿರಿ. ಅವರ ಮೆಚ್ಚಿಕೆಯನ್ನು ಗಳಿಸುವುದಕ್ಕಾಗಿ ಅವರ ಕಣ್ಣೆದುರಿನಲ್ಲಿ ಮಾತ್ರ ಸೇವೆ ಮಾಡದಿರಿ. ನೀವು ಪ್ರಭುವಿಗೆ ಭಯಪಡುವುದರಿಂದ ನಿಮ್ಮ ಯಜಮಾನರಿಗೆ ಯಥಾರ್ಥವಾಗಿ ಸೇವೆ ಮಾಡಿರಿ. 23 ಎಲ್ಲಾ ಕಾರ್ಯಗಳನ್ನು ನಿಮ್ಮಿಂದಾದಷ್ಟು ಅತ್ಯುತ್ತಮವಾಗಿಯೇ ಮಾಡಿರಿ. ಯಾವುದೇ ಕಾರ್ಯವನ್ನಾಗಲಿ ಜನರಿಗಾಗಿ ಮಾಡದೆ ಪ್ರಭುವಿಗಾಗಿ ಮಾಡಿರಿ. 24 ಪ್ರಭುವಿನಿಂದಲೇ ನಿಮಗೆ ಪ್ರತಿಫಲ ದೊರೆಯುತ್ತದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಆತನು ತನ್ನ ಜನರಿಗೆ ಮಾಡಿದ ವಾಗ್ದಾನವು ನಿಮ್ಮ ನೆನಪಿನಲ್ಲಿರಲಿ. 25 ಅನ್ಯಾಯ ಮಾಡುವವನು ಅದಕ್ಕೆ ತಕ್ಕ ಶಿಕ್ಷೆಯನ್ನು ಪಡೆಯುವನು. ಪ್ರಭುವಿನಲ್ಲಿ ಪಕ್ಷಪಾತವಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International