Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 32-33

ಅಧಿಪತಿಗಳು ನ್ಯಾಯನೀತಿಯುಳ್ಳವರಾಗಿರಬೇಕು

32 ನನ್ನ ಮಾತುಗಳನ್ನು ಕೇಳಿರಿ. ರಾಜ್ಯದಲ್ಲಿ ಧರ್ಮವು ನೆಲೆಗೊಳ್ಳುವಂತೆ ರಾಜನು ರಾಜ್ಯವಾಳಬೇಕು. ಅಧಿಕಾರಿಗಳು ನ್ಯಾಯದಿಂದ ಜನರನ್ನು ನಡೆಸಿಕೊಂಡು ಹೋಗಬೇಕು. ಹೀಗಿದ್ದಲ್ಲಿ ರಾಜನು ಮಳೆಯಲ್ಲಿ ಆಶ್ರಯ ಸ್ಥಳವಾಗಿಯೂ ಗಾಳಿಯಲ್ಲಿ ಮರೆಯಂತೆಯೂ ಮರುಭೂಮಿಯಲ್ಲಿ ಒರತೆಯಂತೆಯೂ ಬೆಂಗಾಡಿನಲ್ಲಿ ಬಂಡೆಯ ನೆರಳಿನಂತೆಯೂ ಇರುವನು. ಜನರು ಸಹಾಯಕ್ಕಾಗಿ ರಾಜನ ಕಡೆಗೆ ನೋಡುವರು. ಅವನು ಹೇಳಿದ್ದನ್ನು ಅವರು ಕೇಳುವರು. ಈಗ ಗಲಿಬಿಲಿಯಲ್ಲಿರುವವರು ವಿಷಯವನ್ನು ಸ್ಪಷ್ಟವಾಗಿ ಮತ್ತು ಕೂಡಲೇ ತಿಳಿದುಕೊಳ್ಳುವರು. ಈಗ ಸ್ಪಷ್ಟವಾಗಿ ಮಾತಾಡಲಾರದ ಜನರು ಸ್ಪಷ್ಟವಾಗಿಯೂ, ಸರಾಗವಾಗಿಯೂ ಮಾತಾಡಶಕ್ತರಾಗುವರು. ದುಷ್ಟರನ್ನು ಮಹಾವ್ಯಕ್ತಿಗಳೆಂದು ಕರೆಯುವದಿಲ್ಲ. ನೀಚನನ್ನು ಘನವಂತನೆಂದು ಕರೆಯುವದಿಲ್ಲ.

ದುಷ್ಟನು ದುಷ್ಟತೆಯ ಬಗ್ಗೆ ಮಾತನಾಡುವನು. ದುಷ್ಕೃತ್ಯಗಳನ್ನು ಮಾಡಲು ತನ್ನ ಹೃದಯದಲ್ಲಿ ಆಲೋಚಿಸುವನು. ದುಷ್ಟನು ಯೆಹೋವನ ಬಗ್ಗೆ ಕೆಟ್ಟವುಗಳನ್ನು ಹೇಳುತ್ತಾನೆ. ಹಸಿದವರಿಗೆ ಆಹಾರವನ್ನು ತಿನ್ನುವದಕ್ಕಾಗಲಿ ಬಾಯಾರಿದವರಿಗೆ ನೀರನ್ನು ಕುಡಿಯುವದಕ್ಕಾಗಲಿ ಅವನು ಬಿಡುವದಿಲ್ಲ. ದುಷ್ಟನು ದುಷ್ಟತನವನ್ನು ಉಪಕರಣವನ್ನಾಗಿ ಬಳಸಿಕೊಳ್ಳುವನು. ಬಡಜನರಿಂದ ಪ್ರತಿಯೊಂದನ್ನು ತೆಗೆದುಕೊಳ್ಳಲು ಅವನು ಆಲೋಚಿಸುವನು, ಸುಳ್ಳುಗಳನ್ನು ಹೇಳುವನು. ಅವನ ಸುಳ್ಳುಗಳು ಬಡವನಿಗೆ ನ್ಯಾಯದೊರಕದಂತೆ ಮಾಡುತ್ತವೆ.

ಆದರೆ ಒಬ್ಬ ಒಳ್ಳೆಯ ನಾಯಕನು ಒಳ್ಳೆಯ ಕಾರ್ಯಗಳನ್ನು ಮಾಡಲು ಆಲೋಚಿಸುವನು. ಅಂಥವನು ಒಳ್ಳೆಯ ನಾಯಕನಾಗಿರುವನು.

ಸಂಕಟದ ದಿವಸಗಳು ಬರುವವು

ಹೆಂಗಸರಲ್ಲಿ ಕೆಲವರು ಈಗ ಶಾಂತರಾಗಿದ್ದಾರೆ. ಈಗ ನೀವು ಸುರಕ್ಷಿತರಾಗಿದ್ದೀರಿ ಎಂದು ನಿಮಗೆ ಅನ್ನಿಸುತ್ತದೆ. ಆದರೆ ನೀವು ಸುಮ್ಮನಿದ್ದು ನಾನು ಹೇಳುವ ಮಾತುಗಳನ್ನು ಕೇಳಬೇಕು. 10 ಸ್ತ್ರೀಯರೇ, ನೀವೀಗ ಭದ್ರವಾಗಿದ್ದೀರಿ ಎಂದು ನೀವು ನೆನಸುತ್ತೀರಿ, ಆದರೆ ಒಂದು ವರ್ಷದ ನಂತರ ನಿಮಗೆ ಸಂಕಟವು ಪ್ರಾರಂಭವಾಗುವದು. ಮುಂದಿನ ವರ್ಷ ನೀವು ದ್ರಾಕ್ಷಿಹಣ್ಣುಗಳನ್ನು ಕೂಡಿಸುವದಿಲ್ಲ. ಕೂಡಿಸಲು ದ್ರಾಕ್ಷಿಹಣ್ಣುಗಳೇ ಇರುವದಿಲ್ಲ.

11 ಸ್ತ್ರೀಯರೇ, ನೀವೀಗ ಶಾಂತರಾಗಿದ್ದೀರಿ. ಆದರೆ ನೀವು ಭಯಪಡುವವರಾಗಿರಬೇಕು. ನೀವು ಈಗ ಸುರಕ್ಷಿತರಾಗಿದ್ದೀರಿ, ಆದರೆ ನೀವು ಚಿಂತಿಸುವವರಾಗಿರಬೇಕು. ನಿಮ್ಮ ಒಳ್ಳೆಯ ವಸ್ತ್ರಗಳನ್ನು ತೆಗೆದಿಟ್ಟು ಶೋಕಬಟ್ಟೆಯನ್ನು ಧರಿಸಿರಿ. ಆ ಬಟ್ಟೆಗಳನ್ನು ನಿಮ್ಮ ಸೊಂಟಕ್ಕೆ ಕಟ್ಟಿಕೊಳ್ಳಿರಿ. 12 ಶೋಕವಸ್ತ್ರಗಳನ್ನು ದುಃಖದಿಂದ ತುಂಬಿದ ನಿಮ್ಮ ಎದೆಗಳ ಮೇಲೆ ಹಾಕಿಕೊಳ್ಳಿ. ನಿಮ್ಮ ಹೊಲಗಳು ನಿಷ್ಪ್ರಯೋಜಕವಾಗಿರುವದಕ್ಕಾಗಿ ಅಳಿರಿ. ನಿಮ್ಮ ದ್ರಾಕ್ಷಿತೋಟವು ಒಳ್ಳೆಯ ಫಲ ಕೊಡುತ್ತಿತ್ತು. ಆದರೆ ಈಗ ತೋಟವು ಬರಿದಾಗಿದೆ. 13 ನನ್ನ ಜನರ ದೇಶಕ್ಕಾಗಿ ಕೂಗಿರಿ. ಯಾಕೆಂದರೆ ಅದರಲ್ಲಿ ಕೇವಲ ಹಣಜಿಯೂ ಮುಳ್ಳುಗಿಡಗಳೂ ಬೆಳೆಯುತ್ತವೆ. ಒಂದು ಕಾಲದಲ್ಲಿ ಸಂತೋಷಭರಿತವಾಗಿದ್ದ ಪಟ್ಟಣಕ್ಕಾಗಿಯೂ ಎಲ್ಲಾ ಮನೆಗಳಿಗಾಗಿಯೂ ಅಳಿರಿ.

14 ಜನರು ರಾಜಧಾನಿಯನ್ನು ತೊರೆದುಬಿಡುವರು. ಅರಮನೆ, ಬುರುಜುಗಳೆಲ್ಲವೂ ನಿರ್ಜನವಾಗಿವೆ. ಜನರು ಮನೆಗಳಲ್ಲಿ ವಾಸಿಸದೆ ಗುಹೆಗಳಲ್ಲಿ ವಾಸಮಾಡುವರು. ಕಾಡುಕತ್ತೆಗಳೂ ಕುರಿಗಳೂ ನಗರದಲ್ಲಿ ವಾಸಿಸುವವು. ಪಶುಗಳು ಅಲ್ಲಿ ಹುಲ್ಲು ಮೇಯುವವು.

15-16 ದೇವರು ನಮಗೆ ತನ್ನ ಆತ್ಮವನ್ನು ಸುರಿಸುವತನಕ ಇದು ಮುಂದುವರಿಯುವದು. ಈಗ ಯಾವ ಒಳ್ಳೆಯ ಸಂಗತಿಗಳು ನಡಿಯದೆ ಇರುವದರಿಂದ ದೇಶವು ಮರುಭೂಮಿಯಂತಿದೆ. ಆದರೆ ಮುಂದಿನ ದಿವಸಗಳಲ್ಲಿ ಮರುಭೂಮಿಯು ಕರ್ಮೆಲ್ ಪ್ರಾಂತ್ಯದಂತೆ ಆಗಿ ನ್ಯಾಯಧರ್ಮಗಳು ಅಲ್ಲಿ ನೆಲೆಸುವವು. ಕರ್ಮೆಲ್ ಹಸಿರು ಕಾಡಾಗಿದ್ದು ಶುಭವು ನೆಲೆಸಿರುವುದು. 17 ಆದ್ದರಿಂದ ಅಲ್ಲಿ ಆ ಸಮಾಧಾನ ಮತ್ತು ಭದ್ರತೆ ನಿತ್ಯವೂ ಶಾಶ್ವತವಾಗಿರುವವು. 18 ನನ್ನ ಜನರು ಮನೋಹರವಾಗಿರುವ ಶಾಂತಿಮಯವಾದ ಭೂಮಿಯಲ್ಲಿಯೂ ಸುರಕ್ಷಿತವಾದ ಗುಡಾರಗಳಲ್ಲಿಯೂ ಪ್ರಶಾಂತವಾದ ಮತ್ತು ನಿಶಬ್ದವಾದ ಸ್ಥಳಗಳಲ್ಲಿಯೂ ವಾಸಿಸುವರು.

19 ಇವು ಸಂಭವಿಸುವ ಮೊದಲು ಅರಣ್ಯವು ಆಲಿಕಲ್ಲುಗಳಿಂದ ನಾಶವಾಗಬೇಕು. ಪಟ್ಟಣವು ನೆಲಸಮವಾಗಬೇಕು. 20 ನಿಮ್ಮಲ್ಲಿ ಕೆಲವರು ಪ್ರತಿಯೊಂದು ನೀರಿನ ತೊರೆಗಳ ಬಳಿಯಲ್ಲಿ ಬೀಜ ಬಿತ್ತುವರು. ಅದರ ಸುತ್ತಲೂ ಹೋಗಿ ಯಾವ ಆತಂಕವಿಲ್ಲದೆ ತಿನ್ನಲು ನೀವು ನಿಮ್ಮ ಪಶುಗಳನ್ನು ಬಿಡುವಿರಿ; ಸಂತಸದಿಂದ ಇರುವಿರಿ.

ದುಷ್ಟತನವು ಹೆಚ್ಚಿನ ದುಷ್ಟತನಕ್ಕೆ ಕಾರಣ

33 ನೀವು ಯುದ್ಧಮಾಡಿ ಇತರರಿಂದ ಸುಲಿದುಕೊಳ್ಳುತ್ತೀರಿ. ಆದರೆ ಅವರು ನಿಮ್ಮಿಂದ ಏನೂ ಕದ್ದುಕೊಳ್ಳಲಿಲ್ಲ. ನೀವು ಜನರಿಗೆ ವಿರುದ್ಧವಾಗಿ ತಿರುಗುತ್ತೀರಿ. ಆದರೆ ಅವರು ನಿಮಗೆ ವಿರುದ್ಧವಾಗಲಿಲ್ಲ. ಆದ್ದರಿಂದ ನೀವು ಕದ್ದುಕೊಳ್ಳುವದನ್ನು ಬಿಟ್ಟಾಗ ಇತರರು ನಿಮ್ಮದನ್ನು ಕದ್ದುಕೊಳ್ಳುತ್ತಾರೆ. ನೀವು ಇತರರಿಗೆ ಹಾನಿ ಮಾಡುವದನ್ನು ನಿಲ್ಲಿಸಿದಾಗ ಇತರರು ನಿಮಗೆ ಹಾನಿ ಮಾಡುವರು. ಆಗ ನೀವು ಹೀಗೆ ಹೇಳುವಿರಿ:

“ಯೆಹೋವನೇ, ನಮಗೆ ದಯೆತೋರು.
    ನಾವು ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಿದ್ದೇವೆ.
ಯೆಹೋವನೇ, ಪ್ರತಿಮುಂಜಾನೆ ನಮಗೆ ಶಕ್ತಿ ದಯಪಾಲಿಸು,
    ಕಷ್ಟದಲ್ಲಿರುವಾಗ ನಮ್ಮನ್ನು ರಕ್ಷಿಸು.
ನಿನ್ನ ಬಲಯುತವಾದ ಸ್ವರವು ಜನರಿಗೆ ಹೆದರಿಕೆಯನ್ನು ಉಂಟುಮಾಡುತ್ತದೆ, ಅವರು ನಿನ್ನಿಂದ ಓಡಿಹೋಗುವರು.
ನಿನ್ನ ಮಹೋನ್ನತೆಯು ಜನಾಂಗಗಳನ್ನು ದಿಕ್ಕಾಪಾಲಾಗಿ ಮಾಡುತ್ತದೆ.”

ನೀವು ಯುದ್ಧದಲ್ಲಿ ದೋಚಿಕೊಂಡಿದ್ದೀರಿ. ಅವುಗಳು ನಿಮ್ಮಿಂದ ತೆಗೆಯಲ್ಪಡುವವು. ಅನೇಕಾನೇಕ ಜನರು ಬಂದು ನಿಮ್ಮ ಸಂಪತ್ತನ್ನು ದೋಚಿಕೊಳ್ಳುವರು. ಮಿಡತೆಗಳು ನಿಮ್ಮ ಬೆಳೆಯನ್ನು ತಿಂದು ನಾಶಮಾಡಿದಂತೆ ಅದಿರುವದು.

ಯೆಹೋವನೇ ಉನ್ನತೋನ್ನತನು. ಆತನು ಬಹು ಉನ್ನತವಾದ ಸ್ಥಳದಲ್ಲಿ ವಾಸಿಸುತ್ತಾನೆ. ಆತನು ಚೀಯೋನನ್ನು ನ್ಯಾಯನೀತಿಗಳಿಂದ ತುಂಬಿಸುವನು.

ಜೆರುಸಲೇಮೇ, ನೀನು ಐಶ್ವರ್ಯವಂತಳಾಗಿರುವೆ. ನೀನು ದೇವರ ವಿಷಯವಾದ ಜ್ಞಾನ, ತಿಳುವಳಿಕೆ ಮತ್ತು ರಕ್ಷಣೆಗಳಿಂದ ಐಶ್ವರ್ಯವಂತಳಾಗಿರುವೆ. ಯೆಹೋವನ ಮೇಲೆ ನಿನಗಿರುವ ಗೌರವವೇ ನಿನ್ನ ಭಂಡಾರವಾಗಿದೆ. ನೀನು ಹೀಗೆಯೇ ಮುಂದುವರಿಯುವೆ.

ಆದರೆ ಕಿವಿಗೊಟ್ಟು ಕೇಳಿಸಿಕೊ, ದೂತರು ಹೊರಗೆ ಅಳುತ್ತಿದ್ದಾರೆ. ಸಮಾಧಾನದ ಸಮಾಚಾರವನ್ನು ತರುವವರು ಗಟ್ಟಿಯಾಗಿ ರೋಧಿಸುತ್ತಿದ್ದಾರೆ. ರಸ್ತೆಗಳು ಹಾಳಾಗಿ ಯಾರೂ ಅದರಲ್ಲಿ ನಡಿಯುವದಿಲ್ಲ. ಜನರು ತಾವು ಮಾಡಿದ ಒಪ್ಪಂದವನ್ನು ನಡಿಸುತ್ತಿಲ್ಲ. ಸಾಕ್ಷಿಗಳ ಮಾತುಗಳನ್ನು ಜನರು ಗೌರವಿಸಲು ನಿರಾಕರಿಸುತ್ತಾರೆ. ಜನರು ಒಬ್ಬರನ್ನೊಬ್ಬರು ನಂಬುವದಿಲ್ಲ. ದೇಶವು ಅಸ್ವಸ್ಥತೆಯಿಂದ ಸಾಯುತ್ತಿದೆ. ಲೆಬನೋನ್ ನಾಚಿಗೊಂಡು ಒಣಗುತ್ತಿದೆ. ಶಾರೋನ್ ತಗ್ಗು ಒಣಗಿ ನಿರ್ಜನವಾಗಿದೆ. ಬಾಷಾನ್ ಮತ್ತು ಕರ್ಮೆಲ್ ಹಿಂದೆ ಬಹು ಅಂದವಾದ ಸಸಿಗಳನ್ನು ಬೆಳೆಯಿಸುತ್ತಿದ್ದವು. ಈಗ ಅವುಗಳು ಅಲ್ಲಿ ಬೆಳೆಯುವದಿಲ್ಲ.

10 ಯೆಹೋವನು ಹೀಗೆನ್ನುತ್ತಾನೆ, “ಈಗ ನಾನು ಎದ್ದುನಿಂತು ನನ್ನ ಮಹತ್ವವನ್ನು ತೋರಿಸುವೆನು. ಈಗ ನಾನು ಜನರಿಗೆ ಉನ್ನತೋನ್ನತನಾಗುವೆನು. 11 ಜನರೇ, ನೀವು ಪ್ರಯೋಜನವಿಲ್ಲದ ಕಾರ್ಯಗಳನ್ನು ಮಾಡಿದಿರಿ. ಆ ಕೆಲಸಗಳು ಒಣಹುಲ್ಲಿನಂತೆಯೂ ದಂಟಿನಂತೆಯೂ ಇವೆ. ನಿಮ್ಮ ಆತ್ಮವು ನಿಮ್ಮಲ್ಲಿ ಬೆಂಕಿಯಂತಿದ್ದು ನಿಮ್ಮನ್ನು ಸುಡುವದು. 12 ಎಲುಬುಗಳು ಬೂದಿಯಾಗುವ ತನಕ ಜನರು ಸುಡಲ್ಪಡುವರು. ಅವರು ಮುಳ್ಳುಗಳಂತೆಯೂ ಒಣಪೊದೆಗಳಂತೆಯೂ ಬೇಗನೆ ಸುಟ್ಟುಹೋಗುವರು.

13 “ದೂರದೇಶದಲ್ಲಿರುವವರೇ, ನಾನು ಮಾಡಿದ ಕಾರ್ಯಗಳ ವಿಷಯವಾಗಿ ಕೇಳಿರಿ. ನನ್ನ ಹತ್ತಿರವಿರುವವರೇ, ನನ್ನ ಸಾಮರ್ಥ್ಯದ ವಿಷಯವಾಗಿ ಕಲಿತುಕೊಳ್ಳಿರಿ.”

14 ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಕೆಟ್ಟಕಾರ್ಯಗಳನ್ನು ಮಾಡುವವರು ಹೆದರಿಕೆಯಿಂದ ನಡುಗುವರು. ಜನರು, “ನಮ್ಮಲ್ಲಿ ಯಾರು ನಾಶಮಾಡುವ ಈ ಬೆಂಕಿಯ ಜೊತೆ ಜೀವಿಸಬಲ್ಲರು? ನಿತ್ಯಕಾಲಕ್ಕೂ ಸುಡುವ ಈ ಬೆಂಕಿಯ ಬಳಿಯಲ್ಲಿ ಯಾರು ವಾಸಮಾಡಬಲ್ಲರು?” ಎಂದು ಹೇಳುವರು.

15 ಪ್ರಾಮಾಣಿಕರಾಗಿರುವ ನೀತಿವಂತರು ಹಣಕ್ಕಾಗಿ ಇತರರಿಗೆ ಹಾನಿಮಾಡದವರಾಗಿದ್ದಾರೆ. ಅವರು ಆ ಬೆಂಕಿಯಲ್ಲಿ ವಾಸಿಸುವರು. ಅವರು ಲಂಚ ತೆಗೆದುಕೊಳ್ಳಲು ನಿರಾಕರಿಸುವರು. ಇತರರನ್ನು ಕೊಲೆಮಾಡುವ ಯೋಜನೆಯನ್ನು ಕೇಳಲು ಅವರು ಇಷ್ಟಪಡುವುದಿಲ್ಲ. ಅವರು ಕೆಟ್ಟಕಾರ್ಯಗಳ ಯೋಜನೆಗಳನ್ನು ನೋಡುವುದಿಲ್ಲ. 16 ಅಂಥವರು ಉನ್ನತವಾದ ಸ್ಥಳದಲ್ಲಿ ಸುರಕ್ಷಿತವಾಗಿ ವಾಸಿಸುವರು. ಎತ್ತರವಾದ ಬಂಡೆಕಲ್ಲಿನ ಕೋಟೆಯೊಳಗೆ ಅವರು ಕಾಪಾಡಲ್ಪಡುವರು. ಅವರ ಬಳಿ ಆಹಾರ ಮತ್ತು ನೀರು ಯಾವಾಗಲೂ ಇರುವದು.

17 ನಿಮ್ಮ ಕಣ್ಣುಗಳು ಸೌಂದರ್ಯ ಪ್ರಭಾವಗಳಿಂದ ತುಂಬಿದ ರಾಜನನ್ನು (ದೇವರನ್ನು) ನೋಡುವವು. ನೀವು ಮಹಾ ದೊಡ್ಡ ದೇಶವನ್ನು ನೋಡುವಿರಿ. 18-19 ಹಿಂದಿನ ಕಾಲದಲ್ಲಿ ನೀವು ಅನುಭವಿಸಿದ ಸಂಕಟಗಳನ್ನು ನೆನಪುಮಾಡಿಕೊಳ್ಳುವಿರಿ. ನೀವು ಹೀಗೆ ಭಾವಿಸಿಕೊಳ್ಳುವಿರಿ: “ಬೇರೆ ದೇಶಗಳಿಂದ ಬಂದ ಜನರೆಲ್ಲಿದ್ದಾರೆ? ನಮಗೆ ಅರ್ಥವಾಗದಂಥ ಭಾಷೆಯಲ್ಲಿ ಅವರು ಮಾತಾಡುತ್ತಿದ್ದರು. ಪರದೇಶದ ಅಧಿಕಾರಿಗಳು, ತೆರಿಗೆ ಎತ್ತುವವರು ಎಲ್ಲಿ? ನಮ್ಮ ಕೋಟೆಗಳನ್ನು, ಬುರುಜುಗಳನ್ನು ಲೆಕ್ಕಿಸಲು ಬಂದ ಗೂಢಚಾರರೆಲ್ಲಿ? ಅವರೆಲ್ಲಾ ಹೋಗಿಬಿಟ್ಟರು. ನೀವೆಂದೂ ಆ ಜನರನ್ನು ಕಾಣದೆ ಇರುವಿರಿ.”

ದೇವರು ಜೆರುಸಲೇಮನ್ನು ರಕ್ಷಿಸುತ್ತಾನೆ

20 ನಮ್ಮ ಹಬ್ಬಗಳನ್ನು ಆಚರಿಸುವ ನಗರವಾದ ಚೀಯೋನನ್ನು ನೋಡಿರಿ. ಮನೋಹರವಾದ ವಿಶ್ರಾಂತಿ ಸ್ಥಳವಾದ ಜೆರುಸಲೇಮನ್ನು ನೋಡಿರಿ. ಜೆರುಸಲೇಮು ಎಂದಿಗೂ ಕದಲದ ಗುಡಾರವಾಗಿದೆ. ಆಕೆಯನ್ನು ಭದ್ರವಾಗಿ ಹಿಡಿದುಕೊಂಡಿರುವ ಗೂಟಗಳು ಎಂದಿಗೂ ಕೀಳಲ್ಪಡುವದಿಲ್ಲ. ಆಕೆಯ ಹಗ್ಗಗಳು ಎಂದಿಗೂ ತುಂಡಾಗುವದಿಲ್ಲ. 21-23 ಕೆಂದರೆ ಬಲಿಷ್ಠನಾದ ಯೆಹೋವನು ಅಲ್ಲಿದ್ದಾನೆ. ಆ ದೇಶವು ತೊರೆಗಳೂ ಅಗಲವಾಗಿ ಹರಿಯುವ ನದಿಗಳೂ ಇರುವ ದೇಶವಾಗಿದೆ. ಆದರೆ ಆ ನದಿಯಲ್ಲಿ ವೈರಿಯ ದೋಣಿಯಾಗಲಿ, ಹಡಗುಗಳಾಗಲಿ ಇರುವದಿಲ್ಲ. ಆ ಹಡುಗುಗಳಲ್ಲಿ ಕೆಲಸಮಾಡುವವರೇ, ನೀವು ಅದರ ಹಗ್ಗಗಳಲ್ಲಿ ಕೆಲಸಮಾಡುವದನ್ನು ಬಿಟ್ಟುಬಿಡಿರಿ. ಹಡಗಿನ ಸ್ತಂಭವನ್ನು ನೀವು ಬಲಪಡಿಸಲಾರಿರಿ. ಹಡಗಿನ ಹಾಯಿಗಳನ್ನು ನಿಮ್ಮಿಂದ ತೆರೆಯಲು ಆಗುವದಿಲ್ಲ. ಯಾಕೆಂದರೆ ದೇವರೇ ನಮ್ಮ ನ್ಯಾಯಾಧೀಶನು. ಆತನು ಧರ್ಮಶಾಸ್ತ್ರವನ್ನು ಸಿದ್ಧಪಡಿಸಿದಾತನು. ಯೆಹೋವನೇ ನಮ್ಮ ಅರಸನು. ಆತನೇ ನಮ್ಮನ್ನು ರಕ್ಷಿಸುವನು, ನಮಗೆ ಸಂಪತ್ತನ್ನು ದಯಪಾಲಿಸುವನು. ಕೈಕಾಲು ಊನವಾದವರೂ ಸಹ ಯುದ್ಧದಲ್ಲಿ ಸಂಪತ್ತನ್ನು ಗಳಿಸುವರು. 24 ಅಲ್ಲಿ ವಾಸಿಸುವವರಲ್ಲಿ ಯಾರೂ “ನನಗೆ ಸೌಖ್ಯವಿಲ್ಲ” ಎಂದು ಹೇಳುವುದಿಲ್ಲ. ಅಲ್ಲಿ ವಾಸಿಸುವವರೆಲ್ಲಾ ತಮ್ಮ ಪಾಪಗಳಿಗೆ ಕ್ಷಮೆಹೊಂದಿದವರಾಗಿದ್ದಾರೆ.

ಕೊಲೊಸ್ಸೆಯವರಿಗೆ 1

ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಅಪೊಸ್ತಲನಾದ ಪೌಲನು ಬರೆಯುವ ಪತ್ರ.

ಕೊಲೊಸ್ಸೆಯಲ್ಲಿರುವ ದೇವಜನರಿಗೆ ಅಂದರೆ ಕ್ರಿಸ್ತನಲ್ಲಿ ನಂಬಿಗಸ್ತರಾದ ಮತ್ತು ಪವಿತ್ರರಾದ ಸಹೋದರ, ಸಹೋದರಿಯರಿಗೆ ನಾನು ಈ ಪತ್ರವನ್ನು ನಮ್ಮ ಸಹೋದರನಾದ ತಿಮೊಥೆಯನ ಜೊತೆಗೂಡಿ ಬರೆಯುತ್ತಿದ್ದೇನೆ. ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಶಾಂತಿಯೂ ದೊರಕಲಿ.

ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ವಿಷಯದಲ್ಲಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯೇ ದೇವರು. ನಾವು ದೇವರಿಗೆ ಸ್ತೋತ್ರ ಮಾಡಲು ಕಾರಣವೇನೆಂದರೆ ಕ್ರಿಸ್ತ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಬಗ್ಗೆ, ದೇವಜನರೆಲ್ಲರ ಮೇಲೆ ನಿಮಗಿರುವ ಪ್ರೀತಿಯ ಬಗ್ಗೆ ಕೇಳಿದ್ದೇವೆ. 5-6 ನಿಮಗೆ ನಿರೀಕ್ಷೆ ಇರುವುದರಿಂದಲೇ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದೀರಿ ಮತ್ತು ದೇವಜನರನ್ನು ಪ್ರೀತಿಸುತ್ತೀರಿ. ನೀವು ನಿರೀಕ್ಷಿಸುವಂಥವುಗಳು ನಿಮಗೋಸ್ಕರ ಪರಲೋಕದಲ್ಲಿ ಸಿದ್ಧ ಮಾಡಲ್ಪಟ್ಟಿವೆ ಎಂಬುದು ನಿಮಗೆ ತಿಳಿದಿದೆ. ನಿಮಗೆ ತಿಳಿಸಲಾದ ಸತ್ಯವಾಕ್ಯವನ್ನು ಅಂದರೆ ಸುವಾರ್ತೆಯನ್ನು ನೀವು ಕೇಳಿದಾಗ ಈ ನಿರೀಕ್ಷೆಯ ಬಗ್ಗೆ ತಿಳಿದುಕೊಂಡಿರಿ. ನೀವು ಸುವಾರ್ತೆಯನ್ನು ಕೇಳಿ ದೇವರ ಕೃಪೆಯ ಸತ್ಯಾರ್ಥವನ್ನು ತಿಳಿದುಕೊಂಡಂದಿನಿಂದ ಸುವಾರ್ತೆಯು ನಿಮ್ಮಲ್ಲಿ ವೃದ್ಧಿಯಾಗುತ್ತಿದೆ ಮತ್ತು ಜನರಿಗೆ ಆಶೀರ್ವಾದಕರವಾಗಿದೆ. ಅದೇ ರೀತಿ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಸುವಾರ್ತೆಯು ವೃದ್ಧಿಯಾಗುತ್ತಿದೆ ಮತ್ತು ಆಶೀರ್ವಾದಕರವಾಗಿದೆ. ನೀವು ಎಪಫ್ರನಿಂದ ದೇವರ ಕೃಪೆಯ ಬಗ್ಗೆ ತಿಳಿದುಕೊಂಡಿರಿ. ಅವನು ನಮ್ಮ ಜೊತೆಯಲ್ಲಿಯೇ ಸೇವೆ ಮಾಡುತ್ತಿದ್ದಾನೆ. ನಾವು ಅವನನ್ನು ಪ್ರೀತಿಸುತ್ತೇವೆ. ಅವನು ನಮಗೋಸ್ಕರ ಕ್ರಿಸ್ತನ ನಂಬಿಗಸ್ತ ಸೇವಕನಾಗಿದ್ದಾನೆ. ಪವಿತ್ರಾತ್ಮ ಪ್ರೇರಿತವಾದ ನಿಮ್ಮ ಪ್ರೀತಿಯ ಬಗ್ಗೆ ಎಪಫ್ರನು ಸಹ ನಮಗೆ ತಿಳಿಸಿದನು.

ನಿಮ್ಮ ಬಗ್ಗೆ ಈ ಸಂಗತಿಗಳನ್ನು ಕೇಳಿದ ದಿನದಿಂದ, ನಿಮಗೋಸ್ಕರ ಎಡಬಿಡದೆ ಪ್ರಾರ್ಥಿಸುತ್ತಿದ್ದೇವೆ.

ದೇವರು ಅಪೇಕ್ಷಿಸುವ ಸಂಗತಿಗಳೆಲ್ಲವನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳಬೇಕೆಂತಲೂ ಆತ್ಮಿಕ ಸಂಗತಿಗಳಲ್ಲಿ ಮಹಾಜ್ಞಾನವನ್ನು ಮತ್ತು ತಿಳುವಳಿಕೆಯನ್ನು ಹೊಂದಿಕೊಳ್ಳಬೇಕೆಂತಲೂ 10 ಪ್ರಭುವಿಗೆ ಯೋಗ್ಯರಾಗಿ ನಡೆದು ಪ್ರತಿಯೊಂದು ವಿಷಯದಲ್ಲಿ ಆತನನ್ನು ಸಂತೋಷಪಡಿಸಬೇಕೆಂತಲೂ ನೀವು ಎಲ್ಲಾ ವಿಧವಾದ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ದೇವಜ್ಞಾನದಲ್ಲಿ ಬೆಳಯಬೇಕೆಂತಲೂ 11 ಆತನ ಮಹಿಮಾಶಕ್ತಿಯಿಂದ ಪರಿಪೂರ್ಣ ಬಲ ಹೊಂದಿ ಆನಂದಪೂರ್ವಕವಾದ ತಾಳ್ಮೆಯನ್ನು, ದೀರ್ಘಶಾಂತಿಯನ್ನು ಯಾವಾಗಲೂ ತೋರಿಸುವವರಾಗಿರಬೇಕೆಂತಲೂ ನಾವು ಪ್ರಾರ್ಥಿಸುತ್ತಿದ್ದೇವೆ.

12 ಆಗ ನೀವು ಆನಂದದಿಂದ ತಂದೆಗೆ ಕೃತಜ್ಞತಾಸ್ತುತಿ ಮಾಡಬಲ್ಲಿರಿ. ಬೆಳಕಿನಲ್ಲಿ ವಾಸಿಸುವ ತನ್ನ ಜನರೆಲ್ಲರಿಗೂ ಆತನು ಸಿದ್ಧಪಡಿಸಿರುವಂಥವುಗಳನ್ನು ಹೊಂದಿಕೊಳ್ಳಲು ಆತನೇ ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದನು. 13 ದೇವರು ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡುಗಡೆ ಮಾಡಿದ್ದಾನೆ. ಆತನು ನಮ್ಮನ್ನು ತನ್ನ ಪ್ರಿಯ ಮಗನ (ಯೇಸುವಿನ) ರಾಜ್ಯದೊಳಗೆ ಸೇರಿಸಿದ್ದಾನೆ. 14 ಮಗನು ನಮ್ಮ ಪಾಪಗಳಿಗೆ ಪರಿಹಾರ ನೀಡಿದನು. ಆತನಲ್ಲಿಯೇ ನಮ್ಮ ಪಾಪಗಳಿಗೆ ಕ್ಷಮೆ ದೊರೆಯಿತು.

ನಾವು ಕ್ರಿಸ್ತನ ಕಡೆಗೆ ನೋಡುವಾಗ ದೇವರನ್ನೇ ಕಾಣುತ್ತೇವೆ

15 ದೇವರನ್ನು ನೋಡಲು ಯಾವ ವ್ಯಕ್ತಿಗೂ ಸಾಧ್ಯವಿಲ್ಲ.
    ಆದರೆ ಯೇಸುವು ದೇವರ ಪ್ರತಿರೂಪಿಯಾಗಿದ್ದಾನೆ.
    ಸೃಷ್ಟಿಸಲ್ಪಟ್ಟವುಗಳಿಗೆಲ್ಲಾ ಯೇಸು ಅಧಿಪತಿಯಾಗಿದ್ದಾನೆ.
16 ಭೂಲೋಕ ಮತ್ತು ಪರಲೋಕಗಳಲ್ಲಿರುವ ಎಲ್ಲವುಗಳು,
    ದೃಶ್ಯ ಮತ್ತು ಅದೃಶ್ಯವಾದವುಗಳು, ಆತ್ಮಿಕ ಶಕ್ತಿಗಳು,
    ಪ್ರಭುತ್ವಗಳು ಆತನ ಶಕ್ತಿಯಿಂದ ನಿರ್ಮಿತವಾಗಿವೆ. ಅಧಿಪತಿಗಳು ಮತ್ತು ಅಧಿಕಾರಿಗಳು ಆತನ ಶಕ್ತಿಯಿಂದ ನಿರ್ಮಿತರಾದರು.
ಸಮಸ್ತವೂ ಕ್ರಿಸ್ತನ ಮೂಲಕವಾಗಿ ಆತನಿಗೋಸ್ಕರ ಸೃಷ್ಟಿಸಲ್ಪಟ್ಟವು.

17 ಅವುಗಳಿಗಿಂತ ಮೊದಲೇ ಕ್ರಿಸ್ತನಿದ್ದನು.
    ಸಮಸ್ತಕ್ಕೂ ಆತನೇ ಆಧಾರಭೂತನಾಗಿದ್ದಾನೆ.
18 ಕ್ರಿಸ್ತನು ದೇಹಕ್ಕೆ (ಸಭೆಯ) ಶಿರಸ್ಸಾಗಿದ್ದಾನೆ.
    ಪ್ರತಿಯೊಂದೂ ಆತನಿಂದಲೇ ಬರುತ್ತದೆ.
    ಮರಣದಿಂದ ಪ್ರಥಮವಾಗಿ ಎದ್ದುಬಂದವನು ಆತನೇ.
ಆದ್ದರಿಂದ ಎಲ್ಲಾದರಲ್ಲಿಯೂ ಯೇಸುವೇ ಅತ್ಯಂತ ಪ್ರಾಮುಖ್ಯನಾಗಿದ್ದಾನೆ.

19 ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ನೆಲಸಿರಬೇಕೆಂಬುದೂ,
20     ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ಸಮಾಧಾನವನ್ನು ಉಂಟುಮಾಡಿ
    ಭೂಪರಲೋಕಗಳಲ್ಲಿರುವ ಸಮಸ್ತವನ್ನು
ತನಗೆ ಸಂಧಾನಪಡಿಸಿಕೊಳ್ಳಬೇಕೆಂಬುದೂ ದೇವರ ಚಿತ್ತವಾಗಿತ್ತು.

21 ಒಂದು ಕಾಲದಲ್ಲಿ ನೀವು ದೇವರಿಂದ ಬೇರ್ಪಟ್ಟಿದ್ದಿರಿ, ದುಷ್ಕೃತ್ಯಗಳನ್ನು ಮಾಡುತ್ತಾ ನಿಮ್ಮ ಮನಸ್ಸುಗಳಲ್ಲಿ ದೇವರಿಗೆ ಶತ್ರುಗಳಾಗಿದ್ದಿರಿ. 22 ಈಗಲಾದರೋ ಕ್ರಿಸ್ತನು ಶರೀರಧಾರಿಯಾಗಿ ಈ ಲೋಕದಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವುದರ ಮೂಲಕ ನಿಮಗೂ ದೇವರಿಗೂ ಸಂಧಾನ ಮಾಡಿದ್ದಾನೆ. ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿಷ್ಕಳಂಕರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ದೇವರ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 23 ನೀವು ಕೇಳಿದ ಸುವಾರ್ತೆಯ ಮೇಲೆ ನಿಮಗಿರುವ ನಂಬಿಕೆಯಲ್ಲಿ ದೃಢವಾಗಿ ನೆಲೆಗೊಂಡಿದ್ದು ಅದರಿಂದುಂಟಾಗುವ ನಿರೀಕ್ಷೆಯನ್ನು ಬಿಟ್ಟು ಹೋಗದಿದ್ದರೆ ಇದು ಸಾಧ್ಯ. ಈ ಸುವಾರ್ತೆಯನ್ನು ಪ್ರಪಂಚದ ಜನರಿಗೆಲ್ಲ ಸಾರಲಾಗಿದೆ. ಪೌಲನಾದ ನಾನು ಈ ಸುವಾರ್ತೆಯನ್ನು ಸಾರುವ ಸೇವಕನಾದೆನು.

ಸಭೆಗಾಗಿ ಪೌಲನ ಕಾರ್ಯ

24 ನಾನು ನಿಮಗಾಗಿ ಅನುಭವಿಸಿದ ಬಾಧೆಗಳಿಂದ ನನಗೆ ಸಂತೋಷವಾಗಿದೆ. ಕ್ರಿಸ್ತನು ಸಭೆಯೆಂಬ ತನ್ನ ದೇಹದ ಮೂಲಕ ಇನ್ನೂ ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಈ ಸಂಕಟಗಳಲ್ಲಿ ನಾನು ಅನುಭವಿಸಬೇಕಾದವುಗಳನ್ನು ಆತನ ದೇಹಕ್ಕೋಸ್ಕರ ನನ್ನ ದೇಹದಲ್ಲಿ ಅನುಭವಿಸುತ್ತೇನೆ. 25 ನಾನು ಸಭೆಗೆ ಸೇವಕನಾದೆನು. ಏಕೆಂದರೆ ದೇವರು ನನಗೆ ವಿಶೇಷವಾದ ಕಾರ್ಯವನ್ನು ಮಾಡುವಂತೆ ಆಜ್ಞಾಪಿಸಿದನು. ಈ ಕಾರ್ಯವು ನಿಮಗೆ ಸಹಾಯ ಮಾಡುವುದು. ದೇವರ ಉಪದೇಶವನ್ನು ಸಂಪೂರ್ಣವಾಗಿ ತಿಳಿಸುವುದೇ ಆ ಕಾರ್ಯ. 26 ಆದಿಕಾಲದಿಂದಲೂ ಅಡಗಿಸಿಟ್ಟಿದ್ದ ರಹಸ್ಯಸತ್ಯವೇ ಈ ಉಪದೇಶ. ಈ ಸತ್ಯವನ್ನು ಎಲ್ಲಾ ಜನರಿಗೆ ಮರೆಮಾಡಲಾಗಿತ್ತು. ಈಗಲಾದರೋ ಈ ರಹಸ್ಯಸತ್ಯವನ್ನು ದೇವರ ಪವಿತ್ರ ಜನರಿಗೆ ತಿಳಿಸಲಾಗಿದೆ. 27 ಮಹಿಮಾತಿಶಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲು ದೇವರು ತೀರ್ಮಾನಿಸಿದನು. ಈ ಮಹಾಸತ್ಯವು ಎಲ್ಲಾ ಜನರಿಗಾಗಿ ಪ್ರಕಟವಾಯಿತು. ನಿಮ್ಮಲ್ಲಿರುವ ಕ್ರಿಸ್ತನೇ ಆ ಸತ್ಯವಾಗಿದ್ದಾನೆ. ದೇವರ ಮಹಿಮೆಯಲ್ಲಿ ಪಾಲುಹೊಂದಲು ಆತನೇ ನಮಗಿರುವ ಏಕೈಕ ನಿರೀಕ್ಷೆ. 28 ಆದ್ದರಿಂದಲೇ ನಾವು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುವವರಾಗಿದ್ದೇವೆ. ಪ್ರತಿಯೊಬ್ಬರನ್ನೂ ಬಲಪಡಿಸುವುದಕ್ಕಾಗಿ ಪ್ರತಿಯೊಬ್ಬರಿಗೂ ಉಪದೇಶಿಸುವುದಕ್ಕಾಗಿ ನಮ್ಮ ಜ್ಞಾನವನ್ನೆಲ್ಲಾ ಉಪಯೋಗಿಸುತ್ತೇವೆ. ಪ್ರತಿಯೊಬ್ಬರನ್ನು ಕ್ರಿಸ್ತನಲ್ಲಿ ಸಂಪೂರ್ಣ ಆತ್ಮಿಕರನ್ನಾಗಿ ಮಾಡಿ ದೇವರ ಸನ್ನಿಧಿಗೆ ತರಲು ಪ್ರಯತ್ನಿಸುತ್ತೇವೆ. 29 ಕ್ರಿಸ್ತನು ನನಗೆ ನೀಡಿರುವ ಬಲದಿಂದ ಇದಕ್ಕೋಸ್ಕರವೇ ಕೆಲಸ ಮಾಡುತ್ತೇನೆ ಮತ್ತು ಹೋರಾಡುತ್ತೇನೆ. ಆ ಬಲವೇ ನನ್ನ ಜೀವನದಲ್ಲಿ ಕಾರ್ಯಮಾಡುತ್ತಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International