Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆರೆಮೀಯ 12-14

ದೇವರಲ್ಲಿ ಯೆರೆಮೀಯನ ದೂರು

12 ಯೆಹೋವನೇ, ನಾನು ನಿನ್ನ ಜೊತೆ ವಾದ ಮಾಡಿದರೆ,
    ನೀನು ಯಾವಾಗಲೂ ನ್ಯಾಯಪರನೆಂಬುದು ರುಜುವಾತಾಗುತ್ತದೆ.
ಆದರೂ ನ್ಯಾಯಪೂರ್ಣವಲ್ಲದ ಕೆಲವು ವಿಷಯಗಳ ಬಗ್ಗೆ ನಾನು ನಿನ್ನನ್ನು ಕೇಳಬಯಸುತ್ತೇನೆ.
    ದುಷ್ಟರು ಏಕೆ ಅಭಿವೃದ್ಧಿ ಹೊಂದುತ್ತಾರೆ?
    ನಿನ್ನ ವಿಶ್ವಾಸಕ್ಕೆ ಪಾತ್ರರಾಗದವರು ನೆಮ್ಮದಿಯ ಜೀವನ ನಡೆಸಲು ಹೇಗೆ ಸಾಧ್ಯ?
ನೀನು ಆ ದುಷ್ಟರನ್ನು ಇಲ್ಲಿ ಇಟ್ಟಿರುವೆ. ಅವರು ಆಳವಾಗಿ ಬೇರುಬಿಟ್ಟ ಸಸಿಗಳಂತಿದ್ದಾರೆ,
    ಅವು ಬೆಳೆಯುತ್ತವೆ, ಹಣ್ಣು ಬಿಡುತ್ತವೆ.
ನೀನು ಅವರಿಗೆ ತುಂಬ ಹತ್ತಿರದವನು ಮತ್ತು ಪ್ರೀತಿಪಾತ್ರನು ಎಂದು ಅವರು ಬಾಯಿಂದ ಹೇಳುತ್ತಾರೆ.
    ಆದರೆ ಹೃದಯದಲ್ಲಿ ಅವರು ನಿನ್ನಿದ ತುಂಬಾ ದೂರದಲ್ಲಿದ್ದಾರೆ.
ಆದರೆ ಯೆಹೋವನೇ, ನಿನಗೆ ನನ್ನ ಹೃದಯದ ಬಗ್ಗೆ ತಿಳಿದಿದೆ,
    ನೀನು ನನ್ನನ್ನು ನೋಡಿ ನನ್ನ ಮನಸ್ಸನ್ನು ಪರೀಕ್ಷಿಸುವೆ.
ವಧೆಗೆ ಎಳೆದುಕೊಂಡು ಹೋಗುವ ಕುರಿಗಳಂತೆ ಆ ಕೆಡುಕರನ್ನು ಎಳೆದುಹಾಕು.
    ಅವರನ್ನು ವಧೆಯ ದಿನಕ್ಕೆಂದು ಆರಿಸು.
ಎಷ್ಟು ಕಾಲದವರೆಗೆ ಭೂಮಿಯು ಒಣಗಿರಬೇಕು?
    ಎಷ್ಟು ಕಾಲದವರೆಗೆ ಹುಲ್ಲು ಒಣಗಿ ನಿರ್ಜೀವವಾಗಿರಬೇಕು?
ದೇಶದಲ್ಲಿ ಪಶುಪಕ್ಷಿಗಳು ಸತ್ತುಹೋಗಿವೆ.
    ಇದು ದುಷ್ಟರ ತಪ್ಪಾದರೂ
ಆ ದುಷ್ಟರು,
    “ನಮಗೆ ಏನಾಗುವದೆಂದು ನೋಡಲು
    ಯೆರೆಮೀಯನು ಬಹಳ ದಿವಸ ಬದುಕಿರಲಾರ” ಎಂದು ಹೇಳುತ್ತಿದ್ದಾರೆ.

ಯೆರೆಮೀಯನಿಗೆ ದೇವರ ಉತ್ತರ

“ಯೆರೆಮೀಯನೇ, ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿರುವುದಾದರೆ,
    ಕುದುರೆಗಳೊಂದಿಗೆ ಓಡಿ ಹೇಗೆ ಗೆಲ್ಲುವೆ?
ಸುರಕ್ಷಿತವಾದ ದೇಶದಲ್ಲಿ ನೀನು ದಣಿದುಕೊಂಡರೆ
    ಜೋರ್ಡನ್ ನದಿ ದಡದ ಭಯಾನಕ ಮುಳ್ಳುಕಂಟಿಯ ಪ್ರದೇಶಕ್ಕೆ ಬಂದಾಗ ಏನು ಮಾಡುವೆ?
ಈ ಜನರು ನಿನ್ನ ಸ್ವಂತ ಸಹೋದರರಾಗಿದ್ದಾರೆ.
    ನಿನ್ನ ಸ್ವಂತ ಕುಟುಂಬದ ಜನರೇ ನಿನ್ನ ವಿರುದ್ಧ ಕೂಗಾಡುತ್ತಾ ಸಂಚು ಮಾಡುತ್ತಿದ್ದಾರೆ.
ಅವರು ನಿನ್ನೊಡನೆ ಸ್ನೇಹಿತರಂತೆ
    ಮಾತನಾಡಿದರೂ ಅವರನ್ನು ನಂಬಬೇಡ.”

ಯೆಹೋವನು ತನ್ನ ಜನರನ್ನೂ ಯೆಹೂದವನ್ನೂ ನಿರಾಕರಿಸುವನು

“ನಾನು (ಯೆಹೋವನು) ನನ್ನ ಮನೆಯನ್ನು ತ್ಯಜಿಸಿದ್ದೇನೆ.
    ನಾನು ನನ್ನ ಆಸ್ತಿಯನ್ನು ಬಿಟ್ಟುಬಿಟ್ಟಿದ್ದೇನೆ.
ನಾನು ನನ್ನ ಪ್ರಿಯತಮೆಯನ್ನು (ಯೆಹೂದ) ಅವಳ ಶತ್ರುಗಳಿಗೆ ಕೊಟ್ಟಿದ್ದೇನೆ.
ನನ್ನ ‘ಸ್ವಾಸ್ತ್ಯವಾದ ಜನರು’ ನನಗೊಂದು ಅರಣ್ಯದ ಸಿಂಹದಂತಾಗಿದ್ದಾರೆ.
ಅವರು ನನ್ನನ್ನು ಕಂಡು ಗರ್ಜಿಸುತ್ತಾರೆ.
    ಆದ್ದರಿಂದಲೇ ನಾನು ಅವರಿಗೆ ವಿಮುಖನಾದೆನು.
ನನ್ನ ‘ಸ್ವಾಸ್ತ್ಯವಾದ ಜನರು’ ಹದ್ದುಗಳಿಂದ
    ಸುತ್ತುವರಿಯಲ್ಪಟ್ಟು ಸಾಯುತ್ತಿರುವ ಪ್ರಾಣಿಯಂತಾಗಿದ್ದಾರೆ.
ಆ ಪಕ್ಷಿಗಳು ಅವರ ಸುತ್ತಲೂ ಹಾರಾಡುತ್ತವೆ.
    ಕಾಡುಪ್ರಾಣಿಗಳೇ, ಬನ್ನಿ, ಬನ್ನಿ,
    ಬಂದು ನಿಮ್ಮ ಆಹಾರವನ್ನು ತೆಗೆದುಕೊಳ್ಳಿ.
10 ಅನೇಕ ಕುರುಬರು ದ್ರಾಕ್ಷಿತೋಟವನ್ನು ಹಾಳುಮಾಡಿದ್ದಾರೆ.
    ಆ ಕುರುಬರು ನನ್ನ ತೋಟದ ಸಸಿಗಳನ್ನು ತುಳಿದುಬಿಟ್ಟಿದ್ದಾರೆ:
    ನನ್ನ ಸುಂದರವಾದ ತೋಟವನ್ನು ಮರಳುಗಾಡನ್ನಾಗಿ ಮಾಡಿದ್ದಾರೆ.
11 ಹೌದು, ಮರಳುಭೂಮಿಯನ್ನಾಗಿ ಮಾಡಿದ್ದಾರೆ.
    ಅದು ಒಣಗಿಹೋಗಿ ನಿಸ್ಸತ್ವವಾಗಿದೆ.
ಅಲ್ಲಿ ಯಾರೂ ವಾಸಿಸುವದಿಲ್ಲ. ಇಡೀ ದೇಶವೇ ಬರಿದಾದ ಮರಳುಗಾಡಾಗಿದೆ.
    ಆ ತೋಟವನ್ನು ನೋಡಿಕೊಳ್ಳುವದಕ್ಕೆ ಯಾರೂ ಉಳಿದಿಲ್ಲ.
12 ಅನೇಕ ಸೈನಿಕರು ಆ ಬೋಳುಬೆಟ್ಟಗಳನ್ನು ತುಳಿದುಕೊಂಡು ಹೋದರು.
    ಆ ಸೈನ್ಯಗಳಿಂದ ಯೆಹೋವನು ಆ ದೇಶವನ್ನು ದಂಡಿಸಿದನು.
ಆ ದೇಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವಾಸಿಸಿದ ಎಲ್ಲಾ ಜನರನ್ನು ದಂಡಿಸಲಾಯಿತು.
    ಯಾರೂ ಸುರಕ್ಷಿತವಾಗಿ ಉಳಿಯಲಿಲ್ಲ.
13 ಜನರು ಗೋಧಿಯನ್ನು ಬಿತ್ತುವರು;
    ಆದರೆ ಅವರು ಕೇವಲ ಮುಳ್ಳಿನ ರಾಶಿಯನ್ನು ಕೊಯ್ಯುವರು.
ಅವರು ತುಂಬ ದಣಿಯುವವರೆಗೆ ಕಷ್ಟಪಟ್ಟು ಕೆಲಸ ಮಾಡುವರು.
    ಆದರೆ ಆ ಎಲ್ಲಾ ಕೆಲಸದ ಪ್ರತಿಫಲವಾಗಿ ಅವರಿಗೆ ಏನೂ ಸಿಗುವದಿಲ್ಲ.
ಅವರು ತಮ್ಮ ಬೆಳೆಗಳಿಂದ ನಾಚಿಕೆಪಟ್ಟುಕೊಳ್ಳುವರು.
    ಯೆಹೋವನ ರೋಷವು ಹಾಗೆಲ್ಲ ಮಾಡುವುದು.”

ಇಸ್ರೇಲಿನ ನೆರೆಯವರಿಗೆ ಯೆಹೋವನ ವಾಗ್ದಾನ

14 ಯೆಹೋವನು ಹೀಗೆ ಹೇಳುತ್ತಾನೆ: “ಇಸ್ರೇಲ್ ಪ್ರದೇಶದ ಸುತ್ತಮುತ್ತ ವಾಸಮಾಡುವ ಜನರಿಗಾಗಿ ನಾನು ಏನು ಮಾಡುವೆನೆಂಬುದನ್ನು ನಿಮಗೆ ಹೇಳುವೆನು. ಆ ಜನರು ತುಂಬ ದುಷ್ಟರಾಗಿದ್ದಾರೆ. ನಾನು ಇಸ್ರೇಲಿನ ಜನರಿಗೆ ಕೊಟ್ಟ ಪ್ರದೇಶವನ್ನು ಅವರು ಹಾಳು ಮಾಡಿದರು. ನಾನು ಆ ಜನರನ್ನು ಅವರ ಪ್ರದೇಶದಿಂದ ಹೊರಗೆ ಎಸೆಯುವೆನು. ನಾನು ಅವರೊಂದಿಗೆ ಯೆಹೂದದ ಜನರನ್ನೂ ಎಸೆಯುವೆನು. 15 ಬಳಿಕ ನಾನು ಅವರಿಗಾಗಿ ಪರಿತಪಿಸುವೆನು. ನಾನು ಪ್ರತಿಯೊಂದು ಕುಟುಂಬವನ್ನು ಅದರ ಸ್ವಾಸ್ತ್ಯಕ್ಕೂ ಅದರ ದೇಶಕ್ಕೂ ಕರೆತರುವೆನು. 16 ಆ ಜನರು ತಮ್ಮ ಪಾಠಗಳನ್ನು ಸರಿಯಾಗಿ ಕಲಿತುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ಮೊದಲು, ಆ ಜನರು ಬಾಳನ ಹೆಸರೆತ್ತಿ ಪ್ರಮಾಣ ಮಾಡುವುದನ್ನು ನನ್ನ ಜನರಿಗೆ ಕಲಿಸಿಕೊಟ್ಟರು. ಈಗ ಆ ಜನರು ಅದೇ ರೀತಿಯಲ್ಲಿ ತಮ್ಮ ಪಾಠವನ್ನು ಕಲಿತುಕೊಳ್ಳಬೇಕೆಂಬುದು ನನ್ನ ಇಚ್ಛೆ. ಅವರು, ‘ಯೆಹೋವನ ಜೀವದಾಣೆ’ ಎಂದು ಹೇಳಿದರೆ ಅವರನ್ನು ಅಭಿವೃದ್ಧಿಪಡಿಸಿ ಅವರನ್ನು ನಮ್ಮ ಜನರ ಮಧ್ಯದಲ್ಲಿ ನೆಲೆಗೊಳಿಸುವೆನು. 17 ಯಾವ ಜನಾಂಗವಾದರೂ ನನ್ನ ಸಂದೇಶವನ್ನು ಕೇಳದೆಹೋದರೆ ಅದನ್ನು ಸಂಪೂರ್ಣವಾಗಿ ನಾಶಮಾಡುವೆನು. ಒಣಗಿ ಸತ್ತುಹೋದ ಸಸಿಯಂತೆ ಅದನ್ನು ಕಿತ್ತು ಎಸೆದುಬಿಡುವೆನು.” ಇದು ಯೆಹೋವನಿಂದ ಬಂದ ಸಂದೇಶ.

ನಡುಪಟ್ಟಿಯ ಸಂಕೇತ

13 ಯೆಹೋವನು ನನಗೆ ಹೀಗೆ ಹೇಳಿದನು, “ಯೆರೆಮೀಯನೇ, ಹೋಗಿ ಒಂದು ನಾರಿನ ನಡುಪಟ್ಟಿಯನ್ನು ಕೊಂಡುಕೊ. ಅದನ್ನು ನಿನ್ನ ಸೊಂಟಕ್ಕೆ ಸುತ್ತಿಕೊ. ಆ ನಡುಪಟ್ಟಿ ನೀರಿನಲ್ಲಿ ನೆನೆಯದಂತೆ ನೋಡಿಕೊ.”

ಯೆಹೋವನು ಹೇಳಿದಂತೆ ನಾನು ಒಂದು ನಾರಿನ ನಡುಪಟ್ಟಿಯನ್ನು ಕೊಂಡು ತಂದೆನು. ಅದನ್ನು ನನ್ನ ಸೊಂಟಕ್ಕೆ ಸುತ್ತಿಕೊಂಡೆನು. ಆಗ ಎರಡನೇ ಸಲ ನನಗೆ ಯೆಹೋವನ ಸಂದೇಶ ಬಂದಿತು. ಆ ಸಂದೇಶವಿದು, “ಯೆರೆಮೀಯನೇ, ನೀನು ಕೊಂಡ ತಂದು ಸುತ್ತಿಕೊಂಡ ನಡುಪಟ್ಟಿಯನ್ನು ತೆಗೆದುಕೊಂಡು ಪೆರಾತ್‌ಗೆ ಹೋಗು. ಆ ನಡುಪಟ್ಟಿಯನ್ನು ಬೆಟ್ಟದ ಸಂದಿನಲ್ಲಿ ಬಚ್ಚಿಡು.”

ಆದ್ದರಿಂದ ನಾನು ಪೆರಾತ್‌ಗೆ ಹೋದೆ. ಯೆಹೋವನು ಹೇಳಿದ ಪ್ರಕಾರ ನಡುಪಟ್ಟಿಯನ್ನು ಬಚ್ಚಿಟ್ಟೆ. ಬಹಳ ದಿನಗಳಾದ ತರುವಾಯ, ಯೆಹೋವನು ನನಗೆ, “ಯೆರೆಮೀಯನೇ, ಪೆರಾತ್‌ಗೆ ಹೋಗು, ನಾನು ನಿನಗೆ ಅಲ್ಲಿ ಬಚ್ಚಿಡಲು ಹೇಳಿದ ನಡುಪಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.

ನಾನು ಪೆರಾತ್‌ಗೆ ಹೋದೆ ಮತ್ತು ನಡುಪಟ್ಟಿಯನ್ನು ಬಚ್ಚಿಟ್ಟ ಬೆಟ್ಟದ ಸಂದಿನಿಂದ ಹೊರತೆಗೆದೆ. ಆದರೆ ಆ ನಡುಪಟ್ಟಿ ಹಾಳಾಗಿಹೋಗಿತ್ತು. ನಾನು ಅದನ್ನು ಧರಿಸಲಾಗಲಿಲ್ಲ. ಅದು ಯಾವುದಕ್ಕೂ ಪ್ರಯೋಜನವಿರಲಿಲ್ಲ.

ಆಗ ನನಗೆ ಯೆಹೋವನ ಸಂದೇಶ ಬಂದಿತು. ಯೆಹೋವನು ಹೀಗೆ ಹೇಳಿದನು, “ನಡುಪಟ್ಟಿಯು ಹಾಳಾಗಿ ನಿಷ್ಪ್ರಯೋಜಕವಾಗಿದೆ. ಅಂತೆಯೇ ನಾನು ಯೆಹೂದದ ಮತ್ತು ಜೆರುಸಲೇಮಿನ ಜಂಬದ ಜನರನ್ನು ಹಾಳುಮಾಡುತ್ತೇನೆ. 10 ಯೆಹೂದದಲ್ಲಿ ದುಷ್ಟರೂ ಗರ್ವಿಷ್ಠರೂ ಆಗಿರುವ ಜನರನ್ನು ಹಾಳುಮಾಡುವೆನು. ಅವರು ನನ್ನ ಸಂದೇಶವನ್ನು ಕೇಳುವುದಿಲ್ಲ. ಅವರು ಹಟಮಾರಿಗಳೂ ತಮ್ಮ ಮನಸ್ಸಿಗೆ ಬಂದಂತೆ ಮಾಡುವವರೂ ಆಗಿದ್ದಾರೆ. ಅವರು ಬೇರೆ ದೇವರುಗಳನ್ನು ಅನುಸರಿಸುತ್ತಾರೆ ಮತ್ತು ಪೂಜಿಸುತ್ತಾರೆ. ಯೆಹೂದದ ಜನರು ಈ ನಾರಿನ ನಡುಪಟ್ಟಿಯಂತೆ ಆಗುವರು. ಅವರು ಹಾಳಾಗಿ ನಿಷ್ಪ್ರಯೋಜಕರಾಗುವರು. 11 ಪುರುಷನೊಬ್ಬನು ನಡುಪಟ್ಟಿಯನ್ನು ಬಿಗಿಯಾಗಿ ಸೊಂಟಕ್ಕೆ ಸುತ್ತಿಕೊಳ್ಳುವಂತೆ ನಾನು ಇಸ್ರೇಲಿನ ಎಲ್ಲಾ ವಂಶಗಳನ್ನು ಮತ್ತು ಯೆಹೂದದ ಎಲ್ಲಾ ವಂಶಗಳನ್ನು ನನ್ನ ಸುತ್ತಲೂ ಬಿಗಿದುಕೊಂಡೆನು.” ಇದು ಯೆಹೋವನಿಂದ ಬಂದ ಮಾತು. “ಅವರು ನನ್ನ ಜನರಾಗುವರು ಎಂದುಕೊಂಡು ನಾನು ಹಾಗೆ ಮಾಡಿದೆ. ನನ್ನ ಜನರು ನನಗೆ ಕೀರ್ತಿ, ಸ್ತುತಿ, ಗೌರವ ತರುವರೆಂದು ತಿಳಿದಿದ್ದೆ. ಆದರೆ ನನ್ನ ಜನರು ನನ್ನ ಮಾತನ್ನು ಕೇಳದೆಹೋದರು.”

ಯೆಹೂದಕ್ಕೆ ಕೊಟ್ಟ ಎಚ್ಚರಿಕೆಗಳು

12 “ಯೆರೆಮೀಯನೇ, ಯೆಹೂದದ ಜನರಿಗೆ, ‘ಇಸ್ರೇಲಿನ ದೇವರಾದ ಯೆಹೋವನು ಪ್ರತಿಯೊಂದು ಚರ್ಮದ ಬುದ್ದಲಿಯು ದ್ರಾಕ್ಷಾರಸದಿಂದ ತುಂಬಿರಬೇಕು ಎಂದು ಹೇಳುತ್ತಾನೆ’ ಎಂದು ಹೇಳು. ಆಗ ಆ ಜನರು ನಕ್ಕು, ‘ಪ್ರತಿಯೊಂದು ಚರ್ಮದ ಬುದ್ದಲಿಯು ದ್ರಾಕ್ಷಾರಸದಿಂದ ತುಂಬಿರಬೇಕೆಂಬುದು ನಮಗೆ ಚೆನ್ನಾಗಿ ಗೊತ್ತು’ ಎಂದು ನಿನಗೆ ಹೇಳುತ್ತಾರೆ. 13 ಆಗ ನೀನು ಅವರಿಗೆ, ‘ಯೆಹೋವನು ಹೀಗೆ ಹೇಳುತ್ತಾನೆ ಎಂದು ಹೇಳು. ಈ ಪ್ರದೇಶದಲ್ಲಿ ವಾಸಮಾಡುವ ಪ್ರತಿಯೊಬ್ಬ ಮನುಷ್ಯನನ್ನು ಕುಡಿದು ಮತ್ತನಾದವನಂತೆ ಅಸಹಾಯಕನನ್ನಾಗಿ ಮಾಡುತ್ತೇನೆ. ನಾನು ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ರಾಜರ ಬಗ್ಗೆ ಹೇಳುತ್ತಿದ್ದೇನೆ. ನಾನು ಯಾಜಕರ, ಪ್ರವಾದಿಗಳ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಎಲ್ಲಾ ಜನರ ಬಗ್ಗೆಯೂ ಹೇಳುತ್ತಿದ್ದೇನೆ. 14 ಯೆಹೂದದ ಜನರು ಎಡವಿ, ಒಬ್ಬರಮೇಲೊಬ್ಬರು ಬೀಳುವಂತೆ ನಾನು ಮಾಡುವೆನು. ತಂದೆ ಮತ್ತು ಮಕ್ಕಳು ಒಬ್ಬರಮೇಲೊಬ್ಬರು ಬೀಳುವರು.’” ಇದು ಯೆಹೋವನ ನುಡಿ. “‘ನಾನು ಅವರಿಗಾಗಿ ಕನಿಕರಪಡುವದಿಲ್ಲ ಅಥವಾ ಕರುಣೆ ತೋರಿಸುವದಿಲ್ಲ. ಯೆಹೂದದ ಜನರ ವಿನಾಶವನ್ನು ಕರುಣೆಯು ತಡೆಯದಂತೆ ನೋಡಿಕೊಳ್ಳುತ್ತೇನೆ.’”

15 ಕೇಳಿರಿ, ಗಮನ ಕೊಡಿರಿ;
    ದೇವರು ನಿಮಗೆ ಹೇಳಿದ್ದಾನೆ.
    ಗರ್ವಪಡಬೇಡಿರಿ.
16 ನಿಮ್ಮ ದೇವರಾದ ಯೆಹೋವನು
ಅಂಧಕಾರವನ್ನು ಉಂಟುಮಾಡುವ ಮೊದಲೇ ಆತನನ್ನು ಗೌರವಿಸಿರಿ,
    ಕಗ್ಗತ್ತಲಿನ ಬೆಟ್ಟಗಳ ಮೇಲೆ ನೀವು ಬೀಳುವ ಮೊದಲೇ ಆತನನ್ನು ಸ್ತುತಿಸಿರಿ.
ಯೆಹೂದದ ಜನರಾದ ನೀವು ಬೆಳಕನ್ನು ನಿರೀಕ್ಷಿಸುತ್ತಿದ್ದೀರಿ.
    ಆದರೆ ಯೆಹೋವನು ಬೆಳಕನ್ನು ಗಾಢಾಂಧಕಾರವನ್ನಾಗಿ ಪರಿವರ್ತಿಸುವನು.
17 ಯೆಹೂದದ ಜನರಾದ ನೀವು ಯೆಹೋವನ ಮಾತನ್ನು ಕೇಳದಿದ್ದರೆ,
    ನಾನು ಗುಟ್ಟಾದ ಸ್ಥಳದಲ್ಲಿ ಅಳುವೆನು.
ನಿಮ್ಮ ಅಹಂಕಾರವು ನನ್ನನ್ನು ಅಳುವ ಹಾಗೆ ಮಾಡುವುದು.
    ನಾನು ಬಹಳ ಗಟ್ಟಿಯಾಗಿ ಅಳುವೆನು,
ನನ್ನ ಕಣ್ಣುಗಳಿಂದ ಕಣ್ಣೀರು ಹೊರಸೂಸುವುದು.
    ಏಕೆಂದರೆ ಯೆಹೋವನ ಮಂದೆಯು ಸೆರೆಹಿಡಿಯಲ್ಪಡುವುದು.
18 ಈ ಸಂಗತಿಗಳನ್ನು ರಾಜನಿಗೂ ರಾಣಿಗೂ ಹೇಳಿರಿ:
    “ನಿಮ್ಮ ಸಿಂಹಾಸನಗಳಿಂದ ಕೆಳಗಿಳಿದು ಬನ್ನಿ.
    ನಿಮ್ಮ ಸುಂದರವಾದ ಕಿರೀಟಗಳು ನಿಮ್ಮ ತಲೆಯಿಂದ ಉರುಳಿ ಕೆಳಗೆ ಬಿದ್ದಿವೆ” ಎಂದು ಹೇಳಿರಿ.
19 ನೆಗೆವ್ ಮರುಭೂಮಿಯ ಎಲ್ಲಾ ನಗರಗಳಿಗೆ ಬೀಗ ಹಾಕಲಾಗಿದೆ.
    ಅವುಗಳನ್ನು ತೆರೆಯುವುದು ಯಾರಿಂದಲೂ ಸಾಧ್ಯವಿಲ್ಲ.
ಯೆಹೂದದ ಎಲ್ಲಾ ಜನರು ಸೆರೆ ಒಯ್ಯಲ್ಪಟ್ಟಿದ್ದಾರೆ.
    ಅವರೆಲ್ಲರನ್ನು ಸೆರೆಯಾಳುಗಳಾಗಿ ತೆಗೆದುಕೊಂಡು ಹೋಗಲಾಗಿದೆ.

20 ಜೆರುಸಲೇಮೇ, ಮುಖವೆತ್ತಿ ನೋಡು.
    ಉತ್ತರ ದಿಕ್ಕಿನಿಂದ ಬರುವ ಶತ್ರುಗಳನ್ನು ನೋಡು.
ನಿನ್ನ ಮಂದೆ[a] ಎಲ್ಲಿದೆ? ದೇವರು ನಿನಗೆ ಆ ಸುಂದರವಾದ ಮಂದೆಯನ್ನು ದಯಪಾಲಿಸಿದನು.
    ನೀನು ಆ ಮಂದೆಯನ್ನು ನೋಡಿಕೊಳ್ಳಬೇಕಾಗಿತ್ತು.
21 ಯೆಹೋವನು ನಿನಗೆ ಆ ಮಂದೆಯ ಲೆಕ್ಕವನ್ನೊಪ್ಪಿಸು ಎಂದು ಕೇಳಿದರೆ ಏನು ಹೇಳುವೆ?
    ಜನರಿಗೆ ದೇವರ ಬಗ್ಗೆ ತಿಳಿಸುವದು ನಿನ್ನ ಕರ್ತವ್ಯವಾಗಿತ್ತು.
ನಿನ್ನ ನಾಯಕರು ಜನರಿಗೆ ಮಾರ್ಗದರ್ಶನ ಮಾಡಬೇಕಾಗಿತ್ತು.
    ಆದರೆ ಅವರು ತಮ್ಮ ಕೆಲಸವನ್ನು ಮಾಡಲಿಲ್ಲ.
ಆದ್ದರಿಂದ ನಿನಗೆ ಹೆಚ್ಚಿನ ನೋವು ಮತ್ತು ಕಷ್ಟಗಳು ಉಂಟಾಗುವವು.
    ಪ್ರಸವವೇದನೆಯಂಥ ನೋವು ನಿನಗಾಗುವುದು.
22 “ಇಂಥ ಕೇಡು ನನಗೆ ಏಕೆ ಉಂಟಾಯಿತು?”
    ಎಂದು ನಿನ್ನನ್ನು ನೀನೇ ಕೇಳಿಕೊಳ್ಳಬಹುದು.
ನೀನು ಮಾಡಿದ ಅನೇಕ ಪಾಪಗಳ ಫಲದಿಂದಲೇ ಆಯಿತು.
    ನಿನ್ನ ಪಾಪಗಳ ಫಲವಾಗಿ ನಿನ್ನ ಲಂಗವನ್ನು ಹರಿಯಲಾಯಿತು.
    ನಿನ್ನ ಪಾದರಕ್ಷೆಯನ್ನು ಕಿತ್ತುಕೊಳ್ಳಲಾಯಿತು.
ನಿನ್ನನ್ನು ಕಂಗೆಡಿಸುವದಕ್ಕಾಗಿ ಅವರು ಹೀಗೆ ಮಾಡಿದರು.
23 ಕಪ್ಪಗಿರುವವನು ತನ್ನ ಚರ್ಮದ ಬಣ್ಣವನ್ನು ಬದಲಿಸಲಾರನು.
    ಚಿರತೆಯು ತನ್ನ ಮೈಮೇಲಿನ ಚುಕ್ಕೆಗಳನ್ನು ಬದಲಾಯಿಸಲಾರದು.
ಅದೇ ರೀತಿ, ಜೆರುಸಲೇಮ್ ನಗರವೇ, ನೀನು ಸಹ ಮಾರ್ಪಾಟು ಹೊಂದಿ ಒಳ್ಳೆಯದನ್ನು ಮಾಡಲಾರೆ.
ನೀನು ಯಾವಾಗಲೂ ಕೆಟ್ಟದ್ದನ್ನೇ ಮಾಡುವೆ.

24 “ನಾನು ನಿಮಗೆ ನಿಮ್ಮ ಮನೆಗಳನ್ನು ಬಿಟ್ಟು ಓಡಿಹೋಗುವಂತೆ ಒತ್ತಾಯ ಮಾಡುತ್ತೇನೆ.
    ನೀವು ಎಲ್ಲಾ ದಿಕ್ಕುಗಳಲ್ಲಿಯೂ ಓಡಿಹೋಗುವಿರಿ.
    ನೀವು ಮರುಭೂಮಿಯ ಗಾಳಿಯಿಂದ ಹಾರಿಹೋಗುವ ಹೊಟ್ಟಿನಂತಾಗುವಿರಿ.
25 ನಿಮ್ಮ ಗತಿ ಹೀಗಾಗುವುದು.
    ನನ್ನ ಯೋಜನೆಗಳಲ್ಲಿ ಇದು ನಿಮ್ಮ ಪಾತ್ರ.”
ಇದು ಯೆಹೋವನ ನುಡಿ.
“ಏಕೆ ಹೀಗಾಗುವದು?
    ಏಕೆಂದರೆ ನೀವು ನನ್ನನ್ನು ಮರೆತುಬಿಟ್ಟಿರಿ.
    ಸುಳ್ಳುದೇವರುಗಳನ್ನು ನಂಬಿದಿರಿ.
26 ಜೆರುಸಲೇಮ್ ನಗರವೇ, ನಾನು ನಿನ್ನ ಲಂಗವನ್ನು ನಿನ್ನ ಮುಖದವರೆಗೆ ಎತ್ತಿಬಿಡುತ್ತೇನೆ.
ಎಲ್ಲರೂ ನಿನ್ನನ್ನು ನೋಡುತ್ತಾರೆ.
    ನಿನಗೆ ನಾಚಿಕೆಯಾಗುತ್ತದೆ.
27 ನೀನು ಮಾಡಿದ ಭಯಾನಕ ಕೃತ್ಯಗಳನ್ನು ನಾನು ನೋಡಿದ್ದೇನೆ.
    ನಿನ್ನ ಪ್ರಿಯತಮರ ಜೊತೆಗೆ ನಗುವದನ್ನೂ ಕಾಮದಾಟವಾಡುವದನ್ನೂ ನಾನು ನೋಡಿದ್ದೇನೆ.
    ನೀನು ವೇಶ್ಯೆಯಂತೆ ನಡೆದುಕೊಳ್ಳಬೇಕೆಂದು ಯೋಚನೆ ಮಾಡಿದ್ದು ನನಗೆ ಗೊತ್ತು.
ನೀನು ಹೊಲಗಳಲ್ಲಿಯೂ ಬೆಟ್ಟಗಳಲ್ಲಿಯೂ ಮಾಡಿದ ಅಸಹ್ಯಕೃತ್ಯಗಳನ್ನು ನಾನು ನೋಡಿದ್ದೇನೆ.
ಜೆರುಸಲೇಮೇ, ಇದರಿಂದ ನಿನಗೆ ತುಂಬಾ ಕೇಡಾಗುವದು.
    ನೀನು ಎಷ್ಟು ದಿನ ಹೀಗೆಯೇ ನಿನ್ನ ಪಾಪಕೃತ್ಯಗಳನ್ನು ಮುಂದುವರಿಸುವೆ ಎಂದು ನಾನು ಯೋಚಿಸುತ್ತಿದ್ದೇನೆ.”

ಕ್ಷಾಮ ಮತ್ತು ಸುಳ್ಳುಪ್ರವಾದಿಗಳು

14 ಇದು ಕ್ಷಾಮದ ಬಗ್ಗೆ ಯೆರೆಮೀಯನಿಗೆ ಯೆಹೋವನು ನುಡಿದ ಸಂದೇಶ:

“ಯೆಹೂದ ಜನಾಂಗವು ಸತ್ತುಹೋದವರಿಗಾಗಿ ಗೋಳಾಡುವುದು.
    ಯೆಹೂದದ ನಗರಗಳಲ್ಲಿದ್ದ ಜನರು ದಿನೇದಿನೇ ನಿಬರ್ಲರಾಗುತ್ತಾರೆ.
    ಆ ಜನರು ನೆಲದ ಮೇಲೆ ಬಿದ್ದು ಬಿಡುತ್ತಾರೆ.
ಜೆರುಸಲೇಮ್ ನಗರದಿಂದ ಜನರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಾರೆ.
ಜನನಾಯಕರು ನೀರು ತರುವದಕ್ಕಾಗಿ ತಮ್ಮ ಸೇವಕರನ್ನು ಕಳುಹಿಸುತ್ತಾರೆ.
ಆ ಸೇವಕರು ನೀರಿರುವ ಸ್ಥಳಗಳಿಗೆ ಹೋಗುತ್ತಾರೆ.
    ಆದರೆ ಅಲ್ಲಿ ಅವರಿಗೆ ನೀರು ಸಿಕ್ಕುವದಿಲ್ಲ.
ಸೇವಕರು ಕೇವಲ ಪಾತ್ರೆಗಳನ್ನು ತೆಗೆದುಕೊಂಡು ಹಿಂದಿರುಗಿ ಬರುತ್ತಾರೆ.
    ಅವರು ನಾಚಿಕೆಪಟ್ಟುಕೊಳ್ಳುತ್ತಾರೆ ಮತ್ತು ಪೇಚಾಡುತ್ತಾರೆ.
    ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
ಭೂಮಿಗೆ ಮಳೆ ಬೀಳುವದಿಲ್ಲ.
    ಯಾರೂ ಬಿತ್ತನೆಗಾಗಿ ಭೂಮಿಯನ್ನು ಉಳುವದಿಲ್ಲ.
ರೈತರು ಎದೆಗುಂದುತ್ತಾರೆ.
    ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
ಕಾಡಿನಲ್ಲಿ ಹುಲ್ಲು ಇಲ್ಲದ ಕಾರಣ
    ಜಿಂಕೆಯು ತನ್ನ ಮರಿಯನ್ನು ಬಿಟ್ಟುಹೋಗುವದು.
ಕಾಡುಕತ್ತೆಗಳು ಬೋಳುಬೆಟ್ಟಗಳ ಮೇಲೆ ನಿಂತು
    ನರಿಗಳಂತೆ[b] ಗಾಳಿಯನ್ನು ಮೂಸುತ್ತವೆ.
ಆದರೆ ಅವುಗಳಿಗೆ ಆಹಾರ ಕಾಣಿಸುವದಿಲ್ಲ.
    ಏಕೆಂದರೆ ತಿನ್ನಬಹುದಾದ ಸಸಿಗಳು ಬೆಳೆದಿಲ್ಲ.”

“ಯೆಹೋವನೇ, ಅದು ನಮ್ಮ ಪಾಪಗಳ ಫಲವೆಂಬುದು ನಮಗೆ ತಿಳಿದಿದೆ.
    ನಮ್ಮ ಪಾಪಗಳಿಂದಾಗಿ ನಾವು ಈಗ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿಗಾಗಿ ನಮಗೇನಾದರೂ ಸಹಾಯಮಾಡು.
ನಾವು ನಿನ್ನನ್ನು ಅನೇಕ ಸಲ ತ್ಯಜಿಸಿದ್ದೇವೆಂದು ಒಪ್ಪಿಕೊಳ್ಳುತ್ತೇವೆ.
    ನಾವು ನಿನ್ನ ವಿರುದ್ಧ ಪಾಪಮಾಡಿದ್ದೇವೆ.
ಯೆಹೋವನೇ, ನೀನು ಇಸ್ರೇಲರ ಆಶಾಕಿರಣ,
    ಕಷ್ಟಕಾಲದಲ್ಲಿ ಇಸ್ರೇಲನ್ನು ನೀನು ಕಾಪಾಡುವೆ.
ಆದರೆ ಈಗ ನೀನು ಈ ದೇಶದಲ್ಲಿ ಪರದೇಶಿಯಂತೆ ಕಾಣುವೆ.
    ಕೇವಲ ಒಂದು ರಾತ್ರಿ ಮಾತ್ರ ಉಳಿಯುವ ಪ್ರಯಾಣಿಕನಂತೆ ಕಾಣುವೆ.
ನೀನು ಸ್ತಬ್ಧನಾಗಿರುವೆ;
    ಯಾರನ್ನೂ ರಕ್ಷಿಸಲಾಗದ ಸೈನಿಕನಂತಾಗಿರುವೆ.
ಯೆಹೋವನೇ, ನೀನಾದರೋ ನಮ್ಮ ಜೊತೆಯಲ್ಲಿರುವೆ.
    ನಾವು ನಿನ್ನ ಹೆಸರಿನವರಾಗಿದ್ದೇವೆ.
    ಆದ್ದರಿಂದ ನಮ್ಮನ್ನು ಕೈಬಿಡಬೇಡ.”

10 ಯೆಹೂದದ ಜನರ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: “ಯೆಹೂದದ ಜನರು ನನ್ನಿಂದ ದೂರವಾಗಲು ಮನಃಪೂರ್ವಕವಾಗಿ ಇಚ್ಛಿಸುತ್ತಾರೆ. ಅವರು ಮೊದಲಿಂದಲೂ ಹೀಗೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಈಗ ಯೆಹೋವನು ಅವರನ್ನು ಸ್ವಿಕರಿಸುವದಿಲ್ಲ. ಆತನು ಅವರ ದುಷ್ಕೃತ್ಯಗಳನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗಾಗಿ ಅವರನ್ನು ದಂಡಿಸುತ್ತಾನೆ.”

11 ಆಗ ಯೆಹೋವನು, “ಯೆರೆಮೀಯನೇ, ಯೆಹೂದದ ಜನರ ಒಳಿತಿಗಾಗಿ ಪ್ರಾರ್ಥಿಸಬೇಡ. 12 ಯೆಹೂದದ ಜನರು ಉಪವಾಸ ವ್ರತವನ್ನು ಕೈಕೊಳ್ಳಬಹುದು ಮತ್ತು ನನಗೆ ಪ್ರಾರ್ಥನೆ ಮಾಡಬಹುದು. ಆದರೆ ನಾನು ಅವರ ಪ್ರಾರ್ಥನೆಗಳನ್ನು ಕೇಳುವದಿಲ್ಲ. ಅವರು ನನಗೆ ಸರ್ವಾಂಗಹೋಮಗಳನ್ನು ಮತ್ತು ಧಾನ್ಯನೈವೇದ್ಯಗಳನ್ನು ಅರ್ಪಿಸಿದರೂ ಸಹ ನಾನು ಅವರನ್ನು ಸ್ವಿಕರಿಸುವದಿಲ್ಲ. ನಾನು ಯುದ್ಧದಿಂದ ಯೆಹೂದದ ಜನರನ್ನು ನಾಶಮಾಡುತ್ತೇನೆ. ನಾನು ಅವರ ಆಹಾರವನ್ನು ಕಿತ್ತುಕೊಳ್ಳುತ್ತೇನೆ; ಯೆಹೂದದ ಜನರು ಉಪವಾಸದಿಂದ ಸಾಯುವಂತೆ ಮಾಡುತ್ತೇನೆ. ನಾನು ಅವರನ್ನು ಭಯಂಕರವಾದ ವ್ಯಾಧಿಗಳಿಂದ ನಾಶಮಾಡುತ್ತೇನೆ” ಎಂದು ಹೇಳಿದನು.

13 ಆಗ ನಾನು ಯೆಹೋವನಿಗೆ, “ನನ್ನ ಒಡೆಯನಾದ ಯೆಹೋವನೇ, ಪ್ರವಾದಿಗಳು ಜನರಿಗೆ ಬೇರೆಯದನ್ನೇ ಹೇಳಿದರು. ಅವರು ಯೆಹೂದದ ಜನರಿಗೆ, ‘ನೀವು ಶತ್ರುವಿನ ಖಡ್ಗಕ್ಕೆ ತುತ್ತಾಗುವದಿಲ್ಲ. ನೀವೆಂದಿಗೂ ಹಸಿವಿನಿಂದ ಬಳಲುವದಿಲ್ಲ, ಯೆಹೋವನು ಈ ದೇಶದಲ್ಲಿ ನಿಮಗೆ ನೆಮ್ಮದಿಯನ್ನು ದಯಪಾಲಿಸುವನು’ ಎಂದು ಹೇಳುತ್ತಿದ್ದರು” ಎಂದೆನು.

14 ಆಗ ಯೆಹೋವನು ನನಗೆ, “ಯೆರೆಮೀಯನೇ, ಆ ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳುಬೋಧನೆ ಮಾಡುತ್ತಾರೆ. ನಾನು ಆ ಪ್ರವಾದಿಗಳನ್ನು ಕಳುಹಿಸಲಿಲ್ಲ. ಅವರಿಗೆ ನಾನು ಯಾವ ಅಪ್ಪಣೆಯನ್ನೂ ಕೊಟ್ಟಿಲ್ಲ, ಅವರೊಂದಿಗೆ ನಾನು ಮಾತನ್ನೂ ಆಡಿಲ್ಲ. ಆ ಪ್ರವಾದಿಗಳು ಸುಳ್ಳುದರ್ಶನಗಳನ್ನು ನಿಷ್ಪ್ರಯೋಜಕವಾದ ಮಾಟಮಂತ್ರಗಳನ್ನು ಸ್ವಕಲ್ಪಿತ ವಿಚಾರಗಳನ್ನೂ ಬೋಧಿಸುತ್ತಿದ್ದಾರೆ. 15 ನನ್ನ ಹೆಸರಿನಲ್ಲಿ ಬೋಧನೆ ಮಾಡುತ್ತಿರುವ ಈ ಪ್ರವಾದಿಗಳ ಬಗ್ಗೆ ನಾನು ಹೇಳುವದು ಇಷ್ಟೇ. ನಾನು ಆ ಪ್ರವಾದಿಗಳನ್ನು ಕಳುಹಿಸಿಲ್ಲ. ಆ ಪ್ರವಾದಿಗಳು ‘ಶತ್ರುಗಳು ಖಡ್ಗಧಾರಿಗಳಾಗಿ ಎಂದಿಗೂ ಈ ದೇಶದ ಮೇಲೆ ಧಾಳಿ ಮಾಡುವದಿಲ್ಲ. ಈ ದೇಶದಲ್ಲಿ ಎಂದೂ ಕ್ಷಾಮ ಕಾಣಿಸಿಕೊಳ್ಳುವದಿಲ್ಲ’ ಎಂದು ಹೇಳಿದ್ದಾರೆ. ಆದರೆ ಆ ಪ್ರವಾದಿಗಳು ಹಸಿವಿನ ತಾಪದಿಂದ ಸಾಯುತ್ತಾರೆ ಮತ್ತು ಶತ್ರುವಿನ ಖಡ್ಗ ಅವರನ್ನು ಕೊಲ್ಲುತ್ತದೆ. 16 ಯಾರಿಗೆ ಪ್ರವಾದಿಗಳು ಬೋಧನೆ ಮಾಡಿದ್ದರೋ ಅವರನ್ನು ಬೀದಿಗಳಲ್ಲಿ ಎಸೆಯಲಾಗುವದು. ಆ ಜನರು ಹಸಿವಿನಿಂದ ಮತ್ತು ಶತ್ರುಗಳ ಖಡ್ಗಗಳಿಂದ ಮಡಿಯುವರು. ಆ ಜನರನ್ನೂ ಅವರ ಹೆಂಡತಿಯರನ್ನೂ ಮಕ್ಕಳನ್ನೂ ಹೂಣಿಡುವದಕ್ಕೆ ಯಾರೂ ಇರುವದಿಲ್ಲ. ನಾನು ಅವರನ್ನು ದಂಡಿಸುತ್ತೇನೆ.

17 “ಯೆರೆಮೀಯನೇ, ಯೆಹೂದದ ಜನರಿಗೆ
    ಈ ಸಂದೇಶವನ್ನು ಹೇಳು:
‘ನನ್ನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿದೆ. ನಾನು ನಿರಂತರವಾಗಿ ಹಗಲಿರುಳು ಅಳುವೆನು.
ನಾನು ನನ್ನ ಕನ್ಯೆಯಾದ ಮಗಳಿಗಾಗಿ[c] ಅಳುವೆನು. ನಾನು ನನ್ನ ಜನರಿಗಾಗಿ ಅಳುವೆನು.
    ಏಕೆಂದರೆ ಯಾರೋ ಒಬ್ಬರು ಅವರನ್ನು ಹೊಡೆದು ಸದೆಬಡಿದಿದ್ದಾರೆ,
    ಅವರಿಗೆ ಬಹಳ ಗಾಯಗಳಾಗಿವೆ.
18 ನಾನು ನಗರಗಳ ಹೊರಗಡೆ ಹೋದರೆ
    ಖಡ್ಗಗಳಿಗೆ ಆಹುತಿಯಾಗಿ ಸತ್ತವರು ನನ್ನ ಕಣ್ಣಿಗೆ ಬೀಳುತ್ತಾರೆ.
ನಾನು ನಗರಗಳಿಗೆ ಹೋದರೆ ಕ್ಷಾಮದಿಂದ ಬಳಲುವ ಜನರು ನನ್ನ ಕಣ್ಣಿಗೆ ಬೀಳುತ್ತಾರೆ.
    ಅವರಿಗೆ ತಿನ್ನಲು ಅನ್ನವಿಲ್ಲ.
ಯಾಜಕರನ್ನು ಮತ್ತು ಪ್ರವಾದಿಗಳನ್ನು
    ಪರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ.’”

19 ಯೆಹೋವನೇ, ನೀನು ಯೆಹೂದ ಜನಾಂಗವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವೆಯಾ?
    ಯೆಹೋವನೇ, ನೀನು ಚೀಯೋನನ್ನು ದ್ವೇಷಿಸುವೆಯಾ?
ನಾವು ಪುನಃ ಗುಣಹೊಂದಲಾರದ ಹಾಗೆ ನಮ್ಮನ್ನು ಹೊಡೆದು ಗಾಯಗೊಳಿಸಿರುವೆಯಲ್ಲ.
    ನೀನು ಹೀಗೇಕೆ ಮಾಡಿದೆ?
ನಾವು ನೆಮ್ಮದಿಯನ್ನು ನಿರೀಕ್ಷಿಸಿದೆವು,
    ಆದರೆ ಒಳ್ಳೆಯದೇನೂ ಆಗಲಿಲ್ಲ.
ನಾವು ಕ್ಷೇಮವನ್ನು ಎದುರುನೋಡುತ್ತಿದ್ದೆವು.
    ಆದರೆ ಕೇವಲ ಭಯ ನಮ್ಮೆದುರಿಗೆ ಬಂದಿತು.
20 ಯೆಹೋವನೇ, ನಾವು ಬಹಳ ಕೆಟ್ಟ ಜನರೆಂಬುದು ನಮಗೆ ಗೊತ್ತು.
    ನಮ್ಮ ಪೂರ್ವಿಕರು ದುಷ್ಕೃತ್ಯಗಳನ್ನು ಮಾಡಿದರೆಂಬುದನ್ನು ನಾವು ಬಲ್ಲೆವು.
    ಹೌದು, ನಾವು ನಿನ್ನ ವಿರುದ್ಧ ಪಾಪಮಾಡಿದೆವು.
21 ಯೆಹೋವನೇ, ನಿನ್ನ ಹೆಸರಿನ ಒಳ್ಳೆಯತನ ಉಳಿಸಿಕೊಳ್ಳುವದಕ್ಕಾದರೂ ನಮ್ಮನ್ನು ದೂರ ತಳ್ಳಬೇಡ.
    ನಿನ್ನ ಮಹಿಮೆಯ ಸಿಂಹಾಸನದ ಗೌರವವನ್ನು ಕುಂದಿಸಬೇಡ.
ನೀನು ನಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿಕೊ.
    ಆ ಒಡಂಬಡಿಕೆಯನ್ನು ಮುರಿಯಬೇಡ.
22 ಅನ್ಯರ ವಿಗ್ರಹಗಳಿಗೆ ಮಳೆ ಸುರಿಸುವ ಸಾಮರ್ಥ್ಯವಿಲ್ಲ.
    ಆಕಾಶಕ್ಕೆ ಮಳೆಯನ್ನು ಸುರಿಸುವ ಸಾಮರ್ಥ್ಯವಿಲ್ಲ.
ನೀನೊಬ್ಬನೇ ನಮ್ಮ ಆಶಾಕೇಂದ್ರ.
    ನೀನೇ ಈ ಎಲ್ಲವುಗಳನ್ನು ಸೃಷ್ಟಿಸಿದವನು.

2 ತಿಮೊಥೆಯನಿಗೆ 1

ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವ ಪತ್ರ. ದೇವರ ಚಿತ್ತಾನುಸಾರವಾಗಿ ನಾನು ಅಪೊಸ್ತಲನಾದೆನು. ಕ್ರಿಸ್ತ ಯೇಸುವಿನಲ್ಲಿರುವ ಜೀವ ವಾಗ್ದಾನವನ್ನು ಜನರಿಗೆ ತಿಳಿಯಪಡಿಸಲು ದೇವರು ನಮ್ಮನ್ನು ಕಳುಹಿಸಿದನು.

ತಿಮೊಥೆಯನೇ, ನೀನು ನನಗೆ ಪ್ರಿಯ ಮಗನಂತಿರುವೆ.

ತಂದೆಯಾದ ದೇವರಿಂದ ಮತ್ತು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಿಂದ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಲಭಿಸಲಿ.

ಕೃತಜ್ಞತಾಸ್ತುತಿ ಮತ್ತು ಪ್ರೋತ್ಸಾಹ

ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ತಪ್ಪದೆ ನಿನ್ನನ್ನು ಜ್ಞಾಪಿಸಿಕೊಂಡು ನಿನ್ನ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇನೆ. ನನ್ನ ಪೂರ್ವಿಕರು ಸೇವೆ ಸಲ್ಲಿಸಿದ್ದು ಆತನಿಗೇ. ಯೋಗ್ಯವಾದದ್ದೆಂದು ನನಗೆ ತಿಳಿದಿರುವುದನ್ನೇ ಮಾಡುತ್ತಾ ಆತನ ಸೇವೆ ಮಾಡುತ್ತಿದ್ದೇನೆ. ನೀನು ನನಗಾಗಿ ಕಣ್ಣೀರು ಸುರಿಸಿದ್ದು ನನ್ನ ನೆನಪಿನಲ್ಲಿದೆ. ನಿನ್ನನ್ನು ನೋಡಬೇಕೆಂದು ಬಹಳ ಆಸೆಯಾಗಿದೆ. ನಿನ್ನನ್ನು ನೋಡಿದಾಗ ನನ್ನಲ್ಲಿ ಆನಂದವು ತುಂಬಿಹೋಗುವುದು. ನಿನ್ನ ನಿಜವಾದ ನಂಬಿಕೆಯು ನನ್ನ ನೆನಪಿನಲ್ಲಿದೆ. ಆ ವಿಧವಾದ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಲ್ಲೂ ನಿನ್ನ ತಾಯಿಯಾದ ಯೂನಿಕೆಯಲ್ಲೂ ಇತ್ತು. ಈಗ ಅದೇ ನಂಬಿಕೆಯು ನಿನ್ನಲ್ಲಿಯೂ ಇದೆಯೆಂದು ನನಗೆ ತಿಳಿದಿದೆ. ದೇವರು ನಿನಗೆ ದಯಪಾಲಿಸಿರುವ ವರವನ್ನು ನೀನು ನೆನಪು ಮಾಡಿಕೊಳ್ಳಬೇಕೆಂದು ನಾನು ಅಪೇಕ್ಷಿಸುವುದು ಈ ಕಾರಣದಿಂದಲೇ. ನಾನು ನನ್ನ ಕೈಗಳನ್ನು ನಿನ್ನ ಮೇಲಿಟ್ಟಾಗ ಆತನು ನಿನಗೆ ಆ ವರವನ್ನು ದಯಪಾಲಿಸಿದನು. ಬೆಂಕಿಯ ಕಿಡಿಯು ಪ್ರಜ್ವಲವಾಗಿ ದಟ್ಟವಾದ ಬೆಂಕಿಯಾಗುವಂತೆ ನಿನ್ನ ವರವನ್ನು ಉಪಯೋಗಿಸುತ್ತಾ ಅದನ್ನು ಅಧಿಕಗೊಳಿಸಬೇಕೆಂಬುದು ನನ್ನ ಅಪೇಕ್ಷೆ. ದೇವರು ನಮಗೆ ಕೊಟ್ಟದ್ದು ನಮ್ಮನ್ನು ಹೇಡಿಗಳನ್ನಾಗಿ ಮಾಡುವ ಆತ್ಮವನ್ನಲ್ಲ. ನಮ್ಮನ್ನು ಬಲದಿಂದ, ಪ್ರೀತಿಯಿಂದ ಮತ್ತು ಸ್ವಶಿಕ್ಷಣದಿಂದ ತುಂಬಿಸುವ ಆತ್ಮವನ್ನು ಆತನು ಕೊಟ್ಟನು.

ನಮ್ಮ ಪ್ರಭುವಾದ ಯೇಸುವನ್ನು ಕುರಿತು ಜನರಿಗೆ ತಿಳಿಸುವುದಕ್ಕಾಗಲಿ ಪ್ರಭುವಿಗಾಗಿ ಸೆರೆಯಲ್ಲಿರುವ ನನ್ನ ವಿಷಯದಲ್ಲಾಗಲಿ ನಾಚಿಕೆಪಟ್ಟುಕೊಳ್ಳಬೇಡ. ಅದಕ್ಕೆ ಬದಲಾಗಿ ಸುವಾರ್ತೆಗೋಸ್ಕರ ನನ್ನೊಡನೆ ಸಂಕಟವನ್ನು ಅನುಭವಿಸು. ಅದಕ್ಕೆ ಬೇಕಾದ ಶಕ್ತಿಯನ್ನು ದೇವರೇ ನಮಗೆ ದಯಪಾಲಿಸುತ್ತಾನೆ.

ಆತನು ನಮ್ಮನ್ನು ರಕ್ಷಿಸಿ, ತನ್ನ ಪವಿತ್ರ ಜನರಾಗಿರುವುದಕ್ಕಾಗಿ ನಮ್ಮನ್ನು ಕರೆದನು. ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದ ಹೀಗಾಯಿತು ಎಂದಲ್ಲ. ಆತನು ತನ್ನ ಸಂಕಲ್ಪಕ್ಕನುಸಾರವಾಗಿ ಮತ್ತು ಕೃಪೆಗನುಸಾರವಾಗಿ ನಮ್ಮನ್ನು ರಕ್ಷಿಸಿ ತನ್ನವರನ್ನಾಗಿ ಮಾಡಿದನು. ಅನಾದಿಕಾಲದಲ್ಲಿಯೇ ಈ ಕೃಪೆಯು ಕ್ರಿಸ್ತ ಯೇಸುವಿನ ಮೂಲಕ ನಮಗೆ ದೊರೆಯಿತು. 10 ಆ ಕೃಪೆಯನ್ನು ಈವರೆಗೆ ನಮಗೆ ತೋರ್ಪಡಿಸಿರಲಿಲ್ಲ. ನಮ್ಮ ರಕ್ಷಕನಾದ ಕ್ರಿಸ್ತ ಯೇಸು ಪ್ರತ್ಯಕ್ಷನಾದಾಗ ಅದನ್ನು ನಮಗೆ ತೋರಿಸಲಾಯಿತು. ಯೇಸು ಮರಣವನ್ನು ನಾಶಪಡಿಸಿ, ನಮಗೆ ಜೀವಮಾರ್ಗವನ್ನು ಸುವಾರ್ತೆಯ ಮೂಲಕ ತೋರಿದನು.

11 ಆ ಸುವಾರ್ತೆಗೋಸ್ಕರ ನನ್ನನ್ನು ಪ್ರಚಾರಕನನ್ನಾಗಿಯೂ ಅಪೊಸ್ತಲನನ್ನಾಗಿಯೂ ಉಪದೇಶಕನನ್ನಾಗಿಯೂ ಆರಿಸಿಕೊಳ್ಳಲಾಯಿತು. 12 ಸುವಾರ್ತೆಯನ್ನು ತಿಳಿಸಿದ್ದರಿಂದಲೇ ನಾನೀಗ ಸಂಕಟವನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲೆನು. ಆತನು ನನ್ನ ವಶಕ್ಕೆ ಒಪ್ಪಿಸಿರುವುದನ್ನು ಆ ದಿನವು ಬರುವತನಕ ಸಂರಕ್ಷಿಸಲು ಆತನು ಸಮರ್ಥನೆಂಬುದನ್ನು ಖಚಿತವಾಗಿ ಬಲ್ಲೆನು.

13 ನನ್ನಿಂದ ಕೇಳಿರುವ ಸತ್ಯಬೋಧನೆಗಳನ್ನು ಅನುಸರಿಸು. ನೀನು ಏನನ್ನು ಉಪದೇಶ ಮಾಡಬೇಕೆಂಬುದಕ್ಕೆ ಆ ಬೋಧನೆಗಳೇ ನಿನಗೆ ದೃಷ್ಟಾಂತಗಳಾಗಿವೆ. 14 ನಿನ್ನ ವಶಕ್ಕೆ ಕೊಟ್ಟಿರುವ ಸತ್ಯವನ್ನು ಪವಿತ್ರಾತ್ಮನ ಸಹಾಯದಿಂದ ಸಂರಕ್ಷಿಸು. ಆತನು ನಮ್ಮೊಳಗೆ ವಾಸ ಮಾಡುತ್ತಿದ್ದಾನೆ.

15 ಏಷ್ಯಾ ದೇಶದಲ್ಲಿರುವವರೆಲ್ಲರೂ ನನ್ನನ್ನು ತೊರೆದಿರುವರೆಂಬುದು ನಿನಗೆ ತಿಳಿದಿದೆ. ಪುಗೇಲನೂ, ಹೆರ್ಮೊಗೇನನೂ ನನ್ನನ್ನು ತೊರೆದಿದ್ದಾರೆ. 16 ಪ್ರಭುವು ಒನೇಸಿಫ್ರೋರನ ಕುಟುಂಬಕ್ಕೆ ಕರುಣೆಯನ್ನು ತೋರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವನು ಅನೇಕ ಸಂದರ್ಭಗಳಲ್ಲಿ ನನಗೆ ಸಹಾಯ ಮಾಡಿದ್ದಾನೆ. ನಾನು ಸೆರೆಮನೆಯಲ್ಲಿದ್ದರೂ ಅವನು ನಾಚಿಕೆಪಟ್ಟುಕೊಳ್ಳಲಿಲ್ಲ. 17 ಅವನು ರೋಮಿಗೆ ಬಂದಾಗ, ಬಹಳ ಹುಡುಕಾಡಿ ನನ್ನನ್ನು ಸಂಧಿಸಿದನು. 18 ಆ ದಿನದಂದು ಒನೇಸಿಫೋರನು ಪ್ರಭುವಿನಿಂದ ಕರುಣೆಯನ್ನು ಪಡೆಯಲಿ ಎಂದು ನಾನು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇನೆ. ಎಫೆಸದಲ್ಲಿ ಅವನು ನನಗೆ ಎಷ್ಟು ವಿಧದಲ್ಲಿ ಸಹಾಯ ಮಾಡಿದನೆಂಬುದು ನಿನಗೆ ತಿಳಿದಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International