Old/New Testament
ದುಷ್ಟರಾಜರ ವಿರುದ್ಧ ನ್ಯಾಯನಿರ್ಣಯ
22 ಯೆಹೋವನು ಹೇಳಿದನು: “ಯೆರೆಮೀಯನೇ, ರಾಜನ ಅರಮನೆಗೆ ಹೋಗು. ಯೆಹೂದದ ರಾಜನ ಬಳಿಗೆ ಹೋಗಿ ಅಲ್ಲಿ ಈ ಸಂದೇಶವನ್ನು ಸಾರು. 2 ‘ಯೆಹೂದದ ರಾಜನೇ, ಯೆಹೋವನಿಂದ ಬಂದ ಸಂದೇಶವನ್ನು ಕೇಳು. ನೀನು ದಾವೀದನ ಸಿಂಹಾಸನಾರೂಢನಾಗಿ ರಾಜ್ಯಭಾರ ಮಾಡುವೆ, ಅದಕ್ಕಾಗಿ ಕೇಳು. ರಾಜನೇ, ನೀನು ಮತ್ತು ನಿನ್ನ ಅಧಿಕಾರಿಗಳು ಚೆನ್ನಾಗಿ ಕೇಳಬೇಕು. ಜೆರುಸಲೇಮಿನ ದ್ವಾರಗಳ ಮೂಲಕ ಬರುವ ನಿನ್ನ ಜನರೆಲ್ಲರೂ ಯೆಹೋವನ ಸಂದೇಶವನ್ನು ಕೇಳಬೇಕು. 3 ಯೆಹೋವನು ಅನ್ನುತ್ತಾನೆ, ನಿಮ್ಮ ಆಚರಣೆ ನೀತಿಬದ್ಧವಾಗಿಯೂ ನ್ಯಾಯಬದ್ಧವಾಗಿಯೂ ಇರಲಿ. ಸುಲಿಗೆಗೀಡಾದವರನ್ನು ದೋಚಿಕೊಂಡವನಿಂದ ರಕ್ಷಿಸಿರಿ. ಅನಾಥರನ್ನು ಮತ್ತು ವಿಧವೆಯರನ್ನು ಹಿಂಸಿಸಬೇಡಿ; ನಿರಪರಾಧಿಗಳನ್ನು ಕೊಲ್ಲಬೇಡಿ. 4 ನೀವು ಈ ಆಜ್ಞೆಗಳನ್ನು ಪಾಲಿಸಿದರೆ ದಾವೀದನ ಸಿಂಹಾಸನಾರೂಢರಾದ ರಾಜರು ಈ ದ್ವಾರಗಳಿಂದ ಜೆರುಸಲೇಮ್ ನಗರವನ್ನು ಪ್ರವೇಶಿಸುವುದು ಮುಂದುವರೆಯುತ್ತದೆ. ಆ ರಾಜರು ತಮ್ಮ ಅಧಿಕಾರಿಗಳೊಂದಿಗೆ ಈ ದ್ವಾರಗಳಿಂದ ಬರುತ್ತಾರೆ. ಆ ಅರಸರು, ಅವರ ಅಧಿಕಾರಿಗಳು, ಅವರ ಜನರು, ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಕುಳಿತುಕೊಂಡು ಬರುವರು. 5 ನೀವು ಈ ಆಜ್ಞೆಗಳನ್ನು ಪಾಲಿಸದಿದ್ದರೆ ರಾಜನ ಅರಮನೆಯನ್ನು ನಾಶಮಾಡಲಾಗುವುದು. ಅದು ಕಲ್ಲುಬಂಡೆಗಳ ರಾಶಿಯಾಗುವದೆಂದು ಯೆಹೋವನಾದ ನಾನು ಆಣೆಯಿಟ್ಟುಕೊಂಡು ಹೇಳುತ್ತೇನೆ’” ಎಂದು ಯೆಹೋವನು ನುಡಿದನು.
6 ಯೆಹೂದದ ರಾಜನು ವಾಸಮಾಡುವ ಅರಮನೆಯ ಬಗ್ಗೆ ಯೆಹೋವನು ಹೀಗೆನ್ನುತ್ತಾನೆ:
“ಈ ಅರಮನೆಯು ಗಿಲ್ಯಾದಿನ ಅರಣ್ಯದಂತೆ,
ಲೆಬನೋನಿನ ಪರ್ವತದಂತೆ ಎತ್ತರವಾಗಿದೆ.
ಆದರೆ ನಾನು ಅದನ್ನು ನಿಜವಾಗಿ ಮರುಭೂಮಿಯಂತೆ ಮಾಡುತ್ತೇನೆ.
ಈ ಅರಮನೆಯು ಹಾಳುಬಿದ್ದ ನಗರದಂತಾಗುವುದು.
7 ಅರಮನೆಯನ್ನು ಹಾಳುಮಾಡಲು ನಾನು ಜನರನ್ನು ಕಳುಹಿಸುತ್ತೇನೆ.
ಪ್ರತಿಯೊಬ್ಬನ ಹತ್ತಿರ ಆ ಮನೆಯನ್ನು ಹಾಳುಮಾಡಲು ಬೇಕಾಗುವ ಸಾಧನಗಳಿರುವವು.
ಆ ಜನರು ನಿನ್ನ ಸುಂದರವಾದ ಮತ್ತು ಗಟ್ಟಿಯಾದ ದೇವದಾರಿನ ತೊಲೆಗಳನ್ನು ಕಡಿದುಹಾಕುತ್ತಾರೆ.
ಅವರು ಆ ತೊಲೆಗಳನ್ನು ಬೆಂಕಿಯಲ್ಲಿ ಎಸೆಯುತ್ತಾರೆ.
8 “ಅನೇಕ ಜನಾಂಗಗಳ ಜನರು ಈ ನಗರದಿಂದ ಹಾದುಹೋಗುವರು. ಅವರು, ‘ಜೆರುಸಲೇಮ್ ಒಂದು ಮಹಾನಗರವಾಗಿತ್ತು. ಯೆಹೋವನು ಜೆರುಸಲೇಮಿಗೆ ಇಂಥ ಭಯಂಕರ ಸ್ಥಿತಿಯನ್ನು ಏಕೆ ತಂದನು?’ ಎಂದು ಒಬ್ಬರನ್ನೊಬ್ಬರು ಕೇಳುವರು. 9 ಆ ಪ್ರಶ್ನೆಗೆ ಈ ಉತ್ತರ: ‘ಯೆಹೂದದ ಜನರು ತಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಅನುಸರಣೆಯನ್ನು ಬಿಟ್ಟುಬಿಟ್ಟರು. ಅವರು ಬೇರೆ ದೇವರುಗಳ ಸೇವೆಯನ್ನು ಮಾಡಿ ಪೂಜಿಸಿದರು.’”
ರಾಜನಾದ ಯೋಹಾಜನ ಬಗ್ಗೆ ನ್ಯಾಯನಿರ್ಣಯ
10 ಸತ್ತ ರಾಜನ ಬಗ್ಗೆ ಅಳಬೇಡಿ.
ಅವನಿಗೋಸ್ಕರ ಅಳಬೇಡಿ.
ಆದರೆ ಇಲ್ಲಿಂದ ಹೋಗುತ್ತಿರುವ
ರಾಜನ ಬಗ್ಗೆ ಗಟ್ಟಿಯಾಗಿ ರೋಧಿಸಿರಿ.
ಅವನು ಮತ್ತೆ ಇಲ್ಲಿಗೆ ಬರುವದಿಲ್ಲ. ಆದ್ದರಿಂದ ಅವನಿಗೋಸ್ಕರ ರೋಧಿಸಿರಿ.
ಯೋಹಾಜನು ತನ್ನ ಜನ್ಮಭೂಮಿಯನ್ನು ಮತ್ತೆಂದಿಗೂ ನೋಡುವುದಿಲ್ಲ.
11 ಯೋಷೀಯನ ಮಗನಾದ ಯೋಹಾಜನ (ಶಲ್ಲೂಮನ) ಬಗ್ಗೆ ಯೆಹೋವನು ಹೀಗೆಂದನು: (ಶಲ್ಲೂಮನು ತನ್ನ ತಂದೆಯಾದ ಯೋಷೀಯನ ಮರಣಾನಂತರ ರಾಜನಾದನು.) “ಯೋಹಾಜನು ಜೆರುಸಲೇಮಿನಿಂದ ಹೊರಟುಹೋದನು. ಅವನು ಮತ್ತೆಂದಿಗೂ ಜೆರುಸಲೇಮಿಗೆ ಹಿಂದಿರುಗುವುದಿಲ್ಲ. 12 ಈಜಿಪ್ಟಿನವರು ಅವನನ್ನು ತೆಗೆದುಕೊಂಡು ಹೋದ ಸ್ಥಳದಲ್ಲಿಯೇ ಸತ್ತುಹೋಗುವನು. ಅವನು ಮತ್ತೊಮ್ಮೆ ಈ ಪ್ರದೇಶವನ್ನು ನೋಡಲಾರನು.”
ರಾಜನಾದ ಯೆಹೋಯಾಕೀಮನ ಬಗ್ಗೆ ನ್ಯಾಯನಿರ್ಣಯ
13 “ರಾಜನಾದ ಯೆಹೋಯಾಕೀಮನಿಗೆ ದುರ್ಗತಿ ಉಂಟಾಗುವುದು.
ಅವನು ತನ್ನ ಅರಮನೆಯನ್ನು ಕಟ್ಟಿಸುವದಕ್ಕೋಸ್ಕರ ದುರ್ನೀತಿಯನ್ನು ಅವಲಂಭಿಸಿದ್ದಾನೆ.
ಮಹಡಿಯ ಮೇಲೆ ಕೋಣೆಗಳನ್ನು ಕಟ್ಟಿಸುವದಕ್ಕಾಗಿ ಅವನು ತನ್ನ ಜನರನ್ನು ವಂಚಿಸುತ್ತಿದ್ದಾನೆ.
ಅವನು ತನ್ನ ಜನರಿಂದ ಬಿಟ್ಟಿಕೆಲಸವನ್ನು ಮಾಡಿಸುತ್ತಿದ್ದಾನೆ.
ಅವರಿಂದ ಕೆಲಸ ಮಾಡಿಸಿಕೊಂಡು ಅವರಿಗೆ ಕೂಲಿಯನ್ನೇ ಕೊಡುವದಿಲ್ಲ.
14 “ಯೆಹೋಯಾಕೀಮನು,
‘ನಾನೇ ಒಂದು ದೊಡ್ಡ ಅರಮನೆಯನ್ನು ಕಟ್ಟಿಸುತ್ತೇನೆ.
ನಾನು ಮಹಡಿಯ ಮೇಲೆ ದೊಡ್ಡದೊಡ್ಡ ಕೋಣೆಗಳನ್ನು ಕಟ್ಟಿಸುತ್ತೇನೆ’ ಎಂದು ಹೇಳುತ್ತಾನೆ.
ಅವನು ದೊಡ್ಡದೊಡ್ಡ ಕಿಟಕಿಗಳುಳ್ಳ ಮನೆಯನ್ನು ಕಟ್ಟಿಸುತ್ತಾನೆ.
ದೇವದಾರಿನ ಹಲಗೆಗಳನ್ನು ಹೊದಿಸುತ್ತಾನೆ.
ಅದಕ್ಕೆ ಕೆಂಪು ಬಣ್ಣವನ್ನು ಬಳಿಯುತ್ತಾನೆ.
15 “ಯೆಹೋಯಾಕೀಮನೇ, ನಿನ್ನ ಮನೆಯಲ್ಲಿ ದೇವದಾರಿನ ಮರವನ್ನು
ಬಹಳವಾಗಿ ಇಟ್ಟುಕೊಳ್ಳುವದರಿಂದ ನೀನು ದೊಡ್ಡ ರಾಜನಾಗುವದಿಲ್ಲ.
ನಿನ್ನ ತಂದೆಯಾದ ಯೋಷೀಯನು ಅನ್ನಪಾನೀಯಗಳಿಂದ ತೃಪ್ತಿಪಟ್ಟುಕೊಳ್ಳುತ್ತಿದ್ದನು.
ಅವನು ನೀತಿ ಮತ್ತು ನ್ಯಾಯ ಸಮ್ಮತವಾದದ್ದನ್ನು ಮಾಡುತ್ತಿದ್ದನು.
ಯೋಷೀಯನು ಹಾಗೆ ಮಾಡಿದ್ದರಿಂದ ಎಲ್ಲವೂ ಸರಿಹೋಯಿತು.
16 ಯೋಷೀಯನು ದೀನದರಿದ್ರರಿಗೆ ಸಹಾಯ ಮಾಡುತ್ತಿದ್ದನು.
ಯೋಷೀಯನು ಹಾಗೆ ಮಾಡಿದ್ದರಿಂದ ಎಲ್ಲವೂ ಸರಿಹೋಯಿತು.
ಯೆಹೋಯಾಕೀಮನೇ, ‘ದೇವರನ್ನು ಅರಿತುಕೊಳ್ಳುವುದು ಎಂದರೇನು?’
ನ್ಯಾಯ ಮತ್ತು ನೀತಿಯಿಂದ ನಡೆದುಕೊಳ್ಳುವುದು,
ನನ್ನನ್ನು ಅರಿತುಕೊಳ್ಳಲು ಬೇಕಾದದ್ದು ಅದೇ.
ಇದು ಯೆಹೋವನಿಂದ ಬಂದ ಸಂದೇಶ:
17 “ಯೆಹೋಯಾಕೀಮನೇ, ನಿನಗೆ ಲಾಭದಾಯಕವಾದದ್ದು ಮಾತ್ರ ನಿನ್ನ ಕಣ್ಣಿಗೆ ಕಾಣುತ್ತದೆ.
ನೀನು ಯಾವಾಗಲೂ ನಿನಗೆ ಹೆಚ್ಚು ಲಾಭ ಬರುವದನ್ನು ನೋಡುವೆ.
ನೀನು ನಿರಪರಾಧಿಗಳನ್ನು ಕೊಲ್ಲಲು ಸಿದ್ಧನಾಗಿರುವೆ.
ನೀನು ಬೇರೆಯವರ ವಸ್ತುಗಳನ್ನು ಅಪಹರಿಸಲು ಸಿದ್ಧನಾಗಿರುವೆ.”
18 ಯೋಷೀಯನ ಮಗನಾದ ಯೆಹೋಯಾಕೀಮನಿಗೆ ಯೆಹೋವನು ಹೀಗೆ ಹೇಳುವನು,
“ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಗೋಳಾಡುವದಿಲ್ಲ.
ಅವರು ಒಬ್ಬರಿಗೊಬ್ಬರು,
‘ನನ್ನ ಸೋದರನೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ,
ನನ್ನ ಸೋದರಿಯೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ’ ಎಂದು ಹೇಳುವದಿಲ್ಲ.
ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಅಳುವದಿಲ್ಲ.
ಅವರು ಅವನ ಬಗ್ಗೆ
‘ಒಡೆಯನೇ, ನನ್ನ ರಾಜನೇ,
ನನಗೆ ತುಂಬಾ ದುಃಖವಾಗಿದೆ’ ಎಂದು ಹೇಳುವದಿಲ್ಲ.
19 ಜೆರುಸಲೇಮಿನ ಜನರು ಯೆಹೋಯಾಕೀಮನನ್ನು ಒಂದು ಕತ್ತೆಯನ್ನು ಹೂಳಿದಂತೆ ಹೂಳಿಬಿಡುತ್ತಾರೆ.
ಅವರು ಅವನ ಶವವನ್ನು ದೂರ ಎಳೆದುಕೊಂಡು ಹೋಗುತ್ತಾರೆ.
ಅವನ ಶವವನ್ನು ಜೆರುಸಲೇಮಿನ ದ್ವಾರಗಳ ಹೊರಗೆ ಎಸೆದುಬಿಡುತ್ತಾರೆ.
20 “ಯೆಹೂದವೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೊ,
ನಿನ್ನ ಧ್ವನಿಯು ಬಾಷಾನ್ ಪರ್ವತಗಳಲ್ಲಿ ಕೇಳಿಸಲಿ.
ಅಬಾರೀಮಿನಲ್ಲಿ ಅರಚಿಕೊ;
ಏಕೆಂದರೆ ನಿನ್ನ ‘ಪ್ರಿಯತಮರೆಲ್ಲರನ್ನೂ’ ನಾಶಮಾಡಲಾಗುವುದು.
21 “ಯೆಹೂದವೇ, ನೀನು ಸುರಕ್ಷಿತಳಾಗಿರುವೆ ಎಂದು ನೀನು ಭಾವಿಸಿಕೊಂಡಿರುವೆ.
ಆದರೆ ನಾನು ನಿನಗೆ ಎಚ್ಚರಿಕೆಯನ್ನು ಕೊಟ್ಟೆ.
ಹೌದು, ನಾನೇ ಎಚ್ಚರಿಕೆಯನ್ನು ಕೊಟ್ಟೆ,
ಆದರೆ ನೀನು ಅದನ್ನು ಕಿವಿಗೆ ಹಾಕಿಕೊಳ್ಳಲು ಒಪ್ಪಲಿಲ್ಲ.
ನಿನ್ನ ಬಾಲ್ಯದಿಂದಲೂ ನೀನು ಹೀಗೆಯೇ ಮಾಡಿದೆ.
ಯೆಹೂದವೇ, ನಿನ್ನ ಬಾಲ್ಯದಿಂದಲೂ
ನೀನು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ.
22 ಯೆಹೂದವೇ, ನನ್ನ ದಂಡನೆಯು ಒಂದು ಬಿರುಗಾಳಿಯಂತೆ ಬರುವುದು.
ಅದು ನಿನ್ನ ಎಲ್ಲಾ ಕುರುಬರನ್ನು (ನಾಯಕರನ್ನು) ಹಾರಿಸಿಕೊಂಡು ಹೋಗುವುದು.
ಯಾವುದಾದರೂ ಬೇರೆ ಜನಾಂಗ ನಿನಗೆ ಸಹಾಯಮಾಡಬಹುದೆಂದು ನೀನು ಭಾವಿಸಿಕೊಂಡಿರುವೆ.
ಆದರೆ ಆ ಜನಾಂಗಗಳನ್ನೂ ಸೋಲಿಸಲಾಗುವುದು.
ಆಗ ನಿನಗೆ ನಿಜವಾಗಿಯೂ ಆಶಾಭಂಗವಾಗುವುದು.
ನೀನು ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನೀನು ನಾಚಿಕೆಪಡುವೆ.
23 “ರಾಜನೇ, ಬೆಟ್ಟದ ಮೇಲೆ ದೇವದಾರು ಮರದಿಂದ ಮಾಡಿದ ನಿನ್ನ ಮನೆಯಲ್ಲಿ ನೀನು ವಾಸಿಸುವೆ.
ಆ ಮನೆಯು ಲೆಬನೋನಿನ ಮರದ ತೋಪಿನಂತಿದೆ.
ನೀನು ಎತ್ತರವಾದ ಪರ್ವತ ಪ್ರದೇಶದಲ್ಲಿದ್ದ
ನಿನ್ನ ವಿಶಾಲವಾದ ಮನೆಯಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿದುಕೊಂಡಿರುವೆ.
ಆದರೆ ನಿನಗೆ ದಂಡನೆಯಾದಾಗ ನೀನು ನರಳುವೆ.
ಪ್ರಸವವೇದನೆಯಂಥ ನೋವನ್ನು ನೀನು ಅನುಭವಿಸುವೆ.”
ರಾಜನಾದ ಯೆಹೋಯಾಚೀನನ ಬಗ್ಗೆ ನ್ಯಾಯನಿರ್ಣಯ
24 ಯೆಹೋವನು ಹೀಗೆನ್ನುತ್ತಾನೆ: “ಯೆಹೋಯಾಕೀಮನ ಮಗನೂ ಯೆಹೂದದ ರಾಜನೂ ಆಗಿರುವ ಯೆಹೋಯಾಚೀನನೇ, ನನ್ನ ಜೀವದಾಣೆಯಾಗಿಯೂ ನಿನಗೆ ಹೀಗೆ ಮಾಡುವೆನು. ನೀನು ನನ್ನ ಬಲಗೈಯ ಮುದ್ರೆಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುವೆನು. 25 ಯೆಹೋಯಾಚೀನನೇ, ನಾನು ನಿನಗೆ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಮತ್ತು ಕಸ್ದೀಯರ ಕೈಗೆ ಕೊಟ್ಟುಬಿಡುವೆನು. ನೀನು ಹೆದರಿಕೊಂಡಿರುವುದು ಆ ಜನರಿಗೇ. ಆ ಜನರು ನಿನ್ನನ್ನು ಕೊಲ್ಲಬಯಸುತ್ತಾರೆ. 26 ನಾನು ನಿನ್ನನ್ನೂ ನಿನ್ನ ತಾಯಿಯನ್ನೂ ನಿಮ್ಮಿಬ್ಬರ ಜನ್ಮಸ್ಥಳವಲ್ಲದ ಬೇರೆ ದೇಶದಲ್ಲಿ ಎಸೆದುಬಿಡುತ್ತೇನೆ. ನೀನು ಮತ್ತು ನಿನ್ನ ತಾಯಿ ಆ ದೇಶದಲ್ಲಿ ಸತ್ತುಹೋಗುವಿರಿ. 27 ಯೆಹೋಯಾಚೀನನೇ, ನೀನು ನಿನ್ನ ದೇಶಕ್ಕೆ ಹಿಂದಿರುಗಬೇಕೆಂದು ಅಪೇಕ್ಷಿಸಿದರೂ ನಿನಗೆ ಬರಲು ಸಾಧ್ಯವಾಗದು.”
28 ಯೆಹೋಯಾಚೀನನು ಎಸೆಯಲ್ಪಟ್ಟ ಒಡೆದ ಮಡಕೆಯಂತಿದ್ದಾನೆ.
ಅವನು ಯಾರಿಗೂ ಬೇಡವಾಗದ ಮಡಕೆಯಂತಿದ್ದಾನೆ.
ಯೆಹೋಯಾಚೀನನು ಮತ್ತು ಅವನ ಮಕ್ಕಳು ಏಕೆ ಹೊರಗೆ ಎಸೆಯಲ್ಪಡುವರು?
ಅವರು ಪರದೇಶಕ್ಕೆ ಏಕೆ ಒಯ್ಯಲ್ಪಡುವರು?
29 ದೇಶವೇ, ದೇಶವೇ, ಯೆಹೂದದ ದೇಶವೇ,
ಯೆಹೋವನ ಸಂದೇಶವನ್ನು ಕೇಳು.
30 ಯೆಹೋವನು ಹೇಳುವುದೇನೆಂದರೆ: “ಯೆಹೋಯಾಚೀನನು ಮಕ್ಕಳಿಲ್ಲದವನೆಂದು ನೊಂದಾಯಿಸಿರಿ.
ಯೆಹೋಯಾಚೀನನು ತನ್ನ ಜೀವನದಲ್ಲಿ ಯಶಸ್ವಿಯಾಗುವುದಿಲ್ಲ.
ಅವನ ಮಕ್ಕಳಲ್ಲಿ ಯಾರೂ ದಾವೀದನ ಸಿಂಹಾಸನವನ್ನೇರುವದಿಲ್ಲ.
ಅವನ ಮಕ್ಕಳಲ್ಲಿ ಯಾರೂ ಯೆಹೂದದಲ್ಲಿ ರಾಜ್ಯಭಾರ ಮಾಡುವುದಿಲ್ಲ.”
23 ಯೆಹೋವನ ಸಂದೇಶವಿದು: “ಯೆಹೂದದ ಕುರುಬರಿಗೆ ಒಳ್ಳೆಯದಾಗುವದಿಲ್ಲ. ಈ ಕುರುಬರು ಕುರಿಗಳನ್ನು ಹಾಳುಮಾಡುತ್ತಿದ್ದಾರೆ. ಅವರು ನನ್ನ ಹುಲ್ಲುಗಾವಲಿನಿಂದ ಕುರಿಗಳು ಎಲ್ಲಾ ದಿಕ್ಕುಗಳಿಗೂ ಓಡಿಹೋಗುವಂತೆ ಮಾಡುತ್ತಿದ್ದಾರೆ.”
2 ಆ ಕುರುಬರು ನನ್ನ ಜನರಿಗೆ ಹೊಣೆಗಾರರಾಗಿದ್ದಾರೆ. ಇಸ್ರೇಲಿನ ದೇವರಾದ ಯೆಹೋವನು ಆ ಕುರುಬರಿಗೆ ಹೀಗೆ ಹೇಳುತ್ತಾನೆ, “ನನ್ನ ಕುರಿಗಳು ಎಲ್ಲಾ ದಿಕ್ಕುಗಳಿಗೂ ಚದರುವಂತೆ ನೀವು ಮಾಡಿರುವಿರಿ. ನೀವು ಅವುಗಳನ್ನು ಓಡಿಸಿಬಿಟ್ಟಿದ್ದೀರಿ. ನೀವು ಅವುಗಳ ಯೋಗಕ್ಷೇಮವನ್ನು ನೋಡಿಕೊಳ್ಳಲಿಲ್ಲ. ಈಗ ನಾನು ನಿಮ್ಮನ್ನು ವಿಚಾರಿಸಿಕೊಳ್ಳುತ್ತೇನೆ. ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಿಮ್ಮನ್ನು ದಂಡಿಸುತ್ತೇನೆ.” ಯೆಹೋವನು ಹೀಗೆ ಹೇಳಿದನು. 3 “ನಾನು ನನ್ನ ಕುರಿಗಳನ್ನು ಬೇರೆ ದೇಶಗಳಿಗೆ ಕಳುಹಿಸಿದೆ. ಆದರೆ ಉಳಿದ ನನ್ನ ಕುರಿಗಳನ್ನು ಒಂದೆಡೆ ಸೇರಿಸುವೆನು. ಅವುಗಳನ್ನು ಅವುಗಳ ಹುಲ್ಲುಗಾವಲಿಗೆ ತರುವೆನು. ಅವುಗಳಿಗೆ ಅನೇಕ ಮಕ್ಕಳಾಗಿ ಅವುಗಳ ಸಂಖ್ಯೆ ಬೆಳೆಯುವುದು. 4 ನನ್ನ ಕುರಿಗಳನ್ನು ನೋಡಿಕೊಳ್ಳುವದಕ್ಕೆ ನಾನು ಹೊಸ ಕುರುಬರನ್ನು ನೇಮಿಸುವೆನು. ಆ ಕುರುಬರು ನನ್ನ ಕುರಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವರು. ನನ್ನ ಕುರಿಗಳು ಬೆದರುವದಿಲ್ಲ, ಭಯಪಡುವದಿಲ್ಲ. ನನ್ನ ಒಂದು ಕುರಿಯೂ ಕಳೆದುಹೋಗುವದಿಲ್ಲ.” ಇದು ಯೆಹೋವನ ಸಂದೇಶ.
ಸದ್ಧರ್ಮದ ಸಸಿ
5 ಇದು ಯೆಹೋವನ ಸಂದೇಶ:
“ನಾನು ಒಳ್ಳೆಯ ‘ಸಸಿಯನ್ನು’ ಚಿಗುರಿಸುವ ಕಾಲ ಬಂದಿದೆ.
ಅವನು ಬುದ್ಧಿವಂತಿಕೆಯಿಂದ ಆಳುವ ರಾಜನಾಗಿರುವನು.
ಅವನು ದೇಶದಲ್ಲಿ ನೀತಿ ಮತ್ತು ನ್ಯಾಯಬದ್ಧವಾದದ್ದನ್ನು ಮಾಡುವನು.
6 ಸದ್ಧರ್ಮದ ‘ಸಸಿಯ’ ಸಮಯದಲ್ಲಿ ಯೆಹೂದದ ಜನರು ರಕ್ಷಿಸಲ್ಪಡುವರು
ಮತ್ತು ಇಸ್ರೇಲ್ ಸುರಕ್ಷಿತವಾಗಿರುವುದು.
ಯೆಹೋವನೇ, ನಮ್ಮ ಸದ್ಧರ್ಮ
ಎಂಬ ಹೆಸರು ಅವನಿಗಾಗುವುದು.”
7 ಇದು ಯೆಹೋವನಿಂದ ಬಂದ ಸಂದೇಶ: “ಜನರು ಇನ್ನು ಮೇಲೆ ದೇವರ ಆಣೆಯನ್ನು ಹಳೆಯ ರೀತಿಯಲ್ಲಿ ಹೇಳಲಾರದ ಕಾಲ ಬರುತ್ತಿದೆ. ‘ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದ ಯೆಹೋವನ ಆಣೆ’ ಎಂಬುದು ದೇವರ ಆಣೆಯ ಹಳೆಯ ರೀತಿಯಾಗಿತ್ತು. 8 ಆದರೆ ಹೊಸ ಕಾಲ ಬರಲಿದೆ. ಆಗ, ‘ಇಸ್ರೇಲರನ್ನು ಉತ್ತರದ ನಾಡಿನಿಂದಲೂ ಅವರನ್ನು ಚದರಿಸಿಬಿಟ್ಟಿದ್ದ ಎಲ್ಲ ದೇಶಗಳಿಂದಲೂ ಹೊರತಂದ ಯೆಹೋವನಾಣೆ’ ಎಂದು ಹೇಳುವರು. ಆಗ ಇಸ್ರೇಲರು ಸ್ವದೇಶದಲ್ಲಿ ನೆಲಸುವರು.”
ಸುಳ್ಳುಪ್ರವಾದಿಗಳ ಬಗ್ಗೆ ನ್ಯಾಯನಿರ್ಣಯ
9 ಪ್ರವಾದಿಗಳಿಗೊಂದು ಸಂದೇಶ.
ನಾನು ಬಹಳ ದುಃಖಿತನಾಗಿದ್ದೇನೆ. ನನ್ನ ಹೃದಯ ಒಡೆದುಹೋಗಿದೆ.
ನನ್ನ ಎಲುಬುಗಳೆಲ್ಲಾ ನಡುಗುತ್ತಿವೆ.
ನಾನು ಅಮಲೇರಿದವನಂತಿದ್ದೇನೆ.
ಯೆಹೋವನೂ ಆತನ ಪರಿಶುದ್ಧ ನುಡಿಗಳೂ ಇದಕ್ಕೆ ಕಾರಣ.
10 ಯೆಹೂದ ದೇಶವು ವ್ಯಭಿಚಾರಿಗಳಿಂದ ತುಂಬಿಹೋಗಿದೆ.
ಅವರು ಅನೇಕ ರೀತಿಯಲ್ಲಿ ಅಪನಂಬಿಗಸ್ತರಾಗಿದ್ದಾರೆ.
ಯೆಹೋವನು ನಾಡನ್ನು ಶಪಿಸಿದ್ದರಿಂದ
ಅದು ಬರಡು ಭೂಮಿಯಾಯಿತು.
ಹುಲ್ಲುಗಾವಲಿನ ಸಸಿಗಳು ಒಣಗಿ ಸತ್ತುಹೋಗುತ್ತಲಿವೆ.
ಹೊಲಗಳು ಮರುಭೂಮಿಯಂತಾಗಿವೆ.
ಪ್ರವಾದಿಗಳು ಸೆರೆ ಒಯ್ಯಲ್ಪಟ್ಟಿದ್ದಾರೆ.
ಆ ಪ್ರವಾದಿಗಳು ತಮ್ಮ ಪ್ರಭಾವವನ್ನೂ ಶಕ್ತಿಯನ್ನೂ ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ.
11 “ಪ್ರವಾದಿಗಳೂ ಯಾಜಕರೂ ದುಷ್ಟರಾಗಿದ್ದಾರೆ.
ಅವರು ನನ್ನ ಪವಿತ್ರಾಲಯದಲ್ಲಿಯೇ ದುಷ್ಕೃತ್ಯಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ.
ಇದು ಯೆಹೋವನಿಂದ ಬಂದ ಸಂದೇಶ.
12 ಆದ್ದರಿಂದ ನಾನು ಅವರಿಗೆ ನನ್ನ ಸಂದೇಶಗಳನ್ನು ಇನ್ನು ಮೇಲೆ ಕೊಡುವುದಿಲ್ಲ.
ಆಗ ಅವರು ಕತ್ತಲಲ್ಲಿ ನಡೆಯಬೇಕಾಗುವುದು.
ಆ ಪ್ರವಾದಿಗಳ ಮತ್ತು ಯಾಜಕರ ಮಾರ್ಗಗಳು ಜಾರುವ ದಾರಿಗಳಾಗಿವೆ.
ಆ ಪ್ರವಾದಿಗಳು ಮತ್ತು ಯಾಜಕರು ಕತ್ತಲಲ್ಲಿ ಬೀಳುವರು.
ನಾನು ಅವರಿಗೆ ಕೇಡನ್ನು ಬರಮಾಡಿ
ಅವರನ್ನು ದಂಡಿಸುವೆನು.”
ಇದು ಯೆಹೋವನಿಂದ ಬಂದ ಸಂದೇಶ.
13 “ಸಮಾರ್ಯದ ಪ್ರವಾದಿಗಳು ಕೆಟ್ಟದ್ದಾಗಿ ನಡೆದುಕೊಂಡದ್ದನ್ನು ನಾನು ನೋಡಿದ್ದೇನೆ.
ಅವರು ಬಾಳ್ ದೇವತೆಗೋಸ್ಕರ ಆವೇಶದಿಂದ ಪ್ರವಾದಿಸಿದ್ದನ್ನು ನಾನು ಕಂಡಿದ್ದೇನೆ.
ಆ ಪ್ರವಾದಿಗಳು ಇಸ್ರೇಲಿನ ಜನರನ್ನು ಯೆಹೋವನಿಂದ ದೂರ ತೆಗೆದುಕೊಂಡು ಹೋಗಿದ್ದಾರೆ.
14 ಯೆಹೂದದ ಪ್ರವಾದಿಗಳು ಜೆರುಸಲೇಮಿನಲ್ಲಿ
ಭಯಂಕರ ದುಷ್ಕೃತ್ಯಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ.
ಈ ಪ್ರವಾದಿಗಳು ವ್ಯಭಿಚಾರ ಮಾಡುತ್ತಾರೆ.
ಅವರು ಸುಳ್ಳುಗಳನ್ನು ಕೇಳಿ, ಆ ಸುಳ್ಳುಬೋಧನೆಗಳನ್ನು ಪಾಲಿಸುತ್ತಾರೆ.
ಅವರು ದುಷ್ಟರಿಗೆ ಅವರ ದುಷ್ಟತನವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಾರೆ.
ಆದ್ದರಿಂದ ಜನರು ಪಾಪಮಾಡುವುದನ್ನು ನಿಲ್ಲಿಸಲಿಲ್ಲ.
ಅವರೆಲ್ಲರು ನನಗೆ ಸೊದೋಮ್ ನಗರದಂತೆ ಇದ್ದಾರೆ.
ಜೆರುಸಲೇಮಿನ ಜನರು ಗೊಮೋರ ನಗರದಂತೆ ಇದ್ದಾರೆ.”
15 ಸರ್ವಶಕ್ತನಾದ ಯೆಹೋವನು ಪ್ರವಾದಿಗಳ ಬಗ್ಗೆ ಹೀಗೆನ್ನುತ್ತಾನೆ,
“ನಾನು ಆ ಪ್ರವಾದಿಗಳನ್ನು ದಂಡಿಸುವೆನು.
ಆ ಶಿಕ್ಷೆಯು ವಿಷಪೂರಿತ ಆಹಾರದಂತೆಯೂ ನೀರಿನಂತೆಯೂ ಇರುವುದು.
ಪ್ರವಾದಿಗಳು ಒಂದು ಆಧ್ಯಾತ್ಮಿಕ ವ್ಯಾಧಿಯನ್ನು ಪ್ರಾರಂಭಿಸಿದರು.
ಆ ವ್ಯಾಧಿಯು ಇಡೀ ದೇಶದಲ್ಲೆಲ್ಲ ಪ್ರಸರಿಸಿತು.
ಆದ್ದರಿಂದ ನಾನು ಆ ಪ್ರವಾದಿಗಳನ್ನು ಶಿಕ್ಷಿಸುತ್ತೇನೆ.
ಆ ವ್ಯಾಧಿಯು ಆ ಪ್ರವಾದಿಗಳಿಂದ ಜೆರುಸಲೇಮಿಗೆ ಬಂದಿತು.”
16 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
“ಆ ಪ್ರವಾದಿಗಳು ನಿಮಗೆ ಹೇಳುತ್ತಿರುವ ವಿಷಯಗಳ ಕಡೆಗೆ ಗಮನ ಕೊಡಬೇಡಿರಿ.
ಅವರು ನಿಮ್ಮನ್ನು ಮರುಳುಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಅವರು ದರ್ಶನಗಳ ಬಗ್ಗೆ ಹೇಳುತ್ತಾರೆ.
ಅವರ ದರ್ಶನಗಳು ಅವರ ಮನಸ್ಸಿನಿಂದ ಬಂದವುಗಳೇ ಹೊರತು ನನ್ನಿಂದ ಬಂದವುಗಳಲ್ಲ.
17 ಕೆಲವು ಜನರು ಯೆಹೋವನ ನಿಜವಾದ ಸಂದೇಶಗಳನ್ನು ದ್ವೇಷಿಸುತ್ತಾರೆ.
ಆದ್ದರಿಂದ ಆ ಪ್ರವಾದಿಗಳು ಆ ಜನರಿಗೆ ಬೇರೆಯದನ್ನೇ ಹೇಳುತ್ತಾರೆ.
ಅವರು ‘ನಿಮಗೆ ಶುಭವಾಗುವುದು’ ಎನ್ನುತ್ತಾರೆ.
ಕೆಲವು ಜನರು ಬಹಳ ಮೊಂಡರಾಗಿದ್ದಾರೆ.
ಅವರು ತಮ್ಮ ಮನಸ್ಸಿಗೆ ಬಂದುದನ್ನೇ ಮಾಡುತ್ತಾರೆ.
ಅವರಿಗೆ ಈ ಪ್ರವಾದಿಗಳು ‘ನಿಮಗೆ ಯಾವ ಕೇಡೂ ಸಂಭವಿಸುವದಿಲ್ಲ’ ಎಂದು ಹೇಳುತ್ತಾರೆ.
18 ಈ ಪ್ರವಾದಿಗಳಲ್ಲಿ ಒಬ್ಬನಾದರೂ ಪರಲೋಕದ ಸಭೆಯಲ್ಲಿ ನಿಂತಿಲ್ಲ.
ಒಬ್ಬನಾದರೂ ಯೆಹೋವನ ಸಂದೇಶವನ್ನು ಕೇಳಿಲ್ಲ, ಅಥವಾ ನೋಡಿಲ್ಲ.
ಒಬ್ಬನಾದರೂ ಆತನ ಸಂದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿಲ್ಲ.
19 ಈಗ ಯೆಹೋವನಿಂದ ದಂಡನೆಯು ಬಿರುಗಾಳಿಯಂತೆ ಬರುವುದು.
ಯೆಹೋವನ ಕೋಪವು ತೂಫಾನಿನಂತೆ
ದುಷ್ಟರ ತಲೆಯ ಮೇಲೆ ಆರ್ಭಟಿಸಿ ಬೀಳುವುದು.
20 ಆತನು ಮಾಡಬೇಕೆಂದು ಯೋಜಿಸಿದ್ದನ್ನು ಮಾಡಿ ಮುಗಿಸುವವರೆಗೆ
ಆತನ ಕೋಪವು ಕಡಿಮೆಯಾಗುವುದಿಲ್ಲ.
ಆ ದಿನವಾದ ಮೇಲೆ ನೀವು ಇದನ್ನು
ಸರಿಯಾಗಿ ಅರ್ಥಮಾಡಿಕೊಳ್ಳುವಿರಿ.
21 ನಾನು ಆ ಪ್ರವಾದಿಗಳನ್ನು ಕಳುಹಿಸಲಿಲ್ಲ.
ಆದರೂ ಅವರು ತಮ್ಮ ಸಂದೇಶವನ್ನು ಕೊಡಲು ಆತುರಪಟ್ಟರು.
ನಾನು ಅವರೊಂದಿಗೆ ಮಾತನಾಡಲಿಲ್ಲ
ಆದರೂ ಅವರು ನನ್ನ ಹೆಸರು ಹೇಳಿ ಉಪದೇಶ ಮಾಡಿದರು.
22 ಅವರು ನನ್ನ ಪರಲೋಕದ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದಲ್ಲಿ
ಅವರು ನನ್ನ ಸಂದೇಶಗಳನ್ನು ಯೆಹೂದದ ಜನರಿಗೆ ಹೇಳಬಹುದಾಗಿತ್ತು.
ಅವರ ಕೆಟ್ಟತನವನ್ನೂ
ದುಷ್ಟತನವನ್ನೂ ತಡೆಯಬಹುದಾಗಿತ್ತು.”
23 ಈ ಸಂದೇಶ ಯೆಹೋವನಿಂದ ಬಂದಿತು:
“ನಾನೇ ಯೆಹೋವನು. ನಾನು ಯಾವಾಗಲೂ ಸಮೀಪವಾಗಿದ್ದೇನೆ.
ನಾನು ಬಹಳ ದೂರವಿಲ್ಲ.
24 ಒಬ್ಬನು ನನಗೆ ಕಾಣದಂತೆ ಗುಪ್ತವಾದ ಸ್ಥಳದಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದರೂ
ನಾನು ಅವನನ್ನು ಸರಾಗವಾಗಿ ನೋಡಬಲ್ಲೆನು.
ನಾನು ಭೂಮ್ಯಾಕಾಶಗಳ ಎಲ್ಲಾ ಕಡೆಗಳಲ್ಲೂ ಇದ್ದೇನೆ.”
ಯೆಹೋವನೇ ಇವುಗಳನ್ನು ಹೇಳಿದ್ದಾನೆ. 25 “ನನ್ನ ಹೆಸರಿನಿಂದ ಸುಳ್ಳುಬೋಧನೆ ಮಾಡುವ ಪ್ರವಾದಿಗಳಿದ್ದಾರೆ. ಅವರು ‘ನಾನೊಂದು ಕನಸು ಕಂಡೆ, ನಾನೊಂದು ಕನಸು ಕಂಡೆ’ ಎಂದು ಹೇಳುತ್ತಾರೆ. 26 ಎಷ್ಟು ದಿನ ಹೀಗೆ ನಡೆಯುವುದು? ಆ ಪ್ರವಾದಿಗಳು ಸುಳ್ಳುಗಳನ್ನೇ ಯೋಚಿಸುತ್ತಾರೆ. ಆಮೇಲೆ ಆ ಸುಳ್ಳುಗಳನ್ನೇ ಜನರಿಗೆ ಬೋಧಿಸುತ್ತಾರೆ. 27 ಯೆಹೂದದ ಜನರು ನನ್ನ ಹೆಸರನ್ನು ಮರೆಯುವಂತೆ ಅವರು ಪ್ರಯತ್ನ ಮಾಡುತ್ತಿದ್ದಾರೆ. ಅವರು ಒಬ್ಬರಿಗೊಬ್ಬರು ಈ ಸುಳ್ಳು ಕನಸುಗಳ ಬಗ್ಗೆ ಹೇಳಿ ಹೀಗೆ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನನ್ನು ಮರೆತಂತೆಯೇ ನನ್ನ ಜನರು ಸಹ ನನ್ನನ್ನು ಮರೆಯಲೆಂದು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನನ್ನು ಮರೆತು ಸುಳ್ಳುದೇವರಾದ ಬಾಳನನ್ನು ಪೂಜಿಸಿದರು. 28 ಹೊಟ್ಟು, ಗೋಧಿಯ ಕಾಳಲ್ಲ. ಅದೇ ರೀತಿ, ಆ ಪ್ರವಾದಿಗಳ ಕನಸುಗಳು ನನ್ನ ಸಂದೇಶಗಳಲ್ಲ. ಒಬ್ಬ ವ್ಯಕ್ತಿಗೆ ತನ್ನ ಕನಸಿನ ಬಗ್ಗೆ ಹೇಳಬೇಕೆನಿಸಿದರೆ, ಅವನು ಹೇಳಲಿ. ಆದರೆ ನನ್ನ ಸಂದೇಶವನ್ನು ಕೇಳಿದ ಮನುಷ್ಯನು ಆ ಸಂದೇಶವನ್ನು ಯಥಾರ್ಥವಾಗಿ ಹೇಳಲಿ. 29 ನನ್ನ ಸಂದೇಶವು ಬೆಂಕಿಯ ಜ್ವಾಲೆಯಂತಿದೆ. ಅದು ಕಲ್ಲುಬಂಡೆಯನ್ನು ಒಡೆದುಹಾಕುವ ಸುತ್ತಿಗೆಯಂತಿದೆ” ಇದು ಯೆಹೋವನ ನುಡಿ.
30 “ನಾನು ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಯೆಹೋವನ ನುಡಿ. “ಈ ಪ್ರವಾದಿಗಳು ನನ್ನ ಪದಗಳನ್ನು ಒಬ್ಬರಿಂದೊಬ್ಬರು ಕದಿಯುತ್ತಿದ್ದಾರೆ.[a] 31 ನಾನು ಸುಳ್ಳುಪ್ರವಾದಿಗಳನ್ನು ವಿರೋಧಿಸುತ್ತೇನೆ.” ಇದು ಯೆಹೋವನ ನುಡಿ. “ಅವರು ತಮ್ಮ ಮಾತುಗಳನ್ನು ಹೇಳಿ ಅದು ನನ್ನ ಸಂದೇಶವೆಂಬುವಂತೆ ನಟನೆ ಮಾಡುತ್ತಾರೆ. 32 ನಾನು ಕಾಲ್ಪನಿಕ ಕನಸುಗಳನ್ನು ಬೋಧಿಸುವ ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಪ್ರಭುವಿನ ನುಡಿ. “ಅವರು ತಮ್ಮ ಸುಳ್ಳುಬೋಧನೆಗಳಿಂದ ನನ್ನ ಜನರನ್ನು ಅಡ್ಡದಾರಿಗೆಳೆಯುತ್ತಾರೆ. ನಾನು ಜನರಿಗೆ ಉಪದೇಶ ಮಾಡುವದಕ್ಕಾಗಿ ಆ ಪ್ರವಾದಿಗಳನ್ನು ಕಳುಹಿಸಿಲ್ಲ. ನನಗೋಸ್ಕರವಾಗಿ ಏನನ್ನಾದರೂ ಮಾಡಲು ನಾನು ಅವರಿಗೆ ಎಂದೂ ಆಜ್ಞಾಪಿಸಿಲ್ಲ. ಅವರು ಯೆಹೂದದ ಜನರಿಗೆ ಸ್ವಲ್ಪವೂ ಸಹಾಯವನ್ನು ಮಾಡಲಾರರು” ಇದು ಯೆಹೋವನ ನುಡಿ.
ಯೆಹೋವನಿಂದ ದುಃಖಕರ ಸಂದೇಶ
33 “ಯೆಹೂದದ ಜನರಾಗಲಿ ಪ್ರವಾದಿಯಾಗಲಿ ಯಾಜಕನಾಗಲಿ ‘ಯೆರೆಮೀಯನೇ, ಯೆಹೋವನು ದಯಪಾಲಿಸಿರುವ ಪ್ರಕಟನೆಯೇನು?’ ಎಂದು ನಿನ್ನನ್ನು ಕೇಳಬಹುದು. ನೀನು ಅವರಿಗೆ, ‘ಯೆಹೋವನಿಗೆ ನೀವೇ ದೊಡ್ಡ ಭಾರ.[b] ನಾನು ಆ ಭಾರವನ್ನು ಕೆಳಗೆ ಎಸೆದುಬಿಡುತ್ತೇನೆ’” ಎಂದು ಉತ್ತರಿಸು. ಇದು ಯೆಹೋವನ ನುಡಿ.
34 “ಒಬ್ಬ ಪ್ರವಾದಿಯಾಗಲಿ ಯಾಜಕನಾಗಲಿ ಸಾಮಾನ್ಯ ಮನುಷ್ಯನಾಗಲಿ ‘ಇದು ಯೆಹೋವನ ಭಾರ’ ಎಂದು ಹೇಳಿದರೆ ಅವನು ಸುಳ್ಳು ಹೇಳಿದಂತೆಯೇ. ಆದ್ದರಿಂದ ನಾನು ಆ ವ್ಯಕ್ತಿಯನ್ನು ಮತ್ತು ಅವರ ಇಡೀ ಕುಟುಂಬವನ್ನು ದಂಡಿಸುತ್ತೇನೆ. 35 ನೀವು ಪರಸ್ಪರ ‘ಯೆಹೋವನ ಉತ್ತರವೇನು?’ ಅಥವಾ ‘ಯೆಹೋವನು ಏನು ಹೇಳಿದನು?’ ಎಂದು ಮಾತನಾಡಬೇಕು. 36 ನೀವು ಪುನಃ ಎಂದಿಗೂ ‘ಯೆಹೋವನ ಭಾರ’ ಎಂಬ ಮಾತನ್ನು ಉಪಯೋಗಿಸಕೂಡದು. ಏಕೆಂದರೆ ಯೆಹೋವನ ಸಂದೇಶವು ಯಾರಿಗೂ ಭಾರವಾಗಬೇಕಾಗಿಲ್ಲ. ಆದರೆ ನೀವು ನಿಮ್ಮ ದೇವರ ಮಾತುಗಳನ್ನು ತಲೆಕೆಳಗೆ ಮಾಡಿದ್ದೀರಿ. ಆತನು ಸರ್ವಶಕ್ತನಾಗಿದ್ದಾನೆ ಮತ್ತು ಜೀವಸ್ವರೂಪನಾದ ದೇವರಾಗಿದ್ದಾನೆ.
37 “ನೀವು ದೇವರ ಸಂದೇಶವನ್ನು ತಿಳಿದುಕೊಳ್ಳ ಬಯಸಿದರೆ ಪ್ರವಾದಿಯನ್ನು ಕುರಿತು ‘ಯೆಹೋವನು ನಿನಗೆ ಏನೆಂದು ಉತ್ತರವನ್ನು ಕೊಟ್ಟನು?’ ಅಥವಾ ‘ಯೆಹೋವನು ಏನು ಹೇಳಿದನು?’ ಎಂದು ಕೇಳಿರಿ. 38 ಆದರೆ ‘ಯೆಹೋವನ ಭಾರವೇನು?’ ಎಂದು ಕೇಳಬೇಡಿರಿ. ನೀವು ಆ ಪದಗಳನ್ನು ಬಳಸಿದರೆ ಯೆಹೋವನು ನಿಮಗೆ ಹೀಗೆ ಹೇಳುವನು: ‘ನೀವು ನನ್ನ ಸಂದೇಶವನ್ನು “ಯೆಹೋವನ ಭಾರವೆಂದು” ಹೇಳಬಾರದಾಗಿತ್ತು. ಆ ಪದಗಳನ್ನು ಬಳಸಬಾರದೆಂದು ನಾನು ನಿಮಗೆ ಹೇಳಿದ್ದೇನೆ. 39 ಆದರೆ ನೀವು ನನ್ನ ಸಂದೇಶವನ್ನು ಭಾರವಾದ ಹೊರೆ ಎಂದು ಹೇಳಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಒಂದು ಭಾರವಾದ ಹೊರೆಯಂತೆ ಎತ್ತಿ ನನ್ನಿಂದ ದೂರ ಎಸೆಯುತ್ತೇನೆ. ನಾನು ನಿಮ್ಮ ಪೂರ್ವಿಕರಿಗೆ ಜೆರುಸಲೇಮ್ ನಗರವನ್ನು ಕೊಟ್ಟೆ. ಆದರೆ ನಾನು ನಿಮ್ಮನ್ನೂ ಆ ನಗರವನ್ನೂ ನನ್ನಿಂದ ದೂರ ಎಸೆಯುವೆನು. 40 ನಿಮಗೆ ಶಾಶ್ವತವಾದ ಅಪಕೀರ್ತಿಯನ್ನು ತರುವೆನು. ನೀವು ಈ ಅವಮಾನವನ್ನು ಎಂದಿಗೂ ಮರೆಯಲಾರಿರಿ.’”
1 ದೇವರ ಸೇವಕನಾದ ಮತ್ತು ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ದೇವರು ಆರಿಸಿಕೊಂಡ ಜನರ ನಂಬಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಮತ್ತು ಅವರಿಗೆ ಸತ್ಯವನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಲಾಯಿತು. ದೇವರ ಸೇವೆಯನ್ನು ಹೇಗೆ ಮಾಡಬೇಕೆಂಬುದನ್ನು ಆ ಸತ್ಯವು ತೋರ್ಪಡಿಸುತ್ತಿದೆ. 2 ನಿತ್ಯಜೀವದ ಮೇಲೆ ನಮಗಿರುವ ನಿರೀಕ್ಷೆಯಿಂದಲೇ ಆ ನಂಬಿಕೆ ಮತ್ತು ಜ್ಞಾನಗಳು ಉಂಟಾಗಿವೆ. ನಿತ್ಯಜೀವವನ್ನು ಕೊಡುವುದಾಗಿ ದೇವರು ನಮಗೆ ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ್ದನು. ದೇವರು ಸುಳ್ಳು ಹೇಳುವುದಿಲ್ಲ. 3 ತಕ್ಕಕಾಲ ಬಂದಾಗ ದೇವರು ಆ ನಿತ್ಯಜೀವವನ್ನು ಲೋಕಕ್ಕೆ ಪ್ರಕಟಿಸಿದನು. ನನಗೊಪ್ಪಿಸಿರುವ ಈ ಸಂದೇಶವನ್ನು ನಮ್ಮ ರಕ್ಷಕನಾದ ದೇವರ ಆಜ್ಞೆಗನುಸಾರವಾಗಿ ಸಾರುತ್ತಿದ್ದೇನೆ.
4 ನಾನು ಈ ಪತ್ರವನ್ನು ತೀತನಿಗೆ ಬರೆಯುತ್ತಿದ್ದೇನೆ. ನಮ್ಮೆಲ್ಲರ ನಂಬಿಕೆಯ ಸಂಬಂಧದಲ್ಲಿ ನೀನು ನನಗೆ ನಿಜವಾದ ಮಗನಂತಿರುವೆ.
ನಮ್ಮ ತಂದೆಯಾದ ದೇವರಿಂದಲೂ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಶಾಂತಿಯೂ ಲಭಿಸಲಿ.
ಕ್ರೇತದಲ್ಲಿ ತೀತನ ಕಾರ್ಯ
5 ಇನ್ನೂ ಪೂರ್ಣವಾಗಿಲ್ಲದ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿಯೂ ಪ್ರತಿಯೊಂದು ಪಟ್ಟಣದಲ್ಲಿ ಸಭಾಹಿರಿಯರನ್ನು ಆರಿಸುವುದಕ್ಕಾಗಿಯೂ ನಾನು ನಿನ್ನನ್ನು ಕ್ರೇತದಲ್ಲಿ ಬಿಟ್ಟು ಬಂದೆನು. 6 ಸಭೆಯ ಹಿರಿಯನಾಗುವವನು ಅಪರಾಧಿಯೆಂಬ ನಿಂದನೆಗೆ ಗುರಿಯಾಗಿರಬಾರದು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು; ಅವರು ದುಷ್ಟರೆಂದಾಗಲಿ ಅವಿಧೇಯರೆಂದಾಗಲಿ ಹೇಳಿಸಿಕೊಂಡಿರಬಾರದು. 7 ಸಭಾಹಿರಿಯನು ದೇವರ ಸೇವೆಯ ಜವಾಬ್ದಾರಿಯನ್ನು ಹೊತ್ತು ಕೊಂಡವನಾಗಿದ್ದಾನೆ. ಆದ್ದರಿಂದ ಅವನು ಅಪರಾಧಿಯೆಂಬ ನಿಂದನೆಗೆ ಒಳಗಾಗಿರಬಾರದು; ಗರ್ವಿಷ್ಠನಾಗಿರಬಾರದು; ಸ್ವಾರ್ಥಿಯಾಗಿರಬಾರದು ಮತ್ತು ಮುಂಗೋಪಿಯಾಗಿರಬಾರದು; ದ್ರಾಕ್ಷಾರಸವನ್ನು ಅತಿಯಾಗಿ ಕುಡಿಯುವವನಾಗಿರಬಾರದು; ಜಗಳಗಂಟನಾಗಿರಬಾರದು; ಜನರನ್ನು ವಂಚಿಸಿ ಶ್ರೀಮಂತನಾಗಲು ಪ್ರಯತ್ನಿಸುವವನಾಗಿರಬಾರದು. 8 ಸಭಾಹಿರಿಯನು ಜನರನ್ನು ತನ್ನ ಮನೆಗೆ ಆಹ್ವಾನಿಸಿ ಅತಿಥಿಸತ್ಕಾರ ಮಾಡಲು ಸಿದ್ಧನಾಗಿರಬೇಕು. ಅವನು ಒಳ್ಳೆಯದನ್ನು ಪ್ರೀತಿಸಬೇಕು; ಜ್ಞಾನಿಯಾಗಿರಬೇಕು; ನ್ಯಾಯವಂತನಾಗಿರಬೇಕು; ಪವಿತ್ರನಾಗಿರಬೇಕು. ಅವನು ತನ್ನನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. 9 ನಾವು ಬೋಧಿಸುವ ಸತ್ಯವಾಕ್ಯವನ್ನು ಅವನು ನಂಬಿಗಸ್ತಿಕೆಯಿಂದ ಅನುಸರಿಸಬೇಕು. ಸತ್ಯವಾದ ಮತ್ತು ಯೋಗ್ಯವಾದ ಬೋಧನೆಯಿಂದ ಅವನು ಜನರಿಗೆ ಸಹಾಯ ಮಾಡುವವನಾಗಿರಬೇಕು. ಅವನು ಸತ್ಯಬೋಧನೆಗೆ ವಿರುದ್ಧವಾದ ಜನರಿಗೆ ಅವರ ತಪ್ಪನ್ನು ತೋರಿಸಿಕೊಡುವ ಸಾಮರ್ಥ್ಯ ಉಳ್ಳವನಾಗಿರಬೇಕು.
10 ಅವಿಧೇಯರಾಗಿರುವ ಜನರು ಅನೇಕರಿದ್ದಾರೆ. ಅವರು ನಿರರ್ಥಕವಾದುದನ್ನು ಕುರಿತು ಮಾತನಾಡುತ್ತಲೇ ಇರುತ್ತಾರೆ ಮತ್ತು ಉಳಿದ ಜನರನ್ನು ತಪ್ಪುದಾರಿಗೆ ಎಳೆಯುತ್ತಾರೆ. ಯೆಹೂದ್ಯರಲ್ಲದ ಜನರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವ ಜನರ ಬಗ್ಗೆಯೇ ನಾನು ಹೇಳುತ್ತಿರುವುದು. 11 ಆ ಜನರ ಬೋಧನೆ ತಪ್ಪೆಂದು ನಿರೂಪಿಸಲು ಮತ್ತು ಉಪಯೋಗವಿಲ್ಲದ ಆ ಸಂಗತಿಗಳನ್ನು ಬೋಧಿಸದಂತೆ ಮಾಡಲು ಸಭಾಹಿರಿಯನು ಸಮರ್ಥನಾಗಿರಬೇಕು. ಅವರು ಉಪದೇಶ ಮಾಡಬಾರದ ಸಂಗತಿಗಳನ್ನು ಉಪದೇಶಿಸುತ್ತಾ ಇಡೀ ಕುಟುಂಬಗಳನ್ನೇ ಸಂಪೂರ್ಣವಾಗಿ ನಾಶಗೊಳಿಸುತ್ತಿದ್ದಾರೆ. ಅವರು ಜನರನ್ನು ವಂಚಿಸಿ, ಹಣವನ್ನು ಸಂಪಾದಿಸುವುದಕ್ಕೋಸ್ಕರ ಆ ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. 12 ಅವರ ಪ್ರವಾದಿಗಳಲ್ಲಿ ಒಬ್ಬನು, “ಕ್ರೇತದ ಜನರು ಯಾವಾಗಲೂ ಸುಳ್ಳು ಹೇಳುತ್ತಾರೆ. ಅವರು ದುಷ್ಟ ಮೃಗಗಳಾಗಿದ್ದಾರೆ; ಸೋಮಾರಿತನದಿಂದ ಕೆಲಸವನ್ನೇ ಮಾಡದೆ ಹೊಟ್ಟೆಬಾಕರಾಗಿದ್ದಾರೆ” ಎಂದು ಹೇಳಿದ್ದಾನೆ. 13 ಪ್ರವಾದಿಯು ಹೇಳಿದ ಮಾತುಗಳು ಸತ್ಯವಾಗಿವೆ. ಆದ್ದರಿಂದ ಅವರು ಮಾಡುತ್ತಿರುವ ತಪ್ಪುಗಳನ್ನು ಅವರಿಗೆ ತಿಳಿಸು. ನೀನು ಅವರ ವಿಷಯದಲ್ಲಿ ಕಟ್ಟುನಿಟ್ಟಾಗಿರಬೇಕು. ಆಗ ಅವರು ತಮ್ಮ ನಂಬಿಕೆಯಲ್ಲಿ ದೃಢವಾಗಿದ್ದು, 14 ಯೆಹೂದ್ಯರ ಕಟ್ಟುಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸತ್ಯವನ್ನು ಒಪ್ಪಿಕೊಳ್ಳದ ಜನರ ಆಜ್ಞೆಗಳನ್ನು ಅನುಸರಿಸುವುದಿಲ್ಲ.
15 ಪರಿಶುದ್ಧರಾದ ಜನರಿಗೆ ಎಲ್ಲಾ ಸಂಗತಿಗಳು ಪರಿಶುದ್ಧವಾಗಿರುತ್ತವೆ. ಆದರೆ ಪಾಪಗಳನ್ನೇ ತುಂಬಿಕೊಂಡಿರುವ ಮತ್ತು ನಂಬಿಕೆಯಿಲ್ಲದ ಜನರಿಗೆ ಯಾವುದೂ ಪರಿಶುದ್ಧವಾಗಿರುವುದಿಲ್ಲ. ನಿಜವಾಗಿಯೂ, ಅವರ ಮನಸ್ಸುಗಳು ಮತ್ತು ಮನಸ್ಸಾಕ್ಷಿಗಳು ಮಲಿನವಾಗಿವೆ. 16 ದೇವರ ಬಗ್ಗೆ ತಮಗೆ ತಿಳಿದಿದೆಯೆಂದು ಅವರು ಹೇಳಿದರೂ ಅವರು ದೇವರನ್ನು ತಿಳಿದಿಲ್ಲವೆಂದು ಅವರ ಕೆಟ್ಟಕಾರ್ಯಗಳೇ ಸ್ಪಷ್ಟಪಡಿಸುತ್ತವೆ. ಅವರು ಭಯಂಕರವಾದ ಜನರು ಮತ್ತು ಅವಿಧೇಯರು. ಯಾವ ಸತ್ಕಾರ್ಯಗಳನ್ನು ಮಾಡುವುದಕ್ಕೂ ಅವರು ಯೋಗ್ಯರಲ್ಲ.
Kannada Holy Bible: Easy-to-Read Version. All rights reserved. © 1997 Bible League International